ಭಾರತದ ವಿದೇಶಿ ವಿನಿಯಮ ನೀತಿ ಮೇಲೆ ಅಮೆರಿಕಾ ಕಣ್ಣು
ದೇಶ

ಭಾರತದ ವಿದೇಶಿ ವಿನಿಯಮ ನೀತಿ ಮೇಲೆ ಅಮೆರಿಕಾ ಕಣ್ಣು

ಭಾರತದ ವಿದೇಶಿ ವಿನಿಮಯ ನೀತಿ ಮೇಲೆ ಕಣ್ಣಿಟ್ಟಿರುವ ಅಮೆರಿಕಾ, ಭಾರತದ ನಾಣ್ಯ ಚಲಾವಣಾ ಪದ್ಧತಿ, ಸ್ಪರ್ಧಾತ್ಮಕತೆ, ವ್ಯಾವಹಾರಿಕ ನೀತಿಗಳು ಸರಿಯಿಲ್ಲವೆಂದು ಹೇಳಿದೆ.

ಅಮೆರಿಕಾದ ಖಜಾನೆ ಇಲಾಖೆಯು ವಿಶ್ವದ 5 ಪ್ರಮಖ ರಾಷ್ಟ್ರಗಳ ವಿದೇಶಿ ವಿನಿಯಮ ನೀತಿಗಳ ಮೇಲೆ ನಿಗಾ ವಹಿಸಿತ್ತು. ಈ ಪಟ್ಟಿಯಲ್ಲಿ ಚೈನಾ, ಜರ್ಮನಿ, ಜಪಾನ್‌, ಕೊರಿಯಾ ಮತ್ತು ಸ್ವಿಟ್ಜರ್‌ಲ್ಯಾಂಡ್‌ ಹೆಸರುಗಳಿದ್ದವು. ಈಗ ಈ ಪಟ್ಟಿಗೆ ಭಾರತದ ಹೆಸರೂ ಕೂಡ ಸೇರ್ಪಡೆಗೊಂಡಿದೆ. ಮುಂದಿನ ದಿನಗಳಲ್ಲಿ ಅಮೆರಿಕಾ ಭಾರತದ ಆರ್ಥಿಕ ವಹಿವಾಟಿನ ಮೇಲೆ ಕಣ್ಣಿಡಲಿದೆ.

ಶುಕ್ರವಾರ ಅಮೆರಿಕಾದ ಖಜಾನೆ ಇಲಾಖೆ ಬಿಡುಗಡೆಗೊಳಿಸಿರುವ ವರದಿಯಲ್ಲಿ ಈ ಅಂಶ ಬಯಲಾಗಿದೆ. ಈ ಕುರಿತು ಅಮೆರಿಕಾದ ಖಜಾನೆ ಕಾರ್ಯದರ್ಶಿ ಸ್ಟೀವನ್‌ ಟಿ ಮನ್ಚಿನ್‌ ಮಾತನಾಡಿದ್ದಾರೆ. “ಅಮೆರಿಕಾದ ಕಂಪನಿಗಳು ಜಗತ್ತಿನಾದ್ಯಂತ ಯಶಸ್ವಿಯಾಗಿ ಸ್ಪರ್ಧಿಸಬೇಕು. ಅದಕ್ಕಾಗಿ ಅಮೆರಿಕಾದ ಖಜಾನೆ ಇಲಾಖೆ ನ್ಯಾಯಯುತ ಮತ್ತು ಮುಕ್ತ ವಹಿವಾಟುಗಳನ್ನು ಜಾರಿಗೆ ತರಲು ಹುರುಪಿನಿಂದ ಶ್ರಮಿಸುತ್ತಿದೆ” ಎಂದಿದ್ದಾರೆ ಸ್ಟೀವನ್‌.

ಮುಂದುವರಿದು, “ವ್ಯಾವಹಾರಿಕ ಅಸಮತೋಲನಗಳನ್ನು ಪರಿಹರಿಸಲು ಅಗತ್ಯವಾದ ನೀತಿಗಳು ಮತ್ತು ಸುಧಾರಣೆಗಳನ್ನು ತರಬೇಕಿದೆ. ಅದಕ್ಕಾಗಿ ನಾವು ಸರಿಯಿಲ್ಲದ ನಾಣ್ಯ ಚಲಾವಣಾ ಪದ್ಧತಿಗಳ ಮೇಲೆ ಜಾಗರೂಕತೆಯಿಂದ ನಿಗಾ ವಹಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.

ಅಮೆರಿಕಾದ ಖಜಾನೆ ಇಲಾಖೆ ಹೇಳುವಂತೆ ಸಮತೋಲಿತ ಹಾಗೂ ಸದೃಢ ಜಾಗತಿಕ ಬೆಳವಣಿಗೆಯನ್ನು ತರುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅದಕ್ಕಾಗಿ ಸರಿಯಿಲ್ಲದ ನಾಣ್ಯ ಚಲಾವಣಾ ಪದ್ಧತಿಗಳ ಮೇಲೆ ಸಮರ ಸಾರಬೇಕಿದ್ದು, ಅಗತ್ಯವಿರುವ ಸಂಶೋಧನೆ ಮತ್ತು ಸುಧಾರಣೆಗಳನ್ನು ಅಮೆರಿಕಾ ಖಜಾನೆ ಇಲಾಖೆ ಕೈಗೊಂಡಿದೆ.

ಈ ಗುರಿಯನ್ನು ತಲುಪಲು ಎಲ್ಲಾ ಆರ್ಥಿಕತೆಗಳು ಅನ್ಯಾಯದ ಸ್ಪರ್ಧೆ ನಡೆಸುತ್ತಿರುವ ಎಲ್ಲಾ ಬೃಹತ್‌ ಹಣಕಾಸು ವ್ಯವಸ್ಥೆಗಳನ್ನು ದೂರವಿಡಬೇಕು ಎಂದು ಅಮೆರಿಕಾದ ಖಜಾನೆ ಇಲಾಖೆ ತಿಳಿಸಿದೆ. ಅಮೆರಿಕಾದ ಖಜಾನೆ ಇಲಾಖೆ ಹೇಳುತ್ತಿರುವ ಅನ್ಯಾಯದ ಸ್ಪರ್ಧೆಯನ್ನು ಒಡ್ಡುತ್ತಿರುವ ಬೃಹತ್‌ ಹಣಕಾಸು ವ್ಯವಸ್ಥೆಗಳ ಪೈಕಿ ಭಾರತವೂ ಒಂದು. ಈ ಮೂಲಕ ಭಾರತದ ನಾಣ್ಯ ಚಲಾವಣಾ ಪದ್ಧತಿ, ಸ್ಪರ್ಧಾತ್ಮಕತೆ, ವ್ಯಾವಹಾರಿಕ ನೀತಿಗಳು ಸರಿಯಿಲ್ಲವೆಂದು ಅಮೆರಿಕಾ ಹೇಳಿದೆ.

ಕುರಿತು ಅಮೆರಿಕಾದ ಖಜಾನೆ ಇಲಾಖೆ ಸಂಶೋಧನೆಯನ್ನು ನಡೆಸಿದೆ. ಈ ಸಂಶೋಧನೆಯು ಪ್ರಮುಖವಾಗಿ ಮೂರು ಮೂಲ ಅಂಶಗಳ ಮೇಲೆ ನಡೆದಿದೆ ಎನ್ನಲಾಗಿದೆ

  • ಅಮೆರಿಕಾ ಮತ್ತು ಭಾರತ ನಡುವೆ ನಡೆದಿರುವ ವ್ಯಹಹಾರಗಳಿಂದ ಎರಡೂ ದೇಶಗಳು ಗಳಿಸಿರುವ ಹೆಚ್ಚುವರಿ ಉಳಿತಾಯ.
  • ವಸ್ತುಗಳ ಚಾಲ್ತಿ ಖಾತೆಯಲ್ಲಿನ ಹೆಚ್ಚುವರಿ ಉಳಿತಾಯ.
  • ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಏಕಪಕ್ಷೀಯ ಹಸ್ತಕ್ಷೇಪ.

ಅಮೆರಿಕಾದ ಸಂಶೋಧನೆಯಲ್ಲಿ ಈ ಮೂರು ಅಂಶಗಳನ್ನು ಅಮೆರಿಕಾದ ಜತೆ ವ್ಯವಹಾರ ನಡೆಸುತ್ತಿರುವ ಪ್ರಮುಖ ಹಣಕಾಸು ವ್ಯವಸ್ಥೆಗಳಾವುವೂ ಸರಿಗಟ್ಟಿಲ್ಲ. ಆದರೆ ಈ ಆರು ರಾಷ್ಟ್ರಗಳು ಮಾತ್ರ 3ರಲ್ಲಿ 2 ಅಂಶಗಳನ್ನು ಸರಿಗಟ್ಟಿವೆ. ಭಾರತವೂ ಕೂಡ ಈ ಮೇಲಿನ ಅಂಶಗಳ ಪೈಕಿ ಎರಡರಲ್ಲಿ ಅಮೆರಿಕಾ ಜತೆ ಪೈಪೋಟಿ ನಡೆಸಿದೆ. ಅದಕ್ಕಾಗಿಯೇ ಅಮೆರಿಕಾದ ಖಜಾನೆ ಇಲಾಖೆ ಈ 6 ದೇಶಗಳ ಆರ್ಥಿಕತೆ ಮತ್ತು ವಿದೇಶಿ ವಿನಿಮಯ ನೀತಿಗಳ ಮೇಲೆ ಕಣ್ಣಿಡಲು ಮುಂದಾಗಿದೆ.

ಅಮೆರಿಕಾ ಖಜಾನೆ ಇಲಾಖೆಯ ವರದಿ ಹೇಳುವಂತೆ ಭಾರತ ಅಮೆರಿಕಾದ ಜತೆಗಿನ ವ್ಯಾಪಾರದಲ್ಲಿ ಗಮನಾರ್ಹ ದ್ವಿಪಕ್ಷೀಯ ಹೆಚ್ಚುವರಿ ಉಳಿತಾಯವನ್ನು ಹೊಂದಿದೆ. 2017ರಲ್ಲಿ ಭಾರತದ ಈ ಹೆಚ್ಚುವರಿ ಉಳಿತಾಯದ ಮೊತ್ತ 23 ಮಿಲಿಯನ್‌ ಡಾಲರ್‌ ತಲುಪಿದೆ.

ಈ ವರದಿ ಹೇಳುವಂತೆ 2017ರ ಮೊದಲ ಮೂರು ತ್ರೈಮಾಸಿಕ ಅವಧಿಗಳಲ್ಲಿ ಭಾರತದ ವಿದೇಶಿ ವಿನಿಮಯ ಖರೀದಿಯ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಕೊನೆಯ ಮೂರು ತಿಂಗಳ ಅವಧಿಯಲ್ಲಿ ಈ ಪ್ರಮಾಣ ಕಡಿಮೆಯಾಗಿದ್ದರೂ ಕೂಡ ವಾರ್ಷಿಕ ವಿದೇಶಿ ವಿನಿಮಯ ಖರೀದಿಯ ಪ್ರಮಾಣ 56 ಬಿಲಿಯನ್‌ ಡಾಲರ್‌ಗಳನ್ನು ತಲುಪಿದೆ. ಈ ಮೊತ್ತವು ಭಾರತದ ಶೇ.2.2ರಷ್ಟು ಜಿಡಿಪಿಗೆ ಸಮ.

ಭಾರತದ ಬಳಿ ಈಗಾಗಲೇ ಸಾಕಷ್ಟು ಪ್ರಮಾಣದ ವಿದೇಶಿ ವಿನಿಮಯ ಸಂಗ್ರಹವಿದೆ. ಭಾರತ ಖಾಸಗಿ ಬಂಡವಾಳದ ಒಳಹರಿವು ಮತ್ತು ಹೊರ ಹರಿವಿನ ಮೇಲೆ ಹಲವಾರು ನಿಯಂತ್ರಣ ಕ್ರಮಗಳನ್ನು ಕೈಗೊಂಡಿದೆ. ಹೀಗಾಗಿ ವಿದೇಶಿ ವಿನಿಮಯ ಸಂಗ್ರಹದ ಯಾವುದೇ ಅಗತ್ಯಗಳು ಕಾಣಿಸುವುದಿಲ್ಲ ಎನ್ನುವುದು ಅಮೆರಿಕಾ ಖಜಾನೆ ಇಲಾಖೆಯ ವಾದ.

ಕಳೆದ ವರ್ಷ ಅಮೆರಿಕಾದ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್‌ ರೊಸ್‌ ಅಮೆರಿಕಾ ಭಾರತದ ಜತೆ ಸಮತೋಲಿತ ವಾಣಿಜ್ಯ ಬೆಳವಣಿಗೆಯನ್ನು ಹೊಂದಬಯಸುತ್ತದೆ ಎಂದಿದ್ದರು.

“ದಶಕದ ಅವಧಿಯಲ್ಲಿ ಎರಡು ದೇಶಗಳ ನಡುವಿನ ವ್ಯಾಪಾರ ಎರಡು ಪಟ್ಟು ವೃದ್ಧಿಸಿದೆ. 2016ರಲ್ಲಿ ಭಾರತ ಮತ್ತು ಅಮೆರಿಕಾದ ನಡುವಿನ ವ್ಯವಹಾರ 114 ಬಿಲಿಯನ್‌ ಡಾಲರ್‌ಗಳನ್ನು ತಲುಪಿತ್ತು. ಜತೆಗೆ ಇದೇ ಅವಧಿಯಲ್ಲಿ ಮೂರು ಪಟ್ಟು ಹೆಚ್ಚು ವಿತ್ತೀಯ ಕೊರತೆಯನ್ನೂ ಎದುರಿಸಿತ್ತು,” ಎಂದು ಹೇಳಿದ್ದರು.

ಒಂದು ಕಡೆ ಭಾರತದ ಜತೆ ಉತ್ತಮ ವ್ಯವಹಾರಿಕ ಸಂಬಂಧವನ್ನು ಹೊಂದ ಬಯಸುವ ಅಮೆರಿಕಾ ಮತ್ತೊಂದು ಕಡೆ ಭಾರತದ ಆರ್ಥಿಕತೆ ಹಾಗೂ ವಾಣಿಜ್ಯ ನೀತಿಗಳ ಮೇಲೆ ಕಣ್ಣಿಡಲು ಮುಂದಾಗಿದೆ. ಸಾರ್ವಭೌಮ ರಾಷ್ಟ್ರವೊಂದರ ವ್ಯಾವಹಾರಿಕ ನೀತಿಗಳನ್ನು ತಪಾಸಣೆ ನಡೆಸುವ ಅಧಿಕಾರವನ್ನು ಅಮೆರಿಕಾಗೆ ಕೊಟ್ಟವರ್ಯಾರು ಎನ್ನುವುದ ಸದ್ಯದ ಪ್ರಶ್ನೆ.