ಅಂಬಾನಿ ಶಿಕ್ಷಣ ಸಂಸ್ಥೆಯ ನೀಲನಕ್ಷೆ: ಮೊದಲ ವರ್ಷವೇ 100 ಕೋಟಿ ಆದಾಯ!
ದೇಶ

ಅಂಬಾನಿ ಶಿಕ್ಷಣ ಸಂಸ್ಥೆಯ ನೀಲನಕ್ಷೆ: ಮೊದಲ ವರ್ಷವೇ 100 ಕೋಟಿ ಆದಾಯ!

‘ಇನ್ಸ್ಟಿಟ್ಯೂಟ್‌ ಆಫ್‌ ಎಮಿನೆನ್ಸ್’ ಸ್ಥಾನಮಾನಕ್ಕೆ ಅರ್ಜಿ ಸಲ್ಲಿಸುವ ವೇಳೆ ತನ್ನ 15 ವರ್ಷಗಳ ಕ್ರಿಯಾ ಯೋಜನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿತ್ತು ಜಿಯೋ. ಅದರಲ್ಲಿ ಮೊದಲ ವರ್ಷವೇ 100 ಕೋಟಿ ಆದಾಯ ಗಳಿಸುವುದಾಗಿ ಹೇಳಿಕೊಂಡಿದೆ. 

ರಿಲಯನ್ಸ್‌ ಫೌಂಡೇಶನ್‌ನ ಜಿಯೋ ಇನ್ಸ್ಟಿಟ್ಯೂಟ್‌ ಕೇಂದ್ರ ಸರಕಾರಕ್ಕೆ ನೀಡಿರುವ ‘ಇನ್ಸ್ಟಿಟ್ಯೂಟ್ ಆಫ್ ಎಮಿನೆನ್ಸ್’ ಅರ್ಜಿಯಲ್ಲಿ ಒಂದು ವರ್ಷಕ್ಕೆ 100 ಕೋಟಿ ರೂಪಾಯಿ ಗಳಿಸುವ ಯೋಚನೆಯನ್ನು ಹೊಂದಿದಿರುವುದಾಗಿ ತಿಳಿಸಿದೆ. ಈ ಕುರಿತು ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ. ಸುಮಾರು 1,000 ವಿದ್ಯಾರ್ಥಿಗಳ ವಸತಿ ಮತ್ತು ಟ್ಯೂಷನ್‌ ಶುಲ್ಕಗಳಿಂದ ಈ ಹಣವನ್ನು ಸಂಗ್ರಹಿಸಲಾಗುತ್ತದೆ ಎನ್ನಲಾಗಿದೆ.

ಜಿಯೋ ಇನ್ಸ್ಟಿಟ್ಯೂಟ್‌ ಸದ್ಯ ಪೇಪರ್‌ಗಳ ಮೇಲಷ್ಟೇ ಅಸ್ತಿತ್ವದಲ್ಲಿರುವ ವಿದ್ಯಾಕೇಂದ್ರ. ಈ ಶೈಕ್ಷಣಿಕ ವರ್ಷದಿಂದ 3 ವರ್ಷದ ಕೋರ್ಸ್‌ಗಳಿಗೆ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲು ಮುಂದಾಗಿದೆ. ಆದರೂ ಕೂಡ ದೇಶದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಾದ ದೆಹಲಿಯ ಐಐಟಿ, ಬಾಂಬೆ ಐಐಟಿ, ಬಿರ್ಲಾ ಇನ್ಸ್ಟಿಟ್ಯೂಟ್‌ ಆಫ್‌ ಸೈನ್ಸ್ ಆಂಡ್ ಟೆಕ್ನಾಲಜಿ, ಬೆಂಗಳೂರಿನ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್ ಸೈನ್ಸ್ ಮತ್ತು ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ ವಿದ್ಯಾ ಸಂಸ್ಥೆಗಳೊಟ್ಟಿಗೆ ‘ಶ್ರೇಷ್ಠ ವಿದ್ಯಾ ಸಂಸ್ಥೆ’ (Institute of Eminence) ಎಂಬ ಹಣೆಪಟ್ಟಿಗೆ ಅರ್ಜಿ ಸಲ್ಲಿಸಿತ್ತು.

‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಹೇಳುವಂತೆ ಜಿಯೋ ಇನ್ಸ್ಟಿಟ್ಯೂನ್‌ನ ಆರ್ಥಿಕ ಯೋಜನೆ ಪ್ರಕಾರ ಮೊದಲ ವರ್ಷ ಶಿಕ್ಷಣ ಸಂಸ್ಥೆ ಸ್ಕಾಲರ್‌ಶಿಪ್‌ ರೂಪದಲ್ಲಿ 38 ಕೋಟಿಗಳನ್ನು ವ್ಯಯಿಸಲಿದೆ. ಜಿಯೋ ಇನ್ಸ್ಟಿಟ್ಯೂಟ್‌ ಒಬ್ಬ ವಿದ್ಯಾರ್ಥಿಯ ಮೇಲೆ ಮೊದಲ ವರ್ಷ 6.2 ಲಕ್ಷಗಳಷ್ಟು ಖರ್ಚು ಮಾಡಲಿದ್ದು, ಇದರಿಂದ ಸಂಸ್ಥೆಗೆ ಯಾವುದೇ ಲಾಭವಿಲ್ಲ.

1929ರಲ್ಲಿ ಸ್ಥಾಪನೆಗೊಂಡ ಬಿರ್ಲಾ ಎಜುಕೇಷನ್‌ ಟ್ರಸ್ಟ್‌, ಬಿರ್ಲಾ ಇನ್ಸ್ಟಿಟ್ಯೂಟ್‌ ಆಫ್‌ ಸೈನ್ಸ್ ಆಂಡ್ ಟೆಕ್ನಾಲಜಿಯನ್ನು ಆರಂಭಿಸಿದ್ದು 1955ರಲ್ಲಿ. ಈಗ ಬಿಐಟಿಎಸ್‌ ಪಿಲಾನಿ, ಹೈದರಾಬಾದ್‌, ಗೋವಾ ಮತ್ತು ದುಬೈನಲ್ಲಿ ಕಾಲೇಜುಗಳನ್ನು ಹೊಂದಿದೆ. 6 ದಶಕಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಬಿಐಟಿಎಸ್‌ನ ಈ ಕ್ಯಾಂಪಸ್‌ಗಳಲ್ಲಿ ಒಟ್ಟು 13,758 ವಿದ್ಯಾರ್ಥಿಗಳು ಓದುತ್ತಿದ್ದು, ಟ್ಯೂಷನ್‌ ಹಾಗೂ ಮತ್ತಿತರ ಶುಲ್ಕಗಳೆಂದು 467 ಕೋಟಿ ಹಣವನ್ನು ಸಂಸ್ಥೆ ಸ್ವೀಕರಿಸಿದೆ. ಅಂದರೆ ಪ್ರತಿ ವಿದ್ಯಾರ್ಥಿಯಿಂದ ಸರಿ ಸುಮಾರು 3.39 ಲಕ್ಷ ಹಣವನ್ನು ಪಡೆದಿದೆ.

‘ಇನ್ಸ್ಟಿಟ್ಯೂಟ್‌ ಆಫ್‌ ಎಮಿನನ್ಸ್‌’ಗೆ ಸಲ್ಲಿಸಿರುವ ಅರ್ಜಿಯಲ್ಲಿ ಬಿಐಟಿಎಸ್‌ 2021-22ನೇ ಶೈಕ್ಷಣಿಕ ವರ್ಷದ ವೇಳೆಗೆ ತನ್ನ ವಿದ್ಯಾರ್ಥಿಗಳ ಸಂಖ್ಯೆಯನ್ನು 18,000ಕ್ಕೆ ಏರಿಸಿಕೊಳ್ಳುವುದಾಗಿ ತಿಳಿಸಿದೆ. ಆ ವರ್ಷ ಪ್ರತಿ ವಿದ್ಯಾರ್ಥಿಯಿಂದ ಅಂದಾಜು 4.94 ಲಕ್ಷ ಶುಲ್ಕವನ್ನು ಪಡೆಯುವುದಾಗಿ ಬಿಐಟಿಎಸ್‌ ತಿಳಿಸಿದ್ದು, ಒಟ್ಟು ಮೊತ್ತ 890 ಕೋಟಿ ಆಗಲಿದೆ.

6 ದಶಕಗಳ ಶಿಕ್ಷಣ ಸಂಸ್ಥೆ 13,758 ವಿದ್ಯಾರ್ಥಿಗಳಿರುವುದಾಗಿ ತಿಳಿಸಿದರೆ, ಇನ್ನು ಸ್ಥಾಪನೆಯೇ ಆಗದ ಜಿಯೋ ಇನ್ಸ್ಟಿಟ್ಯೂಟ್‌ 1,000ಕ್ಕೂ ಹೆಚ್ಚು ದಾಖಲಾತಿಯನ್ನು ಮಾಡಿಕೊಳ್ಳುವುದಾಗಿ ತಿಳಿಸಿದೆ. ನ್ಯಾಚುರಲ್‌ ಸೈನ್ಸಸ್ ವಿಭಾಗಕ್ಕೆ 300 ವಿದ್ಯಾರ್ಥಿಗಳು, ಇಂಜಿನಿಯರಿಂಗ್‌ ಮತ್ತು ಕಂಪ್ಯೂಟರ್‌ ಸೈನ್ಸ್ ವಿಭಾಗಕ್ಕೆ 250 ವಿದ್ಯಾರ್ಥಿಗಳು, ಹ್ಯುಮನಿಟೀಸ್‌ ವಿಭಾಗಕ್ಕೆ 200, ನಿರ್ವಹಣೆ ಮತ್ತು ಉದ್ಯಮಶೀಲತೆ ವಿಭಾಗಕ್ಕೆ 125, ಕಾನೂನು ವಿಭಾಗಕ್ಕೆ 90, ಮೀಡಿಯಾ ಅಂಡ್‌ ಜರ್ನಲಿಸಂ ವಿಭಾಗಕ್ಕೆ 60, ಕಲೆ ವಿಭಾಗಕ್ಕೆ 50, ಸ್ಪೋರ್ಟ್ಸ್‌ ಸೈನ್ಸ್ ವಿಭಾಗಕ್ಕೆ 80 ಹಾಗೂ ಅರ್ಬನ್‌ ಪ್ಲಾನಿಂಗ್‌ ಅಂಡ್‌ ಆರ್ಕಿಟೆಕ್ಚರ್‌ ವಿಭಾಗಕ್ಕೆ 50 ವಿಧ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳುವುದಾಗಿ ‘ಇನ್ಸ್ಟಿಟ್ಯೂಟ್‌ ಆಫ್‌ ಎಮಿನನ್ಸ್‌’ಗೆ ಸಲ್ಲಿಸಿರುವ ಅರ್ಜಿಯಲ್ಲಿ ಬರೆದುಕೊಂಡಿದೆ.

ಜಿಯೋ ಇನ್ಸ್ಟಿಟ್ಯೂಟ್‌ ಹೇಳುವಂತೆ ಮೊದಲ ವರ್ಷದ ನಿರ್ವಹಣಾ ವೆಚ್ಚ 154 ಕೋಟಿ ರೂಪಾಯಿಗಳನ್ನು ತಲುಪಲಿದೆ. ಆದರಲ್ಲಿ 93 ಕೋಟಿ ರೂಪಾಯಿಗಳು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಸಂಬಳ ಮತ್ತು ಇತರೆ ಭತ್ಯೆಗಳಿಗಾಗಿ ಖರ್ಚಾಗಲಿದೆ. ವಿದ್ಯಾ ಸಂಸ್ಥೆಗೆ ಅಗತ್ಯವಿರುವ ಬೋಧಕರನ್ನು ಜಗತ್ತಿನ 500 ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಿಂದ ಕರೆತರಲಾಗುತ್ತದೆ.

ಎರಡನೇ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯನ್ನು 2,000ಕ್ಕೆ ಏರಿಸಿಕೊಳ್ಳಲು ಜಿಯೋ ಇನ್ಸ್ಟಿಟ್ಯೂಟ್‌ ನಿರ್ಧರಿಸಿದೆ. ಈ ವಿದ್ಯಾರ್ಥಿಗಳಿಂದ ಟ್ಯೂಷನ್‌, ಹಾಸ್ಟೆಲ್‌ ಇತ್ಯಾದಿ ಶುಲ್ಕಗಳೆಂದು 208 ಕೋಟಿ ಹಣವನ್ನು ಪಡೆಯಲಿದೆ. ಈ ಹಣದಲ್ಲಿ 76 ಕೋಟಿಯನ್ನು ಪ್ರತಿಭಾವಂತ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಮೀಸಲಿಡುತ್ತೇವೆ ಎಂದು ರಿಲಯನ್ಸ್ ಫೌಂಡೇಷನ್‌ ಭರವಸೆ ನೀಡಿದೆ. ಸ್ಥಾಪನೆಯಾಗಿ 15 ವರ್ಷ ಕಳೆಯುವ ಹೊತ್ತಿಗೆ ವಿದ್ಯಾರ್ಥಿಗಳ ಸಂಖ್ಯೆಯನ್ನು 10,000ಕ್ಕೆ ಏರಿಸಿಕೊಳ್ಳುವುದಾಗಿ ಜಿಯೋ ಇನ್ಸ್ಟಿಟ್ಯೂಟ್‌ ತಿಳಿಸಿದ್ದು, ಈ ವಿದ್ಯಾರ್ಥಿಗಳಿಂದ ದೊರೆಯುವ ಒಟ್ಟು ನಿವ್ವಳ ಆದಾಯ 1,502 ಕೋಟಿಗಳು ಎಂದು ಅರ್ಜಿಯಲ್ಲಿ ತಿಳಿಸಿದೆ.

ನವ ಮುಂಬೈ ಬಳಿಯ ಕರ್ಜತ್‌ ಹತ್ತಿರ 800 ಎಕರೆ ಪ್ರದೇಶದಲ್ಲಿ ಜಿಯೋ ಇನ್ಸ್ಟಿಟ್ಯೂಟ್‌ನ ಕ್ಯಾಂಪಸ್‌ ನಿರ್ಮಾಣವಾಗಲಿದ್ದು, ಇದಕ್ಕಾಗಿ ರಿಲಯನ್ಸ್ ಫೌಂಡೇಷನ್‌ 9,500 ಕೋಟಿ ರೂಪಾಯಿ ಹಣ ಒದಗಿಸಲಿದೆ.

ಬಿಜೆಪಿ ಸರಕಾರದಿಂದ 2016ರಲ್ಲಿ 2ನೇ ಬಾರಿ ರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದ, ಈಗ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನ್ಯಾಷನಲ್‌ ಇನೋವೇಷನ್‌ ಫೌಂಡೇಷನ್‌ನ ಮುಖ್ಯಸ್ಥರಾಗಿರುವ ವಿಜ್ಞಾನಿ ಆರ್‌.ಎ. ಮಶೇಲ್ಕರ್‌ ಜಿಯೋ ಇನ್ಸ್ಟಿಟ್ಯೂಟ್‌ನ ಕುಲಪತಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಬ್ಯಾಂಕಾಕ್‌ನ ‘ಸಸಿನ್‌ ಗ್ರಾಜುಯೇಟ್‌ ಇನ್ಸ್ಟಿಟ್ಯೂಟ್‌ ಆಫ್‌ ಬಿಸಿನೆಸ್‌ ಅಡ್ಮಿನಿಸ್ಟ್ರೇಷನ್‌’ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ ದೀಪಕ್‌ ಸಿ ಜೈನ್‌ ಜಿಯೋ ಇನ್ಸ್ಟಿಟ್ಯೂಟ್‌ನ ಉಪ ಕುಲಪತಿಗಳಾಗಿ ನೇಮಕಗೊಳ್ಳಲಿದ್ದಾರೆ.

ಏನಿದು ‘ಇನ್ಸ್ಟಿಟ್ಯೂಟ್ ಆಫ್‌ ಎಮಿನೆನ್ಸ್’?:

ಕೇಂದ್ರ ಸಚಿವಾಲಯ 2017ರ ಆಗಸ್ಟ್‌ ತಿಂಗಳಿನಲ್ಲಿ ಯುಜಿಸಿಯ ‘ಇನ್ಸ್ಟಿಟ್ಯೂಟ್ ಆಫ್‌ ಎಮಿನೆನ್ಸ್’ ಪ್ರಸ್ತಾವವನ್ನು ಒಳಗೊಂಡಿದ್ದ ‘ಯುನಿವರ್ಸಿಟಿ ರೆಗ್ಯುಲೇಷನ್‌ ಕಾಯ್ದೆ’ಯನ್ನು ಅಂಗೀಕರಿಸಿತ್ತು. ಕಾಯ್ದೆಯ ಪ್ರಕಾರ ದೇಶದ 10 ಸರಕಾರಿ ಮತ್ತು 10 ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ವಿಶ್ವ ದರ್ಜೆಗೇರಿಸಲಾಗುತ್ತದೆ. ದೇಶದ ಕೆಲವು ಶಿಕ್ಷಣ ಸಂಸ್ಥೆಗಳು ವಿಶ್ವ ಮಟ್ಟದಲ್ಲಿ ಮಾನ್ಯತೆಯನ್ನು ಪಡೆಯಲು ಆರಂಭಿಸಿದ ನಂತರ, ಇನ್ನೂ ಕೆಲವು ಸಂಸ್ಥೆಗಳನ್ನು ವಿಶ್ವ ದರ್ಜೆಗೇರಿಸುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು.

ವಿಶ್ವದ 500 ಪ್ರಮುಖ ಜಾಗತಿಕ ಸ್ಥಾನಮಾನ ಪಡೆದಿರುವ ಶಿಕ್ಷಣ ಸಂಸ್ಥೆಗಳು ಅಥವಾ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ಮೊದಲ 50 ಕಾಲೇಜುಗಳು ಮಾತ್ರ ‘ಇನ್ಸ್ಟಿಟ್ಯೂಟ್‌ ಆಫ್ ಎಮಿನೆನ್ಸ್’ಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯಲ್ಲಿ ತಮ್ಮ 15 ವರ್ಷದ ಯೋಜನೆಯನ್ನು ನೀಡಬೇಕಿರುತ್ತದೆ. 10 ಸರಕಾರಿ ಶಿಕ್ಷಣ ಸಂಸ್ಥೆಗಳು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ 1,000 ಕೋಟಿ ಅನುದಾನವನ್ನು ಪಡೆಯಲಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ಅನುದಾನವಿಲ್ಲ. ಆದರೆ ಶ್ರೇಷ್ಟ ವಿದ್ಯಾಸಂಸ್ಥೆ ಎಂಬ ಸ್ಥಾನಮಾನ ದೊರೆಯುತ್ತದೆ.

ಇಷ್ಟೆಲ್ಲಾ ನಿಯಮಗಳಿದ್ದಾಗಲೂ ಕೂಡ ಇನ್ನು ವಾಸ್ತವವಾಗಿ ಸ್ಥಾಪನೆಯೇ ಆಗದ, ಕೇವಲ ಕಾಗದಗಳ ಮೇಲಷ್ಟೇ ತನ್ನ ಇರುವಿಕೆಯನ್ನು ಸೂಚಿಸಿರುವ ಜಿಯೋ ಇನ್ಸ್ಟಿಟ್ಯೂಟ್‌ ‘ಇನ್ಸ್ಟಿಟ್ಯೂಟ್‌ ಆಫ್‌ ಎಮಿನಿನ್ಸ್‌’ಗೆ ಅರ್ಜಿ ಸಲ್ಲಿಸಿರುವುದು ವಿಪರ್ಯಾಸ.