ಕಾರ್ಪೋರೇಟ್ ಕಂಪನಿ ವಿರುದ್ಧ ಜನರ ಪ್ರತಿಭಟನೆ: ಪೊಲೀಸರಿಂದ ಗೋಲಿಬಾರ್
ದೇಶ

ಕಾರ್ಪೋರೇಟ್ ಕಂಪನಿ ವಿರುದ್ಧ ಜನರ ಪ್ರತಿಭಟನೆ: ಪೊಲೀಸರಿಂದ ಗೋಲಿಬಾರ್

ಎಐಎಡಿಎಂಕೆ ಸರ್ಕಾರ ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದ ಪ್ರತಿಭನಾಕಾರರನ್ನು ಪೊಲೀಸರ ಮೂಲಕ ಕೊಲ್ಲಿಸಿ ಹಾಕಿದೆ. 

ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ವೇದಾಂತ ಕಂಪನಿಯ ತಾಮ್ರ ತಯಾರಿಕಾ ಘಟಕದ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಇಬ್ಬರು ಸಾವನ್ನಪ್ಪಿದ್ದು ಹತ್ತಾರು ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ತೂತುಕುಡಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಆದರೂ, ಪ್ರತಿಭಟನಾಕಾರರು ಮಾತ್ರ ಟೈರ್‌ಗಳಿಗೆ ಬೆಂಕಿ ಹಚ್ಚಿ ನಗರದ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಗರದ ತುಂಬ ಕಪ್ಪು ಹೊಗೆ ತುಂಬಿಕೊಂಡಿದೆ.

ಕಾರ್ಖಾನೆಯ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ನೂರನೇ ದಿನಕ್ಕೆ ಕಾಲಿಟ್ಟಿದ್ದರಿಂದ ಮಂಗಳವಾರ ಕಾವು ಹೆಚ್ಚಿತ್ತು. ಬೆಳಿಗ್ಗೆ 10 ಗಂಟೆಗೆ ಹತ್ತಿರದ ಮದತ್ತೂರಿನಿಂದ ಜಿಲ್ಲಾಧಿಕಾರಿ ಕಚೇರಿಗೆ ರೈತರು ಪಾದಯಾತ್ರೆ ಹಮ್ಮಿಕೊಂಡಿದ್ದರು. ಸಾವಿರಾರು ಮಂದಿ ನಾಗರಿಕರು, ಸಂಘಟನೆಗಳು ಪ್ರತಿಭಟನೆಗೆ ಕೈ ಜೋಡಿಸಿದ್ದರು. ಆದರೆ ಅಗತ್ಯ ಸಿದ್ದತೆ ಮಾಡಿಕೊಳ್ಳದ ಪೊಲೀಸರು ಅರ್ಧ ರಸ್ತೆಯಲ್ಲಿ ಪ್ರತಿಭನಾಕಾರರನ್ನು ತಡೆದಿದ್ದಾರೆ.

ಇದರಿಂದ ರೊಚ್ಚಿಗೆದ್ದ ಪ್ರತಿಭನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಪರಿಸ್ಥಿತಿ ಕೈ ಮೀರಿದೆ ಎಂದು ಪೊಲೀಸರೀಗ ಸಮಜಾಯಿಷಿ ನೀಡುತ್ತಿದ್ದಾರೆ. ಮುಂಜಾಗೃತಾ ಕ್ರಮವಾಗಿ ಸಾಕಷ್ಟು ಭದ್ರತೆ ಮಾಡಿಕೊಳ್ಳದೆ ಲಾಠಿ ಪ್ರಹಾರ ಮಾಡಿದ್ದಾರೆ. ಈ ವೇಳೆ ಗೋಲಿಬಾರ್‌ನಲ್ಲಿ ಪ್ರತಿಭಟನಾಕಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ. ಇನ್ನೊಬ್ಬರು ಅಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆದರೆ ಪೊಲೀಸರು ಮಾತ್ರ ಇದನ್ನು ನಿರಾಕರಿಸಿದ್ದಾರೆ ಎಂದು ಎಂದು ‘ದಿ ನ್ಯೂಸ್ ಮಿನಿಟ್’ ವರದಿ ಮಾಡಿದೆ.

ರಾಜಕೀಯ ಸ್ವರೂಪ ಪಡೆದ ಪ್ರತಿಭಟನೆ

ಪ್ರತಿಭಟನೆ ಶತದಿನ ಮುಟ್ಟಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರದೊಂಗೆ ಡಿಎಂಕೆ ಕಾರ್ಯಕರ್ತರು ಸೇರಿಕೊಂಡಿದ್ದರು. ಅವರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುವ ಉದ್ದೇಶವನ್ನು ಹೊಂದಿದ್ದರು. ಆದರೆ ಪೊಲೀಸರು ಯಾವಾಗ ಮುಂದಾಳುಗಳನ್ನು ಬಂಧಿಸಿದ್ದಾರೆ. ಸೆಕ್ಷನ್ 144 ಜಾರಿ ಮಾಡಿದ್ದಾರೆ. ಆ ನಂತರ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತು ಎನ್ನಲಾಗುತ್ತಿದೆ. ಆದರೆ, ಪೊಲೀಸರು ಮಕ್ಕಳು ಮತ್ತು ಹೆಂಗಸರ ಕೈ ಮಾಡಿದ್ದಾರೆ ಎಂದು ಪ್ರತಿಭನಾಕಾರರು ದೂರಿದ್ದಾರೆ.

ಸರ್ಕಾರವನ್ನ ತರಾಟೆ ತೆಗೆದುಕೊಂಡಿರುವ ಡಿಎಂಕೆ ನಾಯಕ ಸ್ಟಾಲಿನ್, “ವಿವಾದಿತ ಸ್ಟರ್ ಲೈಟ್ ಕಾರ್ಖಾನೆ ವಿರುದ್ಧ ಬಹಳ ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಆದರೆ ಎಐಎಡಿಎಂಕೆ ಸರ್ಕಾರಕ್ಕೆ ಈ ಬಗ್ಗೆ ಯಾವುದೇ ಆಸಕ್ತಿ ಇಲ್ಲ. ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದ ಪ್ರತಿಭನಾಕಾರರನ್ನು ಪೊಲೀಸರ ಮೂಲಕ ಕೊಲ್ಲಿಸಿ ಹಾಕಿದೆ,” ಎಂದು ಖಂಡಿಸಿದ್ದಾರೆ. ಅಲ್ಲದೆ ಕೂಡಲೆ ಸ್ಟರ್ ಲೈಟ್ ಕಾರ್ಖಾನೆಯನ್ನು ಮುಚ್ಚುವ ಬಗ್ಗೆ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಏನಿದು ಸ್ಟರ್ ಲೈಟ್ ಕಾರ್ಖಾನೆ?

ವೇದಾಂತ ಕಂಪನಿಯ ಕಾರ್ಯಾಚರಣೆಯ ಪರಿಣಾಮಗಳ ಒಂದು ಚಿತ್ರ. 
ವೇದಾಂತ ಕಂಪನಿಯ ಕಾರ್ಯಾಚರಣೆಯ ಪರಿಣಾಮಗಳ ಒಂದು ಚಿತ್ರ. 

ಸ್ಟರ್ ಲೈಟ್ ಎಂಬುದು ತಾಮ್ರದ ಸಲ್ಫರ್ ತಯಾರಿಸುವ ಕಾರ್ಖಾನೆ. ಇದು ಬ್ರಿಟನ್ ಮೂಲದ ಬಹುರಾಷ್ಟ್ರೀಯ ಅದಿರು ಗಣಿಗಾರಿಕೆ ಕಂಪನಿಗೆ ಸೇರಿದ ಕಾರ್ಖಾನೆ. ಫ್ಯಾಕ್ಟರಿಯಿಂದ ಹೊರ ಬೀಳುವ ಹೊಗೆಯಲ್ಲಿ ಸ್ಪಲ್ಪರ್ ಡೈ ಆಕ್ಸೈಡ್, ಕಾರ್ಬನ್ ಡೈ ಆಕ್ಸೈಡ್ ಸೇರಿದಂತೆ ವಿಷ ರಾಸಾಯನಿಕಗಳನ್ನು ಜನಜೀವನಕ್ಕೆ ಹಾನಿಯನ್ನು ಉಂಟುಮಾಡುತ್ತಿದೆ.

ತೂತುಕುಡಿ, ಚಿದಂಬರಂ ಸೇರಿದಂತೆ ಮೂರ್ನಾಲ್ಕು ಜಿಲ್ಲೆಗಳಲ್ಲಿ ಗಾಳಿ, ನೀರು, ಮಣ್ಣು ಸಂಪೂರ್ಣವಾಗಿ ವಿಷಗೊಂಡಿವೆ. ಅಲ್ಲದೆ ಮಕ್ಕಳೂ ಸೇರಿದಂತೆ ಈ ಸಾವಿರಾರು ಮಂದಿ ಗಂಟಲು, ಕಣ್ಣು, ಶ್ವಾಸಕೋಶ ಕ್ಯಾನ್ಸರ್ ಗಳಿಗೆ ಈಡಾಗಿದ್ದು, ಜನ ಆತಂಕದಲ್ಲಿ ಬದುಕುವಂತಾಗಿದೆ.

ಹೀಗಾಗಿ ಕಾರ್ಖನೆಯನ್ನು ಮುಚ್ಚುವಂತೆ ಸ್ವಯಂ ಸೇವಾ ಸಂಸ್ಥೆಗಳು, ಪರಿಸರವಾದಿಗಳು, ನಾಗರಿಕ ಸಂಘಟನೆಗಳು ಎರಡು ದಶಕಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಸರ್ಕಾರವಾಗಲಿ, ಕಾರ್ಖಾನೆಯಾಗಲಿ ಪ್ರತಿಭಟನಾಕಾರರ ದೂರನ್ನು ಕೇಳಿಸಿಕೊಂಡಿಲ್ಲ. “ಹಲವು ಬಾರಿ ಆಡಳಿತ ಮಂಡಳಿ ಪೊಲೀಸರಿಂದ ಜನರ ಮೇಲೆ ಹಲ್ಲೆ ದೌರ್ಜನ್ಯಗಳನ್ನು ಮಾಡಿಸಿದೆ,” ಎಂದು ಆರೋಪಿಸುತ್ತಾರೆ ಆಂಟಿ ಕಿಲ್ಲರ್ ಸ್ಟರ್ ಲೈಟ್ ಪೀಪಲ್ ಚಳವಳಿಯ ಫಾತಿಮಾ ಬಾನು.

ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ ಹತ್ತಿದ್ದು, ಮಾಲಿನ್ಯಮುಕ್ತ ಚಟುವಟಿಕೆ ಮಾಡುವಂತೆ ಶರತ್ತಿನ ಮೇಲೆ ಕೋರ್ಟ್ ಕಾರ್ಖಾನೆಗೆ ಶರತ್ತು ವಿಧಿಸಿದೆ.