samachara
www.samachara.com
‘ಕಸ್ಟಮೈಸ್ಡ್‌’ ವ್ಯಾಪಾರಕ್ಕಿಳಿದು ತಗಲಾಕ್ಕೊಂಡ ಬಿಟಿವಿ: ಬುದ್ದಿವಂತ ರಾಜಕಾರಣಿಗಳು, ದಡ್ಡ ಪತ್ರಕರ್ತರು!
ಮೀಡಿಯಾ 2.0

‘ಕಸ್ಟಮೈಸ್ಡ್‌’ ವ್ಯಾಪಾರಕ್ಕಿಳಿದು ತಗಲಾಕ್ಕೊಂಡ ಬಿಟಿವಿ: ಬುದ್ದಿವಂತ ರಾಜಕಾರಣಿಗಳು, ದಡ್ಡ ಪತ್ರಕರ್ತರು!

ಒಬ್ಬ ಪ್ರಬುದ್ಧ ವೀಕ್ಷಕ ಹುಟ್ಟದ ಹೊರತು, ಪ್ರಬುದ್ಧ ಮಾಧ್ಯಮವೂ ಬೆಳೆಯಲು ಸಾಧ್ಯವಿಲ್ಲ.

samachara

samachara

ಚುನಾವಣೆಗೂ ಮೊದಲು ಏನೆಲ್ಲಾ ನಡೆಯಬಹುದು ಎಂದು ನಿರೀಕ್ಷಿಸಲಾಗಿತ್ತೊ, ಅವು ಒಂದೊಂದಾಗಿ ತೆರೆಗೆ ಅಪ್ಪಳಿಸಲು ಆರಂಭಿಸಿವೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಜೆಡಿಎಸ್‌ ಶಾಸಕ ಸುರೇಶ್ ಬಾಬು ಪತ್ರಕರ್ತನ ವಿರುದ್ಧವೇ ಆಡಿಯೋ ‘ಕುಟುಕು ಕಾರ್ಯಾಚರಣೆ’ ನಡೆಸಿದ್ದಾರೆ. ಅಷ್ಟೇ ಅಲ್ಲ, ಅದನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡುವ ಮೂಲಕ, ಹೇಗೆ ಸುದ್ದಿ ವಾಹಿನಿ ಹಾಗೂ ಅದರ ವರದಿಗಾರ ತಮ್ಮಿಂದ ಮೂರು ಲಕ್ಷದ ‘ಪೇಯ್ಡ್‌ ನ್ಯೂಸ್ ಪ್ಯಾಕೇಜ್’ ಪಡೆಯಲು ಒತ್ತಡ ಹೇರಿದ್ದಾರೆ ಎಂಬುದನ್ನು ನಿರೂಪಿಸಿದ್ದಾರೆ.

ಸುಮಾರು 16 ನಿಮಿಷಗಳ ಮೇಲಿನ ಆಡಿಯೋ ದೂರವಾಣಿ ಸಂಭಾಷಣೆ ಅಲ್ಲ. ಬದಲಿಗೆ, ತುಮಕೂರು ಜಿಲ್ಲೆ ಬಿಟಿವಿ ವರದಿಗಾರ ವಾಗೀಶ್ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಜತೆ ಮುಖತಃ ನಡೆಸಿದ ಸಂಭಾಷಣೆಗಳು.

ಇದರಲ್ಲಿ, ತಮ್ಮ ವಾಹಿನಿ ನಿಮ್ಮ ಪರವಾಗಿ ಹೇಗೆ ಸುದ್ದಿಯನ್ನು ಭಿತ್ತರಿಸಲಿದೆ? ಹೇಗೆ ಉಳಿದ ವಾಹಿನಿಗಳು ನಿಮ್ಮ ವಿರುದ್ಧ ಮಾಡುವ ಸುದ್ದಿಯನ್ನು ಕೌಂಟರ್ ಮಾಡಲಿದೆ? ಅದಕ್ಕಾಗಿ ಮಾಡಿಕೊಂಡ ಸಿದ್ಧತೆಗಳೇನು? ಒಂದು ವೇಳೆ ಪ್ಯಾಕೇಜ್ ಒಪ್ಪಿಕೊಳ್ಳದಿದ್ದರೆ ನೆಗೆಟಿವ್ ಸುದ್ದಿಯನ್ನು ಹೇಗೆ ಮಾಡುತ್ತೀವಿ ಎಂಬ ವಿವರಗಳನ್ನು ವಾಗೀಶ್ ನೀಡಿದ್ದಾರೆ.

ಅಷ್ಟೆ ಅಲ್ಲ, ಇನ್ನೊಂದು ಹೆಜ್ಜೆ ಮುಂದೆ ಹೋಗುವ ವಾಗೀಶ್, ಪಕ್ಕದ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯೊಬ್ಬರ ಕುರಿತು ಅದಾಗಲೇ ಸಿದ್ಧವಾದ ಸುದ್ದಿಯನ್ನು ಓದಿ ಕೇಳಿಸುತ್ತಾರೆ. ಈ ಮೂಲಕ ತಾವು ಹೇಗೆ ಬೇಕಾದರೂ ಅಕ್ಷರಗಳನ್ನು ಕೆತ್ತಬಲ್ಲೆವು ಎಂಬುದನ್ನು ಸಾಭೀತುಪಡಿಸುವ ಪ್ರಯತ್ನ ಮಾಡುತ್ತಾರೆ ಪತ್ರಕರ್ತ ವಾಗೀಶ್.

ಎಲ್ಲಾ ಮಾತುಕತೆ ಮುಗಿಸಿದ ನಂತರ, ಅಲ್ಲಿಂದಲೇ ವಾಗೀಶ್ ಕರೆ ಮಾಡಿ (ಬಿಟಿವಿ ಕಚೇರಿಗೆ?) ‘ಸಾಹೇಬ್ರು ಒಪ್ಪಿಕೊಂಡಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ಸಾಮಾನ್ಯವಾಗಿ ‘ಪೇಯ್ಡ್‌ ನ್ಯೂಸ್‌’ಗಳು ಹೇಗೆ ಹುಟ್ಟುತ್ತವೆ ಎಂಬುದಕ್ಕೆ ಸಾಕ್ಷಿ ರೂಪದಲ್ಲಿ ವಾಗೀಶ್ ನಡೆಸಿದ ವಿಫಲ ಕಾರ್ಯಾಚರಣೆ ಕಣ್ಣೆದುರಿಗೆ ಇದೆ. ಅದರಲ್ಲೂ ಚುನಾವಣೆ ಸಮಯದಲ್ಲಿ ಅಭ್ಯರ್ಥಿಗಳ ಪರವಾಗಿ, ಇಲ್ಲವೇ ವಿರುದ್ಧವಾಗಿ ಸುದ್ದಿ ವಾಹಿನಿಗಳು ಸುದ್ದಿ ಭಿತ್ತರಣೆ ಮಾಡುತ್ತಿದ್ದರೆ, ಅದರ ಹಿಂದೆ ಏನೆಲ್ಲಾ ಮಾತುಕತೆಗಳು ನಡೆದಿರುವ ಸಾಧ್ಯತೆಗಳು ಇರುತ್ತವೆ ಎಂಬುದನ್ನು ಈ ಸಂಭಾಷಣೆ ಸ್ಪಷ್ಟವಾಗಿ ನಿರೂಪಿಸುತ್ತಿದೆ.

ಒಬ್ಬ ಪ್ರಬುದ್ಧ ವೀಕ್ಷಕ ಹುಟ್ಟದ ಹೊರತು, ಪ್ರಬುದ್ಧ ಮಾಧ್ಯಮವೂ ಬೆಳೆಯಲು ಸಾಧ್ಯವಿಲ್ಲ.

ದಾರಿ ತಪ್ಪಿದವರು, ತಪ್ಪಿಸಿದವರು:

ಪತ್ರಕರ್ತರು ಸುದ್ದಿಯನ್ನು ಬಿಟ್ಟು ವ್ಯಾಪಾರಕ್ಕಿಳಿದರೆ ಸಹಜವಾಗಿಯೇ ಆಗುವ ಯಡವಟ್ಟುಗಳಿವು. ಕಾರ್ಪೊರೇಟ್ ಮಾದ್ಯಮ ಸಂಸ್ಥೆಗಳು ತಮ್ಮ ಮಾರ್ಕೆಟಿಂಗ್ ವಿಭಾಗದ ಮೂಲಕ ಇದೇ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತವೆ. ಅವುಗಳಲ್ಲಿ ಕೆಲಸ ಮಾಡುವ ಪತ್ರಕರ್ತರು, ತಾವು ಮಾತ್ರ ಕೈ ಶುದ್ಧ ಇಟ್ಟುಕೊಂಡ ಭ್ರಮೆಯಲ್ಲಿ ಪತ್ರಿಕೋದ್ಯಮದ ಪಾಠಗಳನ್ನು ಮಾಡುತ್ತಿರುತ್ತಾರೆ.

ಆದರೆ ಬಿಟಿವಿಯಂತಹ ಸ್ಥಳೀಯ ಸಂಸ್ಥೆಗಳಿಗೆ ಇನ್ನೂ ಅಂತಹ ‘ವೃತ್ತಿಪರತೆ’ಯನ್ನು ರೂಢಿಸಿಕೊಳ್ಳಲು ಸಾಧ್ಯವಾಗಿಲ್ಲ. ಪರಿಣಾಮ ವರದಿ ಮಾಡಬೇಕಾದ ಪತ್ರಕರ್ತನೇ, ಮಾರ್ಕೆಟಿಂಗ್‌ ಮಾಡಲು ಇಳಿಸಲ್ಪಡುತ್ತಾನೆ. ಸಾರ್ವಜನಿಕವಾಗಿ ಮುಖಭಂಗಕ್ಕೆ ಈಡಾಗುತ್ತಾನೆ.

ಮೇಲಿನ 16 ನಿಮಿಷಗಳ ಸಂಭಾಷಣೆಯಲ್ಲಿ ಬಹುತೇಕ ಸಮಯವನ್ನು ಬಿಟಿವಿಯ ವರದಿಗಾರ ವಾಗೀಶ್ ಬಳಸಿಕೊಂಡಿದ್ದಾರೆ. ಒಬ್ಬ ವರದಿಗಾರನ ಒಳಗಿರುವ ರಾಜೀರಹಿತ ಮನೋಭಾವವನ್ನು ಪಕ್ಕಕ್ಕಿಟ್ಟು ಅವರು ವ್ಯವಹಾರದ ಮಾತುಗಳನ್ನಾಡುತ್ತಾರೆ. ಎಲ್ಲಿಯೂ ವೈಯಕ್ತಿಕ ಮಟ್ಟದಲ್ಲಿ ಹಣ ಬೇಡಿಕೆಯನ್ನು ವಾಗೀಶ್ ಮುಂದಿಡುವುದಿಲ್ಲ ಎಂಬುದು ಗಮನಾರ್ಹ. ಎಲ್ಲವೂ ಸಂಸ್ಥೆಗಾಗಿಯೇ ಕೇಳುತ್ತಿದ್ದೇನೆ ಎಂಬುದನ್ನು ವಾಗೀಶ್ ಪದೇ ಪದೇ ಸ್ಪಷ್ಟಪಡಿಸುತ್ತಾರೆ.

ಆದರೆ ಆರಂಭದಿಂದಲೂ, ಖೆಡ್ಡಾವನ್ನು ತೋಡಿಕೊಂಡೇ ಕುಳಿತ ಶಾಸಕ ಬಾಬು ಸಂಯಮದಿಂದ ಕೇಳಿಸಿಕೊಳ್ಳುತ್ತಾರೆ. ಎಲ್ಲವೂ ಸುಸೂತ್ರವಾಗಿ ರೆಕಾರ್ಡ್‌ ಆಗುತ್ತಿದೆ ಎಂಬುದನ್ನು ಅವರು ಖಾತ್ರಿ ಪಡಿಸಿಕೊಂಡಿದ್ದಾರೆ.

ಒಟ್ಟಾರೆ ಅರ್ಥ ಮಾಡಿಕೊಳ್ಳಬೇಕಿರುವುದು ಇಷ್ಟೆ. ರಾಜಕಾರಣಿಗಳು ಬುದ್ಧಿವಂತರು. ಅವರಿಗೆ ಯಾರನ್ನು ಎಷ್ಟು ಪ್ರಮಾಣದಲ್ಲಿ ಯಾವ ಸಂದರ್ಭದಲ್ಲಿ ಬಳಸಿಕೊಳ್ಳಬೇಕು ಎಂಬುದು ಬೇರೆಯವರಿಗಿಂತ ಚೆನ್ನಾಗಿ ಗೊತ್ತಿದೆ.

ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ಪತ್ರಕರ್ತರು ಖೆಡ್ಡಾಗೆ ಬೀಳುವುದು ಅನಿವಾರ್ಯವಾಗಲಿದೆ. ಪತ್ರಕರ್ತರಿಗೆ ಸಂಪರ್ಕಗಳಿರಬೇಕು, ಸಂಬಂಧಗಳಲ್ಲ. ಪತ್ರಕರ್ತರು ಸುದ್ದಿಯ ಮೂಲಗಳನ್ನು ಇಟ್ಟುಕೊಳ್ಳಬೇಕು, ವ್ಯವಹಾರ ಮೂಲಗಳನ್ನು ಅಲ್ಲ.