samachara
www.samachara.com
 ವಾಟ್ಸ್‌ಆಪ್‌ ವದಂತಿಗಳಿಗೆ ಕಡಿವಾಣ ಹಾಕಲು ‘ಜಾಹೀರಾತು ಟಿಪ್ಸ್‌’
ದೇಶ

ವಾಟ್ಸ್‌ಆಪ್‌ ವದಂತಿಗಳಿಗೆ ಕಡಿವಾಣ ಹಾಕಲು ‘ಜಾಹೀರಾತು ಟಿಪ್ಸ್‌’

ಸುಳ್ಳು ಸಂದೇಶಗಳಿಗೆ ವೇದಿಕೆ ನೀಡಿ, ಜನರ ಸಾವು ನೋವಿಗೆ ಕಾರಣವಾದ ವಾಟ್ಸ್‌ಆಪ್‌ ಎಚ್ಚರಿಕೆ ಕ್ರಮ ಕೈಗೊಂಡಿದೆ. ಪ್ರಮುಖ ವೃತ್ತ ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ ಜಾಗೃತಿ ಮೂಡಿಸಲು ಹೊರಟಿದೆ.  

ವಿಶ್ವದ ಬಹುಬಳಕೆಯ ಮೆಸೇಜಿಂಗ್‌ ಆಪ್‌ಗಳ ಪೈಕಿ ಒಂದಾಗಿರುವ ವಾಟ್ಸ್‌ಆಪ್‌ ಸುಳ್ಳು ಸಂದೇಶಗಳ ಕಾರಣದಿಂದಾಗಿ ಸುದ್ದಿ ಕೇಂದ್ರಕ್ಕೆ ಬಂದಿತ್ತು. ಈಗ ತನ್ನೊಳಗೆ ಹರಿದಾಡುತ್ತಿರುವ ಸುಳ್ಳು ಸುದ್ದಿಗಳನ್ನು ತಡೆಯುವ ಸಲುವಾಗಿ ವಾಟ್ಸ್‌ಆಪ್ ದೇಶದ ಪ್ರಮುಖ ವೃತ್ತಪತ್ರಿಕೆಗಳ ಒಂದು ಪುಟದ ಜಾಹಿರಾತನ್ನು ನೀಡಿದೆ.

ಭಾರತದಲ್ಲಿ 20 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿರುವ ವಾಟ್ಸ್‌ಆಪ್‌ ಸುಳ್ಳು ಸುದ್ದಿಗಳನ್ನು ಹಂಚುವ ತಾಣವಾಗಿ ಮಾರ್ಪಟ್ಟಿದೆ. ಗೋ ರಕ್ಷಣೆ, ಮಕ್ಕಳ ಕಳ್ಳರು ಇತ್ಯಾದಿ ತರಹೇವಾರಿ ಸುಳ್ಳು ಸಂದೇಶಗಳು ವಾಟ್ಸ್‌ಆಪ್‌ ಮೂಲಕ ಹರಿದಾಡುತ್ತಿವೆ. ಈ ಸುಳ್ಳು ಸುದ್ದಿಗಳು ದೇಶದ ನಾನಾ ರಾಜ್ಯಗಳಲ್ಲಿ ಜನಸಾಮಾನ್ಯರು ಅಮಾಯಾಕರ ಮೇಲೆ ದಾಳಿ ನಡೆಸಲು ಕಾರಣವಾಗಿವೆ. ದೇಶಾದ್ಯಂತ ನಿರಾಪರಾಧಿಗಳು ಸಾವನ್ನಪ್ಪಿದ್ದಾರೆ. ಈ ಕುರಿತು ಮಾತನಾಡಿದ ಸುಪ್ರಿಂ ಕೋರ್ಟ್‌, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು. ವದಂತಿಗಳನ್ನು ಹಬ್ಬಿಸಲು ರಹದಾರಿಯಾಗಿರುವ ವಾಟ್ಸ್‌ಆಪ್‌ ಸಂಸ್ಥೆಗೆ, ವದಂತಿಗಳನ್ನು ತಡೆಯಲು ಶೀಘ್ರ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿತ್ತು.

ಸದ್ಯ ವಾಟ್ಸ್‌ಆಪ್‌ ಸುಳ್ಳು ಸುದ್ದಿಗಳನ್ನು ತಡೆಯಲು ಮೊದಲ ಹೆಜ್ಜೆಯಾಗಿ ಜಾಹೀರಾತುಗಳಿಗೆ ಮೊರೆ ಹೋಗಿದೆ.

‘ನಾವು ಜತೆಯಾಗಿ ವಂದತಿಗಳ ವಿರುದ್ಧ ಹೋರಾಡಬಹುದು’ ಎಂಬ ತಲೆ ಬರಹದಡಿ ವಾಟ್ಸ್‌ಆಪ್‌ ಸಂಸ್ಥೆ ಪ್ರಮುಖ ಇಂಗ್ಲಿಷ್‌ ಪತ್ರಿಕೆಗಳ ಕೊನೆಯ ಪುಟದಲ್ಲಿ ಜಾಹಿರಾತು ನೀಡಿದೆ. ಸಂದೇಶಗಳನ್ನು ಹಂಚುವ ಮುಂಚೆ ಅದರ ಸತ್ಯಾಸತ್ಯತೆಗಳನ್ನು ಪರೀಕ್ಷಿಸಿ ಎಂದು ವಾಟ್ಸ್‌ಆಪ್‌ ಬಳಕೆದಾರರಿಗೆ ಮನವಿ ಮಾಡಿದೆ. ವಾಟ್ಸ್‌ಆಪ್‌ ಸಂಸ್ಥೆಯ ಪ್ರಮುಖರೊಬ್ಬರು, “ಭಾರತದಲ್ಲಿ ಸುಳ್ಳು ಸುದ್ದಿಗಳನ್ನು, ವದಂತಿಗಳನ್ನು ಹೇಗೆ ಪರೀಕ್ಷಿಸಬೇಕು ಎನ್ನುವುದನ್ನು ತಿಳಿಸಲು ಅರಿವು ಆಂದೋಲನವನ್ನು ನಡೆಸುತ್ತಿದ್ದೇವೆ,” ಎಂದಿದ್ದಾರೆ.

ಈ ಅರಿವು ಆಂದೋಲನ ಮೊದಲ ಭಾಗವಾಗಿ ವಾಟ್ಸ್‌ಆಪ್‌ ಕೆಲವು ಹಿಂದಿ ಮತ್ತು ಇಂಗ್ಲೀಷ್‌ ವೃತ್ತ ಪತ್ರಿಕೆಗಳಲ್ಲಿ ಇಡೀ ಪುಟದ ಜಾಹಿರಾತು ನೀಡಿದೆ. ಈ ವಾರದಲ್ಲಿಯೇ ಸ್ಥಳೀಯ ಭಾಷಾ ಪತ್ರಿಕೆಗಳಲ್ಲೂ ಕೂಡ ಜಾಹಿರಾತು ಪ್ರಕಟಿಸಲು ವಾಟ್ಸ್‌ಆಪ್‌ ಮುಂದಾಗಿದೆ. ಗುಜರಾತ್‌, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ ಸೇರಿದಂತೆ ಇನ್ನೂ ಕೆಲವು ಉತ್ತರ ಭಾರತದ ರಾಜ್ಯಗಳ ಸ್ಥಳೀಯ ಪ್ರಮುಖ ಪತ್ರಿಕೆಗಳಲ್ಲಿ ಜಾಹಿರಾತು ಪ್ರಕಟಿಸಲು ವಾಟ್ಸ್‌ಆಪ್‌ ಕಂಪನಿ ನಿರ್ಧರಿಸಿದೆ.

ಈ ಜಾಹೀರಾತಿನಲ್ಲಿ ‘ಈಸಿ ಟಿಪ್ಸ್’ ತಲೆಬರಹದ ಅಡಿಯಲ್ಲಿ ವದಂತಿಗಳನ್ನು ತಡೆಯುವುದು ಹೇಗೆ ಎಂಬ 10 ಅಂಶಗಳನ್ನು ವಾಟ್ಸ್‌ಆಪ್‌ ಮುಂದಿಟ್ಟಿದೆ. ಬೇರೆ ಬೇರೆ ಗುಂಪುಗಳಲ್ಲಿ ಒಂದೇ ತೆರನಾದ ಸಂದೇಶ ಬಂದಿದೆಯೇ ಎಂದು ಗಮನಿಸುವುದು, ದೊರೆತ ಮಾಹಿತಿಯ ಸತ್ಯಾಸತ್ಯತೆಯನ್ನು ಕಳುಹಿಸಿದ ವ್ಯಕ್ತಿಯಿಂದಲೇ ತಿಳಿದುಕೊಳ್ಳುವುದು, ಸಂದೇಶಗಳಲ್ಲಿ ವ್ಯಾಕರಣ ದೋಷ ಅಥವಾ ಸಂದೇಹಾತ್ಮಕ ಚಿಹ್ನೆಗಳಿವೆಯೇ ಎಂದು ಸೂಕ್ಷ್ಮವಾಗಿ ಪರಿಶೀಲಿಸುವುದು, ಮಾಹಿತಿ ಸರಿಯಾಗಿದೆಯೇ ಎಂದು ಪರೀಕ್ಷಿಸುವುದು - ಹೀಗೆ ಇನ್ನೂ ಹಲವು ಸಲಹೆಗಳನ್ನು ವಾಟ್ಸ್‌ಆಪ್‌ ನೀಡಿದೆ.

ಕೆಲವು ದಿನಗಳ ಮುಂಚೆ ವದಂತಿಗಳನ್ನು ತಡೆಯುವ ಸಲುವಾಗಿ ವಾಟ್ಸ್‌ಆಪ್‌ ಕೆಲವು ಬದಲಾವಣೆಗಳನ್ನು ತರುವುದಾಗಿ ತಿಳಿಸಿತ್ತು. ಈಗ ವಾಟ್ಸ್‌ಆಪ್‌ ಗುಂಪುಗಳಲ್ಲಿ ಅಡ್ಮಿನ್‌ಗೆ ಪರಮಾಧಿಕಾರ ನೀಡಿದೆ. ಕೆಲವು ಸೆಟ್ಟಿಂಗ್‌ಗಳ ಮೂಲಕ ಅಡ್ಮಿನ್‌ ಮಾತ್ರವೇ ಗುಂಪಿನಲ್ಲಿ ಸಂದೇಶಗಳನ್ನು ಕಳಿಸುವಂತೆ ಮಾಡಿಕೊಳ್ಳಬಹುದು. ಜತೆಗೆ ಫಾರ್ವರ್ಡ್‌ ಮೆಸೇಜ್‌ಗಳನ್ನು ಲೇಬಲ್‌ ಮಾಡುವ ಪ್ರಯತ್ನವನ್ನೂ ಕೂಡ ವಾಟ್ಸ್‌ಆಪ್‌ ಕೈಗೊಂಡಿದೆ.

ವದಂತಿಗಳನ್ನು ತಡೆಯಲು ವಾಟ್ಸ್‌ಆಪ್‌ ಒಂದು ಪುಟದಷ್ಟು ದೊಡ್ಡ ಜಾಹಿರಾತಿನಲ್ಲಿ ಸುಲಭವೆನಿಸುವ ಸಲಹೆಗಳನ್ನು ನೀಡಲು ಮುಂದಾಗಿರುವುದೇನೋ ನಿಜ. ಆದರೆ ವಾಟ್ಸ್‌ಆಪ್‌ನಲ್ಲಿ ಬಂದ ಸಂದೇಶಗಳನ್ನೇ ಪೂರ್ತಿಯಾಗಿ ಓದದೆ ಫಾರ್ವರ್ಡ್‌ ಮಾಡುವ ಜನ, ವೃತ್ತ ಪತ್ರಿಕೆಗಳಲ್ಲಿನ ಜಾಹಿರಾತನ್ನು ಪೂರ್ತಿಯಾಗಿ ಓದಿ ಸುಳ್ಳು ಸತ್ಯಗಳ ಪರಿಶೀಲನೆಗೆ ಮುಂದಾಗುತ್ತಾರೆಯೇ ಎನ್ನುವುದು ಸಧ್ಯದ ಪ್ರಶ್ನೆ.