ಹತ್ತು ದಿನಗಳ ಕಾಲ ರೈತರ ಮುಷ್ಕರ; ಉತ್ತರ ಭಾರತೀಯರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ
ದೇಶ

ಹತ್ತು ದಿನಗಳ ಕಾಲ ರೈತರ ಮುಷ್ಕರ; ಉತ್ತರ ಭಾರತೀಯರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ

ರೈತರ ಹೋರಾಟ ಪ್ರಾರಂಭಗೊಂಡ ದಿನವೇ ದೇಶದ ಹಲವಾರು ರಾಜ್ಯಗಳಲ್ಲಿ ತಳಮಳವೂ ಆರಂಭಗೊಂಡಿದೆ. ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್‌, ಮಧ್ಯ ಪ್ರದೇಶ ಸೇರಿದಂತೆ ಇತರೆ ರಾಜ್ಯಗಳಲ್ಲಿ ರೈತರು ಬೀದಿಗಿಳಿದು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.

ಭಾರತದ ಹಲವಾರು ರಾಜ್ಯಗಳ ರೈತರು 10 ದಿನಗಳ ಮುಷ್ಕರಕ್ಕೆ ಮುಂದಾಗಿದ್ದಾರೆ. ಜೂನ್‌ 1ರಿಂದ ಆರಂಭಗೊಂಡು 10ನೇ ತಾರೀಖಿನವರೆಗೆ ಬಂದ್‌ ನಡೆಯಲಿದೆ. ಬಂದ್‌ನ ಮೊದಲನೇ ದಿನವೇ ಹಲವು ರಾಜ್ಯಗಳ ಮಾರುಕಟ್ಟೆಗಳಿಗೆ ರೈತರ ಹೋರಾಟದ ಬಿಸಿ ತಟ್ಟಿದೆ.

ರೈತರ ಹೋರಾಟ ಪ್ರಾರಂಭಗೊಂಡ ದಿನವೇ ದೇಶದ ಹಲವಾರು ರಾಜ್ಯಗಳಲ್ಲಿ ತಳಮಳ ಆರಂಭಗೊಂಡಿದೆ. ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್‌, ಮಧ್ಯ ಪ್ರದೇಶ ಸೇರಿದಂತೆ ಇತರೆ ರಾಜ್ಯಗಳಲ್ಲಿ ರೈತರು ಬೀದಿಗಿಳಿದು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ದೇಶದ ಹಲವಾರು ಮುಖ್ಯ ಮಾರುಕಟ್ಟೆಗಳ ತರಕಾರಿ ಮತ್ತು ಹಾಲು ಸರಬರಾಜಿನಲ್ಲಿ ವ್ಯತ್ಯಯ ಕಂಡುಬಂದಿದೆ. ಕಡಿಮೆ ಪ್ರಮಾಣದ ತರಕಾರಿಗಳಷ್ಟೇ ಮಾರುಕಟ್ಟೆಗೆ ಬಂದಿರುವುದರಿಂದ ಬೆಲೆ ಏರಿಕೆಯ ಬಿಸಿಯೂ ಕೂಡ ನಾಗರಿಕರನ್ನು ತಟ್ಟಿದೆ.

ರೈತರ ರಾಷ್ಟ್ರ ಮಟ್ಟದ ಮುಷ್ಕರಕ್ಕೆ ಕರೆ ನೀಡಿರುವುದು ರಾಷ್ಟ್ರೀಯ ಕಿಸಾನ್‌ ಮಹಾಸಂಘ. ಸಂಪೂರ್ಣ ಸಾಲಮನ್ನಾ, ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ, ಒಂದು ಲೀಟರ್‌ ಹಾಲಿಗೆ 50 ರೂಪಾಯಿಗಳ ನಿಗದಿ ಸೇರಿದಂತೆ ಇನ್ನು ಹಲವು ಬೇಡಿಕೆಗಳನ್ನು ಕೇಂದ್ರ ಸರಕಾರದ ಮುಂದಿಟ್ಟು, ರಾಷ್ಟ್ರೀಯ ಕಿಸಾನ್‌ ಮಹಾಸಂಘ ಹೋರಾಟವನ್ನು ಆರಂಭಿಸಿದೆ.

Also read: ಜೂ. 1ರಿಂದ ದೇಶದ ಎಲ್ಲಾ ನಗರಗಳಿಗೆ ರೈತರ ಉತ್ಪಾದನೆ ಪೂರೈಕೆ ಸ್ಥಗಿತ?

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಹರಾಜು ಪ್ರಕ್ರಿಯೆ ನಡೆದಿಲ್ಲ. ಅತೀ ಕಡಿಮೆ ಪ್ರಮಾಣದ ತರಕಾರಿಗಳು ಮಾರುಕಟ್ಟೆಯನ್ನು ಪ್ರವೇಶಿಸಿವೆ. ದೇಶದ ಅತಿದೊಡ್ಡ ಈರುಳ್ಳಿಯ ಆನ್‌ಲೈನ್‌ ಹೋಲ್‌ಸೇಲ್‌ ಮಾರುಕಟ್ಟೆ ಎನಿಸಿಕೊಂಡಿರುವ ಲಸಲ್ಗಾಂವ್‌ ಕೃಷಿ ಉತ್ಪನ್ನ ಮಾರುಕಟ್ಟೆಗೂ ಕೂಡ ರೈತರ ಮುಷ್ಕರದ ಬಿಸಿ ತಟ್ಟಿದೆ. ಹಲವಾರು ರೈತರು ಈರುಳ್ಳಿ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ.

“ಗುರುವಾರ ಮಾರುಕಟ್ಟೆಯಲ್ಲಿ ಸುಮಾರು 1500 ಕ್ವಿಂಟಾಲ್ ಈರುಳ್ಳಿ ಹರಾಜಾಗಿತ್ತು. ಆದರೆ ಶುಕ್ರವಾರ ಕೇವಲ 300 ಕ್ವಿಂಟಾಲ್‌ ಈರುಳ್ಳಿಯಷ್ಟೇ ಹರಾಜಾಗಿದೆ,” ಎಂದು ಲಾಸಾಲ್ಗಾಂವ್‌ ಮಾರುಕಟ್ಟೆಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಜಸ್ಥಾನದಲ್ಲಿ ರೈತರು ಪ್ರತಿಭಟನೆ ನಡೆಸಿದ್ದು, ತರಕಾರಿ ಮತ್ತು ಹಾಲನ್ನು ಸಾಗಿಸುತ್ತಿದ್ದ ಟ್ರಕ್‌ಗಳನ್ನು ತಡೆಹಿಡಿದು ಹೋರಾಟ ಮಾಡಿದ್ದಾರೆ. ಶ್ರಿಗಂಗಾನಗರ, ಹನುಮಾನ್‌ಗಢ, ಜುಂಜುನು, ಜೈಪುರ, ಸಿಕಾರ್‌ ನಗರಗಳು ಸೇರಿದಂತೆ ಹಲವಾರು ಭಾಗಗಳಲ್ಲಿ ರೈತರು ಹಾಲನ್ನು ರಸ್ತೆಗೆ ಚೆಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಜೈಪುರದ ಚೋಮು ಸೇರಿದಂತೆ ಹಲವು ಪ್ರದೇಶಗಳಲ್ಲಿ ಒತ್ತಾಯಪೂರ್ವಕವಾಗಿ ಮಾರುಕಟ್ಟೆಗಳನ್ನು ಮುಚ್ಚಿಸಿದ್ದಾರೆ.

‘ಟೈಮ್ಸ್‌ ಆಫ್‌ ಇಂಡಿಯಾ’ ಸುದ್ದಿ ವಾಹಿನಿಯ ಜತೆ ದೂರವಾಣಿಯ ಮೂಲಕ ಸಂಭಾಷಣೆ ನಡೆಸಿದ ರಾಷ್ಟ್ರೀಯ ಕಿಸಾನ್‌ ಸಂಘಟನೆಯ ಸದಸ್ಯ ಸಂತ್ವೀರ್‌ ಸಿಂಗ್‌, ಉತ್ತರ ರಾಜಸ್ತಾನ ಭಾಗದಲ್ಲಿ ರೈತರ ಹೋರಾಟ ಯಶಸ್ವಿಯಾಗಿ ನಡೆದಿದೆ ಎಂದಿದ್ದಾರೆ. ರಾಜಸ್ಥಾನದ ಪೊಲೀಸರು ಎಲ್ಲಿಯೂ ಕೂಡ ಅಹಿತಕರ ಘಟನೆಗಳು ಜರುಗಿಲ್ಲ ಎಂದು ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಧ್ಯ ಪ್ರದೇಶದಲ್ಲೂ ಕೂಡ ಮೊದಲ ದಿನದ ಪ್ರತಿಭಟನೆ ಶಾಂತಿಯುತವಾಗಿ ನಡೆದಿದೆ. ಅಗತ್ಯವಿರುವ ತರಕಾರಿಯ ಪೈಕಿ ಶೇ.30ರಷ್ಟು ಮಾತ್ರ ಮಾರುಕಟ್ಟೆಗೆ ಬಂದಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಕಡಿಮೆ ಪ್ರಮಾಣದ ಉತ್ಪನ್ನಗಳು ಮಾರುಕಟ್ಟೆಯಲ್ಲಿರುವರಿಂದ ಬೆಲೆಯೂ ಕೂಡ ಗಗನಕ್ಕೇರಿದೆ.

ಬೋಪಾಲ್‌ ನಗರದಿಂದ ಸುಮಾರು 180 ಕಿಲೋ ಮೀಟರ್‌ ದೂರದಲ್ಲಿರುವ ಕೊಡರೋಟಿ ಗ್ರಾಮದ ಬಳಿ ರೈತರು ಸುಮಾರು 100 ಲೀಟರ್‌ನಷ್ಟು ಹಾಲನ್ನು ರಸ್ತೆಗೆ ಸುರಿದಿದ್ದಾರೆ. ಪ್ರತಿಭಟನಾಕಾರರು ಸ್ಥಳಕ್ಕೆ ಬಂದಾಗ ಕೆಲವು ರೈತರು ಹಾಲು ಮಾರಾಟದಲ್ಲಿ ತೊಡಗಿದ್ದರು. ಉದ್ರಿಕ್ತಗೊಂಡ ಪ್ರತಿಭಟನಾಕಾರರರು ರೈತರಿಂದ ಹಾಲನ್ನು ಕಸಿದು ರಸ್ತೆಗೆ ಚಲ್ಲಿದ್ದಾರೆ ಎನ್ನಲಾಗಿದೆ.

ಪಂಜಾಬ್‌ ರಾಜ್ಯದ ಜಲಂದರ್‌ನಲ್ಲಿ ಡೊಬಾ ಕಿಸಾನ್‌ ಸಂಘರ್ಷ ಸಮಿತಿಯ ಅಡಿಯಲ್ಲಿ ಪ್ರತಿಭಟನಾ ನಿರತ ರೈತರು ತರಕಾರಿ ಮಾರುಕಟ್ಟೆ ಮತ್ತು ಇನ್ನಿತರ ಮಾರಾಟ ಪ್ರದೇಶಗಳಿಗೆ ತೆರಳಿ, ಸ್ಥಳದಲ್ಲಿದ್ದ ರೈತರಿಗೆ 10 ದಿನಗಳ ಕಾಲ ತರಕಾರಿ, ಮೇವು ಅಥವಾ ಹಾಲು ಯಾವುದನ್ನೂ ಕೂಡ ಮಾರುಕಟ್ಟೆಗೆ ತರಬೇಡಿ ಎಂದು ತಿಳಿಸಿದ್ದಾರೆ.

ಮುಷ್ಕರ ಆರಂಭಗೊಂಡ ಮೊದಲ ದಿನವೇ ದೇಶದ ಹಲವು ರಾಜ್ಯಗಳ ಜನರು ಕಡಿಮೆ ದಾಸ್ತನು ಮತ್ತು ಹೆಚ್ಚಿನ ಬೆಲೆಗಳ ಕಾರಣದಿಂದಾಗಿ ತಳಮಳಕ್ಕೆ ಒಳಗಾಗಿದ್ದಾರೆ. ಇನ್ನೂ 9 ದಿನಗಳ ಕಾಲ ರೈತರ ಹೋರಾಟ ಮುಂದುವರಿಯಲಿದ್ದು, ಕೇವಲ ಉತ್ತರ ಭಾರತದಲ್ಲಷ್ಟೇ ತೀವ್ರತೆಯನ್ನು ಪಡೆದುಕೊಂಡಿರುವ ಹೋರಾಟ ದೇಶದ ಇತರೆ ಭಾಗಗಳಿಗೂ ಹಬ್ಬಲಿದೆಯೇ ಎನ್ನುವುದನ್ನು ಕಾದು ನೊಡಬೇಕಿದೆ.