samachara
www.samachara.com
ವಿಶೇಷ ಸ್ಥಾನಮಾನಕ್ಕಾಗಿ ಆಂಧ್ರ ಪ್ರದೇಶ ಬಂದ್‌; ಭಿನ್ನಾಭಿಪ್ರಾಯ ತೊರೆದು ಒಂದಾದ ಪಕ್ಷಗಳು
ದೇಶ

ವಿಶೇಷ ಸ್ಥಾನಮಾನಕ್ಕಾಗಿ ಆಂಧ್ರ ಪ್ರದೇಶ ಬಂದ್‌; ಭಿನ್ನಾಭಿಪ್ರಾಯ ತೊರೆದು ಒಂದಾದ ಪಕ್ಷಗಳು

ಆಂಧ್ರ ಪ್ರದೇಶದ ಅಭಿವೃದ್ಧಿಗಾಗಿ ಅಲ್ಲಿನ ಎಲ್ಲಾ ಪಕ್ಷಗಳು ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ತೊರೆದು ಒಟ್ಟಾಗಿ ನಿಂತಿವೆ. ವಿಶೇಷ ಸ್ಥಾನಮಾನಕ್ಕಾಗಿ ಒಟ್ಟಾಗಿ ಒತ್ತಾಯಿಸುತ್ತಿವೆ. ಆದರೆ ಕೇಂದ್ರ ಸರಕಾರ ಆಂಧ್ರದ ಕಡೆಗೆ ಗಮನ ಹರಿಸುತ್ತಿಲ್ಲ.

ಆಂಧ್ರ ಪ್ರಧೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವಂತೆ ಒತ್ತಾಯಿಸಿ ಸೋಮವಾರ ಪ್ರತ್ಯೇಕ ವಿಭಜನಾ ಹಮೀಲ ಸಾಧನಾ ಸಮಿತಿ ಒಂದು ದಿನದ ರಾಜ್ಯ ಬಂದ್‌ಗೆ ಕರೆ ನೀಡಿತ್ತು. ವಿಶೇಷ ಸ್ಥಾನಮಾನವನ್ನು ನೀಡಬೇಕೆಂಬ ಆಂಧ್ರ ಪ್ರದೇಶದ ಬೇಡಿಕೆ ಕೇಂದ್ರ ಸರಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆಯದ ಕಾರಣದಿಂದಾಗಿ ಬಂದ್‌ಗೆ ಕರೆ ನೀಡಲಾಗಿತ್ತು.

ವಿಶೇಷ ಸ್ಥಾನಮಾನದ ಬೇಡಿಕೆಗೆ ರಾಜ್ಯದ ಎಲ್ಲಾ ಪಕ್ಷಗಳು ತಮ್ಮಲ್ಲಿನ ಬೇಧವನ್ನು ಮರೆತು ಜತೆಯಾಗಿ ನಿಂತಿದ್ದವು. ಪ್ರತಿಪಕ್ಷಗಳಾದ ಕಾಂಗ್ರೆಸ್‌, ವೈಎಸ್‌ಆರ್‌ ಕಾಂಗ್ರೆಸ್‌, ನಟ ಪವನ್‌ ಕಲ್ಯಾಣ್‌ರ ಜನ ಸೇನಾ ಪಕ್ಷಗಳು ಈ ಬಂದ್‌ಗೆ ಬೆಂಬಲ ಸೂಚಿಸಿವೆ. ಆದರೆ ಆಡಳಿತಾರೂಢ ತೆಲುಗು ದೇಶ ಪಕ್ಷ ರಾಜ್ಯವ್ಯಾಪಿ ಬಂದ್‌ಗೆ ವಿರೋಧ ವ್ಯಕ್ತ ಪಡಿಸಿತ್ತು.

ವಿಶೇಷ ಸ್ಥಾನಮಾನವನ್ನು ಒದಗಿಸುವಂತೆ ಒತ್ತಾಯಿಸಿ ನಡೆಸಲಾಗುತ್ತಿರುವ ಬಂದ್‌ಗೆ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌(ಸಿಐಟಿಯು) ಮತ್ತು ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌(ಎಐಸಿಟಿಯು) ಸಂಘಟನೆಗಳೂ ಸಹ ಬೆಂಬಲ ಸೂಚಿಸಿದ್ದವು. ರಾಜ್ಯದಲ್ಲಿನ ಕೆಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳು ತೆರೆಯಲ್ಪಟ್ಟಿಲ್ಲ. ಗೀತಮ್‌ ವಿಶ್ವ ವಿದ್ಯಾಲಯ ತನ್ನ ಸೆಮಿಸ್ಟರ್‌ ಪರೀಕ್ಷೆಗಳನ್ನು ಬಂದ್‌ ಕಾರಣಕ್ಕಾಗಿ ಮುಂದೂಡಿತ್ತು. ಹಿಂಸಾಚಾರವನ್ನು ತಡೆಗಟ್ಟುವ ಸಲುವಾಗಿ ರಾಜ್ಯಾದ್ಯಂತ ಪೊಲೀಸ್‌ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

ಬಂದ್‌ ಕುರಿತು ಪ್ರತಿಕ್ರಿಯಿಸಿದ್ದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, “ವಿಶೇಷ ಸ್ಥಾನಮಾನವನ್ನು ನೀಡಲು ಮುಂದಾಗದ ಮೊದಿ ಸರಕಾರದ ವಿರುದ್ಧ ಜನರಲ್ಲಿ ಅರಿವು ಮೂಡಿಸಬೇಕಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಕುರಿತು ಹೋರಾಟವನ್ನು ಮಾಡಬೇಕಿದೆ. ಅದನ್ನು ಬಿಟ್ಟು ರಾಜ್ಯದಲ್ಲಿ ಬಂದ್‌ ಆಚರಿಸುವುದರಿಂದ ಯಾವುದೇ ಉಪಯೋಗವಿಲ್ಲ. ಹೀಗೆ ನಮ್ಮ ರಾಜ್ಯವನ್ನು ನಾವೇ ಬಂದ್‌ ಮಾಡುವುದು ಮೋದಿಗೆ ಸಂತಸವನ್ನು ಉಂಟು ಮಾಡಬಹುದು,” ಎಂದಿದ್ದಾರೆ.

ಆಂಧ್ರ ಪ್ರದೇಶ ಬಂದ್‌ ಕುರಿತಾಗಿ ಚಂದ್ರಬಾಬು ನಾಯ್ಡುರವರ ಪ್ರತಿಕ್ರಿಯೆಯನ್ನು ವೈಎಸ್‌ಆರ್‌ ಕಾಂಗ್ರೆಸ್‌ ಅಲ್ಲಗಳೆದಿತ್ತು. ಚಂದ್ರಬಾಬು ನಾಯ್ಡು ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ ಎಂದು ಛೇಡಿಸಿತ್ತು.

“ಚಂದ್ರಬಾಬು ನಾಯ್ಡು ಪ್ರತಿಪಕ್ಷದ ನಾಯಕರಾಗಿದ್ದಾಗ ಹಲವಾರು ಬಾರಿ ಅವರೇ ಬಂದ್‌ ನಡೆಸುತ್ತಿದ್ದರು. ಈಗ ಅಧಿಕಾರಕ್ಕೇರಿದ ಮೇಲೆ ಮುಷ್ಕರಗಳನ್ನು ವಿರೋಧಿಸುತ್ತಿದ್ದಾರೆ. ಬಂದ್‌ ಮಾಡಿದರೆ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎನ್ನುತ್ತಿದ್ದಾರೆ,” ಎಂದು ವೈಎಸ್‌ಆರ್‌ ಕಾಂಗ್ರೆಸ್‌ನ ಅಂಬಟಿ ರಾಮ್‌ಬಾಬು ಲೇವಡಿ ಮಾಡಿದ್ದರು.

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಲ್ಲಿ ಕೇಂದ್ರ ಸರಕಾರ ತೊರಿಸುತ್ತಿರುವ ನಿರ್ಲಕ್ಷ್ಯತೆಯನ್ನು ವಿರೋಧಿಸಿ, ತೆಲುಗು ದೇಶಂ ಪಕ್ಷ ಭಾರತೀಯ ಜನತಾ ಪಾರ್ಟಿ ನಾಯಕತ್ವದ ಎನ್‌ಡಿಎ ಮೃತ್ರಿಕೂಟದಿಂದ ಹೊರಬಂದಿತ್ತು. ಪಕ್ಷದ ಇಬ್ಬರು ಕೇಂದ್ರ ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು.

ಸರ್ವ ಪಕ್ಷಗಳ ಸಭೆಯಲ್ಲಿ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು, ತೆಲುಗು ದೇಶಂ ಪಕ್ಷ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ನಿಲ್ಲಲಿದೆ ಎಂದಿದ್ದರು. ಎಪ್ರಿಲ್‌ ತಿಂಗಳ ಮೊದಲ ದಿನಗಳಲ್ಲಿ ದೆಹಲಿಯಲ್ಲಿ ಬೇರೆ ಪಕ್ಷಗಳ ನಾಯಕರನ್ನು ಭೇಟಿ ಮಾಡಿದ್ದ ಚಂದ್ರಬಾಬು ನಾಯ್ಡು, ಆಂಧ್ರ ಪ್ರದೇಶದ ವಿಶೇಷ ಸ್ಥಾನಮಾನದ ಬೇಡಿಕೆಗೆ ಜತೆಯಾಗಬೇಕು ಎಂದು ಕೋರಿದ್ದರು.

ಏನಿದು ವಿಶೇಷ ಸ್ಥಾನಮಾನ?:

ರಾಜ್ಯದ ಅಂತರ್ಗತ ಲಕ್ಷಣಗಳು ಮತ್ತು ಆ ರಾಜ್ಯ ಹೊಂದಿರುವ ಆದಾಯದ ಮೂಲಗಳನ್ನು ಆಧರಿಸಿ, ವಿಶೇಷ ಸ್ಥಾನಮಾನವನ್ನು ನೀಡಲು ಅವಕಾಶವಿದೆ. ಪಿಆರ್‌ಎಸ್‌ ಲೆಜಿಸ್ಲೇಟಿವ್‌ ರಿಸರ್ಚ್‌ ಸಂಸ್ಥೆಯ ಪ್ರಕಾರ ರಾಜ್ಯವೊದಕ್ಕೆ ವಿಶೇಷ ಸ್ಥಾನಮಾನವನ್ನು ನೀಡಲು, ಆ ರಾಜ್ಯವು ಹೆಚ್ಚು ಗುಡ್ಡಗಾಡು ಪ್ರದೇಶವನ್ನು ಹೊಂದಿರಬೇಕು. ಕಡಿಮೆ ಜನಸಂಖ್ಯೆಯನ್ನು ಹೊಂದಿದ್ದು, ಆದಿವಾಸಿ ಸಮುದಾಯಗಳ ಜನರ ಪ್ರಮಾಣವೂ ಹೆಚ್ಚಾಗಿರಬೇಕು. ಮೂಲ ಸೌಕರ್ಯ ಹಾಗೂ ಆರ್ಥಿಕ ಸ್ಥಿತಿಗತಿಗಳಲ್ಲಿ ಹಿಂದುಳಿದಿರಬೇಕು. ಈ ಎಲ್ಲಾ ಲಕ್ಷಣಗಳನ್ನು ಹೊಂದಿರುವ ರಾಜ್ಯಗಳಿಗೆ ಈ ವಿಶೇಷ ಸ್ಥಾನಮಾನವನ್ನು ನೀಡಲಾಗುತ್ತದೆ.

ಜಮ್ಮು ಮತ್ತು ಕಾಶ್ಮೀರ, ಅಸ್ಸಾಮ್‌, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಸಿಕ್ಕಿಂ, ಹಿಮಾಚಲ ಪ್ರದೇಶ, ಉತ್ತರಖಾಂಡ್‌, ತ್ರಿಪುರ ಮತ್ತು ಮಿಝೋರಾಮ್‌ ರಾಜ್ಯದಲ್ಲಿ ಈಗಾಗಲೇ ವಿಶೇಷ ಸ್ಥಾನಮಾನ ದಕ್ಕಿದೆ. ಇವೆಲ್ಲವೂ ಹೆಚ್ಚು ಗುಡ್ಡಗಾಡು ಪ್ರದೇಶಗಳನ್ನು ಹೊಂದಿದ್ದು, ಆದಿವಾಸಿ ಸಮುದಾಯಗಳು ಹೆಚ್ಚಾಗಿರುವ ರಾಜ್ಯಗಳಾಗಿವೆ.

ವಿಶೇಷ ಸ್ಥಾನಮಾನವನ್ನು ಪಡೆದ ರಾಜ್ಯಗಳಿಗೆ ಕೇಂದ್ರದಿಂದ ದೊರೆಯುವ ಹಣ ನೆರವಿನ ರೂಪದಲ್ಲಿರುತ್ತದೆ. ಕೇಂದ್ರದಿಂದ ದೊರೆಯುವ ನೆರವಿನಲ್ಲಿ ಶೇ.90ರಷ್ಟು ಹಣವನ್ನು ಈ ರಾಜ್ಯಗಳು ಹಿಂತಿರುಗಿಸುವ ಅಗತ್ಯವಿಲ್ಲ. ಶೆ.10ರಷ್ಟು ಮಾತ್ರ ಕೇಂದ್ರಕ್ಕೆ ಮರಳಿಸಬೇಕಿರುತ್ತದೆ.

ಜತೆಗೆ ಈ ರಾಜ್ಯಗಳಿಗೆ ಸುಂಕ ವಿನಾಯಿತಿಯೂ ಇರುತ್ತದೆ. ಬೇರೆ ರಾಜ್ಯಗಳು ತೆರಬೇಕಾದಷ್ಟು ಅಬಕಾರಿ ತೆರಿಗೆಗಳ ಪ್ರಮಾಣವೂ ಕಡಿಮೆ ಇರುತ್ತದೆ. ಆದಾಯ ತೆರಿಗೆ ಮತ್ತು ಕಾರ್ಪೊರೇಟ್‌ ತೆರಿಗೆಗಳಲ್ಲಿಯೂ ಸಹ ಈ ರಾಜ್ಯಗಳು ರಿಯಾಯಿತಿಯನ್ನು ಪಡೆದಿರುತ್ತವೆ.

ಆಂಧ್ರ ಪ್ರದೇಶಕ್ಕೇಕೆ ವಿಶೇಷ ಸ್ಥಾನಮಾನ?:

ಆಂಧ್ರ ಪ್ರದೇಶ ಇಬ್ಭಾಗವಾಗಿ ತೆಲಂಗಾಣ ಬೇರೆಯಾದ ದಿನದಿಂದ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ಕೂಗು ಕೇಳಿಸುತ್ತಿದೆ. ರಾಜ್ಯ ರಾಜಧಾನಿ ಹೈದರಾಬಾದ್‌ಅನ್ನೂ ಒಳಗೊಂಡಂತೆ ತೆಲಂಗಾಣ ಬೇರೆಯಾದ ನಂತರ ಹೊಸ ಆಂಧ್ರ ಪ್ರದೇಶದಲ್ಲಿ ಚುನಾವಣೆ ನಡೆದು, ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು ಅಧಿಕಾರಕ್ಕೇರುತ್ತಾರೆ.

ಸ್ವಂತ ರಾಜಧಾನಿ ಇಲ್ಲದ ಸೀಮಾಂಧ್ರದ ಹಲವಾರು ಭಾಗಗಳು ಮೂಲ ಸೌಕರ್ಯಗಳನ್ನೂ ಒಳಗೊಂಡಿರಲಿಲ್ಲ. ಶೇ. 80-90ರಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದ ಹೈದರಾಬಾದ್‌ ಕೂಡ ಇಲ್ಲವಾಗಿ, ದೊರೆಯುತ್ತಿದ್ದ ಆದಾಯಕ್ಕೂ ಕತ್ತರಿ ಬಿದ್ದಿತ್ತು. ಈಗ ಹೊಸ ರಾಜಧಾನಿಯನ್ನು ನಿರ್ಮಿಸಿಕೊಳ್ಳುವ ಹೊಣೆ ಆಂಧ್ರ ಪ್ರದೇಶದ ಮೇಲಿದೆ.

ಆಂಧ್ರ ಪ್ರದೇಶದ ವಿಭಜನೆ ವೇಳೆಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ವಾಗ್ದಾನವನ್ನು ಕೊಟ್ಟಿತ್ತು. ನಂತರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಕೂಡ ಇದೇ ಮಾತನ್ನೇ ಹೇಳಿಕೊಂಡು ಬಂದಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದು 4 ವರ್ಷಗಳು ಕಳೆದರೂ ಕೂಡ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ಕಲ್ಪಿಸುವತ್ತ ಗಮನ ಹರಿಸಿಲ್ಲ.

ಬಿಹಾರ, ರಾಜಸ್ಥಾನ, ಒಡಿಶಾ, ಜಾರ್ಖಂಡ್, ಛತ್ತೀಸ್‌ಘರ್‌ ಕೂಡ ವಿಶೇಷ ಸ್ಥಾನಮಾನಕ್ಕೆ ಬೇಡಿಕೆಯಿಟ್ಟಿವೆ. ಆಂರ್ಧರ ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವುದಾದರೆ ಈ ರಾಜ್ಯಗಳಿಗೂ ಈ ಸ್ಥಾನಮಾನವನ್ನು ಕಲ್ಪಿಸಬೇಕಾಗುತ್ತದೆ, ಅದು ಸಾಧ್ಯವಿಲ್ಲ ಎನ್ನವುದು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ವಾದ.

ಒಂದೆಡೆ ವಿಶೇಷ ಸ್ಥಾನಮಾನಕ್ಕಾಗಿ ಆಂಧ್ರದೊಳಗಿನ ಪಕ್ಷ ಮತ್ತು ಸಂಘಟನೆಗಳು ತಮ್ಮಗೊಳಗಿನ ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಒಂದಾಗಿ ನಿಂತಿದ್ದರೆ, ಕೇಂದ್ರ ಸರಕಾರ ಆಂಧ್ರದ ಬೇಡಿಕೆಗೆ ಸೊಪ್ಪು ಹಾಕುತ್ತಿಲ್ಲ. ಕೇಂದ್ರದ ಈ ನಿರ್ಲಕ್ಷ್ಯ ಈಗ ಆಂಧ್ರ ಜನರ ಕೋಪ ಮೋದಿಯೆಡೆಗೆ ತಿರುಗುವಂತೆ ಮಾಡಿದೆ. ಮುಂದೆಯಾದರೂ ಮೋದಿ ಆಂಧ್ರ ಜನರ ಕೋರಿಕೆಗೆ ಅಸ್ತು ಎನ್ನುತ್ತಾರೆಯೇ ಏನುವುದನ್ನು ಕಾಲವೇ ತಿಳಿಸಿಕೊಡಲಿದೆ.