samachara
www.samachara.com
‘ಭಾರತದಲ್ಲಿ ಪತ್ರಕರ್ತರ ದುಃಸ್ಥಿತಿ’: ಅಂತಾರಾಷ್ಟ್ರೀಯ ವರದಿಗೆ ಮುರಿಯದ ‘ಮೌನ’
ದೇಶ

‘ಭಾರತದಲ್ಲಿ ಪತ್ರಕರ್ತರ ದುಃಸ್ಥಿತಿ’: ಅಂತಾರಾಷ್ಟ್ರೀಯ ವರದಿಗೆ ಮುರಿಯದ ‘ಮೌನ’

ಅಂತರರಾಷ್ಟ್ರೀಯ ವಾಚ್‌ಡಾಗ್‌ ‘ರಿಪೋರ್ಟರ್ಸ್‌ ವಿಥೌಡ್‌ ಬಾರ್ಡರ್ಸ್’ ಭಾರತದಲ್ಲಿನ ಪತ್ರಿಕಾ ಸ್ವಾತಂತ್ರ್ಯದ ಕುರಿತು ವರದಿ ಪ್ರಕಟಿಸಿದೆ. ಈ ಕುರಿತು ಮೋದಿ ಸರಕಾರಕ್ಕೆ ಪತ್ರ ಬರೆದಿದೆಯಾದರೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. 

ಪ್ಯಾರಿಸ್‌ ಮೂಲದ ಮೀಡಿಯಾ ವಾಚ್‌ ಗ್ರೂಪ್‌ ‘ರಿಪೋರ್ಟರ್ಸ್ ವಿಥೌಟ್‌ ಬಾರ್ಡರ್ಸ್’ ಸಂಸ್ಥೆ ಭಾರತೀಯ ಪತ್ರಕರ್ತರ ಬಗ್ಗೆ ಕಾಳಜಿ ವ್ಯಕ್ತಪಡಿಸಿದೆ. “ಭಾರತದ ಪತ್ರಕರ್ತರು ಅಪಾಯಕಾರಿ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ,” ಎಂದಿರುವ ಈ ಸಂಸ್ಥೆ, ಪ್ರಾಣಾಪಾಯದಲ್ಲಿರುವ ಪತ್ರಕರ್ತರಿಗೆ ರಕ್ಷಣೆ ಒದಗಿಸಿ ಎಂದು ಭಾರತದ ಸರಕಾರವನ್ನು ಆಗ್ರಹಿಸಿದೆ. ಆದರೆ ಸರಕಾರ ಮಾತ್ರ ಈ ಕುರಿತು ಚಿಂತಿಸುವ ಕಷ್ಟವನ್ನೇ ತೆಗೆದುಕೊಂಡಿಲ್ಲ.

ರಿಪೋರ್ಟರ್ಸ್‌ ವಿಥೌಟ್‌ ಬಾರ್ಡರ್ಸ್ ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ವಿಶ್ವಾದ್ಯಂತ ಇರುವ ಪತ್ರಕರ್ತರ ಪರವಾಗಿ ಕೆಲಸ ನಿರ್ವಹಿಸುತ್ತಿದೆ. ಪತ್ರಕರ್ತರ ಹಕ್ಕುಗಳ ಕುರಿತಾಗಿ ಕೆಲಸ ನಿರ್ವಹಿಸುತ್ತಿದೆ. ಜುಲೈ 4ರಂದು ರಿಪೋರ್ಟರ್ಸ್ ವಿಥೌಟ್‌ ಬಾರ್ಡರ್ಸ್ ಭಾರತದಲ್ಲಿನ ಪತ್ರಿಕಾ ಸ್ವಾತಂತ್ರದ ಕುರಿತಾಗಿ ವರದಿಯೊಂದನ್ನು ಪ್ರಕಟಿಸಿದೆ. “RSF issues warning to India in first World Press Freedom Index Incident Report” ತಲೆಬರಹದ ವರದಿಯ ಜತೆಗೆ ಭಾರತ ಸರಕಾರದ ಮುಂದೆ ಕಲವು ಅಹವಾಲುಗಳನ್ನೂ ಕೂಡ ಸಂಸ್ಥೆ ಇಟ್ಟಿದೆ.

ಭಾರತದ ಕುರಿತಾಗಿಯೇ ಪ್ರತ್ಯೇಕ ವರದಿಯೊಂದನ್ನು ಸಿದ್ಧಪಡಿಸಿರುವ ‘ರಿಪೋರ್ಟರ್ಸ್ ವಿಥೌಟ್‌ ಬಾರ್ಡರ್ಸ್’ ಸಂಸ್ಥೆ, ಕಳೆದ 6 ತಿಂಗಳಲ್ಲಿ ಭಾರತದಲ್ಲಿ ಪತ್ರಕರ್ತರ ಹಕ್ಕುಗಳ ಉಲ್ಲಂಘನೆ ಹೆಚ್ಚಾಗಿದೆ ಎಂದು ಉಲ್ಲೇಖಿಸಿದೆ. ಕಳೆದ 18 ತಿಂಗಲ ಅವಧಿಯಲ್ಲಿ ಭಾರತದ 7 ಜನ ಪತ್ರಕರ್ತರು ಕೊಲೆಯಾಗಿದ್ದು, ಪತ್ರಕರ್ತರ ಮೇಲೆ ಆನ್‌ಲೈನ್‌ ಶೋಷಣೆ ಮತ್ತು ಕಿರುಕುಳಗಳು ಹೆಚ್ಚಾಗಿವೆ ಎಂದಿದೆ. 2017ರ ಜಾಗತಿಕ ಪತ್ರಿಕಾ ಸ್ವಾತಂತ್ರ ಸೂಚ್ಯಾಂಕದಲ್ಲಿ 136ನೇ ಸ್ಥಾನದಲ್ಲಿದ್ದ ಭಾರತ, 2018ರಲ್ಲಿ 138ನೇ ಸ್ಥಾನಕ್ಕೆ ಇಳಿದಿದೆ. ಈ ಅಂಶವನ್ನು ಕುರಿತು ಮಾತನಾಡಿರುವ ‘ರಿಪೋರ್ಟರ್ಸ್ ವಿಥೌಟ್‌ ಬಾರ್ಡರ್ಸ್’, ಭಾರತದಲ್ಲಿನ ಪತ್ರಕರ್ತರ ಪರಿಸ್ಥಿತಿ ದಿನದಿಂದ ದಿನಕ್ಕೆ ಕೆಡುತ್ತಿದೆ ಎಂದಿದೆ.

‘ರಿಪೋರ್ಟರ್ಸ್ ವಿಥೌಟ್‌ ಬಾರ್ಡರ್ಸ್’ ವರದಿ ಹೇಳುವಂತೆ 2017ರಲ್ಲಿ ಭಾರತದ 3 ಪತ್ರಕರ್ತರು ಕೊಲೆಯಾಗಿದ್ದು, ಇನ್ನೊಂದು ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿದೆ. 2018ರಲ್ಲಿ ಈ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ಅರ್ಧ ವರ್ಷ ಕಳೆಯುವುದರಲ್ಲಿ ಆಗಲೇ 4 ಜನ ಪತ್ರಕರ್ತರ ಕೊಲೆಯಾಗಿದೆ. ಪತ್ರಕರ್ತರ ವಿರುದ್ಧ ದ್ವೇಷಪೂರಿತ ಭಾಷಣಗಳ ಸಂಖ್ಯೆಯೂ ಕೂಡ ಹೆಚ್ಚಾಗಿದ್ದು, ಪತ್ರಕರ್ತರ ರಕ್ಷಣೆಯ ಕುರಿತು ಹೆಚ್ಚಿನ ನಿಗಾ ವಹಿಸುವಂತೆ ಮಾಡಿದೆ.

ವರದಿ ಹೇಳುವಂತೆ, “ಹಿಂದೂ ರಾಷ್ಟ್ರೀಯತಾವಾದಿಗಳು ‘ರಾಷ್ಟ್ರ ವಿರೋಧಿ’ ಯೋಚನೆಯನ್ನು ರಾಷ್ಟ್ರ ಮಟ್ಟದ ಚರ್ಚೆಗೆ ತಂದಿದ್ದಾರೆ. ಮುಖ್ಯ ವಾಹಿನಿಯ ಮಾಧ್ಯಮಗಳಲ್ಲಿ ಸ್ವವಿಮರ್ಶೆ ಬೆಳೆಯುತ್ತಿದ್ದು, ಪತ್ರಕರ್ತರನ್ನು ಉಗ್ರ ರಾಷ್ಟ್ರೀಯತಾವಾದಿಗಳು ತಮ್ಮ ಆನ್‌ಲೈನ್‌ ಅಭಿಯಾನಗಳ ಗುರಿಯಾಗಿಸಿಕೊಳ್ಳುತ್ತಿದ್ದಾರೆ. ದೈಹಿಕ ಪ್ರತೀಕಾರಗಳಿಗೂ ಕೂಡ ಈ ರಾಷ್ಟ್ರೀಯತಾವಾದಿಗಳು ಮುಂದಾಗುತ್ತಿದ್ದಾರೆ.”

Also read: ಹೂಟ್ ರಿಪೋರ್ಟ್‌- 2017: 'ಪತ್ರಿಕಾ ಸ್ವಾತಂತ್ರ್ಯದ ಹರಣ; ಮೋದಿಯ ರಾಷ್ಟ್ರೀಯತೆಯೇ ಕಾರಣ'

ಸೂಚ್ಯಾಂಕಗಳು ಹೇಳುವಂತೆ ಭಾರತದಲ್ಲಿ ಪರಿಸ್ಥಿತಿ ವಿಷಮಗೊಳ್ಳುತ್ತಿದ್ದು, ಸಂಬಂಧಪಟ್ಟವರು ಈ ಕುರಿತು ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದರೆ 2019ರ ವೇಳೆಗೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿ, ಸೂಚ್ಯಾಂಕದಲ್ಲಿ ಭಾರತ ಮತ್ತಷ್ಟು ಕುಸಿತ ಕಾಣಬಹುದು ಎನ್ನುತ್ತದೆ ‘ರಿಪೋರ್ಟರ್ಸ್ ವಿಥೌಟ್‌ ಬಾರ್ಡರ್ಸ್’ ವರದಿ.

‘ರೈಸಿಂಗ್‌ ಕಾಶ್ಮೀರ್‌’ ಪತ್ರಿಕೆಯ ಸಂಪಾದಕ ಶುಜಾತ್‌ ಬುಖಾರಿ ಹತ್ಯೆಯನ್ನು ವರದಿಯಲ್ಲಿ ಉಲ್ಲೇಖಿಸಿರುವ ‘ರಿಪೋರ್ಟರ್ಸ್ ವಿಥೌಟ್‌ ಬಾರ್ಡರ್ಸ್’, “ತಮ್ಮ ಕೆಲಸ ಮತ್ತು ದಿಟ್ಟತೆಯ ಕಾರಣದಿಂದಾಗಿಯೇ 2017ರಲ್ಲಿ 3 ಜನ ಪತ್ರಕರ್ತರು ಕೊಲೆಗೀಡಾಗಿದ್ದಾರೆ. 2018ರಲ್ಲೂ ಕೂಡ ಕೊಲೆಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನೋಡಿದರೆ ವಾತಾವರಣವು ಗಮನಾರ್ಹವಾಗಿ ಹದಗೆಡುತ್ತಿದೆ,” ಎಂದಿದೆ.

ಮಧ್ಯ ಪ್ರದೇಶದಲ್ಲಿ ಮಾರ್ಚ್‌ 26ರಂದು ಅಕ್ರಮ ಮರಳು ಗಣಿಗಾರಿಕೆಯ ವಿರುದ್ಧ ವರದಿಗಳನ್ನು ಬರೆದಿದ್ದ ಸಂದೀಪ್‌ ಶರ್ಮಾರನ್ನು ಕಸದ ಟ್ರಕ್‌ ಹರಿಸುವ ಮೂಲಕ ಕೊಲೆ ಮಾಡಲಾಗಿತ್ತು. ಇದಕ್ಕೂ ಮುಂಚೆ ಬಿಹಾರದಲ್ಲಿ ‘ದೈನಿಕ್ ಬಾಸ್ಕರ್‌’ ಪತ್ರಿಕೆಯ ಉಪ ಸಂಪಾದಕರಾಗಿದ್ದ ನವೀನ್‌ ನಿಶ್ಚಲ್‌ ಮತ್ತು ವಿಜಯ್‌ ಸಿಂಗ್‌ ಎಂಬ ಪತ್ರಕರ್ತರನ್ನು ಕೊಲ್ಲಲಾಗಿತ್ತು. ಜೂನ್ 22ರಂದು ಉತ್ತರ ಪ್ರದೇಶದ ನೇಪಾಳ ಗಡಿ ಭಾಗದಲ್ಲಿ ಜೂನ್ 22ರಂದು ಸತ್ಯೇಂದ್ರ ಗ್ಯಾಂಗ್ವಾರ್‌ ಎಂಬ ಪತ್ರಕರ್ತ ಗುಂಡೇಟು ತಿಂದಿದ್ದರು. ಮೈನಿಂಗ್‌ ಮಾಫಿಯಾದ ಕುರಿತು ಅವರು ಬರೆದಿದ್ದ ವರದಿಗಳು ಇದಕ್ಕೆ ಕಾರಣವಾಗಿತ್ತು. ಗುಂಡೇಟಿಗೂ ಮುಂಚೆಯೇ ಸತ್ಯೇಂದ್ರ ಗ್ಯಾಂಗ್ವಾರ್‌ ಮೇಲೆ ದೈಹಿಕ ಹಲ್ಲೆಗಳು ನಡೆದಿದ್ದವು.

ಏಪ್ರಿಲ್‌ 17ರಂದು ಮೇಘಾಲಯದ ‘ಶಿಲ್ಲಾಂಗ್‌ ಟೈಮ್ಸ್’ ಪತ್ರಿಕೆಯ ಸಂಪಾದಕ ಪಟ್ರಿಸಿಯಾ ಮುಖಿಮ್‌ ಮೇಲೆ ಕೆರೋಸಿನ್‌ ಬಾಂಬ್‌ ಮೂಲಕ ದಾಳಿ ಮಾಡಲಾಗಿತ್ತು. ಜೂನ್‌ 18ರಂದು ತ್ರಿಪುರದಲ್ಲಿ ಪೆಟ್ರೋಲಿಯಂ ಕಳ್ಳತನದ ಬಗ್ಗೆ ತನಿಖಾ ವರದಿ ತಯಾರಿಸುತ್ತಿದ್ದ ಸುಮನ್‌ ದೇಬ್‌ನಾಥ್‌ ಎನ್ನುವವರ ಕತ್ತನ್ನು ಸೀಳಿ ಕೊಲ್ಲುವ ಪ್ರಯತ್ನ ನಡೆದಿತ್ತು. ಸುಮನ್‌ ದೇಬ್‌ನಾಥ್‌ ಸಾವಿನ ಬಾಗಿಲು ತಟ್ಟಿದ್ದರಾದರೂ ಕೂಡ, ಬದುಕುಳಿದರು. ಈ ಎಲ್ಲಾ ಪ್ರಕರಣಗಳನ್ನು ‘ರಿಪೋರ್ಟರ್ಸ್ ವಿಥೌಟ್‌ ಬಾರ್ಡರ್ಸ್’ ನೆನಪಿಸಿದೆ.

ವರದಿ ಹೇಳುವಂತೆ, ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಪತ್ರಕರ್ತರ ವಿರುದ್ಧ ಹಗೆತನ ಸಾಧಿಸುವುದು ಟರ್ಕಿ, ಈಜಿಪ್ಟ್‌ಗಳಂತ ಸರ್ವಾಧಿಕಾರಿ ರಾಷ್ಟ್ರಗಳಿಗಷ್ಟೇ ಸೀಮಿತವಾಗಿಲ್ಲ. ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಾಂಕದಲ್ಲಿ ಕ್ರಮವಾಗಿ 157 ಮತ್ತು 161 ಸ್ಥಾನಗಳಲ್ಲಿರುವ ಈ ದೇಶಗಳಲ್ಲಿನ ಪರಿಸ್ಥಿತಿ ಇತರೆ ದೇಶಗಳಿಗೂ ಬರುತ್ತಿದೆ.

“ಸರಕಾರದ ವಿರುದ್ಧ ನಿಲ್ಲುವ ಪತ್ರಕರ್ತರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಕೆಲವೊಂದು ಸಂಧರ್ಭಗಳಲ್ಲಿ ದಂಡ ಸಂಹಿತೆಯ ಸೆಕ್ಷನ್‌ 124ಎ ಅಡಿಯಲ್ಲಿ ಕೇಸು ದಾಖಲಿಸಲಾಗುತ್ತದೆ. ಈ ಸೆಕ್ಷನ್‌ ಅಡಿಯಲ್ಲಿ ಅಪರಾಧಿ ಎನಿಸಲ್ಪಟ್ಟವನಿಗೆ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಈವರೆಗೆ ಯಾವ ಪತ್ರಕರ್ತನೂ ಕೂಡ ಈ ಸೆಕ್ಷನ್‌ ಅಡಿಯಲ್ಲಿ ಶಿಕ್ಷೆ ಅನುಭವಿಸಿಲ್ಲ. ಆದರೆ ಬೆದರಿಕೆಯಿಂದಾಗಿ ಪತ್ರಕರ್ತರು ಸ್ವಯಂ ನಿಯಂತ್ರಣಕ್ಕೆ ಒಳಪಡುತ್ತಿದ್ದಾರೆ,” ಎಂದು ವರದಿ ಹೇಳುತ್ತದೆ.

ಸುದ್ದಿ ವಾಹಿನಿ ಪತ್ರಕರ್ತ ರವೀಶ್‌ ಕುಮಾರ್‌ 2015ರಿಂದಲೂ ತಮಗೆ ಬರುತ್ತಿದ್ದ ಕೊಲೆ ಬೆದರಿಕೆಯ ಕರೆಗಳನ್ನು ಕಳೆದ ತಿಂಗಳಷ್ಟೇ ತೆರೆದಿಟ್ಟಿದ್ದರು. ಈ ಉದಾಹರಣೆಯನ್ನು ಮುಂದಿಟ್ಟಿರುವ ‘ರಿಪೋರ್ಟರ್ಸ್ ವಿಥೌಟ್‌ ಬಾರ್ಡರ್ಸ್’, “ರವೀಶ್‌ ಕುಮಾರ್‌ ತಮ್ಮ ಪುಸ್ತಕ ‘ದಿ ಫ್ರೀ ವಾಯ್ಸ್’ಅನ್ನು ಪ್ರಕಟಿಸಿದ ನಂತರದಿಂದ ಕೊಲೆ ಬೆದರಿಕೆಯ ಕರೆಗಳು ಬರುತ್ತಿದ್ದವು. ಆ ಪುಸ್ತಕದಲ್ಲಿ ಮೊದಿಯ ಭಾರತವನ್ನು ‘ಭಯದ ಪ್ರಜಾಪ್ರಭುತ್ವ’(Republic of fear) ಎಂದು ಕರೆದಿದ್ದ ರವೀಶ್‌, ಭಾರತದಲ್ಲಿ ಪತ್ರಿಕಾ ಸ್ವಾತಂತ್ರ ಹೇಗೆ ಕುಸಿಯುತ್ತಿದೆ ಎನ್ನುವುದನ್ನು ವಿವರಿಸಿದ್ದರು,” ಎಂದು ಬರೆದಿದೆ.

ವರದಿಯ ಜತೆಗೆ ರಿಪೋರ್ಟರ್ಸ್ ವಿಥೌಟ್‌ ಬಾರ್ಡರ್ಸ್ ಕೆಲವು ಶಿಫಾರಸ್ಸುಗಳನ್ನೂ ಕೂಡ ಭಾರತ ಸರಕಾರದ ಮುಂದಿಟ್ಟಿದೆ. ಪತ್ರಕರ್ತರಿಗೆ ಅಪಾಯ ಒದಗುವ ಸಂಧರ್ಭದಲ್ಲಿ ರಕ್ಷಣೆ ನಿಡುವಂತಹ ವ್ಯವಸ್ಥೆಯೊಂದನ್ನು ಸಿದ್ಧಪಡಿಸುವುದು, ಪತ್ರಕರ್ತರ ಕೊಲೆಯಾದ ಸಂಧರ್ಭದಲ್ಲಿ ಅಥವಾ ಕೊಲೆ ಪ್ರಯತ್ನ ನಡೆದಲ್ಲಿ ಸ್ವತಂತ್ರವಾಗಿ ತನಿಖೆ ನಡೆಸುವುದು ಸೇರಿದಂತೆ, ಪತ್ರಕರ್ತರ ಮೇಲೆ ನಡೆಯುವ ಆನ್‌ಲೈನ್‌ ಕಿರುಕುಳಗಳನ್ನು ತಡೆಗಟ್ಟಬೇಕು ಎಂದು ಸಂಸ್ಥೆ ಹೇಳಿದೆ. ಜತೆಗೆ ಬಿಜೆಪಿ ಐಟಿ ಸೆಲ್‌ ನಡೆಸುತ್ತಿರುವ ಕಾರ್ಚಟುವಟಿಕೆಗಳಲ್ಲಿ ಪಾರದರ್ಶಕತೆಯನ್ನು ಕಾಪಾಡಬೇಕು ಎಂದಿದೆ.

‘ರಿಪೋರ್ಟರ್ಸ್‌ ವಿಥೌಟ್‌ ಬಾರ್ಡರ್ಸ್’ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕ್ರಿಸ್ಟೋಫ್‌ ಡೆಲೋಯಿರ್‌ ಪ್ರಧಾನಿ ನರೇಂದ್ರ ಮೋದಿಗೆ ಈ ಕುರಿತು ಪತ್ರ ಬರೆದಿದ್ದು, ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಆದರೆ ಈವರೆಗೆ ವರದಿ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಹೊರಬಿದ್ದಿಲ್ಲ.