samachara
www.samachara.com
ಕಾಲದ ಜತೆ ಬದಲಾಗುತ್ತ ಬಂದ ‘ಟೈಮ್ಸ್‌’;  ಪತ್ರಕರ್ತರ ಹುದ್ದೆಗೆ ವಿಜಯ ಕರ್ನಾಟಕದ ಡಿಜಿಟಲ್‌ ಟಚ್‌
ಮೀಡಿಯಾ 2.0

ಕಾಲದ ಜತೆ ಬದಲಾಗುತ್ತ ಬಂದ ‘ಟೈಮ್ಸ್‌’; ಪತ್ರಕರ್ತರ ಹುದ್ದೆಗೆ ವಿಜಯ ಕರ್ನಾಟಕದ ಡಿಜಿಟಲ್‌ ಟಚ್‌

ಪ್ರಪಂಚದ ಮುಂದುವರೆದ ದೇಶಗಳಷ್ಟೇ ವೇಗವಾಗಿ ಭಾರತದ ಡಿಜಿಟಲ್‌ ಉದ್ಯಮವೂ ಬೆಳೆಯುತ್ತಿದೆ. ದುಪ್ಪಟ್ಟಾದ ಮುದ್ರಣ ವೆಚ್ಚ, ಕಡಿಮೆಯಾಗುತ್ತಿರುವ ಓದುಗರ ಸಂಖ್ಯೆ ಕಾಡುತ್ತಿದೆ. ಮಾಧ್ಯಮದ ಭವಿಷ್ಯ ಡಿಜಿಟಲ್‌ ಎಂಬ ಸತ್ಯದ ಅರಿವೂ ಈಗ ಆದಂತಿದೆ 

samachara

samachara

ಭಾರತದ ಪತ್ರಿಕೋದ್ಯಮದ ಪಾಲಿಗೆ ‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆಯ ಕೊಡುಗೆ ಅಪಾರ. ಪತ್ರಿಕೋದ್ಯಮಕ್ಕೆ ಹೊಸ ರೂಪ ಕೊಟ್ಟ ಹೆಗ್ಗಳಿಕೆಯೂ ಟೈಮ್ಸ್‌ಗೆ ಸೇರುತ್ತದೆ. ಯಾವಾಗಲೂ ಕಾಲದ ಜತೆಗೆ ಹೆಜ್ಜೆ ಹಾಕಿದ ಟೈಮ್ಸ್‌ ಗ್ರೂಪ್‌ ಈಗ ಡಿಜಿಟಲ್‌ ಲೋಕದಲ್ಲೂ ಕಾಲಿಟ್ಟಿದೆ. ಒಂದೆಡೆ ದಿನ ಪತ್ರಿಕೆಗಳ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ ಮತ್ತೊಂದೆಡೆ ಡಿಜಿಟಲ್‌ ಉದ್ಯಮ ಹಿಗ್ಗುತ್ತಾ ಸಾಗುತ್ತಿದೆ. ಇವನ್ನೆಲ್ಲಾ ಮನಗಂಡ ಟೈಮ್ಸ್‌ ಈಗ ಡಿಜಿಟಲೀಕರಣಕ್ಕೆ ಮುಂದಾಗಿದೆ. ಇನ್ನೈದು ವರ್ಷಗಳಲ್ಲಿ ಟೈಮ್ಸ್‌ ಸಮೂಹ ಸಂಸ್ಥೆಯ ದಿನಪತ್ರಿಕೆಗಳೆಲ್ಲವೂ ಮುದ್ರಣವನ್ನು ನಿಲ್ಲಿಸುವ ಸಾಧ್ಯತೆಯೂ ಸದ್ಯದ ಬೆಳವಣಿಗೆಯಿಂದ ಕಂಡು ಬರುತ್ತಿದೆ.

ಇವತ್ತಿನ ಕಾಲಘಟ್ಟಕ್ಕೆ ತಕ್ಕಂತೆ ಡಿಜಿಟಲ್‌ ಪತ್ರಿಕೋದ್ಯಮಕ್ಕೆ ಒತ್ತು ನೀಡುವುದರ ಜತೆ ಜತೆಗೆ ವೇಜ್‌ ಬೋ‌ರ್ಡ್‌ ತಾಪತ್ರಯದಿಂದಲೂ ತಪ್ಪಿಸಿಕೊಳ್ಳುವ ಹಾದಿಗೆ ಟೈಮ್ಸ್‌ ಕಾಲಿಟ್ಟಿದೆ. ಇನ್ನು ಮುಂದೆ ಉಪ ಸಂಪಾದಕ, ಹಿರಿಯ ಉಪ ಸಂಪಾದಕ, ವರದಿಗಾರ, ಪ್ರಿನ್ಸಿಪಲ್‌ ಕರೆಸ್ಪಾಂಡೆಂಟ್‌ ಮತ್ತಿತರ ಹುದ್ದೆಗಳ ಬದಲಾಗಿ ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್‌ ಅಥವಾ ಕ್ರಿಯೇಟರ್‌ ಎಂಬ ಹುದ್ದೆ ನೀಡಲಿವೆ. ಇದರಿಂದ ವೇಜ್‌ ಬೋರ್ಡ್‌ ಸಮಸ್ಯೆ ಯಿಂದ ಸಂಸ್ಥೆ ದೂರಾಗಲಿದೆ. ವೇಜ್‌ ಬೋರ್ಡ್‌ ಪ್ರಕಾರ ಸಿಬ್ಬಂದಿಗಳಿಗೆ ಸಂಬಳ ನೀಡುವುದನ್ನು ತಪ್ಪಿಸಿಕೊಳ್ಳಬಹುದಾಗಿದೆ.

ಇತ್ತೀಚೆಗೆ ಹಲವು ಉಪ ಸಂಪಾದಕರು, ಹಿರಿಯ ಉಪ ಸಂಪಾದಕರ ಹುದ್ದೆಗಳಿಗೆ ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್‌ ಎಂಬ ಹೊಸ ನಾಮಕಾರಣ ಮಾಡಲಾಗಿದೆ. ಟೈಮ್ಸ್‌ ಗ್ರೂಪಿನ, ವಿಜಯ ಕರ್ನಾಟಕ, ಟೈಮ್ಸ್‌ ಆಫ್‌ ಇಂಡಿಯಾ, ಬೆಂಗಳೂರು ಮಿರರ್‌ ಮತ್ತಿತರ ಅಂಗ ಸಂಸ್ಥೆಗಳು ಸಿಬ್ಬಂದಿ ತತ್ವವನ್ನು ಪಾಲಿಸಲಿವೆ.

ಟೈಮ್ಸ್‌ ಜತೆಗೆ ಬದಲಾದ ಕಾಲ:
ಕಾಲದ ಜತೆಗೆ ಸಾಗಿದ ಟೈಮ್ಸ್‌ ಸಮೂಹ ಸಂಸ್ಥೆ ಕೆಲವೊಮ್ಮೆ ಕಾಲವನ್ನೂ ಮೀರಿ ಮುಂದೆ ಹೋಗಿದೆ. ಅದಕ್ಕೆ ಉದಾಹರಣೆ ಎಂದರೆ ಕರ್ನಾಟಕ ಪತ್ರಿಕೋದ್ಯಮದಲ್ಲಿ ಈ ಹಿಂದೆ ಇದ್ದ ‘ಸಂಪಾದಕ’ ಪದವಿಗೆ ಹೊಸ ವ್ಯಾಖ್ಯಾನವನ್ನು ನೀಡಿದ್ದು. ಒಂದು ಕಾಲದಲ್ಲಿ ಪತ್ರಿಕೆಯ ಏಕಮೇವ ‘ಬಾಸ್‌’ ಎಂದರೆ ಸಂಪಾದಕರಾಗಿರುತ್ತಿದ್ದರು. ಇಡೀ ರಾಜ್ಯಕ್ಕೆ ಅವರೇ ಹೆಡ್‌ ಆಗಿರುತ್ತಿದ್ದರು. ಅವರ ನಂತರದ ಸ್ಥಾನದಲ್ಲಿ ‘ಚೀಫ್‌ ರಿಪೋರ್ಟರ್‌’ ಇರುತ್ತಿದ್ದರು. ಆದರೆ ಟೈಮ್ಸ್‌ ಈ ಪದವಿಗಳನ್ನು ತಲೆಕೆಳಗಾಗಿಸಿತ್ತು.

ಇಡೀ ವರದಿಗಾರರ ತಂಡಕ್ಕೆ ಚೀಫ್‌ ರಿಪೋರ್ಟರ್‌ ಮುಖ್ಯಸ್ಥರಾಗಿರುತ್ತಿದ್ದರು. ಅಪರಾಧ ವಿಭಾಗ, ಮೆಟ್ರೋ ವಿಭಾಗಗಳಿಗೆ ಬ್ಯೂರೋ ಮುಖ್ಯಸ್ಥರಿರುತ್ತಿದ್ದರು. ಅವರೂ ಕೂಡ ಚೀಫ್‌ ರಿಪೋರ್ಟರ್‌ ಕೆಳಗೆ ಬರುತ್ತಿದ್ದರು. ಆದರೆ ಕಾಲ ಕ್ರಮೇಣ ಈ ವ್ಯವಸ್ಥೆಯನ್ನು ಬದಲಾಯಿಸಿದ ಟೈಮ್ಸ್‌, ಪೊಲಿಟಿಕಲ್‌ ಎಡಿಟರ್‌, ಕ್ರೈಂ ಎಡಿಟರ್‌, ಸಿಟಿ ಎಡಿಟರ್‌ ಎಂಬ ಪದವಿಗಳನ್ನು ಸೃಷ್ಟಿಸಿತ್ತು. ಜತೆಗೆ ಮೈಸೂರು, ಶಿಮೊಗ್ಗ, ಹುಬ್ಬಳ್ಳಿ - ಧಾರವಾಡ, ಮಂಗಳೂರು ಹೀಗೇ ಎಲ್ಲೆಲ್ಲಿ ಬ್ಯೂರೋಗಳಿವೆಯೋ ಅಲ್ಲಲ್ಲಿ ಒಬ್ಬೊಬ್ಬ ರೆಸಿಡೆಂಟ್‌ ಎಡಿಟರ್‌ ಹುದ್ದೆಗಳನ್ನು ಸೃಷ್ಟಿಸಿತು.

ಅಲ್ಲಿಯವರೆಗೂ ನಡೆದುಕೊಂಡು ಬಂದ ಪದ್ಧತಿಯನ್ನು ಬದಲಾಯಿಸಿದ ನಂತರ ಟೈಮ್ಸ್‌ ಉದ್ಯಮದ ಓಟಕ್ಕೆ ಬಂದರೆ ಯಾವಾಗಲೂ ಮೊದಲ ಸ್ಥಾನದಲ್ಲೇ ನಿಂತಿದೆ. ಕೇವಲ ಹುದ್ದೆಗಳನ್ನಷ್ಟೇ ಬದಲಿಸದ ಟೈಮ್ಸ್‌ ಜಾಹೀರಾತಿನ ರೂಪುರೇಷೆಗಳನ್ನು ಕೂಡ ಬದಲಿಸಿದೆ. ಪತ್ರಿಕೆಗಳಲ್ಲಿ ಮೊದಲು ಸುದ್ದಿಗೆ ಪ್ರಾಮುಖ್ಯತೆ, ನಂತರ ಜಾಹೀರಾತು ಎಂಬ ತತ್ವ ಪಾಲಿಸುತ್ತಿದ್ದ ಸಮಯದಲ್ಲಿ ಟೈಮ್ಸ್‌ ಹೊಸ ನಿಲುವನ್ನು ತಾಳಿತ್ತು. ಶೇಕಡ 60% ಜಾಹೀರಾತು, 40% ಸುದ್ದಿ ಎಂಬ ಹೊಸ ಉದ್ಯಮ ನಿಲುವನ್ನು ಟೈಮ್ಸ್‌ ತಾಳಿತ್ತು.

ಕಾಲ ಕ್ರಮೇಣ ಜಾಹೀರಾತಿನ ಪರ್ಸೆಂಟೇಜ್‌ ಹೆಚ್ಚುತ್ತಿದೆ, ಸುದ್ದಿಯ ಪ್ರಾಮುಖ್ಯತೆ ಕುಗ್ಗುತ್ತಿದೆ. ಉದ್ಯಮದ ವಿಚಾರಕ್ಕೆ ಬಂದರೆ ಟೈಮ್ಸ್‌ ಮಿಕ್ಕೆಲ್ಲಾ ಸಂಸ್ಥೆಗಳಿಗಿಂತಲೂ ಲಾಭದಾಯಕ ಸ್ಥಾನದಲ್ಲಿದೆ. ಆದರೆ ವೇಜ್‌ ಬೋರ್ಡ್‌ ಶಿಫಾರಸ್ಸುಗಳನ್ನು ಜಾರಿ ಮಾಡಲು ಟೈಮ್ಸ್‌ ಹಿಂದೇಟು ಹಾಕುತ್ತಿದೆ. ಕರ್ನಾಟಕದ ಪ್ರಮುಖ ಪತ್ರಿಕೆಗಳಾದ, ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳೂ ಇದಕ್ಕೆ ಹೊರತಲ್ಲ. ಅಲ್ಲಿಯೂ ವೇಜ್‌ ಬೋರ್ಡ್‌ ಜಾರಿ ಮಾಡಬೇಕು ಎಂದಾಗ, ಸಿಬ್ಬಂದಿಗಳ ಜತೆ ಕಾಂಟ್ರಾಕ್ಟ್‌ ಮಾಡಿಕೊಂಡಿತ್ತು. ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಪ್ರತಿ ಸಂಸ್ಥೆಗಳೂ ಕಾಂಟ್ರ್ಯಾಕ್ಟ್‌ ಮೂಲಕವೇ ಸಿಬ್ಬಂದಿಗಳನ್ನು ಸೇರಿಸಿಕೊಳ್ಳುತ್ತಿವೆ.

ದಿ ರೈಸ್‌ ಆಫ್‌ ಡಿಜಿಟಲ್‌ ಮಾಧ್ಯಮ:

2004 - 05ನೇ ಇಸವಿಯಲ್ಲಿ ಅಮೆರಿಕಾದಲ್ಲಿ ಡಿಜಿಟಲ್‌ ಕ್ರಾಂತಿಯಾಗಿತ್ತು. ಅಲ್ಲಿಯವರೆಗೂ ಡಿಜಿಟಲ್‌ ಪತ್ರಿಕೋದ್ಯಮಕ್ಕೆ ಹೆಚ್ಚು ಒತ್ತು ನೀಡದ ಅಮೆರಿಕಾದಲ್ಲಿ ಹೊಸ ಕ್ರಾಂತಿಗೆ ಕೈಹಾಕಲಾಗಿತ್ತು. ಆಗ ಹುಟ್ಟಿದ್ದೇ ‘ಹಫ್‌ ಪೋಸ್ಟ್‌’ ಮತ್ತು ‘ಬಝ್‌ ಫೀಡ್‌’ ಡಿಜಿಟಲ್‌ ಮಾಧ್ಯಮಗಳು. ಎರಡೂ ಜಿದ್ದಿಗೆ ಬಿದ್ದು ಸುದ್ದಿಗಳನ್ನು ಮಾಡಲು ಆರಂಭಿಸಿತ್ತು. ಇಬ್ಬರ ಸ್ಪರ್ದೆಯ ನಡುವೆ ಅಮೆರಿಕನ್ನರು ಅವರಿಗೆ ತಿಳಿಯದೇ ಡಿಜಿಟಲ್‌ ಪತ್ರಿಕೊದ್ಯಮವನ್ನು ಅಪ್ಪಿಕೊಂಡಿದ್ದರು. ಈಗ ಅಂಥದ್ದೇ ಒಂದು ಕಾಲ ಭಾರತದಲ್ಲಿ ಸನ್ನಿಹಿತವಾಗಿದೆ.

ಮುಖ್ಯವಾಹಿನಿಗಳು ರಾಜಕೀಯ ಅಜೆಂಡಾಗಳನ್ನು ಹೊಂದಿವೆ ಎಂಬ ಬಹುದೊಡ್ಡ ಹಣೆಪಟ್ಟಿ ಹೊತ್ತುಕೊಂಡೇ ಕಾರ್ಯವಿರ್ವಹಿಸುತ್ತಿದೆ. ಮುಖ್ಯವಾಹಿನಿಗಳಿಗೆ ಪರ್ಯಾಯ ವ್ಯವಸ್ಥೆಯಾಗಿ ಡಿಜಿಟಲ್‌ ಮಾಧ್ಯಮಗಳು ಇಂದು ತಲೆಯೆತ್ತಿವೆ. ಭಾರತದಲ್ಲಿ ಆ ಪ್ರಯತ್ನದಲ್ಲಿ ಮೊದಲಾಗಿದ್ದು, ‘ದಿ ವೈರ್‌’, ‘ಸ್ಕ್ರಾಲ್‌ ಡಾಟ್‌ ಇನ್‌’, ‘ದಿ ಕ್ವಿಂಟ್‌’, ‘ದಿ ಪ್ರಿಂಟ್‌’ ಮತ್ತಿತರ ಡಿಜಿಟಲ್‌ ಮಾಧ್ಯಮಗಳು. ಜನಪರ ಪತ್ರಿಕೋದ್ಯಮ ಮತ್ತು ಪಕ್ಷಪಾತ ರಹಿತ ಪತ್ರಿಕೋದ್ಯಮದ ಕನಸು ಹೊತ್ತು ಹಲವು ಪ್ರಯತ್ನಗಳು ನಡೆಯುತ್ತಲೇ ಇವೆ.

ಕಾಲದ ಜತೆ ಬದಲಾಗುತ್ತ ಬಂದ ‘ಟೈಮ್ಸ್‌’;  ಪತ್ರಕರ್ತರ ಹುದ್ದೆಗೆ ವಿಜಯ ಕರ್ನಾಟಕದ ಡಿಜಿಟಲ್‌ ಟಚ್‌

ಮೊದಮೊದಲು ಡಿಜಿಟಲ್‌ ಪತ್ರಿಕೋದ್ಯಮವನ್ನು ಒಪ್ಪಿಕೊಳ್ಳದ ಜನ ಈಗ ಡಿಜಿಟಲ್‌ ಕಡೆಗೆ ತಿರುಗುತ್ತಿದ್ದಾರೆ. ಪತ್ರಿಕೆಗಳನ್ನು ಕುಳಿತು ಓದುವ ಸಮಯವಿಲ್ಲದವರು, ಸಾಮಾಜಿಕ ಜಾಲತಾಣಗಳನ್ನು, ಡಿಜಿಟಲ್‌ ಮೀಡಿಯಾಗಳನ್ನು ಸುದ್ದಿ ಮೂಲವನ್ನಾಗಿ ಸ್ವೀಕರಿಸುತ್ತಿದ್ದಾರೆ. ಅದಕ್ಕೆ ಇನ್ನೊಂದು ಪ್ರಮುಖ ಕಾರಣವೆಂದರೆ ಸ್ಮಾರ್ಟ್‌ ಫೋನ್‌ ಬಳಕೆ ಮತ್ತು ಕಡಿಮೆ ದರದಲ್ಲಿ ಲಭ್ಯವಾಗುತ್ತಿರುವ ಇಂಟರ್‌ನೆಟ್‌ ಡೇಟಾ. ಸ್ವತಂತ್ರ್ಯ ಪತ್ರಿಕೋದ್ಯಮಕ್ಕೆ ದೇಣಿಗೆ ನೀಡುವ ಜನರೂ ಈಗ ಸೃಷ್ಟಿಯಾಗಿದ್ದಾರೆ.

ಡಿಜಿಟಲ್‌ ಪತ್ರಿಕೋದ್ಯಮದ ಬೆಳವಣಿಗೆಯನ್ನು ಟೈಮ್ಸ್‌ ಸಮೂಹ ಒಳಗೊಂಡಂತೆ ಎಲ್ಲ ಮಾಧ್ಯಮಗಳೂ ಗಮನಿಸುತ್ತಿದೆ. ಒಂದೆಡೆ ಮುದ್ರಣಕ್ಕೆ ಬೇಕಾದ ಪೇಪರ್‌ ರೋಲ್‌ ಬೆಲೆ ದುಪ್ಪಟ್ಟಾಗಿವೆ, ಓದುಗರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಆದರೆ ಒಮ್ಮೆಲೇ ಮುದ್ರಣ ನಿಲ್ಲಿಸಿದರೆ ಇರುವಿಕೆಯನ್ನೇ ಬಿಟ್ಟುಕೊಟ್ಟಂತಾಗಬಹುದು ಎಂಬ ಉದ್ದೇಶದಿಂದ ಇನ್ನೂ ಕೆಲ ವರ್ಷಗಳ ಕಾಲ ಮುದ್ರಣ ಮಾಡಲು ಪತ್ರಿಕೆಗಳು ನಿರ್ಧರಿಸಿರಬಹುದು. ಆದರೆ ಪ್ರಿಂಟಿಂಗ್‌ ನಿಲ್ಲಿಸಿ ಸಂಪೂರ್ಣವಾಗಿ ಡಿಜಿಟಲ್‌ಗೆ ಕಾಲಿಡುವ ದಿನಗಳು ದೂರವೇನಿಲ್ಲ.

ಈ ಕಾರಣಕ್ಕಾಗಿಯೇ ಟೈಮ್ಸ್‌ ಈಗ ಹುದ್ದೆಗಳ ಮರುನಾಮಕರಣ ಮಾಡಿದ್ದು, ಈಗಿರುವ ಸಿಬ್ಬಂದಿಗಳೇ ಮುಂದಿನ ದಿನಗಳಲ್ಲಿ ಡಿಜಿಟಲ್‌ ಮಾಧ್ಯಮದಲ್ಲಿ ನಿಯೋಜಿಸಲ್ಪಡಬಹುದು. ಆದರೆ ಡಿಜಿಟಲ್‌ ಮಾಧ್ಯಮದ ವೇಗಕ್ಕೆ, ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳದ ಪತ್ರಕರ್ತರ ಸ್ಥಿತಿ ದುಸ್ಥರವಾಗಬಹುದು. ಹಿರಿತನ, ಸಂಸ್ಥೆಗಾಗಿ ಸಲ್ಲಿಸಿದ ಸೇವೆ ಯಾವುದೂ ಕಾರ್ಪೊರೇಟ್‌ ಸಂಸ್ಥೆಗಳಿಗೆ ಮುಖ್ಯವಾಗುವುದಿಲ್ಲ. ಅದಕ್ಕಾಗಿಯೇ ಡಿಜಿಟಲ್‌ ಪತ್ರಿಕೋದ್ಯಮಕ್ಕೆ ಒಗ್ಗಿಕೊಳ್ಳುವ ಕಸರತ್ತನ್ನು ಈಗಾಗಲೇ ಹಲವು ಪತ್ರಕರ್ತರು ಆರಂಭಿಸಿದ್ದಾರೆ.

ಹೆಸರು ಹೇಳಲು ಇಚ್ಚಿಸದ ಟೈಮ್ಸ್‌ ಸಮೂಹ ಸಂಸ್ಥೆಯ ಪತ್ರಿಕೆಯೊಂದರ ಸಿಬ್ಬಂದಿ, ‘ಸಮಾಚಾರ’ದ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡರು. “ಕಳೆದೈದು ವರ್ಷಗಳಲ್ಲಿ ಎಲ್ಲವೂ ಬದಲಾಗಿದೆ. ವೇಜ್‌ ಬೋರ್ಡ್‌ ಶಿಫಾರಸ್ಸನ್ನು ಜಾರಿಗೆ ತಂದರೆ ಹೆಚ್ಚಿನ ಸಂಬಳ ನೀಬೇಕು ಎಂಬ ಕಾರಣಕ್ಕೆ ಎಲ್ಲ ಸಿಬ್ಬಂದಿಗಳ ಜತೆಗೂ ಕಾಂಟ್ರ್ಯಾಕ್‌ಗೆ ಸಹಿ ಹಾಕಿಸಿಕೊಳ್ಳುತ್ತಿದ್ದಾರೆ. ಕೆಲವರ ಕಾಂಟ್ರ್ಯಾಕ್ಟ್‌ 2 ವರ್ಷದ್ದಾದರೆ, ಕೆಲವರದ್ದು ಕೇವಲ 6 ತಿಂಗಳು. ಅದಾದ ನಂತರ ಕಾಂಟ್ರ್ಯಾಕ್ಟ್‌ ನವೀಕರಿಸಬಹುದು ಅಥವಾ ಟೈಮ್ಸ್‌ ಜತೆಗಿನ ನಂಟು ಸಿಬ್ಬಂದಿಗೆ ಅಂತ್ಯವಾಗಬಹುದು. ಎಲ್ಲರನ್ನೂ ಉದ್ಯೋಗ ಸುರಕ್ಷತೆ ಕಾಡತೊಡಗಿದೆ,” ಎಂದು ತಮ್ಮ ಬೇಸರ ವ್ಯಕ್ತಪಡಿಸಿದರು.

ಡಿಜಿಟಲ್‌ ಮಾಧ್ಯಮ ಲೋಕಕ್ಕೆ ಸಂಪೂರ್ಣವಾಗಿ ಕಾಲಿಡುವುದು ಇವತ್ತಿನ ಕಾಲಘಟ್ಟದಲ್ಲಿ ಉತ್ತಮ ನಿರ್ಧಾರವಾಗಿದೆ. ಆದರೆ ಕಾಲದ ಜತೆ ನಡೆಯುವ ಭರದಲ್ಲಿ ಸಂಸ್ಥೆಯ ಸಿಬ್ಬಂದಿಗಳಲ್ಲಿ ಅಸುರಕ್ಷತೆ ಕಾಡುವಂತಾಗಿದೆ. ಇದಕ್ಕೆ ಸಮರ್ಪಕ ಉತ್ತರ ಟೈಮ್ಸ್‌ ಕಂಡುಕೊಳ್ಳಬಹುದೇ? ಉತ್ತರ ಮುಂದಿನ ದಿನಗಳಲ್ಲಿ ಸಿಗಬಹುದಷ್ಟೇ.