ಶಿಮ್ಲಾದಲ್ಲಿ ನೀರಿನ ಬವಣೆ; ಪೊಲೀಸ್‌ ಕಾವಲಿನಲ್ಲಿ ನೀರು ಪೂರೈಕೆ!
ದೇಶ

ಶಿಮ್ಲಾದಲ್ಲಿ ನೀರಿನ ಬವಣೆ; ಪೊಲೀಸ್‌ ಕಾವಲಿನಲ್ಲಿ ನೀರು ಪೂರೈಕೆ!

ರಾಜಸ್ತಾನ, ಮಹಾರಾಷ್ಟ್ರ ಕೊನೆಗೆ ಕರ್ನಾಟಕದಲ್ಲಿ ನೀರಿನ ಬವಣೆ ಎಂದರೆ ನಂಬಬಹುದು. ಆದರೆ, ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನೀರಿನ ಬವಣೆ ಎಂದರೆ ನಂಬುವುದು ಕಷ್ಟ. ಆದರೆ, ನಂಬಲೇಬೇಕಾದ ಸ್ಥಿತಿ ಬಂದಿದೆ, ಕಾರಣ ಇಲ್ಲಿದೆ.

ಸದಾ ಹಿಮದಿಂದ ಕಂಗೊಳಿಸುತ್ತ, ಲಕ್ಷಾಂತರ ಜನ ಪ್ರವಾಸಿಗರನ್ನು ಸೆಳೆಯುವ ಶಿಮ್ಲಾದಲ್ಲಿ ಈಗ ನೀರಿನ ಬವಣೆ ತಲೆದೋರಿದೆ. ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ಶಿಮ್ಲಾದಲ್ಲಿ ನಿರ್ಮಾಣವಾಗಿದೆ. ನೀರಿಲ್ಲದ ಕಾರಣ ಶಿಮ್ಲಾ ಈಗ ಪ್ರವಾಸಿಗರಿಗೆ ‘ಬರಬೇಡಿ’ ಎನ್ನುತ್ತಿದೆ.

ಶಿಮ್ಲಾದಲ್ಲಿ ಸಾರ್ವಜನಿಕರಿಗೆ ಪೊಲೀಸ್‌ ಭದ್ರತೆಯಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಶಿಮ್ಲಾದಲ್ಲಿ ನೀರಿನ ಬವಣೆ ಎಂತಹದ್ದು ಎನ್ನುವುದನ್ನು ಇದೇ ತಿಳಿಸುತ್ತದೆ. ಶಿಮ್ಲಾದಲ್ಲಿ ಈಗ 70 ಜನ ಪೊಲೀಸರು ನೀರಿನ ನಿಗಾ ವಹಿಸಿದ್ದಾರೆ. ಪರ್ವತ ಪ್ರದೇಶದಲ್ಲಿ ಉಂಟಾಗಿರುವ ನೀರಿನ ಕೊರತೆಯು ಜನ ಸಾಮಾನ್ಯರ ಮಧ್ಯೆ ಜಗಳ ತರದಂತೆ ಕಾಯುವುದು ಅವರ ಕೆಲಸ.

ಶಿಮ್ಲಾದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಹಿಮಮಳೆಯಾಗದೇ ಇರುವುದು ನೀರಿನ ಸಮಸ್ಯೆ ಹೆಚ್ಚಾಗಲು ಕಾರಣ ಎನ್ನಲಾಗಿದೆ.

“ಒಂದು ಬಾಟೆಲ್‌ ನೀರಿನ ಬೆಲೆ ಈಗ ಶೇ.50ರಿಂದ 60ರಷ್ಟು ಏರಿಕೆಯಾಗಿದೆ. ಮುಂಚೆ ದಿನವೊಂದಕ್ಕೆ ನೀರಿನ ಬಾಟೆಲ್‌ಗಳ ಸುಮಾರು 400 ಪ್ಯಾಕ್‌ಗಳನ್ನು ಮಾರಾಟ ಮಾಡುತ್ತಿದ್ದೆ. ಈಗ ದಿನಕ್ಕೆ 700ಕ್ಕೂ ಹೆಚ್ಚು ನೀರು ಬಾಟೆಲ್‌ಗಳ ಪ್ಯಾಕ್‌ಗಳಿಗೆ ಬೇಡಿಕೆಯಿದೆ” ಎನ್ನುತ್ತಾರೆ ಶಿಮ್ಲಾದ ಮಿನರಲ್‌ ವಾಟರ್‌ ವೋಲ್‌ಸೇಲ್‌ ವ್ಯಾಪಾರಿ ಜಸ್ವೀರ್‌ ಸಿಂಗ್‌.

ನೀರಿನ ಕೊರತೆಯ ಬೆನ್ನಲ್ಲಿ ಹಿಮಾಚಲ ಪ್ರದೇಶದ ಪ್ರವಾಸೋದ್ಯಮವೂ ಕೂಡ ಕುಂಟಿತಗೊಂಡಿದೆ. ಲಕ್ಷಾಂತರ ಜನ ಪ್ರವಾಸಿಗಳು ನೀರಿನ ಬವಣೆಗೆ ಹೆದರಿ ತಮ್ಮ ಪ್ರವಾಸ ರದ್ದುಪಡಿಸಿದ್ದಾರೆ. ಶಿಮ್ಲಾದ ನೀರಿನ ಕೊರತೆ ಫೇಸ್‌ಬುಕ್‌, ವಾಟ್ಸಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲೂ ಸದ್ದು ಮಾಡುತ್ತಿದೆ. ಪ್ರವಾಸಿಗರು ಶಿಮ್ಲಾ ಕಡೆಗೆ ಬರಲು ಹಿಂದೇಟು ಹಾಕುತ್ತಿರುವುದರಿಂದ ಪ್ರವಾಸಿಗರನ್ನೇ ನಂಬಿಕೊಂಡಿದ್ದ ಹಲವಾರು ಉದ್ಯಮಗಳು ನೆಲಕಚ್ಚುತ್ತಿವೆ. ಹೋಟೆಲ್‌ ಉದ್ಯಮವೂ ಕೂಡ ಇದರಿಂದ ಹೊರತೇನಾಗಿಲ್ಲ.

ಶಿಮ್ಲಾದಲ್ಲಿ ನೀರಿನ ಬವಣೆ; ಪೊಲೀಸ್‌ ಕಾವಲಿನಲ್ಲಿ ನೀರು ಪೂರೈಕೆ!

ನೀರಿನ ಬವಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಹಿಮಾಚಲ ಪ್ರದೇಶದ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ದಾಖಲಿಸಿಕೊಂಡಿದೆ. ಹಿಮಾಚಲ ಪ್ರದೇಶ ರಾಜ್ಯ ಸರಕಾರ ಮತ್ತು ಶಿಮ್ಲಾ ನಗರಾಡಳಿತಕ್ಕೆ ಕೆಲವು ಸೂಚನೆಗಳನ್ನು ನೀಡಿದ್ದು, ಕೆಲವು ದಿನಗಳ ಕಾಲ ಕಟ್ಟಡ ನಿರ್ಮಾಣಗಳಿಗೆ ನೀರು ಪೂರೈಕೆ ಮಾಡದಿರುವಂತೆ ತಿಳಿಸಿದೆ.

ಕಾರುಗಳನ್ನು ತೊಳೆಯಲು ಸಹ ನೀರು ನೀಡದಂತೆ ಕೋರ್ಟ್‌ ಆದೇಶಿಸಿದ್ದು, ಯಾರಿಗೂ ಕೂಡ ಟ್ಯಾಂಕರ್‌ಗಳಲ್ಲಿ ನೀರು ಮಾರಾಟ ಮಾಡದಂತೆ ಸೂಚಿಸಿದೆ. ಮಂತ್ರಿಗಳು, ಸಚಿವರು, ನ್ಯಾಯಾಧೀಶರು ಯಾರಾದರೂ ಸರಿ, ಯಾರ ಮನೆಗಳಿಗೂ ಕೂಡ ನೀರಿನ ಟ್ಯಾಂಕರ್‌ಗಳು ಹೋಗಕೂಡದು ಎಂದಿದೆ ಕೋರ್ಟ್‌. ಕೇವಲ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರಷ್ಟೇ ಈ ಪಟ್ಟಿಯಿಂದ ಹೊರಗುಳಿದಿದ್ದಾರೆ.

ಕಡ್ಡಾಯವಾಗಿ ನೀರು ಉಳಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಹೈಕೋರ್ಟ್ ತಿಳಿಸಿದ್ದು, ನೀರಿನ ಶುಲ್ಕವನ್ನು ಕಟ್ಟದಿರುವ ಹೋಟೆಲ್‌ಗಳಿಗೆ ಇನ್ನೆರಡು ದಿನದೊಳಗೆ ನೀರು ಪೂರೈಕೆ ನಿಲ್ಲಿಸುವಂತೆ ಆದೇಶಿಸಿದೆ.

ಜೂನ್‌ 1ರಿಂದ 5ರವರೆಗೂ ಶಿಮ್ಲಾದಲ್ಲಿ ಲಕ್ಷಾಂತರ ಜನರನ್ನು ಆಕರ್ಷಿಸುವ ‘ಅಂತರರಾಷ್ಟ್ರೀಯ ಶಿಮ್ಲಾ ಬೇಸಿಗೆ ಉತ್ಸವ’ ನಡೆಯಬೇಕಿತ್ತು. ಆದರೆ ತಲೆದೋರಿರುವ ನೀರನ ಅಭಾವದ ಕಾರಣದಿಂದಾಗಿ ಉತ್ಸವವನ್ನು ಮುಂದೂಡಲಾಗಿದೆ.

“ಈಗಾಗಲೇ ಕೇಂದ್ರ ಜಲ ಸಂಪನ್ಮೂಲ ಇಲಾಖೆಗೆ ಈ ಕುರಿತ ವರದಿಯನ್ನು ಕಳುಹಿಸಲಾಗಿದೆ. ರಾಜ್ಯದ ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ಉನ್ನತ ಮಟ್ಟದ ಸಭೆಗಳನ್ನು ನಡೆಸಿ, ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನದಲ್ಲಿದ್ದಾರೆ” ಎಂದು ಹಿಮಾಚಲ ಪ್ರದೇಶದ ಮುಖ್ಯ ಕಾರ್ಯದರ್ಶಿ ವಿನೀತ್‌ ಚೌಧರಿ ತಿಳಿಸಿದ್ದಾರೆ.

ಒಂದೆಡೆ ಸರಕಾರ ಪರಿಸ್ಥಿತಿಯನ್ನು ನಿಭಾಯಿಸಲು ಹೆಣಗಾಡುತ್ತಿದ್ದರೆ, ಮತ್ತೊಂದೆಡೆ ವಿರೋಧ ಪಕ್ಷ ಕಾಂಗ್ರೆಸ್‌ನ ಕಾರ್ಯಕರ್ತರು ಸೇರಿದಂತೆ ಸಹಸ್ರಾರು ಜನ ಬೀದಿಗಿಳಿದಿದ್ದಾರೆ. ಹಲವಾರು ರಸ್ತೆಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯ ಜನರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಿಟ್ಟನ್ನು ಹೊರಹಾಕುತ್ತಿದ್ದಾರೆ.

ಶಿಮ್ಲಾದಲ್ಲಿ ನೀರಿನ ಬವಣೆ; ಪೊಲೀಸ್‌ ಕಾವಲಿನಲ್ಲಿ ನೀರು ಪೂರೈಕೆ!

ಶಿಮ್ಲಾದ ಒಟ್ಟು ಜನಸಂಖ್ಯೆ 1.75 ಲಕ್ಷ. ಆದರೆ ಬೇಸಿಗೆ ಸಮಯದಲ್ಲಿ ಈ ಸಂಖ್ಯೆ 2.5 ಲಕ್ಷವನ್ನು ದಾಟುತ್ತದೆ. ಈ ಸಮಯದಲ್ಲಿಯೇ ಹೆಚ್ಚಾಗಿ ಪ್ರವಾಸಿಗರು ಬರುವುದು ಈ ಜನಸಂಖ್ಯೆಯ ಹೆಚ್ಚಳಕ್ಕೆ ಕಾರಣ. ನೀರಿನ ಬವಣೆ ಹೆಚ್ಚಾಗಿರುವ ಬೆನ್ನಲ್ಲಿ ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಶಿಮ್ಲಾಗೆ ಬರಬೇಡಿ ಎಂದು ಪ್ರವಾಸಿಗರಿಗೆ ಸೂಚಿಸುತ್ತಿದ್ದಾರೆ.

ಸಧ್ಯಕ್ಕೆ ನಗರದ ಸಾರ್ವಜನಿಕರಿಗೆ 27 ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಒಟ್ಟು 63 ಸ್ಥಳಗಳಲ್ಲಿ 2.25 ಲಕ್ಷ ಲೀಟರ್‌ ನೀರನ್ನು ಪೂರೈಸಲಾಗುತ್ತಿದೆ. ಶಿಮ್ಲಾದಲ್ಲಿ ಪ್ರತಿದಿನದ ನೀರಿನ ಬೇಡಿಕೆ ಒಟ್ಟು 45 ಮಿಲಿಯನ್‌ ಲೀಟರ್‌ಗಳಾಗಿದ್ದು, ಈಗ ಸಧ್ಯಕ್ಕಿರುವ ಜಲಮೂಲಗಳಿಂದ ದಿನವೊಂದಕ್ಕೆ 21.75 ಮಿಲಿಯನ್‌ ನೀರು ಮಾತ್ರವೇ ದೊರೆಯುತ್ತಿದೆ.

“ಗುಮ್ಮಾ ಪಂಪಿಂಗ್‌ ಸ್ಟೇಷನ್‌ನಿಂದ ಪ್ರತಿದಿನ 11 ಮಿಲಿಯನ್‌ ಲೀಟರ್‌ ನೀರನ್ನು ಪಂಪ್‌ ಮಾಡಿ ತರಲಾಗುತ್ತಿತ್ತು. ಈಗ ಈ ಪ್ರಮಾಣವನ್ನು 14 ಮಿಲಿಯನ್‌ ಲೀಟರ್‌ಗಳಿಗೆ ಏರಿಸಲಾಗಿದೆ. ಕಳೆದ ವರ್ಷ ಶಿಮ್ಲಾದಲ್ಲಿ ಬಿದ್ದಿರುವ ಮಳೆಯ ಪ್ರಮಾಣವೂ ಕಡಿಮೆಯಿದ್ದು, ಹೆಚ್ಚಿನ ಪ್ರಮಾಣದಲ್ಲಿ ಹಿಮಮಳೆಯೂ ಆಗಿಲ್ಲ. ಹೀಗಾಗಿ ನೀರಿನ ಅಭಾವ ಉಂಟಾಗಿದೆ” ಎಂದು ಹಿಮಾಚಲ ಪ್ರದೇಶದ ನೀರಾವರಿ ಮತ್ತು ಆರೋಗ್ಯ ಸಚಿವ ಮೊಹಿಂದರ್‌ ಸಿಂಗ್‌ ಹೇಳಿದ್ದಾರೆ.