ಭೀಮಾ ಕೋರೆಂಗಾವ್ ಹಿಂಸಾಚಾರದ  ಸಂತ್ರಸ್ಥೆ ಸಾವು: ಇದು ಕೊಲೆ ಎಂದ ಪ್ರಕಾಶ್ ಅಂಬೇಡ್ಕರ್
ದೇಶ

ಭೀಮಾ ಕೋರೆಂಗಾವ್ ಹಿಂಸಾಚಾರದ ಸಂತ್ರಸ್ಥೆ ಸಾವು: ಇದು ಕೊಲೆ ಎಂದ ಪ್ರಕಾಶ್ ಅಂಬೇಡ್ಕರ್

ವರ್ಷದ ಆರಂಭದಲ್ಲಿ ನಡೆದ ಹಿಂಸಾಚಾರದಲ್ಲಿ ದಲಿತ ಯುವತಿಯೊಬ್ಬಳ ಮನೆಯನ್ನು ಸುಟ್ಟು ಹಾಕಲಾಗಿತ್ತು. ಇದೀಗ ಅದೇ ದಲಿತ ಯುವತಿ ಸಾವನ್ನಪ್ಪಿದ್ದಾಳೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

ಭೀಮಾ-ಕೋರೆಂಗಾವ್ ಯುದ್ಧಕ್ಕೆ 200 ವರ್ಷಗಳ ಸ್ಮರಣಾರ್ಥವಾಗಿ ಲಕ್ಷಾಂತರ ದಲಿತರು ವಿಜಯೋತ್ಸವ ಆಚರಿಸುತ್ತಿದ್ದಾಗ, ದಲಿತರ ಮೇಲೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಿಂಸಾಚಾರ ನಡೆಸಿದ್ದ ನೆನಪು ಇನ್ನೂ ಮಾಸದೇ ಇರುವಾಗ ಮತ್ತೊಂದು ದಾರುಣ ಘಟನೆ ಇದೀಗ ನಡೆದು ಹೋಗಿದೆ.

ವರ್ಷದ ಆರಂಭದಲ್ಲಿ ಆವತ್ತು ನಡೆದ ಹಿಂಸಾಚಾರದಲ್ಲಿ ದಲಿತ ಯುವತಿಯೊಬ್ಬಳ ಮನೆಯನ್ನು ಸುಟ್ಟು ಹಾಕಲಾಗಿತ್ತು. ಇದೀಗ 19 ವರ್ಷದ ಅದೇ ದಲಿತ ಯುವತಿ (ಪೂಜಾ ಸಾಕತ್) ಸಾವನ್ನಪ್ಪಿದ್ದಾಳೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

‘ಸೋಮವಾರ ಬೆಳಿಗ್ಗೆ ಭೀಮಾ ಕೊರೆಗಾಂವ್ ಏರಿಯಾದ ಬಾವಿಯಲ್ಲಿ ದಲಿತ ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ಇದಕ್ಕೂ ಮೊದಲು ಅವಳ ಕುಟುಂಬವು ಪೂಜಾ ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ಕುರಿತು ಒಂಭತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೂಜಾ ಕುಟುಂಬದವರು ಕೆಲವು ಆರೋಪಿಗಳ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ. ಜನವರಿ 1 ರಂದು ಈ ಕುಟುಂಬದ ಮನೆಯು ಬೆಂಕಿಗಾಹುತಿಯಾದ ನಂತರ ಅವಳು(ಪೂಜಾ) ಕೆಲವು ವ್ಯಕ್ತಿಗಳ ಮೇಲೆ ದೂರು ದಾಖಲಿಸಿದ್ದಳು. ಆದರೆ ಈ ದೂರನ್ನು ಹಿಂತೆಗೆದುಕೊಳ್ಳಬೇಕೆಂದು ಕೆಲವರು ಒತ್ತಾಯಪಡಿಸುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಆರೋಪಿಗಳೇ ಪೂಜಾ ಕೊಲೆಗೆ ಕಾರಣವಿರಬಹುದು ಎನ್ನುವ ಸಂಶಯ ವ್ಯಕ್ತಪಡಿಸುತ್ತಿದ್ದಾರೆ.

ಐಪಿಸಿ ಸೆಕ್ಷನ್ 306 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆಗಟ್ಟುವಿಕೆ) ಕಾಯಿದೆಯಡಿಯಲ್ಲಿ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ‘ಪೂಜಾ ದೇಹದ ಮೇಲೆ ಯಾವುದೇ ಗಾಯದ ಗುರುತು ಇರಲಿಲ್ಲ. ಅಲ್ಲದೇ ಯಾವುದೇ ಆತ್ಮಹತ್ಯೆ ಟಿಪ್ಪಣಿ (ಡೆಥ್ ನೋಟ್) ಕೂಡ ಕಂಡು ಬಂದಿಲ್ಲ. ಈ ಪ್ರಕರಣದ ಕುರಿತು ಮತ್ತಷ್ಟು ತನಿಖೆ ನಡೆಯುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಪೂಜಾ ಕುಟುಂಬದವರಿಗೆ ಮತ್ತು ಕೆಲವು ಆರೋಪಿಗಳ ಮದ್ಯ ಆಸ್ತಿ ಕಾರಣಕ್ಕಾಗಿ ವಿವಾದವಿತ್ತು. ಹೀಗಾಗಿ ಈ ಪ್ರಕರಣದ ಬಗ್ಗೆ ಎಲ್ಲ ದೃಷ್ಟಿಕೋನದಿಂದಲೂ ತನಿಖೆ ನಡೆಯುತ್ತಿದೆ. ಒಟ್ಟು ಒಂಭತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಅದರಲ್ಲಿ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ’ ಎಂದು ಪುಣೆಯ ಗ್ರಾಮೀಣ ಪೊಲೀಸ್ ಅಧೀಕ್ಷಕ ಸುವೆಜ್ ಹಕ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಕೊಲೆ ಇರಬಹುದು:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಪುರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಡಾ. ಬಿ.ಆರ್. ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್, “ಇದು ಆತ್ಮಹತ್ಯೆಯಲ್ಲ, ಕೊಲೆ,” ಎಂದು ಆರೋಪಿಸಿದ್ದಾರೆ.

“ಈ ಪ್ರಕರಣದ ಕುರಿತು ನಾನು ಪಡೆದ ವರದಿ ಪ್ರಕಾರ, ಅವಳನ್ನು ಕೊಲೆ ಮಾಡಲಾಗಿದೆ ಎಂದು ಸೂಚಿಸುತ್ತದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಬೇಕಿದೆ. ಆದರೆ ಕುಟುಂಬದವರು ನೀಡಿದ ದೂರಿನಲ್ಲಿ ಹೆಸರಿಸಲಾದ ಎಲ್ಲ ಆರೋಪಿಗಳನ್ನೂ ತಕ್ಷಣವೇ ಬಂಧಿಸಬೇಕು," ಎಂದಿದ್ದಾರೆ.

“ಪೊಲೀಸರು ಆರಂಭದಲ್ಲಿ ಈ ಪ್ರಕರಣವನ್ನು ದಾಖಲಿಸಿಕೊಳ್ಳಲು ಮುಂದೆ ಬರಲಿಲ್ಲ. ಅವರು ಆಸ್ತಿ ವಿವಾದಕ್ಕೆ ಸಂಬಂಧಪಟ್ಟಂತೆ ಈ ಘಟನೆ ನಡೆದಿರಬಹುದು ಎಂದರು. ಈ ರೀತಿಯಲ್ಲಿ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ,” ಎಂದು ಆರೋಪಿಸಿದರು.

ಆವತ್ತು ನಡೆದಿದ್ದೇನು?

ಸೋಮವಾರ ಕೋರೆಗಾಂವ್‍ನಲ್ಲಿ ನಡೆಯುತ್ತಿದ್ದ ಭೀಮಾ-ಕೋರೆಗಾಂವ್ ಯುದ್ಧದ 200ನೇ ವಿಜಯೋತ್ಸವ ಆಚರಣೆ ವೇಳೆ ಘರ್ಷಣೆ ನಡೆದಿತ್ತು. ದಲಿತ ಸಮುದಾಯದ ಸ್ವಾಭಿಮಾನದ ಸಂಕೇತವಾಗಿರುವ ಭೀಮಾ-ಕೋರೆಗಾಂವ್ ವಿಜಯೋತ್ಸವವನ್ನ ಸಂಭ್ರಮಿಸಲು ಕೋರೆಗಾಂವ್‍ನಲ್ಲಿ ಸಾವಿರಾರು ದಲಿತರು ಸೇರಿದ್ದರು.

ಈ ವೇಳೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಿಂಸಾಚಾರ ನಡೆಸಿದ್ದರು. ಪುಣೆಯಿಂದ 30 ಕಿಲೋಮೀಟರ್ ದೂರದಲ್ಲಿರುವ ಕೋರೆಗಾಂವ್‍ಗೆ ತೆರಳುತ್ತಿದ್ದ ವಾಹನಗಳ ಮೇಲೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕಲ್ಲು ತೂರಿದ್ದರು. ಕೇಸರಿ ಬಾವುಟ ಹಿಡಿದಿದ್ದ ಜನರ ಗುಂಪು, ದಲಿತ ಸಮುದಾಯದ ಮೇಲೆ ದಾಳಿ ನಡೆಸಿತ್ತು. ಉದ್ರಿಕ್ತ ಪ್ರತಿಭಟನಾಕಾರರು ಕೆಲವು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಲ್ಲದೇ ಅಪಾರ ಆಸ್ತಿ-ಪಾಸ್ತಿ ಹಾನಿಗೀಡಾಗಿತ್ತು.

ನಂತರ ಜನವರಿ 2 ರಂದು ದಲಿತ ಯುವತಿಯ (ಪೂಜಾ) ಮನೆಯನ್ನು ಸುಟ್ಟು ಹಾಕಲಾಯಿತು. ನಂತರ ಅವರು ಬಾಡಿಗೆ ಮನೆಯಲ್ಲಿ ವಾಸಿಸಲು ಆರಂಂಭಿಸಿದ್ದರು.

ಈ ಹಿನ್ನೆಲೆಯಲ್ಲಿ, ಪ್ರಕಾಶ್ ಅಂಬೇಡ್ಕರ್ ಮಹಾರಾಷ್ಟ್ರ ಬಂದ್‍ಗೆ ಕರೆ ನೀಡಿದ್ದರು. ರಾಜ್ಯದ ಬಹುತೇಕ ದಲಿತ ಹಾಗೂ ಎಡಪಂಥೀಯ ಸಂಘಟನೆಗಳು ಬೆಂಬಲ ನೀಡಿದ್ದವು. ಮಹಾರಾಷ್ಟ್ರದ ಇತರೆ ಪ್ರಮುಖ ನಗರಗಳಾದ ಪುಣೆ, ನಾಗ್ಪುರ, ಸಾಂಗ್ಲಿ, ಮಿರಜ್ ಸೇರಿದಂತೆ ರಾಜ್ಯಾದ್ಯಾಂತ ಪ್ರತಿಭಟನೆಗಳು ನಡೆದಿದ್ದವು.

ಒಂದು ಕಡೆ ಆವತ್ತು ದಲಿತ ಮಹಿಳೆಯ ಮನೆ ಸುಟ್ಟವರೇ ಆಕೆಯ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಮತ್ತೊಂದು ಕಡೆ ಆಸ್ತಿ ವಿವಾದದ ಕಾರಣವನ್ನೂ ಪೊಲೀಸರು ನೀಡುತ್ತಿದ್ದಾರೆ. ಒಟ್ಟಾರೆಯಾಗಿ ನಿಷ್ಪಕ್ಷಪಾತ ತನಿಖೆಯ ನಂತರವೇ ಸತ್ಯ ಹೊರ ಬರಲಿದೆ.