ಸಾಂದರ್ಭಿಕ ಚಿತ್ರ
ದೇಶ

12 ಮಾವೋವಾದಿಗಳ ಬಲಿ: ಸಶಸ್ತ್ರ ಚಳವಳಿ ನಡೆದು ಬಂದ ಹಾದಿಯ ಸುತ್ತ...

ಒಂದೆಡೆ ವ್ಯವಸ್ಥೆಯ ವಿರುದ್ಧ ಬಂದೂಕು ಹಿಡಿದ ಹೋರಾಟಗಾರರು. ಮತ್ತೊಂದೆಡೆ ಹೋರಾಟಗಾರರನ್ನು ಮಟ್ಟ ಹಾಕಲು ಟೊಂಕ ಕಟ್ಟಿ ನಿಂತ ವ್ಯವಸ್ಥೆ. ಇಬ್ಬರ ನಡುವೆ ಕೂಸು ಬಡವನಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿರುವುದು ಯಾರು?

ಛತ್ತೀಸ್ ಘಡ ಮತ್ತು ತೆಲಂಗಾಣ ರಾಜ್ಯಗಳ ಗಡಿಯಲ್ಲಿ ಶುಕ್ರವಾರ ಬೆಳಗ್ಗೆ ನಕ್ಸಲ್‌ ನಿಗ್ರಹ ದಳ ಮತ್ತು ಮಾವೋವಾದಿಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ 12 ಜನ ಮಾವೋವಾದಿಗಳು ಮೃತಪಟ್ಟಿದ್ದಾರೆ. ಗುಂಡಿಗೆ ಬಲಿಯಾದ 12 ಜನರ ಪೈಕಿ 6 ಮಹಿಳೆಯರು ಸೇರಿದಂತೆ ತೆಲಂಗಾಣ ಪ್ರಾಂತ್ಯದ ಪ್ರಮುಖ ನಾಯಕ ಹರಿಭೂಷಣ್‌ ಸೇರಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಸಂಜೆ ಪೂಜಾರಿ ಕಂಕರ್‌ ಎಂಬ ಪ್ರದೇಶದಲ್ಲಿ ಸುಮಾರು 50-100 ಮಾವೋವಾದಿಗಳು ಸೇರಲಿದ್ದಾರೆ ಎಂಬ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಲಾಗಿದ್ದು, ಘಟನೆಯ ವೇಳೆ ಸುಶೀಲ್‌ ಕುಮಾರ್‌ ಪೊಲೀಸ್‌ ಪೇದೆಯೊಬ್ಬರಿಗೆ ತೀವ್ರವಾದ ಗಾಯಗಳಾಗಿವೆ.

“ಇವೆಲ್ಲಾ ನಿಜವಾದ ಎನ್‌ಕೌಂಟರ್‌ಗಳಲ್ಲ. ಎನ್‌ಕೌಂಟರ್‌ ಆಗಿದ್ದರೆ ಇಷ್ಟೇ ಪ್ರಮಾಣದ ಪೊಲೀಸರಿಗೂ ಹಾನಿಯಾಗಬೇಕಿತ್ತು. ಇದೆಲ್ಲಾ ಸುಳ್ಳು. ಮುಂಚೆಯೇ ಯಾರನ್ನೋ ಬಂಧಿಸಿ, ಕೊಂದು ಸಶಸ್ತ್ರ ಹೋರಾಟಗಾರ ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ,”
ಸಶ್ತ್ರ ಹೋರಾಟದಲ್ಲಿ ನಿರತರಾಗಿದ್ದವರೊಬ್ಬರ ಮಾತು

ಅತ್ಯುತ್ತಮ ಗೆರಿಲ್ಲಾ ಯುದ್ಧ ಪರಿಣಿತರಾದ ನಕ್ಸಲರು ಹೆಚ್ಚಾಗಿ ಕಂಡು ಬರುವುದು ಹೆಚ್ಚೆಚ್ಚು ಗ್ರಾಮೀಣ ಹಾಗೂ ಆಧಿವಾಸಿಗಳಿರುವ ದಟ್ಟಾರಣ್ಯಗಳಲ್ಲಿ. ಜಾರ್ಖಂಡ್‌, ಛತ್ತೀಸ್‌ ಘಡ್‌, ಮಧ್ಯಪ್ರದೇಶ, ಪೂರ್ವ ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕದ ದಕ್ಷಿಣ ಭಾಗ ಮತ್ತು ಪಶ್ಚಿಮ ಒಡಿಶಾ ಇಂದು ನಕ್ಸಲ್‌ ಪೀಡಿತ ಪ್ರದೇಶಗಳೆಂದು ಗುರುತಿಸಿಕೊಂಡಿವೆ. ಆಂಧ್ರ ಪ್ರದೇಶ, ಓಡಿಶಾ ಮತ್ತು ಮಹಾರಾಷ್ಟ್ರಗಳಲ್ಲಿ ಪ್ರಜಾಸಮರ ದಳಂ ಹಿಡಿತ ಹೊಂದಿದ್ದರೆ, ಬಿಹಾರ, ಜಾರ್ಖಂಡ್‌ ಮತ್ತು ಛತ್ತೀಸ್‌ ಘಡಗಳಲ್ಲಿ ಮಾವೋವಾದಿಗಳು ಪ್ರಾಬಲ್ಯ ಹೊಂದಿದ್ದಾರೆ.

ರಕ್ತ ಇತಿಹಾಸ:

ಅದು 1967ರ ಕಾಲಘಟ್ಟ, ಬಂಗಾಳ ರಾಜ್ಯದಲ್ಲಿನ ಸಿಲಿಗುರಿ ಪ್ರಾಂತ್ಯದ ನಕ್ಸಲ್‌ ಬಾರಿ ಎಂಬ ಗ್ರಾಮ ಹಿಂಸಾತ್ಮಕ ಘಟನೆಯೊಂದರಿಂದ ದೇಶದಲ್ಲಿ ಪ್ರಚಲಿತಕ್ಕೆ ಬಂದಿತ್ತು. ಅದು ಕಾರ್ಮಿಕ ವರ್ಗ ಮತ್ತು ಜಮೀನ್ದಾರರ ಮಧ್ಯೆ ನಡೆದ ಸಂಘರ್ಷ. ಸರಕಾರಿ ದಾಖಲೆಗಳು ಭಾರತದಲ್ಲಿ ಆರಂಭಗೊಂಡ ಸಶಸ್ತ್ರ ವರ್ಗ ಸಂಘರ್ಷದ ಮೂಲವಿದು ಎಂದು ಹೇಳುತ್ತವೆ. ಆದರೆ ಇದಕ್ಕೂ ಮುಂಚೆಯೇ ಸ್ವತಂತ್ರ ಭಾರತದಲ್ಲಿ ಬಡವ ಮತ್ತು ಶ್ರೀಮಂತ ವರ್ಗಗಳ ನಡುವಿನ ಹೋರಾಟದಲ್ಲಿ ಆಯುಧಗಳು ಸದ್ದು ಮಾಡಿದ್ದವು.

1961ರಲ್ಲಿ ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಪಾರ್ವತಿಪುರದಲ್ಲಿ ಇಂತಹದೇ ಘರ್ಷಣೆ ನಡೆದಿತ್ತು. ಆದರೆ ಇಲ್ಲಿನ ಗಿರಿಜನರು ನಡೆಸಿದ್ದ ಈ ಹೋರಾಟಕ್ಕೆ 'ಕಮ್ಯುನಿಸ್ಟ್‌' ಎಂಬ ರೆಕ್ಕೆ-ಪುಕ್ಕಗಳಿರಲಿಲ್ಲ. ಹೊರಜಗತ್ತಿನ ಯಾವುದೇ ಪ್ರೇರಣೆಯಿಲ್ಲದೆ, ತಮ್ಮ ಹಕ್ಕನ್ನು ಪಡೆಯುಲು ತಾವೇ ಎದ್ದು ನಿಂತಿದ್ದರು. ನಕ್ಸಲ್‌ ಬಾರಿ ಘಟನೆಯ ನಂತರ 1967ರಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದ ಚಾರು ಮುಜಂದಾರ್‌, ಇಲ್ಲಿನ ಹೋರಾಟದ ಅಸ್ತಿ ಪಂಜರಕ್ಕೆ ಕಮ್ಯುನಿಸ್ಟ್‌ ಸಿದ್ಧಾಂತದ ಮಜ್ಜೆ, ಮಾಂಸ ತುಂಬಿದರು ಎಂದು ಡಾ. ಜಗದೀಶ್ ಕೊಪ್ಪ ತಮ್ಮ'ಎಂದೂ ಮುಗಿಯದ ಯುದ್ಧ' ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಚಾರು ಮುಜಂದಾರ್‌ 'ನಕ್ಸಲ್‌ ಬಾರಿ ಚಳವಳಿ'ಯ ಮುಖ್ಯ ನೇತಾರ. ಕೃಷಿ ಕೂಲಿ ಕಾರ್ಮಿಕರ ಹೋರಾಟಕ್ಕೆ ಹೊಸದೊಂದು ರೂಪ ನೀಡಲು ಬಯಸಿದ್ದ ಚಾರು ತಮ್ಮ ಗೆಳೆಯ ಕನು ಸನ್ಯಾಲ್‌ ಇನ್ನಿತರರ ಜೊತೆಗೂಡಿ ಆಯುಧಗಳನ್ನು ಹಿಡಿಯಲು ಮುಂದಾಗಿದ್ದರು. ಅಂಧ್ರ ಪ್ರದೇಶ, ಪಶ್ಚಿಮ ಬಂಗಾಳಗಳಲ್ಲಿ ಸಶಸ್ತ್ರ ಹೋರಾಟಕ್ಕೆ ಕಾರ್ಯಕರ್ತರನ್ನು ಅಣಿನೆರೆಸಿದ್ದರು. ಚಾರು ಅವರ ಆವೇಶಭರಿತ ಮಾತುಗಳು ಸಂಘಟನೆಯೊಳಗಿನ ಕಾರ್ಯಕರ್ತರಿಗೆ ಉತ್ಸಾಹದ ಚಿಲುಮೆಗಳಾಗಿದ್ದವು. ಮಾವೋ ಯೋಚನೆಗಳಿಂದ ತುಂಬಿದ್ದ ಈ ಸಂಘಟನೆಯ ತಲೆಗಳು ಮಾವೋ ಹೇಳಿಕೆಗಳನ್ನು ವಾಸ್ತವಕ್ಕಿಳಸುವ ಪಣ ತೊಟ್ಟಿದ್ದವು.

ಚಾರು ಮುಜಂದಾರ್‌ ಬರೆದ 'ಹಿಸ್ಟಾರಿಕ್‌ ಎಯ್ಟ್‌ ಡಾಕ್ಯುಮೆಂಟ್' ನಕ್ಸಲ್‌ವಾದದ ಮೂಲಕ ಆಖರವಾಗಿತ್ತು. ಚಾರು ವರ್ಚಸ್ಸಿಗೆ ಕೇವಲ ಅರಣ್ಯಗಳಲ್ಲಿನ ಆದಿವಾಸಿಗಳು, ದಲಿತರಷ್ಟೇ ಅಲ್ಲದೇ ನಗರದಲ್ಲಿ ಹುಟ್ಟಿ ಬೆಳದು ದೊಡ್ಡ ಸ್ಥಾನಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅದೆಷ್ಟೋ ಪ್ರಜ್ಞಾವಂತರು ಒಳಗಾಗಿದ್ದರು. ಹೆಸರಾಂತ ಕಾಲೇಜುಗಳಲ್ಲಿ ಓದುತ್ತಿದ್ದ ಬುದ್ಧಿವಂತ ವಿದ್ಯಾರ್ಥಿಗಳು ಚಳುವಳಿಯ ಮುಂಚೂಣಿಗೆ ಬಂದು, ಕಾಡು ಸೇರಿ ಬಂದೂಕುಗಳನ್ನು ಕೈಗೆತ್ತಿಕೊಂಡಿದ್ದರು. ಪುರುಷ ಮಹಿಳೆ ಎಂಬ ಭೇದವಿಲ್ಲದೇ ಎಲ್ಲರೂ ನಳಿಕೆಯ ತಳದಲ್ಲಿ ಸಮಸಮಾಜದ ನಿರ್ಮಾಣಕ್ಕೆ ಮುಂದಾಗಿದ್ದರು.

ಹೀಗೆ ಪ್ರಚಲಿತಕ್ಕೆ ಬಂದ ನಕ್ಸಲ್‌ ಚಳುವಳಿ ಮಾವೋನ ಉಗ್ರ ಸಮಾಜವಾದದಲ್ಲಿ ನಂಬಿಕೆಯಿರಿಸಿತ್ತು. ಯಾರಿಗೂ ಸ್ವಂತ ಆಸ್ತಿ ಇರಬಾರದೆಂಬ ಚಿಂತನೆಯನ್ನು ಹೊಂದಿರುವ ಈ ಹೋರಾಟ ಎಲ್ಲಾ ಆಸ್ತಿಯನ್ನು ದೇಶದ ಸ್ವಾಮ್ಯಕ್ಕೆ ತರುವ ಪ್ರಯತ್ನಕ್ಕೆ ಸಿದ್ಧವಾಗಿತ್ತು. ‘ಶಕ್ತಿಗೆ ತಕ್ಕಂತೆ ಕೆಲಸ, ಅಗತ್ಯಕ್ಕೆ ತಕ್ಕಂತೆ ಮೂಲಭೂತ ಸೌಲಭ್ಯಗಳು’ ಎಂಬ ಮೂಲ ಸಿದ್ಧಾಂತವನ್ನು ಹೊಂದಿತ್ತು.

ಶ್ರೀಮಂತ ಜಮೀನ್ದಾರರ ಕುಟುಂಬದಲ್ಲಿ ಜನಿಸಿ ಭೂರಹಿತ ಬಡವರ ಧ್ವನಿಯಾಗಿ ನಿಂತಿದ್ದ ಚಾರು ಮುಜಂದಾರ್‌ ಕೆಲವೇ ವರ್ಷಗಳ ಅವಧಿಯಲ್ಲಿ ವ್ಯವಸ್ಥೆ ವಿರೋಧಿ ಸಶಸ್ತ್ರ ಪಡೆಯನ್ನು ಕಟ್ಟಿ ನಿಲ್ಲಿಸಿದ್ದರು. 1972ರ ಜುಲೈನಲ್ಲಿ ಕೊಲ್ಕತ್ತಾ ನಗರದ ರಹಸ್ಯ ಸ್ಥಳವೊಂದರಲ್ಲಿ ತಂಗಿದ್ದ ಚಾರು ಪೊಲೀಸರ ವಶವಾಗಿದರು. ವಿಚಾರಣೆಯ ಹೆಸರಿನಲ್ಲಿ 12 ದಿನ ಚಿತ್ರಹಿಂಸೆಗೆ ಒಳಪಟ್ಟು ಅಸುನೀಗಿದರು. ಮುಖ್ಯ ನಾಯಕನ ಸಾವಿನ ನಂತರ ನಕ್ಸಲ್‌ ಬೆಂಕಿ ನಂದಿ ಹೋಗುತ್ತದೆಂಬ ವ್ಯವಸ್ಥೆಯ ಕನಸಿಗೆ ಚಾರು ಸಂಗಾತಿಗಳು ಆಸ್ಪದ ನೀಡಲಿಲ್ಲ. ಕೆಲದಿನಗಳ ಕಾಲ ತಣ್ಣಗಾಗಿದ್ದ ನಕ್ಸಲ್‌ ಬೇರುಗಳು ಒಳಗೊಳಗೆಯೇ ನೆರೆಯ ರಾಜ್ಯಗಳ ಗಡಿಗಳಲ್ಲಿ ಹರಿದಿದ್ದವು. ಆದರೆ ಇದರ ಮಧ್ಯೆಯೆ ಎದ್ದ ಭಿನ್ನಾಭಿಪ್ರಾಯಗಳು, ಸಂಘಟನೆಯ ಶಕ್ತಿಗೆ ಪೆಟ್ಟು ನೀಡಿತ್ತು.

ತಣ್ಣಗಾದ ನಕ್ಸಲ್‌ ಬೆಂಕಿ ಮತ್ತೆ ಭುಗಿಲೆದ್ದಿದ್ದು ಆಂಧ್ರಪ್ರದೇಶದಲ್ಲಿ. ಹೆಸರು ಮಾತ್ರ ಬದಲಾಗಿ 'ಪ್ರಜಾ ಸಮರ ದಳಂ'(ಪೀಪಲ್ಸ್‌ ವಾರ್‌ ಗ್ರೂಪ್‌) 80ರ ದಶಕದಲ್ಲಿ ಅಸ್ತಿತ್ವಕ್ಕೆ ಬಂತು. ಇತಿಹಾಸ ಈ ಬೆಳವಣಿಗೆಯನ್ನು ನಕ್ಸಲಿಸಂನ ಎರಡನೇ ಹಂತ ಎಂದು ಗುರುತಿಸುತ್ತದೆ. ಕೊಂಡಪಲ್ಲಿ ಸೀತಾರಾಮಯ್ಯ, ಸತ್ಯಮೂರ್ತಿ ಎಂಬ ಇಬ್ಬರು ಶಿಕ್ಷಕರು ಈ ದಳಕ್ಕೆ ಬುನಾದಿ ಹಾಕಿದ್ದರು. ಈ ದಳ ಅಂಧ್ರ ಪ್ರದೇಶದ ಬಹುಭಾಗಗಳನ್ನು ನಡುಗಿಸುವಲ್ಲಿ ಸಫಲವಾಗಿತ್ತು. ಜಮೀನ್ದಾರರ ಕೈಯಿಂದ 80,000 ಎಕರೆ ಕೃಷಿಭೂಮಿ ಮತ್ತು ಸರಕಾರದ ವಶದಲ್ಲಿದ್ದ ಸುಮಾರು 1,20,000 ಎಕರೆಯಷ್ಟು ಅರಣ್ಯ ಭೂಮಿಯನ್ನು ಕಿತ್ತುಕೊಂಡು ಸ್ಥಳೀಯ ಬಡವರಿಗೆ ಹಂಚಿತ್ತು. ದಳದ ಕಾರ್ಯಕರ್ತರು ಹುಟ್ಟಿಸಿದ್ದ ಭಯ 15 ರುಪಾಯಿಯಿದ್ದ ಕೂಲಿ ದರ 25 ರುಪಾಯಿಗೆ ಏರಲು ಕಾರಣವಾಗಿತ್ತು. ಇಂತಹದ್ದೇ ಎಷ್ಟೂ ಉಪಯೋಗಗಳನ್ನು ಆಂಧ್ರದ ಬಡಜನತೆ ಪ್ರಜಾಸಮರ ದಳಂ ಮೂಲಕ ಪಡೆದಿದ್ದರು.

Also read: Bullet to Ballot: ಗದ್ದರ್ ಎಂಬ ಕ್ರಾಂತಿಕವಿಯೂ; 'ಆಧ್ಯಾತ್ಮಿಕ ಪ್ರಜಾಪ್ರಭುತ್ವ'ದ ತುಡಿತವೂ...

ಈ ಹೋರಾಟದ ಭಾಗಗವಾಗಿಯೇ ಅಸ್ತಿತ್ವಕ್ಕೆ ಬಂದ 'ಜನನಾಟ್ಯ ಮಂಡಳಿ' ಹೆಸರಿನ ಸಾಂಸ್ಕೃತಿಕ ತಂಡ ‘ಪ್ರಜಾ ಸಮರ ದಳಂ’ನ ಬೆಂಬಲವನ್ನು ಹಲವಾರು ಪಟ್ಟು ವೃದ್ಧಿಸುವಲ್ಲಿ ಯಶಸ್ವಿಯಾಗಿತ್ತು. ಇದರಿಂದಾಗಿ ಗದ್ದರ್‌ನಂತಹ ಹಾಡುಗಾರ ಜನರ ಮಧ್ಯೆ ಕಾಣಿಸುವಂತಾಗಿದ್ದರು.

1980ರ ದಶಕ ನಕ್ಸಲ್‌ ಚಳವಳಿ ಉತ್ತುಂಗ ಸ್ಥಿತಿಯಲ್ಲಿದ್ದ ಕಾಲ. ಆ ಸಮಯಕ್ಕೆ ಸುಮಾರು 30,000 ಬಲವುಳ್ಳ ಗುಂಪು ಸಶಸ್ತ್ರ ಹೋರಾಟದಲ್ಲಿ ಕ್ರೀಯಾಶೀಲವಾಗಿತ್ತು ಎಂದು ವರದಿಗಳು ತಿಳಿಸುತ್ತವೆ. ಕೇಂದ್ರ ಗೃಹ ಇಲಾಖೆ 2004ರಲ್ಲಿ ನಡೆಸಿದ ಸಮೀಕ್ಷೆ ಹೇಳುವಂತೆ ಸುಮಾರು 9,300 ನಕ್ಸಲರು ಭೂಗತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಬಳಿ 6,500 ಪರವಾನಗಿ ಹೊಂದಿರುವ, ಅದಕ್ಕಿಂತಲೂ ಹೆಚ್ಚ ಪರವಾನಗಿಯಿಲ್ಲದ ದೇಶೀಯ ಶಸ್ತ್ರಾಸ್ತ್ರಗಳಿದ್ದವು. ಭಾರತದ ರೀಸರ್ಚ್‌ ಅಂಡ್‌ ಅನಾಲಿಸಿಸ್‌ ವಿಂಗ್‌ ಹೇಳುವಂತೆ 2006ರ ವೇಳೆಯಲ್ಲಿ 20,000ಕ್ಕೂನ ಅಧಿಕ ಮಂದಿ ನಕ್ಸಲ್‌ ಚಳವಳಿಯ ಭಾಗವಾಗಿದ್ದರು.

“ಇಷ್ಟೇ ಜನರಿದ್ದಾರೆ ಎಂದು ಹೇಳಲು ಯಾವ ಗುಪ್ತಚರ ಸಂಸ್ಥೆಗೂ ಸಾಧ್ಯವಾಗುವುದಿಲ್ಲ. ಈ ಸಂಖ್ಯೆ ಲಕ್ಷಗಳಷ್ಟಿದೆ. ಇದು ಪೂರ್ಣಕಾಲಿಕ ಹೋರಾಟದಲ್ಲಿರುವವರು. ಅಗತ್ಯ ಬಿದ್ದಾಗ ಬಂದೂಕು ಆಯುಧ ಹಿಡಿಯುವವರ ಸಂಖ್ಯೆಯೂ ಲಕ್ಷಗಳಷ್ಟಿದೆ,”
ಸಶಸ್ತ್ರ ಹೋರಾಟದಲ್ಲಿದ್ದವರೊಬ್ಬರ ಹೇಳಿಕೆ

2010ರಲ್ಲಿ ಆಜಾದ್‌ ಎಂದು ಕರೆಯಿಸಿಕೊಳ್ಳುತ್ತಿದ್ದ ನಕ್ಸಲ್‌ ನಾಯಕ ಚುರುಮುರಿ ರಾಜ್‌ ಕುಮಾರ್‌ ಹತ್ಯೆಯಾದರು. 2011ರಲ್ಲಿ ಮತ್ತೊಬ್ಬ ನಾಯಕ ಕಿಶನ್‌ ಜಿ ಮೃತಪಟ್ಟರೆ, 2012ರಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ನಿಪುಣರಾಗಿದ್ದ ರಾಮಕೃಷ್ಣರ ಬಂಧನ ನಕ್ಸಲ್‌ ಹೋರಾಟಕ್ಕೆ ದೊಡ್ಡ ಪೆಟ್ಟು ನೀಡಿತ್ತು.

ಸಧ್ಯ ಚಳವಳಿಯನ್ನು ಮುನ್ನಡೆಸುತ್ತಿರುವ ನಾಯಕರಲ್ಲಿ ಲೆನಿನ್‌, ಕಾರ್ಲ್‌ ಮಾರ್ಕ್ಸ್‌ ಸಿದ್ಧಾಂತಗಳ ಗಂಧ ಗಾಳಿ ತಿಳಿಯದವರೇ ಹೆಚ್ಚು ಎನ್ನಲಾಗುತ್ತದೆ. ಹೀಗೆ ಹಲವಾರು ಗುಂಪುಗಳಾಗಿ ಒಡೆದು ಗಟ್ಟಿಯಾದ ನಾಯಕತ್ವದ ಕೊರತೆಯನ್ನು ಎದುರಿಸುತ್ತಿರುವ ನಕ್ಸಲ್‌ ಚಳವಳಿ 2017ಕ್ಕೆ ಆಧಿಕೃತವಾಗಿ 50 ವರ್ಷಗಳನ್ನು ಪೂರೈಸಿದೆ. ಭಾರತದ ನಕ್ಸಲ್‌ ಚಳವಳಿಯ ಪ್ರಾರಂಭದ ದಿನಗಳು ಮತ್ತು ಇಂದಿನ ಸಾಧನೆಯನ್ನು ಈ ಹೊತ್ತಿಗೆ ನಿಂತು ನೋಡುವುದಾದರೆ ನಿರಾಶದಾಯಕ ಎನಿಸುತ್ತದೆ ಎನ್ನುವ ಮಾತುಗಳಿವೆ. ಸಾಮಾಜಿಕ ಅಸಮಾನತೆಯನ್ನು ಅಳಿಸುವ ಪ್ರಯತ್ನದಲ್ಲಿ ನಕ್ಸಲ್‌ ಚಳವಳಿ ಮುಂದೆ ಹೆಜ್ಜೆ ಇಟ್ಟಿತ್ತಾದರೂ, ಸಮಾನತೆಯ ಸ್ಥಾಪನೆಗಾಗಿ ಬಲಿ ಪಡೆದವರ ಸಂಖ್ಯೆ ಅಪಾರ. ಇದುವರೆಗೂ ಪೊಲಿಸ್‌ ಮತ್ತು ನಕ್ಸಲರ ನಡುವಿನ ಕಾಳಗದಲ್ಲಿ ಸತ್ತ ಸಾಮಾನ್ಯ ಜನರ ಸಂಖ್ಯೆ 12,000ವನ್ನು ದಾಟುತ್ತದೆ ಎಂದು ಸರಕಾರಿ ದಾಖಲೆಗಳು ತಿಳಿಸುತ್ತವೆ.

ಇಂದಿನ ಪರಿಸ್ಥಿತಿ ಏನೇ ಇದ್ದರೂ ಸಹ ನಕ್ಸಲ್‌ ಚಳವಳಿಯ ಹೆಸರಿನಲ್ಲಿ ಸಹಸ್ರಾರು ವಿದ್ಯಾವಂತ ಯುವಜನರು ಪ್ರಾಣ ತೆತ್ತಿದ್ದರ ಕಾರಣವೇನು ಎಂಬುದನ್ನು ಆಳುವ ಸರಕಾರಗಳು ಸರಿಯಾಗಿ ಗಮನಿಸಿಲ್ಲ. ತಮ್ಮ ಹಕ್ಕುಗಳಿಗಾಗಿ ಹಿಂಸೆಯ ಹಾದಿ ತುಳಿದ ಬಡವರ ಹಸಿವನ್ನು ನೀಗಿಸುವ ಬದಲು ಹಿಂಸೆಯನ್ನೇ ಪ್ರತ್ಯುತ್ತರವಾಗಿ ಸರಕಾರ ಬಳಸಿಕೊಳ್ಳುತ್ತಿದೆ. ನಕ್ಸಲ್‌ ಪ್ಯಾಕೇಜ್‌ ಹೆಸರಿನಲ್ಲಿ ಬಿಡುಗಡೆಯಾಗುತ್ತಿರುವ ಹಣ ನಕ್ಸಲ್‌ ಪೀಡಿತ ಪ್ರದೇಶಗಳಿಗೆ ಎಷ್ಟರ ಮಟ್ಟಿಗೆ ತಲುಪುತ್ತಿದೆ ಎಂಬುದು ಸರಕಾರ ತಿಳಿಯದ ವಿಷಯವೇನಲ್ಲ. ಈ ಹಿನ್ನಲೆಯಿಂದ ನೋಡುವುದಾದರೆ ಸಮಸ್ಯೆಯನ್ನು ಬಗೆಹರಿಸುವುದನ್ನು ಬಿಟ್ಟು ಹೋರಾಟವನ್ನು ಮಟ್ಟ ಹಾಕುತ್ತೇವೆ ಎನ್ನುತ್ತಿರುವ ಪ್ರಭುತ್ವದ ನೀತಿಗಳು ಶೋಷಿತರ ಹಸಿವನ್ನು ಅಧಿಕಾರ ಹಿಡಿಯುವ ದಾರಿಯನ್ನಾಗಿ ಬಳಸಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆ ಮೂಡದಿರದು.