ಪೊಲೀಸರ ಬಸ್‌ಗೆ ಬೆಂಕಿ
ದೇಶ

ಹನ್ನೊಂದು ಜನರನ್ನು ಬಲಿ ಪಡೆದ ವೇದಾಂತ ಕಂಪನಿ: ಜನ ಪ್ರತಿಭಟನೆ ಸಾಗಿ ಬಂದ ಹಾದಿ

ತಮಿಳುನಾಡಿನ ತೂತುಕುಡಿ ಬಳಿಯ ಸ್ಟೆರ್ಲೈಟ್‌ ತಾಮ್ರ ಘಟಕ ಮುಚ್ಚಲು ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರದ ಸ್ಪರೂಪ ಪಡೆದಿದೆ. ಪೊಲೀಸರ ಗುಂಡಿಗೆ ಈವರೆಗೆ 11 ಮಂದಿ ಬಲಿಯಾಗಿದ್ದಾರೆ.

ವೇದಾಂತ ಸಮೂಹದ ಸ್ಟೆರ್ಲೈಟ್‌ ತಾಮ್ರದ ಘಟಕ ಮುಚ್ಚಲು ಆಗ್ರಹಿಸಿ ತಮಿಳುನಾಡಿನ ತೂತುಕುಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈವರೆಗೆ ಪೊಲೀಸರ ಗುಂಡೇಟಿಗೆ ಬಲಿಯಾದವರ ಸಂಖ್ಯೆ 11ಕ್ಕೆ ಏರಿದೆ.

ಮಂಗಳವಾರ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹಾರಿಸಿದ ಗುಂಡೇಟಿಗೆ ಒಟ್ಟು 10 ಮಂದಿ ಮೃತಪಟ್ಟಿದ್ದರು. ಬುಧವಾರ ಮತ್ತೆ ಮೂರು ಮಂದಿಗೆ ಪೊಲೀಸರ ಗುಂಡೇಟು ತಗುಲಿದೆ. ಗಾಯಗೊಂಡ ಮೂರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮೂರು ಮಂದಿ ಪೈಕಿ 22 ವರ್ಷದ ಕಲಿಯಪ್ಪನ್‌ ಎಂಬಾತ ಮೃತಪಟ್ಟಿದ್ದಾನೆ.

Also read: ಕಾರ್ಪೋರೇಟ್ ಕಂಪನಿ ವಿರುದ್ಧ ಜನರ ಪ್ರತಿಭಟನೆ: ಪೊಲೀಸರಿಂದ ಗೋಲಿಬಾರ್

ತೂತುಕುಡಿಯ ಅಣ್ಣಾ ನಗರದ 6ನೇ ರಸ್ತೆಯಲ್ಲಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ನಿಯೋಜನೆಗೊಂಡಿದ್ದ ಪೊಲೀಸರ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮುನ್ನಾ ಬ್ರ್ಯಾಂತ್‌ ನಗರದಲ್ಲಿ ಎರಡು ಪೊಲೀಸ್ ಬಸ್‌ಗಳಿಗೆ ಅಪರಿಚಿತರು ಬೆಂಕಿ ಹಚ್ಚಿದ್ದಾರೆ. ಒಂದು ಬಸ್‌ ಅನ್ನು ಬೆಂಕಿಯಿಂದ ಕಾಪಾಡಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ, ಮತ್ತೊಂದು ಬಸ್‌ ಬೆಂಕಿಗೆ ಸಂಪೂರ್ಣ ಆಹುತಿಯಾಗಿದೆ.

ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್‌, ತಮಿಳುನಾಡು ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಸ್‌. ತಿರುನವುಕ್ಕರಸರ್‌ ಎಂಡಿಎಂಕೆ ಮುಖಂಡ ವೈಕೋ, ನಟ ಕಮಲ್‌ ಹಾಸನ್‌ ಮತ್ತಿತರರು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದಾರೆ.

ಪ್ರತಿಭಟನಾನಿರತರನ್ನು ಬೆಂಬಲಿಸಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕೆ. ಬಾಲಕೃಷ್ಣನ್‌ ಮತ್ತು ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಸ್ಟೆರ್ಲೈಟ್‌ ಘಟಕ ಮತ್ತು ಪ್ರತಿಭಟನೆಯ ಹಿನ್ನೋಟ:

  • ಮೇ 1995: ಸ್ಟೆರ್ಲೈಟ್‌ ಘಟಕ ಸ್ಥಾಪನೆಗೆ ಪರಿಸರ ಇಲಾಖೆಯಿಂದ ಅನುಮತಿ. ಘಟಕ ನಿರ್ಮಾಣ ಕಾರ್ಯ ಆರಂಭ
  • ಅಕ್ಟೋಬರ್‌ 1996: ಕಾರ್ಖಾನೆ ಕಾರ್ಯಾರಂಭ. ಘಟಕ ನಿರ್ಮಾಣಕ್ಕೆ ಅವಸರವಾಗಿ ಅನುಮತಿ ನೀಡಲಾಗಿದೆ ಎಂದು ಮದ್ರಾಸ್‌ ಹೈಕೋರ್ಟ್‌ಗೆ ಹೋರಾಟಗಾರರಿಂದ ಅರ್ಜಿ
  • ಆಗಸ್ಟ್‌ 1997: ಘಟಕದಿಂದಾಗಿ ಗಾಳಿ ಮತ್ತು ನೀರು ಮಾಲಿನ್ಯವಾಗುತ್ತಿದ್ದೆ ಎಂಬ ಕಾರಣಕ್ಕೆ ಪ್ರತಿಭಟನೆ ನಡೆಸಿದ ಸ್ಥಳೀಯರು
  • ನವೆಂಬರ್‌ 1998: ಮಾಲಿನ್ಯದ ಕಾರಣಕ್ಕೆ ಘಟಕ ಮುಚ್ಚುವಂತೆ ಮಧ್ಯಂತರ ಆದೇಶ ನೀಡಿದ ಮದ್ರಾಸ್‌ ಹೈಕೋರ್ಟ್. ಮಾಲಿನ್ಯ ನಿಯಂತ್ರಣ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಳ್ಳುವುದಾಗಿ ಒಪ್ಪಿಕೊಂಡು ಕೆಲ ವಾರಗಳಲ್ಲೇ ಘಟಕ ಪುನರಾರಂಭ
  • ಜನವರಿ 2001: ಘಟಕದಿಂದ ಮಲಿನಕಾರಕ ಕೊಳಚೆಯನ್ನು ಹೊರ ಬಿಡುತ್ತಿರುವುದರಿಂದ ಜಲಮಾಲಿನ್ಯವಾಗುತ್ತಿರುವುದಾಗಿ ದೂರಿದ ಸ್ಥಳೀಯರು
  • ಸೆಪ್ಟೆಂಬರ್‌ 2010: ಮಾಲಿನ್ಯದ ಕಾರಣಕ್ಕೆ ಘಟಕ ಮುಚ್ಚುವಂತೆ ಆದೇಶಿಸಿದ ಮದ್ರಾಸ್‌ ಹೈಕೋರ್ಟ್‌. ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂಕೋರ್ಟ್‌ ತಡೆ ನೀಡಿದ ಕಾರಣ ಕೆಲ ದಿನಗಳಲ್ಲೇ ಮತ್ತೆ ಘಟಕ ಪುನರಾರಂಭ
  • ಮಾರ್ಚ್‌ 2013: ಘಟಕದಲ್ಲಿ ಅನಿಲ ಸೋರಿಕೆ ಪ್ರಕರಣದಿಂದ ಘಟಕ ಮುಚ್ಚುವಂತೆ ಆದೇಶಿಸಿದ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ
  • ಏಪ್ರಿಲ್‌ 2013: ಮಾಲಿನ್ಯದ ಕಾರಣಕ್ಕೆ ಕಂಪೆನಿಗೆ 100 ಕೋಟಿ ರೂಪಾಯಿ ದಂಡ ವಿಧಿಸಿದ ಸುಪ್ರೀಂಕೋರ್ಟ್‌. ಆದರೆ, ಘಟಕ ಮುಚ್ಚಲು ಆದೇಶಿಸದ ಕೋರ್ಟ್‌
  • ಫೆಬ್ರುವರಿ 2018: ಸ್ಟೆರ್ಲೈಟ್‌ ಕಂಪೆನಿ ತನ್ನ ಘಟಕವನ್ನು ವಿಸ್ತರಿಸುತ್ತಿದೆ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ ಎಂದು ಆರೋಪಿಸಿ ಮತ್ತೆ ಪ್ರತಿಭಟನೆ ಆರಂಭ
  • ಮಾರ್ಚ್‌ 2018: ನಿರ್ವಹಣೆಯ ಕಾರಣಕ್ಕೆ ಘಟಕ ಕಾರ್ಯ ಸ್ಥಗಿತ
  • ಏಪ್ರಿಲ್‌ 2018: ಘಟಕ ಪರವಾನಗಿ ನವೀಕರಣ ನಿರಾಕರಿಸಿದ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ
  • 22 ಮೇ 2018: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಪೊಲೀಸರ ಗುಂಡೇಟಿಗೆ 10 ಸಾವು
  • 23 ಮೇ 2018: ಎಡರನೇ ಘಟಕದ ನಿರ್ಮಾಣ ಕಾರ್ಯಕ್ಕೆ ಮದ್ರಾಸ್ ಹೈಕೋರ್ಟ್‌ ತಡೆ