ಸಂಜಯ್‌ ರಾವತ್‌
ದೇಶ

‘ಶಿವಸೇನೆ ಬಿಜೆಪಿಯ ರಾಜಕೀಯ ಶತ್ರು’: ಸಂಜಯ್‌ ರಾವತ್‌

“ಶಿವಸೇನೆ ಬಿಜೆಪಿಯ ದೊಡ್ಡ ರಾಜಕೀಯ ಶತ್ರು” ಎಂದಿರುವ ಶಿವಸೇನೆಯ ಸಂಜಯ್‌ ರಾವತ್‌, “ದೇಶಕ್ಕೆ ನರೇಂದ್ರ ಮೋದಿ- ಅಮಿತ್ ಶಾ ಜೋಡಿ ಬೇಡವಾಗಿದೆ. ಇವರಿಗಿಂತ ಕಾಂಗ್ರೆಸ್‌ ಅಥವಾ ಎಚ್.ಡಿ. ದೇವೇಗೌಡರನ್ನು ದೇಶ ಒಪ್ಪಿಕೊಳ್ಳುತ್ತದೆ” ಎಂದಿದ್ದಾರೆ.

ಬಿಜೆಪಿ ಬಗೆಗಿನ ತನ್ನ ಅಸಮಾಧಾನವನ್ನು ಹೊರಹಾಕಿರುವ ಶಿವಸೇನೆ, “ಶಿವಸೇನೆ ಬಿಜೆಪಿಯ ಅತಿ ದೊಡ್ಡ ರಾಜಕೀಯ ಶತ್ರು” ಎಂದಿದೆ.

ಮಹಾರಾಷ್ಟ್ರದ ಪಾಲ್ಗಾರ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಹೊರ ಬಿದ್ದ ಬೆನ್ನಲ್ಲೇ ಶಿವಸೇನೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. “ದೇಶದ ಜನತೆಗೆ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಜೋಡಿ ಬೇಕಾಗಿಲ್ಲ. ಕಾಂಗ್ರೆಸ್‌ ಅಥವಾ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರನ್ನು ದೇಶ ಒಪ್ಪಿಕೊಳ್ಳಬಹುದು” ಎಂದಿದ್ದಾರೆ ಶಿವಸೇನೆಯ ಸಂಸದ ಸಂಜಯ್‌ ರಾವತ್.

ಶಿವಸೇನೆಯ ಮುಖವಾಣಿ ‘ಸಾಮ್ನಾ’ದಲ್ಲಿನ ತಮ್ಮ ಅಂಕಣ ‘ರೋಕ್‌ ಠೋಕ್‌’ನಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವ ಸಂಜಯ್‌ ರಾವತ್‌, “ಶಿವ ಸೇನೆ ಭಾರತೀಯ ಜನತಾ ಪಕ್ಷದ ದೊಡ್ಡ ಶತ್ರುವಾಗಿದೆ. ಶಿವ ಸೇನೆಯ ಮೂಲ ಸಿದ್ಧಾಂತವಾದ ಹಿಂದುತ್ವ ಈಗ ಬಿಜೆಪಿಗೆ ಸಮಸ್ಯೆಯಾಗಿ ಪರಿಣಮಿಸಿದೆ” ಎಂದಿದ್ದಾರೆ.

‘ಸಾಮ್ನಾ’ ಪತ್ರಿಕೆಯ ಸಂಪಾದಕರಾಗಿರುವ ಸಂಜಯ್ ರಾವತ್‌, “ಹಿಂದೆ ಬಿಜೆಪಿಯ ಸಂಸದರಾಗಿದ್ದ ಚಿಂತಾಮನ್‌ ವನಗಾ ಅವರ ಪುತ್ರ, ಪಾಲ್ಗಾರ್‌ ಲೋಕಸಭಾ ಕ್ಷೇತ್ರದ ಶಿವಸೇನೆಯ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಬಿಜೆಪಿ ಚಿಂತಾಮನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ” ಎಂದು ಕುಟುಕಿದ್ದಾರೆ.

ಬಿಜೆಪಿಯ ಸಂಸದರಾಗಿದ್ದ ಚಿಂತಾಮನ್‌ ವನಗಾ ಈ ವರ್ಷದ ಪ್ರಾರಂಭದಲ್ಲಿ ಸಾವನ್ನಪ್ಪಿದ್ದರು. ಚಿಂತಾಮನ್‌ ಅವರ ಸಾವಿನಿಂದಾಗಿ ಪಾಲ್ಗಾರ್‌ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಬಿಜೆಪಿ ರಾಜೇಂದ್ರ ಗಾವಿತ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿತ್ತು. ರಾಜೇಂದ್ರ ಗಾವಿತ್ ವಿರುದ್ಧ ಶಿವಸೇನೆಯು ಮೃತ ಸಂಸದ ಚಿಂತಾಮನ್‌ ವನಗಾ ಪುತ್ರ ಶ್ರೀನಿವಾಸ್‌ ಅವರನ್ನು ಕಣಕ್ಕಿಳಿಸಿತ್ತು. ಆದರೆ ಪಾಲ್ಗಾರ್‌ ಕ್ಷೇತ್ರದ ಮತದಾರರು ಬಿಜೆಪಿಗೆ ಹೆಚ್ಚಿನ ಮತಗಳನ್ನು ನೀಡಿ ರಾಜೇಂದ್ರ ಅವರನ್ನು ಗೆಲ್ಲಿಸಿದ್ದರು.

ಬಿಜೆಪಿಯ ರಾಜೇಂದ್ರ ಗಾವಿತ್‌ ‌ಅವರಿಗೆ ಶಿವಸೇನೆಯ ಅಭ್ಯರ್ಥಿ ಶ್ರೀನಿವಾಸ್‌ ಪ್ರಬಲ ಪ್ರತಿಸ್ಪರ್ಧಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ಫಲಿತಾಂಶವು ಶಿವಸೇನೆಯ ನಂಬಿಕೆಯನ್ನು ಸುಳ್ಳಾಗಿಸಿದೆ.

ಶಿವಸೇನೆಯ ಅಭ್ಯರ್ಥಿಯ ಸೋಲು ಸಂಜಯ್‌ ರಾವತ್‌ರಿಂದ ಈ ಮಾತುಗಳನ್ನು ಆಡಿಸಿದಂತಿದೆ. “ಶಿವಸೇನೆಯೊಟ್ಟಿಗೆ ಅಧಿಕಾರದಲ್ಲಿದ್ದು, ತಮ್ಮ ಹಣ ಮತ್ತು ಅಧಿಕಾರವನ್ನು ಬಳಸಿ ಶಿವಸೇನೆಯನ್ನು ದುರ್ಬಲಗೊಳಿಸುವುದು ಬಿಜೆಪಿಯ ಕುತಂತ್ರವಾಗಿ” ಎಂದು ಸಂಜಯ್‌ ರಾವತ್‌ ಜರೆದಿದ್ದಾರೆ.

ಪಾಲ್ಗಾರ್‌ನಲ್ಲಿ ಶಿವಸೇನೆಯ ಅಭ್ಯರ್ಥಿ ಸೋತು ಬಿಜೆಪಿ ಜಯಗಳಿಸಲು ಮತಯಂತ್ರಗಳಲ್ಲಿನ ಮೋಸವೇ ಕಾರಣವಾಗಿದೆ. ಇದು ಯಾವುದೇ ಹಗರಣಕ್ಕಿಂತ ಕಡಿಮೆ ಅಲ್ಲ ಎಂದು ಸಂಜಯ್‌ ರಾವತ್‌ ದೂಷಿಸಿದ್ದಾರೆ.

“ಮತದಾನದ ದಿನ (ಮೇ 28) ಮತ ಯಂತ್ರಗಳು ಸರಿಯಾಗಿ ಕಾರ್ಯ ನಿರ್ವಹಿಸದಿರುವುದರ ಕುರಿತು ಸುಮಾರು 100 ಮತ ಕೇಂದ್ರಗಳಿಂದ ದೂರು ಕೇಳಿಬಂದಿತ್ತು. ಮತದಾನದ ಅವಧಿಯನ್ನು ವಿಸ್ತರಿಸಬೇಕು ಎಂಬ ಶಿವಸೇನೆಯ ಮನವಿಯನ್ನು ಚುನಾವಣಾ ಆಯೋಗ ತಳ್ಳಿಹಾಕಿತ್ತು. ಆದರೆ ಬಿಜೆಪಿ ಇದೇ ಮನವಿಯನ್ನು ಆಯೋಗದ ಮುಂದಿಟ್ಟಾಗ, ಚುನಾವಣಾ ಅಧಿಕಾರಿಗಳು ಅವಧಿಯ ವಿಸ್ತರಣೆಗೆ ಅಸ್ತು ಎಂದಿದ್ದರು,” ಎಂದು ಸಂಜಯ್‌ ರಾವತ್‌ ಚುನಾವಣಾ ಆಯೋಗದ ಮೇಲೆ ಗಂಭೀರ ಆರೋಪವನ್ನು ಮಾಡಿದ್ದಾರೆ.

ಸಂಜಯ್‌ ರಾವತ್‌ ಹೇಳುವ ಪ್ರಕಾರ, ವಿಸ್ತರಣೆಗೊಂಡ ಅವಧಿಯಲ್ಲಿ ಪ್ರತಿ ಮತಗಟ್ಟೆಯಲ್ಲಿ ಅಂದಾಜು 100 ಮತಗಳು ಬಿಜೆಪಿಯ ಪರವಾಗಿ ಬಿದ್ದಿದ್ದವು. ಒಟ್ಟಾರೆಯಾಗಿ ಹಲವು ಸಾವಿರಗಳಷ್ಟು ಹೆಚ್ಚಿನ ಮತಗಳನ್ನು ಬಿಜೆಪಿ ಗಳಿಸಿಕೊಂಡಿತು. ಆದರೆ ಸುಮಾರು 60,000ದಷ್ಟು ಮತದಾರರು ಮತ ಚಲಾಯಿಸಲಾಗಿಲ್ಲ.

“ಮತದಾನ ಮುಗಿದ ಬಳಿಕ ಜಿಲ್ಲಾಧಿಕಾರಿಗಳು ಶೇ.46ರಷ್ಟು ಮತದಾನವಾಗಿದೆ ಎಂದಿದ್ದರು. ಆದರೆ ಮಾರನೇ ದಿನ ಶೇಕಡವಾರು ಮತದಾನ ಶೇ.56ನ್ನು ಮುಟ್ಟಿತ್ತು. ರಾತ್ರೋರಾತ್ರಿ ಸುಮಾರು 82,000 ಮತಗಳು ಹೆಚ್ಚಾಗಿದ್ದವು,” ಎಂದು ಸಂಜಯ್‌ ರಾವತ್‌ ಹೇಳಿದ್ದಾರೆ.

ಭಾರತೀಯ ಜನತಾ ಪಾರ್ಟಿ ಪ್ರಮುಖ ಸಾಂವಿಧಾನಿಕ ಹುದ್ದೆಗಳಿಗೆ ಆರ್‌ಎಸ್‌ಎಸ್‌ನೊಂದಿಗೆ ಸಂಪರ್ಕ ಹೊಂದಿರುವವರನ್ನು ನೇಮಿಸಿದೆ. ಈ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದೆ ಎಂದು ಸಂಜಯ್‌ ರಾವತ್‌ ಆರೋಪಿಸಿದ್ದಾರೆ.

ಮುಂದುವರೆದು, ಇತರೆ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿರುವ ಚುನಾವಣೆಗಳನ್ನು ಸಂಜಯ್‌ ರಾವತ್‌ ಉಲ್ಲೇಖಿಸಿದ್ದಾರೆ. “ ಬಿಜೆಪಿ ಪಾಲ್ಗಾರ್‌ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದೆ. ಆದರೆ ಹಲವಾರು ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಸೋಲನ್ನಪ್ಪಿದೆ. ದೇಶದ ಹಲವಾರು ಭಾಗಗಳಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎನ್ನುವುದರ ಸಂಕೇತವಿದು,” ಎಂದು ರಾವತ್ ಹೇಳಿದ್ದಾರೆ.

ಈ ಉಪ ಚುನಾವಣೆಯ ಫಲಿತಾಂಶ ಬಿಜೆಪಿಯ ಕುಸಿತದ ಪ್ರಾರಂಭಿಕ ಹಂತ ಎಂದಿರುವ ಸಂಜಯ್‌ ರಾವತ್‌, “ದೇಶದ ಜನರು ಕಾಂಗ್ರೆಸ್‌ ಅಥವಾ ದೇವೇಗೌಡರನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ತಲುಪಿದ್ದಾರೆ, ಆದರೆ ಮೋದಿ ಮತ್ತು ಅಮಿತ್‌ ಶಾ ಅವರ ಜೋಡಿಯನ್ನು ಒಪ್ಪಲು ಸಿದ್ಧವಿಲ್ಲ,” ಎಂದಿದ್ದಾರೆ.