samachara
www.samachara.com
‘ವಿವಿಪ್ಯಾಟ್ ಪ್ರಾತ್ಯಾಕ್ಷಿಕೆ’: ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಪ್ರಶ್ನಿಸಿದರೆ ‘ನೀತಿ ಸಂಹಿತೆ’ಯ ಗೂಸಾ!
ಮೀಡಿಯಾ 2.0

‘ವಿವಿಪ್ಯಾಟ್ ಪ್ರಾತ್ಯಾಕ್ಷಿಕೆ’: ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಪ್ರಶ್ನಿಸಿದರೆ ‘ನೀತಿ ಸಂಹಿತೆ’ಯ ಗೂಸಾ!

ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ನಮ್ಮ ದೇಶದ ಸಂವಿಧಾನದ ಅಧಿಕೃತ ಕಂಬಗಳು. ಸಂವಿಧಾನದ ನಾಲ್ಕನೇ ಅಂಗ ಎಂಬ ಹೆಸರನ್ನು ಪತ್ರಿಕಾರಂಗ ಪಡೆದಿದೆ. ಆದರೆ ಪತ್ರಕರ್ತನಲ್ಲದ ವ್ಯಕ್ತಿಯೊಬ್ಬ ಪ್ರಶ್ನೆ ಕೇಳಲು ಮುಂದಾಗಿ ಥಳಿತಕ್ಕೊಳಗಾದ ಘಟನೆ ನಡೆದಿದೆ

samachara

samachara

ಇತ್ತೀಚಿನ ದಿನಗಳಲ್ಲಿ ಸಂಯಮ ಕಳೆದುಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹೆಸರು ಹಾಳು ಮಾಡಿಕೊಳ್ಳುತ್ತಿರುವ ಪತ್ರಕರ್ತರ ಪಟ್ಟಿಗೆ ಇದೊಂದು ಹೊಸ ಸೇರ್ಪಡೆ. ಬೆಂಗಳೂರು ಪ್ರೆಸ್‌ ಕ್ಲಬ್‌ ಆವರಣದಲ್ಲೇ ವ್ಯಕ್ತಿಯೊಬ್ಬರಿಗೆ ಪ್ರೆಸ್‌ ಕ್ಲಬ್‌ ಸಿಬ್ಬಂದಿ ಥಳಿಸಿದ್ದಾರೆ. ಪ್ರೆಸ್‌ ಕ್ಲಬ್‌ನಲ್ಲಿದ್ದ ಎಲ್ಲಾ ಪತ್ರಕರ್ತರ ಮುಂದೆಯೇ ಈ ಘಟನೆ ನಡೆದರೂ, ಪತ್ರಕರ್ತರು ಕಂಡರೂ ಕಾಣದಂತಿದ್ದರು. ‘ಸಮಾಚಾರ’ದ ಸಿಬ್ಬಂದಿಯೂ ಕೂಡ ಘಟನೆಗೆ ಸಾಕ್ಷಿಯಾದರು.

ಎಲ್ಲ ವ್ಯಕ್ತಿಗಳೂ ಎಲ್ಲಾ ಕಾಲಕ್ಕೂ ಸಂಯಮ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೆಂದು ಒಬ್ಬ ವ್ಯಕ್ತಿಯ ಮೇಲೆ ಹಲ್ಲೆ ಮಾಡುವ ಹಕ್ಕನ್ನು ಯಾರೂ ಹೊಂದಿರುವುದಿಲ್ಲ. ಜತೆಗೆ ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಸಂವಿಧಾನದ ಮೂರು ಪ್ರಮುಖ ಅಂಗಗಳ ಮೇಲೆ ನಂಬಿಕೆ ಕಳೆದುಕೊಂಡಾಗ ಮಾತ್ರ. ಹಾಗಿದ್ದರೆ, ಪತ್ರಿಕಾರಂಗ, ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಮೇಲೆ ನಂಬಿಕೆ ಇಟ್ಟಿಲ್ಲವೆಂದು ಅರ್ಥವೇ? ಹೀಗೊಂದು ಪ್ರಶ್ನೆ ಶನಿವಾರ ನಡೆದ ಘಟನೆಯಿಂದ ಎದ್ದರೆ ಆಶ್ಚರ್ಯವಿಲ್ಲ.

ಚುನಾವಣಾ ಆಯೋಗ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ಮಾಡಿಕೊಂಡಿರುವ ಸಿದ್ಧತೆ ಮತ್ತು ರೂಪುರೇಷೆಗಳ ಬಗ್ಗೆ ಪತ್ರಿಕಾಗೋಷ್ಠಿ ಏರ್ಪಡಿಸಿತ್ತು. ಯಕ್ಷಗಾನ ಮತ್ತು ಬ್ಯಾಂಡ್‌ ಮೂಲಕ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಮತ್ತು ಇತರ ಚುನಾವಣಾ ಆಯೋಗದ ಅಧಿಕಾರಿಗಳನ್ನು ಪ್ರೆಸ್‌ ಕ್ಲಬ್‌ಗೆ ಬರಮಾಡಿಕೊಳ್ಳಲಾಯಿತು. ಪ್ರೆಸ್‌ ಕ್ಲಬ್‌ ಸದಸ್ಯರು ಮತ್ತು ಆಡಳಿತ ಮಂಡಳಿ ಈ ಏರ್ಪಾಡನ್ನು ಮಾಡಿತ್ತು.

ಪತ್ರಿಕಾಗೋಷ್ಠಿ ಆರಂಭಕ್ಕೂ ಮುನ್ನ ಪ್ರೆಸ್‌ ಕ್ಲಬ್‌ ಅಧ್ಯಕ್ಷರಾದ ಸದಾಶಿವ ಶೆಣೈ ಪ್ರಾಸ್ತಾವಿಕ ಭಾಷಣ ಮಾಡಿ ಚುನಾವಣಾಧಿಕಾರಿಗಳನ್ನು ಸ್ವಾಗತಿಸಿದರು. ನಂತರ ಸಂಜೀವ್‌ ಕುಮಾರ್‌ ಕೆಲ ಸಮಯದ ಕಾಲ ಚುನಾವಣೆಯ ರೂಪುರೇಷೆಗಳ ಬಗ್ಗೆ ಮಾತನಾಡಿದರು. ನಂತರ ಪತ್ರಕರ್ತರು ಪ್ರಶ್ನೆಗಳನ್ನು ಕೇಳಲು ಮುಂದಾದರು. ಶೇಕಡ 50%ಗಿಂತ ಹೆಚ್ಚಿನ ಮಂದಿ ಚುನಾವಣಾ ಆಯೋಗ ಮಾಡಿದ್ದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಲಿಲ್ಲ. ಅದಕ್ಕೆ ಕಾರಣ ಮತ್ತು ಮುಂದೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಪತ್ರಕರ್ತರೊಬ್ಬರು ಪ್ರಶ್ನಿಸಿದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಂಜೀವ್‌ ಕುಮಾರ್‌, ಸಿಬ್ಬಂದಿಗಳಿಗೆ ತರಬೇತಿ ನೀಡುತ್ತಿದ್ದು, ಮತ್ತೆ ಪರೀಕ್ಷೆ ಮಾಡಲಾಗುತ್ತದೆ. ಎಲ್ಲರೂ ಈ ಬಾರಿ ಉತ್ತೀರ್ಣರಾಗುವ ಭರವಸೆಯಿದೆ ಎಂದರು. ನಂತರ ಚುನಾವಣೆ ಅಭ್ಯರ್ಥಿಗಳು ಚುನಾವಣೆಗೆ ಖರ್ಚು ಮಾಡಲು ನಿಗದಿ ಪಡಿಸಿರುವ 28 ಲಕ್ಷನ ರೂ. ಸಾಕಾಗುವುದಿಲ್ಲ. ಮತ್ತು ಅದು ಅನೈಸರ್ಗಿಕ ಲೆಕ್ಕಾಚಾರ ಎಂಬ ಪ್ರಶ್ನೆಗೆ, ಕೇಂದ್ರ ಚುನಾವಣಾ ಆಯೋಗಕ್ಕೆ ಮಾತ್ರ ಅದರ ಬಗ್ಗೆ ಮಾತನಾಡುವ ಹಕ್ಕಿದೆ ಎಂದರು. ಕೇಂದ್ರ ಚುನಾವಣಾ ಆಯೋಗವೇ ಚುನಾವಣೆ ಖರ್ಚನ್ನು ನಿಗದಿ ಮಾಡುತ್ತದೆ. ರಾಜ್ಯ ಆಯೋಗವಾಗಲೀ ಅಥವಾ ಬೇರಾವ ಅಧಿಕಾರಿಯಾಗಲೀ ಅದನ್ನು ನಿಗದಿ ಪಡಿಸಲು ಸಾಧ್ಯವಿಲ್ಲ ಎಂದರು.

ನಡೆದಿದ್ದೇನು?:

ಚುನಾವಣಾ ಆಯೋಗದ ಪತ್ರಿಕಾಗೋಷ್ಠಿ ನಡೆಯುತ್ತಿದೆ ಎಂಬ ಮಾಹಿತಿ ಮೇಲೆ ಪ್ರೆಸ್‌ ಕ್ಲಬ್‌ಗೆ ವೈದ್ಯ ಮತ್ತು ಸಾಮಾಜಿಕ ಹೋರಾಟಗಾರ ಡಾ. ಭಾನುಪ್ರಕಾಶ್‌ ಎ.ಎಸ್‌. ಬಂದಿದ್ದರು. ಪತ್ರಕರ್ತರ ಪ್ರಶ್ನೆಗಳ ನಡುವೆಯೇ ಭಾನುಪ್ರಕಾಶ್‌ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಅವರನ್ನು ಪ್ರಶ್ನಿಸಲು ಮುಂದಾದರು. ಆದರೆ ಇದಕ್ಕೆ ಅಲ್ಲಿ ನೆರೆದಿದ್ದ ಪತ್ರಕರ್ತರು ಮತ್ತು ಪ್ರೆಸ್‌ ಕ್ಲಬ್‌ ಸದಸ್ಯರು ಅಡ್ಡಿ ಪಡಿಸಿದರು. ಇದರಿಂದ ಸಿಟ್ಟಿಗೆದ್ದ ಭಾನು ಪ್ರಕಾಶ್‌ ತಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದಾಗಿ ಪ್ರತಿಭಟಿಸಿದರು.

ನಂತರ ಭಾನುಪ್ರಕಾಶ್‌ರನ್ನು ಬಲವಂತವಾಗಿ ಪ್ರೆಸ್‌ ಕ್ಲಬ್‌ ಆವರಣದಿಂದ ನೂಕಲಾಯಿತು. ಪ್ರೆಸ್‌ ಕ್ಲಬ್‌ ಅಧ್ಯಕ್ಷ ಸದಾಶಿವ ಶೆಣೈ ಪತ್ರಕರ್ತರನ್ನು ಹೊರತುಪಡಿಸಿ ಯಾರೂ ಪ್ರಶ್ನೆ ಕೇಳುವಂತಿಲ್ಲ ಎಂದರು. ನಂತರ ಭಾನುಪ್ರಕಾಶ್‌ರನ್ನು ‘ಸಮಾಚಾರ’ ಮಾತನಾಡಿಸಲು ನಿರ್ಧರಿಸಿತು. ಭಾರತದ ಸಂವಿಧಾನ ಪ್ರತಿಯೊಬ್ಬರಿಗೂ ಪ್ರಶ್ನಿಸುವ ಹಕ್ಕನ್ನು ನೀಡಿದೆ ಜತೆಗೆ ಯಾರೂ ಪ್ರಶ್ನಾತೀತರಲ್ಲ. ಈ ಕಾರಣಕ್ಕಾಗಿ ಭಾನು ಪ್ರಕಾಶ್‌ರನ್ನು ಮಾತನಾಡಿಸಿದಾಗ ಅವರ ಹತಾಶೆ ಮತ್ತು ಸಾಮಾಜಿಕ ಕಳಕಳಿ ಅರಿವಾಯಿತು.

‘ಸಮಾಚಾರ’ದ ಜತೆ ಮಾತನಾಡಿದ ಭಾನುಪ್ರಕಾಶ್‌, “ಎಲೆಕ್ಟ್ರಾನಿಕ್‌ ವೋಟಿಂಗ್‌ ಮಿಷನ್‌ ಬಳಕೆಯಿಂದ ಪ್ರಜಾಪ್ರಭುತ್ವ ಅವನತಿಯತ್ತ ಸಾಗುತ್ತಿದೆ. ವಿವಿಪ್ಯಾಟ್‌ ಬಳಕೆಯೂ ಅಷ್ಟೇ ಮಾರಕವಾಗಿದೆ. ವಿವಿಪ್ಯಾಟ್‌ಗಳಲ್ಲಿ ಮುದ್ರಣವಾಗುವ ಚೀಟಿಗಳನ್ನು ಲೆಕ್ಕ ಹಾಕಿ ಮತದಾನದ ಫಲಿತಾಂಶವನ್ನು ಹೇಳಲಿ. ಅದು ಸಂವಿಧಾನ ಬದ್ಧವಾಗಿರುತ್ತದೆ. ಆದರೆ ವಿವಿಪ್ಯಾಟ್‌ನಲ್ಲಿ ಏನಿದೆ ಎಂಬುದನ್ನೂ ತೋರಿಸದೇ ಫಲಿತಾಂಶ ನೀಡುವುದೂ ಸರಿಯಲ್ಲ. ಜತೆಗೆ ಒಬ್ಬ ವ್ಯಕ್ತಿ ಯಾರಿಗೆ ಮತ ಹಾಕಿದ್ದಾನೆ ಎಂಬುದನ್ನೂ ಈ ವಿವಿಪ್ಯಾಟ್‌ ಮೂಲಕ ತಿಳಿಯಬಹುದು. ಇದರಿಂದ ಮತದಾನದ ಗೌಪ್ಯತೆ ಹಾಳಾಗುತ್ತದೆ,” ಎಂದರು.

ವಿವಿ ಪ್ಯಾಟ್‌ಗಳ ಬಳಕೆ ಮತ್ತು ಮತ ಎಣಿಕೆಗೆ ಅನುಸರಿಸುತ್ತಿರುವ ನಿಯಮಗಳಲ್ಲಿ ಬದಲಾವಣೆ ತರುವಂತೆ ಕೋರಿ ಭಾನು ಪ್ರಕಾಶ್‌ ಕಳೆದ ಹಲವು ವರ್ಷಗಳಿಂದ ಚುನಾವಣಾಧಿಕಾರಿಗಳಿಗೆ ಪತ್ರಗಳನ್ನು ಬರೆಯುತ್ತಲೇ ಇದ್ದಾರೆ. ಆದರೆ ಇದುವರೆಗೂ ಸಮರ್ಪಕವಾದ ಉತ್ತರ ಮಾತ್ರ ಬಂದಿಲ್ಲ, ಎನ್ನುತ್ತಾರೆ ಭಾನುಪ್ರಕಾಶ್‌.

“ಪ್ರಶ್ನೆ ಕೇಳುವುದರಲ್ಲಿ ತಪ್ಪೇನಿದೆ. ಪತ್ರಕರ್ತರು ಸತ್ಯದ ಪರ ನಿಲ್ಲಬೇಕು. ಆದರೆ ಪತ್ರಕರ್ತರು ಕೂಡ ಪ್ರಶ್ನೆಗಳನ್ನು ಕೇಳದಂತೆ ತಡೆಯುವುದು ಯಾವ ಪ್ರಜಾಪ್ರಭುತ್ವ. ಎಷ್ಟು ಸಾರಿ ಚುನಾವಣೆ ಆಯೋಗಕ್ಕೆ ಮನವಿ ಮಾಡಿದರೂ ಸಮರ್ಪಕ ಪ್ರತಿಕ್ರಿಯೆ ಲಭ್ಯವಾಗುತ್ತಿಲ್ಲ. ಭಾರತದ ಪ್ರಜಾಪ್ರಭುತ್ವ ಕಗ್ಗೊಲೆಯಾಗುತ್ತಿದೆ. ಯೂರೋಪ್‌ನಲ್ಲಿ ಇಂದಿಗೂ ಬ್ಯಾಲಟ್‌ ಪೇಪರನ್ನು ಮತದಾನಕ್ಕೆ ಬಳಸಲಾಗುತ್ತಿದೆ. ಅದಕ್ಕೆ ಕಾರಣ ಬ್ಯಾಲಟ್‌ ಪೇಪರ್‌ ಪಾರದರ್ಶಕವಾಗಿರುತ್ತವೆ. ಭಾರತದಲ್ಲೂ ಮತ್ತೆ ಬ್ಯಾಲಟ್‌ ಪೇಪರ್‌ ಮತದಾನ ಮಾಡಿದರೆ ಪ್ರಜಾಪ್ರಭುತ್ವ ಮತ್ತೆ ಸದೃಢವಾಗುತ್ತದೆ,” ಎನ್ನುತ್ತಾರೆ ಭಾನುಪ್ರಕಾಶ್‌.

ಇಷ್ಟಕ್ಕೂ ಭಾನು ಪ್ರಕಾಶ್‌ ಸಾಮಾಜಿಕ ಕಳಕಳಿಯಿಂದಲೇ ಹೋರಾಟ ಮಾಡುತ್ತಿದ್ದಾರೆ. ಇದರ ಹಿಂದೆ ಪಿತೂರಿಯಾಗಲೀ ಅಥವಾ ಪೂರ್ವಾಗ್ರಹವಾಗಲೀ ಇಲ್ಲ. ಆದರೂ ಇಂದು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಘಟನೆ ಭಾನುಪ್ರಕಾಶ್‌ರಂತ ಹಲವು ಸಾಮಾಜಿಕ ಕಾರ್ಯಕರ್ತರಿಗೆ ಪತ್ರಿಕಾರಂಗದ ಮೇಲೂ ನಂಬಿಕೆ ಕಳೆದುಕೊಳ್ಳಲು ಪ್ರೇರೇಪಿಸಬಹುದು.

ಎಲ್ಲಾ ಘಟನೆ ಆದ ನಂತರ ಚುನಾವಣಾ ಅಧಿಕಾರಿ ಸಂಜೀವ್‌ ಕುಮಾರ್‌ ಕಾರ್‌ನ ಮುಂದೆಯೇ ಕುಳಿತು ಭಾನುಪ್ರಕಾಶ್‌ ಪ್ರತಿಭಟನೆ ಮಾಡಿದ್ದಾರೆ. ನಂತರ ಪತ್ರಿಕಾಗೋಷ್ಠಿ ಮುಗಿದ ನಂತರ ಬಂದ ಸಂಜೀವ್‌ ಕುಮಾರ್‌ ಚುನಾವಣಾ ಆಯೋಗಕ್ಕೆ ಬರುವಂತೆ ಭಾನು ಪ್ರಕಾಶ್‌ಗೆ ತಿಳಿಸಿದ್ದಾರೆ. ಭಾನುಪ್ರಕಾಶ್‌ ವಿವಿಪ್ಯಾಟ್‌ ಮತ್ತು ಇವಿಎಂಗಳ ಬಗ್ಗೆ ತಪ್ಪು ತಿಳುವಳಿಕೆ ಹೊಂದಿದ್ದಾರೆ, ಅದಕ್ಕೆ ಸಮಂಜಸ ಉತ್ತರವನ್ನು ಚುನಾವಣಾ ಆಯೋಗದಲ್ಲಿ ನೀಡುವುದಾಗಿ ತಿಳಿಸಿ ಸಂಜೀವ್‌ ಕುಮಾರ್‌ ತೆರಳಿದ್ದಾರೆ.

ಪ್ರೆಸ್‌ ಕ್ಲಬ್‌ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೇವಲ ಪತ್ರಕರ್ತರಿಗೆ ಮಾತ್ರ ಅವಕಾಶವಿರುತ್ತದೆ. ಪ್ರೆಸ್‌ ಕ್ಲಬ್‌ ಆಡಳಿತ ಮಂಡಳಿ ತೆಗೆದುಕೊಂಡ ನಿರ್ಣಯವನ್ನು ಅಲ್ಲಗಳೆಯುವಂತಿಲ್ಲ. ಆದರೆ ಪ್ರಶ್ನಿಸಲು ಮುಂದಾದ ಭಾನುಪ್ರಕಾಶ್‌ ಮೇಲೆ ಹಲ್ಲೆ ಮಾಡಿರುವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಸಹೋದ್ಯೋಗಿ ಪತ್ರಕರ್ತರ ಮೇಲೆ ಮತ್ತು ಪ್ರೆಸ್‌ ಕ್ಲಬ್‌ ಆಡಳಿತ ಮಂಡಳಿಯ ಮೇಲೆ ಅಪಾರ ಗೌರವವನ್ನಿಟ್ಟುಕೊಂಡೇ ‘ಸಮಾಚಾರ’ ಈ ವರದಿಯನ್ನು ಪ್ರಕಟಿಸುತ್ತಿದೆ. ಯಾವುದೋ ಒಂದು ಘಟನೆಯಿಂದ ಇಡೀ ಪತ್ರಿಕೋದ್ಯಮಕ್ಕೆ ಮಸಿಯಾಗಬಾರದು ಅಥವಾ ಯಾವುದೇ ವ್ಯಕ್ತಿಗೆ ಸಂವಿಧಾನದ ನಾಲ್ಕನೇ ಅಂಗದ ಮೇಲೆ ನಂಬಿಕೆ ನಶಿಸಿಹೋಗಬಾರದು ಎಂಬ ಕಾರಣಕ್ಕೆ ಈ ವರದಿಯನ್ನು ಮಾಡಲು ‘ಸಮಾಚಾರ’ ಮುಂದಾಗಿದೆ.