ಚುನಾವಣೆ ಮುಂದೆ ‘ಗ್ರಾಮ ಭಾರತ’ವೇ ಬಜೆಟ್ ಗುರಿ: ಪತ್ರಿಕೆಗಳು ಕಂಡಂತೆ ಕೇಂದ್ರ ಆಯವ್ಯಯ
ಮೀಡಿಯಾ 2.0

ಚುನಾವಣೆ ಮುಂದೆ ‘ಗ್ರಾಮ ಭಾರತ’ವೇ ಬಜೆಟ್ ಗುರಿ: ಪತ್ರಿಕೆಗಳು ಕಂಡಂತೆ ಕೇಂದ್ರ ಆಯವ್ಯಯ

Summarytoggle summary

‘ಆರೋಗ್ಯ ಕರ ಉದ್ಯೋಗ ಕೃಷಿ’, ‘ಗ್ರಾಮೀಣರತ್ತ ಲಕ್ಷ್ಯ, ಮಧ್ಯಮ ವರ್ಗ ಅಲಕ್ಷ್ಯ’, ‘ಆಯುಷ್ಮಾನ್ ಭವ’, ‘ಹಳ್ಳಿ ಹಾಡು ಜನಪರ ಜಾಡು’, ‘ಆಪರೇಷನ್ ಭಾರತ್’, ‘ಚುನಾವಣೆಯತ್ತ ನೋಟ, ಗ್ರಾಮದೆಡೆಗೆ ಓಟ’ – 2018-19ರ ಕೇಂದ್ರ ಬಜೆಟ್  ಪ್ರಮುಖ ಪತ್ರಿಕೆಗಳ ಮುಖಪುಟಗಳಲ್ಲಿ ಕಾಣಿಸಿಕೊಂಡಿರುವುದು ಹೀಗೆ....

ಚುನಾವಣೆಯನ್ನು ಮುಂದಿಟ್ಟುಕೊಂಡಿರುವ ಮೋದಿ ಸರಕಾರ ಬಜೆಟ್ ಮೋಡಿ ಮಾಡಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಕೃಷಿ, ಆರೋಗ್ಯ ಹಾಗೂ ಗ್ರಾಮೀಣ ಭಾರತವನ್ನು ಗುರಿಯಾಗಿಸಿಕೊಂಡ ಜೇಟ್ಲಿ ಬಜೆಟ್, ಮಧ್ಯಮ ವರ್ಗವನ್ನು ಕಡೆಗಣಿಸಿದೆ ಎಂಬ ವಿಶ್ಲೇಷಣೆಗೆ ಕನ್ನಡದ ಹಲವು ಪತ್ರಿಕೆಗಳು ಒತ್ತು ಕೊಟ್ಟಿವೆ.ಚುನಾವಣಾ ಪೂರ್ವ ಹಾಗೂ ಮೋದಿ ಸರಕಾರದ ಐದು ವರ್ಷದ ಅವಧಿಯ ಕೊನೆಯ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ಜನಪ್ರಿಯ ಘೋಷಣೆಗಳು ಇರಬಹುದೆಂಬ ನಿರೀಕ್ಷೆ ಸುಳ್ಳಾಗಿದೆ.

ಹಣಕಾಸು ಸಚಿವ ಅರುಣ್ ಜೇಟ್ಲಿ, ಈ ಬಾರಿ ‘ಜನಪ್ರಿಯ’ ಬಜೆಟ್ ಮಂಡಿಸಬಹುದೆಂದು ಅಂದಾಜಿಸಲಾಗಿತ್ತು. ಆದರೆ, ಗ್ರಾಮೀಣ ಭಾರತ, ಕೃಷಿ ಹಾಗೂ ಆರೋಗ್ಯ ಕ್ಷೇತ್ರಗಳ ಕೆಲವು ಘೋಷಣೆಗಳನ್ನು ಬಿಟ್ಟರೆ, ಉಳಿದ ಘೋಷಣೆಗಳು ಸಾಮಾನ್ಯವಾಗಿವೆ ಎಂದು ಬಹುತೇಕ ಪತ್ರಿಕೆಗಳು ವಿಶ್ಲೇಷಿಸಿವೆ.ಕೃಷಿ ಮತ್ತು ಗ್ರಾಮೀಣ ಭಾರತಕ್ಕೆ ಬಜೆಟ್‌ನಲ್ಲಿ ಹೆಚ್ಚು ಹಣ ಮೀಸಲಿಟ್ಟಿರುವುದನ್ನೇ ಪತ್ರಿಕೆಗಳು ಪ್ರಮುಖವಾಗಿ ಪ್ರಸ್ತಾಪಿಸಿವೆ. ಕನ್ನಡದ ಪ್ರಮುಖ ಪತ್ರಿಕೆಗಳೆಲ್ಲೆವೂ ಏಳೆಂಟು ಪುಟಗಳಲ್ಲಿ ಬಜೆಟ್ ವರದಿ, ವಿಶ್ಲೇಷಣೆಯನ್ನು ಬಿಚ್ಚಿಟ್ಟಿವೆ.

ರೈಲ್ವೆ, ಮೂಲಸೌಕರ್ಯ, ವಿಮಾನ ಯಾನಕ್ಕೆ ಬಜೆಟ್‌ನಲ್ಲಿ ಒತ್ತು ನೀಡಿರುವುದನ್ನೂ ಹಲವು ಪತ್ರಿಕೆಗಳು ಮುಖಪುಟದಲ್ಲಿ ವರದಿ ಮಾಡಿವೆ. ಬೆಂಗಳೂರು ಉಪನಗರ ರೈಲು ಯೋಜನೆಗೆ ಹಸಿರು ನಿಶಾನೆ ಸಿಕ್ಕಿರುವುದಕ್ಕೂ ಹಲವು ಪತ್ರಿಕೆಗಳು ಆದ್ಯತೆ ನೀಡಿವೆ. ಗ್ರಾಫ್, ಕ್ಯಾರಿಕೇಷರ್, ಅಂಕಿಸಂಖ್ಯೆ, ಚಿತ್ರಗಳು, ವಿಶ್ಲೇಷಣಾ ಬರಹಗಳು, ತಜ್ಞರು ಹಾಗೂ ರಾಜಕೀಯ ಮುಖಂಡರ ಅಭಿಪ್ರಾಯಗಳ ಮೂಲಕ ಸಮಗ್ರ ಬಜೆಟ್ ಪ್ಯಾಕೇಜ್ ನೀಡಲು ಎಲ್ಲ ಪತ್ರಿಕೆಗಳೂ ಪ್ರಯತ್ನಿಸಿವೆ.‘ಆರೋಗ್ಯ ಕರ ಉದ್ಯೋಗ ಕೃಷಿ’ ಎಂಬ ತಲೆಬರಹದಡಿ ‘ವಿಜಯ ಕರ್ನಾಟಕ’ ಮುಖಪುಟದಲ್ಲಿ ಬಜೆಟ್ ವರದಿ ಪ್ರಕಟಿಸಿದೆ. ಬಜೆಟ್ ನ ಪ್ರಮುಖ ಅಂಶಗಳೆಲ್ಲವೂ ಮುಖಪುಟದಲ್ಲಿ ಅಂಕಿಸಂಖ್ಯೆಗಳೊಂದಿಗೆ ಮೂಡಿಬಂದಿವೆ. ದೀರ್ಘವಾದ ಲೀಡ್ ವರದಿಗಿಂತ ಭಿನ್ನವಾಗಿ ಯಾವ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಹಣ ಮೀಸಲಿಡಲಾಗಿದೆ ಎಂಬ ಅಂಶಗಳ ಮೇಲೆ ಬೆಳಕು ಚೆಲ್ಲಲಾಗಿದೆ.

ಆಯವ್ಯಯ ಗಾತ್ರ ಹಾಗೂ ಹಣಕಾಸು ಹಂಚಿಕೆಯ ಅಂಕಿಸಂಖ್ಯೆಗಳೇ ಮುಖಪುಟದಲ್ಲಿ ಪ್ರಮುಖವಾಗಿವೆ.‘ವಿಜಯ ಕರ್ನಾಟಕ’ ಈ ಬಜೆಟ್ ಅನ್ನು ಸಂಪಾದಕೀಯದಲ್ಲಿ ‘ಮುಂಗಡ ಪತ್ರದ ಸಾಮಾಜಿಕ ನ್ಯಾಯಸಂಹಿತೆ’ ಎಂದಿದೆ. “ಜೇಟ್ಲಿ ಈ ಬಜೆಟ್ ಮೂಲಕ ಆರ್ಥಿಕ ಶಿಸ್ತು ಮತ್ತು ಜನಪ್ರಿಯತೆಯ ನಡುವೆ ಜಾಣ್ಮೆಯ ಕಸರತ್ತು ಮಾಡಿದ್ದಾರೆ” ಎಂದು ಸಂಪಾದಕೀಯದಲ್ಲಿ ಹೇಳಿದೆ. “ಜನಪ್ರಿಯತೆ ಮತ್ತು ಎಲ್ಲರ ಓಲೈಕೆಗೆ ಜೋತು ಬೀಳದೆ ದುರ್ಬಲ ವರ್ಗಗಳ ಶ್ರೇಯೋಭಿವೃದ್ಧಿಯನ್ನು ಮುಂಗಡಪತ್ರದಲ್ಲಿ ಆದ್ಯತೆಯಾಗಿ ಪರಿಗಣಿಸಲಾಗಿದೆ. ದುರ್ಬಲರ ಏಳಿಗೆಗೆ ಸಬಲರಾದವರು ಕೊಂಚ ತ್ಯಾಗ ಮಾಡಬೇಕು ಹಾಗೂ ಒಂದಿಷ್ಟು ತೊಂದರೆಗಳನ್ನು ಸಹಿಸಿಕೊಳ್ಳಬೇಕು ಎನ್ನುವ ಸಾಮಾಜಿಕ ನ್ಯಾಯ ತತ್ವವನ್ನು ಈ ಮುಂಗಡಪತ್ರ ಪ್ರತಿಪಾದಿಸಿದೆ” ಎಂದು ವಿಶ್ಲೇಷಿಸಲಾಗಿದೆ.

‘ಗ್ರಾಮೀಣರತ್ತ ಲಕ್ಷ್ಯ, ಮಧ್ಯಮ ವರ್ಗ ಅಲಕ್ಷ್ಯ’ – ಇದು ‘ಪ್ರಜಾವಾಣಿ’ಯ ಲೀಡ್ ತಲೆಬರಹ. ಗ್ರಾಮೀಣ ಭಾರತವನ್ನು ಗುರಿಯಾಗಿಸಿಕೊಂಡ ಈ ಬಜೆಟ್‌ನಲ್ಲಿ ಮಧ್ಯಮ ವರ್ಗದ ನಿರೀಕ್ಷೆಗಳನ್ನು ಹುಸಿಗೊಳಿಸಲಾಗಿದೆ ಎಂಬ ವಿಶ್ಲೇಷಣೆ ಲೀಡ್ ವರದಿಯಲ್ಲಿದೆ. ಮೂಲಸೌಕರ್ಯ, ವಿಮಾನಯಾನಕ್ಕೆ ಮೀಸಲಿಟ್ಟಿರುವ ಹಣಕಾಸಿನ ಅಂಕಿಸಂಖ್ಯೆ ಹಾಗೂ ಯಾವ ವಸ್ತುಗಳು ಅಗ್ಗ, ಯಾವ ವಸ್ತುಗಳು ತುಟ್ಟಿ ಎಂಬ ಮಾಹಿತಿ ಮುಖಪುಟದಲ್ಲಿದೆ. ಕನಿಷ್ಠ ಬೆಂಬಲ ಬೆಲೆಯಲ್ಲಿ ಹೆಚ್ಚಳ, ನೀರಾವರಿ ಯೋಜನೆಗಳಿಗೆ ರೂ. 2,600 ಕೋಟಿ, ರೈಲ್ವೆ ಸುರಕ್ಷೆ ಮತ್ತು ಸವಲತ್ತಿಗೆ ಆದ್ಯತೆ, ವೇತನ ವರ್ಗದವರ ಮೂಗಿಗೆ ತುಪ್ಪ ಎಂದು ಈ ಬಜೆಟ್ ಅನ್ನು ಕರೆಯಲಾಗಿದೆ. ಆದಾಯ ತೆರಿಗೆಗಳಲ್ಲಿ ಯಾವುದೇ ವಿನಾಯ್ತಿ ನೀಡದೇ ಇರುವುದು ಮಧ್ಯಮ ವರ್ಗವನ್ನು ಅಲಕ್ಷಿಸಿದಂತಾಗಿದೆ ಎಂದು ವಿಶ್ಲೇಷಿಸಲಾಗಿದೆ.

‘ಚುನಾವಣಾಪೂರ್ವ ಬಜೆಟ್ ಕ್ಲಿಷ್ಟಕರ ಕಸರತ್ತು’ ಎಂದಿರುವ ‘ಪ್ರಜಾವಾಣಿ’ ಸಂಪಾದಕೀಯ, “ಕೃಷಿ ವಲಯ ಬಿಕ್ಕಟ್ಟಿನಲ್ಲಿರುವ ಸದ್ಯದ ಸಂದರ್ಭದಲ್ಲಿ ಗ್ರಾಮೀಣ ಭಾರತ ಕೇಂದ್ರಿತ ಬಜೆಟ್ ಮಂಡಿಸುವ ಅನಿವಾರ್ಯವನ್ನು ನಿಭಾಯಿಸಲಾಗಿದೆ” ಎಂದು ಬಜೆಟ್ ಅನ್ನು ವಿಶ್ಲೇಷಣೆ ಮಾಡಿದೆ. ‘ಹುಸಿ ಭರವಸೆಯ ಮಣಿಮಾಲೆ’, ‘ಹೋಳಿಗೆಯಲ್ಲಿ ಹೂರಣವೇ ಇಲ್ಲದ ತೆಳುವಾದ ಬಜೆಟ್’ ಎನ್ನುತ್ತವೆ ಇಲ್ಲಿನ ವಿಶ್ಲೇಷಣಾ ಬರಹಗಳು.

‘ವಿಜಯವಾಣಿ’ ಈ ಬಜೆಟ್ ಅನ್ನು ಸಕಾರಾತ್ಮಕ ದೃಷ್ಟಿಕೋನದಿಂದ ವರದಿ ಮಾಡಿದೆ. ‘ಹಳ್ಳಿ ಹಾಡು ಜನಪರ ಜಾಡು’ ಎಂಬ ತಲೆ ಬರಹದೊಂದಿಗೆ ಇದೊಂದು ಸಮತೋಲಿತ ಬಜೆಟ್ ಎಂದು ಕರೆದಿದೆ. “ವಾಸ್ತವದ ನೆಲೆಗಟ್ಟಿನಲ್ಲಿ ಅಭಿವೃದ್ಧಿಯ ದೀಪ ಹಚ್ಚುವ ಜನಪರ ಕಾಳಜಿ” ಈ ಬಜೆಟ್ ಎಂದು ವರದಿಯಲ್ಲಿ ಹೇಳಿದೆ. ಜನಪ್ರಿಯ ಘೋಷಣೆಗಳು, ಗ್ರಾಮಿಣ ಭಾರತಕ್ಕೆ ಒತ್ತು ನೀಡಿರುವುದನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಈ ಬಜೆಟ್ ‘ಹೆಚ್ಚು ಸಿಹಿ ಸ್ವಲ್ಪ ಕಹಿ’ ಎಂದಿರುವ ‘ವಿಜಯವಾಣಿ’ ತನ್ನ ಸಂಪಾದಕೀಯದಲ್ಲಿ ಈ ಬಜೆಟ್ ಅನ್ನು ‘ಜನಪರ ಜಾಣ ನಡೆ’ ಎಂದಿದೆ. “ಜನಪ್ರಿಯತೆಯ ಮೇಲೆ ಕಣ್ಣಿಟ್ಟರೂ ಜನಪರ ನಿಲುವು ತಳೆಯುವುದನ್ನು ಮರೆಯದ ಬಜೆಟ್ ಇದು” ಎಂದು ಸಂಪಾದಕೀಯದಲ್ಲಿ ವಿಶ್ಲೇಷಿಸಿದೆ.

ಆರೋಗ್ಯ ಕ್ಷೇತ್ರಕ್ಕೆ ಈ ಬಜೆಟ್ ನಲ್ಲಿ ಒತ್ತು ನೀಡಲಾಗಿದೆ ಎಂದಿರುವ ‘ಉದಯವಾಣಿ’ ಈ ಬಜೆಟ್ ಅನ್ನು ‘ಆಯುಷ್ಮಾನ್ ಭವ’ ಎಂದು ಕರೆದಿದೆ. ಉಪನಗರ ರೈಲು ಯೋಜನೆ ಮೂಲಕ ಬೆಂಗಳೂರಿಗೆ ಖುಷಿ. ಆದರೆ, ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಿಸದೇ ಇರುವುದು ಮಧ್ಯಮ ವರ್ಗಕ್ಕೆ ನಿರಾಸೆ ತಂದಿದೆ ಎಂದು ಲೀಡ್ ವರದಿ ವಿಶ್ಲೇಷಿಸಿದೆ. ಒಟ್ಟಾರೆ ಎಲ್ಲರನ್ನೂ ಖುಷಿ ಪಡಿಸಿದ ಬಜೆಟ್ ಎಂದಿರುವ ‘ಉದಯವಾಣಿ’ ತನ್ನ ಸಂಪಾದಕೀಯದಲ್ಲಿ ‘ಸಂತುಲಿತ- ಜನಪ್ರಿಯ’ ಬಜೆಟ್ ಇದು ಎಂದಿದೆ.

‘ವಾರ್ತಾ ಭಾರತಿ’ ಈ ಬಜೆಟ್ ಅನ್ನು ‘ಚುನಾವಣೆಯತ್ತ ನೋಟ, ಗ್ರಾಮದೆಡೆಗೆ ಓಟ’ ಎಂದು ಕರೆದಿದೆ. “ಚುನಾವಣೆಯ ಮೇಲೆ ಪರಿಣಾಮ ಬೀರುವ ಯಾವ ಘೋಷಣೆಗಳೂ ಈ ಬಜೆಟ್ ನಲ್ಲಿ ಇಲ್ಲ” ಎನ್ನುತ್ತದೆ ‘ವಾರ್ತಾ ಭಾರತಿ’ ಸಂಪಾದಕೀಯ. ಒಳಪುಟಗಳಲ್ಲಿ ಬಜೆಟ್ ಅಂಕಿ ಸಂಖ್ಯೆಗಳ ವರದಿ ಹಾಗೂ ಯಾವ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಹಣ ಮೀಸಲಿಡಲಾಗಿದೆ ಎಂಬ ವರದಿಗಳಿವೆ.

ಕೇಂದ್ರ ಬಜೆಟ್ ನಗರ ಪ್ರದೇಶದವರಿಗೆ ನಿರಾಸೆ ಮೂಡಿಸಿದೆ ಎಂದಿರುವ ‘ಕನ್ನಡಪ್ರಭ’ ಈ ಬಜೆಟ್ ‘ಆಪರೇಷನ್ ಭಾರತ್’ ಎಂದಿದೆ. “ಅರ್ಬನ್ ಇಂಡಿಯಾದಿಂದ ಕಿತ್ತು ಗ್ರಾಮೀಣ ಭಾರತಕ್ಕೆ ಒತ್ತು” ಎಂದು ಗ್ರಾಮೀಣ ಭಾರತಕ್ಕೆ ಹೆಚ್ಚು ಒತ್ತು ನೀಡಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದೆ. ಗ್ರಾಮೀಣ ಭಾರತದ ಅಭಿವೃದ್ಧಿ ಹಾಗೂ ಕೃಷಿಗೆ ಹೆಚ್ಚು ಆದ್ಯತೆ ನೀಡುರುವುದನ್ನೇ ಒಳಪುಟಗಳ ವರದಿಗಳಲ್ಲಿ ವಿಶ್ಲೇಷಿಸಲಾಗಿದೆ. ಈ ಬಜೆಟ್ ‘ಓಲೈಕೆಗೆ ಜೋತು ಬೀಳದ ಸುಧಾರಣಾವಾದಿ ಬಜೆಟ್’ ಎಂದಿದೆ ‘ಕನ್ನಡಪ್ರಭ’ ಸಂಪಾದಕೀಯ.

ಇನ್ನು ಇಂಗ್ಲಿಷ್ ಪತ್ರಿಕೆಗಳು ಈ ಬಜೆಟ್ ಅನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿವೆ. ‘ದಿ ಹಿಂದೂ’ ಈ ಬಜೆಟ್ ಕೃಷಿ ಹಾಗೂ ರೈತರನ್ನು ಗುರಿಯಾಗಿಸಿಕೊಂಡ ‘ರೈತ ಸೂತ್ರ’ (Farmer ‘sutra’) ಎಂದು ಕರೆದರೆ, ‘ಟೈಮ್ಸ್ ಆಫ್ ಇಂಡಿಯಾ’ ಈ ಬಜೆಟ್ ಚುನಾವಣೆ ಗುರಿಯಾಗಿಸಿಕೊಂಡ ನವರಸಗಳ ‘ಬಜೆಟ್ ನಾಟ್ಯ’ ಎಂದಿದೆ. ‘ದಿ ಇಂಡಿಯನ್ ಎಕ್ಸ್ ಪ್ರೆಸ್’ ಈ ಬಜೆಟ್ ‘ರಾಜಕೀಯದೊಂದಿಗಿನ ಆರ್ಥಿಕತೆ’ ಎಂದು ಕರೆದಿದೆ. ‘ಮಿಂಟ್’ ಈ ಬಜೆಟ್ ಕೇವಲ ‘ರಾಜಕೀಯ’ ಎಂದು ವಿಶ್ಲೇಷಿಸಿದರೆ, ‘ಬಿಸ್ ನೆಸ್ ಸ್ಟ್ಯಾಂಡರ್ಡ್’ ಇದು ‘ಚುನಾವಣಾ ಪೂರ್ವ ಬಜೆಟ್’ ಎಂದಿದೆ. ಬಹುತೇಕ ಇಂಗ್ಲಿಷ್ ಪತ್ರಿಕೆಗಳೂ ಬಜೆಟ್ ವರದಿಗಾಗಿ ಏಳೆಂಟು ಪುಟಗಳನ್ನು ಮೀಸಲಿಟ್ಟಿವೆ. ಆರ್ಥಿಕ ತಜ್ಞರು, ಉದ್ಯಮಿಗಳು, ರಾಜಕೀಯ ಮುಖಂಡರ ವಿಶ್ಲೇಷಣೆಗಳನ್ನೂ ಬಜೆಟ್ ಪುಟಗಳು ಒಳಗೊಂಡಿವೆ.

ಒಟ್ಟಾರೆ ಬಜೆಟ್ ಮಂಡನೆಯ ಮರುದಿನದ ಪತ್ರಿಕೆಗಳಲ್ಲಿ ಬಜೆಟ್ ಪ್ಯಾಕೇಜ್ ಬೇರೆ ಬೇರೆ ಪರಿಪಾಕಗಳಲ್ಲಿ ರೂಪುಗೊಂಡು ವರದಿಯಾಗಿದೆ. ಬಹುತೇಕ ಪತ್ರಿಕೆಗಳು ಗ್ರಾಮೀಣ ಭಾರತ ಮತ್ತು ಕೃಷಿಯನ್ನೇ ಪ್ರಮುಖವಾಗಿಟ್ಟುಕೊಂಡು ಅಂಕಿ ಸಂಖ್ಯೆ ಸಹಿತ ವರದಿ ಪ್ರಕಟಿಸಿವೆ. ಯಾವುದು ಅಗ್ಗ, ಯಾವುದು ತುಟ್ಟಿ ಎಂಬ ಬಗ್ಗೆಯೂ ಆದ್ಯತೆ ನೀಡಲಾಗಿದೆ. ಈ ಬಜೆಟ್ ಹಲವು ನಿರೀಕ್ಷೆಗಳನ್ನು ಹುಸಿಯಾಗಿಸಿದೆ ಎಂದು ಹಲವು ವಿಶ್ಲೇಷಣಾ ಬರಹಗಳು ವ್ಯಾಖ್ಯಾನಿಸಿವೆ.