ಎದೆಹಾಲೂಡುವ ಜಾಗೃತಿ ಅಭಿಯಾನಕ್ಕೆ ತೊಡರುಗಾಲಾದ ‘ಸಾಂಪ್ರದಾಯಿಕ ವೈರಲ್‌’!
ದೇಶ

ಎದೆಹಾಲೂಡುವ ಜಾಗೃತಿ ಅಭಿಯಾನಕ್ಕೆ ತೊಡರುಗಾಲಾದ ‘ಸಾಂಪ್ರದಾಯಿಕ ವೈರಲ್‌’!

ಮಲಯಾಳದ ‘ಗೃಹಲಕ್ಷ್ಮೀ’ ಪಾಕ್ಷಿಕ ಪತ್ರಿಕೆ ತನ್ನ ಮುಖಪುಟದಲ್ಲಿ ಮಗುವಿಗೆ ಎದೆಹಾಲೂಡುವ ಫೋಟೊ ಪ್ರಕಟಿಸಿದ ಕಾರಣಕ್ಕೆ ಸಂಪ್ರದಾಯವಾದಿಗಳ ವಿರೋಧ ಎದುರಿಸಬೇಕಾಗಿದೆ. ಈ ಫೋಟೊದಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಂಡಿರುವ ನಟಿ ಜಿಲು ಜೋಸೆಫ್‌ ವಿರುದ್ಧ ಕೂಡಾ ಹಲವು ಮನುವಾದಿಗಳು ಕ್ಷುಲ್ಲಕ ಕಾರಣ ಹಿಡಿದು ತಿರುಗಿಬಿದ್ದಿದ್ದಾರೆ. ಮಗುವಿಗೆ ಬಹಿರಂಗವಾಗಿ ಎದೆಹಾಲೂಡಲು ತಾಯಂದಿರು ಹಿಂಜರಿಯುವ ಅಗತ್ಯವಿಲ್ಲ ಎನ್ನುವುದನ್ನು ಪ್ರಚುರ ಪಡಿಸುವ ಜಾಗೃತಿ ಅಭಿಯಾನವೊಂದು ಸಾಂಪ್ರದಾಯಿಕ ಮನಸ್ಥಿತಿಗಳ ಕಾರಣಕ್ಕೆ ಅನಗತ್ಯವಾಗಿ ವೈರಲ್ ಆಗಿದೆ.

ಮಗುವಿಗೆ ಎದೆಹಾಲೂಡುತ್ತಿರುವ ಮಹಿಳೆಯ ಫೋಟೊವನ್ನು ಮುಖಪುಟದಲ್ಲಿ ಪ್ರಕಟಿಸಿದಕ್ಕಾಗಿ ‘ಗೃಹಲಕ್ಷ್ಮೀ’ ಪಾಕ್ಷಿಕದ ವಿರುದ್ಧ ವಿನೋದ್‌ ಮ್ಯಾಥ್ಯು ವಿಲ್ಸನ್‌ ಎಂಬ ಕೇರಳದ ವಕೀಲ ಕೊಲ್ಲಂನ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

‘ಗೃಹಲಕ್ಷ್ಮೀ’ ಪಾಕ್ಷಿಕದ ಮಾರ್ಚ್‌ ತಿಂಗಳ ಮೊದಲ ಸಂಚಿಕೆಯ ಮುಖಪುಟದಲ್ಲಿ ‘ದುರುಗುಟ್ಟು ನೋಡಬೇಡಿ, ನಾವು ಎದೆಹಾಲೂಡಬೇಕಿದೆ ಎಂದು ತಾಯಂದಿರು ಕೇರಳ ಜನತೆಗೆ ಹೇಳುತ್ತಿದ್ದಾರೆ’ ಎಂಬ ಬರಹದೊಂದಿಗೆ ಮಗುವಿಗೆ ಎದೆಹಾಲೂಡುತ್ತಿರುವ ಫೋಟೊ ಪ್ರಕಟಗೊಂಡಿತ್ತು. ‘ತಾಯಂದಿರು ಮಕ್ಕಳಿಗೆ ಬಹಿರಂಗವಾಗಿ ಮೊಲೆಯೂಡಲು ನಾಚಿಕೆ ಪಡಬೇಕಿಲ್ಲ. ಮಕ್ಕಳಿಗೆ ಹಾಲೂಡುವುದು ಘನತೆಯ ವಿಷಯ’ ಎಂಬ ಬಗ್ಗೆ ಪತ್ರಿಕೆ ವಿವರವಾದ ವರದಿ ಪ್ರಕಟಿಸಿತ್ತು.

ಸಂಪ್ರದಾಯವಾದಿಗಳಿಗೆ ತಿರುಗೇಟು :

ಮಾರ್ಚ್‌ 8 ಅಂತರರಾಷ್ಟ್ರೀಯ ಮಹಿಳಾ ದಿನ. ಇದಕ್ಕಾಗಿ ವಿಶೇಷ ಸಂಚಿಕೆ ರೂಪಿಸುವ ಉದ್ದೇಶಹೊಂದಿದ್ದ ‘ಗೃಹಲಕ್ಷ್ಮೀ’ ಸಂಪಾದಕೀಯ ಮಂಡಳಿ ಎದೆಹಾಲೂಡುವ ಬಗ್ಗೆ ಜಾಗೃತಿ ಅಭಿಯಾನ ಆರಂಭಿಸಲು ಮುಂದಾಗಿತ್ತು. ಇದಕ್ಕಾಗಿ ನೈಜ ಘಟನೆಯೊಂದನ್ನು ಆಧರಿಸಿ ವಿಶೇಷ ವರದಿ ಸಿದ್ಧಪಡಿಸಿತ್ತು. ಮಗುವಿಗೆ ಮೊಲೆಹಾಲೂಡುವ ವೇಳೆ ಎದೆಭಾಗವನ್ನು ಮುಚ್ಚಿಕೊಳ್ಳಬೇಕು ಎಂಬ ಮನಸ್ಥಿತಿಯನ್ನು ಬದಲಿಸಲು ಕೇರಳದ ಕಣ್ಣೂರಿನ ಅಮೃತಾ ಮತ್ತು ಅವರ ಪತಿ ಬಿಜು ಮುಂದಾಗಿದ್ದರು. ಸಂಪ್ರದಾಯವಾದಿಗಳಿಗೆ ತಿರುಗೇಟು ನೀಡಲು ಬಿಜು ತಮ್ಮ ಪತ್ನಿ ಮಗುವಿಗೆ ಎದೆಹಾಲೂಡುತ್ತಿರುವ ಫೋಟೊವನ್ನು ಜನವರಿ 27ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು.

“ನಾನು ಚಿಕ್ಕವನಿದ್ದಾಗ ನನ್ನ ಅಕ್ಕಂದಿರು ತಮ್ಮ ಮಕ್ಕಳಿಗೆ ಯಾವ ಹಿಂಜರಿಕೆಯೂ ಇಲ್ಲದೆ ಸಹಜವಾಗಿ ಮೊಲೆಯುಣಿಸುತ್ತಿದ್ದರು. ಆದರೆ, ದಿನಕಳೆದಂತೆ ಮಕ್ಕಳಿಗೆ ಮೊಲೆಯೂಡುವ ಬಗ್ಗೆ ಹಲವು ನಿರ್ಬಂಧಗಳು ಎದುರಾಗಿವೆ. ತಾಯಿ ತನ್ನ ಮಗುವಿಗೆ ಮೊಲೆಯೂಡಲು ಏಕೆ ಹಿಂಜರಿಯಬೇಕು, ಮೊಲೆಯೂಡುವ ವೇಳೆ ಎದೆ ಭಾಗವನ್ನು ಏಕೆ ಮುಚ್ಚಿಕೊಳ್ಳಬೇಕು” ಎಂದು ಬಿಜು ಪ್ರಶ್ನಿಸಿದ್ದರು. ಬಿಜು ಅವರ ಪೋಸ್ಟ್‌ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರೆ, ಹಲವರು ಅವರ ಬೆಂಬಲಕ್ಕೆ ನಿಂತಿದ್ದರು.

ಬಿಜು ಅವರ ಈ ಫೇಸ್‌ಬುಕ್‌ ಪೋಸ್ಟ್ ವೈರಲ್‌ ಆಗಿತ್ತು. ಬಿಜು ತಮ್ಮ ಪತ್ನಿ ಮಗುವಿಗೆ ಮೊಲೆಯೂಡುತ್ತಿರುವ ಫೋಟೊ ಪೋಸ್ಟ್‌ ಮಾಡಿದ ಕಾರಣಕ್ಕೆ ಅವರ ಮೇಲೆ ಹಲವು ಸಾಂಪ್ರದಾಯವಾದಿಗಳು ಮುಗಿಬಿದ್ದಿದ್ದರು. ಇದೇ ಘಟನೆಯನ್ನು ಆಧಾರವಾಗಿಟ್ಟುಕೊಂಡು ವಿಸ್ತೃತವಾದ ವರದಿ ಸಿದ್ಧಪಡಿಸಿದ್ದ ‘ಗೃಹಲಕ್ಷ್ಮೀ’ ಈ ವರದಿ ಜತೆಗೆ ನಟಿ ಜಿಲು ಜೋಸೆಫ್‌ ರೂಪದರ್ಶಿಯಾಗಿ ಮಗುವಿಗೆ ಮೊಲೆಯೂಡುತ್ತಿರುವ ಫೋಟೊ ಬಳಸಿಕೊಂಡಿತ್ತು.

മുലയൂട്ടല്‍ ഫോട്ടോ വിവാദത്തെക്കുറിച്ച് മോഡല്‍ ജിലു ജോസഫ്... #Breast_Feeding_Campaign

Posted by Mathrubhumi on Thursday, March 1, 2018

ವಿರೋಧ ಏಕೆ?

‘27 ವರ್ಷದ ನಟಿ ಜಿಲು ಜೋಸೆಫ್‌ ಇನ್ನೂ ಮದುವೆಯಾಗಿಲ್ಲ, ಫೋಟೊದಲ್ಲಿರುವ ಮಗು ಕೂಡಾ ಅವರದ್ದಲ್ಲ, ಯಾವ ತಾಯಿಯೂ ಹಾಲುಣಿಸುವ ವೇಳೆ ಮಗುವಿನ ಕಡೆ ನೋಡದೆ ಕ್ಯಾಮೆರಾ ನೋಡುವುದಿಲ್ಲ, ಜಿಲು ಜೋಸೆಫ್‌ ಹಿಂದೂ ಸಂಪ್ರದಾಯಸ್ಥ ಹೆಣ್ಣಿನಂತೆ ಸಿಂಧೂರ ಇಟ್ಟುಕೊಂಡು, ತಾಳಿ ಹಾಕಿಕೊಂಡು ಮೊಲೆ ತೋರಿಸುವುದು ಸರಿಯಲ್ಲ, ಮೊಲೆ ತೋರಿಸುವುದನ್ನೇ ಮುಖ್ಯವಾಗಿಟ್ಟುಕೊಂಡ ಫೋಟೊವನ್ನು ಮುಖಪುಟದಲ್ಲಿ ಪ್ರಕಟಿಸುವ ಮೂಲಕ ‘ಗೃಹಲಕ್ಷ್ಮೀ’ ಕೀಳುಮಟ್ಟದ ಪ್ರಚಾರತಂತ್ರ ಬಳಸಿದೆ’ ಎಂದು ರೂಪದರ್ಶಿ ಜಿಲು ಜೋಸೆಫ್‌ ಮತ್ತು ಪತ್ರಿಕೆಯ ಸಂಪಾದಕೀಯ ಮಂಡಳಿ ವಿರುದ್ಧ ಹಲವರು ಹರಿಹಾಯ್ದಿದ್ದಾರೆ.

ಆದರೆ, ತಮ್ಮ ನಿಲುವನ್ನು ಸಮರ್ಥಿಸಿಕೊಂಡಿರುವ ‘ಗೃಹಲಕ್ಷ್ಮೀ’ ಸಂಪಾದಕೀಯ ಮಂಡಳಿ, ತಮ್ಮದು ಒಳ್ಳೆಯ ಉದ್ದೇಶದ ಜಾಗೃತಿ ಅಭಿಯಾನವೇ ಹೊರತು ಕೀಳುಮಟ್ಟದ ಪ್ರಚಾರ ಅಲ್ಲ ಎಂದು ಹೇಳಿಕೊಂಡಿದೆ. ಪತ್ರಿಕೆಯ ಈ ಅಭಿಯಾನಕ್ಕೆ ಯುನಿಸೆಫ್‌ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದೆ.

“ಯಾವುದೇ ಸ್ಥಳವಾದರೂ ತಾಯಂದಿರು ಯಾವ ಹಿಂಜರಿಕೆಯೂ ಇಲ್ಲದೆ ಮಕ್ಕಳಿಗೆ ಮೊಲೆಹಾಲೂಡಲು ಮುಂದಾಗಬೇಕು. ಅಂತರರಾಷ್ಟ್ರೀಯ ಮಹಿಳಾ ದಿನದ ವಿಶೇಷವಾಗಿ ಈ ಬಗ್ಗೆ ಜಾಗೃತಿ ಮೂಡಿಸಲು ಅಮೃತಾ ಬಿಜು ಘಟನೆಯನ್ನು ಆಧಾರವಾಗಿಟ್ಟುಕೊಂಡು, ಹಲವರ ಅಭಿಪ್ರಾಯ ಪಡೆದು ವಿಶೇಷ ವರದಿ ಪ್ರಕಟಿಸಿದ್ದೇವೆ. ಮೊದಲ ಮಗುವಿಗೆ ಜನ್ಮ ನೀಡುವ ಬಹುತೇಕ ಹೆಣ್ಣುಮಕ್ಕಳು ತಮ್ಮ ಮಗು ಹಸಿವಿನಿಂದ ಅಳುತ್ತಿದ್ದರೂ ಬಹಿರಂಗವಾಗಿ ಮೊಲೆಹಾಲುಣಿಸಲು ಹಿಂಜರಿಯುತ್ತಾರೆ. ಈ ಮನೋಭಾವ ಬದಲಾಗಬೇಕು. ಮಗುವಿಗೆ ಎದೆಹಾಲೂಡುವುದು ಸಹಜವಾದ ಪ್ರಕ್ರಿಯೆ ಮತ್ತು ತಾಯ್ತನದ ಹೆಮ್ಮೆ. ಮಗುವಿಗೆ ಎದೆಹಾಲೂಡಲು ಮುಚ್ಚುಮರೆಯ ಅಗತ್ಯವಿಲ್ಲ. ಮಹಿಳಾ ದಿನದ ಸಂದರ್ಭದಲ್ಲಿ ಈ ಚರ್ಚೆ ಹುಟ್ಟುಹಾಕಲು ಎದೆಹಾಲಿನ ಜಾಗೃತಿ ಅಭಿಯಾನ ಆರಂಭಿಸಿದ್ದೇವೆ” ಎನ್ನುತ್ತಾರೆ ‘ಗೃಹಲಕ್ಷ್ಮೀ’ ಪತ್ರಿಕೆಯ ಪ್ರಧಾನ ಸಂಪಾದಕಿ ಮಾನ್ಸಿ ಜೋಸೆಫ್‌.

“ಮಗುವಿಗೆ ಬಹಿರಂಗವಾಗಿ ಮೊಲೆಹೂಡಲು ಪುರುಷರು ಮಾತ್ರವಲ್ಲ ಮಹಿಳೆಯರೂ ಆಕ್ಷೇಪಿಸುತ್ತಾರೆ. ಮಗುವಿಗೆ ಎದೆಹಾಲುಣಿಸಲು ಇರುವ ಸಾಮಾಜಿಕ ಮನಸ್ಥಿತಿ ಬದಲಾಗಬೇಕು. ಯಾವುದೇ ಸ್ಥಳವಾದರೂ ಮಗುವಿಗೆ ಹಾಲೂಡಲು ತಾಯಂದಿರು ಹಿಂಜರಿಯಬಾರದು. ಈ ಬಗ್ಗೆ ಸಾಮಾಜಿಕ ಜಾಗೃತಿ ಅಗತ್ಯ” ಎಂಬುದು ಅವರ ಅಭಿಪ್ರಾಯ. ಅಲ್ಲದೆ, ಮಗುವಿಗೆ ಎದೆಹಾಲೂಡುವ ತಾಯಂದಿರ ಅನುಭವ ಹಾಗೂ ಮಗುವಿಗೆ ಎದೆಹಾಲೂಡುವ ಫೋಟೊಗಳನ್ನು ಹಂಚಿಕೊಳ್ಳುವಂತೆ ಹೇಳಿರುವ ಪತ್ರಿಕೆ ಮುಂದಿನ ಸಂಚಿಕೆಗಳಲ್ಲಿ ಅವನ್ನು ಪ್ರಕಟಿಸುವುದಾಗಿ ತಿಳಿಸಿದೆ.

“ನಾನು ಆಸ್ಪತ್ರೆಯಲ್ಲಿದ್ದಾಗಲೂ ಮಗುವಿಗೆ ಮೊಲೆಯುಣಿಸುವ ವೇಳೆ ಎದೆಭಾಗವನ್ನು ಮುಚ್ಚಿಕೊಳ್ಳುವಂತೆ ಹಲವರು ಹೇಳುತ್ತಿದ್ದರು. ಮಗುವಿಗೆ ಹಾಲೂಡುವ ವೇಳೆ ಎದೆಭಾಗವನ್ನು ಮುಚ್ಚಿಕೊಳ್ಳದಿದ್ದರೆ ಮೊಲೆಗಳು ಬತ್ತಿಹೋಗುತ್ತವೆ ಎಂದೂ ಕೆಲವರು ಹೇಳುತ್ತಿದ್ದರು. ಆದರೆ, ಮಗು ಮತ್ತು ತಾಯಿಯ ಸಂಬಂಧವೇ ದೊಡ್ಡದು” ಎಂದು ಅಮೃತಾ ಹೇಳಿಕೊಂಡಿದ್ದಾರೆ.

“ಮಗುವಿಗೆ ಬಹಿರಂಗವಾಗಿ ಮೊಲೆಹಾಲೂಡುವ ಜಾಗೃತಿ ಅಭಿಯಾನಕ್ಕೆ ರೂಪದರ್ಶಿಯಾಗುವಂತೆ ಕೇಳಿದಾಗ ನಾನು ತಕ್ಷಣ ಒಪ್ಪಿದೆ. ಇದರಲ್ಲಿ ನನಗೇನೂ ತಪ್ಪು ಕಾಣುವುದಿಲ್ಲ. ನನ್ನ ದೇಹದ ಬಗ್ಗೆ ನನಗೆ ಹೆಮ್ಮೆ ಇದೆ. ಒಂದು ಒಳ್ಳೆಯ ಉದ್ದೇಶದ ಅಭಿಯಾನಕ್ಕೆ ನಾನು ನನ್ನ ದೇಹವನ್ನು ಏಕೆ ಬಳಸಿಕೊಳ್ಳಬಾರದು?” ಎಂಬುದು 27 ವರ್ಷದ ಜಿಲು ಜೋಸೆಫ್‌ ಪ್ರಶ್ನೆ.

ಅಮೆರಿಕದ ಛಾಯಾಗ್ರಾಹಕಿ ಜೇಡ್‌ ಬೆಲ್ ಸೆರೆ ಹಿಡಿದಿದ್ದ ಭಾರತದ ನಟಿ ಕಸ್ತೂರಿ ಅವರ ಫೋಟೊ
ಅಮೆರಿಕದ ಛಾಯಾಗ್ರಾಹಕಿ ಜೇಡ್‌ ಬೆಲ್ ಸೆರೆ ಹಿಡಿದಿದ್ದ ಭಾರತದ ನಟಿ ಕಸ್ತೂರಿ ಅವರ ಫೋಟೊ

ವಿರೋಧ ಇದೇ ಮೊದಲಲ್ಲ:

ತಾಯ್ತನ ಜಾಗೃತಿ ಅಭಿಯಾನದ ಅಂಗವಾಗಿ 2014ರಲ್ಲಿ ಅಮೆರಿಕದ ಛಾಯಾಗ್ರಾಹಕಿ ಜೇಡ್‌ ಬೆಲ್ ಸೆರೆ ಹಿಡಿದಿದ್ದ ಭಾರತದ ನಟಿ ಕಸ್ತೂರಿ ಅವರ ಫೋಟೊಗಳಿಗೂ ವಿರೋಧ ವ್ಯಕ್ತವಾಗಿತ್ತು. ವೈದ್ಯರೊಬ್ಬರನ್ನು ಮದವೆಯಾಗಿ ಅಮೆರಿಕದಲ್ಲಿ ನೆಲೆಸಿರುವ ಕಸ್ತೂರಿ ತಮ್ಮ ಮಗುವಿನೊಂದಿಗೆ ಇರುವ ಅರೆನಗ್ನ ಫೋಟೊಗಳು ಬಹಿರಂಗವಾದ ಬಳಿಕ ಸಂಪ್ರದಾಯವಾದಿಗಳು ಕಸ್ತೂರಿ ವಿರುದ್ಧ ಟೀಕೆಗಳ ಮಳೆಗರೆದಿದ್ದರು. ಗರ್ಭಿಣಿಯಾದ ಬಳಿಕ ದೇಹ ಸೌಂದರ್ಯ ಕುಂದುತ್ತದೆ ಎಂಬ ತಾಯ್ತನದ ಬಗ್ಗೆ ಹೆಣ್ಣುಮಕ್ಕಳಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಉದ್ದೇಶದಿಂದ ಜೇಡ್‌ ‘ಎ ಬ್ಯೂಟಿಫುಲ್‌ ಬಾಡಿ’ ಫೋಟೊ ಸರಣಿಯನ್ನು ಆರಂಭಿಸಿದ್ದರು. ಈ ಸರಣಿಯಲ್ಲಿ ಈವರೆಗೆ ಒಂದು ಲಕ್ಷಕ್ಕೂ ಹೆಚ್ಚು ತಾಯಂದಿರು ತಮ್ಮ ನಗ್ನ, ಅರೆ ನಗ್ನ ದೇಹವನ್ನು ತೋರಿಸಿದ್ದಾರೆ.

ಸದನದಲ್ಲಿ ಹಾಲೂಡಿದ್ದ ಸೆನೆಟರ್‌ :

ತಮ್ಮ ಮಗುವಿಗೆ ಸದನದಲ್ಲಿ ಹಾಲೂಡಿದ್ದಕ್ಕೆ ಆಸ್ಟ್ರೇಲಿಯನ್ ಸೆನೆಟರ್ ಲಾರಿಸ್ಸಾ ವಾಟರ್ಸ್‌ ಸುದ್ದಿಯಾಗಿದ್ದರು. 2017ರ ಮೇ 10ರಂದು ಕಲಾಪ ನಡೆಯುತ್ತಿದ್ದ ವೇಳೆ ವಾಟರ್ಸ್‌ ತಮ್ಮ ಎರಡು ತಿಂಗಳ ಮಗುವಿಗೆ ಹಾಲುಣಿಸಿದ್ದರು. ಇದಕ್ಕೂ ಮೊದಲು ಆಸ್ಟ್ರೇಲಿಯನ್‌ ಸದನದಲ್ಲಿ ಮಗುವಿಗೆ ಹಾಲೂಡಲು ನಿರ್ಬಂಧವಿತ್ತು. 2003ರಲ್ಲಿ ಸಂಸದೆ ಕ್ರಿಸ್ಟಿ ಮಾರ್ಷಲ್‌ ತಮ್ಮ 11 ತಿಂಗಳ ಹೆಣ್ಣುಮಗುವಿಗೆ ಹಾಲೂಡಿದ ಕಾರಣಕ್ಕೆ ಅವರನ್ನು ಸದನದಿಂದ ಹೊರಹಾಕಲಾಗಿತ್ತು. 2009ರಲ್ಲಿ ತಮ್ಮ ಎರಡು ವರ್ಷದ ಮಗಳೊಂದಿಗೆ ಕಲಾಪಕ್ಕೆ ಹಾಜರಾಗಿದ್ದ ಸಾರಾ ಹನ್ಸನ್‌ ಯಂಗ್‌ ಅವರ ಮಗಳನ್ನು ಬಲವಂತವಾಗಿ ಸದನದಿಂದ ಹೊರಹಾಕಲಾಗಿತ್ತು. 2015ರಲ್ಲಿ ಸಚಿವೆ ಕೆಲ್ಲಿ ಒ’ಡ್ವೆಯರ್‌ ಅವರು ಸದನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ವಿಪ್‌ ಜಾರಿ ಮಾಡಿದ್ದ ಸರಕಾರ, ಮಗುವಿಗೆ ಹಾಲುಣಿಸುವ ಕಾರಣ ನೀಡಿ ಕಲಾಪಕ್ಕೆ ಗೈರಾಗಬಾರದು ಎಂದು ತಿಳಿಸಿತ್ತು. ಈ ಪ್ರಕರಣಗಳ ಬಳಿಕ 2016ರಲ್ಲಿ ಆಸ್ಟ್ರೇಲಿಯಾ ಸರಕಾರ ಸದನದಲ್ಲಿ ಮಗುವಿಗೆ ಹಾಲೂಡಲು ಅವಕಾಶ ನೀಡಿತ್ತು.

  ಆಸ್ಟ್ರೇಲಿಯನ್ ಸೆನೆಟರ್ ಲಾರಿಸ್ಸಾ ವಾಟರ್ಸ್‌  
  ಆಸ್ಟ್ರೇಲಿಯನ್ ಸೆನೆಟರ್ ಲಾರಿಸ್ಸಾ ವಾಟರ್ಸ್‌  

ಎದೆಹಾಲುಣಿಸುವ ‘ಮಾ’ ಅಭಿಯಾನ:

ಭಾರತದಲ್ಲಿ ಪ್ರತಿವರ್ಷ 68,500 ನವಜಾತ ಶಿಶುಗಳು ಮರಣಹೊಂದುತ್ತವೆ. ಪ್ರತಿದಿನ 1,600 ಶಿಶುಗಳು ಹುಟ್ಟಿದ ದಿನವೇ ಸಾವನ್ನಪ್ಪುತ್ತವೆ ಎನ್ನುತ್ತದೆ ಯುನಿಸೆಫ್‌. ಇದಕ್ಕೆ ಕಾರಣ ತಾಯ್ತನದ ಬಗ್ಗೆ ಸೂಕ್ತ ಜಾಗೃತಿ ಇಲ್ಲದಿರುವುದು. ತಾಯ್ತನದ ಬಗ್ಗೆ ಜಾಗೃತಿ ಹಾಗೂ ಶಿಶು ಮರಣ ಪ್ರಮಾಣ ತಗ್ಗಿಸಲು ಅಭಿಯಾನ ಆರಂಭಿಸಿದ್ದ ಯುನಿಸೆಫ್‌ ಎದೆಹಾಲಿನ ಮಹತ್ವ ಸಾರುವ ಬಗ್ಗೆಯೂ ಜಾಗೃತಿ ಅಭಿಯಾನ ಆರಂಭಿಸಿದೆ.

‘ಮಾ’ (Mothers’ Absolute Affection- MAA) ಹೆಸರಿನ ಈ ಅಭಿಯಾನಕ್ಕೆ 2016ರ ಆಗಸ್ಟ್‌ 5ರಂದು ಚಾಲನೆ ನೀಡಲಾಗಿದೆ. ಎದೆಹಾಲು ಶಿಶುಗಳ ಜೀವರಕ್ಷಕ, ಮಗು ಜನಿಸಿದ ಒಂದು ಗಂಟೆಯೊಳಗೆ ತಾಯಿಯ ಎದೆಹಾಲು ನೀಡುವುದು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಭಾರತದಲ್ಲಿ ಶೇಕಡ 45ರಷ್ಟು ನವಜಾತ ಶಿಶುಗಳು ಮಾತ್ರ ಜನಿಸಿದ ಒಂದು ಗಂಟೆಯೊಳಗೆ ತಾಯಿಯ ಎದೆಹಾಲು ಕುಡಿಯುತ್ತಿವೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಮಗುವಿಗೆ ಎದೆಹಾಲುಣಿಸುವ ತಾಯಂದಿರಲ್ಲಿ ಸ್ತನ ಕ್ಯಾನ್ಸರ್‌ ಸಾಧ್ಯತೆ ಕಡಿಮೆ ಎನ್ನುತ್ತದೆ ಯುನಿಸೆಫ್‌.

ಆದರೆ, ಹಿಂಜರಿಕೆ ಹಾಗೂ ಸಾಂಪ್ರದಾಯಿಕ ಪೂರ್ವಗ್ರಹಗಳ ಕಾರಣಕ್ಕೆ ಮಗುವಿಗೆ ಬಹಿರಂಗವಾಗಿ ಎದೆಹಾಲುಣಿಸಲು ಬಹುತೇಕ ತಾಯಂದಿರು ಹಿಂದೇಟು ಹಾಕುತ್ತಾರೆ. ಈ ಹಿಂಜರಿಕೆಯನ್ನು ಹೋಗಲಾಡಿಸಲು ಆರಂಭವಾಗಿರುವ ಅಭಿಯಾನವೂ ಸಾಂಪ್ರದಾಯಿಕ ಮನಸ್ಸುಗಳ ಕಾರಣದಿಂದ ವಿವಾದಕ್ಕೆ ಗುರಿಯಾಗಿರುವುದು ದುರಂತ.