samachara
www.samachara.com
ಕಾವೇರಿ ನೀರು ಹಂಚಿಕೆ: ತಮಿಳುನಾಡಿಗೆ 31.24 ಟಿಎಮ್‌ಸಿ ಹರಿಸುವಂತೆ ಸೂಚಿಸಿದ ಪ್ರಾಧಿಕಾರ
ದೇಶ

ಕಾವೇರಿ ನೀರು ಹಂಚಿಕೆ: ತಮಿಳುನಾಡಿಗೆ 31.24 ಟಿಎಮ್‌ಸಿ ಹರಿಸುವಂತೆ ಸೂಚಿಸಿದ ಪ್ರಾಧಿಕಾರ

ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಜುಲೈ 2ರಂದು ತನ್ನ ಮೊದಲನೇ ಸಭೆಯನ್ನು ನಡೆಸಿದೆ. ಈ ಸಭೆಯಲ್ಲಿ ತಮಿಳುನಾಡಿಗೆ 31.24 ಟಿಎಮ್‌ಸಿ ನೀರನ್ನು ಹರಿಸುವಂತೆ ಸೂಚನೆ ನೀಡಿದೆ.

samachara

samachara

ಸುಪ್ರಿಂ ಕೋರ್ಟ್ ನೀಡಿರುವ ಅದೇಶದಂತೆ ತಮಿಳುನಾಡಿಗೆ ಜುಲೈ ತಿಂಗಳಿನಲ್ಲಿ 31.24 ಟಿಎಮ್‌ಸಿ ನೀರನ್ನು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕ ಸರಕಾರಕ್ಕೆ ಅದೇಶ ನೀಡಿದೆ.

ರಾಷ್ಟ್ರ ರಾಜಧಾನಿ ದೆಹಲಿಯ ಶ್ರಮ ಶಕ್ತಿ ಭವನದಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್. ಮಸೂದ್‌ ಹುಸೇನ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಸೂಚನೆ ನೀಡಿದೆ.

ಕರ್ನಾಟಕದ ವಿರೋಧ ಇದ್ದಾಗಲೂ ಕೂಡ ಕೇಂದ್ರ ಸರ್ಕಾರ ಜೂನ್ 1ರಂದು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಮಾಡಿತ್ತು. ಗೆಜೆಟ್ ನೋಟಿಫಿಕೇಷನ್ ಹೊರಡಿಸಿತ್ತು. ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ರಾಜ್ಯಗಳಿಗೆ ಪ್ರತಿನಿಧಿಗಳನ್ನು ನೇಮಿಸುವಂತೆ ಸೂಚನೆ ನೀಡಿತ್ತು. ಈಗ ನಿರ್ವಹಣಾ ಮಂಡಳಿ ತನ್ನ ಮೊದಲ ಸಭೆಯನ್ನು ನಡೆಸಿದೆ. ಜುಲೈ ತಿಂಗಳ ಅಂತ್ಯದೊಳಗೆ ಮತ್ತೊಂದು ಸುತ್ತಿನ ಸಭೆ ನಡೆಸುವುದಾಗಿ ತೀರ್ಮಾನಿಸಲಾಗಿದೆ.

ಜುಲೈ 2ರಂದು ನಡೆದ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮೊದಲ ಸಭೆಯಲ್ಲಿ ಪ್ರಾಧಿಕಾರದ ಅದ್ಯಕ್ಷ ಎಸ್.ಮಸೂದ್‌, ಕೇಂದ್ರ ಸರಕಾರದ 4 ಜನ ಪ್ರತಿನಿಧಿಗಳು ಹಾಗೂ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚರಿಯ ಒಬ್ಬೊಬ್ಬ ಪ್ರತಿನಿಧಿಗಳು ಭಾಗಿಯಾಗಿದ್ದರು. ಕರ್ನಾಟಕದ ಪ್ರತಿನಿಧಿಯಾಗಿ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಭಾಗವಹಿಸಿದ್ದರು.

ಸುಮಾರು 4 ಗಂಟೆಗಳ ಕಾಲ ನಡೆದ ಸುದೀರ್ಘ ಸಭೆಯಲ್ಲಿ ಪ್ರಾಧಿಕಾರದ ಕಾರ್ಯ ಚಟುವಟಿಕೆ ಹಾಗೂ ನಿಯಮಾವಳಿಗಳು, ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ 8 ಜಲಾಶಯಗಳ ನಿರ್ವಹಣೆ, ಪ್ರಾಧಿಕಾರದ ಕಾರ್ಯ ನಿರ್ವಹಣೆಗೆ ಅಗತ್ಯವಿರುದ ಹಣದ ಕ್ರೋಢೀಕರಣ ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಜೂನ್‌ ತಿಂಗಳಿನಲ್ಲಿ ಕಾವೇರಿ ನದಿಯಲ್ಲಿ ಎಷ್ಟು ನೀರಿತ್ತು, ಜುಲೈ ಪ್ರಾರಂಭದಲ್ಲಿ ಎಷ್ಟು ನೀರಿದೆ ಎನ್ನುವುದರ ಕುರಿತೂ ಮಾತುಕತೆ ನಡೆದಿದೆ.

ಸುಪ್ರಿಂ ಕೋರ್ಟ್ ತೀರ್ಪಿನಂತೆ ಕರ್ನಾಟಕ ತಮಿಳುನಾಡಿಗೆ ಜುಲೈ ತಿಂಗಳಿನಲ್ಲಿ 34 ಟಿಎಮ್‌ಸಿ ನೀರನ್ನು ಹರಿಸಬೇಕಿತ್ತು. ಆದರೆ ಕರ್ನಾಟಕ ಜೂನ್‌ ತಿಂಗಳಿನಲ್ಲಿಯೇ ತಮಿಳುನಾಡಿಗೆ 2.5 ಟಿಎಮ್‌ಸಿಯಷ್ಟು ನೀರನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಿದೆ. ಆದ್ದರಿಂದಾಗಿ ಈಗ 31.24 ಟಿಎಮ್‌ಸಿ ನೀರನ್ನು ಬಿಡುಗಡೆಗೊಳಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಸೂಚಿಸಿದೆ.

ಪ್ರಾಧಿಕಾರದ ಮೊದಲ ಸಭೆಗೂ ಮುನ್ನವೇ ಜೂನ್‌ 30ರ ಶನಿವಾರದಂದು ಕರ್ನಾಟಕದ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸರ್ವ ಪಕ್ಷ ಮುಖಂಡರ ಸಭೆ ನಡೆದಿತ್ತು. ಉಭಯ ಸದನದ ನಾಯಕರು, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ಸಂದಸರು, ಕಾವೇರಿ ಕಣಿವೆ ಪ್ರದೇಶದ ಶಾಸಕರು, ಸಚಿವರು, ಕಾನೂನು ಹಾಗೂ ನೀರಾವರಿ ತಜ್ಞರು ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಸಭೆ ಬಳಿಕ ಸುದ್ದಿ ಸಂಸ್ಥೆಗಳೊಂದಿಗೆ ಮಾತನಾಡಿದ್ದ ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, “ಅಂತರರಾಜ್ಯ ಜಲವಿವಾದ ಕಾಯ್ದೆ 1956ರ ಪ್ರಕಾರ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣಾ ಸಮಿತಿ ರಚನೆಯು ಸಂಸತ್ತಿನ ಪರಮಾಧಿಕಾರಕ್ಕೆ ಒಳಪಟ್ಟಿದೆ. ಈ ಮೊದಲೇ ಸಂಸತ್ತಿನಲ್ಲಿ ಚರ್ಚೆಯಾಗದ ಹೊರತು ಪ್ರಾಧಿಕಾರವನ್ನು ರಚಿಸದಂತೆ ಕರ್ನಾಟಕ ಆಗ್ರಹಿಸಿತ್ತು. ಆದರೆ ಸುಪ್ರಿಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಕೇಂದ್ರವು ಪ್ರಾಧಿಕಾರವನ್ನು ರಚಿಸಿದೆ. ಹಾಗಾಗಿ ರಾಜ್ಯ ಸರಕಾರ ಸುಪ್ರಿಂ ಕೋರ್ಟ್‌ನಲ್ಲಿ ಮತ್ತೊಮ್ಮೆ ಧಾವೆ ಹೂಡಲು ನಿರ್ಧರಿಸಿದೆ, “ ಎಂದು ತಿಳಿಸಿದ್ದರು.