samachara
www.samachara.com
ನಕ್ಸಲ್‌ ನಂಟಿಂದ ಮೋದಿ ಹತ್ಯೆಯವರೆಗೆ; ಭೀಮಾ ಕೋರೆಗಾಂವ್‌ ಹಿಂಸೆ ಮತ್ತು ಪೊಲೀಸರ ‘ಕತೆ’
ದೇಶ

ನಕ್ಸಲ್‌ ನಂಟಿಂದ ಮೋದಿ ಹತ್ಯೆಯವರೆಗೆ; ಭೀಮಾ ಕೋರೆಗಾಂವ್‌ ಹಿಂಸೆ ಮತ್ತು ಪೊಲೀಸರ ‘ಕತೆ’

ಭೀಮಾ ಕೋರೆಂಗಾವ್‌ ಹಿಂಸಾಚಾರದಲ್ಲಿ ಬಂಧಿಸಲ್ಪಟ್ಟ ಐದು ಮಂದಿ ಹೋರಾಟಗಾರರಿಗೆ ನಕ್ಸಲರು ಎಂಬ ಹಣೆಪಟ್ಟಿ ಕಟ್ಟಲಾಗಿತ್ತು. ಈಗ ಅದಕ್ಕಿಂತಲೂ ದೊಡ್ಡದೆನಿಸುವ ಆರೋಪವನ್ನು ಹೋರಾಟಗಾರರ ಮೇಲೆ ಹೊರಿಸಲು ಪುಣೆ ಪೊಲೀಸರು ಸಜ್ಜಾಗಿದ್ದಾರೆ.

ಭೀಮಾ ಕೋರೆಂಗಾವ್‌ ಹಿಂಸಾಚಾರದಲ್ಲಿ ಬಂಧಿಸಲ್ಪಟ್ಟ ಐದು ಮಂದಿ ಹೋರಾಟಗಾರರಿಗೆ ನಕ್ಸಲರು ಎಂಬ ಹಣೆಪಟ್ಟಿ ಕಟ್ಟಲಾಗಿತ್ತು. ಈಗ ಅದಕ್ಕಿಂತಲೂ ದೊಡ್ಡದೆನಿಸುವ ಆರೋಪವನ್ನು ಹೋರಾಟಗಾರರ ಮೇಲೆ ಹೊರಿಸಲು ಪುಣೆ ಪೊಲೀಸರು ಸಜ್ಜಾಗಿದ್ದಾರೆ. “ಪ್ರಧಾನಿ ನರೇಂದ್ರ ಮೋದಿಯವರನ್ನು ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯ ರೀತಿ ಕೊಲ್ಲಲು ಇವರು ಯೋಜನೆ ರೂಪಿಸಿದ್ದರು,” ಎಂಬ ಆರೋಪವನ್ನು ಅವರೀಗ ಎದುರಿಸಬೇಕಾಗಿದೆ.

ಪುಣೆ ನಗರದಿಂದ ಕೆಲವು ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಭೀಮಾ ಕೋರೆಂಗಾವ್‌ ಗ್ರಾಮದಲ್ಲಿ ಜೂನ್‌ 1ರಂದು ನಡೆಯುತ್ತಿದ್ದ ದಲಿತರ ಸಭೆ ವೇಳೆ ನಡೆದ ಹಿಂಸಾಚಾರಕ್ಕೆ ಕಾರಣರೆಂದು 5 ಮಂದಿಯನ್ನು ಪುಣೆ ಪೊಲೀಸರು ಬಂಧಿಸಿದ್ದರು.

ಮಾನವ ಹಕ್ಕುಗಳ ಕುರಿತಾಗಿ ಹೋರಾಟ ಮಾಡುತ್ತಿದ್ದ ಹಿರಿಯ ವಕೀಲ ನಾಗ್ಪುರದ ಸುರೇಂದ್ರ ಗಾಡ್ಲಿಂಗ್‌, ಹಿರಿಯ ಪರಿಶಿಷ್ಟ ಜಾತಿ ಸಮುದಾಯದ ಹಕ್ಕುಗಳ ಹೋರಾಟಗಾರ ಹಾಗೂ ‘ವಿರೋಧಿ’ ದ್ವೈಮಾಸಿಕ ಪತ್ರಿಕೆಯ ಸಂಪಾದಕ ಸುಧೀರ್‌ ಧಾವಲೆ, ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಸೋಷಿಯಲ್‌ ಸೈನ್ಸ್‌ನ ಹಳೆಯ ವಿದ್ಯಾರ್ಥಿ ಮಹೇಶ್‌ ರಾವತ್‌ ದೆಹಲಿ ಮೂಲದ ಸಾಮಾಜಿಕ ಕಾರ್ಯಕರ್ತ ರೋನಾ ವಿಲ್ಸನ್ ಹಾಗೂ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಫ್ರಾಧ್ಯಾಪಕಿ ಶೋಮಾ ಸೇನ್‌ರನ್ನು ಬಂಧಿಸಲಾಗಿದ್ದು ಇವರ ಮೇಲೆ ನಕ್ಸಲೈಟ್‌ಗಳು ಆರೋಪ ಹೊರಿಸಲಾಗಿದೆ.

ಈ ವಿಚಾರಣೆಯ ವೇಳೆ, ನ್ಯಾಯಾಧೀಶರ ಮುಂದೆ ವಾದ ಮಂಡಿಸಿದ ಸರಕಾರಿ ವಕೀಲೆ ಉಜ್ವಲಾ ಪಾವಾರ್‌, “ ಐವರೂ ರಾಜೀವ್‌ ಗಾಂಧಿ ಹತ್ಯೆ ರೀತಿಯ ದೊಡ್ಡ ಭಯೋತ್ಪಾದ ಕೃತ್ಯಕ್ಕೆ ಯೋಜನೆ ರೂಪಿಸಿದ್ದ ಬಗ್ಗೆ ಪ್ರಾಥಮಿಕ ಸಾಕ್ಷ್ಯಗಳು ದೊರೆತಿವೆ ” ಎಂದಿದ್ದಾರೆ.

ಬಂಧಿತ ಐವರ ಪೈಕಿ ಒಬ್ಬರ ಲ್ಯಾಪ್‌ಟ್ಯಾಟ್‌ನಲ್ಲಿ ದೊರೆತಿದೆ ಎನ್ನಲಾಗಿರುವ ಪತ್ರವೊಂದರ ಆಧಾರದ ಮೇಲೆ ಪೊಲೀಸರು ಈ ಆರೋಪವನ್ನು ಹೊರೆಸಿದ್ದಾರೆ. ಬಂಧಿತರ ಪರ ವಾದ ಮಾಡುವ ಸಲುವಾಗಿ ದೂರದ ದೆಹಲಿ, ಮುಂಬೈ ಮತ್ತು ನಾಗ್ಪುರಗಳಿಂದ ಬಂದಿರುವ ವಕೀಲರು, ಪೋಲೀಸರ ಸರ್ಕಾರಿ ವಕೀಲರ ಆರೋಪಗಳನ್ನು ಅಲ್ಲಗೆಳೆದಿದ್ದಾರೆ. ಜತೆಗೆ ಪೊಲೀಸರು ಕಾನೂನು ಬಾಹಿರ ಚಟುವಟಿಕೆ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿ ಕೇಸು ದಾಖಲಿಸಿದ್ದು, ಬಂಧಿತರು ನಿಷೇಧಿತ ಸಿಪಿಐ ( ಮಾವೋಯಿಸ್ಟ್ ) ಗುಂಪಿಗೆ ಸೇರಿದವರು ಎನ್ನುವುದಕ್ಕೆ ದಾಖಲೆಗಳನ್ನು ಒದಗಿಸುವಲ್ಲಿ ಸೋತಿದ್ದಾರೆ ಎಂದು ವಾದಿಸಿದ್ದಾರೆ.

ಪುಣೆ ನಗರದ ಜಂಟಿ ಆಯುಕ್ತ ರವೀಂದ್ರ ಕದಮ್‌ ಮಾತನಾಡಿ, “ಬಂಧನಕ್ಕೆ ಒಳಪಟ್ಟಿರುವ ಐದೂ ವ್ಯಕ್ತಿಗಳು ನಿಷೇಧಿತ ಭಯೋತ್ಪಾದಕ ಪಕ್ಷ ಸಿಪಿಐ (ಮಾವೋಯಿಸ್ಟ್‌) ಜತೆ ನಂಟನ್ನು ಹೊಂದಿದ್ದಾರೆ. ಭೀಮಾ ಕೋರೆಂಗಾವ್‌ ವಿಚಾರದಲ್ಲಿ ಇವರ ವಿರುದ್ಧ ಎಫ್‌ಐಆರ್‌ ದಾಖಲಿಸಿ, ವಿಚಾರಣೆ ನಡೆಸುತ್ತಿದ್ದ ವೇಳೆ ಈ ಅಂಶ ಬಯಲಾಗಿದೆ,” ಎಂದಿದ್ದಾರೆ.

ಜೂನ್ 6ರಂದು ನಾಗ್ಪುರ, ಮುಂಬೈ ಮತ್ತು ದೆಹಲಿ ಪೊಲೀಸರ ಜೊತೆ ಜಂಟಿ ಕಾರ್ಯಾಚರಣೆ ನಡೆಸಿದ್ದ ಪುಣೆ ಪೊಲೀಸರು, ಐವರನ್ನೂ ಬಂಧಿಸಿದ್ದರು. ಜೂನ್‌ 7ರಂದು ಪುಣೆಯ ಜಿಲ್ಲಾ ನ್ಯಾಯಾಲಯ ಮುಂದೆ ಹಾಜರು ಪಡಿಸಲಾಗಿತ್ತು. ನಾಲ್ಕು ಜನರನ್ನು ಮಧ್ಯಾಹ್ನವೇ ಹಾಜರು ಪಡಿಸಿದ್ದರೆ, ಸಂಜೆ 5 ಗಂಟೆಯ ವೇಳೆಗೆ ವಕೀಲ ಸುರೇಂದ್ರ ಗಾಡ್ಲಿಂಗ್‌ರನ್ನು ನ್ಯಾಯಾಧೀಶ ಎ.ಎಸ್‌.ಬಾಹಿಸೇರ್‌ ಮುಂದೆ ಪ್ರತ್ಯೇಕವಾಗಿ ಹಾಜರುಪಡಿಸಲಾಗಿತ್ತು. ಇದಕ್ಕೆ ಪೊಲೀಸರು ‘ಗಾಡ್ಲಿಂಗ್‌ರನ್ನು ಉಳಿದ ನಾಲ್ಕು ಜರೊಂದಿಗೆ ಕರೆತರುವುದು ಅಪಾಯಕಾರಿಯಾಗಿತ್ತು’ ಎಂದು ಸಮರ್ಥಿಸಿಕೊಂಡಿದ್ದರು.

ಬಂಧಿತರ ಪರವಾಗಿ ವಾದಿಸಲು ಮುಂಬೈನಿಂದ ಆಗಮಿಸಿದ್ದ ಸುಸಾನ್‌ ಅಬ್ರಹಾಮ್‌, ಗಾಂಡ್ಲಿಂಗ್‌ರನ್ನು ನಡೆಸಿಕೊಂಡಿದ್ದ ರೀತಿಗೆ ಆಶ್ಚರ್ಯ ವ್ಯಕ್ತಪಡಿಸಿದ್ದರು. “ಪೊಲೀಸರು ಬಂಧಿತ ಆರೋಪಿಯನ್ನು ಸಂಜೆ 5 ಗಂಟೆಯ ವೇಳೆಗೆ ನ್ಯಾಯಾಲಯದ ಮುಂದೆ ಹಾಜಾರುಪಡಿಸಿದ್ದನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ಗಾಂಡ್ಲಿಂಗ್‌ ಪರವಾಗಿ ವಾದ ಮಾಡಲು ಪೊಲೀಸರು ಉದ್ದೇಶಪೂರ್ವಕವಾಗಿ ಅವರ ಸ್ವಂತ ವಕೀಲರನ್ನು ನೇಮಿಸಿದ್ದಾರೆ,” ಎಂದು ಸುಸಾನ್‌ ತಿಳಿಸಿದ್ದಾರೆ.

‘ದೇಶದ ಭದ್ರತೆ’ಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂಬ ಆರೋಪದ ಜತೆಗೆ ರೋನಾ ವಿಲ್ಸನ್‌ರ ಲ್ಯಾಪ್‌ಟಾಪ್‌ನಲ್ಲಿ ‘ಕಾಮ್ರೇಡ್‌ ಎಂ’ ಎನ್ನುವವರು ಕಳುಹಿಸಿರುವ ಪತ್ರವೊಂದು ಪತ್ತೆಯಾಗಿದೆ’ ಎಂದು ಸರಕಾರೀ ವಕೀಲೆ ಉಜ್ವಲಾ ಪವಾರ್‌ ಆರೋಪಿಸಿದ್ದಾರೆ. ಅಲ್ಲದೆ ಪೊಲೀಸರು ‘ಈ ಪತ್ರ ಕಳುಹಿರುವ ‘ಕಾಮ್ರೇಡ್‌ ಎಂ’ ಎಂಬ ವ್ಯಕ್ತಿಯು ದೇಶಭ್ರಷ್ಟ ನಕ್ಸಲ್‌ ನಾಯಕ ಮಿಲಿಂದ್‌ ತೇಲ್ತುಂಬ್ಡೆ ಆಗಿದ್ದಾನೆ. ಆತನನ್ನು ಹಿಡಿದುಕೊಟ್ಟವರಿಗೆ 50 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಈ ಹಿಂದೆಯೇ ಘೋಷಿಸಲಾಗಿದೆ’ ಎಂದಿದ್ದಾರೆ.

ಉಜ್ವಲಾ ಪವಾರ್ ಹೇಳುವ ಪ್ರಕಾರ ಪೊಲೀಸರ ಬಳಿ ಹಲವಾರು ದಾಖಲೆಗಳಿದ್ದು, ಬಂಧಿತ ಆರೋಪಿಗಳು ಕಾರ್ಮಿಕರ ಪರವಾಗಿ ಕನಿಷ್ಠ ಕೂಲಿ ಹೋರಾಟವನ್ನು ನಡೆಸುವ ಯೋಜನೆಯನ್ನು ಹಾಕಿಕೊಂಡಿದ್ದರು. ಸುಧೀರ್‌ ಧಾವಲೆ ಕಳೆದ ವರ್ಷ ಜೂನ್‌ ಹಾಗೂ ಜುಲೈ ತಿಂಗಳಿನಲ್ಲಿ, ಡಿಸೆಂಬರ್‌ 31ರಂದು ನಡೆದ ಎಲ್ಗರ್‌ ಪರಿಷತ್‌ಗೆಂದು ದೇಣಿಗೆ ಪಡೆದಿದ್ದರು. ಮಂಗ್ಲು ಮತ್ತು ದೀಪು ಎಂಬ ಇಬ್ಬರು ನಕ್ಸಲರ ಜತೆ ಧಾವಲೆ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗಿದೆ.

“ಹಲವು ಪ್ರತಿಭಟನೆಗಳನ್ನು ನಡೆಸುವ ಯೋಜನೆಯನ್ನು ಹಾಕಿಕೊಂಡಿರುವ ಐವರೂ ದೇಶದಲ್ಲಿ ಕ್ರಾಂತಿ ಹೆಸರಿನಲ್ಲಿ ಗಲಭೆ ನಡೆಸುವ ಉದ್ದೇಶವನ್ನು ಹೊಂದಿದ್ದರು. ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳನ್ನು ಆಕರ್ಷಿಸಿ, ಅವರಲ್ಲಿ ತಮ್ಮ ಸಿದ್ಧಾಂತಗಳನ್ನು ಬಿತ್ತುತ್ತಿದ್ದರು. ಅವರಿಂದ ದೊರೆತಿರುವ ದಾಖಲೆಗಳನ್ನು ನೋಡಿದರೆ, ರಾಜೀವ್‌ ಗಾಂಧಿ ಹತ್ಯೆಯಂತ ಮತ್ತೊಂದು ಹತ್ಯಾಕಾಂಡವನ್ನು ನಡೆಸುವ ಯೋಜನೆಯನ್ನು ರೂಪಿಸಿದಂತೆ ಕಾಣುತ್ತದೆ,” ಎಂದಿದ್ದಾರೆ ವಕೀಲೆ ಉಜ್ವಲಾ ಪವಾರ್‌.

ಹಲವಾರು ಪ್ರಶ್ನೆಗಳು:

ಧಾವಲೆ ಪರ ವಕೀಲ ಸಿದ್ದಾರ್ಥ ಪಾಟೀಲ್‌ ಈ ಮಾತುಗಳನ್ನು ಸಂಪೂರ್ಣವಾಗಿ ನಿರಾಕರಿಸುತ್ತಾರೆ. ‘ಅವರ ಪ್ರಕಾರ ಪೊಲೀಸರು ಎಫ್‌ಐಆರ್‌ ದಾಖಲಿಸದೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಆದರೆ ಈಗಾಗಲೇ ತನಿಖೆ ಕೈಗೊಂಡಿದ್ದಾರೆ.’

“ಅವರೇನಾದರೂ ಅಪಾಯಕಾರಿ ನಕ್ಸಲರಾಗಿದ್ದರೆ ಮೊದಲೇ ಏಕೆ ಬಂಧಿಸಲಿಲ್ಲ? ಸಾಕ್ಷ್ಯಗಳಿಲ್ಲದೆ ಗಂಭೀರ ಅನುಮಾನ ಸೃಷ್ಟಿಸುತ್ತಿದ್ದಾರೆ.” ಎನ್ನುತ್ತಾರೆ ಪಾಟೀಲ್‌. ಮುಂದುವರಿದು ಮಾತನಾಡಿದ ಪಾಟೀಲ್‌, ‘ಧಾವಲೆಯವರನ್ನು ಮುಂಬೈ ನಗರದ ಅವರ ಮನೆಯಲ್ಲಿ ಬೆಳಗ್ಗೆ 7 ಗಂಟೆಗೆ ಬಂಧಿಸಲಾಗಿತ್ತು. ಆದರೆ ಪೊಲೀಸ್‌ ದಾಖಲೆಗಳು ಧಾವಲೆಯನ್ನು ಮಧ್ಯಾಹ್ನದ ವೇಳೆ ಬಂಧಿಸಲಾಯಿತು ಎನ್ನುತ್ತವೆ. ಇದನ್ನು ನೋಡಿದರೆ ಆರೋಪಿಗಳ ಮೇಲೆ ಅಪರಾಧಗಳನ್ನು ಹೊರಿಸಲು ಪಿತೂರಿ ನಡೆಯುತ್ತಿದೆ’ ಎಂದಿದ್ದಾರೆ.

ಜನವರಿ 8ರಂದು ದಾಖಲಿಸಿದ ಎಫ್‌ಐಆರ್‌ ಪ್ರಕಾರ ಧಾವಲೆ ಹಾಗೂ ಇತರರು ಕಬೀರ್‌ ಕಲಾಮಂಚ್‌ನ ಸದಸ್ಯರು. ಆದರೂ ಕೂಡ ಪೊಲೀಸರು ಧಾವಲೆಯನ್ನು ಹೊರತುಪಡಿಸಿ ಈ ಗುಂಪಿನ ಇನ್ಯಾರನ್ನೂ ಬಂಧಿಸಿಲ್ಲ.

ಎಲ್ಗರ್‌ ಪರಿಷತ್‌ನ್ನು ದೇಶದ ಸುಮಾರು 200 ಸಂಘಟನೆಗಳು ಸೇರಿ ಆಯೋಜಿಸಿದ್ದವು. ಡಿಸೆಂಬರ್‌ 31ರಂದು ಪುಣೆಯ ಶನಿವಾರ್‌ವಾಡಾ ಪ್ರದೇಶದಲ್ಲಿ ಈ ಪರಿಷತ್‌ ನಡೆದಿತ್ತು. ಸಹಸ್ರಾರು ಜನ ಭಾಗವಹಿಸಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಸೇನ್‌, ರಾವತ್‌, ಗಾಡ್ಲಿಂಗ್‌ ಮತ್ತು ವಿಲ್ಸನ್‌ ಬಂದಿರಲಿಲ್ಲ. ಇದಾದ ಮಾರನೇ ದಿನವೇ ಭೀಮಾ ಕೋರೆಂಗಾವ್‌ನಲ್ಲಿ ಹಿಂಸಾಚಾರ ಸ್ಪೋಟಿಸಿತ್ತು. ದಲಿತರನ್ನು ಗುರಿಯಾಗಿಸಿಕೊಂಡು ನಡೆದಿದ್ದ ಈ ಹಿಂಸಾಚಾರದಲ್ಲಿ ಹಲವಾರು ವಾಹನಗಳು ಭಸ್ಮವಾಗಿದ್ದವು. ಒಬ್ಬ ವ್ಯಕ್ತಿ ಸಾವನ್ನಪ್ಪಿ, ಹಲವಾರು ಜನ ಗಾಯಗೊಂಡಿದ್ದರು. ಇದರ ಹಿಂದೆ ಈ ಐವರ ಪಿತೂರಿಯ ಸಂಚಿದೆ ಎಂಬುದು ಪೊಲೀಸರ ಆರೋಪ.

ಜನವರಿ 1ರಂದು ಭೀಮಾ ಕೋರೆಂಗಾವ್‌ನಲ್ಲಿ ನಡೆದ ಘರ್ಷಣೆ.
ಜನವರಿ 1ರಂದು ಭೀಮಾ ಕೋರೆಂಗಾವ್‌ನಲ್ಲಿ ನಡೆದ ಘರ್ಷಣೆ.

ರಾಜ್ಯದೊಳಗಿನ ಹಿಂದುತ್ವದ ನಾಯಕರಾಗಿರುವ ಮನೋಹರ್‌ ಭಿದೆ ಮತ್ತು ಮಿಲಿಂದ್‌ ಎಕ್ಬೋಟೆ ಈ ದಾಳಿಯನ್ನು ಆಯೋಜಿಸಿದ್ದರು ಎಂದು ಪೊಲೀಸರು ಈ ಹಿಂದೆಯೇ ತಿಳಿಸಿದ್ದರು. ಇಬ್ಬರೂ ಕೂಡ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದು, ಹಲವು ಕೇಸುಗಳೂ ಇವರ ಮೇಲಿವೆ. ಈ ಘಟನೆಯ ನಂತರ ಜನರ ಒತ್ತಾಯಕ್ಕೆ ಮಣಿದು ಎಕ್ಬೊಟೆಯನ್ನು ಬಂಧಿಸಲಾಗಿದೆ. ಸುಪ್ರಿಂಕೋರ್ಟ್‌ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದರೂ ಇನ್ನೊಬ್ಬ ಆರೋಪಿ ಭಿದೆಯನ್ನು ಪೊಲೀಸರು ಈವರೆಗೂ ಬಂಧಿಸಿಲ್ಲ. ಅವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಕೂಡ ಕಸದ ಬುಟ್ಟಿ ಸೇರಿದೆ ಎನ್ನಲಾಗಿದೆ.

ಎಲ್ಗರ್‌ ಪರಿಷತ್‌ ನಡೆದ “ಡಿಸೆಂಬರ್‌ 31ರ ಮಾರನೇ ದಿನ ಜನವರಿ 1ರಂದು ಹಿಂಸಾಚಾರ ನಡೆದಿತ್ತು. ಆದರೆ ಧಾವಲೆ ಮತ್ತಿತರರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು ಜನವರಿ 8ರಂದು. ಪೊಲೀಸರು ಧಾವಲೆ ಮನೆಯ ಮೇಲೆ ದಾಳಿ ನಡೆಸಿದ್ದು ಏಪ್ರಿಲ್‌ ತಿಂಗಳಿನಲ್ಲಿ. ವಿಷಯ ಅಷ್ಟು ಗಂಭೀರವಾಗಿದ್ದರೂ ಪೊಲೀಸರೇಕೆ ಅಷ್ಟು ಸಮಯ ತೆಗೆದುಕೊಳ್ಳಬೇಕಿತ್ತು?” ಎಂದು ಪಾಟೀಲ್‌ ಪ್ರಶ್ನಿಸುತ್ತಾರೆ. “ಪೊಲೀಸರು ದಾಖಲೆಗಳನ್ನು ಹುಟ್ಟುಹಾಕುವ ಸಲುವಾಗಿ ಅಷ್ಟು ಸಮಯವನ್ನು ತೆಗೆದುಕೊಂಡಿದ್ದರು” ಎಂಬ ಅನುಮಾನಗಳನ್ನು ಆರೋಪಿಗಳ ಪರ ವಕೀಲ ಪಾಟೀಲ್ ಅನುಮಾನ ವ್ಯಕ್ತಪಡಿಸುತ್ತಾರೆ.

ಪಾಟೀಲ್‌ ಹೇಳುವ ಪ್ರಕಾರ ಈ ಐವರ ಮೇಲೆ ಕಾನೂನು ಬಾಹಿರ ಚಟುವಟಿಕೆ (ತಡೆಗಟ್ಟುವಿಕೆ) ಕಾಯ್ದೆ ಅಡಿಯಲ್ಲಿ ಕೇಸು ದಾಖಲಿಸಿರುವುದು ಅಸಮಂಜಸ ಮತ್ತು ಅವರ ಬಂಧನ ಅಕ್ರಮವಾದದೆ. “ನಿಷೇದಿತ ಪಕ್ಷಕ್ಕೆ ಸೇರಿದವು ಎನ್ನಲಾಗಿರುವ ಪತ್ರ ಹಾಗೂ ದಾಖಲೆಗಳು ಬಂಧಿತರು ಆ ಪಕ್ಷದೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನುವುದನ್ನು ಸಾಭೀತು ಪಡಿಸುವುದಿಲ್ಲ. ಪೊಲೀಸರು, ಬಂಧಿತರು ಆ ಪಕ್ಷಕ್ಕೆ ಸೇರಿದವರು ಎನ್ನುವುದಕ್ಕೆ ಯಾವುದೇ ದಾಖಲೆಗಳನ್ನು ನೀಡಿಲ್ಲ. ಹೀಗಿರುವಾಗ ಹೇಗೆ ಪೊಲೀಸರು ಅವರ ಮೇಲೆ ಕಾನೂನುಬಾಹಿರ ಚಟುವಟಿಕೆ ( ತಡೆಗಟ್ಟುವಿಕೆ) ಕಾಯ್ದೆ ದಾಖಲಿಸಿದರು?” ಎಂದು ಪ್ರಶ್ನಿಸುತ್ತಾರೆ ಪಾಟೀಲ್.

ಮುಂದುವರಿದು, “ಕಾನೂನುಬಾಹಿರ ಚಟುವಟಿಕೆ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿ ಕೇಸು ದಾಖಲಾದ ನಂತರ ಪೊಲೀಸರಿಗೆ ತನಿಖೆ ನಡೆಸುವ ಅಧಿಕಾರ ಇರುವುದಿಲ್ಲ. ಕಾನೂನಿನ ಪ್ರಕಾರ ಅವರು ಕೇಸನ್ನು ರಾಷ್ಟ್ರೀಯ ತನಿಖಾ ಏಜೆನ್ಸಿಯ ವಶಕ್ಕೆ ಒಪ್ಪಿಸಬೇಕು,” ಎನ್ನುತ್ತಾರೆ.

ರಾಷ್ಟ್ರಾದ್ಯಂತ ಹರಡಿರುವ ವಕೀಲರು ಹಾಗೂ ಹೋರಾಟಗಾರರು ಈ ಬಂಧನದ ಕುರಿತು ಸಂದೇಹ ವ್ಯಕ್ತಪಡಿಸಿದ್ದಾರೆ. ಹೆಸರನ್ನು ಬಹಿರಂಗಪಡಿಸಲು ಇಚ್ಚಿಸದ ಹೋರಾಟಗಾರರೊಬ್ಬರು ಹೇಳುವಂತೆ, “ನಿಷೇಧಕ್ಕೆ ಒಳಪಟ್ಟ ಸಂಘಟನೆಯ ವ್ಯಕ್ತಿಯೊಬ್ಬನಿಂದ ಬಂದ ಪತ್ರವು ಆರೋಪಿಗಳು ಸಂಚು ರೂಪಿಸಿದ್ದರು ಎನ್ನುವುದು ಆಧಾರ ರಹಿತವಾಗಿದೆ” ಎಂದಿದ್ದಾರೆ ಅವರು .

ಪೊಲೀಸರು ವಶಪಡಿಸಿಕೊಂಡಿರುವ ಪತ್ರವು ಎಲ್ಗರ್‌ ಪರಿಷತ್‌ಗೆ ನೀಡಿದ ಹಣದ ಬಗ್ಗೆ ಮಾತಾಡುತ್ತದೆ. ಹಾಗಾದರೆ ಅದರಲ್ಲಿ ಭಾಗಿಯಾಗಿದ್ದ ಪ್ರಕಾಶ್ ಅಂಬೇಡ್ಕರ್‌, ಜಿಗ್ನೇಶ್‌ ಮೇವಾನಿ, ಕಾಂಗ್ರೆಸ್‌ ನಾಯಕರು ಎಲ್ಲರಿಗೂ ನಕ್ಸಲರೊಂದಿಗೆ ಸಂಬಂಧ ಇರಬೇಕು. ಅವರನ್ನೂ ಸಹ ಬಂಧಿಸಬೇಕಿತ್ತು.

ಎಲ್ಗರ್ ಪರಿಷತ್‌ನ ದೃಷ್ಯ.
ಎಲ್ಗರ್ ಪರಿಷತ್‌ನ ದೃಷ್ಯ.

ಇನ್ನೂ ಹೆಚ್ಚಿನದಾಗಿ, ಪತ್ರದಲ್ಲಿ ನಿಷೇಧಿತ ಪಕ್ಷದ ಕಾರ್ಯಕರ್ತರ ಸಂಪರ್ಕ ಸಂಖ್ಯೆಗಳಿವೆ. ನಿಷೇಧಿತ ಪಕ್ಷವೊಂದು ಹೀಗೆ ಕೆಲಸ ನಿರ್ವಹಿಸುತ್ತದೆಯೇ ಎನ್ನುವ ಪ್ರಶ್ನೆಯೂ ಉದ್ಭವಿಸುತ್ತದೆ. ಪೊಲೀಸರು ಇಂತಹ ನಕಲಿ ಪತ್ರಗಳನ್ನು ಸೃಷ್ಟಿಸುವಾಗ ಇನ್ನೂ ಹೆಚ್ಚಿನ ಜಾಗರೂಕತೆಯಿಂದ ವರ್ತಿಸಬೇಕಿದೆ ಎಂದು ಅವರು ಲೇವಡಿಯಾಡಿದ್ದಾರೆ.

ಮಾಹಿತಿ ಮೂಲ: ದಿ ವೈರ್‌