ಕೋಲ್ಕತ್ತಾ ಮೆಟ್ರೋ ರೈಲಿನ ಗಾಜು ಒಡೆದು ಹೊರ ಬಂದ ಪ್ರಯಾಣಿಕರು! 
ದೇಶ

ಕೋಲ್ಕತ್ತಾ ಮೆಟ್ರೋ ರೈಲಿನ ಗಾಜು ಒಡೆದು ಹೊರ ಬಂದ ಪ್ರಯಾಣಿಕರು! 

ಕೋಲ್ಕತ್ತಾ ಮೆಟ್ರೋದ ಸುರಂಗ ಮಾರ್ಗದಲ್ಲಿ ಭಾನುವಾರ ರಾತ್ರಿ ಲೈಟ್‌ಗಳು ಆಫ್‌ ಆಗಿ, ಭೀತಿಗೊಳಗಾದ ಪ್ರಯಾಣಿಕರು ಮೆಟ್ರೋ ರೈಲಿನ ಗಾಜುಗಳನ್ನು ಒಡೆದು ಹೊರಬಂದಿದ್ದಾರೆ.

ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ವೇಗದಾಯಕ ಸೇವೆ ಒದಗಿಸುತ್ತೇವೆ ಎನ್ನುವ ಮೆಟ್ರೋ ರೈಲು ವ್ಯವಸ್ಥೆಯು ಅಧಿಕಾರಿಗಳು ಹೇಳಿಕೊಳ್ಳುವಷ್ಟು ಸುರಕ್ಷಿತವೇನಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಭಾನುವಾರ ರಾತ್ರಿ ಕೋಲ್ಕತ್ತಾದ ಮೆಟ್ರೋ ರೈಲಿನಲ್ಲಿ ಏಕಾಏಕಿ ಲೈಟ್‌ಗಳು ಆಫ್‌ ಆಗಿ ಪ್ರಯಾಣಿಕರು ಆತಂಕಕ್ಕೊಳಗಾದ ಘಟನೆ ನಡೆದಿದೆ.

ಸುರಂಗ ಮಾರ್ಗದಲ್ಲಿ ಲೈಟ್‌ಗಳು ಆಫ್‌ ಆಗಿ ಭೀತಿಗೊಳಗಾದ ಪ್ರಯಾಣಿಕರು ಮೆಟ್ರೋ ರೈಲಿನ ಗಾಜುಗಳನ್ನು ಒಡೆದು ಹೊರಬಂದಿದ್ದಾರೆ. ಭಾರತದಲ್ಲಿ ಮೊದಲ ಮೆಟ್ರೊ ರೈಲು ಸೇವೆ ಆರಂಭವಾದ ಕೋಲ್ಕತ್ತಾದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಅವಘಡವಾಗಿದೆ. ಕೋಲ್ಕತ್ತಾದಲ್ಲಿ ಮೆಟ್ರೋ ಸೇವೆ ಆರಂಭವಾಗಿದ್ದು 1984ರ ಅಕ್ಟೋಬರ್ 24ರಂದು.

ನಡೆದಿದ್ದೇನು:

ಕವಿ ಸುಭಾಷ್ ಮೆಟ್ರೋ ರೈಲು ನಿಲ್ದಾಣದಿಂದ ನೇತಾಜಿ ಭವನ ಮೆಟ್ರೋ ನಿಲ್ದಾಣದ ಮಾರ್ಗದ ಮಧ್ಯದ ಸುರಂಗದ ಮೆಟ್ರೋ ಮಾರ್ಗದಲ್ಲಿ ಸುರಂಗದ ಹಾಗೂ ಮೆಟ್ರೋ ರೈಲಿನೊಳಗಿನ ಲೈಟ್‌ಗಳೆಲ್ಲವೂ ಆಫ್‌ ಆಗಿ ಕತ್ತಲೆ ಆವರಿಸಿದೆ. ಇದರಿಂದ ಆತಂಕಗೊಂಡ ಪ್ರಯಾಣಿಕರು ತಮ್ಮ ಸುರಕ್ಷತೆಗಾಗಿ ಮೆಟ್ರೋ ಗ್ಲಾಸುಗಳನ್ನು ಒಡೆದು ಹೊರ ಬಂದಿದ್ದಾರೆ.

“ಮೆಟ್ರೋ ರೈಲಿನಲ್ಲಿನ ಪ್ರಯಾಣ ಮಾಡುವಾಗ ಏಕಾಏಕಿ ಲೈಟ್‌ಗಳು ಆಫ್‌ ಆದವು. ಇದರಿಂದ ಮೆಟ್ರೋದಲ್ಲಿದ್ದವರೆಲ್ಲರೂ ಭಯಭೀತರಾದರು. ಮಕ್ಕಳು ಅಳಲು ಪ್ರಾರಂಭಿಸಿದರು. ಕೊನೆಗೆ ಎಲ್ಲರೂ ಮೆಟ್ರೋದಿಂದ ಕೆಳಗೆ ಇಳಿಯಬೇಕು ಎಂದು ಮೆಟ್ರೊ ಸಿಬ್ಬಂದಿ ಪ್ರಕಟಣೆ ನೀಡಿದರು” ಎನ್ನುತ್ತಾರೆ ಈ ಘಟನೆಗೆ ಸಾಕ್ಷಿಯಾದ ಪ್ರಯಾಣಿಕರೊಬ್ಬರು.

“ಪ್ರಯಾಣದ ಸಂದರ್ಭದಲ್ಲಿಯೇ ಶಾರ್ಟ್‌ ಸರ್ಕಿಟ್‌ ಆಗಿದೆ. ಇದನ್ನು ನಾವು ಮೆಟ್ರೋ ಸಿಬ್ಬಂದಿ ಗಮನಕ್ಕೆ ತರಲು ಪ್ರಯತ್ನಿಸಿದೆವು. ಸಿಬ್ಬಂದಿ ಪ್ರಕಟಣೆ ನೀಡಿ ಸುಮಾರು ಐದು ನಿಮಿಷಗಳಾದರೂ ರೈಲಿನ ಬಾಗಿಲುಗಳು ತೆರೆಯದೇ ಇದ್ದಾಗ ನಾವು ಗಾಜನ್ನು ಒಡೆದು ಹೊರ ಬಂದೆವು,” ಎನ್ನುತ್ತಾರೆ ಅವರು.

ಈ ಘಟನೆಯಿಂದ ಇತರೆ ಮೆಟ್ರೋ ರೈಲುಗಳ ಸಂಚಾರವೂ ಕೆಲ ಕಾಲ ಅಸ್ತವ್ಯಸ್ತಗೊಂಡಿತ್ತು. ಶಾರ್ಟ್‌ ಸರ್ಕಿಟ್‌ನಿಂದಾಗಿ ಲೈಟ್‌ಗಳು ಆಫ್‌ ಆದವು ಎಂದು ಪ್ರಯಾಣಿಕರು ಹೇಳುತ್ತಿದ್ದರೆ, ‘ವಿದ್ಯುತ್ ವ್ಯತ್ಯಯದಿಂದ ಈ ಸಮಸ್ಯೆ ಕಾಣಿಸಿಕೊಂಡಿತು’ ಎಂದು ಮೆಟ್ರೊ ಅಧಿಕಾರಿಗಳು ಹೇಳುತ್ತಿದ್ದಾರೆ. ಅದೇನೇ ಆದರೂ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರು ಅನುಭವಿಸಿದ ಆತಂಕ ಮತ್ತು ತಲ್ಲಣಗಳಿಗೆ ಹೊಣೆ ಯಾರು ಎಂಬ ಪ್ರಶ್ನೆ ಎದುರಾಗಿದೆ.

ಮೆಟ್ರೋ ರೈಲು ಸಂಚಾರ ಈ ರೀತಿ ಸ್ಥಗಿತವಾಗಿದ್ದು ದೇಶದಲ್ಲಿ ಇದೇ ಮೊದಲೇನಲ್ಲ. ಈ ಹಿಂದೆಯೂ ಬೆಂಗಳೂರಿನ ‘ನಮ್ಮ ಮೆಟ್ರೋ’ ಒಳಗೊಂಡು ಅನೇಕ ಕಡೆಗಳಲ್ಲಿ ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಆತಂಕಗೊಂಡ ಘಟನೆಗಳು ನಡೆದಿವೆ.

ಬಂದ್ ಮತ್ತು ಮೆಟ್ರೋ ಸ್ಥಗಿತ:

ಬೆಂಗಳೂರಿನ ‘ನಮ್ಮ ಮೆಟ್ರೋ’ದ ಮೊದಲ ಹಂತದ ಕಾಮಗಾರಿ ಸಂಪೂರ್ಣವಾಗಿ ಮುಗಿದು 2017ರ ಜೂನ್ 18ರಂದು ಮೊದಲ ಹಂತದ ಎಲ್ಲಾ ಮಾರ್ಗಗಳೂ ಲೋಕಾರ್ಪಣೆಗೊಂಡವು. ಸಾರ್ವಜನಿಕರು ಖುಷಿಯಿಂದ ಮೆಟ್ರೋ ಸಂಚಾರವನ್ನು ಪ್ರಾರಂಭಿಸಿದ್ದರು. ಆದರೆ ಆ ಸಂದರ್ಭದಲ್ಲಿ ಅನಾವಶ್ಯಕವಾಗಿ ಹಿಂದಿ ಫಲಕಗಳನ್ನು ಬಳಸಿ ‘ನಮ್ಮ ಮೆಟ್ರೋ’ ಸುದ್ದಿಗೆ ಗ್ರಾಸವಾಗಿತ್ತು.

ಉದ್ಘಾಟನೆಯಾಗಿ ಒಂದು ತಿಂಗಳೊಳಗೇ ಮತ್ತೆ ಮೆಟ್ರೋ ಸುದ್ದಿಯಾಗಿತ್ತು. 2017ರ ಜುಲೈ 6ರಂದು ಬೆಳಿಗ್ಗೆ ವಿಶ್ವೇಶ್ವರಯ್ಯ ನಿಲ್ದಾಣದಲ್ಲಿ ನಡೆದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್‌) ಹಾಗೂ ಮೆಟ್ರೊ ಸಿಬ್ಬಂದಿ ನಡುವಿನ ಹೊಡೆದಾಟ ಮೆಟ್ರೋ ಬಂದ್‌ಗೆ ಕಾರಣವಾಗಿತ್ತು.

ಹೊಡೆದಾಟದಲ್ಲಿ ಭಾಗಿಯಾಗಿದ್ದ ಮೆಟ್ರೋ ಸಿಬ್ಬಂದಿಯನ್ನು ಬಂಧಿಸಲಾಗಿತ್ತು. ಬಂಧಿಸಲ್ಪಟ್ಟಿರುವ ಮೆಟ್ರೋ ಸಿಬ್ಬಂದಿಯ ಬಿಡುಗಡೆ ಹಾಗೂ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯ ನಿರ್ಲಕ್ಷ್ಯತನ ವಿರೋಧಿಸಿ ಮೆಟ್ರೋ ಸಿಬ್ಬಂದಿ ರೈಲು ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮುಂದುವರಿಸಿದ್ದರು.

ಈ ಪ್ರತಿಭಟನೆಯ ಪರಿಣಾಮವಾಗಿ ಜುಲೈ 7ರಂದು ಬೆಳಗ್ಗೆ 5 ಗಂಟೆಗೆ ಆರಂಭವಾಗಬೇಕಿದ್ದ ಮೆಟ್ರೋ ಸೇವೆ ನಿಂತು ಹೋಗಿತ್ತು. ಈ ಬಗ್ಗೆ ಮೆಟ್ರೋ ಅಧಿಕಾರಿಗಳು ಪ್ರತಿಭಟನೆಯ ಸ್ಥಳಕ್ಕಾಗಮಿಸಿ ಸಂಧಾನ ಮಾಡಲೆತ್ನಿಸಿದರೂ, ಸಾಧ್ಯವಾಗದೇ ಆವತ್ತಿನ ಬೆಳಗಿನ ಮೆಟ್ರೋ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.

ದೆಹಲಿ ಮೆಟ್ರೋ ಸ್ಥಗಿತಗೊಂಡಿದ್ದು:

ಅದು 2017ರ ಅಕ್ಟೋಬರ್ 21ರ ಶನಿವಾರ. ತಾಂತ್ರಿಕ ಸಮಸ್ಯೆಯಿಂದಾಗಿ ಬೆಳಗ್ಗೆ 9.20ರ ಸುಮಾರಿಗೆ ಸುಮಾರು 45 ನಿಮಿಷಗಳ ಕಾಲ ದೆಹಲಿ ಮೆಟ್ರೋ ಸೇವೆ ಸ್ಥಗಿತಗೊಂಡಿತ್ತು. ಇದರಿಂದ ದೆಹಲಿ ಮೆಟ್ರೋ ಪ್ರಯಾಣಿಕರು ಆತಂಕಕ್ಕೆ ಈಡಾಗಿದ್ದರು.

ದೆಹಲಿ ಮೆಟ್ರೋದ ಪ್ರಮುಖ ನಿಲ್ದಾಣ ರಾಜೀವ್ ಚೌಕ್ ಮೆಟ್ರೋ ಸ್ಟೇಷನ್. ರಾಜೀವ್ ಚೌಕ ಮತ್ತು ಆರ್
.ಕೆ. ಆಶ್ರಮ ನಿಲ್ದಾಣದ ನಡುವೆ ಮೆಟ್ರೋ ರೈಲು ತಾಂತ್ರಿಕ ತೊಂದರೆಯಿಂದ ಮಾರ್ಗ ಮಧ್ಯೆ ನಿಂತಿತ್ತು. ಈ ಹಿನ್ನೆಲೆಯಲ್ಲಿ ತುರ್ತು ನಿರ್ಗಮನದ ದ್ವಾರದ ಮೂಲಕ ಪ್ರಯಾಣಿಕರನ್ನು ರಕ್ಷಿಸಲಾಯಿತು.

ಇದರಿಂದಾಗಿ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಅಲ್ಲದೇ ಈ ಮಾರ್ಗದಲ್ಲಿ ಇತರ ಮೆಟ್ರೋ ರೈಲುಗಳ ಸಂಚಾರಕ್ಕೂ ತೊಂದರೆಯುಂಟಾಗಿತ್ತು. ಆದರೆ ಬೆಳಗ್ಗೆ 10.05ರ ವೇಳೆಗೆ ಅಂದರೆ ಅರ್ಧ ಗಂಟೆಯಲ್ಲಿ ಸಮಸ್ಯೆಯನ್ನು ಸರಿಪಡಿಸಲಾಯಿತು ಎಂದು ದೆಹಲಿ ಮೆಟ್ರೋ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು.

ಕೈಕೊಟ್ಟಿತ್ತು ವಿದ್ಯುತ್:

2018 ಜನವರಿ 2ರ ಮಂಗಳವಾರ ಎಂದಿನಂತೆ ಬೆಂಗಳೂರಿನ ಮೆಟ್ರೋ ಪ್ರಯಾಣಿಕರು ಮೆಟ್ರೋ ಏರಿದ್ದರು. ಆದರೆ ಬೈಯಪ್ಪನಹಳ್ಳಿ- ಮೈಸೂರು ರಸ್ತೆ ಮಾರ್ಗ ಹಾಗೂ ನಾಗಸಂದ್ರ- ಯಲಚೇನಹಳ್ಳಿ ಮಾರ್ಗದಲ್ಲಿನ ಮೆಟ್ರೋ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿತ್ತು.

ಅಂದು ವಿದ್ಯುತ್ ಪೂರೈಕೆ ವ್ಯತ್ಯಯದಿಂದ ಮೆಟ್ರೋ ಸಂಚಾರ ಕೆಲ ಕಾಲ ಸ್ಥಗಿತಗೊಂಡಿತ್ತು. ಇದರಿಂದಾಗಿ ಆಗ ಬೋಗಿಯೊಳಗೆ ಹವಾ ನಿಯಂತ್ರಣ (ಎಸಿ) ವ್ಯವಸ್ಥೆ ನಿಂತು ಪ್ರಯಾಣಿಕರು ಉಸಿರಾಟದ ತೊಂದರೆ ಅನುಭವಿಸಬೇಕಾಯಿತು.

ಒಂದು ವೇಳೆ ಪ್ರಯಾಣಿಕರ ಆರೋಗ್ಯದಲ್ಲಿ ಸಮಸ್ಯೆಯಾದರೆ ಯಾರು ಹೊಣೆ ಎನ್ನುವ ಪ್ರಶ್ನೆಯನ್ನು ಆವತ್ತು ಮೆಟ್ರೋ ಪ್ರಯಾಣಿಕರು ಎತ್ತಿದ್ದರು. ಅಂದು ಸುಮಾರು 5 ನಿಮಿಷಗಳ ಕಾಲ ಮೆಟ್ರೋ ಸಂಚಾರ ಸ್ಥಗಿತವಾಗಿತ್ತು.

ಹೀಗೆ ಮೆಟ್ರೋ ಸಂಚಾರವು ಪ್ರಯಾಣಿಕರಿಗೆ ಎಷ್ಟು ಅನುಕೂಲಕರವೋ ಅಷ್ಟೇ ಆತಂಕವನ್ನೂ ನೀಡಿದೆ. ಅವರ ಪ್ರಯಾಣದ ಸುರಕ್ಷತೆಯ ಬಗ್ಗೆ ಆಗಾಗ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಅಲ್ಲದೇ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಆರಂಭಗೊಂಡ ಮೆಟ್ರೋ ಇಂದು ಅದನ್ನು ಎಷ್ಟರ ಮಟ್ಟಿಗೆ ಪೂರೈಸಿದೆಯೋ ಗೊತ್ತಿಲ್ಲ. ಆದರೆ ಪ್ರಯಾಣಿಕರ ಸುರಕ್ಷತೆ ಬಗ್ಗೆ ಪ್ರಾಮಾಣಿಕ ಕಾಳಜಿ ವಹಿಸುವುದು ಅಗತ್ಯ.