ಆರ್‌ಎಸ್‌ಎಸ್‌ ಪಾಲಿಗೆ ಕೊನೆಗೂ ಲಾಭವೇ ಆದ ಪ್ರಣವ್‌ ಮುಖರ್ಜಿ ಭೇಟಿ!
ದೇಶ

ಆರ್‌ಎಸ್‌ಎಸ್‌ ಪಾಲಿಗೆ ಕೊನೆಗೂ ಲಾಭವೇ ಆದ ಪ್ರಣವ್‌ ಮುಖರ್ಜಿ ಭೇಟಿ!

ವಿವಾದಗಳು ಬಹಳಷ್ಟು ಸಂದರ್ಭಗಳಲ್ಲಿ ಕೆಲವರಿಗಾದರೂ ಲಾಭ ಮಾಡಿಕೊಡುತ್ತವೆ ಎಂಬ ಮಾತಿಗೆ ಹೊಸ ಉದಾಹರಣೆ ಪ್ರಣವ್‌ ಮುಖರ್ಜಿ ಅವರ ಆರ್‌ಎಸ್‌ಎಸ್‌ ಭೇಟಿ.

ಹಲವು ಆಕ್ಷೇಪಗಳ ನಡುವೆಯೂ ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಆರ್‌ಎಸ್‌ಎಸ್‌ ಪಾಲಿಗೆ ಲಾಭವೇ ಆಗಿದೆ.

ಪ್ರಣವ್‌ ಮುಖರ್ಜಿ ಅವರು ತಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದ ಸಂಘದ ಸದಸ್ಯರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಆರ್‌ಎಸ್‌ಎಸ್‌ ಹೇಳಿಕೊಂಡಿದೆ. ಆರ್‌ಎಸ್‌ಎಸ್ನ ಕೇಂದ್ರ ಸ್ಥಾನ ನಾಗಪುರದಲ್ಲಿ ಜೂನ್‌ 7ರಂದು ನಡೆದಿದ್ದ ‘ಸಂಘ್‌ ಶಿಕ್ಷಾ ವರ್ಗ್’ ಸಮಾವೇಶದಲ್ಲಿ ಮುಖರ್ಜಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಭಾಷಣ ಮಾಡಿದ್ದರು.

ಪ್ರಣವ್‌ ಮುಖರ್ಜಿ ಆರ್‌ಎಸ್ಎಸ್‌ನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಸೂಚಿಸಿದ್ದ ವಿಷಯ ವಿವಾದದ ಸ್ವರೂಪ ಪಡೆದುಕೊಂಡಿತ್ತು. ಹಲವರು ಮುಖರ್ಜಿ ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಹೋಗಲು ಒಪ್ಪಿದ್ದನ್ನು ಆಕ್ಷೇಪಿಸಿದ್ದರು. ಆದರೆ, ಮುಖರ್ಜಿ ಕೊನೆಗೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯದೆ ಆರ್‌ಎಸ್‌ಎಸ್‌ನ ಕಾರ್ಯಕ್ರಮಕ್ಕೆ ಹೋಗಿ ಭಾಷಣ ಮಾಡಿ ಬಂದಿದ್ದರು.

ಪ್ರಣವ್‌ ಮುಖರ್ಜಿ ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗಿಯಾಗುವ ವಿಷಯ ವಿವಾದವಾಗಿದ್ದರಿಂದ ಆರ್‌ಎಸ್‌ಎಸ್‌ ಸದಸ್ಯರಾಗುವವರ ಸಂಖ್ಯೆ ಹೆಚ್ಚಾಗಿದೆ. ಆರ್‌ಎಸ್‌ಎಸ್‌ಗೆ ಆನ್‌ಲೈನ್‌ ಮೂಲಕ ಸದಸ್ಯತ್ವ ಅರ್ಜಿ ಸಲ್ಲಿಸುವವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಆರ್‌ಎಸ್‌ಎಸ್‌ ಸದಸ್ಯರಾಗಲು ಬಯಸಿ ಅರ್ಜಿ ಸಲ್ಲಿಸುತ್ತಿರುವವರ ಪೈಕಿ ಪಶ್ಚಿಮ ಬಂಗಾಳದ ಜನರೇ ಶೇಕಡ 40ರಷ್ಟಿದ್ದಾರೆ ಎಂದು ಆರ್‌ಎಸ್‌ಎಸ್‌ ಹೇಳಿಕೊಂಡಿದೆ.

Also read: ‘ಸಂಘ’ದ ಸಮಾವೇಶಕ್ಕೆ ಮುಖ್ಯ ಅತಿಥಿಯಾಗಿ ಪ್ರಣವ್‌ ಮುಖರ್ಜಿ: ತೃತೀಯ ರಂಗಕ್ಕೆ ಮಾಜಿ ರಾಷ್ಟ್ರಪತಿ ನೇತೃತ್ವ?

“ಜೂನ್‌ 1ರಿಂದ ಜೂನ್‌ 6ರ ಅವಧಿಯಲ್ಲಿ ಪ್ರತಿನಿತ್ಯ 378 ಸದಸ್ಯತ್ವದ ಮನವಿಗಳು ಸಂಘದ ವೆಬ್‌ಸೈಟ್‌ಗೆ ಬಂದಿವೆ. ಪ್ರಣವ್‌ ಮುಖರ್ಜಿ ಭಾಷಣ ಮಾಡಿದ ಜೂನ್‌ 7ರಂದು ಒಂದೇ ದಿನ 1,779 ಸದಸ್ಯತ್ವದ ಮನವಿಗಳು ಬಂದಿವೆ” ಎಂದು ಆರ್‌ಎಸ್‌ಎಸ್‌ನ ಸಹ ಸರಕಾರ್ಯವಾಹ ಮನಮೋಹನ್‌ ವೈದ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಣವ್‌ ಮುಖರ್ಜಿ ಅವರ ಭಾಷಣಕ್ಕಾಗಿ ಧನ್ಯವಾದ ಸಲ್ಲಿಸಿರುವ ವೈದ್ಯ, “ವಿರೋಧಿಗಳು ದೊಡ್ಡ ಪ್ರಮಾಣದ ಅಸಹಿಷ್ಣುತೆಯನ್ನು ತೋರದಿದ್ದರೆ ಮಾಧ್ಯಮಗಳ ಗಮನ ಸೆಳೆಯದೆ ಈ ಕಾರ್ಯಕ್ರಮ ಪ್ರತಿ ವರ್ಷದಂತೆ ಈ ವರ್ಷವೂ ನಡೆದು ಹೋಗುತ್ತಿತ್ತು. ಆದರೆ, ವಿರೋಧದ ಕಾರಣಕ್ಕೆ ಈ ಕಾರ್ಯಕ್ರಮ ದೇಶದ ಮಾಧ್ಯಮಗಳ ಗಮನ ಸೆಳೆಯಿತು” ಎಂದಿದ್ದಾರೆ.

“ಜೂನ್‌ 7ರ ಬಳಿಕ ಪ್ರತಿದಿನ 1,200ರಿಂದ 1,300 ಸದಸ್ಯತ್ವದ ಮನವಿಗಳು ಆನ್‌ಲೈನ್‌ ಮೂಲಕ ಬರುತ್ತಿವೆ. ಇದರಲ್ಲಿ ಹೆಚ್ಚಿನ ಮನವಿಗಳು ಪ್ರಣವ್‌ ಮುಖರ್ಜಿ ಅವರ ರಾಜ್ಯ ಪಶ್ಚಿಮ ಬಂಗಾಳದಿಂದಲೇ ಬರುತ್ತಿವೆ” ಎಂದು ಆರ್‌ಎಸ್‌ಎಸ್‌ನ ಬಂಗಾಳ ವಿಭಾಗದ ವಕ್ತಾರ ಬಿಪ್ಲಬ್‌ ರಾಯ್‌ ಹೇಳಿದ್ದಾರೆ.

ಎಷ್ಟೆಲ್ಲಾ ಪರ ವಿರೋಧ ಚರ್ಚೆ ಹುಟ್ಟು ಹಾಕಿದ್ದ ಪ್ರಣವ್‌ ಮುಖರ್ಜಿ ಭೇಟಿ ಕೊನೆಗೂ ಆರ್‌ಎಸ್‌ಎಸ್‌ ಪಾಲಿಗೆ ಅನುಕೂಲವೇ ಆಗಿದೆ. ಈ ನೆಪದಲ್ಲಿ ಇನ್ನೊಂದಷ್ಟು ಜನ ಆರ್‌ಎಸ್‌ಎಸ್‌ ಪಾಲಾಗಿದ್ದಾರೆ.