ಸಾರ್ವಜನಿಕ ವ್ಯವಹಾರ ಸೂಚ್ಯಾಂಕದಲ್ಲಿ ರಾಜ್ಯಕ್ಕೆ 4ನೇ ಸ್ಥಾನ, ಈ ಬಾರಿಯೂ ಕೇರಳ ಫಸ್ಟ್
ದೇಶ

ಸಾರ್ವಜನಿಕ ವ್ಯವಹಾರ ಸೂಚ್ಯಾಂಕದಲ್ಲಿ ರಾಜ್ಯಕ್ಕೆ 4ನೇ ಸ್ಥಾನ, ಈ ಬಾರಿಯೂ ಕೇರಳ ಫಸ್ಟ್

ಪಬ್ಲಿಕ್‌ ಅಫೈರ್ಸ್‌ ಸೆಂಟರ್‌ ಶನಿವಾರ ಸಂಜೆ ಬಿಡುಗಡೆಗೊಳಿಸಿರುವ ಸಾರ್ವಜನಿಕ ವ್ಯವಹಾರಗಳ ಸೂಚ್ಯಾಂಕದಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ. ಕೇರಳ ಮೊದಲನೇ ಸ್ಥಾನದಲ್ಲಿದ್ದು, ಗುಜರಾತ್‌ 5ನೇ ಸ್ಥಾನದಲ್ಲಿದೆ.

ಬೆಂಗಳೂರು ಮೂಲದ ಪಬ್ಲಿಕ್‌ ಅಫೈರ್ಸ್‌ ಸೆಂಟರ್‌ ಎಂಬ ಥಿಂಕ್‌ ಟ್ಯಾಂಕ್ ತನ್ನ ಈ ವರ್ಷದ ಸಾರ್ವಜನಿಕ ವ್ಯವಹಾರಗಳ ಸೂಚ್ಯಾಂಕವನ್ನು ಬಿಡುಗಡೆಗೊಳಿಸಿದೆ. ಈ ಸೂಚ್ಯಾಂಕದ ಪ್ರಕಾರ ಕೇರಳ ದೇಶದಲ್ಲಿ ಉತ್ತಮ ಆಡಳಿತವನ್ನು ಹೊಂದಿರುವ ರಾಜ್ಯವಾಗಿದೆ. ಕರ್ನಾಟಕ 4ನೇ ಉತ್ತಮ ಆಡಳಿತ ಹೊಂದಿರುವ ರಾಜ್ಯ ಎಂದು ಕರೆಸಿಕೊಂಡಿದೆ.

ಶನಿವಾರ ಸಂಜೆ ಬೆಂಗಳೂರಿನಲ್ಲಿ ತನ್ನ ಮೂರನೇ ವಾರ್ಷಿಕ ಸೂಚ್ಯಾಂಕವನ್ನು ಬಿಡುಗಡೆಗೊಳಿಸಿದ ಪಬ್ಲಿಕ್‌ ಅಫೈರ್ಸ್‌ ಸೆಂಟರ್‌, “ಉತ್ತಮ ಆಡಳಿತ ಹೊಂದಿರುವ ರಾಜ್ಯಗಳ ಪೈಕಿ ಕೇರಳವು ಮೊದಲನೇ ಸ್ಥಾನದಲ್ಲಿದೆ. ದೊಡ್ಡ ರಾಜ್ಯಗಳ ಪೈಕಿ ಮೂರು ವರ್ಷಗಳಿಂದಲೂ ಕೂಡ ಕೇರಳ ಮೊದಲನೇ ಸ್ಥಾನ ಪಡೆದುಕೊಳ್ಳುತ್ತಾ ಬರುತ್ತಿದೆ,” ಎಂದು ಸುದ್ದಿ ಮಾಧ್ಯಮಗಳ ಮುಂದೆ ಹೇಳಿದೆ.

ಪಬ್ಲಿಕ್‌ ಅಫೈರ್ಸ್‌ ಸೆಂಟರ್‌ ಸ್ಥಾಪನೆಗೊಂಡಿದ್ದು 1994ರಲ್ಲಿ. ಭಾರತದ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಸ್ಯಾಮುಯೆಲ್‌ ಪೌಲ್‌ ಈ ಸಂಸ್ಥೆಯನ್ನು ಸ್ಥಾಪಿಸಿದರು. ಈ ಥಿಂಕ್‌ ಟ್ಯಾಂಕ್ 2016ರಿಂದಲೂ ಕೂಡ ಸರಕಾರಿ ಅಂಕಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು, ರಾಜ್ಯಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಳ ಕುರಿತು ಸೂಚ್ಯಾಂಕಗಳನ್ನು ಬಿಡುಗಡೆ ಮಾಡುತ್ತಿದೆ.

ಪಬ್ಲಿಕ್‌ ಅಪೈರ್ಸ್‌ ಸೆಂಟರ್‌ನ ಅಂಕಿ ಅಂಶಗಳ ಪ್ರಕಾರ ಕೇರಳ ಮೊದಲ ಸ್ಥಾನದಲ್ಲಿದ್ದರೆ ತಮಿಳು ನಾಡು ಮತ್ತು ತೆಲಂಗಾಣ ರಾಜ್ಯಗಳು 2 ಮತ್ತು 3ನೇ ಸ್ಥಾನದಲ್ಲಿವೆ. ಕರ್ನಾಟಕ 4ನೇ ಸ್ಥಾನದಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿಯವರ ತವರು ನೆಲ ಗುಜರಾತ್‌ 5ನೇ ಸ್ಥಾನದಲ್ಲಿದೆ. ಮಧ್ಯ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್‌ ರಾಜ್ಯಗಳು ಕೊನೆ ಸ್ಥಾನಗಳನ್ನು ಪಡೆದುಕೊಂಡಿವೆ. ಈ ರಾಜ್ಯಗಳಲ್ಲಿ ಹೆಚ್ಚಿನ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳಿವೆ ಎಂದು ಸಾರ್ವಜನಿಕ ವ್ಯವಹಾರಗಳ ಸೂಚ್ಯಾಂಕ ತಿಳಿಸುತ್ತದೆ.

ಜನಸಂಖ್ಯೆಯು 2 ಕೋಟಿ ಮೀರಿರದ ಚಿಕ್ಕ ರಾಜ್ಯಗಳ ಪೈಕಿ ಹಿಮಾಚಲ ಪ್ರದೇಶ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಕರ್ನಾಟಕದ ನೆರೆಯ ರಾಜ್ಯ ಗೋವಾ 2 ಸ್ಥಾನದಲ್ಲಿದೆ. ನಂತರದ ಸ್ಥಾನಗಳನ್ನು ಕ್ರಮವಾಗಿ ಮಿಝೋರಾಮ್‌, ಸಿಕ್ಕಿಂ ಮತ್ತು ತ್ರಿಪುರ ರಾಜ್ಯಗಳು ಪಡೆದಿದೆ. ಚಿಕ್ಕ ರಾಜ್ಯಗಳ ಪೈಕಿ ನಾಗಲ್ಯಾಂಡ್‌, ಮಣಿಪುರ ಮತ್ತು ಮೇಘಾಲಯ ರಾಜ್ಯಗಳು ಕೊನೆಯ ಸ್ಥಾನಗಳಲ್ಲಿ ಕುಳಿತಿವೆ.

2018ರ ವಾರ್ಷಿಕ ಸೂಚ್ಯಾಂಕವನ್ನು ಬಿಡುಗಡೆಗೊಳಿಸುವ ವೇಳೆಯಲ್ಲಿ ಮಾತನಾಡಿದ ಪಬ್ಲಿಕ್‌ ಅಫೇರ್ಸ್‌ ಸೆಂಟರ್‌ನ ಅಧ್ಯಕ್ಷ ಕೆ. ಕಸ್ತೂರಿ ರಂಗನ್‌, “ಬೆಳೆಯುತ್ತಿರುವ ಜನಸಂಖ್ಯೆಯ ಜತೆಗೆ ಯುವ ರಾಷ್ಟ್ರ ಎಂದು ಕರೆಸಿಕೊಂಡಿರುವ ಭಾರತ ತನ್ನ ಅಭಿವೃದ್ಧಿಯ ಸವಾಲುಗಳ ಕಡೆಗೆ ಇನ್ನೂ ಹೆಚ್ಚಿನ ಗಮನ ಹರಿಸಬೇಕಿದೆ,” ಎಂದಿದ್ದಾರೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಮಾಜಿ ಅಧ್ಯಕ್ಷರಾದ ಕೆ. ಕಸ್ತೂರಿ ರಂಗನ್‌ ಪಬ್ಲಿಕ್‌ ಅಫೈರ್ಸ್ ಸೆಂಟರ್‌ನ ಸಮೀಕ್ಷೆಯ ಕುರಿತು ಮಾತನಾಡಿ, “2018ರ ಸಾರ್ವಜನಿಕ ವ್ಯವಹಾರಗಳು ಸೂಚ್ಯಾಂಕವು ಸರಕಾರದ ಮೂಲಗಳಿಂದ ಪಡೆದ ಅಂಕಿ ಅಂಶಗಳ ಆಧಾರದ ಮೇಲೆ ರಾಜ್ಯಗಳ ಆಡಳಿತದ ಸಮೀಕ್ಷೆ ನಡೆಸಿದೆ. ಮೂಲಭೂತವಾಗಿ ರಾಜ್ಯ ಸರಕಾರಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸುತ್ತದೆ,” ಎಂದು ತಿಳಿಸಿದ್ದಾರೆ.

ಈ ಸೂಚ್ಯಾಂಕವನ್ನು ಸಿದ್ಧಪಡಿಸಿಲು ಸಂಸ್ಥೆಯು ದೇಶದ ಎಲ್ಲಾ ರಾಜ್ಯಗಳಲ್ಲೂ ಕೂಡ ಸಂಶೋಧನೆ ನಡೆಸಿದೆ. ಅಗತ್ಯವಾದ ಮೂಲಭೂತ ಸೌಕರ್ಯಗಳು, ಮಾನವ ಅಬಿವೃಧ್ಧಿಗೆ ದೊರೆಯುವ ಸಹಕಾರ, ಸಾಮಾಜಿಕ ಭದ್ರತೆ, ಮಹಿಳ ಮತ್ತು ಮಕಳ ಕಲ್ಯಾಣ, ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ 10 ವಿಷಯಗಳ ಕುರಿತು ಮಾಹಿತಿ ಕಲೆ ಹಾಕಿದೆ.

“ಭಾರತೀಯ ಉಪ ಖಂಡದ ಅನೇಕ ಮತ್ತು ವೈವೀದ್ಯತೆಯಿಂದ ಕೂಡಿದ ಜನರಿಗೆ ಆಡಳಿತ ನೀಡುತ್ತಿರುವಲ್ಲಿ ಉಂಟಾಗುತ್ತಿರುವ ಸಂಕೀರ್ಣತೆಗಳ ಕುರಿತು ಸೂಚ್ಯಾಂಕವು ಹಲವು ಆಯಾಮದ ಮತ್ತು ಸಮಗ್ರವಾದ ಮಾಹಿತಿ ನೀಡುತ್ತದೆ,” ಎಂದು ಪಬ್ಲಿಕ್‌ ಅಫೈರ್ಸ್‌ ಸೆಂಟರ್‌ನ ಹಿರಿಯ ಸಹವರ್ತಿ ಸಿ.ಕೆ. ಮ್ಯಾಥ್ಯೂ ಹೇಳಿದ್ದಾರೆ.

ಈ ಸೂಚ್ಯಾಂಕವನ್ನು ಸಿದ್ಧ ಪಡಿಸಲು ದೇಶದ ರಾಜ್ಯಗಳನ್ನು ಆ ರಾಜ್ಯಗಳ ಜನಸಂಖ್ಯೆಯ ಆಧಾರದ ಮೇಲೆ ಚಿಕ್ಕ ರಾಜ್ಯ ಮತ್ತು ದೊಡ್ಡ ರಾಜ್ಯ ಎಂದು ಎರಡು ರೀತಿಯ ವರ್ಗೀಕರಣ ಮಾಡಿಕೊಳ್ಳಲಾಗಿದೆ. 2 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯಗಳನ್ನು ದೊಡ್ಡ ರಾಜ್ಯಗಳು ಎಂದು ಪರಿಗಣಿಸಿಲಾಗಿದೆ.

ಸಾರ್ವಜನಿಕ ವ್ಯವಹಾರಗಳ ಸೂಚ್ಯಾಂಕಕ್ಕಾಗಿ 30 ವಿವಿಧ ವಿಷಯಗಳ ಬಗ್ಗೆ ಕೇಂದ್ರೀಕರಿಸಿ, 100 ಸೂಚ್ಯಾಂಕಗಳನ್ನು ಸಿದ್ಧಪಡಿಸಲಾಗಿದೆ. ಇವೆಲ್ಲವುಗಳ ಆಧಾರದ ಮೇಲೆ ಸಾರ್ವಜನಿಕ ವ್ಯವಹಾರಗಳ ಸೂಚ್ಯಾಂಕ ಸಿದ್ಧವಾಗಿದ್ದು, ಸರಕಾರಿ ಅಂಕಿ ಅಂಶಗಳು ಈ ಸೂಚ್ಯಾಂಕದ ಮೂಲವಾಗಿವೆ. ಖಾಸಗಿ ದಾಖಲೆಗಳು ಪೂರ್ವಗ್ರಹಗಳನ್ನು ಹೊಂದಿರಬಹುದಾದ ಸಾಧ್ಯತೆಗಳ ಕಾರಣದಿಂದ ಕೇವಲ ಸರಕಾರಿ ಮಾಹಿತಿಗಳನ್ನಷ್ಟೇ ಪಡೆಯಲಾಗಿದೆ.

ಈ ಬಾರಿ ಭಾರತದಲ್ಲಿನ ಮಕ್ಕಳ ಕುರಿತು ಪ್ರತ್ಯೇಕ ಸೂಚ್ಯಾಂಕವನ್ನು ಸಿದ್ಧಪಡಿಸಲಾಗಿದೆ. ರಾಜ್ಯಗಳು ಎಷ್ಟರ ಮಟ್ಟಿಗೆ ಮಕ್ಕಳ ಸ್ನೇಹಿಯಾದ ಆಡಳಿತವನ್ನು ನೀಡಿವೆ ಎನ್ನುವುದನ್ನು ಈ ಸೂಚ್ಯಾಂಕದ ಮೂಲಕ ಅಳೆಯಲಾಗಿದೆ. ಇದರಲ್ಲೂ ಕೂಡ ಕೇರಳ ಮೊದಲನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಹಿಮಾಚಲ ಪ್ರದೇಶ ಮತ್ತು ಮಿಝೋರಾಮ್‌ ರಾಜ್ಯಗಳು ಮಕ್ಕಳಿಗೆ ಉತ್ತಮ ವಾತಾವರಣವನ್ನು ನಿರ್ಮಿಸಿರುವ ರಾಜ್ಯಗಳ ಪೈಕಿ 2 ಮತ್ತು 3ನೇ ಸ್ಥಾನ ಪಡೆದಿವೆ.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ಶಾಂತ ಸಿನ್ಹಾ, ಸ್ಯಾಮುಯೆಲ್‌ ಪೌಲ್‌ ಕುರಿತು ಭಾಷಣ ಮಾಡುವುದರ ಜತೆಗೆ, ದೇಶದಲ್ಲಿನ ಮಕ್ಕಳ ಹಕ್ಕುಗಳ ಕುರಿತೂ ಕೂಡ ಮಾತನಾಡಿದ್ದಾರೆ.

“ಮಕ್ಕಳು ಬಡತನದಲ್ಲಿ ಬೆಳವಣಿಗೆ ಹೊಂದುತ್ತಿದ್ದಾರೆ. ಅದಕ್ಕಾಗಿ ಅವರ ಸ್ಥಿತಿಯನ್ನು ದೂಷಿಸಬೇಕಿಲ್ಲ. ಮಕ್ಕಳಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸಿ, ಉತ್ತಮ ಜೀವನ ಸಾಗಿಸಲು ಬೇಕಾದ ಅವಶ್ಯಕತೆಗಳನ್ನು ಒದಗಿಸಿಕೊಡಬೇಕಾದದ್ದು ರಾಜ್ಯ ಸರಕಾರಗಳ ಕರ್ತವ್ಯ,” ಎಂದಿದ್ದಾರೆ.