samachara
www.samachara.com
ಶ್ರೀದೇವಿ (ಚಿತ್ರಕೃಪೆ: ಝೀ ನ್ಯೂಸ್)
ಶ್ರೀದೇವಿ (ಚಿತ್ರಕೃಪೆ: ಝೀ ನ್ಯೂಸ್)
ಮೀಡಿಯಾ 2.0

ನಟಿ ಶ್ರೀದೇವಿ ಸಾವು: ಭಾರತದ ಮಾಧ್ಯಮಗಳಿಗೆ ‘ಖಲೀಜ್ ಟೈಮ್ಸ್’ ಕಿವಿಮಾತು!  

ವಿಶ್ವನಾಥ್ ಬಿ. ಎಂ

ವಿಶ್ವನಾಥ್ ಬಿ. ಎಂ

ಭಾರತೀಯ ಮಾದ್ಯಮಗಳು ಮೂಗಿನ ನೇರಕ್ಕೆ ಒಂದು ಸುದ್ದಿಯನ್ನು ನೋಡುವುದನ್ನು ಇಂದಿಗೂ ಬಿಟ್ಟಿಲ್ಲ. ಬಹುತೇಕ ಪ್ರಕರಣಗಳಲ್ಲಿ ನ್ಯಾಯಾಧೀಶರಂತೆ ತೀರ್ಪು ನೀಡುವ ಮಟ್ಟಕ್ಕೂ ಹೋಗಿ, ಸಾಮಾಜಿಕವಾಗಿ ಛೀಮಾರಿ ಹಾಕಿಸಿಕೊಳ್ಳುತ್ತಲೇ ಇವೆ. ಇವೆಲ್ಲದರ ಮುಂದುವರೆದ ಭಾಗದಂತೆ, ಇದೀಗ ಅಂತರಾಷ್ಟ್ರೀಯ ಮಾಧ್ಯಮವಾದ ದುಬೈ ಮೂಲದ ‘ಖಲೀಜ್‌ ಟೈಮ್ಸ್‌’ನಿಂದ ಭಾರತೀಯ ಮಾಧ್ಯಮ ಬುದ್ಧಿವಾದ ಹೇಳಿಸಿಕೊಂಡಿದೆ.

ದುಬೈ ಪತ್ರಿಕೆ ‘ಖಲೀಜ್ ಟೈಮ್ಸ್’ ನಟಿ ಶ್ರೀದೇವಿ ಸಾವಿನ ಪ್ರಕರಣದಲ್ಲಿ ಭಾರತದ ಮಾದ್ಯಮಗಳನ್ನುದ್ದೇಶಿಸಿ ತನ್ನ ನಿಲುವನ್ನು ಪ್ರಕಟಿಸಿದೆ. ಪತ್ರಿಕೆಯ ಮುಖಪುಟದಲ್ಲಿಯೇ ‘ನ್ಯಾನೋ ಎಡಿಟ್’ ಎನ್ನುವ ಸಂಪಾದಕೀಯದಲ್ಲಿ, ಭಾರತದ ಮಾದ್ಯಮಗಳಿಗೆ ಅಗತ್ಯವಾದ ಸಲಹೆ ನೀಡಿದೆ. ಈ ಮೂಲಕ ಅಂತರಾಷ್ಟ್ರೀಯ ಮಾಧ್ಯಮ ವಲಯದಲ್ಲಿ ಭಾರತದ ಮಾಧ್ಯಮಗಳ ವಿಶ್ವಾಸಾರ್ಹತೆ ಈಗ ಚರ್ಚೆಗೆ ಬಂದಿದೆ. ಜೊತೆಗೆ, ಪರೋಕ್ಷವಾಗಿ ಭಾರತದ ಮಾಧ್ಯಮಗಳ ಮಾನವೂ ಈ ಮೂಲಕ ಹರಾಜಾಗಿದೆ ಎಂದು ಸದ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯೂ ನಡೆಯುತ್ತಿದೆ.

‘ಖಲೀಜ್ ಟೈಮ್ಸ್’ ಪತ್ರಿಕೆ ದುಬೈನ ಪ್ರಸಿದ್ಧ ದಿನಪತ್ರಿಕೆ. ದುಬೈನಲ್ಲಿ ಅಲ್‌ ಖಲೀಜ್‌, ಅಲ್‌ ಬಯನ್‌ ಮತ್ತು ಅಲ್‌ ಇತ್ತಿಹಾದ್‌ ಪತ್ರಿಕೆಗಳು ನಗರದಲ್ಲಿ ಅತಿ ಹೆಚ್ಚು ಪ್ರಸಾರವುಳ್ಳ ಅರೇಬಿಕ್‌ ಭಾಷೆಯ ಪತ್ರಿಕೆಗಳಾದರೆ, ಗಲ್ಫ್‌ ನ್ಯೂಸ್‌ ಮತ್ತು ಖಲೀಜ್‌ ಟೈಮ್ಸ್‌ ಪತ್ರಿಕೆಗಳು ಅತಿ ಹೆಚ್ಚು ಮುದ್ರಣವಾಗುವ ಆಂಗ್ಲ ಪತ್ರಿಕೆಗಳಾಗಿವೆ. ನಟಿ ಶ್ರೀದೇವಿ ಸಾವಿಗೆ ಸಂಬಂಧಪಟ್ಟಂತೆ ಭಾರತದ ಮಾದ್ಯಮಗಳು ಪ್ರಮುಖವಾಗಿ ಆಶ್ರಯಿಸಿದ್ದೆ ‘ಗಲ್ಫ್ ನ್ಯೂಸ್’ ಮತ್ತು ‘ಖಲೀಜ್ ಟೈಮ್ಸ್’ ಪತ್ರಿಕೆಗಳನ್ನು. ಆ ಪತ್ರಿಕೆಗಳು ನಟಿ ಶ್ರೀದೇವಿ ಸಾವಿನ ಕುರಿತು ಯಾವುದೇ ತೀರ್ಪು ನೀಡದೇ, ‘ತನಿಖಾ ವರದಿ’ ಮತ್ತು ‘ವಿಧಿ ವಿಜ್ಞಾನ ಪ್ರಯೋಗಾಲಯ’ದ ವರದಿಯನ್ನು ಮಾತ್ರ ಉಲ್ಲೇಖಿಸಿದ್ದವು. ಆದರೆ ಭಾರತದ ಮಾಧ್ಯಮಗಳು ಮಾತ್ರ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಮೂಲಗಳ ಹೆಸರಿನಲ್ಲಿಯೇ ಶ್ರೀದೇವಿ ಸಾವು ಹೃದಯಾಘಾತದಿಂದ/ಹೃದಯಸ್ತಂಭನದಿಂದಲೇ ಎಂದು ಶರಾ ಬರೆದು ಬಿಟ್ಟಿದ್ದವು. ಈ ಕುರಿತು ‘ಖಲೀಜ್ ಟೈಮ್ಸ್’ ಪತ್ರಿಕೆ ಇಂದಿನ ಸಂಚಿಕೆಯಲ್ಲಿ ತನ್ನ ನಿಲುವು ಪ್ರಕಟಿಸಿದೆ.

ಖಲೀಜ್ ಟೈಮ್ಸ್ ಸಲಹೆ : ಭಾರತೀಯ ನಟಿ ಶ್ರೀದೇವಿ ಅವರ ಸಾವು ನಿಜಕ್ಕೂ ದಿಗ್ಭ್ರಮೆ ಮೂಡಿಸಿದೆ. ಆದರೆ, ಭಾರತದ ಮಾಧ್ಯಮಗಳು ಯಾಕೆ ಶ್ರೀದೇವಿ ಸಾವಿನಲ್ಲಿ ತೀರ್ಪು ನೀಡುತ್ತಿವೆ. ನಟಿ ಶ್ರೀದೇವಿ ಅವರ ಸಾವಿನ ವಿಷಯಕ್ಕೆ ಸಂಬಂಧಪಟ್ಟಂತೆ ‘ತನಿಖಾ ಸಂಸ್ಥೆ’ ಸತ್ಯಾಸತ್ಯತೆಯನ್ನು ಹೇಳುವ ಮೊದಲೇ, ಭಾರತದ ಮಾಧ್ಯಮಗಳು ಶ್ರೀದೇವಿ ಸಾವಿನ ಕುರಿತು ತೀರ್ಪು ನೀಡುತ್ತಿವೆ. ತನಿಖಾಧಿಕಾರಿಗಳು ಸತ್ಯಾಸತ್ಯತೆಯನ್ನು ಪರೀಕ್ಷಿಸುತ್ತಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯ ಪ್ರಕಾರ, “ನಟಿ ಶ್ರೀದೇವಿ ಹೋಟೆಲ್ ಕೋಣೆಯ ಸ್ನಾನದ ತೊಟ್ಟಿಯಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದ್ದಾರೆ,” ಎಂದು ಹೇಳಿದೆ. ತನಿಖೆ ಮುಕ್ತಾಯವಾಗುವವರೆಗೂ ತಾಳ್ಮೆಯಿಂದಿರಲು ನಾವು ಭಾರತೀಯ ಮಾಧ್ಯಮಗಳಿಗೆ ಸಲಹೆ ನೀಡುತ್ತೇವೆ,” ಎಂದು ಖಲೀಜ್‌ ಟೈಮ್ಸ್ ತನ್ನ ಪುಟ್ಟ ಸಂಪಾದಕೀಯ ಬರಹದಲ್ಲಿ ಸಲಹೆಯನ್ನು ಭಾರತದ ಮಾಧ್ಯಮಗಳಿಗೆ ನೀಡಿದೆ.

ವಿಧಿವಿಜ್ಞಾನ ಪ್ರಯೋಗಾಲಯದ ವರದಿ (ಫಾರೆನ್ಸಿಕ್ ರಿಪೋರ್ಟ್) ಬರುವ ಮುನ್ನವೇ ಭಾರತದ ಮಾಧ್ಯಮಗಳು ಶ್ರೀದೇವಿ ಹೃದಯ ಸ್ತಂಭನದಿಂದ ಸಾವಿಗೀಡಾಗಿದ್ದಾರೆ ಎಂದು, ಇನ್ನೂ ಕೆಲವು ಪ್ರಮುಖ ಮಾಧ್ಯಮಗಳು ಶ್ರೀದೇವಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಶರಾ ಬರೆದಿದ್ದವು. ಹೃದಯ ಸ್ತಂಭನ ಮತ್ತು ಹೃದಯಾಘಾತ ಇವೆರಡರ ನಡುವಿನ ವ್ಯತ್ಯಾಸವೂ ಅನೇಕ ಪತ್ರಿಕೆಗಳಿಗೆ ಗೊತ್ತಿಲ್ಲದೇ ಗೊಂದಲಕ್ಕೀಡಾದಂತೆ ಕಂಡು ಬಂದಿದ್ದವು

“ಹೋಟೆಲ್‌ನ (ಜುಮಿಯರಾ ಎಮಿರೇಟ್ಸ್ ಟವರ್ಸ್) ಸ್ನಾನ ಗೃಹದ ನೀರು ತುಂಬಿದ್ದ ಸ್ನಾನದ ತೊಟ್ಟಿಯಲ್ಲಿ ಆಕಸ್ಮಿಕವಾಗಿ ಮುಳುಗಿ (ಆ್ಯಕ್ಸಿಡೆಂಟಲ್‌ ಡ್ರೌನಿಂಗ್‌) ಅವರು ಮೃತಪಟ್ಟಿದ್ದಾರೆ. ಅವರ ರಕ್ತದಲ್ಲಿ ಮದ್ಯದ ಅಂಶವೂ ಪತ್ತೆಯಾಗಿದೆ. ಮುಳುಗಿ ಸಾಯುವಾಗ ಅವರು ಪ್ರಜ್ಞಾಹೀನರಾಗಿದ್ದರು,” ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸ್ಪಷ್ಟಪಡಿಸಿದೆ ಎಂದು ಗಲ್ಫ್ ನ್ಯೂಸ್ ಹಾಗೂ ಖಲೀಜ್ ಟೈಮ್ಸ್ ನಿನ್ನೆಯೇ ವರದಿ ಮಾಡಿದ್ದವು. ಹೃದಯಾಘಾತ ಅಥವಾ ಹೃದಯ ಸ್ತಂಭನ ಎನ್ನುವ ಕಾರಣವನ್ನೂ ಫಾರೆನ್ಸಿಕ್ ವರದಿಯಲ್ಲಿ ಎಲ್ಲಿಯೂ ಪ್ರಸ್ತಾಪಿಸಿರಲಿಲ್ಲ. ನಿನ್ನೆ ಸಾಯಂಕಾಲ ಸಾಮಾಜಿಕ ಜಾಲತಾಣಗಳಲ್ಲಿ ಈ ವರದಿಯ ಪ್ರತಿಯು ವೈರಲ್ ಆಗುತ್ತಿದ್ದಂತೆಯೇ, ಭಾರತದ ಕೆಲವು ಮಾಧ್ಯಮಗಳು ತಮ್ಮ ತಪ್ಪಿಗೆ ನಾಚಿಕೆ ಪಟ್ಟುಕೊಂಡು ಮುಜುಗರಕ್ಕೀಡಾಗಿರುವುದಂತೂ ಸತ್ಯ.

ದುಬೈ ಹೋಟೆಲ್‌ನಲ್ಲಿ ನಡೆದಿದ್ದೇನು?

ಬಹುಭಾಷಾ ನಟಿ ಶ್ರೀದೇವಿ ತಮ್ಮ ಸಂಬಂಧಿ ಮೋಹಿತ್‌ ಮಾರ್ವಾ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಪತಿ ಬೋನಿ ಕಪೂರ್‌ ಮತ್ತು ಕಿರಿಯ ಮಗಳು ಖುಷಿ ಕಪೂರ್ ಜತೆಗೆ ದುಬೈಗೆ ತೆರಳಿದ್ದರು. ವಿವಾಹ ಸಮಾರಂಭದಲ್ಲಿ ಸೇರ್ಪಡೆಗೊಂಡ ನಂತರ, ಕುಟುಂಬದ ಕೆಲವು ಸದಸ್ಯರು ಭಾರತಕ್ಕೆ ಮರಳಿದರು. ಅದರಲ್ಲಿ, ಶ್ರೀದೇವಿಯ ಪತಿ ಬೋನಿ ಕಪೂರ್ ಕೂಡ ಮುಂಬೈಗೆ ವಾಪಾಸಾಗಿದ್ದರು.

ಆದರೆ, ಶನಿವಾರದಂದು ಬೋನಿ ಕಪೂರ್ ಮತ್ತೆ ದುಬೈಗೆ ಮರಳಿದರು. ಸಂಜೆ ವೇಳೆಗೆ ಶ್ರೀದೇವಿ ವಾಸ್ತವ್ಯ ಹೂಡಿದ್ದ ಜುಮಿಯರಾ ಎಮಿರೇಟ್ಸ್ ಟವರ್ಸ್‌ ಹೋಟೆಲ್‌ಗೆ ಬಂದರು. ಹೋಟೆಲ್ ಕೋಣೆಗೆ ತಲುಪಿದ ನಂತರ, ಶ್ರೀದೇವಿಯ ಜೊತೆಗೆ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ನಂತರ ಊಟಕ್ಕೆ ತೆರಳುವಂತೆ ಕೇಳಿದರು. ಊಟಕ್ಕೆ ತೆರಳಲು ಸಿದ್ಧವಾಗಬೇಕೆಂದು ಶ್ರೀದೇವಿ ಸ್ನಾನಗೃಹಕ್ಕೆ ಹೋದರು.

ಸ್ನಾನಗೃಹಕ್ಕೆ ಹೋದ ನಂತರ, ಶ್ರೀದೇವಿ 15 ನಿಮಿಷಗಳ ಕಾಲ ಹೊರಬಾರದೇ ಇದ್ದಾಗ, ಬೋನಿ ಕಪೂರ್ ಬಾಗಿಲನ್ನು ತಟ್ಟಿದರು. ಆಗಲೂ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ, ಬಾಗಿಲನ್ನು ಒಡೆದರು. ಸ್ನಾನಗೃಹದೊಳಗೆ ಆಗಮಿಸಿದ ತಕ್ಷಣ, ಶ್ರೀದೇವಿ ಅವರು ನೀರಿನಿಂದ ತುಂಬಿದ ತೊಟ್ಟಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಅವರು ನೋಡಿದರು. ಶ್ರೀದೇವಿಯನ್ನು ಎಚ್ಚರಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗದೇ ಇದ್ದಾಗ, ತಮ್ಮ ಸ್ನೇಹಿತರಲ್ಲಿ ಒಬ್ಬರನ್ನು ಹೋಟೆಲ್‌ಗೆ ಕರೆದರು.

ಸುಮಾರು 9 ಗಂಟೆಗೆ ಅವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದರು. ನಂತರ, ವೈದ್ಯರು ಶ್ರೀದೇವಿಯವರ ದೇಹವನ್ನು ಪರೀಕ್ಷೆ ಮಾಡಿ, ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು. ಬಳಿಕ ಪಾರ್ಥೀವ ಶರೀರವನ್ನು ದುಬೈನ ಆಸ್ಪತ್ರೆಗೆ ರವಾನೆ ಮಾಡಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ನಿನ್ನೆ(ಫೆ.26) ಬೆಳಿಗ್ಗೆ 8:18ಕ್ಕೆ ಖಲೀಜ್‌ ಟೈಮ್ಸ್‌ ವರದಿ ಮಾಡಿತ್ತು.

ಒಂದೆಡೆ ಜಾಗತಿಕ ಮಾಧ್ಯಮ ಲೋಕದಲ್ಲಿ ಭಾರತದ ಮಾಧ್ಯಮಗಳ ಮಾನ ಹರಾಜಾಗುತ್ತಿದ್ದರೆ, ನೋಡಿಯೂ ನೋಡದಂತೆ ರಾಷ್ಟ್ರೀಯ ಮಾಧ್ಯಮಗಳು ಮುಗುಮ್ಮಾಗಿ ಕುಳಿತಿವೆ. ಮಂಗಳವಾರವೂ ಶ್ರೀದೇವಿ ಸಾವಿನ ಬಗ್ಗೆ ಮಾಧ್ಯಮಗಳು ವರದಿ ಬಿತ್ತರಿಸುತ್ತಲೇ ಇವೆ. ಶ್ರೀದೇವಿ ಒಬ್ಬ ಶ್ರೇಷ್ಟ ನಟಿ ನಿಜ. ಶ್ರೀದೇವಿ ಸಾವಿನಲ್ಲಿ ನೀಡುತ್ತಿರುವ ಮೀಡಿಯಾ ಕವರೇಜ್‌, ನ್ಯಾಯಾಧೀಶ ಲೋಯಾ ಅಸಹಜ ಸಾವಿನ ಪ್ರಕರಣದಲ್ಲಿ ಯಾಕೆ ನೀಡಲಿಲ್ಲ? ಮಾಧ್ಯಮ ಕೇವಲ ಟಿಆರ್‌ಪಿಯ ಹಿಂದೆ ಬೀಳುತ್ತಿದೆಯೇ? ಲೋಯಾ ಸಾವಿನಂತ ಪ್ರಕರಣಗಳನ್ನೂ ಇಷ್ಟೇ ಗಂಭೀರವಾಗಿ ಪರಿಗಣಿಸಿದ್ದರೆ, ನಿಷ್ಪಕ್ಷಪಾತ ತನಿಖೆಗೆ ಕೇಂದ್ರ ಸರಕಾರವನ್ನು ಒತ್ತಾಯಿಸುವ ಸಾಧ್ಯತೆಯಿತ್ತು. ಆದರೆ ಮಾಧ್ಯಮ ಕೇವಲ ‘ಸೆಲೆಕ್ಟಿವ್‌ ಕವರೇಜ್‌’ ನೀಡುವ ನಿತ್ಯಕರ್ಮ ಮುಂದುವರೆಸಿರುವುದು ಮತ್ತೆ ಸಾಭೀತಾಗಿದೆ.