ಬಜೆಟ್ ವರದಿ: ಮಾಧ್ಯಮಗಳಿಗೆ ಕಾರ್ಯತತ್ಪರತೆಯ ಪಾಠ ಹೇಳಲು ಮುಂದಾದ ಸಿದ್ದರಾಮಯ್ಯ ಸರಕಾರ
ಮೀಡಿಯಾ 2.0

ಬಜೆಟ್ ವರದಿ: ಮಾಧ್ಯಮಗಳಿಗೆ ಕಾರ್ಯತತ್ಪರತೆಯ ಪಾಠ ಹೇಳಲು ಮುಂದಾದ ಸಿದ್ದರಾಮಯ್ಯ ಸರಕಾರ

'ಟೈಮ್ಸ್‌ ಆಫ್‌ ಇಂಡಿಯಾ' ಪತ್ರಿಕೆಯ ವರದಿಯೊಂದಕ್ಕೆ ಸ್ಪಷ್ಟೀಕರಣ ನೀಡುವ ಭರದಲ್ಲಿ ಪತ್ರಕರ್ತರ ಕಾರ್ಯತತ್ಪರತೆಯ ಪಾಠ ಹೇಳಲು ರಾಜ್ಯ ಸರ್ಕಾರ ಮುಂದಾದ ಪ್ರಕರಣ ಇದು. ಈ ಮೂಲಕ ಕೇವಲ ವರದಿಗಳಿಗೆ ಮಾತ್ರ ಪ್ರತಿಕ್ರಿಯಿಸುವುದಲ್ಲ, ಬದಲಿಗೆ ವರದಿ ಮಾಡುವ ಮಾಧ್ಯಮಗಳ ಹೊಣೆಗಾರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ನೆನಪಿಸಲು ಹೊರಟಂತಾಗಿದೆ. ಚುನಾವಣೆಗೆ ದಿನಗಣನೆ ಆರಂಭವಾಗಿರುವ ಈ ಸಮಯದಲ್ಲಿ ಮಾಧ್ಯಮ ಸಂಸ್ಥೆಗಳಿಗೆ ಸರಕಾರ ಪಾಠ ಹೇಳಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

'ಟೈಮ್ಸ್‌ ಆಫ್‌ ಇಂಡಿಯಾ' ವರದಿಯ ಅನ್ವಯ ಸರಕಾರ ಕಳೆದ ಆರ್ಥಿಕ ವರ್ಷದಲ್ಲಿ ಬಜೆಟ್ಟಿನ ಶೇಕಡ 50 % ಕೂಡ ಹಣವನ್ನು ವ್ಯಯಿಸಿಲ್ಲ ಎನ್ನಲಾಗಿತ್ತು. ಈ ವರದಿಯಲ್ಲಿ ಸತ್ಯವನ್ನು ಮರೆಮಾಚಲಾಗಿದೆ ಎಂಬುದನ್ನು ಸರಕಾರ ತಿಳಿಸಲು ಹೊರಟಿತ್ತು. ಅದಕ್ಕಾಗಿಯೇ ಸರಕಾರದ ವತಿಯಿಂದ ವಾರ್ತಾ ಮತ್ತು ಪ್ರಸಾರ ಇಲಾಖೆ 'ರಿ-ಜಾಯಿಂಡರ್‌' ಒಂದನ್ನು ಇ-ಮೇಲ್‌ ಮುಖಾಂತರ ಕಳುಹಿಸಿದೆ. ಎರಡು ಪುಟಗಳ ವಾರ್ತಾ ಇಲಾಖೆಯ ಪತ್ರದಲ್ಲಿ ಕಡೆಯ ಎರಡು ಪ್ಯಾರಾಗಳನ್ನು ಪತ್ರಕರ್ತರಿಗೆ ಬುದ್ದಿ ಹೇಳಲು ಬಳಸಲಾಗಿದೆ. ಈ ಇ-ಮೇಲ್‌ ಬಂದ ನಂತರ ಪತ್ರಕರ್ತರ ವಲಯದಲ್ಲಿ ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಪತ್ರದಲ್ಲೇನಿದೆ?:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾರ್ತಾ ಇಲಾಖೆ ಮೂಲಕ ಕಳುಹಿಸಿರುವ ಇ-ಮೇಲ್‌ ಆರಂಭವಾಗುವುದು, ದೇಶದಲ್ಲೇ ಕರ್ನಾಟಕ ರಾಜ್ಯ ಸರಕಾರ ಉತ್ತಮ ಆಡಳಿತ ನಡೆಸುತ್ತಿದೆ ಎಂಬ ಸಾಲಿನ ಮೂಲಕ. ಬಜೆಟ್‌ನಲ್ಲಿ ಘೋಷಿಸಿರುವ ಅಷ್ಟೂ ಹಣವನ್ನೂ ಆಯಾ ಇಲಾಖೆಯಡಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತಿದೆ ಎನ್ನುತ್ತದೆ.

ಪ್ರಕಟವಾದ ವರದಿಯೊಂದರಲ್ಲಿ ದೋಷವಿದ್ದರೆ ಅದಕ್ಕೆ ಸೀಮಿತವಾಗಿ ಸರಕಾರ ಹಿಂಬರಹವನ್ನು ನೀಡಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ವರದಿಗಷ್ಟೆ ಸೀಮಿತವಾಗದೇ ಮಾದ್ಯಮ ಸಂಸ್ಥೆಗಳ ಜವಾಬ್ದಾರಿಯ ಬಗ್ಗೆ ಮತ್ತು ರಾಜ್ಯದ ಹಿತವನ್ನು ಪತ್ರಕರ್ತರು ಕಾಯುತ್ತಿಲ್ಲ ಎಂಬರ್ಥದಲ್ಲಿ ಹಿಂಬರಹ ಕಳುಹಿಸಿರುವುದೇ ಚರ್ಚೆಯ ಕೇಂದ್ರ ಬಿಂದುವಾಗಿದೆ. "ಇತ್ತೀಚಿನ ದಿನಗಳಲ್ಲಿ ಕೆಲ ಮಾಧ್ಯಮಗಳು ಸತ್ಯವನ್ನು ಪ್ರಕಟಿಸುವ ಬದಲು ಸುದ್ದಿಯ ಹಪಹಪಿಗೆ ಬಿದ್ದು ಹೆಡ್‌ಲೈನ್‌ಗಾಗಿ ಸುದ್ದಿ ಮಾಡುತ್ತಿದೆ. ಸಂವಿಧಾನದ ನಾಲ್ಕನೇ ಕಂಬವಾಗಿರುಗವ ಮಾಧ್ಯಮ ವರದಿ ಮಾಡುವಾಗ ತನ್ನ ಕಾರ್ಯತತ್ಪರತೆಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅದರಲ್ಲೂ ಸರಕಾರದ ಆಡಳಿತ ಮತ್ತು ರಾಜ್ಯದ ಸ್ಥಿತಿಗತಿಗಳ ಬಗ್ಗೆ ವರದಿ ಮಾಡುವಾಗ ಹೆಚ್ಚಿನ ಕಾಳಜಿ ವಹಿಸಬೇಕು," ಎಂಬುದನ್ನು ಒಂದು ಪ್ಯಾರ ಹೇಳುತ್ತದೆ.

ಇನ್ನೊಂದು ಪ್ಯಾರಾದಲ್ಲಿ, "ಖಚಿತ ಮಾಹಿತಿ ಮತ್ತು ಆಧಾರ ಹೊಂದಿರುವ ವಿಷಯವನ್ನು ರಾಜ್ಯದ ಜನರಿಗೆ ಸತ್ಯವನ್ನು ತಲುಪಿಸುವ ಜವಾಬ್ದಾರಿ ಇದೆ ಮಾಧ್ಯಮ ಸಂಸ್ಥೆಗಳಿಗಿದೆ. ಅದನ್ನು ಮರೆತು ಅಸ್ಥಿರತೆಯ ಪತ್ರಿಕೋದ್ಯಮ ಮಾಡಬಾರದು. ಹಾಗೆ ಮಾಡುವ ಮೂಲಕ ರಾಜ್ಯಕ್ಕೆ ಅಪಖ್ಯಾತಿ ತಂದತ್ತಾಗುತ್ತದೆ," ಎನ್ನುತ್ತದೆ ಸರಕಾರದ ಹಿಂಬರಹ.

ಸಂವಿಧಾನದ ನಾಲ್ಕನೇ ಅಂಗವಾಗಿರುವ ಮಾಧ್ಯಮಕ್ಕೆ ಸಾಮಾಜಿಕ ಕಳಕಳಿ ಇದ್ದೇ ಇದೆ. ಎಲ್ಲೋ ಕೆಲ ಮಾಧ್ಯಮಗಳು ಮಾಡುವ ತಪ್ಪುಗಳಿಂದ ಇಡೀ ಮಾಧ್ಯಮಕ್ಕೆ ಪಾಠ ಹೇಳುವ ಅಧಿಕಾರವನ್ನು ಸರಕಾರ ಯಹಾವಾಗ ಪಡೆದುಕೊಂಡಿತು ಎಂಬ ಪ್ರಶ್ನೆ ಪತ್ರಕರ್ತರಲ್ಲೀಗ ಮೂಡಿದೆ. ಸರಕಾರ ತಪ್ಪು ಹೆಜ್ಜೆ ಇಟ್ಟಾಗ ಅದನ್ನು ಸರಿಪಡಿಸುವ ಮತ್ತು ತಪ್ಪನ್ನು ತಿದ್ದುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಲೇ ಬಂದಿವೆ. ಚುನಾವಣೆ ಸಮೀಪದಲ್ಲಿ ಸರಕಾರ ಮಾಧ್ಯಮಕ್ಕೆ ಬುದ್ದಿ ಹೇಳುವ ನಿಲುವನ್ನು ತಾಳಿದ್ದು, ಪರೋಕ್ಷವಾಗಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಮುನ್ಸೂಚನೆಯಂತೆ ಭಾಸವಾಗುತ್ತಿದೆ.

ಶುಕ್ರವಾರದ ಪತ್ರಿಕೆಯಲ್ಲಿ 'ಟೈಮ್ಸ್‌ ಆಫ್‌ ಇಂಡಿಯಾ' ಸರಕಾರ ಕಳುಹಿಸಿದ ಹಿಂಬರಹವನ್ನು ಪ್ರಕಟಿಸಿದೆ. ಟೈಮ್ಸ್‌ನ ಈ ಬೆಳವಣಿಗೆಗೆ ಹಿಂಬರಹವೊಂದೇ ಕಾರಣವಾಗಿರಲಾರದು ಎಂಬುದು ಹಲವು ಪತ್ರಕರ್ತರ ಅಭಿಪ್ರಾಯವಾಗಿದೆ. ವಾರ್ತಾ ಇಲಾಖೆಯಿಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ, ಸಮಾಜ ಕಲ್ಯಾಣ ಇಲಾಖೆಯಿಂದ ಹೀಗೇ ಸರಕಾರದ ಹಲವು ಇಲಾಖೆಗಳಿಂದ ಕೋಟ್ಯಂತರ ರೂಪಾಯಿಗಳ ಜಾಹೀರಾತುಗಳನ್ನು ಸರಕಾರ ನೀಡುತ್ತದೆ. ಸರಕಾರದ ಹಿಂಬರಹವನ್ನು ಮುದ್ರಿಸದೇ ಹೋದಲ್ಲಿ, ಜಾಹೀರಾತಿಗೆ ಕುತ್ತುಂಟಾಗಬಹುದು ಎಂಬ ವಿಚಾರವೂ ಟೈಮ್ಸ್‌ನ ಈ ನಿರ್ಣಯಕ್ಕೆ ಕಾರಣವಿರಬಹುದು.

ಸರಕಾರದ ವಿರುದ್ಧದ ವರದಿ, ನಂತರ ಸರಕಾರದ ಹಿಂಬರಹ ಮತ್ತು ಮಣಿದ ಟೈಮ್ಸ್‌; ಈ ಎಲ್ಲವನ್ನೂ ಅವಲೋಕಿಸಿದರೆ ಮುಂದಿನ ದಿನಗಳಲ್ಲಿ ಸರಕಾರದ ವಿರುದ್ಧ ಮಾಧ್ಯಮ ದನಿ ಎತ್ತುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಮೊದಲ ಹೆಜ್ಜೆಯಾಗಿ ಕಾಣಿಸುತ್ತಿದೆ. ಹಿಂಬರಹದಲ್ಲಿ ಸೂಚ್ಯವಾಗಿ ಸರಕಾರದ ವಿರುದ್ಧ ಹೋಗಬೇಡಿ ಎಂಬ ಗೂಡಾರ್ಥಗಳೂ ಗೋಚರವಾಗುತ್ತದೆ ಎನ್ನುತ್ತಿದೆ ಮಾಧ್ಯಮ ವಲಯ.