samachara
www.samachara.com
ಸಾಂದರ್ಬಿಕ ಚಿತ್ರ
ಮೀಡಿಯಾ 2.0

‘ನ್ಯೂಸ್‌ ಇಲ್ಲದ ನ್ಯೂಸ್‌ ಫೀಡ್‌’: ಫೇಸ್‌ಬುಕ್‌ ಹೊಸ ನಿರ್ಧಾರ; ಮೊದಲ ಹೊಡೆತ ಬೀಳುವುದು ಮಾಧ್ಯಮ ಸಂಸ್ಥೆಗಳಿಗೆ!

“ಫೇಸ್‌ಬುಕ್‌ ತನ್ನ ನ್ಯೂಸ್ ಫೀಡ್ ಗುಣಲಕ್ಷಣಗಳಿಗೆ ಹಲವು ಬದಲಾವಣೆಗಳನ್ನು ಮಾಡುತ್ತಿದೆ. ಇದರಿಂದ ಫೇಸ್‌ಬುಕ್‌ ಬಳಕೆದಾರರು ಇನ್ನು ಮೇಲೆ ವಹಿವಾಟು, ಬ್ರಾಂಡ್ ಮತ್ತು ಸುದ್ದಿಗಳಿಗಿಂತ ತಮ್ಮ ಕುಟುಂಬ ಮತ್ತು ಸ್ನೇಹಿತರಿಂದ ಹೆಚ್ಚಿನ ಅಪ್‌ಡೇಟ್‌ ಅನ್ನು ಫೇಸ್‌ಬುಕ್‌ನಲ್ಲಿ ನೋಡಬಹುದಾಗಿದೆ,” ಎಂದು ಫೇಸ್ ಬುಕ್ ಸ್ಥಾಪಕ ಮತ್ತು ಸಿಇಓ ಮಾರ್ಕ್ ಝುಕರ್ ಬರ್ಗ್ ಹೇಳಿದ್ದಾರೆ. ಹೊಸ ವರ್ಷದ ನಿರ್ಣಯಗಳ ರೀತಿಯಲ್ಲಿ ಹೊರಬಿದ್ದಿರುವ ಜನಪ್ರಿಯ ಸಾಮಾಜಿಕ ಜಾಲತಾಣದ ಸಂಸ್ಥಾಪಕರ ಈ ಬರಹ ಜಗತ್ತಿನಾದ್ಯಂತ ಕುತೂಹಲವನ್ನೂ, ಚರ್ಚೆಗಳನ್ನು ಏಕಕಾಲಕ್ಕೆ ಹುಟ್ಟು ಹಾಕಿದೆ.

“ಸಾರ್ವಜನಿಕರಿಗೆ ಉಪಯೋಗವಾಗುವ ಬ್ರಾಂಡ್‌ಗಳು, ವಾಣಿಜ್ಯಕ್ಕೆ ಸಂಬಂಧಿಸಿದ ಮತ್ತು ಮಾಧ್ಯಮಗಳ ಸುದ್ದಿಗಳ ಪೋಸ್ಟ್‌ಗಳು ಫೇಸ್‌ಬುಕ್ ಪುಟಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಈ ಕಾರಣದಿಂದಲೇ ಜನರ ಖಾಸಗಿ ಕ್ಷಣಗಳನ್ನು ಮತ್ತು ಸಂಗತಿಗಳನ್ನು ಹಂಚಿಕೊಳ್ಳಲು ಅವಕಾಶಗಳು ಕಡಿಮೆಯಾಗಿವೆ. ಈ ಕುರಿತು ನಮಗೆ ಬಳಕೆದಾರರಿಂದ ದೂರುಗಳು ಬಂದಿವೆ. 2018ರಲ್ಲಿ ಫೇಸ್‌ಬುಕ್‌  ಮಾಧ್ಯಮದಲ್ಲಿ ನಮ್ಮ ಪ್ರಮುಖ ಗಮನ ಬಳಕೆದಾರರೇ. ಅವರು ಫೇಸ್‌ಬುಕ್‌ನಲ್ಲಿ ಕಳೆಯುವ ಸಮಯವನ್ನು ಉತ್ತಮವಾಗಿ ಕಳೆಯಬೇಕೆಂಬುದೇ ನಮ್ಮ ಕಾಳಜಿ. ಜನರನ್ನು ಪರಸ್ಪರವಾಗಿ ಸಂಪರ್ಕಿಸಿ ಹತ್ತಿರಕ್ಕೆ ತರುವ ಉದ್ದೇಶದಿಂದಲೇ ನಾವು ಫೇಸ್‌ಬುಕ್‌ ಆರಂಭಿಸಿದ್ದು. ಅದಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು. ಸಾಮಾಜಿಕ ಸಂವಹನಕ್ಕೆ ಉಪಯೋಗವಾಗುವ ವಿಷಯಗಳನ್ನು ತಿಳಿದುಕೊಳ್ಳಲು ಮಾತ್ರ ನಾವು ಸಹಾಯ ಮಾಡುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ತಂಡ ಕೆಲಸ ಮಾಡುತ್ತದೆ. ಅದೇ ನಮ್ಮ ಸದ್ಯದ ಗುರಿಯಾಗಿದೆ,”
-ಮಾರ್ಕ್ ಝುಕರ್‌ಬರ್ಗ್‌, ಫೇಸ್‌ಬುಕ್ ಸಂಸ್ಥಾಪಕ 

'ನ್ಯೂಸ್ ಫೀಡ್' ಬದಲಾವಣೆಗಾಗಿಯೇ ಕಳೆದ ವರ್ಷದಿಂದ ಫೇಸ್‌ಬುಕ್ ತಂಡ ಕೆಲಸ ಮಾಡುತ್ತಿದೆ. ಹಾಗಾಗಿ ನ್ಯೂಸ್ ಫೀಡ್‌ಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ.

“ನ್ಯೂಸ್‌ಫೀಡ್‌ ಸ್ಥಳ ಸೀಮಿತವಾಗಿರುವುದರಿಂದ ಸ್ನೇಹಿತರ, ಕುಟುಂಬದವರ ಪೋಸ್ಟ್ ಗಳು ಹೆಚ್ಚಾಗಿ ಕಾಣಿಸಿಕೊಳ್ಳಲಿದೆ. ಇಲ್ಲಿ ಫೇಸ್‌ಬುಕ್ ಬಳಕೆದಾರರು ತಮ್ಮ ಕುಟುಂಬದವರಿಂದ, ಸ್ನೇಹಿತರಿಂದ ಮತ್ತು ತಮ್ಮ ಪರಿಚಯದವರಿಂದಲೇ ಹೆಚ್ಚು ಮಾಹಿತಿ ಪಡೆದು, ಸಂವಾದಕ್ಕೆ ವೇದಿಕೆ ಒದಗಿಸಲಿದೆ. ಫೇಸ್‌ಬುಕ್‌ ಬಳಕೆಯಿಂದಾಗುವ ಮಾನಸಿಕ ಪರಿಣಾಮಗಳ ಬಗ್ಗೆ ಸಂಶೊಧನೆ ನಡೆಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ,”
-ಮಾರ್ಕ್ ಝುಕರ್‌ಬರ್ಗ್‌, ಫೇಸ್‌ಬುಕ್ ಸಂಸ್ಥಾಪಕ 

ಈ ವರ್ಷದಲ್ಲಿ (2018) ಫೇಸ್‌ಬುಕ್ ಹೊಸತನ ನೀಡಲು ನಿರ್ಧರಿಸಿದ್ದು, ನ್ಯೂಸ್‌ ಫೀಡ್‌ನ ಹೊಸ ಅಪ್‌ಡೇಟ್‌ ಬರುವ ದಿನಗಳಲ್ಲಿ ಜಾಗತಿಕವಾಗಿ ಎಲ್ಲರಿಗೆ ಲಭ್ಯವಾಗಲಿದೆ. ಫೇಸ್‌ಬುಕ್‌ನಲ್ಲಿ ದ್ವೇಷ ಮತ್ತು ನಿಂದನೆಗಳನ್ನು ನಿರ್ಮೂಲನೆ ಮಾಡಿ, ಅಲ್ಲಿ ಕಳೆಯುವ ಸಮಯವನ್ನು ಅರ್ಥಪೂರ್ಣವಾಗಿಸುವುದೇ ಈ ಹೊಸ ಪ್ರಯತ್ನದ ಉದ್ದೇಶವಾಗಿದೆ. ಇದರಿಂದ ಫೇಕ್‌ ನ್ಯೂಸ್‌ಗಳಿಗೆ ಕಡಿವಾಣ ಬೀಳುವ ಮಾತುಗಳೂ ಕೇಳಿ ಬಂದಿವೆ.

ಸುಳ್ಳು ಸುದ್ದಿಗಳನ್ನೇ ಉತ್ಪಾದಿಸುವ ವೆಬ್‌ಸೈಟ್‌ಗಳ ಸುದ್ದಿಗೆ ಫೇಸ್‌ಬುಕ್ ನ್ಯೂಸ್ ಫೀಡ್‌ನಿಂದ ಗೇಟ್‌ ಪಾಸ್ ಕೊಡುವ ಸಾಧ್ಯತೆಯಿದೆ. ಇನ್ನು ಮುಂದೆ ಸತ್ಯಾಂಶವಿರುವ ಸುದ್ದಿಗಳನ್ನಷ್ಟೇ ಫೇಸ್‌ಬುಕ್‌ನಲ್ಲಿ ಕಾಣಬಹುದು ಎನ್ನುತ್ತವೆ ವರದಿಗಳು.

“ಫೇಸ್‌ಬುಕ್‌ ಪೋಸ್ಟ್‌ಗಳ ನಿಯಮಗಳು ಬದಲಾಗುತ್ತಿವೆ. ಈ ಬದಲಾವಣೆಯು ಜನರು ಪರಸ್ಪರ ಬೆರೆಯಲು ಅನುಕೂಲ ಆಗುತ್ತದೆ. ಈ ಮೂಲಕ ಜನರು ಫೇಸ್‌ಬುಕ್‌ನಲ್ಲಿ ಕಡಿಮೆ ಸಮಯ ಕಳೆಯಲಿದ್ದಾರೆ. ಆದರೆ ಆ ಸಮಯ ಮೌಲ್ಯಯುತವಾಗಿರಲಿದೆ. ಪ್ರಸಿದ್ಧ ವ್ಯಕ್ತಿ ಅಥವಾ ಮೆಚ್ಚಿನ ರೆಸ್ಟೋರೆಂಟ್ ಮಾಡುವ ಪೋಸ್ಟ್ ಗಿಂತ ನಿಮ್ಮ ಜೀವನ ಸಂಗಾತಿ ಮಾಡುವ ಪೋಸ್ಟ್‌ ಮಾಡುವ ಫ್ಯಾಮಿಲಿ ವೀಡಿಯೋ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.

ಅನಗತ್ಯ ವಿಷಯಗಳ ಬಗ್ಗೆ ಕಾಲ ಕಳೆಯುವುದಕ್ಕಿಂತ ತಮ್ಮ ಹತ್ತಿರದವರೊಂದಿಗೆ ಪರಸ್ಪರ ಬೆರೆತು ಸಂವಹನ ನಡೆಸುವುದು ಹೆಚ್ಚು ಮುಖ್ಯವಾಗಿದೆ” ಎಂದು ಫೇಸ್‌ಬುಕ್‌ ನ್ಯೂಸ್‌ ಫೀಡ್‌ ಪ್ರಾಡಕ್ಟ್ ಮ್ಯಾನೇಜರ್ ಜಾನ್ ಹೆಜ್‌ಮಾನ್ ಸುದ್ದಿ ಸಂಸ್ಥೆ ಎಎಫ್‌ಪಿಗೆ ತಿಳಿಸಿದ್ದಾರೆ. ಈ ಹೊಸ ನಿರ್ಧಾರದಿಂದ ಫೇಸ್‌ಬುಕ್ ಶೇರುಗಳ ಬೆಲೆ ಕಡಿಮೆಯಾಗಿದೆ. ಇದೇ ಮೊದಲ ಬಾರಿಗೆ ಫೇಸ್‌ಬುಕ್ ದೊಡ್ಡ ಮಟ್ಟದ ನಷ್ಟ ಅನುಭವಿಸಿದೆ. 21 ಸಾವಿರ ಕೋಟಿ (3.3 ಬಿಲಿಯನ್ ಡಾಲರ್) ಹಣವನ್ನು ಪೇಸ್‌ಬುಕ್ ಕಳೆದುಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಾಯೋಜಕತ್ವದಿಂದಲೇ ಬಹುತೇಕ ಹಣ ಸಂಪಾದಿಸುವ ಫೇಸ್‌ಬುಕ್‌, ತನ್ನ ನ್ಯೂಸ್ ಫೀಡ್‌ ಕುರಿತು ಹೊಸ ನಿರ್ಧಾರವೇ ಬಹುಬೇಗ ಶೇರುಗಳ ಬೆಲೆಯನ್ನು ಕಳೆದುಕೊಳ್ಳಲು ಕಾರಣವಾಗಿದೆ ಎನ್ನುತ್ತವೆ ವಿಶ್ಲೇಣೆಗಳು. ಅಮೆರಿಕದ ಚುನಾವಣೆಯ ಸಂದರ್ಭದಲ್ಲಿ ನಕಲಿ ಸುದ್ದಿಗಳನ್ನು ಸೃಷ್ಟಿಸಲಾಗಿತ್ತು. ಈ ಸುದ್ದಿಗಳು ಅಮೆರಿಕ ಅಷ್ಟೇ ಅಲ್ಲದೇ, ಅನೇಕ ರಾಷ್ಟ್ರಗಳಲ್ಲಿ ಹರಿದಾಡಿ ಗಂಭೀರ ಪರಿಣಾಮಗಳನ್ನೇ ಬೀರಿದವು.

ಈ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಾಪ್ ಮತ್ತು ಟ್ವಿಟ್ಟರ್‌ಗಳು ತೀವ್ರ ಟೀಕೆಗೆ ಗುರಿಯಾಗುದ್ದವು. ನಂತರದ ದಿನಗಳಲ್ಲಿ ಫೇಸ್ಬುಕ್ ಹಲವು ಬದಲಾವಣೆಗಳನ್ನು ತಂದಿತ್ತು. ಆದರೆ ಈ ಬಾರಿಯ ಬದಲಾವಣೆ ಮಾಧ್ಯಮಗಳಿಗೆ ಮತ್ತು ವಾಣಿಜ್ಯ ವ್ಯವಹಾರಗಳಿಗೆ ದೊಡ್ಡ ಮಟ್ಟಿಗಿನ ಪರಿಣಾಮ ಬೀರಲಿದೆ ಎಂಬುದೇ ಅತ್ಯಂತ  ಆಘಾತಕಾರಿ ಅಂಶವಾಗಿದೆ.

ಭಾರತದಲ್ಲಿ ಸುಮಾರು 46 ಕೋಟಿ ಜನರು ಇಂಟರ್‌ನೆಟ್ ಬಳಸುತ್ತಿದ್ದಾರೆ. ಇದರಲ್ಲಿ ಶೇ 95ರಷ್ಟು ಜನರು ಸ್ಮಾರ್ಟ್‌ಫೋನ್‌ ಮೂಲಕವೇ ಇಂಟರ್ನೆಟ್ ಸಂಪರ್ಕ ಹೊಂದಿದ್ದಾರೆ. 2016 ರಿಂದ ಫೇಸ್‌ಬುಕ್ ಬಳಕೆದಾರರ ಲೆಕ್ಕದಲ್ಲಿ 70%ರಷ್ಟು ಏರಿಕೆ ಕಂಡಿದೆ. ಸದ್ಯದಲ್ಲಿ 24 ಕೋಟಿ ಭಾರತೀಯರು ಫೇಸ್‌ಬುಕ್ ಬಳಸುತ್ತಿದ್ದಾರೆ ಎನ್ನುತ್ತವೆ ಅಂಕಿ ಅಂಶಗಳು.

ಜಗತ್ತಿನಾದ್ಯಂತ 200 ಕೋಟಿಗಿಂತಲೂ ಹೆಚ್ಚು ಜನರು ಸಕ್ರಿಯವಾಗಿ ಫೇಸ್‌ಬುಕ್‌ ಬಳಸುತ್ತಿದ್ದಾರೆ. ಯುರೋಪ್‌ ದೇಶವೊಂದರಲ್ಲಿಯೇ 307 ದಶಲಕ್ಷಕ್ಕಿಂತ ಹೆಚ್ಚು ಜನ ಫೇಸ್‌ಬುಕ್‌ನಲ್ಲಿದ್ದಾರೆ ಎಂಬುದು ವಿಶೇಷ.“ಫೇಸ್‌ಬುಕ್‌ ಬಳಕೆಗೆ ಮಾಡುವುದರಿಂದ ಮಾನಸಿಕವಾಗಿ ಹಾನಿಕಾರಕ ಪರಿಣಾಮಗಳು ಕಂಡು ಬಂದಿವೆ. ಇದರಿಂದ ಕೆಲವು ಬಳಕೆದಾರರು ಫೇಸ್‌ಬುಕ್‌ನಲ್ಲಿ ನಿಷ್ಕ್ರಿಯರಾಗುತ್ತಿದ್ದಾರೆ," ಎನ್ನುತ್ತವೆ ಕೆಲವು ಸಂಶೋಧನೆಗಳು.

ಫೇಸ್‌ಬುಕ್‌ನಲ್ಲಿನ ನ್ಯೂಸ್ ಫೀಡ್ ಬದಲಾವಣೆಗಳು ಸುದ್ದಿ ಮಾದ್ಯಮಗಳಿಗೆ ತೀವ್ರ ಆತಂಕವನ್ನು ತಂದೊಡ್ಡಲಿವೆ. ಫೇಸ್‌ಬುಕ್‌ ಕಾರಣದಿಂದಲೇ ಅನೇಕ ಸುದ್ದಿ ಮಾಧ್ಯಮಗಳು ಡಿಜಿಟಲ್ ಜಗತ್ತಿನಲ್ಲಿ ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದ್ದವು. ಜೊತೆಗೆ ಕೆಲವು ನ್ಯೂಸ್ ವೆಬ್‌ಸೈಟ್‌ಗಳು ತಮ್ಮ ಲಾಭಾಂಶಕ್ಕೆ ಫೇಸ್‌ಬುಕ್‌ನ್ನೇ ಆಧರಿಸಿದ್ದವು. ಆದರೆ ಅದಕ್ಕೀಗ ಹೊಡೆತ ಬೀಳುವ ಲಕ್ಷಣಗಳು ಕಂಡುಬರುತ್ತಿವೆ.

ಜೊತೆಗೆ ಫೇಕ್ ನ್ಯೂಸ್‌ಗಳಿಗೆ ಪೇಸ್‌ಬುಕ್‌ನಲ್ಲಿ ಕಡಿವಾಣವೂ ಬೀಳಲಿದೆ.ಇವುಗಳ ನಡುವೆ, ಫೇಸ್‌ಬುಕ್ ಸಂಸ್ಥಾಪಕ ಹೊಸ ಹೇಳಿಕೆಯಲ್ಲಿ ಎಲ್ಲಿಯೂ ಅಪ್ಪಿತಪ್ಪಿ 'ಫೇಕ್‌ ನ್ಯೂಸ್‌'ಗಳ ವಿಚಾರ ಪ್ರಸ್ತಾಪವಾಗಿಲ್ಲ. ಈಗಾಗಲೇ ಸಾಮಾಜಿಕ ಜಾಲತಾಣಗಳು ಸುದ್ದಿ ಸಂಸ್ಥೆಗಳ ಮಾಹಿತಿ ಜತೆಗೆ, ನಕಲಿ ಸುದ್ದಿಗಳಿಗೂ ಸ್ಥಾನ ಒದಗಿಸಿವೆ. ಇದಕ್ಕೆ ಕಡಿವಾಣ ಹಾಕುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಿರುವಾಗಲೇ, ನ್ಯೂಸ್‌ ಫೀಡ್‌ನಲ್ಲಿ ಬದಲಾವಣೆ ಮಾಡುವ ಮೂಲಕ, ಸುದ್ದಿಯನ್ನು ಕಡಿಮೆ ಮಾಡಿ ಖಾಸಗಿ ಕ್ಷಣಗಳುಗೆ ಆದ್ಯತೆ ನೀಡುವ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದ ದೈತ್ಯ ಸಂಸ್ಥೆ ಮುಂದಾಗಿದೆ.

ಕಳೆದ ಐದಾರು ವರ್ಷಗಳಲ್ಲಿ ಆನ್‌ಲೈನ್‌ ಜಗತ್ತನ್ನು ಬದಲಾಯಿಸಿದ್ದು ಫೇಸ್‌ಬುಕ್ ತಂತ್ರಜ್ಞಾನ. ಅನಿವಾರ್ಯವಾಗಿ ಇತರೆ ಮಾಧ್ಯಮ ಸಂಸ್ಥೆಗಳೂ ಕೂಡ, ಫೇಸ್‌ಬುಕ್‌ ಕಾರಣಕ್ಕಾಗಿಯೇ ಸಾಕಷ್ಟು ಹೂಡಿಕೆ ಮಾಡಿವೆ. ಸಾಮಾಜಿಕ ಜಾಲತಾಣಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸುದ್ದಿ ನೀಡುವ ತಮ್ಮ ವಿಧಾನಗಳನ್ನು ಮರುವಿನ್ಯಾಸಗೊಳಿಸಿದ್ದವು.

ವಿಡಿಯೋ ವಿಚಾರದಲ್ಲಿಯೂ ಫೇಸ್‌ಬುಕ್ ನ್ಯೂಸ್‌ ಫೀಡ್‌ ಗಮನದಲ್ಲಿಟ್ಟುಕೊಂಡು ತಯಾರಿಸುವ ಕೆಲಸ ನಡೆಯುತ್ತಿತ್ತು. ಆದರೆ ಇದೀಗ ನ್ಯೂಸ್‌ ಫೀಡ್‌ನಲ್ಲಿ ನ್ಯೂಸ್‌ ಕಡಿಮೆ ಮಾಡುವ ನಿರ್ಧಾರ ಹೊರಬಿದ್ದಿದೆ. ಸಹಜವಾಗಿಯೇ, ಇದು ಭವಿಷ್ಯದ ಆನ್‌ಲೈನ್‌ ಸುದ್ದಿಮಾಧ್ಯಮಗಳ ಪ್ರಸರಣದ ಮೇಲೆ ಪರಿಣಾಮಗಳನ್ನು ಮೂಡಿಸಲಿದೆ.