samachara
www.samachara.com
‘ಮನುಷ್ಯತ್ವದ ಸಾವು’: ಬಿಹಾರದ ಈ ಮಕ್ಕಳು ಹೇಳುತ್ತಿರುವ ಕತೆಗಳು ಪೊಲೀಸರಿಗೂ ಕಣ್ಣೀರು ತರಿಸುತ್ತಿವೆ...
ಚಿತ್ರ ಕೃಪೆ: ಅಲ್‌ಜಝೀರಾ
ದೇಶ

‘ಮನುಷ್ಯತ್ವದ ಸಾವು’: ಬಿಹಾರದ ಈ ಮಕ್ಕಳು ಹೇಳುತ್ತಿರುವ ಕತೆಗಳು ಪೊಲೀಸರಿಗೂ ಕಣ್ಣೀರು ತರಿಸುತ್ತಿವೆ...

ಈ ಪ್ರಕರಣ ಹೊರಬೀಳುತ್ತಿದ್ದಂತೆ ಇಡೀ ದೇಶವೇ ಒಮ್ಮೆ ಬೆಚ್ಚಿ ಬಿದ್ದಿದೆ. ಮನುಷ್ಯರು ಹೀಗೂ ಇರಲು ಸಾಧ್ಯವೇ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

Team Samachara

“ನಮ್ಮನ್ನು ‘ಹಂಟರ್‌ವಾಲಾ ಅಂಕಲ್‌’ ದಿನ ನಿತ್ಯ ಹೊಡೆಯುತ್ತಿದ್ದರು,” ಹೀಗಂತ ಪೊಲೀಸರಿಗೆ ಹೇಳುವಾಗ ಆಕೆಗೆ ದುಃಖ ಉಮ್ಮಳಿಸಿ ಬರುತ್ತಿತ್ತು. ಬಿಹಾರದ ಮುಜಾಫುರ್‌ ನಗರದಲ್ಲಿರುವ ಸರಕಾರಿ ಬಾಲಿಕಾ ಗೃಹದಲ್ಲಿ ಮೇಲ್ವಿಚಾರಕ ಬ್ರಜೇಶ್ ಠಾಕೂರ್‌ (ಹಂಟರ್‌ವಾಲಾ ಅಂಕಲ್‌) ಕೊಡುತ್ತಿದ್ದ ಚಿತ್ರ ಹಿಂಸೆಗಳನ್ನು ಆ 7 ವರ್ಷದ ಬಾಲಕಿ ಎಳೆ ಎಳೆಯಾಗಿ ಬಿಡಿಸಿಡುತ್ತಿದ್ದರೆ, ಪೊಲೀಸರ ಕಣ್ಣುಗಳೂ ತೇವವಾಗಿದ್ದವು.

ಇದು ಆಕೆಯೊಬ್ಬಳ ಕಥೆಯಲ್ಲ. ಇನ್ನೊಬ್ಬಾಕೆ 10 ವರ್ಷದ ಹುಡುಗಿ; “ನಾನು ಬೆಳಗ್ಗೆ ಎದ್ದು ನೆಲದ ಮೇಲೆ ಹರಡಿಕೊಂಡಿರುತ್ತಿದ್ದ ಬಟ್ಟೆಯನ್ನು ಹುಡುಕಬೇಕಾಗುತ್ತಿತ್ತು. ರಾತ್ರಿ ತನ್ನನ್ನು ಭೋಗಿಸಿದ ಪರಿಣಾಮ ತೊಡೆಯ ಮಧ್ಯ ಭಾಗದಲ್ಲಿ ನೋಯುತ್ತಿತ್ತು,” ಎಂದು ಪೊಲೀಸರ ಮುಂದೆ ತನ್ನ ಹೇಳಿಕೆ ಮುಂದುವರಿಸಿದಳು. “ನನ್ನನ್ನು ಬಟ್ಟೆ ಬಿಚ್ಚಿಸಿ ಟೆರೇಸ್‌ ಮೇಲೆ ಕರೆದೊಯ್ದು ಪ್ರತಿದಿನ ಆತ ಕೋಲಿನಿಂದ ಹೊಡೆಯುತ್ತಿದ್ದ,” ಎಂದಳು ಮತ್ತೊಬ್ಬಾಕೆ.

ಹೀಗೆ ಒಬ್ಬೊಬ್ಬರೂ ಒಂದೊಂದು ಭಯಾನಕ ಕತೆಗಳನ್ನು ಆರಕ್ಷಕರ ಮುಂದೆ ತೆರೆದಿಡುತ್ತಿದ್ದರು. “ಒಂದೊಮ್ಮೆ ಡ್ರಗ್‌ ತೆಗೆದುಕೊಳ್ಳದಿದ್ದರೆ ನಮ್ಮ ಮೇಲೆ ಬಿಸಿ ನೀರು ಎರಚುತ್ತಿದ್ದರು. ನಾವು ಮಲಗಲು ಮಾದಕ ವಸ್ತು ತೆಗೆದುಕೊಳ್ಳಲೇಬೇಕಾಗಿತ್ತು” ಎಂದು ಇನ್ನೋರ್ವ ಯುವತಿ ತಾನು ಅನುಭವಿಸಿದ ಕಷ್ಟ ಹಂಚಿಕೊಂಡಳು.

“ತನ್ನ ಮೇಲೆ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯವನ್ನು ಪ್ರತಿಭಟಿಸಿದ್ದಕ್ಕಾಗಿ ಯುವತಿಯೊಬ್ಬಳನ್ನು ಹಲವು ದಿನಗಳ ಕಾಲ ಕೂಡಿ ಹಾಕಲಾಗಿತ್ತು. ಕೊನೆಗೆ ಇದಕ್ಕಾಗಿ ಆಕೆ ಕ್ಷಮೆ ಕೇಳಿದಳು. ಅತ್ಯಾಚಾರವನ್ನು ವಿರೋಧಿಸಿದರೆ ನಮಗೆಲ್ಲಾ ಹೊಡೆಯಲಾಗುತ್ತಿತ್ತು,” ಎಂದು ಇದೇ ಯುವತಿಯರು ಅಲ್ಲಿ ದೂರಿದರು.

ಹೀಗೆ ಹೇಳುತ್ತಿದ್ದ ಯುವತಿಯರ ಕನಿಷ್ಠ ವಯಸ್ಸು 7 ವರ್ಷ ಮತ್ತು ಗರಿಷ್ಠ 18 ವರ್ಷ. ಮತ್ತು ಈ ರೀತಿ ದೌರ್ಜನ್ಯಕ್ಕೆ ಒಳಗಾದವರ ಸಂಖ್ಯೆ ಬರೋಬ್ಬರಿ 34. ಸೇವಾ ಸಂಕಲ್ಪ್‌ ಸಮಿತಿಯ ಮನೆಯಲ್ಲಿದ್ದ 44 ಜನರಲ್ಲಿ 38 ಜನರು ಹೀಗೆ ಲೈಂಗಿಕ ಕೃತ್ಯಕ್ಕೆ ಬಳಕೆಯಾಗಿದ್ದರು.

ಈ ಪ್ರಕರಣ ಹೊರಬೀಳುತ್ತಿದ್ದಂತೆ ಇಡೀ ದೇಶವೇ ಒಮ್ಮೆ ಬೆಚ್ಚಿ ಬಿದ್ದಿದೆ. ಮನುಷ್ಯರು ಹೀಗೂ ಇರಲು ಸಾಧ್ಯವೇ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. “ಅವರು ತಮ್ಮ ಭಯಾನಕ ಕಥೆಗಳನ್ನು ನನಗೆ ನೆನಪಿಸಿದರು. ಇದು ಭಯಾನಕ ದುರಂತ,” ಎನ್ನುತ್ತಾರೆ ಬಿಹಾರ ಮಹಿಳಾ ಆಯೋಗದ ಅಧ್ಯಕ್ಷೆ ದಿಲ್ಮಾನಿ ಮಿಶ್ರಾ.

ಈ ದೌರ್ಜನ್ಯಗಳು ಯಾವಾಗ ನಡೆದಿದ್ದು ಎಂಬ ಮಾಹಿತಿ ಇಲ್ಲ. ಆದರೆ ಈ ಹಲ್ಲೆ, ಅತ್ಯಾಚಾರಗಳು ದಿನಂಪ್ರತಿ ನಡೆಯುತ್ತಿದ್ದವು. ಕೆಲವರು ಇಲ್ಲಿ ಮೂರು ವರ್ಷದಿಂದ ಉಳಿದುಕೊಂಡಿದ್ದರು ಎನ್ನುತ್ತಾರೆ ಅವರು.

ಈ ದೌರ್ಜನ್ಯಗಳನ್ನು ತಡೆದುಕೊಳ್ಳಲಾಗದೆ ಹಲವು ಯುವತಿಯರು ಸ್ವಯಂ ಪ್ರೇರಿತವಾಗಿ ಗಾಯಗಳನ್ನು ಮಾಡಿಕೊಳ್ಳುತ್ತಿದ್ದರು. “ಯುವತಿಯರು ಲೈಂಗಿಕ ದೌರ್ಜನ್ಯಗಳನ್ನು ತಡೆದುಕೊಳ್ಳಲಾಗದಿದ್ದಾಗ ಒತ್ತಡದಲ್ಲಿ ಗಾಜುಗಳಿಂದ ತಮ್ಮ ಕೈಗಳ ಮೇಲೆ ಗಾಯ ಮಾಡಿಕೊಳ್ಳುತ್ತಿದ್ದರು,” ಎನ್ನುತ್ತಾರೆ ಬಿಹಾರ ಮಹಿಳಾ ಆಯೋಗದ ವಕ್ತಾರೆ.

ಕಳೆದ ವಾರ ಇವರು ಈ ಬಾಲಿಕಾ ಗೃಹಕ್ಕೆ ಭೇಟಿ ನೀಡಿದ್ದು ಸರಕಾರಕ್ಕೆ ನೀಡಲು ಈಗ ವರದಿ ತಯಾರಿಸುತ್ತಿದ್ದಾರೆ. ಯುವತಿಯರ ಮೇಲೆ ದೌರ್ಜನ್ಯ ನಡೆಸಿದವರಲ್ಲಿ ಮಕ್ಕಳ ರಕ್ಷಣಾ ಅಧಿಕಾರಿ ಮತ್ತು ಸರಕಾರದ ಸಮಾಜ ಕಲ್ಯಾಣ ಇಲಾಖೆ ಸದಸ್ಯರೂ ಇದ್ದಾರೆ ಎಂದು ತಿಳಿದು ಬಂದಿದೆ. ಇದು ಗಾಬರಿ ಹುಟ್ಟಿಸುತ್ತಿದೆ.

ಮನೆ ಬಿಟ್ಟು ಓಡಿ ಬಂದ ಅಥವಾ ಬೀದಿ ಬದಿಯಿಂದ ರಕ್ಷಿಸಿದ ಯುವತಿಯರಿಗಾಗಿ ಈ ಸಂತ್ರಸ್ತ ಗೃಹವನ್ನು ಸರಕಾರ ನಡೆಸುತ್ತಿತ್ತು. ಇಲ್ಲಿಗೆ ಪೊಲೀಸರೇ ತಂದು ಯುವತಿಯರನ್ನು ಬಿಡುತ್ತಿದ್ದರು. ಅಂಥಹ ಜಾಗದಲ್ಲೇ ಈ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ.

ಈ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ಕೈಗೆತ್ತಿಕೊಂಡಿದ್ದು ಈಗಾಗಲೇ ಒಟ್ಟು 10 ಜನರನ್ನು ಬಂಧಿಸಲಾಗಿದೆ. ಇವರಲ್ಲಿ ಓರ್ವ ತಲೆಮರೆಸಿಕೊಂಡಿದ್ದಾನೆ. ಇನ್ನು ವಿಶೇಷ ಪೋಕ್ಸೋ (POCSO) ನ್ಯಾಯಾಲಯದಲ್ಲಿ ಇದರ ವಿಚಾರಣೆ ನಡೆಯುತ್ತಿದೆ. “ನಮ್ಮ ಬಳಿಯಲ್ಲಿ ಆರೋಪಿಗಳನ್ನು ಶಿಕ್ಷಿಸಲು ಸಾಕಷ್ಟು ಸಾಕ್ಷಿಗಳಿವೆ. ನಾವು ವೈದ್ಯಕೀಯ ವರದಿಯನ್ನು ಪಡೆದುಕೊಂಡಿದ್ದು, ಇದರಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದು ಗೊತ್ತಾಗಿದೆ. ಯುವತಿಯರ ಹೇಳಿಕೆಯೂ ನಮ್ಮ ಬಳಿ ಇದೆ,” ಎಂದು ಮುಜಾಫರ್‌ನಗರ ಎಸ್‌ಪಿ ಹರ್‌ಪ್ರೀತ್‌ ಕೌರ್‌ ಹೇಳಿದ್ದಾರೆ. ಮಕ್ಕಳ ಮೇಳೆ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಡಾಕ್ಟರ್‌ ರಾಜೀವ್‌ ರಂಜನ್‌ ಪ್ರಸಾದ್‌ ಕೂಡ ಮಾಹಿತಿ ನೀಡಿದ್ದಾರೆ.

ಕೋಟೆ ಬಾಗಿಲು ಹಾಕಲು ಬಂದವರು

ಇಷ್ಟೆಲ್ಲಾ ದೌರ್ಜನ್ಯಗಳು ನಡೆದರೂ ಒಂದೇ ಒಂದು ಸರಕಾರಿ ಸಂಸ್ಥೆಗಳಿಗೂ ವರ್ಷಗಳ ಕಾಲ ಇದರ ಮಾಹಿತಿ ಸಿಕ್ಕಿಲ್ಲ ಎಂಬುದು ಆಶ್ಚರ್ಯ ಹುಟ್ಟಿಸುತ್ತದೆ. ಏಪ್ರಿಲ್‌ನಲ್ಲಿ 110 ಎನ್‌ಜಿಒಗಳಲ್ಲಿ ಟಾಟಾ ಇನ್ಸಿಟ್ಯೂಟ್‌ ಆಫ್ ಸೋಷಿಯಲ್‌ ಸೈನ್ಸ್‌ ಪರಿಶೀಲನೆ ನಡೆಸಿದಾಗ ಈ ಭಯಾನಕ ಚರಿತ್ರೆ ಹೊರ ಬಂದಿದೆ. ಅಲ್ಲಿಯವರೆಗೂ ಬಿಹಾರ ಎಂಬ ಒಂದು ಕಾಲದ ಗೂಂಡಾ ರಾಜ್ಯದಲ್ಲಿ ನಡೆದ ಈ ಕೃತ್ಯವನ್ನು ಎಲ್ಲರೂ ನೋಡುತ್ತಾ ಬಾಯಿಮುಚ್ಚಿ ಕುಳಿತುಕೊಂಡಿದ್ದರು.

ಇದೀಗ ಈ ದೌರ್ಜನ್ಯದ ಸುದ್ದಿ ಅಂತರಾಷ್ಟ್ರೀಯ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದಂತೆ ಗೂಬೆ ಕೂರಿಸುವ ಚಾಳಿ ಆರಂಭಿಸಿದ್ದಾರೆ. ಯುವತಿಯರ ಸೇವಾ ಆಶ್ರಮದಲ್ಲಿ ಮಾನದಂಡಗಳು ಪಾಲನೆಯಾಗಿಲ್ಲ ಎಂದು ಮುಜಾಫರ್‌ನಗರ ಎಸ್‌ಪಿ ಹರ್‌ಪ್ರೀತ್‌ ಕೌರ್‌ ಈಗ ಹೇಳುತ್ತಿದ್ದಾರೆ. ಇದೇ ಸಂತ್ರಸ್ಥರ ಗೃಹಕ್ಕೆ ಅಧಿಕಾರಿಗಳಲ್ಲದೆ ಬಿಹಾರದ ಸಮಾಜ ಕಲ್ಯಾಣ ಸಚಿವೆ ಮಂಜು ವರ್ಮಾ ಪತಿ ನಿರಂತರವಾಗಿ ಭೇಟಿ ನೀಡುತ್ತಿದ್ದರು ಎಂಬ ಆರೋಪಗಳೂ ಕೇಳಿ ಬಂದಿವೆ.

ಇಷ್ಟಲ್ಲದೆ ಯುವತಿಯರ ಸಂತ್ರಸ್ತ ಗೃಹಗಳಲ್ಲಿ ಮಹಿಳೆಯರೇ ಮೇಲ್ವಿಚಾರಕರಾಗಿರಬೇಕು ಎಂಬ ನಿಯಮವಿದೆ. ಆದರೆ ಇಲ್ಲಿ ಪುರುಷರಿದ್ದರು. ನಿಯಮಗಳನ್ನು ಮೀರಿ ಇವರಿಗೆ ಈ ರೀತಿ ಅವಕಾಶ ನೀಡಿದವರು ಯಾರು ಎಂದು ಪ್ರಶ್ನಿಸುತ್ತಾರೆ ದೆಹಲಿಯ ಸೆಂಟರ್ ಫಾರ್‌ ಸೋಷಿಯಲ್‌ ರೀಸರ್ಚ್‌ನ ಮುಖ್ಯಸ್ಥೆ ರಂಜನಾ ಕುಮಾರಿ.

"ಈ ಗೃಹಗಳು ಬಾಲಕಿಯರ ಪಾಲಿಗೆ ಸುರಕ್ಷಿತವಾಗಿರಬೇಕಿತ್ತು. ಆದರೆ ಇದು ಅತ್ಯಂತ ಅಸುರಕ್ಷಿತವಾಗಿವೆ. ಬಿಹಾರದಲ್ಲಿ ಮಾತ್ರವಲ್ಲ ದೇಶದಾದ್ಯಂತ ಹಲವು ಸಂತ್ರಸ್ತರ ಗೃಹಗಳಲ್ಲಿ ಹೀಗೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುತ್ತವೆ,” ಎನ್ನುತ್ತಾರೆ ಅವರು.

ಈ ಘಟನೆಗಳು ಹೊರ ಬರುವುದಕ್ಕೂ ಮೊದಲು ಕೇಂದ್ರ ಸರಕಾರ ಪೋಸ್ಕೋ ಕಾಯ್ದೆಗೆ ಏಪ್ರಿಲ್‌ನಲ್ಲಿ ತಿದ್ದುಪಡಿ ತಂದು 12 ವರ್ಷದೊಳಗಿನ ಯುವತಿಯರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಗಲ್ಲು ಶಿಕ್ಷೆ ನೀಡುವ ಕಾನೂನು ಜಾರಿಗೆ ತಂದಿತ್ತು. ಇಂದೇ ಲೋಕಸಭೆಯಲ್ಲಿ ಕ್ರಿಮಿನಲ್‌ ಲಾ ತಿದ್ದುಪಡಿ ಮಸೂದೆಗೆ ಅಂಗೀಕಾರ ಸಿಕ್ಕಿದ್ದು ಮಕ್ಕಳ ಮೇಲಿನ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಲು ಈ ಕಾನೂನಿನಲ್ಲಿ ಅವಕಾಶವಿದೆ. ಒಂದು ಕಡೆ ಸುಧಾರಣಾ ಕ್ರಮಗಳು ಮುಂದುವರಿಯುತ್ತಿದ್ದರೆ ಇನ್ನೊಂದು ಕಡೆ ಅದೇ ಪಕ್ಷದ ಸರಕಾರದಲ್ಲಿ ಅಧಿಕಾರಿಗಳು, ಸಚಿವೆಯ ಪತಿಯರು ಇಂತಹ ಹೀನ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಆರೋಪ ಎದುರಿಸುತ್ತಿದ್ದಾರೆ.

ಇದರಾಚೆಗೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಮಾಹಿತಿ ಪ್ರಕಾರ ಕಳೆದ ಒಂದು ದಶಕದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ದುಪ್ಪಟ್ಟಾಗಿದೆ. ಕಾನೂನಿಗಿಂತ ಹೆಚ್ಚಾಗಿ ಅದರ ಜಾರಿ ಮುಖ್ಯ ಎಂಬುದನ್ನು ಈ ಘಟನೆ ಮೇಲ್ನೋಟಕ್ಕೆ ಸಾಬೀತುಪಡಿಸುತ್ತಿದೆ. ಇದನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕಾಗಿದೆ.