ಚಿದಂಬರಂ ಪುತ್ರ ಕಾರ್ತಿ (ಚಿತ್ರಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್‌)
ದೇಶ

ಏನಿದು ‘ಐಎನ್‌ಎಕ್ಸ್‌ ಮೀಡಿಯಾ ಹಗರಣ’?: ಚಿದಂಬರಂ ಪುತ್ರ ಕಾರ್ತಿ ಈಗ ಸಿಬಿಐ ಅತಿಥಿ  

ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಬುಧವಾರ ಬೆಳಗ್ಗೆ ಸಿಬಿಐ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿದ್ದಾರೆ. ವಿದೇಶಿ ಪ್ರವಾಸವನ್ನು ಮುಗಿಸಿ ಲಂಡನ್‌ನಿಂದ ಹೊರಟ ಕಾರ್ತಿಗಾಗಿ ಕಾಯುತ್ತಿದ್ದ ಅಧಿಕಾರಿಗಳು ಬೆಳಗ್ಗೆ ಚೆನ್ನೈ ವಿಮಾನ ನಿಲ್ದಾಣ ತಲುಪಿದ ಕೂಡಲೆ ವಶಕ್ಕೆ ಪಡೆದಿದ್ದಾರೆ. ಬಂಧನದ ಕುರಿತು ಮಾಹಿತಿ ನೀಡಿರುವ ಸಿಬಿಐ ಅಧಿಕಾರಿಯಬ್ಬರು, ವಂಚನೆಯ ಪ್ರಕರಣದಲ್ಲಿ ಕಾರ್ತಿ ಭಾಗಿಯಾಗಿರುವುದಕ್ಕೆ ಸಂಬಂಧಿಸಿದಂತೆ ಬಲವಾದ ಸಾಕ್ಷಿಗಳು ಲಭ್ಯವಾಗಿದೆ ಎಂದಿದ್ದಾರೆ.

ಕಾರ್ತಿ ಚಿದಂಬರಂನ ಮಾಲೀಕತ್ವದ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಚಾರ್ಟರ್ಡ್ ಅಕೌಂಟೆಂಟ್‌ ಭಾಸ್ಕರ ರಾಮನ್‌ ಎಂಬುವವರನ್ನು ಫೆ. 16ರಂದು ದೆಹಲಿಯಲ್ಲಿ ಪಂಚತಾರಾ ಹೋಟೆಲ್‌ ಒಂದರಲ್ಲಿ ಬಂಧಿಸಲಾಗಿತ್ತು.

ಕಾರ್ತಿ ‘ಐಎನ್‌ಎಕ್ಸ್‌ ಮೀಡಿಯಾ’ ಸಂಸ್ಥೆಯಿಂದ ಹಣ ಪಡೆದಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಏಜೆನ್ಸಿ ಆರೋಪಿಸಿತ್ತು. ತಂದೆ ಹಣಕಾಸು ಸಚಿವರಾಗಿದ್ದ ಸಮಯದಲ್ಲಿ ಅವರ ಅಧಿಕಾರದ ಪ್ರಭಾವವನ್ನು ಬಳಸಿ ತೆರಿಗೆ ವಂಚನೆಗೆ ಕಾರ್ತಿ ಮುಂದಾಗಿದ್ದರು ಮತ್ತು ಈ ಮೂಲಕ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯನ್ನು ಉಲ್ಲಂಘಿಸಿದ್ದರು ಎಂಬ ಅರೋಪ ಕಾರ್ತಿಯ ಮೇಲಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಕಾರ್ತಿ ಬಂದಿಸಿರುವ ಸಿಬಿಐ ಅಧಿಕಾರಿಗಳು ದೆಹಲಿಗೆ ಕರೆದೊಯ್ದು ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ.

ಫಾರಿನ್‌ ಇನ್ವೆಸ್ಟ್‌ಮೆಂಟ್ ಪ್ರಮೋಷನ್‌ ಬೋರ್ಡ್‌ಗೆ ಸಂಬಂಧಿಸಿದ, ಐಎನ್‌ಎಕ್ಸ್‌ ಮೀಡಿಯಾಗೆ ನೀಡಲಾಗಿದ್ದ ತೆರಿಗೆ ರಿಯಾಯಿತಿ ಕುರಿತ ಪ್ರಕರಣದಲ್ಲಿ ಕಾರ್ತಿ ಚಿಂದಂಬರಂ ಭಾಗಿಯಾಗಿದ್ದಾರೆಂದು ಜಾರಿ ನಿರ್ದೇಶನಾಲಯ ಆಪಾದಿಸಿತ್ತು. 2007ರ ಅವಧಿಯಲ್ಲಿ ಪಿ. ಚಿದಂಬರಂ ಹಣಕಾಸು ಸಚಿವರಾಗಿದ್ದಾಗ ಐಎನ್‌ಎಕ್ಸ್‌ಗೆ ಸರಕಾರದಿಂದ ದೇಣಿಗೆ ಸಂದಾಯವಾಗಿತ್ತು. ಐಎನ್‌ಎಕ್ಸ್‌ನ ಬಂಡವಾಳದ ಶೇ. 26ರಷ್ಟು ಪರೋಕ್ಷ ವಿದೇಶಿ ಬಂಡವಾಳವಾಗಿತ್ತು. ಇದನ್ನು ತಿಳಿಸದೆ ಐಎನ್‌ಎಕ್ಸ್‌ ತೆರಿಗೆ ವಂಚನೆಗೆ ಮುಂದಾಗಿ, ವಿದೇಶಿ ವಿನಿಮಯ ಕಾಯ್ದೆಯನ್ನು ಉಲ್ಲಂಘಿಸಿದೆ ಎಂಬುದು ಐಎನ್‌ಎಕ್ಸ್‌ ಮೇಲಿನ ಅರೋಪ.

ಚಿದಂಬರಂ ಪುತ್ರ ಕಾರ್ತಿ (ಚಿತ್ರಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್‌)
ಚಿದಂಬರಂ ಪುತ್ರ ಕಾರ್ತಿ (ಚಿತ್ರಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್‌)

ಐಎನ್‌ಎಕ್ಸ್‌ ಈ ವೇಳೆಯಲ್ಲಿ ಕಾರ್ತಿ ಒಡೆತನದ ಅಡ್ವಾಂಟೇಜ್‌ ಸ್ಟ್ರಾಟೆಜಿಕ್‌ ಕನ್ಸಲ್ಟಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಹೆಸರಿನ ಕಂಪನಿಗೆ 10,00,000 ರುಪಾಯಿಗಳನ್ನು ನೀಡಿತ್ತು ಎಂದು ಸಿಬಿಐ ತಿಳಿಸಿದೆ. ಈ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಕಾರ್ತಿ ಚಿದಂಬರಂ ಮತ್ತು ಇನ್ನಿತರರ ಮೇಲೆ ಪ್ರತ್ಯೇಕ ಮೊಕದ್ದಮೆಯನ್ನು ಹೂಡಿದೆ. ಈ ಮೊಕದ್ದಮೆಯನ್ನು ಎನ್ಪೋರ್ಸ್‌ಮೆಂಟ್‌ ಡೈರೆಕ್ಟರೇಟ್‌ ದಾಖಲಿಸಿತ್ತು.

ಫೆಬ್ರವರಿ 23ರಂದು ಸುಪ್ರಿಂ ಕೋರ್ಟ್‌ ಮಾರ್ಚ್‌ 1ರ ಒಳಗೆ ಎನ್ಫೋರ್ಸ್‌ಮೆಂಟ್‌ ಡೈರೆಕ್ಟರೇಟ್‌ ಮುಂದೆ ಹಾಜಾರಾಗುವಂತೆ ಕಾರ್ತಿಗೆ ಸೂಚಿಸಿತ್ತು. ಈ ಅವಧಿಯ ಒಳಗೆ ಪ್ರಕರಣದ ಕುರಿತು ಮತ್ತಷ್ಟು ಹೆಚ್ಚಿನ ಮಾಹಿತಿಯನ್ನು ಕಲೆಹಾಕಿರುವ ಸಿಬಿಐ ಕಾರ್ತಿ ವಿರುದ್ಧ ಮತ್ತೊಂದು ಕೇಸ್‌ ದಾಖಲಿಸಿದೆ.

ರಾಣಕಾರಣದಿಂದ ಹಗರಣಗಳವರೆಗೆ:

ತಮಿಳುನಾಡು ಮೂಲದ ಕಾರ್ತಿ ಚಿದಂಬರಂ ರಾಜಕಾರಣದ ಜತೆಗೆ ಹಲವಾರು ಉದ್ಯಮಗಳ ಮಾಲೀಕರೂ ಆಗಿದ್ದಾರೆ. ಕಾರ್ತಿ ಅಂತರರಾಷ್ಟ್ರೀಯ ಮಟ್ಟದ ಕಂಪನಿಗಳ ಗುಪ್ತ ಮಾಲಿಕತ್ವವನ್ನು ಹೊಂದಿದ್ದಾರೆ ಎನ್ನುವ ಶಂಕೆಯ ಬೆನ್ನಲ್ಲೇ ಸರಕಾರಿ ಸಂಸ್ಥೆಗಳು ಆ ಕಂಪನಿಗಳ ಹಣಕಾಸು ನಿರ್ವಹಣೆಯ ಕುರಿತು ತನಿಖೆ ಆರಂಭಿಸಿವೆ. ಈ ಆರೋಪಗಳನ್ನು ತಿರಸ್ಕರಿಸಿರುವ ಕಾರ್ತಿ, ಹಾಗೇನಾದರೂ ಅಕ್ರಮ ಆಸ್ತಿ ಪತ್ತೆಯಾಗಿದ್ದೇ ಆದರೆ ಅದೆಲ್ಲವನ್ನೂ ಮುಟ್ಟುಗೋಲು ಹಾಕಿಕೊಳ್ಳವಂತೆ ಹೇಳಿಕೆ ನೀಡಿದ್ದರು. ಕಾರ್ತಿ ತಂದೆ ಪಿ. ಚಿದಂಬರಂ ಕೂಡ ಈ ಆರೋಪಗಳನ್ನು ಅಲ್ಲಗೆಳೆದಿದ್ದಾರೆ.

ತಮಿಳುನಾಡಿನ ಶಿವಗಂಗಾ ಜೆಲ್ಲೆಯ ಕಾರೈಕುಡಿ ಬಳಿಯ ಕಂದನೂರ್‌ ಕಾರ್ತಿ ಚಿದಂಬರ್‌ ಹುಟ್ಟೂರು. ಇವರದ್ದು ಮೂಲದಲ್ಲೇ ಶ್ರೀಮಂತ ವ್ಯಾಪಾರಿ ಕುಟುಂಬ. ಜತೆಗೆ ತಂದೆ ಮಾಜಿ ವಿತ್ತ ಸಚಿವರಾಗಿದ್ದಲ್ಲದೇ, 2016ರಿಂದ ಸಂಸತ್‌ ಸದಸ್ಯರೂ ಆಗಿದ್ದಾರೆ.

ಚೆನ್ನೈನ ಡಾನ್‌ ಬೋಸ್ಕೊ ಶಾಲೆಯಲ್ಲಿ ಪ್ರಾರ್ಥಮಿಕ ಶಿಕ್ಷಣ ಮುಗಿಸಿದ ಕಾರ್ತಿ ಟೆಕ್ಸಾಸ್‌ ವಿಶ್ವವಿದ್ಯಾಲಯದಲ್ಲಿ ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ ಪದವಿ ಪಡೆದಿದ್ದಾರೆ. ಕೆಂಬ್ರಿಡ್ಜ್‌ ವಿಶ್ವ ವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ ಕೂಡ. ತಮಿಳಿನಾಡಿಗೆ ಹಿಂದಿರುಗಿದ ಕಾರ್ತಿ, ರಾಜಕಾರಣದಲ್ಲಿ ಕಾಣಿಸಿಕೊಂಡರು. 2014ರ ಲೋಕಸಭಾ ಚುನಾವಣೆಯಲ್ಲಿ ಶಿವಗಂಗಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದರು.

2015ರಲ್ಲಿ ಮೋದಿ ಚನ್ನೈನ ಕಾರ್ಯಕ್ರಮವೊಂದರಲ್ಲಿ ಭಾಗಿಯಾದಾಗ, ಅವರನ್ನು ಹೊಗಳಿದ ಕಾರಣಕ್ಕಾಗಿ ಕಾಂಗ್ರೆಸ್‌ನಿಂದ ಕಾರ್ತಿಗೆ ಶೋಕಾಸ್‌ ನೋಟಿಸ್‌ ಕೂಡ ದೊರೆತಿತ್ತು. ಬರೀ ರಾಜಕಾರಣ, ಉದ್ಯಮಗಳಷ್ಟೇ ಅಲ್ಲದೇ ಹಲವಾರು ಸಂಘ, ಸಂಸ್ಥೆಗಳಲ್ಲೂ ಕೂಡ ಕಾರ್ತಿ ಸದಸ್ಯರಾಗಿದ್ದಾರೆ. ಕ್ರೀಡೆಯಲ್ಲೂ ಮುಂದಿರುವ ಕಾರ್ತಿ, ಹಲವಾರು ಟೆನ್ನಿಸ್‌ ಪಂದ್ಯಾವಳಿಗಲ್ಲಿ ಗೆಲುವು ದಾಖಲಿಸಿದ್ದಾರೆ.

ರಾಜಕಾರಣದ ಜತೆಗೆ ತಮ್ಮ ಕುಟುಂಬಕ್ಕೇ ಸೇರಿದ ಕಂಪನಿಯಲ್ಲಿ ಜೂನಿಯರ್‌ ಎಕ್ಸಿಕ್ಯೂಟಿವ್‌ ಆಗಿ ಕಾರ್ಯ ನಿರ್ವಹಿಸಿದ ಕಾರ್ತಿ, ಭಾರತದಲ್ಲಷ್ಟೇ ಅಲ್ಲದೇ ಹೊರದೇಶಗಳಲ್ಲೂ ಕೂಡ ಕಾರ್ತಿ ಉದ್ಯಮಗಳ ಮಾಲಿಕತ್ವವನ್ನು ಹೊಂದಿದ್ದಾರೆ.

ಏನೇ ಹಿನ್ನಲೆಯಿದ್ದರೂ ಕಾರ್ತಿ ಚಿದಂಬರಂ ಈಗ ಸಿಬಿಐ ಅತಿಥಿ. ಬಂಧನಕ್ಕೆ ಒಳಪಟ್ಟ ರಾಜಕಾರಣಿಗಳ ಸಾಲಿನಲ್ಲಿ ಈಗ ಕಾರ್ತಿ ಕೂಡ ಸೇರಿಕೊಂಡಿದ್ದಾರೆ. ಹಲವು ಬ್ಯಾಂಕ್‌ ಹಗರಣಗಳು ಬೆಳಕಿಗೆ ಬಂದಿರುವ ಮಧ್ಯೆಯೇ ಮತ್ತೊಂದು ವಂಚನೆಯ ಪ್ರಕರಣಕ್ಕೆ ಪೊಲೀಸರ ಅತಿಥಿಯಾಗಿರುವ ಕಾರ್ತಿ ವಿರುದ್ಧದ ಮೊಕದ್ದಮೆ ಮುಂದೆ ಯಾವ ರೀತಿಯ ತಿರುವುಗಳನ್ನು ಪಡೆಯುತ್ತದೆಯೋ ಕಾದು ನೋಡಬೇಕಿದೆ.