ವಿಶ್ವದ ಅತಿ ದೊಡ್ಡ ಮೊಬೈಲ್‌ ಕಾರ್ಖಾನೆ ಯುಪಿಯಲ್ಲಿ ಆರಂಭ
ದೇಶ

ವಿಶ್ವದ ಅತಿ ದೊಡ್ಡ ಮೊಬೈಲ್‌ ಕಾರ್ಖಾನೆ ಯುಪಿಯಲ್ಲಿ ಆರಂಭ

ಸ್ಯಾಮ್‌ಸಂಗ್‌ ಉತ್ತರ ಪ್ರದೇಶದಲ್ಲಿ ನಿರ್ಮಿಸಿರುವ ಮೊಬೈಲ್‌ ಉತ್ಪಾದನಾ ಕಾರ್ಖಾನೆ ವಿಶ್ವದಲ್ಲೇ ಅತಿ ಹೆಚ್ಚು ಮೊಬೈಲ್‌ಗಳನ್ನು ಉತ್ಪಾದಿಸಲಿದೆ. ಪ್ರಧಾನಿ ಮೋದಿ ಮತ್ತು ದ.ಕೊರಿಯಾ ಅಧ್ಯಕ್ಷ ಮೂನ್‌ ಜೆ-ಇನ್‌ ಈ ಘಟಕವನ್ನು ಅನಾವರಣಗೊಳಿಸಿದ್ದಾರೆ.

ಮುಂದೆ ದೊಡ್ಡ ಹುಲ್ಲುಗಾವಲು, ಎಡಭಾಗಕ್ಕೆ ಇದೀಗ ತಾನೇ ನಿರ್ಮಾಣಗೊಳ್ಳುತ್ತಿರುವ ವಾಸಸ್ಥಳಗಳು, ಬಲ ಭಾಗಕ್ಕೆ ಕಂಪನಿಗೆ ಅಗತ್ಯವಿರುವ ಸೌಕರ್ಯಗಳು, ಮಧ್ಯೆ ವಿಶ್ವದ ಅತಿ ದೊಡ್ಡ ಮೊಬೈಲ್‌ ಉತ್ಪಾದನಾ ಘಟಕ - ಇದು ಸೋಮವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ನೋಯ್ಡಾದಲ್ಲಿ ಉದ್ಘಾಟನೆಗೊಳಿಸಿದ ಸ್ಯಾಮ್‌ಸಂಗ್‌ ಮೊಬೈಲ್‌ ಉತ್ಪಾದನಾ ಕಾರ್ಖಾನೆ. 

ಇಷ್ಟು ದೊಡ್ಡ ಮೊಬೈಲ್‌ ಉತ್ಪಾದನಾ ಘಟಕ ಚೀನಾದಲ್ಲೂ ಇಲ್ಲ, ಉತ್ತರ ಕೊರಿಯಾದಲ್ಲೂ ಇಲ್ಲ. ಎಲ್ಲಾ ವಿಷಯದಲ್ಲೂ ಮುಂದಿರುವ ಅಮೆರಿಕಾದಲ್ಲೂ ಕೂಡ ಇಲ್ಲ. ಇಂತಹದ್ದೊಂದು ವಿಶ್ವ ದರ್ಜೆಯ ಮೊಬೈಲ್‌ ಉತ್ಪಾದನಾ ಕಾರ್ಖಾನೆ ಭಾರತದಲ್ಲಿ ಈಗ ತಲೆ ಎತ್ತಿದೆ.

ಉತ್ತರ ಪ್ರದೇಶದ ನೊಯ್ಡಾದಲ್ಲಿ ಸೆಕ್ಟರ್‌ 81ರಲ್ಲಿರುವ 35 ಎಕರೆ ವಿಸ್ತೀರ್ಣದ ಸ್ಯಾಮ್‌ಸಂಗ್ ಮೊಬೈಲ್‌ ಉತ್ಪಾದನಾ ಘಟಕವನ್ನು ಪ್ರಧಾನಿ ಮೋದಿ ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್‌ ಜೆ-ಇನ್‌ ಸೋಮವಾರ ಉದ್ಘಾಟಿಸಿದ್ದಾರೆ.

ದೇಶದಲ್ಲಿ 1990ರಲ್ಲಿ ಮೊದಲ ಬಾರಿಗೆ ಎಲೆಕ್ಟ್ರಾನಿಕ್‌ ಉತ್ಪಾದನೆ ಪ್ರಾರಂಭಗೊಂಡಿತ್ತು. 1997ರಲ್ಲಿ ಸ್ಯಾಮ್‌ಸಂಗ್‌ ಟಿವಿಗಳ ಉತ್ಪಾದನೆ ಆರಂಭಗೊಂಡಿತ್ತು. 2005ರಿಂದ ಮೊಬೈಲ್‌ ಉತ್ಪಾದನೆಗೆ ಅಸ್ತಿಭಾರ ಹಾಕಲಾಗಿತ್ತು. ಕಳೆದ ವರ್ಷ ಜೂನ್‌ ತಿಂಗಳಲ್ಲಿ ದಕ್ಷಿಣ ಕೊರಿಯಾದ ಎಲೆಕ್ಟ್ರಾನಿಕ್‌ ಉತ್ಪನ್ನಗಳ ಧೈತ್ಯ ಸ್ಯಾಮ್‌ಸಂಗ್‌, ಉತ್ತರ ಪ್ರದೇಶದ ನೊಯ್ಡಾ ಕೈಗಾರಿಕಾ ಪ್ರದೇಶದಲ್ಲಿ ಮೊಬೈಲ್‌ ಫೋನ್‌ ಉತ್ಪಾದನೆಗೆ 4,915 ಕೋಟಿ ರೂಪಾಯಿಗಳ ಹೆಚ್ಚುವರಿ ಬಂಡವಾಳವನ್ನು ಹೂಡುವುದಾಗಿ ಘೋಷಿಸಿತ್ತು. ಈಗ ಎರಡು ಪಟ್ಟು ಮೊಬೈಲ್‌ಗಳ ಉತ್ಪಾದನೆಗೆ ಅಗತ್ಯವಿರುವ ತಂತ್ರಜ್ಞಾನ, ಸೌಕರ್ಯಗಳೆಲ್ಲವೂ ಸಿದ್ಧವಾಗಿ ನಿಂತಿವೆ.

ಸದ್ಯ ನೊಯ್ಡಾದ ಸ್ಯಾಮ್‌ಸಂಗ್‌ ಮೊಬೈಲ್‌ ಉತ್ಪಾದನಾ ಘಟಕ ವರ್ಷಕ್ಕೆ 6.7 ಕೊಟಿ ಮೊಬೈಲ್‌ಗಳನ್ನು ಉತ್ಪಾದಿಸುತ್ತಿದೆ. ಹೊಸ ಮೊಬೈಲ್‌ ಉತ್ಪಾದನಾ ಘಟಕ ಕಾರ್ಯಾರಂಭ ಮಾಡಿದ ನಂತರ ಈ ಉತ್ಪಾದನಾ ಪ್ರಮಾಣವು 12 ಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದೆ.

ಈ ಕೈಗಾರಿಕಾ ಕೇಂದ್ರದಲ್ಲಿ ಕೇವಲ ಮೊಬೈಲ್‌ಗಳನ್ನಷ್ಟೇ ಉತ್ಪಾದಿಸುವುದಿಲ್ಲ. ಜತೆಗೆ ರೆಫ್ರಿಜಿರೇಟರ್‌ಗಳು, ಫ್ಲ್ಯಾಟ್‌ ಟಿವಿಗಳು ಕೂಡ ಉತ್ಪಾದನೆಯಾಗಲಿವೆ. ಸ್ಯಾಮ್‌ಸಂಗ್‌ನ ಭಾರತದ ಕೌಂಟರ್‌ಪಾಯಿಂಟ್‌ ರಿಸರ್ಚ್‌ನ ಸಹ ನಿರ್ದೇಶಕ ತರುಣ್‌ ಪಥಕ್‌ ಹೇಳುವಂತೆ, ಈ ಹೆಚ್ಚುವರಿ ಉತ್ಪಾದನೆ ಸ್ಯಾಮ್‌ಸಂಗ್‌ಗೆ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಿಕೊಡಲಿದೆ.

ಐಎಎನ್‌ಎಸ್‌ ಸುದ್ದಿ ಸಂಸ್ಥೆ ಜತೆ ಮಾತನಾಡಿದ ತರುಣ್‌ ಪಥಕ್‌, “ಈ ಕೈಗಾರಿಕಾ ಘಟಕವು ಎಲೆಕ್ಟ್ರಾನಿಕ್‌ ಉತ್ಪನ್ನಗಳಲ್ಲಿ ಕೆಲವು ಸ್ಥಳೀಯ ವೈಶಿಷ್ಟ್ಯತೆಗಳನ್ನು ಸೇರಿಸಲು ಸಹಕಾರಿಯಾಗುತ್ತದೆ. ಇದರ ಜತೆಗೆ ಸಾರ್ಕ್‌ ಸೇರಿದಂತೆ ಇತರೆ ದೇಶಗಳಿಗೆ ಎಲೆಕ್ಟ್ರಾನಿಕ್‌ ವಸ್ತುಗಳನ್ನು ರಫ್ತು ಮಾಡುವ ಅವಕಾಶವನ್ನು ಭಾರತಕ್ಕೆ ನೀಡಿದೆ.”

ಭಾರತದಲ್ಲಿ ಸ್ಯಾಮ್‌ಸಂಗ್‌ ಕಂಪನಿಯ 2 ಉತ್ಪಾದನಾ ಘಟಕಗಳಿವೆ. ಒಂದು ಉತ್ತರ ಪ್ರದೇಶದ ನೊಯ್ಡಾದಲ್ಲಿ, ಮತ್ತೊಂದು ತಮಿಳುನಾಡಿನಲ್ಲಿ ಶ್ರೀಪೆರಂಬದುರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಜತೆಗೆ ದೇಶದಲ್ಲಿ 5 ರಿಸರ್ಚ್‌ ಆಂಡ್‌ ಡೆವಲಪ್‌ಮೆಂಟ್‌ ಸೆಂಟರ್‌ಗಳು ಮತ್ತು 1 ಡಿಸೈನ್‌ ಸೆಂಟರ್‌ ಕಾರ್ಯಗತವಾಗಿವೆ. ಈ ಎಲ್ಲಾ ಕೇಂದ್ರಗಳಲ್ಲಿ ಒಟ್ಟು 70,000 ಜನ ಉದ್ಯೋಗ ಪಡೆದಿದ್ದು, ದೇಶಾದ್ಯಂತ ಸ್ಯಾಮ್‌ಸಂಗ್‌ನ 1.5 ಲಕ್ಷ ರೀಟೈಲ್‌ ಮಳಿಗೆಗಳಿವೆ.

ಭಾರತದಲ್ಲಿ ಸ್ಯಾಮ್‌ಸಂಗ್‌ ಉತ್ಪಾದನಾ ಘಟಕಕ್ಕೆ ಮೊದಲು ಶಂಕು ಸ್ಥಾಪನೆ ನೆರವೇರಿದ್ದು 1995ರಲ್ಲಿ. 1997ರಲ್ಲಿ ಸ್ಯಾಮ್‌ಸಂಗ್‌ ಟಿವಿಗಳ ಉತ್ಪಾದನೆ ಪ್ರಾರಂಭವಾಗಿತ್ತು. 2003ರಲ್ಲಿ ರೆಫ್ರಿಜಿರೇಟರ್‌ ಉತ್ಪಾದನೆಯನ್ನು ಆರಂಭಿಸಿತ್ತು. 2005ರ ವೇಳೆಗೆ ಟಿವಿ ಉತ್ಪಾದನೆಯಲ್ಲಿ ಭಾರತದ ಮಾರ್ಕೆಟ್‌ ಲೀಡರ್‌ ಆಗಿ ಗುರುತಿಸಿಕೊಂಡ ಸ್ಯಾಮ್‌ಸಂಗ್‌, 2007ರಲ್ಲಿ ಮೊಬೈಲ್‌ ಉತ್ಪಾದನೆಯನ್ನು ಪ್ರಾರಂಭಿಸಿತ್ತು.

2012ರ ಸಮಯಕ್ಕೆ ಮೊಬೈಲ್‌ಗಳ ಉತ್ಪಾದನೆಯಲ್ಲೂ ಕೂಡ ಲೀಡರ್‌ ಎನಿಸಿಕೊಂಡು ಮೊದಲ ಬಾರಿಗೆ ‘ಗ್ಯಾಲಕ್ಸಿ ಎಸ್‌3’ ಮೊಬೈಲ್‌ ಉತ್ಪಾದನೆ ಆರಂಭಿಸಿತ್ತು. ಇಂದಿಗೂ ಕೂಡ ಸ್ಯಾಮ್‌ಸಂಗ್‌ ಲೀಡರ್‌ ಆಗಿಯೇ ಉಳಿದಿದೆ. ಸದ್ಯ ಸ್ಯಾಮ್‌ಸಂಗ್‌ ತನ್ನ ಒಟ್ಟಾರೆ ಜಾಗತಿಕ ಉತ್ಪಾದನೆಯ ಶೇ.10ರಷ್ಟು ಎಲೆಕ್ಟ್ರಾನಿಕ್‌ ಉತ್ಪನ್ನಗಳನ್ನು ಭಾರತದಲ್ಲಿ ಉತ್ಪಾದಿಸುತ್ತಿದೆ. ಮುಂದಿನ 3 ವರ್ಷಗಳಲ್ಲಿ ಈ ಪ್ರಮಾಣವನ್ನು ಶೇ.520ಕ್ಕೆ ಹೆಚ್ಚಿಸುವ ಗುರಿಯನ್ನು ಹಾಕಿಕೊಂಡಿದೆ.