samachara
www.samachara.com
‘ಹೈಟ್ ಆಫ್‌ ಇನ್ವೆಸ್ಟಿಗೇಶನ್’: ಒಂದೇ ಪ್ರಕರಣದಲ್ಲಿ 10 ಸಾವಿರ ಅನಾಮಿಕ ಆರೋಪಿಗಳು!
ದೇಶ

‘ಹೈಟ್ ಆಫ್‌ ಇನ್ವೆಸ್ಟಿಗೇಶನ್’: ಒಂದೇ ಪ್ರಕರಣದಲ್ಲಿ 10 ಸಾವಿರ ಅನಾಮಿಕ ಆರೋಪಿಗಳು!

‘ಮಹಮ್ಮದ್ ಬಜಾರ್‌ನಲ್ಲಿ ನಡೆದ ಘರ್ಷಣೆಗೆ ಸಂಬಂಧಪಟ್ಟಂತೆ 10,000 ಅಪರಿಚಿತ ವ್ಯಕ್ತಿಗಳ ಮೇಲೆ ಹಾಗೂ 56 ಜನ ಪರಿಚಿತ ವ್ಯಕ್ತಿಗಳ ಮೇಲೆ ಎಫ್‌ಐಆರ್‌ ದಾಖಲು ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

samachara

samachara

ಪಶ್ಚಿಮ ಬಂಗಾಳದ ಪೊಲೀಸರು ಒಂದು ಪ್ರಕರಣದಲ್ಲಿ ಸುಮಾರು 10,000 ಅಪರಿಚಿತ ವ್ಯಕ್ತಿಗಳ ಮೇಲೆ ಹಾಗೂ 56 ಜನ ಪರಿಚಿತ ವ್ಯಕ್ತಿಗಳ ಮೇಲೆ ಎಫ್‌ಐಆರ್‌ ದಾಖಲಿಸುವ ಅಚ್ಚರಿ ಮೂಡಿಸಿದ್ದಾರೆ. ದೇಶದ ತನಿಖಾ ಸಂಸ್ಥೆಗಳ ಇತಿಹಾಸದಲ್ಲಿ ಒಂದೇ ಪ್ರಕರಣದಲ್ಲಿ ಇಷ್ಟು ಜನರ ಮೇಲೆ ಪ್ರಥಮ ಮಾಹಿತಿ ದಾಖಲಿಸಿದ್ದು ಇದೇ ಮೊದಲಿರಬಹುದು.

ಇಷ್ಟು ದೊಡ್ಡ ಸಂಖ್ಯೆಯಲ್ಲಿ ಎಫ್‌ಐಆರ್‌ ದಾಖಲಿಸಿಕೊಳ್ಳಲು ಕಾರಣವನ್ನು ಹುಡುಕಿ ಹೊರಟರೆ ಸಿಗುವುದು ಮತ್ತದೇ ರಾಜಕೀಯ ಮೇಲಾಟಗಳ ಚಿತ್ರಣ.

ಪಶ್ಚಿಮ ಬಂಗಾಳದ ಪಂಚಾಯತಿ ಚುನಾವಣೆಗೆ ನಾಮ ಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಕಳೆದ ಶುಕ್ರವಾರದಂದು ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಇದರಿಂದ 25 ಜನರು ಗಾಯಗೊಂಡಿದ್ದರು ಎಂದು ಎಎನ್‌ಐ ವರದಿ ಮಾಡಿತ್ತು.

ಅಲ್ಲದೇ, ಮುರ್ಶೀದಾಬಾದ್‌ ಎಂಬಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರ ಮಧ್ಯದ ಕಿತ್ತಾಟಕ್ಕೆ ಸಾಕ್ಷಿ ರೂಪದಲ್ಲಿ ವಿಡಿಯೋ ಒಂದನ್ನು ನ್ಯೂಸ್ 18 ಟ್ವೀಟ್ ಮಾಡಿತ್ತು.

ಹೀಗೆ ಪಶ್ಚಿಮ ಬಂಗಾಳದ ವಿವಿಧ ಕಡೆಗಳಲ್ಲಿ ಎರಡೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ಗಲಭೆ ಎಬ್ಬಿಸಿದ್ದರು. ಇದರಿಂದ ಅನೇಕ ಜೀವಗಳಿಗೆ ಹಾನಿಯಾಗಿದ್ದಲ್ಲದೇ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೂ ಧಕ್ಕೆಯಾಗಿದೆ ಎಂದು ವರದಿಗಳು ಹೇಳುತ್ತವೆ.

ಬ್ರೈಂದಾಖಾಳಿ ಗ್ರಾಮದ ಸಿಪಿಎಂ ಕಾರ್ಯದರ್ಶಿ ಅಯುಬ್ ಲಸ್ಕರ್ ಭಾನುವಾರ ಬೆಳಿಗ್ಗೆ ಶೂಟೌಟ್‌ಗೆ ಒಳಗಾಗಿದ್ದಾರೆ. ಪಕ್ಷದ ಆಂತರಿಕ ಕಲಹವೇ ಕಾರಣ ಎಂದು ತೃಣಮೂಲ ಕಾಂಗ್ರೆಸ್‌ ಆರೋಪಿಸಿದೆ. ಲಸ್ಕರ್‌ ದಾಳಿಗೊಳಗಾಗುವ ಒಂದು ದಿನ ಮುಂಚೆ ಗ್ರಾಮ ಪಂಚಾಯತ್ ಚುನಾವಣೆಗಾಗಿ ಲಾಸ್ಕರ್ ಸಹೋದರ ಮತ್ತು ಸೋದರಿ ಇಬ್ಬರೂ ನಾಮಪತ್ರವನ್ನು ಸಲ್ಲಿಸಿದ್ದರು. ಇದೇ ಕಾರಣಕ್ಕೆ ದಾಳಿ ನಡೆದಿದೆ ಎನ್ನಲಾಗಿದೆ.

ಭಾನುವಾರ ನಾಮಪತ್ರ ಸಲ್ಲಿಸಲು ನಿರ್ಬಂಧ ಹೇರಲಾಗಿತ್ತು. ಇದರ ಪ್ರಯೋಜನ ಪಡೆದುಕೊಂಡ ಪೊಲೀಸರು ಬಂಗಾಳ-ಜಾರ್ಖಂಡ್ ಗಡಿಭಾಗದಲ್ಲಿ ವಾಹನಗಳ ಪರಿಶೀಲನೆ ನಡೆಸಿದ್ದಾರೆ.

ಮಹಮ್ಮದ್ ಬಜಾರ್‌ನಲ್ಲಿ ನಡೆದ ಘರ್ಷಣೆಗೆ ಸಂಬಂಧಪಟ್ಟಂತೆ 10,000 ಅಪರಿಚಿತ ವ್ಯಕ್ತಿಗಳ ಮೇಲೆ ಹಾಗೂ 56 ಜನ ಪರಿಚಿತ ವ್ಯಕ್ತಿಗಳ ಮೇಲೆ ಎಫ್‌ಐಆರ್‌ ದಾಖಲು ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘರ್ಷಣೆಯಲ್ಲಿ ಭಾಗಿಯಾದ 56 ಜನರ ಹೆಸರುಗಳು ಮತ್ತು ವಿಳಾಸಗಳನ್ನು ಉಲ್ಲೇಖಿಸಲಾಗಿದೆ. ಅಲ್ಲದೇ ಈ ಆರೋಪಿಗಳೆಲ್ಲರೂ ಸ್ಥಳೀಯರಾಗಿದ್ದಾರೆ. ಜೊತೆಗೆ 10,000 ಅಪರಿಚಿತ ವ್ಯಕ್ತಿಗಳ ವಿರುದ್ಧ ದಾಖಲಾದ ಎಫ್‌ಐಆರ್‌ನಲ್ಲಿ ಅವರು ಬಿಜೆಪಿ ಬೆಂಬಲಿಗರು ಎನ್ನುವ ಶಂಕೆಯನ್ನು ಪೊಲೀಸ್ ಮೂಲಗಳು ವ್ಯಕ್ತಪಡಿಸಿವೆ.

ಪಶ್ಚಿಮ ಬಂಗಾಳದಲ್ಲಿ ಮೇ.1, 2 ಮತ್ತು 3 ರಂದು ಪಂಚಾಯತಿ ಚುನಾವಣೆ ನಡೆಯಲಿದೆ. ಚುನಾವಣೆ ಹಿನ್ನಲೆಯಲ್ಲಿ ನಾಮ ಪತ್ರಗಳನ್ನು ಸಲ್ಲಿಸಲು ಹೊರಟಿದ್ದ ಬಿಜೆಪಿ ನಾಯಕರನ್ನು ಬ್ಲಾಕ್ ಡೆವಲಪ್ಮೆಂಟ್ ಅಧಿಕಾರಿಗಳು ತಡೆಹಿಡಿದ್ದರು. ಬಂಧನಕ್ಕೆ ಒಳಗಾದ ಕೆಲವರು ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದವರಾಗಿದ್ದರು.

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಬಿಜೆಪಿ ನಾಯಕರನ್ನು ಗುರಿ ಮಾಡುತ್ತಿದೆ ಎಂದು ಆರೋಪಿಸಿದ್ದ ಬಿಜೆಪಿ, ಚುನಾವಣಾ ದಿನಾಂಕವನ್ನು ಮುಂದೂಡುವಂತೆ ಸುಪ್ರೀಂಕೋರ್ಟ್ ಬಳಿ ಮನವಿ ಮಾಡಿಕೊಂಡಿತ್ತು.

ಆದರೆ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಚುನಾವಣೆಯನ್ನು ಮುಂದೂಡಲು ನಿರಾಕರಿಸಿದೆ. ಈ ಕುರಿತಂತೆ ನ್ಯಾಯಮೂರ್ತಿ ಎ. ಕೆ. ಅಗರ್ವಾಲ್ ಮತ್ತು ನ್ಯಾಯಮೂರ್ತಿ ಅಭಯ್ ಮನೋಹರ್ ಸಪ್ರೆಯವರನ್ನು ಒಳಗೊಂಡ ಪೀಠವು ಸೋಮವಾರ ವಿಚಾರಣೆ ನಡೆಸಿ, ಅರ್ಜಿ ತಿರಸ್ಕರಿಸಿದ್ದಾರೆ.

ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ಚುನಾವಣಾ ಆಯೋಗದ ಮೊರೆ ಹೋಗುವಂತೆ ಸೂಚನೆ ನೀಡಿದ್ದಾರೆ.

“ಈಗಾಗಲೆ 28 ಜನರನ್ನು ಬಂಧಿಸಲಾಗಿದೆ. ಉಳಿದವರನ್ನು ಗುರುತಿಸುವ ಮತ್ತು ಬಂಧಿಸುವ ಕೆಲಸವೂ ನಡೆಯುತ್ತಿದೆ. ಪೊಲೀಸರು ಖಾಸಗಿ ಬಸ್‌ ಮತ್ತು ವ್ಯಾನ್‌ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇತರ ಆರೋಪಿಗಳನ್ನು ಗುರುತಿಸಲು ವೀಡಿಯೊ ತುಣುಕನ್ನು ಪರಿಶೀಲನೆ ಮಾಡಲಾಗುತ್ತಿದೆ,” ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅನುಜ್ ಶರ್ಮಾ ತಿಳಿಸಿದ್ದಾರೆ.

ಜಾರ್ಖಂಡ್‌ನಿಂದ ಬಂದ ಹೆಚ್ಚಿನ ಜನರು ಹಿಂಸಾಚಾರದಲ್ಲಿ ತೊಡಗಿದ್ದಾರೆಂದು ಪೊಲೀಸರು ಹೇಳಿದ್ದಾರೆ.

“ಆಡಳಿತ ಪಕ್ಷ ಮತ್ತು ಪೊಲೀಸರು ಇಬ್ಬರೂ ಈ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ. ನಮ್ಮ ಬೆಂಬಲಿಗರ ಮತ್ತು ಕಾರ್ಯಕರ್ತರನ್ನು ಪಂಚಾಯತ್ ಚುನಾವಣೆ ಮುಗಿಯುವ ತನಕ ಜೈಲಿಗೆ ಅಟ್ಟಲು ಪಿತೂರಿ ನಡೆಯುತ್ತಿದೆ,” ಎಂದು ಬಿರ್‌ಬುಮ್‌ನ ಬಿಜೆಪಿ ಮುಖ್ಯಸ್ಥ ರಾಮಕೃಷ್ಣ ರಾಯ್ ಹೇಳಿದ್ದಾರೆ.

ಆದರೆ ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್‌, “ನಾವು ಕೂಡಾ ಪೊಲೀಸರಿಗೆ ದೂರು ಸಲ್ಲಿಸಿದ್ದೇವೆ. ಜಾರ್ಖಂಡ್ ಕಡೆಯ ಪ್ರದೇಶಗಳಿಂದ ಬಿಜೆಪಿ ಪಕ್ಷವು ಗೂಂಡಾಗಳನ್ನು ಕರೆಸುತ್ತದೆ ಎನ್ನುವ ಕುರಿತು ಸಾಕಷ್ಟು ಪುರಾವೆಗಳು ನಮ್ಮ ಬಳಿ ಇವೆ,” ಟಿಎಂಸಿಯ ಅನುಬ್ರತಾ ಮೊಂಡಾಲ್ ಹೇಳಿದ್ದಾರೆ.

ಆರೋಪಿಗಳ ಪರ ವಾದ ಮಂಡಿಸುತ್ತಿರುವ ವಕೀಲ ಸೋಮನಾಥ್ ಮುಖರ್ಜಿ, “ಏಪ್ರಿಲ್ 10ರಂದು ಪ್ರಕರಣದ ಕುರಿತ ‘ಕೇಸ್ ಡೈರಿ’ ಸಲ್ಲಿಸಲು ನ್ಯಾಯಾಲಯವು ಪೊಲೀಸರಿಗೆ ನಿರ್ದೇಶನ ನೀಡಿದೆ. ಆದರೆ ಪೊಲೀಸರ ಎಫ್‌ಐಆರ್‌ನಲ್ಲಿ ಯಾವ ಆರೋಪಿಗಳೂ ಜಾರ್ಖಂಡ್‌ನಿಂದ ಬಂದಿದ್ದಾರೆ ಎಂದು ಸ್ಪಷ್ಟವಾಗಿ ದಾಖಲಿಸಿಲ್ಲ. ನಾನು ಸಾವಿರ ಜನರ ವಿರುದ್ಧ ಎಫ್ಐಆರ್‌ ಹಾಕಿದ್ದನ್ನು ನೋಡಿದ್ದೇನೆ, ಆದರೆ 10,000ಕ್ಕಿಂತಲೂ ಹೆಚ್ಚಿನ ಜನರ ವಿರುದ್ಧ ಎಫ್‌ಐಆರ್‌ ನೋಡಿದ್ದು ಇದೇ ಮೊದಲು," ಎಂದು ಹೇಳಿದ್ದಾರೆ.