‘ದೇಗುಲಗಳಲ್ಲಿ ಭಕ್ತರ ಶೋಷಣೆ’: ಮಾಹಿತಿ ನೀಡಲು ಸುಪ್ರಿಂ ಸೂಚನೆ
ದೇಶ

‘ದೇಗುಲಗಳಲ್ಲಿ ಭಕ್ತರ ಶೋಷಣೆ’: ಮಾಹಿತಿ ನೀಡಲು ಸುಪ್ರಿಂ ಸೂಚನೆ

ಒರಿಸ್ಸಾದ ಪುರಿ ಜಗನ್ನಾಥ ದೇಗುಲದ ನಿರ್ವಹಣೆಯಲ್ಲಿ ಹಲವು ಅಧಿಕಾರ ದುರುಪಯೋಗದ ಘಟನೆಗಳು ನಡೆದಿವೆ. ದೇವರ ಅಮೂಲ್ಯ ಆಭರಣಗಳಿದ್ದ ರತ್ನ ಭಂಡಾರದ ಕೀಲಿಗಳು ಕಾಣೆಯಾಗಿವೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿ ಪಿಐಎಲ್ ಸಲ್ಲಿಸಲಾಗಿತ್ತು.

ಒಡಿಶಾದ ಪುರಿ ಜಗನ್ನಾಥ ದೇಗುಲದ ನಿರ್ವಹಣೆಯಲ್ಲಿ ಹಲವು ಅಧಿಕಾರ ದುರುಪಯೋಗದ ಘಟನೆಗಳು ನಡೆದಿವೆ. ದೇವರ ಅಮೂಲ್ಯ ಆಭರಣಗಳಿದ್ದ ರತ್ನ ಭಂಡಾರದ ಕೀಲಿಗಳು ಕಾಣೆಯಾಗಿವೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯಲ್ ಹಾಗೂ ನ್ಯಾಯಮೂರ್ತಿ ಅಶೋಕ್ ಭೂಷಣ್‌ ಅವರಿದ್ದ ರಜಾಕಾಲದ ಪೀಠ ಮಹತ್ವದ ಸೂಚನೆ ನೀಡಿದೆ. ಭಾರಿ ಸಂಖ್ಯೆಯ ಭಕ್ತರನ್ನು ಒಳಗೊಂಡಿರುವ ದೇಶದ ಪ್ರಮುಖ ದೇವಸ್ಥಾನಗಳ ಆಡಳಿತ ಮಂಡಳಿಗಳು, ದೇಗುಲಗಳ ಮಹತ್ವದ ಸಾಂಸ್ಕೃತಿಕ ಹಾಗೂ ವಾಸ್ತುಶಿಲ್ಪಗಳನ್ನು ಹೇಗೆ ಕಾಪಾಡುತ್ತಿವೆ? ಭಕ್ತರು ನೀಡುವ ದಾನ ಮತ್ತು ದತ್ತಿಗಳನ್ನು ಹೇಗೆ ಬಳಸುತ್ತಿವೆ? ಎಂದು ತಿಳಿಸುವಂತೆ ಕೇಂದ್ರಕ್ಕೆ ಆದೇಶಿಸಿದೆ.

ಯಾತ್ರಿಕರಿಗೆ ಅಡಚಣೆ ಇಲ್ಲದೆ ಸೇವೆ ನೀಡಲು ದೇಗುಲಗಳ ಆಡಳಿತ ಮಂಡಳಿಗಳು ಯಾವ ವ್ಯವಸ್ಥೆಯನ್ನು ಅನುಸರಿಸುತ್ತಿವೆ. ಸೇವೆಗಳನ್ನು ನೀಡಲು ಪುರೋಹಿತರು ಭಕ್ತರಿಂದ ಹಲವು ಬಾರಿ ದುಪ್ಪಟ್ಟ ಹಣವನ್ನು ವಸೂಲಿ ಮಾಡುವುದನ್ನು ತಡೆಯಲು ಯಾವ ಉತ್ತಮ ನಿರ್ವಹಣೆಯನ್ನು ಕೈಗೊಂಡಿವೆ ಎಂಬುದನ್ನೂ ವರದಿಯಲ್ಲಿ ನೀಡುವಂತೆ ನ್ಯಾಯಪೀಠ ಸೂಚಿಸಿತು.

ದೇಶದ ಹಲವು ಪ್ರಮುಖ ದೇಗುಲಗಳಿಗೆ ನಿತ್ಯ ಲಕ್ಷಾಂತ ಮಂದಿ ಭಕ್ತರು ತೆರಳುತ್ತಾರೆ. ಅವರ ಸುರಕ್ಷತೆ ಮತ್ತು ಸರಳ ಸೇವೆ ನೀಡಲು ಆಡಳಿತ ಮಂಡಳಿಗಳು ಯಾತ್ರಿ ಸ್ನೇಹಿ ಕ್ರಮಗಳನ್ನ ಕೈಗೊಳ್ಳುವುದು ಅತ್ಯಂತ ಅಗತ್ಯ. ಆದರೆ ಹೀಗೆ ಆಗಮಿಸುವ ಭಕ್ತರನ್ನು ದುರ್ಬಳಕೆ ಮಾಡಿಕೊಳ್ಳುವ, ಅವರ ಹಕ್ಕುಗಳನ್ನು ಅತಿಕ್ರಮಿಸಿ ಹಣ ವಸೂಲಿ ಮಾಡುವ ದುಷ್ಕೃತ್ಯಗಳು ನಡೆಯುತ್ತಿಲ್ಲ. ಭಕ್ತರಿಂದ ದೇಗುಲಗಳಿಗೆ ನೀಡಲ್ಪಡುವ ದೇಣಿಗೆ, ಕಾಣಿಕೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿಲ್ಲ ಎಂಬುದನ್ನೂ ಕೋರ್ಟ್‌ಗೆ ತಿಳಿಸಬೇಕು ಎಂದು ನ್ಯಾಯಮೂರ್ತಿ ಆದರ್ಶ ಕುಮಾರ್ ಹೇಳಿದರು.

ಪುರಿ ಜಗನ್ನಾಥ ದೇಗುಲದಲ್ಲಿ ಭಕ್ತರ ಶೋಷಣೆ, ಅಧಿಕಾರ ದುರುಪಯೋಗ, ಹಣ ದುರುಪಯೋಗ, ಕಾಣಿಕೆಗಳ ನಾಪತ್ತೆ ಪ್ರಕರಣಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ದೇಗುಲದ ಆಡಳಿತ ಮಂಡಳಿಯನ್ನು ಬದಲಿಸಬೇಕು ಎಂದು ಕೋರಿದ್ದ ಅರ್ಜಿಯ ವಿಚಾರಣೆಯನ್ನು ಮುಂದುವರೆಸಿದ ಪೀಠ, ದೇಗುಲಗಳಿಗೆ ಭಕ್ತರಿಂದ ನೀಡಲ್ಪಡುವ ಕಾಣಿಕೆ ಹಾಗೂ ವಂತಿಗೆಗಳು ನೇರವಾಗಿ ದೇಗುಲದ ಆಡಳಿತ ಮಂಡಳಿಗೆ ಹೋಗಬೇಕೇ ಹೊರತು ಪುರೋಹಿತರ ಜೇಬಿಗಲ್ಲ ಎಂದು ಚಾಟಿ ಬೀಸಿತು.

ಒರಿಸ್ಸಾದ ಪುರಿ ಜಗನ್ನಾಥ ದೇಗುಲದ ಚಿತ್ರ. 
ಒರಿಸ್ಸಾದ ಪುರಿ ಜಗನ್ನಾಥ ದೇಗುಲದ ಚಿತ್ರ. 

ಈ ಹಿನ್ನೆಲೆಯಲ್ಲಿ ಅತಿ ಹೆಚ್ಚು ಭಕ್ತರು ಆಗಮಿಸುವ ವೈಷ್ಣೋದೇವಿ ದೇಗುಲ. ತಿರುಪತಿ ತಿರುಮಲ ದೇಗುಲ, ಶಿರಡಿಯ ಸಾಯಿ ಬಾಬಾ ದೇಗುಲ, ಗುಜರಾತಿನ ಸೋಮನಾಥ ದೇಗುಲ ಹಾಗೂ ಅಮೃತಸರದ ಗೋಲ್ಡನ್ ಟೆಂಪಲ್ ಸೇರಿದಂತೆ ಪ್ರಮುಖ ದೇಗುಲಗಳ ಆಡಳಿತ ಮಂಡಳಿ ದೇಗುಲಗಳಲ್ಲಿ ಯಾವ ರೀತಿ ನಿರ್ವಣೆಯನ್ನು ನಡೆಸುತ್ತಿದೆ ಎಂದು ತಿಳಿಸಬೇಕು. ಇದರ ಸಂಪೂರ್ಣ ತನಿಖೆಗೆ ಒಂದು ಕಮಿಟಿಯನ್ನು ರಚಿಸುವಂತೆ ಕೇಂದ್ರಕ್ಕೆ ಸೂಚಿಸಿತು. ಹೀಗೆ ಬರುವ ಹಣದಲ್ಲಿ ದೇಗುಲಗಳ ಸಿಬ್ಬಂದಿ ಹಾಗೂ ಪುರೋಹಿತರಿಗೆ ಸಂಬಳ ನೀಡಬೇಕು ಎಂದು ಅಭಿಪ್ರಾಯಪಟ್ಟಿತು.

ಜಗನ್ನಾಥ ದೇಗುಲದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ಸಂಪೂರ್ಣ ತನಿಖೆ ನಡೆಯಬೇಕು. ದೇಗುಲಗಳಲ್ಲಿ ಎಷ್ಟು ಸಿಸಿಟಿವಿ ಕ್ಯಾಮರಾಗಳಿವೆ. ಅವುಗಳನ್ನು ಯಾರು ವೀಕ್ಷಿಸುತ್ತಿದ್ದಾರೆ ಎಂಬುದನ್ನೂ ವರದಿಯಲ್ಲಿ ನೀಡಬೇಕು. ಜೊತೆಗೆ ಭಕ್ತರಿಂದ ನೀಡಲ್ಪಡುವ ವಂತಿಕೆ ಕಾಣಿಕೆಗಳನ್ನು ರಶೀದಿ ಇಲ್ಲದೆ ನೇರವಾಗಿ ನೀಡುತ್ತಿಲ್ಲ ಎಂಬ ಬಗ್ಗೆಯೂ ವರದಿಯಲ್ಲಿ ನೀಡುವಂತೆ ಜಿಲ್ಲಾ ನ್ಯಾಯಾಧೀಶರಿಗೆ ಆದೇಶಿಸಿತು.

ಜಿಲ್ಲಾ ಮುಜುರಾಯಿ ಇಲಾಖೆ, ಜಿಲ್ಲಾಧಿಕಾರಿ ಜಿಲ್ಲಾ ಕೋರ್ಟ್‌ ನಡೆಸುವ ತನಿಖೆಗೆ ಅಗತ್ಯವಾಗುವ ಸಂದರ್ಭದಲ್ಲಿ ಸಹಕಾರ ನೀಡುವಂತೆ ಕೋರ್ಟ್ ಹೇಳಿತು.