samachara
www.samachara.com
ಒನ್‌ ಇಂಡಿಯಾ ಕನ್ನಡದಿಂದ ‘ಆನ್‌ಲೈನ್‌ ಸೆಲೆಬ್ರಿಟಿ ಎಡಿಟರ್’ ಶಾಮ್ ನಿರ್ಗಮನ
ಮೀಡಿಯಾ 2.0

ಒನ್‌ ಇಂಡಿಯಾ ಕನ್ನಡದಿಂದ ‘ಆನ್‌ಲೈನ್‌ ಸೆಲೆಬ್ರಿಟಿ ಎಡಿಟರ್’ ಶಾಮ್ ನಿರ್ಗಮನ

‘ಮಾತೃಭಾಷಾ ದಿನ’ ಆಚರಣೆಯ ಸಂಭ್ರಮದ ನಡುವೆಯೇ, ಕನ್ನಡದ ಆನ್‌ಲೈನ್ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಬೆಳವಣಿಗೆಯೊಂದು ಘಟಿಸಿದೆ.ಕನ್ನಡದ ಮೊದಲ ಅನ್‌ಲೈನ್ ಸುದ್ದಿತಾಣ ‘ಒನ್‌ಇಂಡಿಯಾ’ದಿಂದ ಸಂಪಾದಕ ಶಾಮ್‌ ಸುಂದರ್ ಹೊರಬಿದ್ದಿದ್ದಾರೆ

ಪ್ರಶಾಂತ್ ಹುಲ್ಕೋಡು

ಪ್ರಶಾಂತ್ ಹುಲ್ಕೋಡು

'ಮಾತೃಭಾಷಾ ದಿನ' ಆಚರಣೆಯ ಸಂಭ್ರಮದ ನಡುವೆಯೇ, ಕನ್ನಡದ ಆನ್‌ಲೈನ್ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಬೆಳವಣಿಗೆಯೊಂದು ಘಟಿಸಿದೆ.ಕನ್ನಡದ ಮೊದಲ ಅನ್‌ಲೈನ್ ಸುದ್ದಿತಾಣ 'ಒನ್‌ಇಂಡಿಯಾ'ದಿಂದ ಸಂಪಾದಕ ಶಾಮ್‌ ಸುಂದರ್ ಹೊರಬಿದ್ದಿದ್ದಾರೆ. 18 ವರ್ಷಗಳಿಂದ ಅವರು ಸಂಸ್ಥೆಯ ಕನ್ನಡ ವಿಭಾಗದ ಸುದ್ದಿತಾಣವನ್ನು ಸಂಪಾದಿಸಿಕೊಂಡು ಬಂದಿದ್ದವರು. ಇನ್ನೊಂದು ಅರ್ಥದಲ್ಲಿ, ಕನ್ನಡ ಆನ್‌ಲೈನ್ ಪತ್ರಿಕೋದ್ಯಮದ ಮೊದಲ ಸಂಪಾದಕ. ಅವರೀಗ ಸಂಸ್ಥೆಯಿಂದ ಹೊರಬಿದ್ದಿದ್ದಾರೆ. ಇದಕ್ಕೆ 'ಒನ್‌ಇಂಡಿಯಾ'ದೊಳಗೆ ಕಳೆದ ಎರಡು ವರ್ಷಗಳ ಅಂತರದಲ್ಲಿ ನಡೆದ ಬದಲಾವಣೆಗಳು ಕಾರಣ ಎಂದು ಮೂಲಗಳು ಹೇಳುತ್ತಿವೆ.'ಡೈಲಿ ಹಂಟ್‌' ಎಂಬ ನ್ಯೂಸ್‌ ಅಗ್ರಿಗೇಟರ್‌ ಆಪ್‌ ನಡೆಸುತ್ತಿರುವ ವರ್ಸೆ ಇನ್ನೊವೇಶನ್ ಎಂಬ ಕಂಪನಿ, ಒನ್‌ಇಂಡಿಯಾವನ್ನು ನಡೆಸುತ್ತಿರುವ ಗ್ರೇನಿಯಂ ಇನ್ಫರ್ಮೇಶನ್ ಟೆಕ್ನಾಲಜಿಸ್‌ ಮೇಲೆ ಸುಮಾರು 15 ಕೋಟಿ ಬಂಡವಾಳ ಹೂಡಿಕೆ ಮಾಡಿತು. ಪರಿಣಾಮ ಆಡಳಿತ ಮಂಡಳಿಯಲ್ಲಿ ಭಾರಿ ಬದಲಾವಣೆಗಳಾಗುತ್ತಿವೆ. ಇದರ ಮೊದಲ ಹಂತದಲ್ಲಿ ಕನ್ನಡ ಒನ್‌ಇಂಡಿಯಾದ ಸಂಪಾದಕರ ನಿರ್ಗಮನ ಆಗಿದೆ.ಬಂಡವಾಳ ಮತ್ತು ಲಾಭವನ್ನು ದೃಷ್ಟಿಯಲ್ಲಿ ಇಟ್ಟುಕೊಂಡ ಸಂಸ್ಥೆಗಳಲ್ಲಿ ಹೊಸ ಬಂಡವಾಳ ಹೂಡಿಕೆಯಾದಾಗ ಇಂತಹ ಬದಲಾವಣೆಗಳು ಸಹಜ ಕೂಡ. ಆದರೆ, ಮಾತೃಭಾಷಾ ದಿನದ ಸಂದರ್ಭದಲ್ಲಿ ಶಾಮ್ ಸುಂದರ್ ನಿರ್ಗಮನ ಹಲವು ಕಾರಣಗಳಿಗಾಗಿ ಗಮನ ಸೆಳೆಯುತ್ತಿದೆ. ಅಷ್ಟೆ ಅಲ್ಲ, ಕನ್ನಡದ ಆನ್‌ಲೈನ್ ಪತ್ರಿಕೋದ್ಯಮ ಬೆಳೆದು ಬಂದ ಬಗೆಯನ್ನು ಕಟ್ಟಿಕೊಡಲು ಆರೋಗ್ಯಪೂರ್ಣ ನೆಪವೂ ಆಗಿದೆ.

18 ವರ್ಷಗಳ ಹಿಂದೆ:

ಒಮ್ಮೆ ಕಲ್ಪನೆ ಮಾಡಿಕೊಳ್ಳಿ; 18 ವರ್ಷಗಳ ಹಿಂದೆ ಆನ್‌ಲೈನ್ ಮಾರುಕಟ್ಟೆ ಹೇಗಿದ್ದರಬಹುದು ಅಂತ. ಅದು 2000 ಇಸವಿ. ಅವತ್ತಿಗೆ ಪಶ್ಚಿಮದ ದೇಶಗಳಲ್ಲಿಯೂ ಆನ್‌ಲೈನ್‌ ಎಂಬುದು ಇನ್ನೂ ಬೆಳೆಯುತ್ತಿರುವ ಕೂಸಾಗಿತ್ತು. ವಿಮಾನ ಪ್ರಯಾಣಕ್ಕೆ ಟಿಕೆಟ್‌ ಕಾಯ್ದಿರಿಸುವಿಕೆಗೆ ಆನ್‌ಲೈನ್ ಬಳಸುತ್ತಿದ್ದರಾದರೂ, ಅಮೆಝಾನ್, ಫ್ಲಿಪ್‌ಕಾರ್ಟ್‌, ಮಿಂತ್ರಾ ಮತ್ತಿತರ ಆನ್‌ಲೈನ್ ಶಾಪಿಂಗ್ ಸೈಟ್‌ಗಳು ಕಲ್ಪನೆಗೂ ನಿಲುಕದ ಸಂಗತಿಗಳಾಗಿದ್ದವು. ಇನ್ನು, ಮೊಬೈಲ್‌ಗಳಲ್ಲಿ ನ್ಯೂಸ್‌ ಓದುವುದು ಎಂಬುದು ಮರೀಚಿಕೆ. ಇಂತಹ ಸಮಯದಲ್ಲಿ ಕನ್ನಡದಲ್ಲಿ ಆನ್‌ಲೈನ್‌ ನ್ಯೂಸ್‌ ಪೋರ್ಟಲ್‌ ರೂಪದಲ್ಲಿ ಹೊರಬಂದಿದ್ದು 'ದಟ್ಸ್‌ ಕನ್ನಡ'.''ಅವತ್ತಿನ ಕಾಲಕ್ಕೂ ಇವತ್ತಿಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ನಾವು ಶುರು ಮಾಡಿದ್ದು ನ್ಯೂಸ್‌ ಪೋರ್ಟಲ್‌. ಅದೂ ಕನ್ನಡದಲ್ಲಿ. ಇನ್ನೂ ಯೂನಿಕೋಡ್, ಬರಹ ಫಾಂಟ್‌ಗಳು ಇರಲಿಲ್ಲ. ಏನೇ ಬರೆದರೂ ಅದನ್ನು 'ಕನ್ವರ್ಟ್‌' ಮಾಡಿ ಹಾಕಬೇಕಾಗುತ್ತಿತ್ತು. ಇವತ್ತಿನ ಹಾಗೆ ಇಂಟರ್‌ನೆಟ್‌ ಬ್ಯಾಂಡ್‌ವಿಡ್ತ್‌ (ಸ್ಪೀಡ್‌) ಕೂಡ ಇರಲಿಲ್ಲ. ಎಲ್ಲೋ ಕೆಲವರಷ್ಟೆ ಲ್ಯಾಪ್‌ಟಾಪ್‌ ಬಳಸುತ್ತಿದ್ದರು. ಕಂಪ್ಯೂಟರ್ ಎಂದರೆ ಡೆಸ್ಕ್‌ಟಾಪ್‌ಗಳಷ್ಟೆ. ಹೀಗಿರುವಾಗ ನಾವು ಕನ್ನಡದ ಸುದ್ದಿತಾಣವನ್ನು ಶುರುಮಾಡಿದ್ದೆವು. ಅವತ್ತಿಗೆ ನಮ್ಮ ಓದುಗರು ಇದ್ದದ್ದು ಪಶ್ಚಿಮದ ದೇಶಗಳಲ್ಲಿ. ಹೀಗಾಗಿಯೇ ನಾವು ಹೆಚ್ಚು ಅನಿವಾಸಿ ಕನ್ನಡಿಗರನ್ನು ತಲುಪುವ ಪ್ರಯತ್ನ ಮಾಡಿಕೊಂಡು ಬಂದೆವು,'' ಎನ್ನುತ್ತಾರೆ ಶಾಮ್‌ ಸುಂದರ್.ಹಾಗೆ, ತಾಂತ್ರಿಕ ಮಿತಿಗಳಿದ್ದ ಕಾಲದಲ್ಲಿ ಕನ್ನಡದ ಮೊದಲ ಸುದ್ದಿತಾಣ ನಿಧಾನವಾಗಿ ಬೆಳವಣಿಗೆ ಕಾಣತೊಡಗಿತ್ತು. ಈ ಸಮಯದಲ್ಲಿ ತೆಗೆದುಕೊಂಡ ಕೆಲವು ಸಂಪಾದಕೀಯ ನಿರ್ಣಯಗಳನ್ನು ಶಾಮ್‌ ಹೀಗೆ ವಿವರಿಸುತ್ತಾರೆ. "ನಾವು ಶುರುಮಾಡಿದ ಸ್ವಲ್ಪ ದಿನಗಳಿಗೆ ಆರ್ಕುಟ್‌ ಎಂಬ ಸಾಮಾಜಿಕ ಜಾಲತಾಣದ ಬಳಕೆ ಜೋರಾಯಿತು. ಈ ಸಮಯದಲ್ಲಿ ನಾವು ಅನಿವಾಸಿ ಕನ್ನಡಿಗರಿಂದ ಬರೆಸಲು ಶುರುಮಾಡಿದೆವು. ನಾನೇ ಸುಮಾರು 15ಕ್ಕೂ ಹೆಚ್ಚು ಅಮೆರಿಕಾದಲ್ಲಿದ್ದ ಕನ್ನಡಿಗರಿಗೆ ಅಂಕಣಕಾರರಾಗುವ ಅವಕಾಶ ನೀಡಿದೆ. ಇನ್ನು ನಾನು ಅವತ್ತಿಗೆ ಹೆಚ್ಚು ಬಳಸಿಕೊಂಡಿದ್ದು ಇ- ಮೇಲ್ ಸಂವಾದವನ್ನು. ಯಾರೇ ಏನೇ ಬರೆದರೂ, ಅದಕ್ಕೊಂದು ಮರುತ್ತರ ಬರೆಯುತ್ತಿದ್ದೆ. ಜತೆಗೆ, ಹಬ್ಬ ಹರಿದಿನಗಳ ಬಗ್ಗೆ, ಭಾವನೆಗಳಿಗೆ ಹತ್ತಿರವಾಗುವ ವಿಷಯಗಳ ಬಗ್ಗೆ ಬರೆಯುತ್ತಿದ್ದೆವು. ಭಾಷಾ ಪತ್ರಿಕೋದ್ಯಮ ಓದುಗರ ಭಾವನೆಗಳಿಗೆ ಸ್ಪಂದಿಸಬೇಕು. ಆಗ ಮಾತ್ರವೇ ನೆನಪಿನಲ್ಲಿ  ಉಳಿದುಕೊಳ್ಳುತ್ತೇವೆ.''

ಆನ್‌ಲೈನ್ ಕ್ರಾಂತಿ:

ಹಾಗೆ ನೋಡಿದರೆ, ಕಳೆದ ಐದು ವರ್ಷಗಳು ದೇಶ ಆನ್‌ಲೈನ್ ಕ್ರಾಂತಿಯ ಪರಿಣಾಮಗಳನ್ನು ಹತ್ತಿರದಿಂದ ನೋಡಿದ ಕಾಲಘಟ್ಟ. 2008ಕ್ಕೂ ಮುಂಚೆಯೇ ಭಾರತದಲ್ಲಿ ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಆನ್‌ಲೈನ್ ಸಾಮಾಜಿಕ ಜಗತ್ತು ಅಸ್ತಿತ್ವದಲ್ಲಿತ್ತಾದರೂ, ಮುಂಬೈ ದಾಳಿ ಸಾಮಾಜಿಕ ಜಾಲತಾಣಗಳ ಮಾರುಕಟ್ಟೆಯ ಭವಿಷ್ಯವನ್ನು ಬರೆಯಿತು. ಈ ಸಮಯದಲ್ಲಿ ನಡೆದ ಆನ್‌ಲೈನ್‌ ಚಟುವಟಿಕೆಗಳು ಬೀರಿದ ಪರಿಣಾಮಗಳದ್ದೇ ಒಂದು ದೊಡ್ಡ ಕತೆ.ಹೆಚ್ಚು ಕಡಿಮೆ ಇದೇ ಸಮಯದಲ್ಲಿ ದಟ್ಸ್‌ ಕನ್ನಡ ಹೆಸರು ಬದಲಾಯಿಸಿಕೊಂಡಿತ್ತು. ಇವತ್ತಿನ 'ಒನ್‌ಇಂಡಿಯಾ' ಆಗಿ ಬದಲಾಗಿತ್ತು. ಜತೆಗೆ ಕನ್ನಡದಲ್ಲಿ ಅಂತಹದ್ದೇ ಪ್ರಯತ್ನಗಳು ಶುರುವಾಗಿದ್ದವು. "ಈ ಸಮಯದಲ್ಲಿ ಒಂದು ವಿಚಾರವನ್ನು ಹೇಳಲೇಬೇಕಿದೆ. ನಾನು ಈ 18 ವರ್ಷಗಳಲ್ಲಿ ಕನ್ನಡದ ಆನ್‌ಲೈನ್ ಮಾರುಕಟ್ಟೆಯಲ್ಲಿ ನಡೆದ ಹಲವು ಪ್ರಯತ್ನಗಳನ್ನು ನೋಡಿದ್ದೇನೆ. ನೂರಾರು ಸುದ್ದಿತಾಣಗಳು ಹುಟ್ಟಿದವು; ಅಷ್ಟೆ ವೇಗವಾಗಿ ಸತ್ತೂ ಹೋದವು,'' ಎಂದು ನೆನಪಿಸಿಕೊಳ್ಳುತ್ತಾರೆ ಶಾಮ್. ಇದರ ಜತೆಗೆ, ಇವತ್ತು ಕನ್ನಡದ ಆನ್‌ಲೈನ್ ಮಾರುಕಟ್ಟೆ ಬಂದು ತಲುಪಿರುವ ಬಗ್ಗೆಯೂ ಅವರು ವಿಷಾದವನ್ನು ವ್ಯಕ್ತಪಡಿಸುತ್ತಾರೆ."ನಾವು ಅವತ್ತಿಗೆ ಬೇಂದ್ರೆ ಹುಟ್ಟಿದ ಹಬ್ಬವನ್ನು ಆಚರಿಸುತ್ತಿದ್ದೆವು. ಇವತ್ತು ಸಿನೆಮಾ ನಟರ ಬರ್ತ್‌ಡೇ ಜೋರಾಗಿ ನಡೆಯುತ್ತದೆ. ಅಂತಹುಗಳಿಗಾಗಿ ಇವತ್ತಿನ ಯುವ ಜನತೆ ಹಾತೊರೆಯುತ್ತಿದ್ದಾರೆ. ಹೀಗಾಗಿ ಸುದ್ದಿತಾಣಗಳೂ ಕೂಡ ಇದೇ ಹಾದಿಯಲ್ಲಿವೆ. ಜತೆಗೆ ಉಳಿದ ಮಾಧ್ಯಮಗಳೂ ಕೂಡ ಇಂತಹದ್ದೇ ಜನಪ್ರಿಯ ಅಂತ ಅನ್ನಿಸಿಕೊಂಡಿರುವ ಸಿದ್ದಸೂತ್ರವನ್ನು ಪಾಲಿಸುತ್ತಿವೆ. ಇದರಿಂದಾಗಿ ಕಸ ಕಡ್ಡಿಯೂ ಇವತ್ತು ಅನ್‌ಲೈನ್‌ಗಳಲ್ಲಿ ಮಾರಾಟವಾಗುತ್ತಿದೆ,'' ಎನ್ನುತ್ತಾರೆ ಶಾಮ್. ನೀವಿರುವ ಹೊತ್ತಿಗೆ 'ಒನ್‌ಇಂಡಿಯಾ' ಕೂಡ ಇದನ್ನೇ ಮಾಡಿತು ಅಲ್ವಾ? ಎಂಬ ಪ್ರಶ್ನೆಗೆ, "ನಿಜ, Rat Race ಇದು. ಇದರಿಂದ ನಾವೂ ಕೂಡ ಹೊರಗುಳಿಯುವ ಹಾಗಿರಲಿಲ್ಲ,'' ಎಂದರು.ಕಳೆದ 18 ವರ್ಗಗಳ ಸುದೀರ್ಘ ಪಯಣದ ನಂತರ ಶಾಮ್‌ ಅವರಿಗೆ ತಾತ್ಕಾಲಿಕ ವಿರಾಮವೊಂದು ಸಿಕ್ಕಿದೆ. ಅವರೇ ತಮ್ಮ ಸಹೋದ್ಯೋಗಿಗಳ ಮುಂದೆ ಆಗಾಗೆ ಹೇಳಿಕೊಳ್ಳುವ ಮಾತೊಂದಿದೆ. "ಆನ್‌ಲೈನ್ ವಿಚಾರಕ್ಕೆ ಬಂದರೆ ನಾವು ಸಿನೆಮಾ ನಟ- ನಟಿಯರಿಗಿಂತ ಫೇಮಸ್‌,'' ಎಂದು ಶಾಮ್ ತಮಾಷೆ ಮಾಡುತ್ತಿರುತ್ತಾರೆ. ಕನ್ನಡದ ಆನ್‌ಲೈನ್ ಮಾರುಕಟ್ಟೆಯ ಬೆಳವಣಿಗೆಯ ಜತೆಯಲ್ಲಿ ಹೆಜ್ಜೆ ಹಾಕಿಕೊಂಡು ಬಂದ ಅವರಿಗೆ ಅದೇ 'ಆನ್‌ಲೈನ್ ಸೆಲೆಬ್ರಿಟಿ ಸ್ಟೇಟಸ್' ತಂದುಕೊಟ್ಟಿದ್ದರೆ ಅಚ್ಚರಿ ಏನಿಲ್ಲ.ಆದರೆ ಕಾಲ ಬದಲಾಗಿದೆ, ಕಳೆದ ಐದು ವರ್ಷಗಳಲ್ಲಿ ಬದಲಾವಣೆಯ ಅಲೆ ಜೋರಾಗಿಯೇ ಬೀಸುತ್ತಿದೆ. ಅದರ ಬಿಸಿ 'ಒನ್‌ಇಂಡಿಯಾ'ಗೂ ಮುಟ್ಟಿದೆ. ಪರಿಣಾಮ ಸಂಪಾದಕೀಯ ವಿಭಾಗದ ಪ್ರಮುಖ ವಿಕೆಟ್ ಬಿದ್ದಿದೆ, ಅಷ್ಟೆ.