ಅವಿಶ್ವಾಸ ನಿರ್ಣಯ ಚರ್ಚೆ: ಲೋಕಸಭೆಯಲ್ಲೇ ಮೋದಿ ತಬ್ಬಿಕೊಂಡ ರಾಹುಲ್ ಗಾಂಧಿ!
ದೇಶ

ಅವಿಶ್ವಾಸ ನಿರ್ಣಯ ಚರ್ಚೆ: ಲೋಕಸಭೆಯಲ್ಲೇ ಮೋದಿ ತಬ್ಬಿಕೊಂಡ ರಾಹುಲ್ ಗಾಂಧಿ!

ಭಾಷಣ ಮುಗಿಸುವ ಮುನ್ನ ಭಾವನಾತ್ಮಕ ಟಚ್ ಕೊಟ್ಟ ರಾಹುಲ್ ಗಾಂಧಿ, “ನನ್ನನ್ನು ಎಷ್ಟು ಬೇಕಾದರೂ ದ್ವೇಷಿಸಿ, ಪಪ್ಪು ಅಂತ ಕರೆಯಿರಿ. ಆದರೆ ನನ್ನ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಯಾವ ಸಿಟ್ಟು ಇಲ್ಲ’’ ಎಂದ ರಾಹುಲ್. 

ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳ ನಂತರ ಮೊದಲ ಬಾರಿಗೆ ಪ್ರಧಾನಿ ಮೋದಿ ನೇತೃತ್ವದ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಈ ಕುರಿತು ಲೋಕಸಭೆಯಲ್ಲಿ ಶುಕ್ರವಾರ ಫಲಿತಾಂಶ ಸಂಜೆ ವೇಳೆಗೆ ಹೊರಬೀಳಲಿದೆ. ಆದರೆ ಅದಕ್ಕೂ ಮುನ್ನವೇ ನಾಟಕೀಯ ಘಟನೆಗೆ ಲೋಕಸಭೆ ಸಾಕ್ಷಿಯಾಯಿತು.

ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡಿದ ಎಐಸಿಸಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಪ್ರಧಾನಿ ಮೋದಿ ಮೇಲೆ ಗಂಭೀರ ಆರೋಪಗಳನ್ನು ಮಾಡಿದರು. ರಾಹುಲ್ ಮಾತು ಆರಂಭಿಸುತ್ತಿದ್ದಂತೆ ವಿಪಕ್ಷಗಳು ಅಡ್ಡಿ ಪಡಿಸಲು ಆರಂಭಿಸಿದವು. ಸಭಾಧ್ಯಕ್ಷೆ ಸತತ ಮನವಿಗಳ, ಗದ್ದಲಗಳ ನಡುವೆಯೇ ಮಾತು ಮುಂದುವರಿಸಿದ ರಾಹುಲ್ ಗಾಂಧಿ ಹಲವು ವಿಚಾರಗಳಲ್ಲಿ ಸರಕಾರ ವಿಫಲವಾಗಿದೆ ಎಂದು ಸದನದ ಮುಂದೆ ಮಂಡಿಸುವ ಪ್ರಯತ್ನ ಮಾಡಿದರು.

ಸರಕಾರಗಳ ಜುಮ್ಲಾ (ಸುಳ್ಳು)ಗಳ ಹೆಸರಿನಲ್ಲಿ ಪಟ್ಟಿಯನ್ನು ಮುಂದಿಟ್ಟ ರಾಹುಲ್, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿಗಳ ಆಶ್ವಾಸನೆಯನ್ನು ನೆನಪಿಸಿದರು. ಪ್ರತಿ ವರ್ಷ ದೇಶದ 2 ಕೋಟಿ ಯುವ ಜನತೆಗೆ ಉದ್ಯೋಗ ಸೃಷ್ಟಿಯ ಮಾತುಗಳನ್ನು ಪ್ರಸ್ತಾಪಿಸಿದರು.

ರಫೇಲ್ ಹೆಲಿಕಾಪ್ಟರ್ ಡೀಲ್‌ ಬಗೆಗೆ ಗಂಭೀರ ಆರೋಪ ಮಾಡಿದ ರಾಹುಲ್, ‘ಮೋದಿ ತಮ್ಮ ಸ್ನೇಹಿತ ಉದ್ಯಮಿ (ಮುಖೇಶ್ ಅಂಬಾನಿ)ಗೆ 45 ಸಾವಿರ ಕೋಟಿ ರೂಪಾಯಿ ಲಾಭ ಮಾಡಿಕೊಟ್ಟಿದ್ದಾರೆ ಎಂದರು. ಇದರ ಜತೆಗೆ ಫ್ರಾನ್ಸ್‌ ಜತೆ ನಡೆದ ಒಡಂಬಡಿಕೆಯನ್ನು ಗೌಪ್ಯತೆ ಹೆಸರಿನಲ್ಲಿ ಮುಚ್ಚಿಡುವ ಪ್ರಯತ್ನ ಮಾಡಲಾಗಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರನ್ನು ಪ್ರಸ್ತಾಪಿಸಿ ಆರೋಪ ಮಾಡಿದರು.

‘ಯುಪಿಎ ಸರಕಾರದ ಅವಧಿಯಲ್ಲಿ ಒಂದು ರಫೇಲ್ ಹೆಲಿಕಾಪ್ಟರ್‌ಗೆ 520 ಕೋಟಿ ರೂಪಾಯಿ ವೆಚ್ಚ ಮಾಡುವ ಯೋಜನೆ ಇದಾಗಿತ್ತು. ಆದರೆ ಪ್ರಧಾನಿ ಮೋದಿ ಫ್ರಾನ್ಸ್‌ಗೆ ಹೋಗಿ ಬಂದ ಮೇಲೆ ಏನಾಯಿತೋ ಗೊತ್ತಿಲ್ಲ. ಒಂದು ರಫೇಲ್ ಹೆಲಿಕಾಪ್ಟರ್‌ಗೆ 1600 ಕೋಟಿ ವೆಚ್ಚ ಮಾಡುವ ಯೋಜನೆ ತಯಾರಿಸಲಾಗಿದೆ. ಇದನ್ನು ಯಾವತ್ತೂ ಒಂದೇ ಒಂದು ಹೆಲಿಕಾಪ್ಟರ್ ನಿರ್ಮಾಣ ಮಾಡದ ತಮ್ಮ ಸ್ನೇಹಿತ ಉದ್ಯಮಿಗೆ ಗುತ್ತಿಗೆ ನೀಡಲಾಗಿದೆ. ಇದರಿಂದ ಎಚ್‌ಎಎಲ್ ಹಾಗೂ ಕರ್ನಾಟಕದ ಯುವಜನತೆಯ ಉದ್ಯೋಗವನ್ನು ಕಿತ್ತುಕೊಳ್ಳಲಾಗಿತು,’ ಎಂದು ಆರೋಪ ಮಾಡಿದರು.

ಈ ಸಮಯದಲ್ಲಿ ನಗುತ್ತಿದ್ದ ಮೋದಿ ಅವರನ್ನು ಉದ್ದೇಶಿಸಿದ ಮಾತನಾಡಿದ ರಾಹುಲ್ ಗಾಂಧಿ, “ಮೇಲೆ ನೀವು ನಗುತ್ತಿದ್ದೀರಿ. ಆದರೆ ಆಳದಲ್ಲಿರುವ ನರ್ವಸ್‌ನೆಸ್‌ನ್ನು ಅರ್ಥ ಮಾಡಿಕೊಳ್ಳಬಲ್ಲೆ. ನೀವು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿಲ್ಲ,’’ ಎಂದು ವ್ಯಂಗ್ಯವಾಡಿದರು.

ಇದರ ಜತೆಗೆ, ‘ನಾನು ದೇಶದ ಪ್ರಧಾನಿ ಅಲ್ಲ, ಚೌಕೀದಾರ’ ಎಂಬ ಮೋದಿ ಭಾಷಣವನ್ನು ನೆನಪಿಸಿದ ರಾಹುಲ್, ಇವತ್ತು ಚೌಕೀದಾರ್ ಅಲ್ಲ, ಭ್ರಷ್ಟಾಚಾರದಲ್ಲಿ ಭಾಗೀದಾರ’ ಎಂದು ಕುಟುಕಿದರು.

ಈ ಸಮಯದಲ್ಲಿ ವಿಪಕ್ಷಗಳ ಗದ್ದಲ ಹೆಚ್ಚಾಯಿತು. ಕೇಂದ್ರ ಸಚಿವ ಅನಂತ ಕುಮಾರ್ ಅಧಿವೇಶನ ರೂಲ್‌ 352ರ ಅಡಿಯಲ್ಲಿ ಮಾನಹಾನಿ ಮಾಡುವಂತಹ ಮಾತುಗಳನ್ನು ಆಡುವ ಹಾಗಿಲ್ಲ ಎಂದು ಮನದಟ್ಟು ಮಾಡಿಸುವ ಪ್ರಯತ್ನ ನಡೆಸಿದರು. ಗದ್ದಲ ಹೆಚ್ಚಾದ ಕಾರಣ ಸದನವನ್ನು ಐದು ನಿಮಿಷಗಳ ಕಾಲ ಮುಂದೂಡಲಾಯಿತು.

ನಂತರ ಮತ್ತೆ ಸದಸನ ಆರಂಭವಾಗುತ್ತಿದ್ದಂತೆ, “ಸತ್ಯಕ್ಕೆ ಹೆದರಬೇಡಿ” ಎಂದು ರಾಹುಲ್ ಮಾತು ಮುಂದುವರಿಸಿದರು. ‘ರೈತರ ಬೆಳೆ ಸಾಲ ಮನ್ನಾ ಮಾಡದ ಸರಕಾರ ಹತ್ತಿಪ್ಪತ್ತು ಉದ್ಯಮಿಪತಿಗಳ ಸಾಲ ಮನ್ನಾ ಮಾಡಿದೆ, ದೇಶ ಅತ್ಯಾಚಾರಗಳ ಕಾರಣಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ ಕಳೆದುಕೊಂಡಿದೆ’ ಎಂದರು.

ಕೊನೆಯಲ್ಲಿ, ‘ನರೇಂದ್ರ ಮೋದಿ ಹಾಗೂ ಬಿಜೆಪಿ ಅಮಿತ್ ಶಾ ಇಬ್ಬರು ಪ್ರತ್ಯೇಕ ವ್ಯಕ್ತಿತ್ವದ ರಾಜಕಾರಣಿಗಳು. ನಮಗೆ ಅಧಿಕಾರಲ್ಲಿದ್ದು, ಅಧಿಕಾರದಿಂದ ಹೊರಗಿದ್ದು ಗೊತ್ತು. ಆದರೆ ಈ ಇಬ್ಬರಿಗೆ ಅಧಿಕಾರ ಕಳೆದುಕೊಳ್ಳಲು ಇಷ್ಟವಿಲ್ಲ. ಒಂದು ವೇಳೆ ಅಧಿಕಾರ ಕಳೆದುಕೊಂಡರೆ ನಂತರದ ಪರಿಣಾಮಗಳ ಬಗ್ಗೆ ಅರಿವು ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ಅಧಿಕಾರದಿಂದ ಕೆಳಗಿಳಿಯಲು ಇಬ್ಬರೂ ತಯಾರಿಲ್ಲ. ಅದರಿಂದ ಅವರಿಗೆ ಪ್ರಶ್ನೆಗಳು ಎದುರಾದರೆ ಸಿಟ್ಟು ಬರುತ್ತದೆ. ಅದೇ ಸಿಟ್ಟು ಇದೇ ದೇಶಾದ್ಯಂತ ಕಾಣಿಸುತ್ತದೆ’ ಎಂದರು.

ಭಾಷಣ ಮುಗಿಸುವ ಮುನ್ನ ಭಾವನಾತ್ಮಕ ಟಚ್ ಕೊಟ್ಟ ರಾಹುಲ್ ಗಾಂಧಿ, “ನನ್ನನ್ನು ಎಷ್ಟು ಬೇಕಾದರೂ ದ್ವೇಷಿಸಿ, ಪಪ್ಪು ಅಂತ ಕರೆಯಿರಿ. ಆದರೆ ನನ್ನ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಯಾವ ಸಿಟ್ಟು ಇಲ್ಲ. ಬದಲಿಗೆ, ನಿಮ್ಮೊಳಗಿರುವ ಪ್ರೀತಿಯನ್ನು ಹೆಕ್ಕಿ ತೆಗೆಯುತ್ತೇನೆ. ನಾನೊಬ್ಬ ಕಾಂಗ್ರೆಸ್ಸಿಗ. ದ್ವೇಷ ನಮ್ಮ ಬಳಿ ಇಲ್ಲ. ನಿಮ್ಮೆಲ್ಲರನ್ನೂ ಪ್ರೀತಿಯಿಂದಲೇ ಕಾಣುತ್ತೇನೆ,’’ ಎಂದರು. ಅಷ್ಟೆ ಅಲ್ಲ, ತಮ್ಮ ಆಸನದಿಂದ ಪ್ರಧಾನಿ ಮೋದಿ ಬಳಿಗೆ ಹೋದ ರಾಹುಲ್ ತಬ್ಬಿಕೊಂಡರು.

ಇಂತಹದೊಂದು ನಾಟಕೀಯ ಬೆಳವಣಿಗೆಯನ್ನು ಕಂಡ ಕಲಾಪ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯನ್ನು ಮುಂದಿರಿಸಿದೆ.