ಮೋದಿ - ಕ್ಸೀ ‘Mating’; ಟೈಮ್ಸ್‌ ಆಫ್‌ ಇಂಡಿಯಾ ತಲೆಬರಹ ತಿದ್ದಿದ ಕಿಡಿಗೇಡಿಗಳು
ಮೀಡಿಯಾ 2.0

ಮೋದಿ - ಕ್ಸೀ ‘Mating’; ಟೈಮ್ಸ್‌ ಆಫ್‌ ಇಂಡಿಯಾ ತಲೆಬರಹ ತಿದ್ದಿದ ಕಿಡಿಗೇಡಿಗಳು

ಪ್ರಧಾನಿ ನರೇಂದ್ರ ಮೋದಿ ಚೀನಾ ಭೇಟಿಯ ಸಂಬಂಧ ‘ಟೈಮ್ಸ್‌ ಆಫ್‌ ಇಂಡಿಯಾ’ ದಿನಪತ್ರಿಕೆ ಶುಕ್ರವಾರ ವರದಿಯೊಂದನ್ನು ಮುಖಪುಟದಲ್ಲಿ ಮುದ್ರಿಸಿದೆ. ಅದರ ತಲೆಬರಹ ತಿದ್ದಿರುವ ಕಿಡಿಗೇಡಿಗಳು ಅಶ್ಲೀಲ ಅರ್ಥ ನೀಡಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಚೀನಾ ಪ್ರವಾಸದ ಸುದ್ದಿ ಇಡೀ ಮಾಧ್ಯಮವನ್ನು ಶುಕ್ರವಾರ ಆವರಿಸಿಕೊಂಡಿದೆ. ದೇಶ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗುವ ಅಂಶಗಳಿಲ್ಲದ ಕಾರಣಕ್ಕೋ ಅಥವಾ ಎಂದಿನ ಪ್ರೋ - ಮೋದಿ ಅಭಿಯಾನವೋ ಗೊತ್ತಿಲ್ಲ. ಶುಕ್ರವಾರ ಮುಂಜಾನೆಯಿಂದ ರಾಷ್ಟ್ರೀಯ ಸುದ್ದಿ ವಾಹಿನಿಗಳು ಮೋದಿಮಯವಾಗಿದೆ. ಆದರೆ ಅದೇ ಹೊತ್ತಿಗೆ ಕಿಡಿಗೇಡಿಗಳು ಮಾಡಿದ ಕೃತ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮೋದಿ - ಕ್ಸೀ ‘ಮೇಟಿಂಗ್‌’:

ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸೀ ಜಿನ್‌ಪಿಂಗ್‌ ಸೌಹಾರ್ದ ಭೇಟಿ ಶುಕ್ರವಾರ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮೋದಿ ಭೇಟಿಯ ಮುಖ್ಯಾಂಶಗಳನ್ನು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿತ್ತು. ಮೋದಿ ಎಂಬ ಕಾರಣಕ್ಕೆ ಮುಖಪುಟದಲ್ಲಿಯೇ ಆ ಸುದ್ದಿ ಜಾಗವನ್ನೂ ಪಡೆದಿತ್ತು. “Modi, Xi will meet 6 times in 24 hours,” ಎಂಬ ತಲೆಬರಹವನ್ನು ಟೈಮ್ಸ್‌ ಆಫ್‌ ಇಂಡಿಯಾ ನೀಡಿತ್ತು. ಆದರೆ ಇದನ್ನು ತಿರುಚಿ “Modi, Xi will mate 6 times in 24 hours,” ಎಂಬ ತಲೆಬರಹವನ್ನು ನೀಡಲಾಗಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

ಈ ಬೆಳವಣಿಗೆಯ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಟೈಮ್ಸ್‌, ಇದು ಕಿಡಿಗೇಡಿಗಳು ಮಾಡಿರುವ ಫೋಟೊಶಾಪ್‌ ಕೃತ್ಯ ಎಂದಿದೆ.

ಆಂಗ್ಲ ಭಾಷೆಯಲ್ಲಿ ‘Mate’ ಎಂದರೆ ಲೈಂಗಿಕ ಕ್ರಿಯೆ. ಕೀಳುಮಟ್ಟದ ಅಭಿರುಚಿ ಹೊಂದಿರುವ ವ್ಯಕ್ತಿಗಳು ಈ ಕೃತ್ಯವನ್ನು ಮಾಡಿದ್ದು, ಈ ಬಗ್ಗೆ ಟೈಮ್ಸ್‌ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ. ಆದರೆ ಸಾವಿರಾರು ಸಂಖ್ಯೆಯಲ್ಲಿ ಜನ ನಕಲಿ ತಲೆಬರಹದ ವರದಿಯ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಟೈಮ್ಸ್‌ ಕ್ರಮ ತೆಗೆದುಕೊಳ್ಳುವುದಾದರೂ ಯಾರ ಮೇಲೆ ಎಂಬ ಪ್ರಶ್ನೆ ಮುಂದಾಗಲಿದೆ.

ಇತ್ತೀಚಿನ ದಿನಗಳಲ್ಲಿ ನಕಲಿ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿವೆ. ಆದರೆ ಈ ರೀತಿಯ ನಕಲಿ ಸುದ್ದಿಗಳಿಗೆ ಸಂಪೂರ್ಣ ಕಡಿವಾಣ ಹಾಕುವುದು ಅಸಾಧ್ಯ ಎನ್ನುವಂತಾಗಿದೆ. ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಮೋದಿ ವಿರೋಧಿ ಬಣ ಈ ಕೆಲಸ ಮಾಡಿದೆಯಾ ಎಂಬ ಅನುಮಾನವೂ ಕಾಡುತ್ತದೆ.

ಈ ಹಿಂದೆಯೂ ಕೆಲವು ಬಾರಿ ಟೈಮ್ಸ್‌ ಆಫ್‌ ಇಂಡಿಯಾ ಸೇರಿದಂತೆ ಪತ್ರಿಕೆಗಳ ಹೆಡ್‌ಲೈನ್‌ಗಳನ್ನು ತಿರುಚಿದ ಘಟನೆಗಳಿವೆ. ಅಸಲಿ ಸುದ್ದಿಗಳಿಗಿಂತ ನಕಲಿ ಸುದ್ದಿಗಳೇ ಹೆಚ್ಚು ರಾರಾಜಿಸುವ ಇವತ್ತಿನ ಕಾಲದಲ್ಲಿ ನಕಲಿ ಸುದ್ದಿ ಸೃಷ್ಟಿಸುವ ವ್ಯವಸ್ಥಿತ ಜಾಲಗಳೂ ಹುಟ್ಟಿಕೊಂಡಿವೆ.

ಇತ್ತೀಚೆಗೆ ಬೂಮ್‌ಲೈನ್‌ ಸಂಸ್ಥೆ ಜತೆಗೂಡಿ ಫೇಸ್‌ಬುಕ್ ನಕಲಿ ಸುದ್ದಿಗಳಿಗೆ ಕಡಿವಾಣ ಹಾಕುವ ಯೋಜನೆ ರೂಪಿಸಿದೆ. ಕರ್ನಾಟಕದ ಚುನಾವಣೆ ಹಿನ್ನೆಲೆಯಲ್ಲಿ ಫೇಸ್‌ಬುಕ್ ನಿರ್ಧಾರ ಗಮನ ಸೆಳೆದಿತ್ತು.

Also read: ಕರ್ನಾಟಕದ ಚುನಾವಣಾ ಹಿನ್ನೆಲೆ: ಸುಳ್ಳು ಸುದ್ದಿಗಳ ವಿರುದ್ಧ ಹೋರಾಟಕ್ಕೆ ಇಳಿದ ಫೇಸ್‌ಬುಕ್‌

ಸಾಮಾಜಿಕ ಜಾಲತಾಣಗಳು ಪ್ರಭಾವಿಗಳಾಗಿರುವ ಈ ದಿನಗಳಲ್ಲಿ ನಕಲಿ ಸುದ್ದಿಗಳು ಎಲ್ಲಿಲ್ಲದ ಆಸಕ್ತಿ ಕೆರಳಿಸುತ್ತಿವೆ. ರಾಜಕೀಯ ಪಕ್ಷಗಳೇ ಇಂತಹ ಸುದ್ದಿಗಳನ್ನಿ ತಯಾರಿಸಿ ಹಂಚುವ ಕೆಲಸ ಮಾಡುತ್ತಿವೆ. ಈ ಹಿಂದೆ 2014 ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ಸುತ್ತ ಇಂತಹದ್ದೇ ನಕಲಿ ಸುದ್ದಿಗಳ ಜಾಲ ಕೆಲಸ ಮಾಡಿತ್ತು. ಮೋದಿ ಚಿಕ್ಕ ವಯಸ್ಸಿನಲ್ಲಿ ನದಿಯಲ್ಲಿ ಈಜಿ ಮೊಸಳೆ ಹಿಡಿದಿದ್ದರು ಎಂಬುದರಿಂದ ಹಿಡಿದು, ಬಿಜೆಪಿ ಕಚೇರಿ ಗುಡಿಸಿದ್ದರು ಎಂಬ ಸುದ್ದಿಗಳು ಕೊನೆಗೆ ಮುಖ್ಯವಾಹಿನಿಯ ಮಾಧ್ಯಮಗಳನ್ನೂ ಆಕ್ರಮಿಸಿಕೊಂಡಿದ್ದವು.

ಇದೀಗ, ಅದೇ ತಂತ್ರಗಾರಿಕೆ ಮೋದಿಗೆ ಹಾಗೂ ಬಿಜೆಪಿಗೆ ತಿರುಗೇಟು ನೀಡಲು ಶುರುಮಾಡಿವೆ. ಅದರ ಒಂದು ಸ್ಯಾಂಪಲ್ ಟೈಮ್ಸ್‌ ಆಫ್‌ ಇಂಡಿಯಾ ತಲೆ ಬರಹ ತಿದ್ದಿದ ಕಿಡಿಗೇಡಿಗಳ ಕೃತ್ಯ ಅಷ್ಟೆ. ಮುಂದಿನ ಲೋಕಸಭಾ ಚುನಾವಣೆ ಹೊತ್ತಿಗೆ ಇಂತಹ ಹಲವು ಸಾಧ್ಯತೆಗಳನ್ನು ನಿರೀಕ್ಷಿಸಬಹುದಾಗಿದೆ.