samachara
www.samachara.com
ಕೇಂದ್ರದ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳು: ಕುತೂಹಲ ಮೂಡಿಸಿದ ಹೊಸ ಬೆಳವಣಿಗೆ
ದೇಶ

ಕೇಂದ್ರದ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳು: ಕುತೂಹಲ ಮೂಡಿಸಿದ ಹೊಸ ಬೆಳವಣಿಗೆ

ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರರಾವ್, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅವರು ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಪಕ್ಷಗಳನ್ನು ಒಳಗೊಂಡ ಮೈತ್ರಿ ಕೂಟವನ್ನು ರಚಿಸಲು ಮುಂದಾಗಿದ್ದಾರೆ. 

samachara

samachara

ಒಂದು ಕಡೆ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಕಣ ರಂಗೇರಿರುವ ಹೊತ್ತಿನಲ್ಲೇ ಮುಂಬರುವ ಸಂಸತ್ ಚುನಾವಣೆಗೆ ರಾಜಕೀಯ ಪಕ್ಷಗಳು ಸದ್ದಿಲ್ಲದೆ ಸಿದ್ದವಾಗುತ್ತಿವೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಪ್ರಾದೇಶಿಕ ಪಕ್ಷಗಳು, ರಾಜ್ಯಗಳ ಅಸ್ಮಿತೆಯನ್ನು ಅಲ್ಲಗಳೆಯುತ್ತಿದೆ. ಈ ಹಿನ್ನೆಲೆಯಲ್ಲಿ, “ದಕ್ಷಿಣ ರಾಜ್ಯಗಳು ಒಂದಾಗಿ ಸ್ವತಂತ್ರ ದೇಶ ಬೇಡಿಕೆ ಇಡುವುದಕ್ಕೂ ಹಿಂಜರಿಯುವುದಿಲ್ಲ,” ಎಂಬ ಹೇಳಿಕೆಯನ್ನು ಕೆಲ ದಿನಗಳ ಹಿಂದೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದರು.

ಇದಕ್ಕೆ ಪುಷ್ಟಿ ನೀಡುವಂತೆ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರರಾವ್, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅವರು ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಪಕ್ಷಗಳನ್ನು ಒಳಗೊಂಡ ಮೈತ್ರಿ ಕೂಟವನ್ನು ರಚಿಸಲು ಮುಂದಾಗಿರುವುದು ಕುತೂಹಲ ಮೂಡಿಸಿದೆ.

ರಾವ್ ಭಾನುವಾರ ಚೈನ್ನೈನಲ್ಲಿ ಡಿಎಂಕೆ ನಾಯಕರನ್ನು ಭೇಟಿ ಮಾಡಿದ ನಡೆಸಿದ ಸುಧೀರ್ಘ ಚರ್ಚೆ ಹೊಸ ರಾಜಕೀಯ ಸಾಧ್ಯತೆಯೊಂದನ್ನು ಹುಟ್ಟಿಹಾಕಿದೆ. ಕೆಲವು ದಿನಗಳ ಹಿಂದೆ ರಾವ್ ರಾಜ್ಯದಲ್ಲಿ ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್. ಡಿ. ದೇವೇಗೌಡರನ್ನು ಭೇಟಿ ಮಾಡಿದ್ದರು.

ಬಿಜೆಪಿ ಮತ್ತು ಕಾಂಗ್ರೆಸ್ಸೇತರ (ನಾನ್ ಬಿಜೆಪಿ , ನಾನ್ ಕಾಂಗ್ರೆಸ್) ಪಕ್ಷಗಳ ಬದಲಾಗಿ ಸಮಾನ ಒಲವು ಹೊಂದಿರುವ ಪಕ್ಷಗಳನ್ನ ಒಂದು ವೇದಿಕೆಯಡಿ ತಂದು ಮೈತ್ರಿಕೂಟವನ್ನು ರಚಿಸಲು ಚಂದ್ರಶೇಖರರಾವ್ ಮುಂದಾಗಿದ್ದಾರೆ. ಇದೇ ಹಿನ್ನೆಲೆಯಲ್ಲಿ ಅವರು ಮಾತುಕತೆ ಆರಂಭಿಸಿದ್ದು, ಡಿಎಂಕೆ ಸರ್ವೋಚ್ಛ ನಾಯಕ ಎಂ. ಕರಣಾನಿಧಿ ಹಾಗೂ ಅವರ ಮಗ ಸ್ಟಾಲಿನ್ ಅವರನ್ನು ಚೆನ್ನೈನಲ್ಲಿ ಭೇಟಿ ಮಾಡಿದ್ದರು.

ಡಿಎಂಕೆ ನಾಯಕ ಸ್ಟಾಲಿನ್ ಅವರನ್ನು ಭೇಟಿ ಮಾಡಿದ ರಾವ್, ರಾಜ್ಯಗಳ ಅಧಿಕಾರ, ಸ್ಥಾನ ಮಾನ, ಕೇಂದ್ರದ ನಡೆ ಇತ್ಯಾದಿಗಳ ಕುರಿತು ಸುಧೀರ್ಘ ಚರ್ಚೆ ಮಾಡಿದರು. ಇಬ್ಬರೂ ನಾಯಕರ ನಡುವೆ ನಡೆದ ಮಾತುಕತೆ ಆಶಾದಾಯಕವಾಗಿತ್ತು. “ಇದು ಮತ್ತಷ್ಟು ಭರವಸೆಗಳನ್ನು ಹುಟ್ಟುಹಾಕಿದೆ,” ಎಂದು ಅವರು ಹೇಳಿಕೊಂಡಿದ್ದಾರೆ.

ಸ್ಟಾಲಿನ್ ರೊಂದಿಗೆ ಜಂಟಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ತೆಲಂಗಾಣ ರಾಷ್ಟ್ರಸಮಿತಿ ಮುಖ್ಯಸ್ಥರೂ ಆದ ಚಂದ್ರಶೇಖರರಾವ್, “ನಮ್ಮ ಚರ್ಚೆ ಉದ್ದೇಶ ಹಾಗೂ ಗುರಿ ಮೂರನೇ ರಂಗವನ್ನು ರಚಿಸುವುದಲ್ಲ. ಅಧಿಕಾರಕ್ಕಾಗಿ ರಾಜಕೀಯ ಪಕ್ಷಗಳನ್ನು ಒಟ್ಟುಗೂಡಿಸುವ ಕೆಲಸವನ್ನು ನಾವು ಮಾಡುತ್ತಿಲ್ಲ. ನಮ್ಮ ಉದ್ದೇಶ ದೇಶದ ಜನತೆಗೆ ಒಳಿವು ತರುವುದೇ ಆಗಿದೆ,” ಎಂದು ಮಾರ್ಮಿಕವಾಗಿ ನುಡಿದರು.

ಮುಂದಿನ ಸಂಸತ್ ಚುನಾವಣೆಯನ್ನು ಹೇಗೆ ಎದುರಿಸಬೇಕು ಎಂಬ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ಸೇತರ ನಾಯಕರು ಕೆಲವು ದಿನಗಳಿಂದ ನಡೆಸುತ್ತಿರುವ ಚರ್ಚೆಯಲ್ಲಿ ಮಮತಾ ಬ್ಯಾನರ್ಜಿ ಕೂಡ ಪಾಲ್ಗೊಳ್ಳುತ್ತಿದ್ದಾರೆ. 2019ರ ಸಂಸತ್ ಚುನಾವಣೆಗೆ ಮಮತಾ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವ ಉದ್ದೇಶವಿದೆಯೇ ಎಂಬ ಪ್ರಶ್ನೆ ಪತ್ರಕರ್ತರಿಂದ ತೂರಿ ಬಂತು.

ನಿರೀಕ್ಷಿತ ಪ್ರಶ್ನೆಗೆ ಉತ್ತರಿಸಿದ ಚಂದ್ರಶೇಖರ ರಾವ್, “ನಮ್ಮ ಮೊದಲ ಉದ್ದೇಶ ಪ್ರಧಾನಿ ಅಭ್ಯರ್ಥಿತ್ವವಲ್ಲ, ಬದಲಾಗಿ ದೇಶವನ್ನು ಇನ್ನಷ್ಟು ಉತ್ತಮ ಸ್ಥಿತಿಗೆ ಕೊಂಡೊಯ್ಯುವುದು. ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದು. ಈಗಿರುವ ನಿರುದ್ಯೋಗಕ್ಕೆ ಬದಲಾಗಿ ಯುವ ಜನರಿಗೆ ಉದ್ಯೋಗ ಭದ್ರತೆ ಕಲ್ಪಿಸುವುದು. ಸಾಮಾಜಿಕ ಸ್ಥಿತಿಯನ್ನು ಉತ್ತಮ ಪಡಿಸುವುದು ಎಂದರು. ನಾವು ಈಗಾಗಲೇ ಸಾಕಷ್ಟು ಕೇಳಿ ಬರುತ್ತಿರುವ ಮೂರನೇ ರಂಗ, ನಾಲ್ಕನೇ ರಂಗ, ಐದನೇ ರಂಗವನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿಲ್ಲ. ಇಂಥ ಯಾವ ರಾಜಕೀಯ ಮೈತ್ರಿಕೂಟದ ಹೆಸರನ್ನೂ ನಾವು ಘೋಷಿಸಿಲ್ಲ. ಇವೆಲ್ಲಾ ಮಾಧ್ಯಮಗಳ ಸೃಷ್ಟಿಯಷ್ಟೇ,” ಎಂದರು.

ಇದಕ್ಕೂ ಮೊದಲು ರಾವ್, ಚೈನ್ನೈನ ಗೋಪಾಲಪುರಂ ಮನೆಯಲ್ಲಿ 93 ವರ್ಷದ ಡಿಎಂಕೆ ಹಿರಿಯ ನಾಯಕ ಕರುಣಾನಿಧಿಯನ್ನು ಭೇಟಿ ಮಾಡಿ ಆರೋಗ್ಯದ ಕುರಿತು ಕುಶಲೋಪರಿ ವಿಚಾರಿಸಿದರು. ಇದಕ್ಕೆ ಕರುಣಾನಿಧಿ ಅವರೂ ‘ವಣಕ್ಕಮ್” ಎನ್ನುವ ಮೂಲಕ ರಾವ್ ಅವರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.

ದೇಶದ ರಾಜಕೀಯದಲ್ಲಿ ದೊಡ್ಡ ನಾಯಕ ಎಂದು ಕರುಣಾನಿಧಿಯನ್ನು ರಾವ್ ಕೊಂಡಾಡಿದರು. ಬಿಜೆಪಿಯನ್ನು ಹೊರಗಿಡಲು ಯುಪಿಎ ಸರ್ಕಾರದಲ್ಲಿ ಡಿಎಂಕೆ ನಿರ್ವಹಿಸಿದ ನಿರ್ಣಾಯಕ ಪಾತ್ರದ ಬಗ್ಗೆಯೂ ಪ್ರಶಂಸೆ ವ್ಯಕ್ತಪಡಿಸಿದರು.

ಈ ವೇಳೆ ಇಬ್ಬರೂ ನಾಯಕರು ಪ್ರಜಾಪ್ರಭುತ್ವ, ರಾಜ್ಯಗಳು, ರಾಜ್ಯಗಳ ಸ್ವಾಯುತ್ತತೆ ಇತ್ಯಾದಿಯಾಗಿ ಸುಧೀರ್ಘ ಚರ್ಚೆ ನಡೆಸಿದರು. ಕೇಂದ್ರದ ಸರ್ವಾಧಿಕಾರಿ ವರ್ತನೆ, ರಾಜ್ಯದ ಸ್ಥಾನ ಮಾನ ಕಬಳಿಕೆ, ಅನುದಾನ ಕಡಿತ, ಕೇಂದ್ರ ನಾಯಕರ ಬೇಕಾಬಿಟ್ಟಿ ವರ್ತನೆ ಇತ್ಯಾದಿ ವಿಷಯಗಳು ಚರ್ಚೆಯಲ್ಲಿದ್ದವು.

ಈ ಚರ್ಚೆಯಲ್ಲಿ ಟಿಆರ್ ಎಸ್ ಮತ್ತು ಡಿಎಂಕೆ ಪಕ್ಷಗಳ ಹಿರಿಯ ನಾಯಕರೂ ಪಾಲ್ಗೊಂಡಿದ್ದರು. ಕಳೆದ ಏಳು ದಶಕಗಳಿಂದಲೂ ಇಂಥ ಒಂದು ಸೌಹಾರ್ದಯುತ ಚರ್ಚೆ ರಾಜಕೀಯ ನಾಯಕರ ನಡುವೆ ಇವೆ ಎಂದು ರಾವ್ ಸಭೆಯ ನಂತರ ಸಂತಸ ವ್ಯಕ್ತಪಡಿಸಿದರು.

ಇಂಥ ಚರ್ಚೆಗಳು ಈಗ ಪ್ರಾರಂಭವಾದವಲ್ಲ, ನಾಳೆ ನಿಂತುಹೋಗುವ ಚರ್ಚೆಯೂ ಅಲ್ಲ, ದೇಶದಲ್ಲಿನ ಸದ್ಯದ ಸ್ಥಿತಿ, ಆಡಳಿತ, ರಾಜಕೀಯ ಇತ್ಯಾದಿಗಳು ಕುರಿತು ದೇಶಾದ್ಯಂತ ಇಂಥ ಚರ್ಚೆಗಳು ಆಗಬೇಕು. ಈ ಬಗ್ಗೆ ದೇವೇಗೌಡ, ಮಮತಾ ಬ್ಯಾನರ್ಜಿ ಅವರೊಂದಿಗೆ ನಾನು ಮತ್ತು ಸ್ಟಾಲಿನ್ ಚರ್ಚೆ ಮಾಡಿದ್ದೇವೆ. ಆದರೆ ಇಂಥ ಪರ್ಯಾಯ ವೇದಿಕೆ ಸೃಷ್ಟಿಸುವ ವಿಚಾರಗಳಲ್ಲಿ ಒಮ್ಮತಕ್ಕೆ ಬರಲು ಕನಿಷ್ಠ ಎರಡರಿಂದ ಮೂರು ತಿಂಗಳು ಬೇಕಾಗುತ್ತದೆ ಎಂದು ಸೇರಿಸಿದರು.

ದೇಶ ಜಾತ್ಯತೀತವಾಗಿರಬೇಕು. ದೆಹಲಿ ಕೇಂದ್ರೀಕೃತ ರಾಜಕೀಯ, ಏಕವ್ಯಕ್ತಿ ಅಭಿಪ್ರಾಯಗಳು, ಸರ್ವಾಧಿಕಾರಿ ವರ್ತನೆಗಳು ದೇಶಕ್ಕೆ ಮಾರಕವಾಗಿವೆ. ಡಿಎಂಕೆ ನಾಯಕ ಸ್ಟಾಲಿನ್ ಮತ್ತು ನನ್ನ ಅಭಿಪ್ರಾಯಗಳೂ ಈ ವಿಚಾರದಲ್ಲಿ ಒಮ್ಮತದಿಂದ ಕೂಡಿವೆ ಎಂದು ರಾವ್ ತಿಳಿಸಿದರು.

ಕಳೆದ ಏಳು ದಶಕಗಳಲ್ಲಿ ದೇಶ ಸರ್ವಾಧಿಕಾರ, ಅಧಿಕಾರ ಕೇಂದ್ರೀಕರಣಗಳಿದ್ದರೂ ರಾಜ್ಯಗಳಿಗೆ ಸ್ಥಾನಮಾನ, ಅಧಿಕಾರ ವಿಕೇಂದ್ರೀಕರಣ, ಸ್ವಾತಂತ್ರ ಇರುತ್ತಿದ್ದ ಯಶಸ್ವಿ ರಾಜಕೀಯ ವ್ಯವಸ್ಥೆಯನ್ನು ನಾವು ನೋಡಿದ್ದೇವೆ ಎಂದು ಅವರು ನೆನಪಿಸಿಕೊಂಡರು.

ಕೇಂದ್ರ ದಕ್ಷಿಣ ರಾಜ್ಯಗಳನ್ನು ನಿರ್ಲಕ್ಷಿಸುತ್ತಿದೆ ಎಂಬ ಅನುಮಾನ ನಿಮಗಿದೆಯೇ ಎಂಬ ಪ್ರಶ್ನೆಗೆ ರಾವ್, "ಆ ಬಗ್ಗೆ ನಮಗೆ ಇನ್ನೂ ಅನುಮಾನಗಳು ಉಳಿದಿಲ್ಲ. ರಾಜ್ಯಗಳಿಗೆ ಈ ಬಗ್ಗೆ ನ್ಯಾಯ ಸಿಗಬೇಕಿದೆ,” ಎಂದರು.

ಚಂದ್ರಬಾಬುನಾಯ್ಡು ಅವರನ್ನೂ ಈ ವೇದಿಕೆಗೆ ಆಹ್ವಾನಿಸುವಿರೇ ಎಂಬ ಪ್ರಶ್ನೆಗೆ “ ಚಂದ್ರಬಾಬು ನಾಯ್ಡು ನನ್ನ ಒಳ್ಳೆ ಸ್ನೇಹಿತ, ಅವರೂ ನಮ್ಮೊಂದಿಗೆ ಕೈ ಜೋಡಿಸುವರು,” ಎಂದರು.

ಈ ನಂತರ ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಮಾತನಾಡಿ, ಕೇಂದ್ರದ ಸರ್ವಾಧಿಕಾರಿ ವರ್ತನೆಗಳು, ರಾಜ್ಯಗಳ ಸ್ಥಾನಮಾನ ಮತ್ತು ಸ್ವಾಯುತ್ತತೆ, ಅನುದಾನ ನೀಡಿಕೆ, ಭಾಷೆ ಇತ್ಯಾದಿಗಳನ್ನು ಅಲ್ಲಗಳೆಯುವಂತಿದೆ. ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಸಮಾನ ಮನಸ್ಕ ಪಕ್ಷಗಳು ಒಂದಾಗಿ ಹೋರಾಡುವ ಪ್ರಯತ್ನವಿದು. ಆದರೆ ಚುನಾವಣೆ ವೇಳೆಗೆ ಈ ವೇದಿಕೆಯ ಸ್ವರೂಪ ಸ್ಪಷ್ಟವಾಗಲಿದೆ ರಾವ್ ಮಾತುಗಳನ್ನು ಸಮರ್ಥಿಸಿಕೊಂಡರು.