ದೆಹಲಿಯಲ್ಲಿ ಚುನಾಯಿತ ಸರಕಾರಕ್ಕೇ ಹೆಚ್ಚಿನ ಅಧಿಕಾರ: ಸುಪ್ರೀಂಕೋರ್ಟ್‌ ತೀರ್ಪು
ದೇಶ

ದೆಹಲಿಯಲ್ಲಿ ಚುನಾಯಿತ ಸರಕಾರಕ್ಕೇ ಹೆಚ್ಚಿನ ಅಧಿಕಾರ: ಸುಪ್ರೀಂಕೋರ್ಟ್‌ ತೀರ್ಪು

ಆಡಳಿತ ವಿಚಾರಗಳಲ್ಲಿ ದೆಹಲಿಯ ಚುನಾಯಿತ ಸರಕಾರದ ಅಧಿಕಾರವೇ ಹೆಚ್ಚು ಎಂದಿರುವ ಸುಪ್ರೀಂಕೋರ್ಟ್‌ ಸ್ವತಂತ್ರ ನಿರ್ಧಾರದ ಅಧಿಕಾರ ಲೆಫ್ಟಿನೆಂಟ್‌ ಗವರ್ನರ್‌ಗೆ ಇಲ್ಲ ಎಂದಿದೆ.

ದೆಹಲಿಯ ಚುನಾಯಿತ ಸರಕಾರ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ ನಡುವಿನ ಬಿಕ್ಕಟ್ಟಿಗೆ ಕೊನೆಗೂ ತೆರೆಬಿದ್ದಿದೆ. ಆಡಳಿತ ವಿಚಾರಗಳಲ್ಲಿ ಚುನಾಯಿತ ಸರಕಾರದ ಅಧಿಕಾರವೇ ಹೆಚ್ಚು ಎಂದಿರುವ ಸುಪ್ರೀಂಕೋರ್ಟ್‌, ಲೆಫ್ಟಿನೆಂಟ್‌ ಗವರ್ನರ್‌ ಸರಕಾರಕ್ಕೆ ಸಲಹೆ, ಸೂಚನೆ ನೀಡುತ್ತಾ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ.

ಲೆಫ್ಟಿನೆಂಟ್‌ ಗವರ್ನರ್‌ ದೆಹಲಿ ಆಡಳಿತದ ಮುಖ್ಯಸ್ಥ ಎಂದು ದೆಹಲಿ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಅರವಿಂದ್‌ ಕೇಜ್ರಿವಾಲ್ ನೇತೃತ್ವದ ದೆಹಲಿ ಸರಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಈ ಮಹತ್ವದ ತೀರ್ಪು ನೀಡಿದೆ.

ದೆಹಲಿಗೆ ರಾಜ್ಯದ ಸ್ಥಾನ ನೀಡಲು ಸಾಧ್ಯವಿಲ್ಲ. ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ಅವರಿಗೆ ನೀಡಲಾಗಿರುವ ವಿಶೇಷಾಧಿಕಾರವನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಚಲಾಯಿಸಬಹುದೇ ಹೊರತು ಆ ಅಧಿಕಾರವನ್ನು ಸಾಮಾನ್ಯ ಸಂದರ್ಭಗಳಲ್ಲಿ ಪ್ರಯೋಗಿಸುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ.

ದೆಹಲಿಲ ಸರಕಾರದ ಮಂತ್ರಿ ಮಂಡಲಕ್ಕೆ ಅಗತ್ಯ ಸಲಹೆ ಸೂಚನೆಗಳನ್ನು ಲೆಫ್ಟಿನೆಂಟ್‌ ಗವರ್ನರ್‌ ನೀಡಬೇಕು. ಅದರ ಹೊರತು ಆಡಳಿತದ ವಿಚಾರದಲ್ಲಿ ಸರಕಾರದೊಂದಿಗೆ ಬಿಕ್ಕಟ್ಟು ಸೃಷ್ಟಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ನಿರ್ದೇಶಿಸಿದೆ.

ದೆಹಲಿಯ ಮಂತ್ರಿ ಮಂಡಲ ತಾನು ತೆಗೆದುಕೊಳ್ಳುವ ಎಲ್ಲಾ ತೀರ್ಮಾನಗಳನ್ನು ಲೆಫ್ಟಿನೆಂಟ್‌ ಗವರ್ನರ್‌ ಅವರಿಗೆ ತಿಳಿಸಬೇಕು. ಆದರೆ, ತೀರ್ಮಾನಗಳಿಗೆ ಸಂಬಂಧಿಸಿದಂತೆ ಲೆಫ್ಟಿನೆಂಟ್‌ ಗವರ್ನರ್‌ ಒಪ್ಪಿಗೆ ಅಗತ್ಯವಿಲ್ಲ. ಈ ವಿಚಾರದಲ್ಲಿ ಚುನಾಯಿತ ಸರಕಾರ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ ಸಾಮರಸ್ಯದೊಂದಿಗೆ ಕೆಲಸ ಮಾಡಬೇಕು ಎಂದು ನ್ಯಾಯಪೀಠ ತಿಳಿಸಿದೆ.

ಲೆಫ್ಟಿನೆಂಟ್‌ ಗವರ್ನರ್‌ ಅವರಿಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಯಾವುದೇ ಅಧಿಕಾರವಿಲ್ಲ. ಅಲ್ಲದೆ ಆಡಳಿತಾತ್ಮಕ ಪ್ರಕ್ರಿಯೆಯಲ್ಲಿ ವಿಳಂಬ ನೀತಿ ಅನುಸರಿಸುವುದೂ ಸರಿಯಲ್ಲ ಎಂದು ಸಾಂವಿಧಾನಿಕ ಪೀಠ ಹೇಳಿದೆ.

ಸುಪ್ರೀಂಕೋರ್ಟ್‌ನ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌, “ಈ ತೀರ್ಪು ದೆಹಲಿಯ ಜನತೆ ಹಾಗೂ ಪ್ರಜಾಪ್ರಭುತ್ವಕ್ಕೆ ಸಿಕ್ಕ ಗೆಲುವು” ಎಂದಿದ್ದಾರೆ.