samachara
www.samachara.com
ಸ್ಮೃತಿ ಇರಾನಿ ಮಣಿಸುವುದು ಅಮುಖ್ಯ; ಫೇಕ್‌ ನ್ಯೂಸ್ ತೊಡೆಯುವುದು ಮುಖ್ಯ!
ಮೀಡಿಯಾ 2.0

ಸ್ಮೃತಿ ಇರಾನಿ ಮಣಿಸುವುದು ಅಮುಖ್ಯ; ಫೇಕ್‌ ನ್ಯೂಸ್ ತೊಡೆಯುವುದು ಮುಖ್ಯ!

ಸುಳ್ಳು ಸುದ್ದಿಗಳು ಮತ್ತು ಅವುಗಳ ಸಾಮಾಜಿಕ ಪರಿಣಾಮಗಳು ಕಣ್ಣೆದುರಿಗಿದ್ದರೂ, ಪರಿಹಾರ ಕಾಣದ ಸ್ಥಿತಿಯಲ್ಲಿ ದಿಕ್ಕುಗೆಟ್ಟವರಂತೆ ದಿನಗಳನ್ನು ದೂಡಬೇಕಾಗಿ ಬಂದಿದೆ. ಇದು ಈ ಕಾಲಘಟ್ಟದ ದುರಂತ ಕೂಡ. 

ಪ್ರಶಾಂತ್ ಹುಲ್ಕೋಡು

ಪ್ರಶಾಂತ್ ಹುಲ್ಕೋಡು

ಕರ್ನಾಟಕದ ಮೋಡಕವಿದ ವಾತಾವರಣದಲ್ಲೂ ಚುನಾವಣೆಯ ಬಿಸಿ ಜೋರಾಗಿದೆ.

ಹೀಗಿರುವಾಗಲೇ, ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಫೇಕ್ ನ್ಯೂಸ್’ ಅಥವಾ ‘ಸುಳ್ಳು ಸುದ್ದಿ’ಗಳ ಸುತ್ತ ಮಹತ್ವದ ಘಟನೆಯೊಂದು ಮಂಗಳವಾರ ಜರುಗಿದೆ. ಯಾವುದು ಇಷ್ಟು ದಿನ ವರ್ಚುವಲ್ ಅನ್ನಿಸಿತ್ತೋ, ಅದು ದೊಡ್ಡ ಭೂತಾಕಾರವನ್ನು ಪಡೆದುಕೊಂಡಿದೆ. ಅದನ್ನು ನಿವಾರಿಸಿಕೊಳ್ಳಲು ಈಗ ಜಗತ್ತು ಹೊಸ ಅಲೋಚನೆಗೆ ತೆರೆದುಕೊಳ್ಳಲು ತೀರ್ಮಾನಿಸಿದೆ.

ರಿಪೋರ್ಟರ್ಸ್ ವಿತ್‌ಔಟ್‌ ಬಾರ್ಡರ್ಸ್ ಹಾಗೂ ಯುರೋಪಿನ ಪ್ರಮುಖ ಭಿತ್ತರಕರು ಜಂಟಿಯಾಗಿ, ಸುಳ್ಳು ಸುದ್ದಿಗಳನ್ನು ತೊಡೆಯುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದ್ದಾರೆ. ಮಂಗಳವಾರ, ಈ ನಿಟ್ಟಿನಲ್ಲಿ ‘ದಿ ಜರ್ನಲಿಸಂ ಟ್ರಸ್ಟ್ ಇನಿಶಿಯೇಟಿವ್‌ (ಜೆಐಟಿ) ಎಂಬ ಹೊಸ ಪ್ರಯತ್ನವನ್ನು ಹುಟ್ಟು ಹಾಕಿದ್ದಾರೆ.

ಏನಿದು ಬೆಳವಣಿಗೆ?:

ಸ್ಮೃತಿ ಇರಾನಿ ಮಣಿಸುವುದು ಅಮುಖ್ಯ; ಫೇಕ್‌ ನ್ಯೂಸ್ ತೊಡೆಯುವುದು ಮುಖ್ಯ!

ಕಳೆದ ವಾರಾಂತ್ಯದಲ್ಲಿ ರಾಜ್ಯದಲ್ಲಿ ಸುದ್ದಿ ಕೇಂದ್ರಕ್ಕೆ ಬಂದಿದ್ದು ‘ಪೋಸ್ಟ್‌ ಕಾರ್ಡ್ ಡಾಟ್‌ ನ್ಯೂಸ್’ ಎಂಬ ಸುದ್ದಿ ತಾಣದ ಸಂಸ್ಥಾಪಕ, ಸಂಪಾದಕ ವಿಕ್ರಂ ಮಹೇಶ್ ಹೆಗಡೆ ಬಂಧನ. ಅದಕ್ಕೆ ಕಾರಣವಾಗಿದ್ದು, ಆತ ಪ್ರಕಟಿಸಿದ್ದ ಸುದ್ದಿಯೊಂದರ ಸತ್ಯಾಸತ್ಯತೆ ಹಾಗೂ ಪರಿಣಾಮಗಳನ್ನು ವಿರೋಧಿಸಿ ದೂರು ದಾಖಲಾಸಿದ್ದು. ಐಟಿ ಕಾಯ್ದೆ ಅಡಿಯಲ್ಲಿ ಮಹೇಶ್ ಬಂಧನವೂ ನಡೆಯುವ ಮೂಲಕ, ಫೇಕ್ ನ್ಯೂಸ್ ಅಥವಾ ಸುಳ್ಳು ಸುದ್ದಿ ಎಂಬ ವಿಚಾರ ರಾಜ್ಯದಲ್ಲಿ ಅಲ್ಲಲ್ಲಿ ಹೆಚ್ಚು ಚರ್ಚೆಯಾಯಿತು.

ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತದೇ ಎಡ- ಬಲದ ಮೆಮೆಗಳಿಗೆ ವಿಷಯ ಸೀಮಿತವಾಯಿತು.

ಹೀಗಿರುವಾಗಲೇ, ಸೋಮವಾರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ, ಸುಳ್ಳು ಸುದ್ದಿಗಳನ್ನು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಹೊಸ ಕಾನೂನು ರೂಪಿಸುವ ಹೇಳಿಕೆ ನೀಡಿತು. ಇದೊಂದು ರೀತಿ, ಬೆಕ್ಕೇ ತನ್ನ ಕುತ್ತಿಗೆಗೆ ಗಂಟೆ ಕಟ್ಟಿಕೊಳ್ಳುವ ಪ್ರಯತ್ನದಂತೆ ಕಾಣಿಸುತ್ತಿತ್ತು.

ಸಹಜವಾಗಿಯೇ ಇಲಾಖೆಯ ನಿರ್ಧಾರ ವಿವಾದಕ್ಕೆ ಎಡೆಮಾಡಿಕೊಡುವ ಹಾದಿಯಲ್ಲಿತ್ತು. ಅಷ್ಟರೊಳಗೆ ಕೇಂದ್ರ ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಿತು. ಇದನ್ನು ‘ಮಾಧ್ಯಮ ಸ್ವಾತಂತ್ರ್ಯದ ವಿಜಯ’ ಎಂದು ಆಂಗ್ಲ ಸುದ್ದಿ ಸಂಸ್ಥೆಗಳು ಹೇಳುತ್ತಿವೆ.

“ಒಂದು ಕಡೆ ಸುಳ್ಳು ಸುದ್ದಿ ಎಂಬುದು ಅಪಾಯಕಾರಿ ಮಟ್ಟ ತಲುಪಿರುವ ಸಮಯ ಇದು. ಹಾಗಂತ ಕೇಂದ್ರ ಸರಕಾರ ಸುಳ್ಳು ಸುದ್ದಿಯ ಹೆಸರಿನಲ್ಲಿ ಮಾಧ್ಯಮಗಳ ಸ್ವಾತಂತ್ರ್ಯಕ್ಕೇ ಕೈ ಹಾಕುವುದನ್ನೂ ಒಪ್ಪಲು ಸಾಧ್ಯವಿಲ್ಲ. ಉಳಿದಿರುವುದು ಒಂದೇ ಹಾದಿ ಸ್ವಯಂ ನಿರ್ಬಂಧ. ಈ ನಿಟ್ಟಿನಲ್ಲಿ ಯುರೋಪಿನ ಪ್ರಮುಖ ನಗರ ಬ್ರುಸೆಲ್ಸ್‌ನಲ್ಲಿ ಮಂಗಳವಾರ ನಡೆದ ಈ ಬೆಳವಣಿಗೆ ಗಮನಾರ್ಹ,’’ ಎನ್ನುತ್ತಾರೆ ಹಿರಿಯ ಪತ್ರಕರ್ತರೊಬ್ಬರು.

ಸ್ವಯಂ ನಿಯಂತ್ರಣ ಹೇಗೆ?:

ಪ್ರಮುಖ ಮಾಧ್ಯಮಗಳು ಸ್ವಯಂ ನಿಯಂತ್ರಣ ಹಾಕಿಕೊಳ್ಳದಿದ್ದರೆ ಎದುರಾಗಬಹುದಾದ ವಿರೋಧ ಹೀಗಿರುತ್ತದೆ. 
ಪ್ರಮುಖ ಮಾಧ್ಯಮಗಳು ಸ್ವಯಂ ನಿಯಂತ್ರಣ ಹಾಕಿಕೊಳ್ಳದಿದ್ದರೆ ಎದುರಾಗಬಹುದಾದ ವಿರೋಧ ಹೀಗಿರುತ್ತದೆ. 

ಸದ್ಯ ಲಭ್ಯ ಇರುವ ಮಾಹಿತಿ ಪ್ರಕಾರ, ರಿಪೋರ್ಟರ್ಸ್‌ ವಿತ್‌ಔಟ್ ಬಾರ್ಡರ್ಸ್‌, ಏಜೆನ್ಸಿ ಫ್ರಾನ್ಸ್ ಪ್ರೆಸೆ (ಎಎಫ್‌ಪಿ), ಯುರೋಪಿಯನ್ ಬ್ರಾಡ್‌ಕಾಸ್ಟಿಂಗ್‌ ಯೂನಿಯನ್ (ಇಬಿಯು) ಹಾಗೂ ಗ್ಲೋಬಲ್ ಎಡಿಟರ್ಸ್ ನೆಟ್ವರ್ಕ್‌ ಒಳಗೊಂಡಂತೆ ಹೊಸ ವೇದಿಕೆಯೊಂದನ್ನು ಹುಟ್ಟುಹಾಕುವ ಪ್ರಯತ್ನ ಮಾಡಿದ್ದಾರೆ.

‘ದಿ ಜರ್ನಲಿಸಂ ಟ್ರಸ್ಟ್ ಇನಿಶಿಯೇಟಿವ್‌ (ಜೆಐಟಿ)‘ ಎಂಬುದು ಅದಕ್ಕೆ ಇಟ್ಟಿರುವ ಹೆಸರು. ಪತ್ರಿಕೋದ್ಯಮದ ಬಗೆಗೆ ನಂಬಿಕೆ ಮರಳಿ ಸ್ಥಾಪಿಸುವ ಪ್ರಯತ್ನದ ಭಾಗವಾಗಿ ಕಾರ್ಯಕ್ರಮಗಳನ್ನು ರೂಪಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡಲಾಗಿದೆ. ಜೆಐಟಿ ಹೆಸರಿನಲ್ಲಿ ಯುರೋಪಿನ ಮಾಧ್ಯಮ ಸಂಸ್ಥೆಗಳಿಗೆ ಪ್ರಮಾಣ ಪತ್ರವನ್ನೂ ನೀಡುವ ಕೆಲಸ ಮುಂದಿನ ದಿನಗಳಲ್ಲಿ ನಡೆಯಲಿದೆ.

ಇದೊಂದು ರೀತಿಯಲ್ಲಿ ಸರಕಾರ, ರಾಜಕಾರಣಿಗಳು ಹಾಗೂ ಉದ್ಯಮಿಗಳು ಒಂದಾಗಿ ಮಾಧ್ಯಮಗಳನ್ನು ಕಾನೂನಿನ ಅಡಿಯಲ್ಲಿ ನಿಯಂತ್ರಿಸಲು ಹೊರಡುವ ಮೊದಲೇ ಸ್ವಯಂ ನಿಯಂತ್ರಣ ಹೇರಿಕೊಳ್ಳುವ ಪ್ರಕ್ರಿಯೆ.

ನಮ್ಮ ಸ್ಥಿತಿ ಹೇಗಿದೆ?:

ಬೆಂಗಳೂರು ಪ್ರೆಸ್ ಕ್ಲಬ್. 
ಬೆಂಗಳೂರು ಪ್ರೆಸ್ ಕ್ಲಬ್. 

ಇಂತಹ ಕೆಲಸವನ್ನು ಭಾರತದಲ್ಲಿ ಆರಂಭಿಸಬೇಕಾದವರು, ಸರಕಾರದ ಹೇಳಿಕೆಯನ್ನು ಖಂಡಿಸುವುದರಲ್ಲಿಯೇ ಮುಳುಗಿ ಹೋಗಿದ್ದಾರೆ. ಈಗ ಕೇಂದ್ರ ಸರಕಾರ ವಾಪಾಸ್ ಪಡೆದ ಹಿನ್ನೆಲೆಯಲ್ಲಿ ವಿಜಯೋತ್ಸವ ನಡೆಸಿ ಮತ್ತೆ ನಿದ್ದೆಗೆ ಜಾರಲಿದ್ದಾರೆ.

ಕರ್ನಾಟಕದಲ್ಲಿಯೇ, ದೊಡ್ಡ ಸಂಖ್ಯೆಯಲ್ಲಿರುವ ಪತ್ರಕರ್ತರನ್ನು ಅವರವರ ಸಿಕ್ಕುಗಳಿಂದ ಬಿಡಿಸಿ, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಅದರ ಹೊಣೆಯನ್ನು ಹೊರಬೇಕಾದ ಸ್ಥಳೀಯ ಸಂಸ್ಥೆಗಳಾದ ಪ್ರೆಸ್‌ ಕ್ಲಬ್‌, ಕಾರ್ಯನಿರತ ಪತ್ರಕರ್ತರ ಸಂಘ, ರಿಪೋರ್ಟರ್ಸ್ ಗಿಲ್ಡ್‌ಗಳು ತಮ್ಮದೇ ವ್ಯೂಹದಲ್ಲಿ ಕಳೆದುಹೋಗಿವೆ. ಪತ್ರಕರ್ತರ ಸಹಕಾರ ಸಂಘ ಸಾಲ ನೀಡುವುದರಲ್ಲಿ, ವಸೂಲಿ ಮಾಡುವುದಷ್ಟೆ ತನ್ನ ಪರಮೋಚ್ಚ ದ್ಯೇಯ ಅಂದುಕೊಂಡಿದೆ.

ಹೀಗಿರುವಾಗ, ಸುಳ್ಳು ಸುದ್ದಿಗಳು ಮತ್ತು ಅವುಗಳು ಸಾಮಾಜಿಕವಾಗಿ ಬೀರುತ್ತಿರುವ ಪರಿಣಾಮಗಳು ಕಣ್ಣೆದುರಿಗಿದ್ದರೂ, ಪರಿಹಾರ ಕಾಣದ ಸ್ಥಿತಿಯಲ್ಲಿ ದಿನಗಳನ್ನು ದೂಡಬೇಕಾಗಿ ಬಂದಿದೆ. ಇದು ಈ ಕಾಲಘಟ್ಟದ ದುರಂತ ಕೂಡ.