samachara
www.samachara.com
ಸಂಪೂರ್ಣವಾಗಿ ಬಡತನ ನಿರ್ಮೂಲನೆ ಸಾಧ್ಯವೇ?
ದೇಶ

ಸಂಪೂರ್ಣವಾಗಿ ಬಡತನ ನಿರ್ಮೂಲನೆ ಸಾಧ್ಯವೇ?

ಬೆಚ್ಚಿಬೀಳಿಸುವಂತಿದೆ ಲಭ್ಯ ಮಾಹಿತಿ

ದಯಾನಂದ

ದಯಾನಂದ

Summary

ಜಗತ್ತಿನಾದ್ಯಂತ ಬಡತನ ಹಾಗೂ ಹಸಿವಿನ ಕಾರಣದಿಂದ ಪ್ರತಿವರ್ಷ ಸಾವಿರಾರು ಜನ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲೂ ನಿತ್ಯ ಲಕ್ಷಾಂತರ ಮಂದಿ ಖಾಲಿ ಹೊಟ್ಟೆಯಲ್ಲೇ ಮಲಗುತ್ತಿದ್ದಾರೆ. 2030ರ ವೇಳೆಗೆ ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂದು ವಿಶ್ವಸಂಸ್ಥೆ ಪಣತೊಟ್ಟಿದೆ. ಹಂತಹಂತವಾಗಿ ಬಡತನ ಮತ್ತು ಹಸಿವಿನ ಪ್ರಮಾಣವನ್ನು ತಗ್ಗಿಸುವ ಗುರಿ ವಿಶ್ವಸಂಸ್ಥೆಯ ಮುಂದಿದೆ. ಆದರೆ, ನಿಜಕ್ಕೂ ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿದೆಯೇ? ಈ ಕುರಿತು ಕಣ್ತೆರೆಸುವಂತಹ ಮಾಹಿತಿಯನ್ನು ‘ಸಮಾಚಾರ’ ಇಲ್ಲಿ ಹೊತ್ತುತಂದಿದೆ.

ಇಂದು ಜಗತ್ತನ್ನು ಬಾಧಿಸುತ್ತಿರುವ ಗಂಭೀರ ಸಮಸ್ಯೆಗಳಲ್ಲಿ ಬಡತನ ಕೂಡಾ ಒಂದು. ಒಂದುಕಡೆಗೆ ಅಭಿವೃದ್ಧಿಶೀಲ ರಾಷ್ಟ್ರಗಳು ವೇಗವಾಗಿ ಆರ್ಥಿಕ ಪ್ರಗತಿ ಸಾಧಿಸುತ್ತಿರುವುದು ಕಾಣುತ್ತಿದ್ದರೆ, ಮತ್ತೊಂದೆಡೆ ಬಡತನ ಮತ್ತು ಹಸಿವಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಕೇರಳದ ಆದಿವಾಸಿ ಯುವಕ ಮಧು ಕೂಡಾ ಹಸಿವಿನ ಕಾರಣದಿಂದ ಕಾಡಿನಿಂದ ಊರಿಗೆ ಬಂದು ಅಕ್ಕಿ ಕದ್ದ ಆರೋಪದ ಮೇಲೆ ಹಲ್ಲೆಗೊಳಗಾಗಿ ಪ್ರಾಣಬಿಟ್ಟವನು.

ಬಡತನ ನಿರ್ಮೂಲನೆ ಸಂಪೂರ್ಣವಾಗಿ ಸಾಧ್ಯವೇ ಎಂಬ ಪ್ರಶ್ನೆಯ ಬೆನ್ನುಬಿದ್ದು ಹೊರಟರೆ ಜಗತ್ತಿನ ಬಡತನದ ಸಮಸ್ಯೆ, ಹಸಿವಿನಿಂದ ಸಾವನ್ನಪ್ಪುತ್ತಿರುವ ಪ್ರಮಾಣದ ಅಂಕಿಸಂಖ್ಯೆಗಳು ಬೆಚ್ಚಿಬೀಳಿಸುತ್ತವೆ. ಬಡತನ, ಬಡತನದ ಕಾರಣದಿಂದ ಉಂಟಾಗುವ ಅಪೌಷ್ಠಿಕತೆ, ನೈರ್ಮಲ್ಯ ಸಮಸ್ಯೆಗಳು, ಇದರಿಂದ ಹೆಚ್ಚಾಗುವ ಅನಾರೋಗ್ಯ – ಹೀಗೆ ಬಡತನದ ಹಿಂದೆ ಸಮಸ್ಯೆಗಳು ಸಾಲುಗಟ್ಟಿ ನಿಂತಿವೆ. ಯುನಿಸೆಫ್‌ನ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಜಗತ್ತಿನಾದ್ಯಂತ ಪ್ರತಿದಿನ 15,000ಕ್ಕೂ ಹೆಚ್ಚು ಐದು ವರ್ಷದೊಳಗಿನ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಮಕ್ಕಳ ಈ ಸಾವಿಗೆ ಬಡತನದಿಂದಾದ ಅಪೌಷ್ಠಿಕತೆಯೂ ಮುಖ್ಯ ಕಾರಣ.

ವಿಶ್ವ ಬ್ಯಾಂಕ್‌ ನಿಗದಿಪಡಿಸಿರುವ ಬಡತನ ರೇಖೆಯ ಅಂತರರಾಷ್ಟ್ರೀಯ ಮಾನದಂಡದ ಪ್ರಕಾರ ದಿನಕ್ಕೆ 1.90 ಡಾಲರ್‌ಗಿಂತ (120 ರೂಪಾಯಿ) ಕಡಿಮೆ ಆದಾಯವಿರುವ ವ್ಯಕ್ತಿ ಬಡವ ಎನಿಸಿಕೊಳ್ಳುತ್ತಾನೆ. ಈ ಮಾನದಂಡದ ಪ್ರಕಾರ ಜಗತ್ತಿನಾದ್ಯಂತ 700 ದಶಲಕ್ಷ ಜನರು ಬಡತನ ರೇಖೆಯ ಕೆಳಗಿದ್ದಾರೆ. ಆಫ್ರಿಕಾದ ಕೆಲ ರಾಷ್ಟ್ರಗಳು ಹಾಗೂ ದಕ್ಷಿಣ ಏಷ್ಯಾ ಪ್ರದೇಶದಲ್ಲೇ ಅತಿ ಹೆಚ್ಚು ಬಡತನ ಇದೆ ಎನ್ನುತ್ತದೆ ವಿಶ್ವಸಂಸ್ಥೆ. ಜಗತ್ತಿನ ಒಟ್ಟೂ ಬಡವರ ಪೈಕಿ ಶೇಕಡ 70ರಷ್ಟು ಜನ ಈ ಭಾಗಗಳಲ್ಲೇ ಇದ್ದಾರೆ. ಜಗತ್ತಿನ ಬಡವರ ಅರ್ಥದಷ್ಟು ಜನ ಚೀನಾ, ಭಾರತ, ಇಂಡೋನೇಷಿಯಾ ಮತ್ತು ನೈಜೀರಿಯಾಗಳಲ್ಲಿದ್ದಾರೆ ಎನ್ನುತ್ತದೆ ವಿಶ್ವಸಂಸ್ಥೆ.

ಬಡತನಕ್ಕೆ ಕಾರಣಗಳನ್ನು ಗುರುತಿಸಿರುವ ವಿಶ್ವಸಂಸ್ಥೆ ಆ ಕಾರಣಗಳನ್ನು ಹೋಗಲಾಡಿಸುವ ಮೂಲಕ ಬಡತನ ನಿರ್ಮೂಲನೆ ಸಾಧ್ಯ ಎಂದು ಹೇಳಿದೆ. ನಿರುದ್ಯೋಗ, ಜನಸಂಖ್ಯೆಯ ಹೆಚ್ಚಳ, ಅನಾರೋಗ್ಯ, ಸಾಮಾಜಿಕ ನೀತಿ ನಿರೂಪಣೆಗಳ ದೋಷ ಬಡತನಕ್ಕೆ ಕಾರಣ ಎಂದು ವಿಶ್ವಸಂಸ್ಥೆ ಹೇಳಿದೆ. ಈ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಬಡತನ ಹೋಗಲಾಡಿಸಬಹುದು ಎಂದಿರುವ ವಿಶ್ವಸಂಸ್ಥೆಯು ಸರಕಾರ, ಖಾಸಗಿ ವಲಯ, ಸಂಶೋಧನಾ ಸಂಸ್ಥೆಗಳು ಹಾಗೂ ಯುವಜನರು ಮನಸ್ಸು ಮಾಡಿದರೆ 2030ರೊಳಗೆ ಬಡತನ ನಿರ್ಮೂಲನೆಯ ಗುರಿ ಸಾಧನೆ ಸಾಧ್ಯ ಎಂದು ಹೇಳಿದೆ. ಇದೊಂದು ಸಾಮೂಹಿಕ, ಸಾಮಾಜಿಕ ಹೊಣೆಗಾರಿಕೆಯಾಗಿ ಜಾರಿಗೆ ಬಂದರೆ ಮಾತ್ರ ಗುರಿ ತಲುಪಲು ಸಾಧ್ಯವಿದೆ.

ಬಡತನ ನಿರ್ಮೂಲನೆಗಾಗಿ ಸರಕಾರಿ ಹಾಗೂ ಖಾಸಗಿ ವಲಯದಲ್ಲಿ ಉದ್ಯೋಗ ಹೆಚ್ಚಳವಾಗಬೇಕು, ಜನಸಂಖ್ಯೆ ನಿಯಂತ್ರಣ ಯೋಜನೆಗಳು ಸಮಪರ್ಕವಾಗಿ ಜಾರಿಯಾಗಬೇಕು, ಆರೋಗ್ಯ ಹಾಗೂ ನೈರ್ಮಲ್ಯದ ಬಗ್ಗೆ ಜನಜಾಗೃತಿ ಹೆಚ್ಚಾಗಬೇಕು ಎನ್ನುತ್ತದೆ ವಿಶ್ವಸಂಸ್ಥೆ. ಆದರೆ, ಅಭಿವೃದ್ಧಿಶೀಲ ಹಾಗೂ ಬಡ ರಾಷ್ಟ್ರಗಳನ್ನು ಈ ಸಮಸ್ಯೆಗಳೇ ಭೂತಾಕಾರವಾಗಿ ಪೀಡಿಸುತ್ತಿವೆ. ನಿರುದ್ಯೋಗದ ಸಮಸ್ಯೆ ಎಲ್ಲಾ ಬಡರಾಷ್ಟ್ರಗಳ ಮೂಲಭೂತ ಸಮಸ್ಯೆಯಾಗಿದೆ. ಇನ್ನು ಬಡತನದ ಕಾರಣದಿಂದ ಅಪೌಷ್ಠಿಕತೆ ಹಾಗೂ ಅನಾರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ. ಬಡತನ ಹಾಗೂ ಅನಾರೋಗ್ಯ ಒಂದಕ್ಕೊಂದು ಪೂರಕವಾದ ಸಮಸ್ಯೆಗಳಂತಿವೆ. ಹೀಗಿರುವಾಗ ವಿಶ್ವಸಂಸ್ಥೆಯ 2030ರ ಬಡತನ ನಿರ್ಮೂಲನೆಯ ಗುರಿ ಒಂದು ಆದರ್ಶದಂತೆ ಕಾಣುತ್ತದೆಯಷ್ಟೆ.

ಸಂಪತ್ತಿನ ಅಸಮಾನ ಹಂಚಿಕೆ:

ಜಗತ್ತಿನಲ್ಲಿ ಬಡತನದ ಸಮಸ್ಯೆ ಹೆಚ್ಚಾಗಿದೆ ನಿಜ. ಆದರೆ, ಜಾಗತಿಕವಾಗಿ ಆರ್ಥಿಕ ಬೆಳವಣಿಗೆಯೇನೂ ಕುಗ್ಗಿಲ್ಲ. ವರ್ಷದಿಂದ ವರ್ಷಕ್ಕೆ ರಾಷ್ಟ್ರಗಳ ಆರ್ಥಿಕತೆಯ ಗ್ರಾಫ್‌ ಏರುತ್ತಲೇ ಇದೆ. ಆದರೆ, ಇದು ಎಲ್ಲಾ ರಾಷ್ಟ್ರಗಳ ವಿಚಾರದಲ್ಲೂ ಸತ್ಯವಲ್ಲ. ಹಿಂದುಳಿದ ದೇಶಗಳು ಹಿಂದೆಯೇ ಉಳಿದಿವೆ, ಮುಂದುವರಿಯುತ್ತಿರುವ ರಾಷ್ಟ್ರಗಳು ನಾಗಾಲೋಟದಲ್ಲಿ ಅಭಿವೃದ್ಧಿ ಕಾಣುತ್ತಿವೆ. ಒಂದೆಡೆ ಕಿತ್ತು ತಿನ್ನುವ ಬಡತನ ಕಾಡುತ್ತಿದ್ದರೆ, ಮತ್ತೊಂದೆಡೆ ಐಷಾರಾಮಿ ಲೋಕವಿದೆ. ಇದಕ್ಕೆ ಕಾರಣ ಸಂಪತ್ತಿನ ಅಸಮಾನ ಹಂಚಿಕೆ.

ಇಡೀ ಜಗತ್ತಿನ ಅರ್ಧದಷ್ಟು ಸಂಪತ್ತು ಶೇಕಡ 1ರಷ್ಟು ಜನರಲ್ಲೇ ಸಂಗ್ರಹವಾಗಿದೆ ಎಂದು 2015ರಲ್ಲಿ ‘ಕ್ರೆಡಿಟ್‌ ಸ್ಯೂಸೆ’ ವರದಿ ಬಹಿರಂಗಪಡಿಸಿತ್ತು. ಮುಂದುವರಿದ ರಾಷ್ಟ್ರಗಳ ಮೇಲ್ಮಧ್ಯಮ ವರ್ಗದ ಜನರ ಆದಾಯದಲ್ಲಿ ಹೆಚ್ಚಳವಾಗಿದೆ, ಈ ವರ್ಗದ ಖರ್ಚು ವೆಚ್ಚದ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಮೆರಿಕ, ಚೀನಾ ಮತ್ತು ಇಂಗ್ಲೆಂಡ್‌ನ ಶ್ರೀಮಂತರು ಹಾಗೂ ಮೇಲ್ಮಧ್ಯಮ ವರ್ಗದಲ್ಲಿ ಜಗತ್ತಿನ ಅರ್ಧದಷ್ಟು ಸಂಪತ್ತು ಸಂಗ್ರಹವಾಗಿದೆ ಎಂದು ಈ ವರದಿ ಹೇಳಿತ್ತು. ಹೀಗೆ ಸಂಪತ್ತು ಕೆಲವೇ ವರ್ಗದ ಜನರಲ್ಲಿ ಸಂಗ್ರಹವಾಗುವುದು ಕೂಡಾ ಬಡತನ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ.

ಸಂಪೂರ್ಣವಾಗಿ ಬಡತನ ನಿರ್ಮೂಲನೆ ಸಾಧ್ಯವೇ?

ಹೆಣ್ಣುಮಕ್ಕಳನ್ನು ಕಾಡುವ ಹಸಿವು

ಬಡತನದ ಕಾರಣದಿಂದ ಹಸಿದಿರುವ ಹಾಗೂ ಅಪೌಷ್ಠಿಕತೆಗೆ ಒಳಗಾಗುವವರ ಪೈಕಿ ಮಹಿಳೆಯರೇ ಹೆಚ್ಚು ಎನ್ನುತ್ತದೆ ಯುನಿಸೆಫ್‌. ಬಡತನದ ಕಾರಣದಿಂದ ಊಟವಿಲ್ಲದೆ ಖಾಲಿಹೊಟ್ಟೆಯಾಗುವ ಮಹಿಳೆಯರಲ್ಲೇ ಅಪೌಷ್ಠಿಕತೆ ಸಮಸ್ಯೆ ಹೆಚ್ಚಾಗಿರುತ್ತದೆ. ಇಂತಹ ಮಹಿಳೆಯರಿಗೆ ಕಡಿಮೆ ತೂಕದ, ಅನಾರೋಗ್ಯ ಮಕ್ಕಳು ಜನಿಸುತ್ತಾರೆ. ಅಪೌಷ್ಠಿಕತೆಯಿಂದ ಬಳಲುವ ಈ ಮಕ್ಕಳು ರೋಗ ನಿರೋಧಕ ಶಕ್ತಿ ಕ್ಷೀಣಿಸಿ ಐದು ವರ್ಷದೊಳಗೇ ಸಾವನ್ನಪ್ಪುತ್ತಾರೆ. ಪ್ರತಿ ವರ್ಷ ಸಾವನ್ನಪ್ಪುವ ಐದು ವರ್ಷದೊಳಗಿನ ಮಕ್ಕಳ ಪೈಕಿ ಇಂತಹ ಅಪೌಷ್ಠಿತಕತೆಯಿಂದ ಬಳಲುವ ಮಕ್ಕಳ ಸಂಖ್ಯೆಯೇ ಹೆಚ್ಚು ಎಂದು ಯುನಿಸೆಫ್ ಹೇಳುತ್ತದೆ.

ಸಣ್ಣ ರಾಷ್ಟ್ರಗಳು, ಪದೇಪದೇ ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗುವ ರಾಷ್ಟ್ರಗಳು, ಆಂತರಿಕ ಹಾಗೂ ಬಾಹ್ಯ ಸಂಘರ್ಷಗಳಿರುವ ರಾಷ್ಟ್ರಗಳಲ್ಲೇ ಬಡತನ ಹೆಚ್ಚು ಎನ್ನುತ್ತದೆ ವಿಶ್ವಸಂಸ್ಥೆ. ಈ ಸಮಸ್ಯೆಗಳು ಜನಸಂಖ್ಯೆ ಹೆಚ್ಚಳ ಹಾಗೂ ನಿರುದ್ಯೋಗ ಸಮಸ್ಯೆಯಷ್ಟೇ ಭೀಕರವಾದಂಥವು. ತೀವ್ರ ಬಡತನ ಅನುಭವಿಸುತ್ತಿರುವ ಸುಡಾನ್‌ನಂಥ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಆರ್ಥಿಕ ಸಹಾಯದಿಂದ ಅಲ್ಲಿನ ಬಡತನ ಪ್ರಮಾಣವನ್ನು ತಗ್ಗಿಸುವ ಪ್ರಯತ್ನ ಮಾಡುತ್ತಿದೆ. ಆದರೆ, ಜನಸಂಖ್ಯೆಯ ಜತೆಗೆ ಬಡವರ ಸಂಖ್ಯೆಯೂ ಹೆಚ್ಚಾಗಿರುವ ಚೀನಾ ಮತ್ತು ಭಾರತದಂಥ ರಾಷ್ಟ್ರಗಳಲ್ಲಿ ಆರ್ಥಿಕ ನೆರವು ನೀಡಿ ಬಡತನ ನಿವಾರಣೆ ಮಾಡುವುದು ಕಷ್ಟದ ಮಾತು.

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನಿರೊದ್ಯೋಗದ ಸಮಸ್ಯೆಗಳ ಜತೆಗೆ ಶೈಕ್ಷಣಿಕ ಹಾಗೂ ಸಾಮಾಜಿಕ ಸಮಸ್ಯೆಗಳೂ ಸೇರಿಕೊಂಡಿವೆ. ಸಾಮಾಜಿಕ ಅಸಮಾನತೆ, ಬಡತನದ ಕಾರಣಕ್ಕೆ ಶಿಕ್ಷಣದಿಂದ ದೂರಾಗುವವರ ಸಂಖ್ಯೆ ಭಾರತದಂಥ ರಾಷ್ಟ್ರಗಳಲ್ಲಿ ಹೆಚ್ಚಾಗಿಯೇ ಇದೆ. ಬಡತನ, ಅನಕ್ಷರತೆ, ಸಾಮಾಜಿಕ ಅಸಮಾನತೆ, ಅನಾರೋಗ್ಯ ಇವೆಲ್ಲವೂ ಹಿಂದುಳಿದ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಿಷವರ್ತುಲಗಳಂತೆ ಒಂದರ ಹಿಂದೊಂದು ಸುತ್ತುತ್ತಲೇ ಇರುತ್ತವೆ.

ಭಾರತದ ಸ್ಥಿತಿ

2015ರ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 836 ದಶಲಕ್ಷ ಜನ ನಿತ್ಯ 20 ರೂಪಾಯಿಗಿಂತ ಕಡಿಮೆ ಆದಾಯ ಪಡೆಯುತ್ತಿದ್ದಾರೆ. ಬಡತನ ರೇಖೆಗೆ ಭಾರತ ಸರಕಾರ ನಿಗದಿಪಡಿಸಿರುವ ಮಾನದಂಡದ ಪ್ರಕಾರ ಪ್ರತಿ ದಿನ ಗ್ರಾಮೀಣ ಪ್ರದೇಶದಲ್ಲಿ 32 ರೂಪಾಯಿ ಮತ್ತು ನಗರ ಪ್ರದೇಶದಲ್ಲಿ 47 ರೂಪಾಯಿಗಿಂತ ಕಡಿಮೆ ಆದಾಯವಿರುವ ವ್ಯಕ್ತಿ ಬಡವ ಎನಿಸಿಕೊಳ್ಳುತ್ತಾನೆ. 2014ರಲ್ಲಿ ಸಿ.ರಂಗರಾಜನ್‌ ಆಯೋಗ ಸರಕಾರಕ್ಕೆ ಸಲ್ಲಿಸಿದ ವರದಿಯ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯ ಶೇಕಡ 29.5ರಷ್ಟು ಜನ ಬಡತನ ರೇಖೆಯ ಕೆಳಗಿದ್ದಾರೆ.

ದೇಶದಲ್ಲಿ ಸುಮಾರು 20 ಕೋಟಿಯಷ್ಟು ಜನ ನಿತ್ಯ ಖಾಲಿ ಹೊಟ್ಟೆಯಲ್ಲಿ ಮಲಗುತ್ತಾರೆ. ಜಗತ್ತಿನಲ್ಲಿ ಹಸಿವಿನಿಂದ ಬಳಲುತ್ತಿರುವವರ ಪೈಕಿ ಮೂರನೇ ಒಂದರಷ್ಟು ಜನ ಭಾರತದಲ್ಲೇ ಇದ್ದಾರೆ. ಹಸಿವಿನ ಕಾರಣಕ್ಕೆ ಉಂಟಾಗುವ ಅನಾರೋಗ್ಯ ಹಾಗೂ ಹಸಿವಿನಿಂದ ಸಾವನ್ನಪ್ಪುವವರ ಸಂಖ್ಯೆಯೂ ಭಾರತದಲ್ಲಿ ಹೆಚ್ಚಾಗಿದೆ. ಭಾರತದಲ್ಲಿ ನಿತ್ಯ ಸುಮಾರು 7 ಸಾವಿರ ಜನ ಹಸಿವು ಹಾಗೂ ಹಸಿವಿನಿಂದಾದ ಆರೋಗ್ಯ ಸಮಸ್ಯೆಗಳಿಂದ ಸಾಯುತ್ತಿದ್ದಾರೆ.

ಸಂಪೂರ್ಣವಾಗಿ ಬಡತನ ನಿರ್ಮೂಲನೆ ಸಾಧ್ಯವೇ?

2011ರ ಜನಗಣತಿ ಪ್ರಕಾರ ಭಾರತದಲ್ಲಿ 10.77 ಲಕ್ಷಕ್ಕೂ ಹೆಚ್ಚು ಜನರಿಗೆ ಮನೆಗಳಿಲ್ಲ. ರಾಷ್ಟ್ರ ರಾಜಧಾನಿ ದೆಹಲ್ಲಿ ಸುಮಾರು 2 ಲಕ್ಷ ಜನರಿಗೆ ಮನೆಗಳಿಲ್ಲ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿಗೆ ಸೂರಿಲ್ಲ. ಸರಕಾರದ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಪ್ರತಿ ವರ್ಷ 700ಕ್ಕೂ ಹೆಚ್ಚು ಜನ ಸೂರಿಲ್ಲದವರು ಶೀತಗಾಳಿ ಹಾಗೂ ಚಳಿಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಭಾರತವೂ ಸೇರಿದಂತೆ ಮುಂದುವರಿದ ರಾಷ್ಟ್ರಗಳ ಬಹುಸಂಖ್ಯಾತರನ್ನು ಬಡತನ ಮತ್ತು ಹಸಿವು ಕಾಡುತ್ತಿದೆ. ಎಲ್ಲರಿಗೂ ಶಿಕ್ಷಣ, ಕೌಶಲ್ಯಾಧಾರಿತ ಉದ್ಯೋಗ, ಅಸಮಾನತೆ ನಿವಾರಣೆ, ಸಂಪತ್ತಿನ ಸಮರ್ಪಕ ಹಂಚಿಕೆಯಿಂದ ಮಾತ್ರ ಈ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯ. ಆದರೆ, ಆದರ್ಶ ತತ್ವದ ತಳಹದಿಯ ಮೇಲೆ ಮಾತ್ರ ಈ ಅಂಶಗಳು ಜಾರಿಯಾಗಲು ಸಾಧ್ಯ. ವಾಸ್ತವ ಯಾವಾಗಲೂ ಆದರ್ಶಗಳಿಗಿಂತ ಭಿನ್ನವಾಗಿಯೇ ಇರುತ್ತದೆ.

ಸಂಪೂರ್ಣ ಬಡತನ ನಿವಾರಣೆ ಅಸಾಧ್ಯ

ತೀವ್ರವಾದ ಬಡತನವನ್ನು ಕಡಿಮೆ ಮಾಡಬಹುದು, ಆದರೆ, ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಅಸಾಧ್ಯ ಎನ್ನುತ್ತಾರೆ ಆರ್ಥಿಕ ತಜ್ಞ ಪ್ರೊ. ಆರ್.ಎಸ್.ದೇಶಪಾಂಡೆ. “ಬಡತನದ ವ್ಯಾಖ್ಯಾನ ಕಾಲದಿಂದ ಕಾಲಕ್ಕೆ ಬದಲಾಗುತ್ತಿರುತ್ತದೆ. ನಮ್ಮಲ್ಲಿ 20-30 ವರ್ಷಗಳ ಹಿಂದೆ ದಿನಕ್ಕೆ ಒಂದು ರೊಟ್ಟಿ ಸಿಕ್ಕರೆ ಸಾಕು ಎನ್ನುವವನು ಬಡವ ಎನಿಸಿಕೊಳ್ಳುತ್ತಿದ್ದ. ಆದರೆ, ಈಗ ಆ ಪರಿಸ್ಥಿತಿ ಇಲ್ಲ. ಎಲ್ಲರಿಗೂ ಕೌಶಲಾಧಾರಿತ ಉದ್ಯೋಗ ಸಿಗದಿದ್ದರೂ ಕೊನೆಗೆ ಕೂಲಿ ಕೆಲಸವಾದರೂ ಸಿಗುತ್ತದೆ. ತಲಾ ಆದಾಯ ವರ್ಷದಿಂದ ವರ್ಷಕ್ಕೆ ಏರಿಕೆ ಕಂಡುಬರುತ್ತಿದೆ. ಏನೂ ದುಡಿಯಲಾರವರಿಗೆ ಸರಕಾರ ಪುನರ್ವಸತಿ ಕಲ್ಪಿಸಬೇಕಾಗುತ್ತದೆ. ಆದರೆ, ದುಡಿಯುವ ಸಾಮರ್ಥ್ಯವಿರುವವರಿಗೆ ಯಾವುದಾದರೂ ಕೆಲಸ ಸಿಕ್ಕೇ ಸಿಗುತ್ತದೆ” ಎಂಬುದು ಅವರ ಅಭಿಪ್ರಾಯ.

“ಮಧ್ಯಮ ವರ್ಗ ಹಾಗೂ ಶ್ರೀಮಂತರ ಆದಾಯ ಹೆಚ್ಚಾಗುತ್ತಿರುವಂತೆ ಬಡವರ ಆದಾಯ ಕೂಡಾ ಸ್ವಲ್ಪ ಮಟ್ಟಿಗಾದರೂ ಏರಿಕೆಯಾಗುತ್ತಿರುತ್ತದೆ. ಹೆಚ್ಚು ಆದಾಯವಿರುವವರಿಗೆ ಹೋಲಿಸಿದಾಗ ಕಡಿಮೆ ಆದಾಯವಿರುವವರು ಬಡವರು ಎನಿಸಿಕೊಳ್ಳುತ್ತಾರೆ. ಈ ದೃಷ್ಟಿಯಿಂದ ನೋಡಿದರೆ ಸಂಪೂರ್ಣ ಬಡತನ ನಿವಾರಣೆ ಅಸಾಧ್ಯ. ಆದರೆ, ಸರಕಾರ ಹಾಗೂ ಖಾಸಗಿ ವಲಯ ಕಾರ್ಯಪ್ರವೃತ್ತವಾದರೆ ತೀವ್ರವಾದ ಬಡತನವನ್ನು ಹೋಗಲಾಡಿಸಬಹುದು” ಎನ್ನುತ್ತಾರೆ ಅವರು.