ರಸ್ತೆಗೆ ಚೆಲ್ಲಿದ ಹಾಲು, ತರಕಾರಿ; ಅನ್ನದಾತನ ಸಿಟ್ಟಿಗೆ ಕಾರಣವೇನು?
ದೇಶ

ರಸ್ತೆಗೆ ಚೆಲ್ಲಿದ ಹಾಲು, ತರಕಾರಿ; ಅನ್ನದಾತನ ಸಿಟ್ಟಿಗೆ ಕಾರಣವೇನು?

ಅನ್ನದಾತನ ಸಿಟ್ಟು ಈಗ ರಸ್ತೆಗಳಲ್ಲಿ ಕಾಣುತ್ತಿದೆ. ರೈತರು ಹಾಲು, ತರಕಾರಿ ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಸಚಿವರು ಈ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ.

ದೇಶದ ರೈತರು ತರಕಾರಿ, ಹಾಲನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಉತ್ತರ ಭಾರತದಲ್ಲಿ ರೈತರ ಪ್ರತಿಭಟನೆಯ ಬಿಸಿ ನಾಗರಿಕರಿಗೆ ತಟ್ಟುತ್ತಿದೆ. ದೆಹಲಿ ಸೇರಿದಂತೆ ಹಲವೆಡೆ ತರಕಾರಿಯ ಬೆಲೆ ಏರುತ್ತಿದೆ. ಹಾಲಿನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹಾಲು, ತರಕಾರಿ ಪೂರೈಕೆ ಬಂದ್‌ ಮಾಡುವ ಮೂಲಕ ಉತ್ತರ ಭಾರತದ ರೈತರು ತಮ್ಮ ಸಿಟ್ಟನ್ನು ಹೊರಹಾಕುತ್ತಿದ್ದಾರೆ.

ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ರಾಜ್ಯ ಮತ್ತು ಕೇಂದ್ರ ಸರಕಾರ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ, ಸರಕಾರ ವೈಜ್ಞಾನಿಕ ಬೆಂಬಲ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿ ಉತ್ತರ ಭಾರತದ ರೈತರು ತರಕಾರಿ, ಹಾಲು ಪೂರೈಕೆ ನಿಲ್ಲಿಸಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಶುಕ್ರವಾರದಿಂದ (ಜೂನ್‌1) 10 ದಿನಗಳ ಕಾಲ ತರಕಾರಿ, ಹಾಲು ಪೂರೈಕೆ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ರೈತರು ಹೇಳಿದ್ದಾರೆ. ಪ್ರತಿಭಟನೆ ಭಾನುವಾರಕ್ಕೆ ಮೂರನೇ ದಿನಕ್ಕೆ ಕಾಲಿಟ್ಟಿದ್ದರೂ ರೈತರ ಕಷ್ಟ ಆಲಿಸಲು ಸರಕಾರ ಮನಸ್ಸು ಮಾಡಿಲ್ಲ. ಬದಲಾಗಿ ಸಚಿವರು ರೈತರ ಸಮಸ್ಯೆಯನ್ನು ಲಘುವಾಗಿ ನೋಡುತ್ತಿದ್ದಾರೆ.

“ರೈತರು ಮಾಧ್ಯಮಗಳ ಗಮನ ಸೆಳೆಯಲು ತರಕಾರಿ, ಹಾಲು ರಸ್ತೆಗೆ ಚೆಲ್ಲುತ್ತಿದ್ದಾರೆ” ಎಂದು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ಹೇಳಿದ್ದಾರೆ. ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅವರ ಪ್ರಕಾರ ರೈತರ ಪ್ರತಿಭಟನೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾದ ವಿಷಯವೇ ಅಲ್ಲ. “ಇದು (ರೈತರ ಪ್ರತಿಭಟನೆ) ದೊಡ್ಡ ವಿಚಾರವಲ್ಲ” ಎಂದು ಖಟ್ಟರ್‌ ಹೇಳಿದ್ದಾರೆ.

ರಾಧಾ ಮೋಹನ್‌ ಸಿಂಗ್ ಮತ್ತು ಖಟ್ಟರ್‌ ಅವರ ಹೇಳಿಕೆಗಳಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಲವು ರೈತ ಮುಖಂಡರು ಈ ಇಬ್ಬರ ಹೇಳಿಕೆಯನ್ನು ಖಂಡಿಸಿದ್ದಾರೆ. ರೈತರ ಬಗ್ಗೆ ಲಘುವಾಗಿ ಮಾತನಾಡಿರುವ ಈ ಇಬ್ಬರು ಅಧಿಕಾರದಲ್ಲಿರಲು ಅರ್ಹರಲ್ಲ ಎಂದು ರೈತರು ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ.

ದೇಶದ ಹಲವು ಕಡೆಗಳಲ್ಲಿ ತರಕಾರಿ ಬೆಲೆ ಶೇಕಡ 70ರಿಂದ 80ರಷ್ಟು ಹೆಚ್ಚಾಗಿದೆ. ರೈತರ ಪ್ರತಿಭಟನೆಯ ಬಿಸಿ ಕರ್ನಾಟಕಕ್ಕೆ ಇನ್ನೂ ಸರಿಯಾಗಿ ತಟ್ಟಿಲ್ಲ. ರೈತರು ಘೋಷಿಸಿರುವ ಪ್ರತಿಭಟನೆಯ ಕಾಲಾವಧಿ 10 ದಿನಗಳಲ್ಲಿ ಮೂರು ದಿನ ಉರುಳಿದೆ. ಇನ್ನು ಏಳು ದಿನಗಳಲ್ಲಿ ರೈತರ ಸಮಸ್ಯೆಗೆ ಸರಕಾರ ಸ್ಪಂದಿಸದಿದ್ದರೆ ತರಕಾರಿ, ಹಾಲಿನ ಅಭಾವ ಉಂಟಾಗಲಿದೆ.