samachara
www.samachara.com
ಮೋಟರ್‌ ವೆಹಿಕಲ್‌ ಕಾಯ್ದೆ ತಿದ್ದುಪಡಿ: ಆಗಸ್ಟ್‌ 7ರಂದು ದೇಶಾದ್ಯಂತ ಸಮೂಹ ಸಾರಿಗೆ ವ್ಯತ್ಯಯ
ದೇಶ

ಮೋಟರ್‌ ವೆಹಿಕಲ್‌ ಕಾಯ್ದೆ ತಿದ್ದುಪಡಿ: ಆಗಸ್ಟ್‌ 7ರಂದು ದೇಶಾದ್ಯಂತ ಸಮೂಹ ಸಾರಿಗೆ ವ್ಯತ್ಯಯ

ಕೇಂದ್ರ ಸರಕಾರ ತರಲು ಹೊರಟಿರುವ ಮೋಟಾರ್‌ ವೆಹಿಕಲ್‌ ಕಾಯ್ದೆ ತಿದ್ದುಪಡಿ ವಿರೋಧಿಸಿ ದೇಶದ ಸಾರಿಗೆ ಕಾರ್ಮಿಕರ ಸಂಘಟನೆಗಳು ಬಂದ್‌ಗೆ ಕರೆನೀಡಿವೆ. ಈ ಬಂದ್‌ಗೆ ಅಟೋ ಕಾರ್ಮಿಕರು, ಪ್ರವಾಸಿ ಸಾರಿಗೆ ವಾಹನಗಳ ಮಾಲೀಕರು ಬೆಂಬಲ ನೀಡಿದ್ದಾರೆ.

ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ಮೋಟಾರ್‌ ವೆಹಿಕಲ್ ಕಾಯ್ದೆಯ ತಿದ್ದುಪಡಿಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ರಾಷ್ಟ್ರದ ಸರಕಾರಿ ಸ್ವಾಮ್ಯದ ಸಾರಿಗೆ ನಿಗಮಗಳ ನೌಕರರು ಹಾಗೂ ಖಾಸಗಿ ವಾಹನಗಳ ಮಾಲೀಕರು ಕೇಂದ್ರ ನಡೆಯನ್ನು ವಿರೋಧಿಸಿ ಮುಷ್ಕರ ಹೂಡಲು ನಿರ್ಧರಿಸಿದ್ದಾರೆ.

ಸೋಮವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಕಾರ್ಮಿಕ ಸಂಘಟನೆಗಳ ನಾಯಕರು ಕೇಂದ್ರ ಸರಕಾರ ತರಲು ಹೊರಟಿರುವ ಮೋಟಾರ್‌ ವೆಹಿಕಲ್‌ ಕಾಯ್ದೆಯ ತಿದ್ದುಪಡಿಯನ್ನು ವಿರೋಧಿಸಿ ಆಗಸ್ಟ್‌ 7ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕರ್ಸ್‌ ಫೆಡರೇಷನ್‌ ಮತ್ತು ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದು, ಆಟೋ ಸಂಘಟನೆಗಳು, ಪ್ರವಾಸಿ ವಾಹನ ಮಾಲೀಕರ ಸಂಘಗಳೂ ಕೂಡ ಬಂದ್‌ಗೆ ಬೆಂಬಲ ಸೂಚಿಸಿವೆ.

ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿದಂತೆ ಈಶಾನ್ಯ ಹಾಗೂ ವಾಯುವ್ಯ ವಿಭಾಗ ಸಾರಿಗೆಗಳ ನೌಕರರು ಒಟ್ಟಾಗಿ ನಿಂತಿದ್ದು, ಕರ್ನಾಟಕದಾದ್ಯಂತ ಸಂಚಾರ ವ್ಯತ್ಯಯ ಉಂಟಾಗಲಿದೆ. ಜತೆಗೆ ಆಟೋಗಳೂ ಕೂಡ ರಸ್ತೆಗಿಳಿಯದಿರಲು ತೀರ್ಮಾನಿಸಿವೆ ಎನ್ನಲಾಗಿದೆ.

ಕೇಂದ್ರ ಸರಕಾರ ತರಲು ಹೊರಟಿರುವ ಈ ತಿದ್ದುಪಡಿಯಿಂದಾಗಿ ಸರಕಾರಿ ಸಾರಿಗೆ ಇಲಾಖೆ ಮತ್ತು ಅವುಗಳ ಕಾರ್ಮಿರ ಕುತ್ತಿಗೆಗೆ ಕುಣಿಕೆ ಬೀಳಲಿದೆ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ.

ಈ ಕುರಿತು ‘ಸಮಾಚಾರ’ದ ಜತೆ ಮಾತನಾಡಿದ ಕಾರ್ಮಿಕ ಸಂಘಟನೆಯ ನಾಯಕ ಆನಂದ್‌, “ಈ ತಿದ್ದುಪಡಿ ಕಾರ್ಮಿಕರಿಗೆ ಮಾರಕವಾಗಿ ಪರಿಣಮಿಸಲಿದೆ. ದೇಶಾದ್ಯಂತ ಒಂದೇ ಪರ್ಮಿಟ್‌ ಜಾರಿಗೊಳಿಸಲು ಕೇಂದ್ರ ಸರಕಾರ ಮುಂದಾಗಿದ್ದು, ಸಾರ್ವಜಿನಿಕ ಸಂಸ್ಥೆಗಳಿಗೆ ಉಳಿಗಾಲವಿಲ್ಲ ಎನ್ನುವಂತಾಗುತ್ತದೆ. ಜತೆಗೆ ಒಂದು ಎರಡು ಬಸ್‌ಗಳನ್ನು ಹೊಂದಿರುವವರು ಸಾರಿಗೆ ಉದ್ಯಮ ನಡೆಸಲು ಸಾಧ್ಯವಾಗುವುದಿಲ್ಲ,” ಎನ್ನುತ್ತಾರೆ.

ತಿದ್ದುಪಡಿಯಲ್ಲಿ ಹಲವಾರು ಉತ್ತಮ ಅಂಶಗಳಿವೆ. ಆದರೆ ವಿಪರೀತ ದಂಡಗಳನ್ನು ತಿದ್ದುಪಡಿಯಲ್ಲಿ ಸೂಚಿಸಲಾಗಿದೆ. ಅಪಘಾತಗಳಾದಾಗ ವಾಹನಗಳ ಮಾಲೀಕರ ಬದಲಾಗಿ ಚಾಲಕರೇ ಪರಿಹಾರವನ್ನು ನೀಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಬಸ್‌ಗಳಿಗೆ ಕಂಡಕ್ಟರ್‌ಗಳು, ಮೆಕಾನಿಕ್‌ಗಳನ್ನು ಇಲ್ಲದಂತೆ ಮಾಡಲಾಗುತ್ತಿದೆ. ವಾಹನಗಳಲ್ಲಿ ಉಂಟಾಗುವ ಚಿಕ್ಕ ಪುಟ್ಟ ದೋಷಗಳಿಗೆಲ್ಲಾ ವಾಹನ ತಯಾರಿಕಾ ಕಂಪನಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ರಾಜ್ಯಗಳಿಗೆ ಇಲ್ಲಿ ಯಾವುದೇ ಹೊಣೆಗಾರಿಕೆಯನ್ನು ನೀಡಿಲ್ಲ. ಎಲ್ಲವೂ ಕೇಂದ್ರ ಸರಕಾರದ್ದೇ ಆಗುತ್ತದೆ. ಆದ್ದರಿಂದ ನಾವು ಈ ತಿದ್ದುಪಡಿಯನ್ನು ವಿರೋಧಿಸುತ್ತಿದ್ದೇವೆ.
ಆನಂದ್‌, ಕಾರ್ಮಿಕ ನಾಯಕ.

ಕಳೆದ ಎರಡು ವರ್ಷಗಳಿಂದಲೂ ಕೂಡ ಉದ್ದೇಶಿತ ತಿದ್ದುಪಡಿ ಕಾಯ್ದೆ, ಪರ ವಿರೋಧಗಳನ್ನು ಎದುರಿಸುತ್ತಾ ಬಂದಿದೆ. 1988ರಲ್ಲಿ ಜಾರಿಗೆ ಬಂದ ಮೋಟಾರ್‌ ವೆಹಿಕಲ್‌ ಕಾಯ್ದೆಗೆ 2016ರ ಆಗಸ್ಟ್‌ ತಿಂಗಳಲ್ಲೇ ತಿದ್ದುಪಡಿ ಕರಡು ಹೊರಬಂದಿತ್ತು. ನಂತರ ಇದರ ಸುತ್ತ ಚರ್ಚೆಗಳು ಆರಂಭವಾಗಿವೆ. ಈಗ ಲೋಕಸಭೆಯಲ್ಲಿ ತಿದ್ದುಪಡಿಯ ಕುರಿತು ಚರ್ಚೆ ನಡೆದು ಅಂಗೀಕಾರವೂ ಅಗಿದೆ. ರಾಜ್ಯ ಸಭೆಯಲ್ಲಿಯೂ ಕೂಡ ತಿದ್ದುಪಡಿಗೆ ಅನುಮೋದನೆ ದೊರೆತರೆ, ರಾಷ್ಟ್ರಪತಿಗಳಿಂತ ಹಸ್ತಾಕ್ಷರವನ್ನು ಪಡೆಯಲಿರುವ ಮೋಟಾರ್‌ ವೆಹಿಕಲ್ (ತಿದ್ದುಪಡಿ) ಕಾಯ್ದೆ 2017, ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ.

ಭಾರತದಲ್ಲಿ ಪ್ರತಿವರ್ಷ 5 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಈ ಅಪಘಾತಗಳಿಂದ 1.5 ಲಕ್ಷ ಜನ ತಮ್ಮ ಜೀವಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಸಾವು ನೋವುಗಳ ಸಂಖ್ಯೆಯನ್ನು ಕಡಿಮೆ ಮಾಡುವ ಸಲುವಾಗಿ ಕಾಯ್ದೆಯಲ್ಲಿ ತಿದ್ದುಪಡಿ ತರುವ ನಿರ್ಣಯಕ್ಕೆ ಕೇಂದ್ರ ಸರಕಾರ ಬಂದಿದೆ. ಈ ತಿದ್ದುಪಡಿಗಳಿಂದ 2022ರ ವೇಳೆಗೆ ಶೇ.50ರಷ್ಟು ರಸ್ತೆ ಅಫಘಾತಗಳು ಕಡಿಮೆಯಾಗಲಿವೆ ಎಂದು ನೀತಿ ನಿರೂಪಣೆಯಲ್ಲಿ ಭಾಗಿಯಾಗಿದ್ದ ‘ಕಂಸ್ಯೂಮರ್‌ ವಾಯ್ಸ್’ ಎಂಬ ಸ್ವಯಂ ಸೇವಾ ಸಂಸ್ಥೆಯ ಹೇಳುತ್ತದೆ.

ರಸ್ತೆ ಅಪಘಾತಗಳನ್ನು ತಡೆಗಟ್ಟಬೇಕು ಎಂಬ ಸರಕಾರ ಕಾಳಜಿ ಅಗತ್ಯವಾದದ್ದೇ. ಆದರೆ ವಿಪರೀತ ದಂಡ ವಿಧಿಸುವುದು, ಪರವಾನಗಿಯನ್ನು ರದ್ದು ಮಾಡುವುದು ಇತ್ಯಾದಿ ಮಾರ್ಪಾಡುಗಳೆಲ್ಲಾ ಸೂಕ್ತವಾದವಲ್ಲ ಎಂಬ ಅಭಿಪ್ರಾಯಗಳಿವೆ. ಇದು ಪರೋಕ್ಷವಾಗಿ ಸಾರಿಗೆ ವ್ಯವಸ್ಥೆಯನ್ನು ಏಕಸ್ವಾಮ್ಯಕ್ಕೆ ದೂಡುವ ಪ್ರಯತ್ನ ಎಂದು ಇದರ ವಿರುದ್ಧ ಇರುವವರು ಆರೋಪಿಸುತ್ತಿದ್ದಾರೆ.

ಕಾಯ್ದೆಯಲ್ಲಿ ಒಟ್ಟು 223 ಸೆಕ್ಷನ್‌ಗಳಿವೆ. ಈ ಸೆಕ್ಷನ್‌ಗಳ ಪೈಕಿ 68 ಸೆಕ್ಷನ್‌ಗಳಲ್ಲಿ ಬದಲಾವಣೆಯನ್ನು ತರಲಾಗಿದೆ. ಅವುಗಳ ಪೈಕಿ ಪ್ರಮುಖ ಬದಲಾವಣೆಗಳು ಹೀಗಿವೆ:

 • ವಾಹನದ ನೋಂದಣಿ ಮತ್ತು ಚಾಲನಾ ಪರವಾನಗಿ ಪಡೆಯಲು ಆಧಾರ್‌ ಕಾರ್ಡ್‌ ಕಡ್ಡಾಯ.
 • ಸದ್ಯ ‘ಹಿಟ್‌ ಅಂಡ್‌ ರನ್‌’ ಸಂದರ್ಭದಲ್ಲಿ 25,000 ರೂಪಾಯಿಗಳ ಪರಿಹಾರ ಧನ ನೀಡಬೇಕಿತ್ತು. ಈಗ ಈ ಮೊತ್ತವನ್ನು 2 ಲಕ್ಷಕ್ಕೆ ಏರಿಸಲಾಗಿದೆ.
 • ಅಪ್ರಾಪ್ತರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಅವರ ಪೋಷಕರು ಅಥವಾ ವಾಹನದ ಮಾಲೀಕರು, ಅಪ್ರಾಪ್ತರು ನಡೆಸಿದ ಸಂಚಾರಿ ನಿಯಮಗಳ ಉಲ್ಲಂಘನೆ ತಮಗೆ ತಿಳಿದಿಲ್ಲವೆಂದು ಸಾಬೀತು ಪಡಿಸಬೇಕಾಗುತ್ತದೆ. ಅಪ್ರಾಪ್ತರಿಗೆ ವಾಹನ ನೀಡುವ ಮೊದಲು ವಿರೋಧಿಸಿದ್ದನ್ನು ದೃಢಪಡಿಸಬೇಕಾಗುತ್ತದೆ. ಇಲ್ಲವಾದಲ್ಲಿ ವಾಹನದ ನೋಂದಣಿಯು ರದ್ದಾಗುತ್ತದೆ. ಕಾನೂನು ಪಾಲಿಸದ ಅಪ್ರಾಪ್ತರು ಜುವೆನೈಲ್‌ ಜಸ್ಟೀಸ್‌ ಕಾಯ್ದೆ ಅಡಿಯಲ್ಲಿ ವಿಚಾರಣೆ ಎದುರಿಸಬೇಕಾಗುತ್ತದೆ. ಪೋಷಕರು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
 • ತಿದ್ದುಪಡಿಯ ಪ್ರಕಾರ ಅಪಘಾತಕ್ಕೆ ಒಳಪಟ್ಟವರನ್ನು ರಕ್ಷಿಸಲು ಬರುವ ವ್ಯಕ್ತಿಗಳನ್ನು ನಾಗರಿಕ ಅಥವಾ ಕ್ರಿಮಿನಲ್‌ ಹೊಣೆಗಾರಿಕೆಯಿಂದ ಮುಕ್ತವಾಗಿಸಲಾಗುತ್ತದೆ. ಪೊಲೀಸ್‌ ಅಥವಾ ಆಸ್ಪತ್ರೆ ಸಿಬ್ಬಂದಿಗಳ ಬಳಿ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ.
 • ಈ ಮುಂಚೆ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುವವರಿಗೆ 2,000 ರೂಪಾಯಿಗಳ ದಂಡ ವಿಧಿಸಲಾಗುತ್ತಿತ್ತು. ಮುಂದೆ ಈ ದಂಡದ ಮೊತ್ತ 10,000 ರೂಪಾಯಿ ಆಗಲಿದೆ.
 • ಆತುರವಾಗಿ ವಾಹನ ಚಲಾಯಿಸುವುದಕ್ಕೆ 1,000 ರೂಪಾಯಿಗಳ ಬದಲು 5,000 ರೂಪಾಯಿಗಳ ದಂಡ ವಿಧಿಸಲಾಗುತ್ತದೆ.
 • ಪರವಾನಗಿ ಇಲ್ಲದೇ ವಾಹನ ಚಲಾಯಿಸುವವರು 500 ರೂಪಾಯಿ ದಂಡ ಕಟ್ಟಬೇಕಿತ್ತು. ಈ ಮೊತ್ತ 5,000ಕ್ಕೆ ಏರಿಕೆಯಾಗಿದೆ.
 • ಮಿತಿ ಮೀರಿದ ವೇಗಕ್ಕೆ 400 ರೂಪಾಯಿಗಳ ಬದಲು 1,000-2,000 ರೂಪಾಯಿಗಳ ದಂಡ ಕಟ್ಟಬೇಕಿದೆ.
 • ಸೀಟ್‌ಬೆಲ್ಟ್‌ ಹಾಕದಿದ್ದರೆ 100 ರೂಪಾಯಿಗಳ ಬದಲು 1,000 ರೂಪಾಯಿ ದಂಡ ತೆರಬೇಕಾಗುತ್ತದೆ.
 • ದೇಶದ ಎಲ್ಲಾ ರಸ್ತೆ ಬಳಕೆದಾರರಿಗೆ ನಿರ್ಧಿಷ್ಟ ಅಪಘಾತ ಪ್ರಕರಣಗಳಲ್ಲಿ ಮೋಟಾರ್‌ ವೆಹಿಕಲ್‌ ಆಕ್ಸಿಡೆಂಟ್‌ ಫಂಡ್‌ನಿಂದ ಕಡ್ಡಾಯವಾಗಿ ಪರಿಹಾರದ ಹಣ ದೊರೆಯಲಿದೆ.
 • ಎಲ್ಲಾ ವಾಹನಗಳು ವಿಶೇಷ ಚೇತನರಿಗೆ ಅನುಕೂಲವಾಗುವಂತೆ ಕಡ್ಡಾಯವಾಗಿ ಬದಲಾವಣೆ ಹೊಂದಬೇಕಿದೆ.
 • ಅಪಘಾತಗಳಿಗೆ ಅವಕಾಶ ಮಾಡಿಕೊಡುವಂತೆ ರಸ್ತೆಗಳನ್ನು ನಿರ್ಮಿಸಿದ ಗುತ್ತಿಗೆದಾರರು, ಸಲಹೆಗಾರರು ಮತ್ತು ರಸ್ತೆಯನ್ನು ಸೂಕ್ತವಾಗಿ ನಿರ್ವಹಣೆ ಮಾಡದ ಸಾರ್ವಜನಿಕ ಏಜೆನ್ಸಿಗಳು ಇನ್ನು ಮುಂದೆ ಅಪಘಾತಗಳ ಹೊಣೆ ಹೊರಬೇಕಾಗುತ್ತದೆ.
 • ರಸ್ತೆ ಅಪಘಾತವಾದಾಗ ಪರಿಹಾರ ಹಣಕ್ಕಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು 6 ತಿಂಗಳಿಗೆ ಸೀಮಿತಗೊಳಿಸಲಾಗಿದೆ.
 • ಚಾಲನಾ ಪರವಾನಗಿಯನ್ನು ನವೀಕರಣಗೊಳಿಸಿಕೊಳ್ಳಲು ಇದ್ದ 1 ತಿಂಗಳ ಅವಧಿಯನ್ನು 1 ವರ್ಷಕ್ಕೆ ಏರಿಸಲಾಗಿದೆ.
 • ನಿರ್ಧಿಷ್ಟ ಗುಣಮಟ್ಟದ ವಾಹನಗಳನ್ನು ತಯಾರು ಮಾಡದಿದ್ದರೆ, ವಾಹನ ತಯಾರಿಕಾ ಕಂಪನಿಗಳ ಮೇಲೆ 500 ಕೋಟಿ ರೂಪಾಯಿಗಳವರೆಗೂ ದಂಡ ವಿಧಿಸಬಹುದಾಗಿದೆ.
 • ದ್ವಿಚಕ್ರ ವಾಹನದ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ತೂಕವನ್ನು ಹೇರಿದರೆ ಮತ್ತು ಹೆಲ್ಮೇಟ್‌ ಧರಿಸದಿದ್ದರೆ 2,000 ರೂಪಾಯಿಗಳ ದಂಡ ವಿಧಿಸಿ, 3 ತಿಂಗಳ ಕಾಲ ಪರವಾನಗಿಯನ್ನು ರದ್ದುಗೊಳಿಸಲಾಗುವುದು.
 • ನಿರ್ದಿಷ್ಟ ಮಿತಿಗಿಂತ ಅಧಿಕ ಪ್ರಯಾಣಿಕರನ್ನು ಹೊಂದಿದ್ದರೆ, ಒಬ್ಬ ಪ್ರಯಾಣಿಕನ ಮೇಲೆ 1,000 ರೂಪಾಯಿಗಳ ದಂಡ ವಿಧಿಸಲಾಗುವುದು.
 • ಆಂಬುಲೆನ್ಸ್‌ಗಳಿಗೆ ಜಾಗ ಬಿಡದಿದ್ದರೆ 10,000 ರೂಪಾಯಿ ದಂಡ ತೆರಬೇಕಾಗುತ್ತದೆ.
 • ಇನ್ಶುರೆನ್ಸ್‌ ಇಲ್ಲದೆ ವಾಹನ ಚಲಾಯಿಸಿದರೆ 1,000 ರೂಪಾಯಿಗಳ ಬದಲು 2,000 ರೂಪಾಯಿ ದಂಡ ಕಟ್ಟಬೇಕಾಗುತ್ತದೆ.