ವಾಲ್‌ಮಾರ್ಟ್‌ಗೆ ಮಾರಾಟವಾಗಲಿರುವ ಫ್ಲಿಪ್‌ಕಾರ್ಟ್; ಅಮೆರಿಕಾ ಪಾಲಾದ ಭಾರತೀಯ ಕಂಪನಿ
ದೇಶ

ವಾಲ್‌ಮಾರ್ಟ್‌ಗೆ ಮಾರಾಟವಾಗಲಿರುವ ಫ್ಲಿಪ್‌ಕಾರ್ಟ್; ಅಮೆರಿಕಾ ಪಾಲಾದ ಭಾರತೀಯ ಕಂಪನಿ

ಫ್ಲಿಪ್‌ಕಾರ್ಟ್‌ ಆಡಳಿತ ಮಂಡಳಿ ತನ್ನ ಪಾಲನ್ನು ವಾಲ್‌ಮಾರ್ಟ್‌ ಕಂಪನಿಗೆ ಮಾರಲು ಗ್ರೀನ್‌ ಸಿಗ್ನಲ್‌ ನೀಡಿದೆ. ಮಂದಿನ ದಿನಗಳಲ್ಲಿ ವ್ಯವಹಾರ ಪೂರ್ಣಗೊಳ್ಳಲಿದೆ. ಶೇ.75ರಷ್ಟು ಫ್ಲಿಪ್‌ಕಾರ್ಟ್‌ ಪಾಲನ್ನು ವಾಲ್‌ಮಾರ್ಟ್‌ ಕೊಳ್ಳಲಿದೆ.

ವಾಲ್‌ಮಾರ್ಟ್‌ ಆನ್‌ಲೈನ್‌ ಮಾರಾಟ ಜಾಲತಾಣ ಖಾಸಗಿ ಕಂಪನಿಯಾದ ಫ್ಲಿಪ್‌ಕಾರ್ಟ್‌ನ ಭಾಗಶಃ ಪಾಲನ್ನು ಕೊಂಡುಕೊಳ್ಳುವ ಕೊನೆ ಹಂತದಲ್ಲಿದೆ. ಇನ್ನು ಮುಂದೆ ಫ್ಲಿಪ್‌ಕಾರ್ಟ್‌ ಒದಗಿಸುತ್ತಿದ್ದ ಸೇವೆಯನ್ನು ವಾಲ್‌ಮಾರ್ಟ್‌ ಸಂಸ್ಥೆಯೇ ಒದಗಿಸಲಿದೆ.

ಫ್ಲಿಪ್‌ಕಾರ್ಟ್‌ನ ಆಡಳಿತ ಮಂಡಳಿ ಫ್ಲಿಪ್‌ಕಾರ್ಟ್‌ನ ಪಾಲನ್ನು ವಾಲ್‌ಮಾರ್ಟ್‌ ಕಂಪನಿಗೆ ಮಾರಲು ಗ್ರೀನ್‌ ಸಿಗ್ನಲ್‌ ನೀಡಿದೆ. ಮಂದಿನ ದಿನಗಳಲ್ಲಿ ಈ ವ್ಯವಹಾರ ಪೂರ್ಣಗೊಳ್ಳಲಿದೆ. ಶೇ.75ರಷ್ಟು ಫ್ಲಿಪ್‌ಕಾರ್ಟ್‌ನ ಪಾಲನ್ನು ವಾಲ್‌ಮಾರ್ಟ್‌ ಕೊಳ್ಳಲಿದೆ. ಕೊಳ್ಳುವ ಸಲುವಾಗಿ ವಾಲ್‌ಮಾರ್ಟ್‌ 20-21 ಬಿಲಿಯನ್‌ ಡಾಲರ್‌ ಹಣವನ್ನು ಫ್ಲಿಪ್‌ಕಾರ್ಟ್‌ಗೆ ನೀಡಬೇಕಿದೆ. ಆದರೆ, ವ್ಯವಹಾರ ಮುಗಿಯುವ ವೇಳೆಗೆ ಈ ಮೊತ್ತ ಇನ್ನು ಹೆಚ್ಚಾದರೂ ಆಗಬಹುದು ಎನ್ನುವ ನಿರೀಕ್ಷೆಗಳಿವೆ.

ಫ್ಲಿಪ್‌ಕಾರ್ಟ್‌ ಸಂಸ್ಥೆಯಲ್ಲಿ ಈಗಾಗಲೇ ಬಂಡವಾಳ ಹೂಡಿರುವ ಹೂಡಿಕೆದಾರರು ತಮ್ಮ ಪೂರ್ತಿ ಪಾಲನ್ನು ಮಾರಲು ಸಿದ್ಧರಾಗಿದ್ದಾರೆ. ಆದರೆ ಪ್ರಾರಂಭದ ಹಂತದಲ್ಲಿ ಫ್ಲಿಪ್‌ಕಾರ್ಟ್‌ ಸಂಸ್ಥೆಗೆ ಬಂಡವಾಳವನ್ನು ಹೂಡಿದ್ದ ಟೈಗರ್‌ ಗ್ಲೋಬಲ್‌ ಮ್ಯಾನೇಜ್‌ಮೆಂಟ್‌ ಇನ್ನಿತ್ಯಾದಿ ಸಂಸ್ಥೆಗಳು ಪೂರ್ತಿಯಾಗಿ ಮಾರದೇ, ಸ್ವಲ್ಪ ಪ್ರಮಾಣದ ತಮ್ಮ ಪಾಲನ್ನು ಹಾಗೆಯೇ ಉಳಿಸಿಕೊಳ್ಳಲು ಮುಂದಾಗಿವೆ. ಟೆನ್ಸೆಂಟ್‌ ಮತ್ತು ನಾಸ್ಪೆರ್‌ ಕಂಪನಿಗಳು ತಮ್ಮ ಸ್ವಲ್ಪ ಪಾಲನ್ನು ಉಳಿಸಿಕೊಳ್ಳಲಿವೆ. ಸಾಫ್ಟ್‌ ಬ್ಯಾಂಕ್‌ ಕೂಡ ಫ್ಲಿಪ್‌ಕಾರ್ಟ್‌ನಲ್ಲಿನ ತನ್ನ ಪೂರ್ತಿ ಶೇರುಗಳನ್ನು ಮಾರಲು ಮುಂದೆ ಬಂದಿಲ್ಲ. ಶೇ.20ರಷ್ಟು ಬಂಡವಾಳವನ್ನಷ್ಟೇ ಮಾರಲು ಮುಂದಾಗಿದೆ.

ಫ್ಲಿಪ್‌ಕಾರ್ಟ್‌ ವಾಲ್‌ಮಾರ್ಟ್‌ನ ತೆಕ್ಕೆಗೆ ಬಿದ್ದ ನಂತರವೂ ಕೂಡ ಫ್ಲಿಪ್‌ಕಾರ್ಟ್‌ನ ಸಹ ಸಂಸ್ಥಾಪಕ ಬಿನ್ನಿ ಬನ್ಸಾಲ್‌ ಹಾಗೂ ಕಲ್ಯಾಣ್‌ ಕೃಷ್ಣಮೂರ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾಗಿ ಮುಂದುವೆರೆಯಲಿದ್ದಾರೆ. ಫ್ಲಿಪ್‌ಕಾರ್ಟ್‌ನ ಅಧ್ಯಕ್ಷ ಹಾಗೂ ಸಹ-ಸಂಸ್ಥಾಪಕರಾಗಿದ್ದ ಸಚಿನ್‌ ಬನ್ಸಾಲ್‌ ತಮ್ಮ ಮುಂದಿನ ನಡೆ ಏನು ಎನ್ನುವುದರ ಬಗ್ಗೆ ಸ್ಪಷ್ಟತೆ ನೀಡಿರಲಿಲ್ಲ. ಈಗ ಫ್ಲಿಪ್‌ಕಾರ್ಟ್‌ನ ಮಾರಾಟ ಪ್ರಕ್ರಿಯೆ ಪೂರ್ಣಗೊಂಡ ನಂತರ ಯಾವುದೇ ಸ್ಥಾನ ವಹಿಸಿಕೊಳ್ಳದೆ ದೂರ ಉಳಿಯುವ ಸಾಧ್ಯತೆಗಳಿವೆ.

ಫ್ಲಿಪ್‌ಕಾರ್ಟ್‌ ಆನ್‌ಲೈನ್‌ ಮಾರಾಟ ಜಾಲತಾಣವನ್ನು ಕೊಂಡು ಭಾರತದಲ್ಲಿ ತನ್ನ ಮಾರಾಟವನ್ನು ವಿಸ್ತರಿಸಿಕೊಳ್ಳಲು ಮುಂದಾಗಿರುವ ವಾಲ್‌ಮಾರ್ಟ್‌ ಸಂಸ್ಥೆ ಅಮೆಜಾನ್‌, ಆಲಿ ಬಾಬಾ ಸೇರಿದಂತೆ ಉಳಿದೆಲ್ಲಾ ಆನ್‌ಲೈನ್‌ ಮಾರಾಟ ತಾಣಗಳಿಗೆ ತೀವ್ರ ಪೈಪೋಟಿ ಒಡ್ಡುವ ನಿರೀಕ್ಷೆಯಿದೆ. ಉಳಿದೆಲ್ಲವಕ್ಕಿಂತ ಅಮೆಜಾನ್‌ ಹೆಚ್ಚಿನ ಪೈಪೋಟಿಯನ್ನು ಎದುರಿಸಬೇಕಿದ್ದು, ಎರಡೂ ಕಂಪನಿಗಳ ಮಾತೃದೇಶ ಅಮೆರಿಕಾದಲ್ಲೂ ಕೂಡ ಪೈಪೋಟಿಗಳು ಹೆಚ್ಚಾಗಲಿವೆ.

ಪ್ರಖ್ಯಾತ ಆನ್‌ಲೈನ್‌ ಮಾರಾಟ ಜಾಲತಾಣ ಅಮೆಜಾನ್‌ ಕೂಡ ಫ್ಲಿಪ್‌ಕಾರ್ಟ್‌ಅನ್ನು ಕೊಳ್ಳಲು ಮುಂದಾಗಿತ್ತು. ಆದರೆ ಭಾರತದಲ್ಲಿ ಆನ್‌ಲೈನ್‌ ಮಾರಾಟ ಸೇವೆಯನ್ನು ಒದಗಿಸುತ್ತಿದ್ದ ಕಂಪನಿಗಳ ಸಾಲಿನಲ್ಲಿ ಮೊದಲನೇ ಸ್ಥಾನದಲ್ಲಿದ್ದ ಫ್ಲಿಪ್‌ಕಾರ್ಟ್‌ ಎರಡನೇ ಸ್ಥಾನದಲ್ಲಿರುವ ಅಮೆಜಾನ್‌ಗೆ ಮಾರಾಟಗೊಳ್ಳಲು ಇಷ್ಟ ಪಟ್ಟಿಲ್ಲ. ಕೊನೆಯದಾಗಿ ವಾಲ್‌ಮಾರ್ಟ್‌ಗೆ ತನ್ನ ಪಾಲನ್ನು ಮಾರಲು ಫ್ಲಿಪ್‌ಕಾರ್ಟ್‌ ತೀರ್ಮಾನಿಸಿದೆ.

ಆನ್‌ಲೈನ್‌ ಮಾರುಕಟ್ಟೆಯಲ್ಲಿ ವ್ಯವಹಾರವನ್ನು ನಡೆಸುತ್ತಿರುವ ಪೈಕಿ ಅಮೆರಿಕಾ ಮತ್ತು ಚೀನಾ ನಂತರದ ಸ್ಥಾನದಲ್ಲಿರುವ ಭಾರತದ ಗ್ರಾಹಕರನ್ನು ತಮ್ಮತ್ತ ತಿರುಗಿಸಿಕೊಳ್ಳಲು ಪೈಪೊಟಿ ನಡೆಸುತ್ತಿದ್ದ ಆನ್‌ಲೈನ್‌ ತಾಣಗಳಲ್ಲಿ ಫ್ಲಿಪ್‌ಕಾರ್ಟ್ ಹೆಸರು ಇಲ್ಲವಾಗಿ ಆ ಸ್ಥಾನದಲ್ಲಿ ವಾಲ್‌ಮಾರ್ಟ್ ಕಂಪನಿ ಬಂದು ಕುಳಿತುಕೊಳ್ಳಲಿದೆ. ವಾಲ್‌ಮಾರ್ಟ್‌ಗೆ ತೀವ್ರ ಪೈಪೋಟಿಯನ್ನು ಒಡ್ಡಲು ಬೇಕಾಗಿರುವ ಕಸರತ್ತುಗಳ ಅಭ್ಯಾಸದಲ್ಲಿ ಅಮೆಜಾನ್‌ನ ಭಾರತದ ಮುಖ್ಯಸ್ಥ ಅಮಿತ್‌ ಅಗರ್ವಾಲ್‌ ನಿರತರಾಗಿದ್ದಾರೆ. ಅಮೆಜಾನ್ ಸ್ಥಾಪಕ ಜೆಫ್ಫ್‌ ಬೆಝೋಸ್‌ ಕೂಡ ಭಾರತದ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಬಲವಾಗಿ ಬೇರೂರಲು ಉತ್ಸುಕರಾಗಿದ್ದಾರೆ.

ಫ್ಲಿಪ್‌ಕಾರ್ಟ್‌ ಇನ್ನು ಮುಂದೆ ಭಾರತದಲ್ಲ:

ಫ್ಲಿಪ್‌ಕಾರ್ಟ್‌ ಭಾರತೀಯ ಮೂಲದ ಕಂಪನಿ. 2007ರಲ್ಲಿ ಸ್ಥಾಪನೆಯಾಗಿದ್ದ ಫ್ಲಿಪ್‌ಕಾರ್ಟ್ 2017 ವೇಳೆಗೆ ಸುಮಾರು 11 ಇನ್ನಿತರೆ ಆನ್‌ಲೈನ್‌ ಕಂಪನಿಗಳನ್ನು ಕೊಂಡು ಭಾರತದೆಲ್ಲೆಡೆ ತನ್ನ ಕಾರ್ಯ ಕ್ಷೇತ್ರವನ್ನು ವಿಸ್ತರಿಸಿಕೊಂಡಿತ್ತು. ಪ್ರಾರಂಭದಲ್ಲಿ ಕೇವಲ ಪುಸ್ತಕ ಮಾರಾಟವನ್ನು ಆರಂಭಿಸಿದ್ದ ಫ್ಲಿಪ್‌ಕಾರ್ಟ್‌ ನಂತರದ ದಿನಗಳಲ್ಲಿ ಮೊಬೈಲ್‌, ಉಡುಪುಗಳು, ಫ್ಯಾಶನ್‌ ವಸ್ತುಗಳು ಸೇರಿದಂತೆ ತರಹಾವೇರಿ ವಸ್ತುಗಳ ಮಾರಾಟದಲ್ಲಿ ತೊಡಗಿಕೊಂಡಿತ್ತು. ಫ್ಲಿಪ್‌ಕಾರ್ಟ್ನ ಕೇಂದ್ರ ಕಛೇರಿ ಇರುವುದು ಬೆಂಗಳೂರಿನಲ್ಲೆಯೇ.

ಪ್ರಾರಂಭದಲ್ಲಿ 4,00,000 ರೂಪಾಯಿ ಬಂಡವಾಳವನ್ನು ಹೂಡಿ ಆರಂಭಗೊಂಡ ಫ್ಲಿಪ್‌ಕಾರ್ಟ್‌ಗೆ 2009ರಲ್ಲಿ ಆಕ್ಸೆಲ್‌ ಇಂಡಿಯಾ ಎಂಬ ಕಂಪನಿ 10, ಲಕ್ಷ ಡಾಲರ್ ಬಂಡವಾಳವನ್ನು ಒದಗಿಸಿತ್ತು. 2011ರ ವೇಳೆಗೆ ಟೈಗರ್‌ ಗ್ಲೋಬಲ್‌ ಕಂಪನಿ ಫ್ಲಿಪ್‌ಕಾರ್ಟ್‌ ಮೇಲೆ ಸುಮಾರು 30 ಲಕ್ಷ ಡಾಲರ್‌ ಬಂಡವಾಳವನ್ನು ಹೂಡಿಕೆ ಮಾಡಿತ್ತು. 2013ರ ಜುಲೈ ವೇಳೆಗೆ ಫ್ಲಿಪ್‌ ಕಾರ್ಟ್ನ ಒಟ್ಟು ಬಂಡವಾಳ 200 ಮಿಲಿಯನ್‌ ಡಾಲರ್‌ ತಲುಪಿತ್ತು. 2014ರ ಅಕ್ಟೋಬರ್ 6ರಂದು ಒಂದೇ ದಿನಕ್ಕೆ 6.5 ಬಿಲಿಯನ್‌ ರುಪಾಯಿ ಮೌಲ್ಯದ ವಸ್ತುಗಳನ್ನು ಮಾರಾಟ ಮಾಡಿ ಇತಿಹಾಸ ಬರೆದಿತ್ತು. 2014ರ ಡಿಸೆಂಬರ್‌ ವೇಳೆಗೆ ಫ್ಲಿಪ್‌ಕಾರ್ಟ್‌ನ ಮೇಲೆ ಹೂಡಲಾಗಿದ್ದ ಒಟ್ಟು ಬಂಡವಾಳ 700 ಮಿಲಿಯನ್‌ ಡಾಲರ್‌ಗಳು. ಮಾರಾಟದ ವೇಳೆ ಫ್ಲಿಪ್‌ಕಾರ್ಟ್‌ನ ಒಟ್ಟು ಬಂಡವಾಳ 25 ಬಿಲಿಯನ್‌ ಡಾಲರ್‌ಗಳನ್ನು ದಾಟಿದೆ.

ಭಾರತದ ಪ್ರಖ್ಯಾತ ಆನ್‌ಲೈನ್‌ ಮಾರಾಟ ಜಾಲತಾಣವೀಗ ಅಮೆರಿಕಾದ ಕಂಪನಿಯೊಂದರ ಪಾಲಾಗಿದೆ. ಭಾರತೀಯರು ಒದಗಿಸುತ್ತಿದ್ದ ಸೇವೆಗಳನ್ನು ಈಗ ಅಮೆರಿಕನ್‌ ಕಂಪನಿ ಒದಗಿಸಲಿದೆ. ಬೆಂಗಳೂರಿನಲ್ಲಿ ಕೇಂದ್ರ ಕಛೇರಿ ಹೊಂದಿದ್ದ ಫ್ಲಿಪ್‌ಕಾರ್ಟ್‌ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 30,000 ಭಾರತೀಯ ನೌಕರರು ಈಗ ಅಮೆರಿಕಾ ಕಂಪನಿಯ ಪರವಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಫ್ಲಿಪ್‌ಕಾರ್ಟ್‌ ಇನ್ನು ಮುಂದೆ ವಾಲ್‌ಮಾರ್ಟ್‌ ಆಗಲಿದೆ.