samachara
www.samachara.com
ಕಪ್ಪು ಹಣ ಎಂದರೇನು? ನೋಟು ಬದಲಾವಣೆಯಿಂದ ದೇಶಕ್ಕೇನು ಉಪಯೋಗ?: ಆರ್ಥಿಕ ತಜ್ಞ ಪ್ರಭಾತ್ ಪಟ್ನಾಯಕ್ ಸಂದರ್ಶನ
ದೇಶ

ಕಪ್ಪು ಹಣ ಎಂದರೇನು? ನೋಟು ಬದಲಾವಣೆಯಿಂದ ದೇಶಕ್ಕೇನು ಉಪಯೋಗ?: ಆರ್ಥಿಕ ತಜ್ಞ ಪ್ರಭಾತ್ ಪಟ್ನಾಯಕ್ ಸಂದರ್ಶನ

ನೋಟು ನಿಷೇಧ ಕ್ರಮದ ಸಾಧಕ ಬಾಧಕಗಳೇನು? ಇದರಿಂದ ಮೋದಿಯವರು ಘೋಷಿಸಿರುವಂತೆ ಕಪ್ಪುಹಣವನ್ನು ತೊಡೆದು ಹಾಕಲು ಸಾಧ್ಯವಾಗುತ್ತದೆಯೇ? ಪ್ರೊ. ಪ್ರಭಾತ್ ಪಾಟ್ನಾಯಕ್ ಏನು ಹೇಳಿದ್ದಾರೆ ಕೇಳಿ...

ನವೆಂಬರ್ 8ರ ರಾತ್ರಿ 8 ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡುತ್ತಾ, ರೂ. 500 ಹಾಗೂ 1000ದ ಕರೆನ್ಸಿ ನೋಟುಗಳು ರಾತ್ರಿಯಿಂದಲೇ ಜಾರಿಗೆ ಬರುವಂತೆ ಚಲಾವಣೆಯಲ್ಲಿರುವುದಿಲ್ಲ ಎಂದು ಘೋಷಿಸಿದರು. ‘ಕಪ್ಪು ಹಣದ ಖಾಯಿಲೆ’ಯನ್ನು ಇಲ್ಲವಾಗಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದೂ ಅವರು ದೇಶಕ್ಕೆ ತಿಳಿಸಿದರು.

ಆ ಕ್ಷಣದಿಂದ ಇದುವರೆಗೆ ದೇಶದಲ್ಲಿ ಏನೇನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇಂತಹ ಒಂದು ನೋಟು ನಿಷೇಧ ಕ್ರಮದ ಸಾಧಕ ಬಾಧಕಗಳೇನು? ಇದರಿಂದ ಮೋದಿಯವರು ಘೋಷಿಸಿರುವಂತೆ ಕಪ್ಪುಹಣವನ್ನು ತೊಡೆದು ಹಾಕಲು ಸಾಧ್ಯವಾಗುತ್ತದೆಯೇ? ಮುಂತಾದ ವಿಚಾರಗಳ ಕುರಿತಾಗಿ ದೇಶದ ಪ್ರಖರ ಅರ್ಥಶಾಸ್ತ್ರಜ್ಞರೂ, ವಿದ್ವಾಂಸರೂ, 'The Value of Money, The Retreat to Unfreedom' ಮತ್ತಿತರ ಕೃತಿಗಳ ಲೇಖಕರೂ ಹಾಗೂ ದೆಹಲಿಯ ಪ್ರತಿಷ್ಟಿತ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರೂ ಆಗಿರುವ ಪ್ರೊ. ಪ್ರಭಾತ್ ಪಾಟ್ನಾಯಕ್ ಅವರೊಂದಿಗೆ 'ದಿ ವೈರ್' ನಡೆಸಿದ ಸಂದರ್ಶನ ಇಲ್ಲಿದೆ. ಕೇಂದ್ರ ಸರ್ಕಾರದ ನೋಟು ನಿಷೇಧ (ಡಿಮಾನಿಟೈಸೇಶನ್) ಕ್ರಮದ ಬಗ್ಗೆ ಗಂಭೀರ, ಚಿಂತನಾರ್ಹ ಒಳನೋಟಗಳಿರುವ ಈ ಸಂದರ್ಶನವನ್ನು ಕನ್ನಡಕ್ಕೆ ಹರ್ಷಕುಮಾರ್ ಕುಗ್ವೆ ಅನುವಾದಿಸಿದ್ದಾರೆ.

ಪ್ರಶ್ನೆ: ಈ ಕಪ್ಪು ಹಣದ ಪರಿಕಲ್ಪನೆಯ ಕುರಿತಾಗಿ ನೀವು ಇತ್ತೀಚೆಗೆ ಬರೆದಿದ್ದೀರಿ. ನಿಜಕ್ಕೂ ಈ ಕಪ್ಪು ಹಣ ಅಂದರೆ ಏನು?

ಪ್ರೊ ಪಟ್ನಾಯಕ್:

ಕಪ್ಪುಹಣ ಅಂದರೆ ತಲೆದಿಂಬಿನ ಕವರೊಳಗೆ ಅಥವಾ ನೆಲದಡಿಗೆ ಟ್ರಂಕುಗಳಲ್ಲಿ ದಾಸ್ತಾನು ರೂಪದಲ್ಲಿ ಸಂಗ್ರಹಿಸಿ ಇಟ್ಟಿರುವ ಹಣ ಅನ್ನುವ ಒಂದು ಭಾವನೆ ಎಲ್ಲರಲ್ಲಿದೆ. ಆದರೆ ಇದು ವಾಸ್ತವ ಅಲ್ಲ. ಕಪ್ಪು ಹಣ ಅಂದರೆ ಕಾನೂನು ಬಾಹಿರವಾಗಿ ನಡೆಸುವ, ಇಲ್ಲವೇ ತೆರಿಗೆಯನ್ನು ತಪ್ಪಿಸಿಕೊಳ್ಳಲು ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳೂ ಸೇರುತ್ತವೆ.ಮತ್ತೊಂದು ರೀತಿ ಹೇಳುವುದಾದರೆ, ಸಶಸ್ತ್ರ ವ್ಯಾಪಾರ ಅಥವಾ ಮಾದಕ ವಸ್ತು ಮಾರಾಟಗಳಂತಹ ಸಂಪೂರ್ಣ ಕಾನೂನು ಬಾಹಿರ ದಂಧೆಗಳಿವೆ. ಅದೇ ರೀತಿಯಲ್ಲಿ ಕಾನೂನುಬದ್ಧ ಚಟುವಟಿಕೆಗಳೇ ಆಗಿದ್ದೂ ತೆರಿಗೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ಘೋಷಿಸಿಕೊಳ್ಳದೇ ಇರುವ ಚಟುವಟಿಕೆಗಳೂ ಇವೆ. 100 ಟನ್ ಖನಿಜದ ಅದಿರು ತೆಗೆದು ತೆರಿಗೆ ತಪ್ಪಿಸಲಿಕ್ಕಾಗಿ ಕೇವಲ 80 ಟನ್ ಅದಿರನ್ನು ಮಾತ್ರ ಘೋಷಿಸಿಕೊಂಡಾಗ ‘ಕಪ್ಪು ಹಣ” ಉಂಟಾಗುತ್ತದೆ. ಹಾಗೆಯೇ 100 ಡಾಲರ್‍ಗಳ ರಫ್ತು ನಡೆಸಿ ಕೇವಲ 80 ಡಾಲರ್‍ಗಳ ರಫ್ತನ್ನು ಮಾತ್ರ ಘೋಷಿಸಿಕೊಂಡು ಬಾಕಿ 20 ಡಾಲರ್‍ಗಳನ್ನು ವಿದೇಶದಲ್ಲಿ ಕಾನೂನು ಬಾಹಿರವಾಗಿ ಸ್ವಿಸ್ ಬ್ಯಾಂಕಿನಲ್ಲಿಟ್ಟರೆ ಅದು ಕಪ್ಪುಹಣವಾಗುತ್ತದೆ. ಹಾಗೆಯೇ ಹವಾಲಾ ಮಾರ್ಗದಲ್ಲಿ ರೂಪಾಯಿಗಳನ್ನು ಡಾಲರ್‍ಗೆ ಪರಿವರ್ತಿಸಿಕೊಂಡು ವಿದೇಶದಲ್ಲಿ ಠೇವಣಿಗಳ ರೂಪದಲ್ಲಿ ಇರಿಸಿದರೆ ಆಗ ಕಪ್ಪುಹಣ ಉಂಟಾಗುತ್ತದೆ. ಹೀಗಾಗಿ ಇಲ್ಲಿ ಕಪ್ಪು ಹಣ ಎಂದಾಗ ನಾವು ನಿಜಕ್ಕೂ ಆಲೋಚಿಸಬೇಕಿರುವುದು ಬಹಿರಂಗಪಡಿಸದ ಅಥವಾ ಸರ್ಕಾರಕ್ಕೆ ಲೆಕ್ಕ ಕೊಡದ ಎಲ್ಲಾ ಚಟುವಟಿಕೆ ಅರ್ಥಾತ್ ಬ್ಲಾಕ್ ಬಿಸ್ನೆಸ್/ಕಾಳ ದಂಧೆ ಅಥವಾ ಅಘೋಷಿತ ಉದ್ಯಮದ ಬಗ್ಗೆ. ಯಾವುದೇ ಬಿಸ್ನೆಸ್‍ನಲ್ಲಿ ನೀವು ಹಣ ತೊಡಗಿಸಿದಾಗ ನಿಮ್ಮ ಕೈಯಲ್ಲಿ ಹಣ ಓಡಾಡುತ್ತದೆ. ಈ ಹಣವನ್ನು ಸ್ವಲ್ಪ ಹೆಚ್ಚಿನ ಅಥವಾ ಕಡಿಮೆ ಅವಧಿಯವರೆಗೆ ತೊಡಗಿಸಿದಾಗ ನಿಮ್ಮ ಕೈಯಲ್ಲಿ ಒಂದಷ್ಟು ನಗದು ಹಿಡುವಳಿ ಇರುತ್ತದೆ. ಯಾವುದೇ ಉದ್ದಿಮೆ ಅದು ಕಾನೂನುಬದ್ಧವಾಗಿರಲಿ ಅಥವಾ ಕಾಳ ದಂಧೆಯಾಗಿರಲಿ ನಡೆಯುವುದು ಇದೇ.

ಕಾಳ ದಂಧೆ ಏನಿದ್ದರೂ ನಗದು ಹಣದಿಂದ ನಡೆಯುತ್ತದೆ, ಮಾಮೂಲಿ ಉದ್ದಿಮೆ ಚೆಕ್‍ಗಳ ಮೂಲಕ ನಡೆಯುತ್ತದೆ ಎಂಬುದು ಸಹ ವಾಸ್ತವವಲ್ಲ. ಏಕೆಂದರೆ ಮಾಮೂಲಿ ಉದ್ಯಮದಲ್ಲಿ ಸಹ ನಗದು ರೂಪದ ಹಣದ ವಹಿವಾಟೇ ನಡೆಯುತ್ತದೆ. ಮಾಮೂಲಿ ನಗದು ಹಿಡುವಳಿ ಮತ್ತು ಕಪ್ಪು ಹಣದ ಹಿಡುವಳಿ ಎರಡೂ ಗುಣಾತ್ಮಕವಾಗಿ ಎರಡು ಬೇರೆ ಬೇರೆ ಆಗಿರುವಂತವಲ್ಲ. ಹೀಗಾಗಿ, ಕರೆನ್ಸಿ ನೋಟುಗಳನ್ನು ನಿಷೇಧಿಸಿಬಿಟ್ಟು ಕಪ್ಪು ಹಣ ತಡೆಯುತ್ತೇವೆ ಎನ್ನುವುದು ಸರಿಯಾಗುವುದಿಲ್ಲ. ಯಾಕೆಂದರೆ ಆಗ ಕಪ್ಪುಹಣಕ್ಕೆ ಸಂಬಂಧಿಸಿರಲಿ, ಇಲ್ಲದಿರಲಿ ಒಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಕರೆನ್ಸಿ ಬದಲಿಸಿಕೊಳ್ಳಬೇಕಾಗುತ್ತದೆ. ಕಾಳ ದಂಧೆ ನಡೆಸುವವರು ಮಾತ್ರವಲ್ಲದೇ ಮಾಮೂಲಿ ಉದ್ಯಮಗಳಲ್ಲಿ ತೊಡಗಿರುವವರೂ ಸಹ ಬದಲಿಸಿಕೊಳ್ಳಬೇಕಾಗುತ್ತದೆ. ಹೀಗಾದಾಗ ಏನಾಗುತ್ತದೆ ಎಂದರೆ ಕಪ್ಪು ಹಣದ ದಂಧೆಯಲ್ಲಿ ತೊಡಗಿರುವವರು ಮಾಮೂಲಿ ಉದ್ಯಮಕ್ಕೆ ಬಂದು ತಮ್ಮ ಲೆಕ್ಕ ಕೊಟ್ಟಿರದ ಕಪ್ಪು ಹಣವನ್ನು ಬಿಳಿ ಮಾಡುವಲ್ಲಿ ತೊಡಗುತ್ತಾರೆ.

ಪ್ರಶ್ನೆ: ಈ ರೀತಿಯ ಬಹಿರಂಗಗೊಳ್ಳದ ಉದ್ಯಮದಿಂದ ಬರುವ ಲಾಭದಲ್ಲಿ ಎಷ್ಟನ್ನು ನೋಟುಗಳ ರೂಪದಲ್ಲಿ ಇಡಲಾಗಿರುತ್ತದೆ?

ಪ್ರೊ ಪಟ್ನಾಯಕ್:

ಲಾಭ ಎಂದಾಕ್ಷಣ ಅದು ಒಂದು ಉದ್ಯಮವಾಗಿರುವುದರಿಂದ ಮಾಮೂಲಿ ಉದ್ಯಮದಲ್ಲಿ ಏನಿರುತ್ತದೆಯೇ ಅದೇ ಈ ಕಪ್ಪು ಹಣದ ಉದ್ಯಮದಲ್ಲೂ ಇರುತ್ತದೆ. ಉದ್ಯಮವನ್ನು ವಿಸ್ತರಿಸಲಿಕ್ಕಾಗಿ ಬಂದಿರುವ ಲಾಭವನ್ನು ಮತ್ತೆ ತೊಡಗಿಸಲಾಗುತ್ತದೆ. ಇತರೆ ಬಿಸ್ನೆಸ್‍ಗಳಲ್ಲಿ ಹೇಗೋ ಹಾಗೆಯೇ ಈ ಬ್ಲಾಕ್ ಬಿಸ್ನೆಸ್‍ನಲ್ಲೂ ಇರುತ್ತದೆ. ಇರುವ ಒಂದೇ ವ್ಯತ್ಯಾಸವೇನೆಂದರೆ ಈ ಬ್ಲಾಕ್ ಬಿಸ್ನೆಸ್‍ನಲ್ಲಿ ಬರುವ ಆದಾಯವನ್ನು ಸರ್ಕಾರಕ್ಕೆ ಅಥವಾ ತೆರಿಗೆ ಅಧಿಕಾರಿಗಳಿಗೆ ತೋರಿಸುವುದಿಲ್ಲ. ಹೀಗಾಗಿ ನಾವು ಅರ್ಥಮಾಡಿಕೊಳ್ಳಬೇಕಿರುವುದೇನೆಂದರೆ ಇಲ್ಲಿ ಹಣ ಮಾತ್ರ ಇರುವುದಿಲ್ಲ ಪೂರ್ತಿ ಉದ್ಯಮವೇ ಇರುತ್ತದೆ. ಕಾರ್ಲ್ ಮಾಕ್ರ್ಸ್ ಈ ಬಗ್ಗೆ ಹೇಳುತ್ತಾ ಜಿಪುಣ ವ್ಯಾಪಾರಿಗೂ ಬಂಡವಾಳಿಗನಿಗೂ ಇರುವ ವ್ಯತ್ಯಾಸದ ಬಗ್ಗೆ ಹೇಳಿದ್ದರು. ಜಿಪುಣನಾದವನು ಹಣವನ್ನು ಕೂಡಿಟ್ಟು ಶ್ರೀಮಂತನಾಗುವುದರಲ್ಲಿ ನಂಬಿಕೆ ಇಟ್ಟಿರುತ್ತಾನೆ. ಆದರೆ ಬಂಡವಾಳಿಗ ಕೈಯಲ್ಲಿರುವ ಹಣವನ್ನು ಹೂಡಿಕೆ ಮಾಡಿ ಲಾಭ ಮಾಡಿ ಮತ್ತಷ್ಟು ಲಾಭ ಪಡೆಯುವುದರಲ್ಲಿ ನಂಬಿಕೆ ಇಟ್ಟಿರುತ್ತಾನೆ. ಹೀಗಾಗಿ ತನ್ನ ಬಂಡವಾಳವನ್ನು ಆತ ತನ್ನ ಕೈಯಲ್ಲಿ ಇಟ್ಟುಕೊಳ್ಳದೇ ಚಲಾವಣೆಗೆ ಬಿಟ್ಟಿರುತ್ತಾನೆ. ಇಲ್ಲಿ ನಾವು ನೋಡಬೇಕಿರುವುದು ಕಪ್ಪು ಹಣ ಇಟ್ಟಿಕೊಂಡಿರುವವರು ಯಾರೂ ಜಿಪುಣರಾಗಿರುವುದಿಲ್ಲ. ಅವರೇನಿದ್ದರೂ ಬಂಡವಾಳಿಗರಾಗಿರುತ್ತಾರೆ. ಅವರು ತಮ್ಮ ಉದ್ಯಮವನ್ನು ಮಾಮೂಲಿ ಉದ್ಯಮದ ರೀತಿಯಲ್ಲಿಯೇ ವಿಸ್ತರಣೆ ಮಾಡಿಕೊಳ್ಳಲು ಯಾವಾಗಲೂ ಪ್ರಯತ್ನಿಸುತ್ತಿರುತ್ತಾರೆ. ಹೀಗಾಗಿಯೇ ತಮ್ಮ ಬಳಿ ಬಂದ ಹಣವನ್ನೆಲ್ಲಾ ಅವರು ಮತ್ತೆ ಬಿಸ್ನೆಸ್‍ಗೇ ಹಾಕುತ್ತಿರುತ್ತಾರೆ. ಯಾವುದೋ ಒಂದು ಸಂದರ್ಭದಲ್ಲಿ ಅವರ ಕೈಯಲ್ಲಿ ಒಂದಷ್ಟು ಕಪ್ಪು ಹಣ ಇದೆ ಎಂದಾದರೆ ಅದು ಅವರ ಒಟ್ಟಾರೆ ಉದ್ಯಮದಲ್ಲಿ ಚಲಾವಣೆಯಾಗುವ ಹಣದ ಒಂದು ಸಣ್ಣ ಭಾಗವಷ್ಟೇ ಆಗಿರುತ್ತದೆ.


       ಕಪ್ಪು ಹಣದ ಸಾಂದರ್ಭಿಕ ಚಿತ್ರ. (ಇಂಡಿಯನ್ ಎಕ್ಸ್'ಪ್ರೆಸ್.
ಕಪ್ಪು ಹಣದ ಸಾಂದರ್ಭಿಕ ಚಿತ್ರ. (ಇಂಡಿಯನ್ ಎಕ್ಸ್'ಪ್ರೆಸ್.

ಪ್ರ: ಈಗ 500, 1000ರ ನೋಟುಗಳನ್ನು ಅನಾಣ್ಯಗೊಳಿಸುತ್ತಿರುವ ಸರ್ಕಾರದ ಕ್ರಮ ಕಪ್ಪುಹಣವನ್ನು ತೊಡೆಯುವಲ್ಲಿ ಎಷ್ಟರ ಮಟ್ಟಿಗೆ ಪ್ರಯೋಜನಕಾರಿ?

ಪ್ರೊ ಪಟ್ನಾಯಕ್:

ಈ ಕ್ರಮ ಮುಖ್ಯವಾಗಿ ಸರ್ಕಾರದಲ್ಲಿ ಬಂಡವಾಳವಾದದ ಬಗೆಗಿನ ಗ್ರ್ರಹಿಕೆಯನ್ನೇ ದಿಕ್ಕುತಪ್ಪಿಸುತ್ತದೆ. ಇಂತಹ ಒಂದು ಸಂದರ್ಭ ಉಂಟಾದಾಗ ಬಂಡವಾಳವಾದದಲ್ಲಿ ಏನಾಗುತ್ತದೆ ಎಂದರೆ ಅಲ್ಲಿ ಕೂಡಲೇ ಹಳೆ ಕರೆನ್ಸಿ ನೋಟುಗಳನ್ನು ಹೊಸದು ಮಾಡಿಕೊಳ್ಳುವ ಒಂದು ಹೊಸ ಉದ್ಯಮವೇ ಹುಟ್ಟಿಕೊಳ್ಳುತ್ತದೆ. ಇದನ್ನೇ ಶುಂಪೀಟರ್ ಎಂಬ ಅರ್ಥಚಿಂತಕ 'ಇನೊವೇಶನ್' ಎಂದು ಕರೆದಿದ್ದು. ಬಂಡವಾಳವಾದದಲ್ಲಿ ಇದು ಯಾವಾಗಲೂ ನಡೆಯುತ್ತಲೇ ಇರುತ್ತದೆ. ನಮಗೆ 1000 ರೂಪಾಯಿ ಕೊಡಿ ನಿಮಗೆ 800 ರೂಪಾಯಿ ಕೊಡ್ತೀವಿ, ಮುಂತಾಗಿ ಹೇಳುವ ವರ್ಗವೊಂದು ಉದ್ಭವವಾಗುತ್ತದೆ. ಇದರ ಪರಿಣಾಮವಾಗಿ ಕಾಳದಂಧೆಯನ್ನು ತೊಡೆಯುವುದರ ಬದಲಾಗಿ ಈ ಕಪ್ಪು ಹಣದ ಉದ್ಯಮ ಮತ್ತಷ್ಟು ಹುಲುಸಾಗಿ ಬೆಳೆಯಲು ತೊಡಗುತ್ತದೆ. ಉದಾಹರಣೆಗೆ, ಉದ್ಯಮದ ಭಾಗವಾಗಿ ತೊಡಗಿಸುವ ಕಪ್ಪು ಹಣಕ್ಕೂ, ಉದ್ಯಮದ ಭಾಗವಾಗಿ ತೊಡಗಿಸುವ ಬಿಳಿ ಹಣಕ್ಕೂ ಯಾವುದೇ ವ್ಯತ್ಯಾಸ ಇರುವುದಿಲ್ಲವಾದ್ದರಿಂದ ಕಾಳ ದಂಧೆಯಲ್ಲಿ ತೊಡಗಿರುವ ಬಹಳಷ್ಟು ಜನರು ಉಳಿದವರನ್ನೂ ಈ ಕಪ್ಪು ಹಣವನ್ನು ಬಿಳಿ ಮಾಡುವ ದಂಧೆಯಲ್ಲಿ ತೊಡಗಿಸಲು ಬಯಸುತ್ತಾರೆ, ಪ್ರೇರೇಪಿಸುತ್ತಾರೆ. ಹೀಗಾಗಿ ಅವರು ರಶೀದಿಗಳಿಗೆ ಹಿಂದಿನ ದಿನಾಂಕ ನಮೂದಿಸುವ ಮತ್ತು ಅವನ್ನು ಕೊಳ್ಳುವ ಕೆಲಸ ಮಾಡುತ್ತಾರೆ. ಈ ಬಗೆಯ ಲಕ್ಷಾಂತರ ವ್ಯವಹಾರಗಳು ರಾತ್ರೋರಾತ್ರಿ ಶುರುವಾಗುತ್ತವಲ್ಲದೇ ಇದನ್ನು ಹಿಡಿಯಲು ಯಾವ ತೆರಿಗೆ ಅಧಿಕಾರಿಗಳಿಗೂ ಸಾಧ್ಯವಾಗುವುದಿಲ್ಲ. ಕಪ್ಪುಹಣವನ್ನು ಹೊರತರಲು ಬಳಸುವ ಈ ಮಾರ್ಗ ದೊಡ್ಡ ಮಟ್ಟದಲ್ಲಿ ಸಾಮಾನ್ಯ ಜನರನ್ನು ತೊಂದರೆಗೆ ಸಿಲುಕಿಸುವುದೇ ಅಲ್ಲದೇ ಅದರಿಂದ ನಿಜವಾಗಿ ಕಪ್ಪುಹಣಕ್ಕೆ ಕಡಿವಾಣ ಬೀಳುವುದೇ ಇಲ್ಲ.

ಪ್ರ: ನೋಟು ನಿಷೇಧ ಮಾಡುವ ಕ್ರಮಗಳು ಈ ಹಿಂದೆಯೂ ಜಾರಿಯಾಗಿವೆ. ಕಪ್ಪು ಹಣವನ್ನು ನಿಯಂತ್ರಿಸುವಲ್ಲಿ ಅವು ಸಹಾಯ ಮಾಡಿದ್ದಿದೆಯೇ?

ಪ್ರೊ ಪಟ್ನಾಯಕ್:

ನಿಜ ಹೇಳಬೇಕೆಂದರೆ, ಯಾವಾಗೆಲ್ಲಾ ಈ ಕ್ರಮ ಕೈಗೊಳ್ಳಲಾಗಿದೆಯೋ ಆಗ ಏನಿದ್ದರೂ ದೊಡ್ಡ ಮೊತ್ತದ ಕರೆನ್ಸಿ ನೋಟುಗಳನ್ನಷ್ಟೇ ನಿಷೇಧಿಸಲಾಗಿತ್ತು. ಅಂತಹ ನೋಟುಗಳನ್ನು ಸಾಮಾನ್ಯರು ಬಳಸುವುದಿರಲಿ ನೋಡಿಯೂ ಇರಲಿಲ್ಲ. ಹೀಗಾಗಿ ಆ ಕ್ರಮಗಳು ಜನರಿಗೆ ತ್ರಾಸು ನೀಡಿರಲಿಲ್ಲ. 1946ರಲ್ಲಿ ಇನ್ನೂ ಬ್ರಿಟಿಷರಿದ್ದಾಗ ಅವರು ಹೆಚ್ಚಿನ ಮೌಲ್ಯದ ಕರೆನ್ಸಿಗಳನ್ನು ನಿಷೇಧಿಸಿದ್ದರು. ತದನಂತರ ಸ್ವತಂತ್ರ ಭಾರತದಲ್ಲಿ 1978ರಲ್ಲಿ ಮೊರಾರ್ಜಿ ದೇಸಾಯಿಯವರು 1000, 5000 ಹಾಗೂ 10,000 ರೂಪಾಯಿ ನೋಟುಗಳನ್ನು ನಿಷೇಧಿಸಿದ್ದರು. 1978ರ ಸಮಯದಲ್ಲಿ 1000 ರೂಪಾಯಿ ಎನ್ನುವುದು ಭಾರೀ ದೊಡ್ಡ ಮೊತ್ತದ ಹಣವಾಗಿತ್ತು. ಈ ನೋಟುಗಳನ್ನು ಸಾಮಾನ್ಯ ಜನರು ಬಳಸುತ್ತಲೇ ಇರಲಿಲ್ಲ. ಹೀಗಾಗಿ ಆಗ ಜನಜೀವನಕ್ಕೆ ಯಾವುದೇ ತೊಂದರೆಯಾಗಿರಲಿಲ್ಲ.

ಹೀಗೆ ಮಾಡಿದ್ದಾಗಲೂ ಸಹ ಅದು ಕಾಳದಂಧೆಯನ್ನು ಅಲುಗಾಡಿಸಲು ಸಹಾಯಕವಾಗಿತ್ತು ಎಂದು ನನಗೆ ಅನಿಸುವುದಿಲ್ಲ. ಆದರೆ ಕನಿಷ್ಠ ಅದು ಯಾರಿಗೂ ತ್ರಾಸು ನೀಡಿರಲಿಲ್ಲ. ಆದರೆ ಈಗೇನಾಗಿದೆ ನೋಡಿ. ಸಾಮಾನ್ಯ ಜನರಿಗೆ ದೊಡ್ಡಮಟ್ಟದಲ್ಲಿ ಅನಾನುಕೂಲತೆಯಾಗಿದೆ. ಬ್ಯಾಂಕುಗಳ ಹೊರಗೆ ಉದ್ದುದ್ದ ಸಾಲುಗಳಾಗಿವೆ. ಅದಕ್ಕಿಂತ ಹೆಚ್ಚಾಗಿ ಈಗಷ್ಟೇ ಕುಯಿಲು ಮುಗಿಸಿಕೊಂಡ ರೈತಾಪಿ ಇನ್ನೇನು ತಮ್ಮ ಬೆಳೆಯನ್ನು ಮಾರಬೇಕು ಎಂದಿರುವಾಗ ಬಂದೊದಗಿರುವ ಅನಾನುಕೂಲತೆಯಿಂದಾಗಿ ಬೆಳೆದ ಬೆಳೆಯನ್ನು ಮಾರಲೂ ಆಗದ ಇಟ್ಟುಕೊಳ್ಳಲೂ ಆಗದ ಸ್ಥಿತಿ ಏರ್ಪಟ್ಟಿದೆ. ಹೀಗೆ ನಿಜಕ್ಕೂ ಕಪ್ಪುಹಣವನ್ನು ಹೊರತರಲು ಯಾವುದೇ ರೀತಿ ಪರಿಣಾಮಕಾರಿಯಾಗದೇ ಇದ್ದರೂ ಜನಸಾಮಾನ್ಯರ ಬದುಕನ್ನು ಇನ್ನಿಲ್ಲದಂತೆ ಬಾಧಿಸುತ್ತಿದೆ ಈಗಿನ ನೋಟು ನಿಷೇಧದ ಕ್ರಮ.


       ನೋಟು ಬದಲಾವಣೆಗೆ ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಂತ ದೇಶವಾಸಿಗಳು. (ಚಿತ್ರ:ಳ ಇಂಡಿಯನ್ ಎಕ್ಸ್'ಪ್ರೆಸ್)
ನೋಟು ಬದಲಾವಣೆಗೆ ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಂತ ದೇಶವಾಸಿಗಳು. (ಚಿತ್ರ:ಳ ಇಂಡಿಯನ್ ಎಕ್ಸ್'ಪ್ರೆಸ್)

ಪ್ರ: ಈ ಕ್ರಮದಿಂದಾಗಿ ಅನೌಪಚಾರಿಕ ಆರ್ಥಿಕತೆಯಲ್ಲಿರುವ ಹಾಗೂ ಬ್ಯಾಂಕ್ ಅಕೌಂಟ್ ಹೊಂದಿರದ ಜನರಿಗೆ ಯಾವ ಪರಿಣಾಮ ಉಂಟುಮಾಡಲಿದೆ?

ಪ್ರೊ ಪಟ್ನಾಯಕ್:

ಒಂದು ಉದಾಹರಣೆ ನೀಡುತ್ತೇನೆ. ಒಂದು ಜಾಗದಲ್ಲಿ ಒಂದು ಕೊಲೆಯಾಗಿದೆ ಎಂದಿಟ್ಟಿಕೊಳ್ಳೋಣ. ನೀವು ಆ ಕೊಲೆ ಮಾಡಿದ್ಯಾರು, ಯಾರ ಕೈಮೇಲೆ ರಕ್ತದ ಕಲೆ ಇದೆ ಎಂದೆಲ್ಲಾ ಕಂಡು ಹಿಡಿಯಲು ಆ ಪ್ರದೇಶದ ಜನರನ್ನೆಲ್ಲಾ ಪೊಲೀಸ್ ಠಾಣೆಗೆ ಕರೆಸುವುದಿಲ್ಲ. ಬದಲಾಗಿ ತನಿಖೆ ನಡೆಸಲಾಗುತ್ತದೆ, ಗುಮಾನಿ ಬಂದವರ ವಿಚಾರಣೆ ನಡೆಸಲಾಗುತ್ತದೆ. ಅಷ್ಟೇ ಅಲ್ಲವೇ? ಹಾಗೆಯೇ ಈ ಕಪ್ಪುಹಣದ ವಿಷಯವನ್ನೂ ನೋಡಬೇಕು.

ಒಂದು ಪ್ರಾಮಾಣಿಕ ತೆರಿಗೆ ಆಡಳಿತವಿದ್ದು ಯಾವುದೇ ಮಧ್ಯಪ್ರವೇಶವಿಲ್ಲದೇ ಕೆಲಸ ಮಾಡುತ್ತದೆ ಹಾಗೂ ಅಪರಾಧಿಗಳನ್ನು ಹಿಡಿದು, ನಿರಪರಾಧಿಗಳನ್ನು ದೋಷಮುಕ್ತಗೊಳಿಸುತ್ತದೆ ಎಂದಾದಲ್ಲಿ ಮಾರ್ಗ ಸ್ವಲ್ಪ ಶ್ರಮದಾಯಕವಾದರೂ ಸಹ ಗಣನೀಯ ಮಟ್ಟದಲ್ಲಿ ಕಪ್ಪುಹಣವನ್ನು ಹೊರತರಲು ಸಾಧ್ಯವಾಗುತ್ತದೆ. ಕೆಲವಾದರೂ ದೊಡ್ಡ ತಿಮಿಂಗಲಗಳನ್ನು ಹಿಡಿದರೆ ಉಳಿದವರಿಗೂ ಎಚ್ಚರಿಕೆ ಗಂಟೆಯಾಗಿ ಕಪ್ಪುಹಣದ ದಂಧೆಗಳು ನಿಯಂತ್ರಣವಾಗುತ್ತದೆ.

ಇತರೆ ದೇಶಗಳಲ್ಲಿ ಕಪ್ಪುಹಣ ನಿಯಂತ್ರಿಸುವುದು ಇದೇ ರೀತಿಯಲ್ಲಿ. ನಮ್ಮಲ್ಲಿ ಆಗುತ್ತಿರುವುದು ಇದಲ್ಲ. ನಾವಿಲ್ಲಿ 500, 1000ದ ನೋಟುಗಳನ್ನು ನಿಷೇಧಿಸಿ ಜನಸಾಮಾನ್ಯರಿಗೆ ದೊಡ್ಡಮಟ್ಟದಲ್ಲಿ ತೊಂದರೆ ಉಂಟುಮಾಡುತ್ತಿದ್ದೇವೆ. ಆರ್ಥಿಕತೆಯ ಮೇಲೆ ಇದು ಎಲ್ಲಾ ಬಗೆಯ ದುಷ್ಪರಿಣಾಮಗಳನ್ನು ಉಂಟುಮಾಡುತ್ತದೆ. ಹಲವಾರು ದಿನಗಳವರೆಗೆ ಎಲ್ಲಾ ವ್ಯಾಪಾರ ವಹಿವಾಟುಗಳು ಸ್ಥಗಿತಗೊಳ್ಳುತ್ತವೆ. ಜನರು ಹಣದಿಂದ ಸರಕುಗಳಿಗೆ ಹೊರಳುತ್ತಿದ್ದಂತೆ ಅವುಗಳ ಬೆಲೆಯಲ್ಲಿ ವಿಪರೀತ ಉಬ್ಬರವಾಗುತ್ತದೆ. ಏನೇನಾಗುತ್ತದೆ ಎಂದು ಹೇಳಲು ಸಹ ಕಷ್ಟ. ಏಕೆಂದರೆ ಇದೆಲ್ಲಾ ದೈನಂದಿನ ಬದುಕಿನಲ್ಲಿ ನಡೆಯುವ ಬದಲಾವಣೆಗಳಲ್ಲ. ಜನರಿಗೆ ಇಷ್ಟೆಲ್ಲಾ ತ್ರಾಸುಂಟುಮಾಡಿ ಈ ಕ್ರಮದಿಂದ ಕಪ್ಪುಹಣ ಹೊರಬರುತ್ತದೆ ಎಂದೆಲ್ಲಾ ಹೇಳುವುದು ಬರೀ ಲೊಳಲೊಟ್ಟೆ.

ಪ್ರ: ಸರ್ಕಾರಕ್ಕೆ ಯಾರೆಲ್ಲಾ ವಿದೇಶದಲ್ಲಿ ಬ್ಯಾಂಕ್ ಅಕೌಂಟ್ ಇಟ್ಟುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ನೀವು ತಿಳಿಸಿದಂತೆ ಅದನ್ನು ತನಿಖೆ ನಡೆಸಬಹುದಾಗಿತ್ತು. ಹಾಗೆಯೇ ಶೇರುಮಾರುಕಟ್ಟೆಯಲ್ಲಿ “ಭಾಗೀದಾರೀ ನೋಟು”ಗಳನ್ನು (ಪಾರ್ಟಿಸಿಪೇಟರಿ ನೋಟ್ಸ್) ಇಟ್ಟುಕೊಳ್ಳುವ ಸೌಲಭ್ಯಕ್ಕೆ ಸಂಬಂಧಿಸಿದ ವಿಚಾರವೂ ಇದೆ. (ಇದು ಕಪ್ಪುಹಣವನ್ನು ಹೂಡಲು ಅವಕಾಶ ಮಾಡಿಕೊಟ್ಟಿದೆ ಎಂಬ ಅಭಿಪ್ರಾಯವಿದೆ). ಹೀಗಿರುವಾಗ ಕಪ್ಪುಹಣ ತಡೆಯಲು ಸರ್ಕಾರ ನಿರ್ದಿಷ್ಟವಾಗಿ ಇದೇ ಮಾರ್ಗ ತುಳಿದಿದ್ದೇಕೆ?

ಪ್ರೊ.ಪಟ್ನಾಯಕ್:

ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಪರಿಣಾಮ ಬೀರುವ ಕಪ್ಪುಹಣದ ದಂಧೆಯನ್ನು ಈಗ ಆಯ್ದುಕೊಂಡಿರುವ ಮಾರ್ಗ ಯಾವುದೇ ರೀತಿಯಲ್ಲೂ ಬಾಧಿಸುವುದಿಲ್ಲ. ಕಾಳದಂಧೆ ನಡೆಸುತ್ತಾ ತಮ್ಮ ಹಣವನ್ನೆಲ್ಲಾ ಸ್ವಿಸ್‍ಬ್ಯಾಂಕುಗಳಲ್ಲಿ ಇಡುವವರಿಗೆ ನೋಟು ನಿಷೇಧದಿಂದ ಯಾವುದೇ ತೊಂದರೆಯಾಗುವುದಿಲ್ಲ. ದೇಶದೊಳಗೇ ಕಾಳದಂಧೆಯ ಮೂಲಕ ಉತ್ಪಾದನೆಯಾದ ಕಪ್ಪುಹಣದ ನಗಣ್ಯವೆನಿಸುವಂತಹ ತೀರಾ ಅಲ್ಪ ಭಾಗದ ಮೇಲೆ ಮಾತ್ರ ಈ ಕ್ರಮ ಪರಿಣಾಮ ಬೀರುತ್ತದೆ. ನನಗನಿಸುವುದೇನೆಂದರೆ ಈ ನೋಟು ನಿಷೇಧದ ಕ್ರಮದ ಮೂಲಕ ಒಂದು ನಾಟಕೀಯವಾಗಿ ಮಾತ್ರ ದೊಡ್ಡ ಪರಿಣಾಮ ಉಂಟುಮಾಡುವ ಉದ್ದೇಶವಿದೆ. ಸರ್ಕಾರ ನಿಜಕ್ಕೂ ಏನೋ ದೊಡ್ಡ ಕೆಲಸ ಮಾಡುತ್ತಿದೆ ಎಂಬಂತೆ ಬಿಂಬಿಸುವ ಉದ್ದೇಶವಿದೆ. ಆದರೆ ಮತ್ತೊಂದೆಡೆ ಜನರನ್ನು ಕುರಿಗಳನ್ನಾಗಿ ಮಾಡಲಾಗುತ್ತಿದೆ.

ಪ್ರ: ಸರ್ಕಾರ ಹೊಸ 2000ದ ನೋಟು, 500ರ ಮತ್ತು ಇತ್ತೀಚೆಗೆ 1000ದ ನೋಟುಗಳನ್ನೂ ಬಿಡುಗಡೆ ಮಾಡಿದೆ. ನೋಟು ನಿಷೇಧದ ಹಿಂದೆ ಬೃಹತ್ ನಗದು ಹಣದ ದಾಸ್ತಾನನ್ನು ತಡೆಯುವ ಹಾಗೂ ನಗದು ರಹಿತ ಆರ್ಥಿಕತೆಯತ್ತ ನಡೆಯುವ ಉದ್ದೇಶವೇ ಇದ್ದಲ್ಲಿ ಈ ಹೊಸ ನೋಟು ತರುವ ಕ್ರಮ ತಾರ್ಕಿಕವೇ?

ಪ್ರೊ. ಪಟ್ನಾಯಕ್:

ನೀವು ಜನರ ಹಣೆಗೆ ಬಂದೂಕು ಹಿಡಿದು ನಗದು ರಹಿತ ಆರ್ಥಿಕತೆಗೆ ಕೊಂಡೊಯ್ಯಲು ಸಾಧ್ಯವಿಲ್ಲ. ಒಂದು ದೇಶದಲ್ಲಿ ಇದು ಸಹಜಗತಿಯಲ್ಲಿ ನಡೆಯಬೇಕಾದ ಪರಿವರ್ತನೆ. ಹಾಗಾದಾಗ ಮಾತ್ರವೇ ಅದು ಸುಗಮ ಹಾಗೂ ಅನುಕೂಲಕರ. ಈಗ ಆಗುತ್ತಿರುವುದು ಹಾಗಲ್ಲ. ಈ ಕ್ಷಣಕ್ಕೆ ನೀವು ಭಾರತೀಯ ಸ್ಟೇಟ್ ಬ್ಯಾಂಕ್‍ನಲ್ಲಿ ಒಂದು ಖಾತೆ ತೆರೆಯಬೇಕೆಂದರೂ ಸಹ 16 ಪುಟಗಳ ಪ್ರಶ್ನಾವಳಿ ಭರ್ತಿ ಮಾಡಬೇಕಿರುತ್ತದೆ. ಅಂದರೆ ಇದೊಂದು ಕಷ್ಟಕರ ಕೆಲಸ. ಇಷ್ಟಲ್ಲದೇ ಪ್ರತಿ ಚೆಕ್ ಹಾಗೂ ಆನ್‍ಲೈನ್ ವಹಿವಾಟಿನ ಮೇಲೆಯೂ ಬ್ಯಾಂಕು ಶುಲ್ಕ ವಿಧಿಸುತ್ತದೆ. ಅಲ್ಲಿಗೆ ಜನಸಾಮಾನ್ಯರು ಪ್ರತಿಯೊಂದು ವಹಿವಾಟಿಗೂ ತಮ್ಮ ಕಿಸೆಯಿಂದ ಬ್ಯಾಂಕಿಗೆ ಹಣ ಪಾವತಿಸುವ ಮೂಲಕ ಬ್ಯಾಂಕು ಲಾಭ ಮಾಡಿಕೊಳ್ಳುತ್ತದೆ. ಮಾಮೂಲಿ ನಗದು ವ್ಯವಹಾರದಲ್ಲಿ ಈ ರೀತಿಯ ಹೊರೆ ಜನರಿಗೆ ಬೀಳುವುದಿಲ್ಲ. ಹಾಗೆಯೇ ಇದುವರೆಗೆ ಚೆಕ್‍ಗಳನ್ನು ಬಳಸಿ ವ್ಯವಹಾರ ಮಾಡುವುದೇ ಅಭ್ಯಾಸ ಇಲ್ಲದಿರುವಾಗ ದಿಢೀರ್ ಎಂದು ನಗದು ರಹಿತ ವ್ಯವಹಾರಕ್ಕೆ ದೂಡುವುದು ಜನರಿಗೆ ವಿಪರೀತ ಅನಾನುಕೂಲತೆಯುಂಟಾಗುತ್ತದೆ. ನಗದು ರಹಿತ ಆರ್ಥಿಕತೆ ಎನ್ನುವುದು ತೀರಾ ಸಹಜವಾಗಿ, ಸುಗಮವಾಗಿ ಉಂಟಾಗಬೇಕು.

ಪ್ರ: ಈ ನಿರ್ದಿಷ್ಟ ಕ್ರಮದಿಂದಾಗಿ ಕಾಳದಂಧೆ ಅಥವಾ ಕಪ್ಪುಹಣದ ಮೇಲೆ ಯಾವುದೇ ರೀತಿಯ ಪರಿಣಾಮ ಉಂಟಾಗುತ್ತದೆಯೇ?

ಪ್ರೊ ಪಟ್ನಾಯಕ್:

ನನಗೆ ಹಾಗನಿಸುವುದಿಲ್ಲ. ಹೀಗೆ ಯೋಚಿಸೋಣ. ಒಂದಷ್ಟು ಪ್ರಮಾಣದ ಕರೆನ್ಸಿ ನೋಟುಗಳನ್ನು ಕಪ್ಪುಹಣ ನಡೆಸುವವರು ಸರ್ಕಾರಕ್ಕೆ ನೀಡಿದರು ಎಂದೇ ಭಾವಿಸೋಣ. ಸರ್ಕಾರದ ದೃಷ್ಟಿಯಿಂದ ಇದೇ ಉತ್ತಮ ಸ್ಥಿತಿ ಅಲ್ಲವೇ? ಆದರೆ ಇದರಿಂದ ಒಂದಷ್ಟು ಕಪ್ಪುಹಣ ವರ್ಗವಾಗಬಹುದೇ ಹೊರತು ನಾನಾಗಲೇ ಹೇಳಿದಂತೆ ಕಪ್ಪುಹಣ ಉತ್ಪಾದಿಸುವ ಕಪ್ಪು ಉದ್ಯಮಕ್ಕೆ ಏನೇನೂ ಆಗುವುದಿಲ್ಲ. ಯಾಕೆಂದರೆ ಆ ಉದ್ಯಮ ಈಗಲೂ ಲಾಭದಾಯಕವೇ ಆಗಿರುತ್ತದೆ.

ಉದಾಹರಣೆಗೆ, ಒಂದು ಕಾರ್ಖಾನೆಗೆ ಬೆಂಕಿ ಬಿದ್ದರೆ ಇಡೀ ಕೈಗಾರಿಕೆಯೇ ಮುಚ್ಚಿಹೋಗುವುದಿಲ್ಲ. ಅಕಸ್ಮಾತ್ ಇಡೀ ಕಾರ್ಖಾನೆಯೇ ಸುಟ್ಟುಹೋಯಿತೆಂದುಕೊಂಡರೆ ಅದನ್ನು ನಡೆಸುವವರಿಗೆ ಒಂದೇ ಸಲಕ್ಕೆ ಎಲ್ಲಾ ನಾಶವಾಗುತ್ತದೆ. ಆದರೆ ಕಪ್ಪು ಹಣದ ವಿಷಯದಲ್ಲಿ ಹಾಗಾಗುವುದಿಲ್ಲ. ಅದನ್ನು ಉತ್ಪಾದಿಸುವ ಕಪ್ಪು ಉದ್ಯಮ ಸ್ಥಗಿತಗೊಂಡಿರುವುದಿಲ್ಲ. ಅಲ್ಲಿ ಕಪ್ಪು ಹಣ ನಿರಂತರವಾಗಿ ಹೊರಬರುತ್ತಲೇ ಇರುತ್ತದೆ. ಕಪ್ಪುಹಣ ಎನ್ನುವುದು ಹಣವು ನಿರಂತರವಾಗಿ ಹರಿಯುವ ವ್ಯವಸ್ಥೆಯೇ ಹೊರತು ಸಂಗ್ರಹಿಸಿಡಲಾದ ದಾಸ್ತಾನಾಗಿರುವುದಿಲ್ಲ. ಇದು ಮೂಲಭೂತ ವಿಷಯ.

ಪ್ರ: ಹಾಗಾದರೆ ಈ ದಿಸೆಯಲ್ಲಿ ಸರ್ಕಾರ ತೆಗೆದುಕೊಳ್ಳಬೇಕಿದ್ದ ಗಂಭೀರ ಕ್ರಮಗಳೇನು?

ಪ್ರೊ.ಪಟ್ನಾಯಕ್:

ನನಗನಿಸುವ ಹಾಗೆ ಈ ದಿಸೆಯಲ್ಲಿ ಸರ್ಕಾರ ಅನೇಕ ಕ್ರಮ ತೆಗೆದುಕೊಳ್ಳಬೇಕಿರುತ್ತದೆ. ವಿದೇಶಿ ಹಿಡುವಳಿ ಮತ್ತು ವಿದೇಶಿ ಉದ್ದಿಮೆ ಕುರಿತು ಅದು ಕ್ರಮ ಕೈಗೊಳ್ಳಬೇಕು. ಬೃಹತ್ ಪ್ರಮಾಣದಲ್ಲಿ ಕಪ್ಪು ದಂಧೆಯಲ್ಲಿ ತೊಡಗಿರುವ ದೊಡ್ಡ ಕುಳಗಳನ್ನು ಹಿಡಿದು, ಕಟಕಟೆಗೆ ಎಳೆದು ಶಿಕ್ಷೆ ನೀಡಿದರೆ ಅದು ನಿಜಕ್ಕೂ ಪರಿಣಾಮ ಬೀರುತ್ತದೆ. ಜರ್ಮನಿಯಲ್ಲಿ ಸ್ಟೆಫಿ ಗ್ರಾಫ್ ಅವರ ತಂದೆಯೇ ಜೈಲಿಗೆ ಹೋದರು. ಆದರೆ ಇಲ್ಲಿ ಹಾಗೆ ಆಗುವುದನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯವಿದೆ. ಸರ್ಕಾರ ತಮಗೆ ವಿಧೇಯತೆ ತೋರದ ಉದ್ಯಮಪತಿಗಳನ್ನಷ್ಟೇ ಹಿಡಿಯುತ್ತವೆ. ಹೀಗಾಗಿಯೇ ನನ್ನ ಪ್ರಕಾರ ನಿಜಾರ್ಥದಲ್ಲಿ ಪ್ರಾಮಾಣಿಕವಾದ, ಶ್ರಮವಹಿಸಿ ಕೆಲಸ ಮಾಡುವ ಒಂದು ತೆರಿಗೆ ಆಡಳಿತವಿದ್ದಾಗ ಹಾಗೂ ಸರ್ಕಾರ ತನ್ನ ಉದ್ದೇಶಗಳಲ್ಲಿ ಪ್ರಾಮಾಣಿಕತೆ ಇರಿಸಿಕೊಂಡಾಗ ಮಾತ್ರವೇ ನಿಜವಾದ ಬದಲಾವಣೆ ಸಾಧ್ಯ.

ಕಪ್ಪು ಹಣ ಎಂದರೇನು? ನೋಟು ಬದಲಾವಣೆಯಿಂದ ದೇಶಕ್ಕೇನು ಉಪಯೋಗ?: ಆರ್ಥಿಕ ತಜ್ಞ ಪ್ರಭಾತ್ ಪಟ್ನಾಯಕ್ ಸಂದರ್ಶನ

ಪ್ರ: ಸರ್ಕಾರ ಈ ಕ್ರಮಕ್ಕೆ ಮತ್ತೂ ಕೆಲವು ಕಾರಣಗಳನ್ನು ನೀಡಿದೆ- ಖೋಟಾ ನೋಟು ನಿಯಂತ್ರಣ ಹಾಗೂ ಭಯೋತ್ಪಾದಕರಿಗೆ ಹಣ ಬರುವುದು ತಡೆಯಲು ಎಂದು?

ಪ್ರೊ.ಪಟ್ನಾಯಕ್:

ಒಂದಷ್ಟು ಖೋಟಾ ನೋಟು ಇದೆ ಎಂದಿಟ್ಟುಕೊಂಡರೆ, ಒಂದು ಬಗೆಯ ಖೋಟಾನೋಟಿನಿಂದ ಮತ್ತೊಂದು ಬಗೆಯ ಖೋಟಾನೋಟಿಗೆ ಬದಲಾಗಲು ಸ್ವಲ್ಪ ಸಮಯ ಹಿಡಿಯಬಹುದಷ್ಟೇ. ಒಂದೆರಡು ದಿನಗಳಲ್ಲಿಯೇ ಹೊಸ ಖೋಟಾನೋಟುಗಳು ಮಾರುಕಟ್ಟೆಯಲ್ಲಿ ತುಂಬಿಕೊಳ್ಳುತ್ತವೆ. ಹೊಸ ಕರೆನ್ಸಿ ನೋಟುಗಳು ಇಲ್ಲವಾಗಿ ಹೊಸ ಕರೆನ್ಸಿ ನೋಟುಗಳು ಚಾಲ್ತಿಗೆ ಬರುವುದನ್ನು ನೋಡುತ್ತಲೇ ಬಂದಿದ್ದೇವೆ. ಹಿಂದೆಲ್ಲಾ ಆಣೆ, ಪೈಸೆಗಳಿದ್ದವು. ಈಗ ಅವು ಇಲ್ಲವಾಗಿವೆ. ಈ ರೀತಿ ಬದಲಾವಣೆ ಆದಾಗ ಹಳೆಯ ನೋಟು ಇಲ್ಲವಾಗುತ್ತವೆ, ಹಳೆಯ ಖೋಟಾನೋಟೂ ಇಲ್ಲವಾಗುತ್ತದೆ. ಹೊಸ ನೋಟು ಬಂದಾಗ ಹೊಸ ಖೋಟಾನೋಟು ಬರದಂತೆ ತಡೆಯುವುದಾದರೆ ಬಹಳ ಒಳ್ಳೆಯದು. ಹಾಗೆ ತಡೆಯುತ್ತೇವೆಂದುಕೊಂಡರೂ ಸಹ ಅದಕ್ಕಾಗಿ ಜನರಿಗೆ ಇಷ್ಟೆಲ್ಲಾ ತೊಂದರೆ ಉಂಟುಮಾಡಬೇಕಿಲ್ಲ. ಅದನ್ನು ಸುಗಮವಾದ ರೀತಿಯಲ್ಲಿ ಮಾಡಬಹುದಾಗಿದೆ.

ಪ್ರ: ಸರ್ಕಾರ ಸರಿಯಾದ ಸಿದ್ಧತೆ ಮಾಡಿಕೊಂಡಿರಲಿಲ್ಲವೆನಿಸುತ್ತದೆ. ಹಲವು ಬ್ಯಾಂಕುಗಳಲ್ಲಿ ಕೇವಲ 2000ದ ನೋಟುಗಳು ಮಾತ್ರ ಉಳಿದಿರುವ, ಕಡಿಮೆ ಮೊತ್ತದ ನೋಟುಗಳು ಇಲ್ಲದಿರುವ ಬಗ್ಗೆ ವರದಿಗಳು ಬರುತ್ತಿವೆ. ಯಾರ ಬಳಿಯೂ ಚಿಲ್ಲರೆ ಇಲ್ಲದಿರುವಾಗ, 100ರ ನೋಟುಗಳು ದೇಶದ ಹಣಕಾಸು ಚಲಾವಣೆಯಲ್ಲಿ ಕೇವಲ ಶೇಕಡಾ 15ರಷ್ಟಿವೆ. ಹೀಗಿರುವಾಗ ಒಂದು ಮಟ್ಟಕ್ಕೆ ಪರಿಸ್ಥಿತಿ ಸರಿಯಾಗಲು ಎಷ್ಟು ಸಮಯ ಬೇಕಾಗಬಹುದು?

ಪ್ರೊ: ಪಟ್ನಾಯಕ್:

ಅದನ್ನು ಹೇಳುವುದು ಕಷ್ಟ. ಕೆಲವು ವಾರಗಳಂತೂ ಬೇಕಾಗುತ್ತದೆ. ಜನರಿಗೆ ಬದುಕು ಬಹಳ ದುಸ್ತರವಾಗುತ್ತದೆ. ರಿಸರ್ವ್ ಬ್ಯಾಂಕಿನ ಗವರ್ನರ್‍ಗೆ ಇದೆಲ್ಲಾ ತಿಳಿದಿದ್ದರೂ ಸಕಾಲದಲ್ಲಿ ಹೊಸ ನೋಟುಗಳನ್ನು ಅವರು ಯಾಕೆ ಸಿದ್ಧವಿರಿಸಿಕೊಂಡಿರಲಿಲ್ಲ ಎಂಬುದು ನನಗೆ ಬಹಳ ಆಶ್ಚರ್ಯವಾಗುತ್ತದೆ. ಬದಲಿಸಿಕೊಳ್ಳಲು ಬೇಕಾದ ಹೊಸ ಹಣವನ್ನು ನಿಮ್ಮ ಕೈಯಲ್ಲಿ (ರಿಸರ್ವ್ ಬ್ಯಾಂಕಿನಲ್ಲಿ) ಇಟ್ಟುಕೊಳ್ಳದೇ ಧುತ್ತನೆ ನೋಟು ನಿಷೇಧಕ್ಕೆ ಮುಂದಾಗಿರುವುದಾದರೂ ಹೇಗೆ? ಸ್ವಲ್ಪಕಾಲ ಇದು ಅತ್ಯಂತ ಕೆಟ್ಟ ಪರಿಸ್ಥಿತಿ ನಿರ್ಮಿಸುವುದಂತೂ ನಿಜ. ಒಂದು ವಿಷಯ ಸ್ಪಷ್ಟಪಡಿಸಿಕೊಳ್ಳೋಣ. ಬಹುತೇಕ ಪ್ರತಿಯೊಬ್ಬರೂ ಒಂದಲ್ಲಾ ಒಂದು ಬಗೆಯ ನಗದು ವಹಿವಾಟು ನಡೆಸುತ್ತಲೇ ಇರುತ್ತಾರೆ. ತರಕಾರಿ, ದಿನಸಿ, ಹಾಲು, ಹಣ್ಣು ಖರೀದಿಸಲು ನೀವು ಚೆಕ್ ನೀಡಲು ಬರುವುದಿಲ್ಲ. ಹೀಗಾಗಿ ಬ್ಯಾಂಕ್ ಅಕೌಂಟ್ ಇಲ್ಲದವರು ಮಾತ್ರವಲ್ಲದೇ ಬಹುತೇಕ ಪ್ರತಿಯೊಬ್ಬರಿಗೂ ಅನಾನುಕೂಲತೆಯುಂಟಾಗುತ್ತದೆ. ಮೋದಿಯವರ ಸರ್ಕಾರ ಈ ನೋಟು ನಿಷೇಧ ಕ್ರಮವನ್ನು ಆಧುನಿಕ ಭಾರತದ ಇತಿಹಾಸದಲ್ಲಿಯೇ ಯಾರೂ ನಡೆಸದಷ್ಟು ಅವ್ಯವಸ್ಥಿತವಾಗಿ ನಡೆಸಿದೆ. ಬ್ರಿಟಿಷ್ ವಸಾಹತು ಸರ್ಕಾರವಾದರೂ ನೋಟು ನಿಷೇಧಿಸುವ ಕ್ರಮ ಕೈಗೊಂಡಿದ್ದಾಗ ಮೋದಿ ಸರ್ಕಾರ ತೋರಿದ್ದಕ್ಕಿಂತಲೂ ಹೆಚ್ಚಿನ ಸೂಕ್ಷ್ಮತೆ ತೋರಿ ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಂಡಿತ್ತು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ ತರಾತುರಿಯ “ತುರ್ತು ಕ್ರಮ”ವು ಮೋದಿ ಸರ್ಕಾರ ಹಾಲಿ ದೇಶದ ಜನರ ವಿರುದ್ಧ ಜಾರಿಗೊಳಿಸುತ್ತಿರುವ ಇನ್ನಿತರ ಹಲವು ‘ತುರ್ತುಪರಿಸ್ಥಿತಿ’ ಕ್ರಮಗಳ ಸಾಲಿಗೇ ಸೇರಿಕೊಂಡಿದೆ.