ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ’: ಕರ್ನಾಟಕ ಪತ್ರಿಕೋದ್ಯಮದ ಐತಿಹಾಸಿಕ ಹೆಜ್ಜೆಗಳು
ಮೀಡಿಯಾ 2.0

ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ’: ಕರ್ನಾಟಕ ಪತ್ರಿಕೋದ್ಯಮದ ಐತಿಹಾಸಿಕ ಹೆಜ್ಜೆಗಳು

ಕನ್ನಡದ ಮೊದಲ ಪತ್ರಿಕೆಯ ಹೆಸರು ‘ಮಂಗಳೂರ ಸಮಾಚಾರ’'. ಇದು ಪ್ರಾರಂಭವಾಗಿದ್ದು 1843ರ ಜುಲೈ1 ರಂದು. ಜುಲೈ 1ರಂದೇ ಕರ್ನಾಟಕದಲ್ಲಿ ‘ಪತ್ರಿಕಾ ದಿನ'ವನ್ನಾಗಿ ಆಚರಿಸುತ್ತಾರೆ. ರೆವರೆಂಡ್‌ ಹರ್ಮನ್‌ ಮೊಗ್ಲಿಂಗ್ ಈ ಪತ್ರಿಕೆ ಪ್ರಾರಂಭಿಸುವ ಮೂಲಕ ‘ಕನ್ನಡ ಪತ್ರಿಕೋದ್ಯಮದ ಜನಕ 'ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಈ ಮೂಲಕ ಕನ್ನಡ ಪತ್ರಿಕೋದ್ಯಮ ಆರಂಭವಾಗಿ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. ಮಂಗಳೂರು ಸಮಾಚಾರಕ್ಕೆ ಮುಂಬರುವ ಜುಲೈ 1 ರಂದು 175 ವರ್ಷಗಳಾಗಲಿವೆ.

ಮಂಗಳೂರ ಸಮಾಚಾರ ಪ್ರಕಟಗೊಳ್ಳುತ್ತಿದ್ದು ಪ್ರತಿ ಹದಿನೈದು ದಿನಗಳಿಗೊಮ್ಮೆ; ಅದು ಪಾಕ್ಷಿಕ ಪತ್ರಿಕೆಯಾಗಿತ್ತು. ಮೊದಲ ಪತ್ರಿಕೆಯ ಕ್ರಯ (ಬೆಲೆ) ಒಂದು ದುಡ್ಡು (ಅಂದಿನ ದಿನಗಳಲ್ಲಿ ರೂಪಾಯಿ ಇನ್ನೂ ಜಾರಿಗೆ ಬಂದಿರಲಿಲ್ಲ). ಈ ಪತ್ರಿಕೆಯನ್ನು ಮೊದಲಿಗೆ ಕಾಗದ ಎನ್ನುತ್ತಿದ್ದರು. ಮಂಗಳೂರಿನ ಬಾಸೆಲ್ ಮಿಶನ್ ಪ್ರೆಸ್‌ನ ಕಲ್ಲಚ್ಚಿನಲ್ಲಿ ಮುದ್ರಣ ನಡೆಯುತ್ತಿತ್ತು. 1834ರಲ್ಲಿ ಭಾರತಕ್ಕೆ ಬಂದ ಬಾಸೆಲ್ ಮಿಶನರಿಗಳು 1841ರಲ್ಲಿ ತುಳುನಾಡಿನ ಮೊದಲ ಮುದ್ರಣಾಲಯ ಸ್ಥಾಪಿಸಿದರು. ಅದುವೇ ಬಾಸೆಲ್ ಮಿಶನ್ ಪ್ರೆಸ್‌. ಇದು ಮಂಗಳೂರಿನ ಬಲ್ಮಠದ ಥಿಯೋಲಾಜಿಕಲ್ ಸೊಸೈಟಿ ಆವರಣದಲ್ಲಿದೆ.

"ಈ ದೇಶವೆಂಬ ಮನೆಯಲ್ಲಿ ವಾಸಿಸುವ ಜನರು ಇಂದಿನ ಪರಿಯಂತರ ಹೊರಗಿನ ದೇಶಸ್ಥರ ಸಮಾಚಾರ ಮಾರ್ಗ ಮರ್ಯಾದೆಗಳನ್ನು ತಿಳಿಯದೇ ಕಿಟಿಕಿಯಿಲ್ಲದ ಬಿಡಾರದಲ್ಲಿ ಉಳಕೊಳ್ಳುವವರ ಹಾಗೆಯಿರುತ್ತಾ ಬಂದರು. ಅದು ಕಾರಣ ಹೊರಗಿನ ಕಾರ್ಯಗಳನ್ನು ಕಾಣುವ ಹಾಗೆಯೂ ಒಳಗೆ ಸ್ವಲ್ಪ ಬೆಳಕು ಬೀರುವ ಹಾಗೆಯೂ ನಾಲ್ಕೂ ದಿಕ್ಕಿಗೆ ಕಿಟಿಕಿಗಳನ್ನು ಮಾಡುವ ಈ ಸಮಾಚಾರ ಕಾಗದವನ್ನು ಪಕ್ಷವೊಂದು ಸಾರಿ ಸಿದ್ದ ಮಾಡಿ ಅದನ್ನು ಓದಬೇಕೆಂದಿರುವೆಲ್ಲರಿಗೆ ಕೊಟ್ಟರೆ ಕಿಟಿಕಿಗಳನ್ನು ನೋಡಿದ ಹಾಗಿರುವುದು,” ಇದು ಮಂಗಳೂರು ಸಮಾಚಾರ ಪತ್ರಿಕೆಯ ಆಶಯದ ಮಾತುಗಳು.

ಈ ಮೂಲಕ ತಮ್ಮ ಸುತ್ತಮುತ್ತಲೂ ಏನು ನಡೆಯುತ್ತದೆ ಎಂಬುದನ್ನು ಜನರು ಅರಿತುಕೊಳ್ಳಲಿ ಎಂದು ಅವರಲ್ಲಿ ವಾಚನಾಭಿರುಚಿ ಮತ್ತು ಸಮಕಾಲೀನ ವಿಷಯ ಜ್ಞಾನವನ್ನು ಬಿತ್ತಲು ಸಹಾಯ ಮಾಡಿದ್ದ ಕೀರ್ತಿ ಹರ್ಮನ್ ಮೊಗ್ಲಿಂಗ್ ಅವರಿಗೆ ಸಲ್ಲುತ್ತದೆ.

“ಮಿಶನರಿಗಳು ಈ ಪತ್ರಿಕೆ(ಮಂಗಳೂರ ಸಮಾಚಾರ)ಯನ್ನು ಮತ ಪ್ರಚಾರಕ್ಕಾಗಿ ಬಳಸಿಕೊಳ್ಳಬಹುದಾಗಿತ್ತು. ಆದರೆ ಹಾಗೇ ಮಾಡದೇ ಇದ್ದುದರಿಂದ, ಈ ಪತ್ರಿಕೆಯು ಜಾತ್ಯಾತೀತ ಪತ್ರಿಕೆಯಾಗಿ ನಿಂತಿತು. ಕ್ರೈಸ್ತ ಮತದ ವಿಚಾರಗಳು ಆ ಪತ್ರಿಕೆಯಲ್ಲಿ ಬಳಕೆಯಾದ ಸಂದರ್ಭಗಳೆಂದರೆ, ದಾಸರ ಪದಗಳ ವಿವರಗಳನ್ನು ಕೊಡುತ್ತಾ ಅದಕ್ಕೆ ಸಮಾನಾದ ಬೈಬಲ್ ಉಕ್ತಿಗಳನ್ನು ನೀಡಿರುವುದು.

1850ರಲ್ಲಿ ಮೊಗ್ಲಿಂಗ್ ಸಂಪಾದಿಸಿದ ದಾಸರ ಪದಗಳು ಪುಸ್ತಕ ರೂಪದಲ್ಲಿ ಕಲ್ಲಚ್ಚು ಮುದ್ರಣದಲ್ಲಿ ಪ್ರಕಟಗೊಂಡವು. ಇದೇ ದಾಸರ ಪದಗಳ ಪ್ರಥಮ ಮುದ್ರಣ ರೂಪ,” ಎನ್ನುತ್ತದೆ ವಿಕಿಪೀಡಿಯ ಮಾಹಿತಿ.

‘‘ಮಂಗಳೂರಿನವರು ಮೊದಲಾದ ಯೀ ದೇಶಸ್ಥರು ಕಥೆಗಳಂನೂ ವರ್ತಮಾನಗಳಂನೂ ಹೇಳುವುದರಲ್ಲಿಯೂ ಕೇಳುವುದರಲ್ಲಿಯೂ ಯಿಚ್ಛೆಯುಳ್ಳವರಾಗಿರುತ್ತಾರೆ. ಬೆಳಿಗ್ಗೆ ಬಂದ್ರ್ಯದಲ್ಲಾಗಲಿ ಕಚೇರಿ ಹತ್ತರವಾಗಲಿ ಒಬ್ಬನು ಬಾಯಿಗೆ ಬಂದ ಹಾಗೆ ಒಂದು ವರ್ತಮಾನದ ಹಾಗೆ ಮಾತಾಡಿದರೆ ಅದನ್ನು ಬೇರೊಬ್ಬನು ಆಶ್ಚರ್ಯದಿಂದ ಕೇಳಿ ಇನ್ನೊಬ್ಬನಿಗೆ ಹೇಳಿ ಸಾಯಂಕಾಲ ಪರಿಯಂತರ ಸುಳ್ಳು ಸುದ್ದಿಯಿಂದ ಊರೆಲ್ಲ ತುಂಬಿಸುತ್ತಾನೆ. ಮರುದಿವಸ ನಿನ್ನಿನ ವರ್ತಮಾನ ಸುಳ್ಳುಯಂತಾ ಕಾಣುವಷ್ಟರೊಳಗೆ ಎಮ್ಮೆ ಮೊಲೆಯಂತೆ ಮತ್ತೊಂದು ಹುಟ್ಟಿ ಆತು. ಈ ಪ್ರಕಾರವಾಗಿ ಬಹಳ ಜನರು ಕಾಲಕ್ರಮೇಣ ಮಾಡುತ್ತಾರೆಂದು ಕೆಲವು ವರ್ಷದಿಂದ ಇಲ್ಲಿ ವಸ್ತಿಯಾಗಿದ್ದ ಕೆಲವರು ತಿಳುಕೊಂಡು ಇದರಲ್ಲಿ ಪ್ರಯೋಜನವಿಲ್ಲವೆಂದು ಈ ಮನುಷ್ಯರ ಸಮಾಚಾರ ಆಸರಕ್ಕೆ ಯೋಗ್ಯವಾಗಿ ಪೂರೈಸಬೇಕೆಂದು ಆಲೋಚನೆ ಮಾಡಿದ್ದರಿಂದ ಈ ಸಮಾಚಾರದ ಸಂಗ್ರಹವನ್ನು ಕೂಡಿಶಿ ಪಕ್ಷಕ್ಕೆ ಒಂದು ಕಾಗದವನ್ನು ಛಾಪಿಸಿ ಸ್ವಲ್ಪ ಕ್ರಯಕ್ಕೆ ಜನರ ಕೈಯಲ್ಲಿ ಶೇರಿಸಬೇಕೆಂಬುದಾಗಿ ನಿಶ್ಚಯಿಸಿ ಅಧೆ,” ಇದು ಮಂಗಳೂರು ಸಮಾಚಾರದ ಪೀಠಿಕೆಯಾಗಿದೆ. (ಇಲ್ಲಿ ಆಗಿನ ವ್ಯಾಕರಣ, ಭಾಷೆಯನ್ನು ಯಥಾವತ್ತಾಗಿಡಲಾಗಿದೆ)

ನಾಲ್ಕು ಪುಟಗಳ ಪತ್ರಿಕೆಯಲ್ಲಿ ಇರುವ ವಿಷಯಗಳ ಬಗ್ಗೆ ಮೊಗ್ಲಿಂಗ್ ಹೇಳಿದ್ದು ಹೀಗಿದೆ; ‘‘ಮಂಗಳೂರು ಸಮಾಚಾರ ಕಾಗದದಲ್ಲಿ ಬರಿಯುವ ವರ್ತಮಾನಗಳ ಪಟ್ಟಿ: 1. ವೂರ ವರ್ತಮಾನ, 2. ಸರಕಾರದವರ ನಿರೂಪಗಳು, 3. ಸರ್ವರಾಜ್ಯ ವರ್ತಮಾನಗಳು, 4. ನೂತನವಾದ ಆಶ್ಚರ್ಯ ಸುದ್ದಿಗಳು, 5. ಅಂನ್ಯರ ನಡೆಗಳು, 6. ಸುಬುದ್ಧಿಗಳು, 7. ಕಥೆಗಳು, 8. ಯಾರಾದರು ವೊಂದು ವರ್ತಮಾನ ಅಥವಾ ವೊಂದು ಮಾತು ಯಿದರಲ್ಲಿ ಶೇರಿಸಿ ಛಾಪಿಸಬೇಕು ಎಂತ ಬರದು ಕಳುಹಿಸಿದರೆ ಆ ಸಂಗತಿ ಸತ್ಯವಾಗಿದ್ದರೆ ಅದು ಸಹಾ ಯೀ ವರ್ತಮಾನ ಕಾಗದ ಸಂಗಡ ಕೂಡಿಸಿ ಛಾಪಿಸಬಹುದಾಗಿರುತ್ತದೆ, 9. ಸಾಮತಿ ಕಥೆ, 11. ಪುರಂದರದಾಸನ ಪದ’’. ಹೀಗೆ ಹೀಗೆ ವಿವಿಧ ರೀತಿಯ ಸುದ್ದಿಗಳ ವರ್ಗೀಕರಣದ ವಾರ್ತೆಗಳನ್ನು ಇಲ್ಲಿ ಕಾಣಬಹುದಾಗಿದೆ.

'ಕಂನಡ' ಸಮಾಚಾರ:

ಮಂಗಳೂರು ಸಮಾಚಾರ ಪತ್ರಿಕೆ 8 ತಿಂಗಳ ಕಾಲ ಪಾಕ್ಷಿಕವಾಗಿ ಪ್ರಕಟವಾಯಿತು. ಆದರೆ ಪತ್ರಿಕೆಯ ಓದುಗರು ಹೆಚ್ಚಾದರು. ಮಂಗಳೂರಿನಲ್ಲಿ ಕಲ್ಲಚ್ಚು ಮುದ್ರಣದ ವ್ಯವಸ್ಥೆ ಕಾರಣದಿಂದ ಹೆಚ್ಚಿನ ಪ್ರತಿಗಳ ಮುದ್ರಣಕ್ಕಾಗಿ ಬಳ್ಳಾರಿಗೆ ಸ್ಥಳಾಂತರವಾಯಿತು. ಬಳಿಕ ಪತ್ರಿಕೆಯ ಹೆಸರನ್ನು 'ಕಂನಡ ಸಮಾಚಾರ' ಎಂದು ಬದಲಿಸಿದರು.

ಕಂನಡ ಸಮಾಚಾರದ ಮೂಲ ಪ್ರತಿ
ಕಂನಡ ಸಮಾಚಾರದ ಮೂಲ ಪ್ರತಿ

1821ರಲ್ಲಿ ಬಳ್ಳಾರಿಯಲ್ಲಿ ಸ್ಥಾಪನೆಯಾದ ಲಂಡನ್ ಮಿಶನ್ ಪ್ರೆಸ್‍ನಲ್ಲಿ ಅಚ್ಚು ಮೊಳೆಗಳನ್ನು ಬಳಸಿಕೊಂಡು ‘ಕಂನಡ ಸಮಾಚಾರ’ ಮುದ್ರಣ ಮಾಡುತ್ತಿದ್ದರು. ಜೂನ್ 1844ರಿಂದ ನವೆಂಬರ್ ತನಕ ಮೊಗ್ಲಿಂಗ್ ಸಂಪಾದಕತ್ವದಲ್ಲಿಯೇ ‘ಕನ್ನಡ ಸಮಾಚಾರ’ ಪ್ರಕಟಗೊಳ್ಳುತ್ತಿತ್ತು.

“ಕನ್ನಡ ಮಾತನಾಡುವ ಎಲ್ಲ ಜನರಲ್ಲೂ ಇದು ಪ್ರಸಾರಕ್ಕೆ ಬರಲಿ ಎಂಬ ಆಶಯದಿಂದ ಹೀಗೆ ಮಾಡಿದ್ದೇವೆ,” ಎಂದು ಮೊಗ್ಲಿಂಗ್ ಅವರು ಕಂನಡ ಸಮಾಚಾರದ ಕುರಿತು ಹೇಳಿದ್ದಾರೆ. ಇದರ ಪುಟಸಂಖ್ಯೆ 4ರಿಂದ 8ಕ್ಕೆ ಏರಿತು. ಬೆಲೆಯು ಹಿಂದಿನ ಒಂದು ದುಡ್ಡು (ಹಿಂದಿನ ಎರಡು ಕಾಸು) ಇದ್ದದ್ದು, ಎರಡು ದುಡ್ಡಿಗೆ ಏರಿತು. “ಈ ಪತ್ರಿಕೆ ದೀರ್ಘಾಯುವಾಗಲಿಲ್ಲ. ಆದರೆ, ಕನ್ನಡ ಪತ್ರಿಕೋದ್ಯಮ ಮಾತ್ರ ದಿನದಿಂದ ದಿನಕ್ಕೆ ಉತ್ತುಂಗಕ್ಕೆ ಏರಿತು,” ಎಂದು ಕನ್ನಡದ ಪತ್ರಕರ್ತರನೇಕರು ಅಭಿಪ್ರಾಯಪಡುತ್ತಾರೆ.

ಮೊಗ್ಲಿಂಗ್ ಕುರಿತು:

ಮೊಗ್ಲಿಂಗ್ ಮಂಗಳೂರಿಗೆ ಬಂದಿದ್ದು 1836ರಲ್ಲಿ. ಭಾಷೆ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಅವರು ಮೊದಲು ಕನ್ನಡ ಕಲಿತರು. ತದ ನಂತರದಲ್ಲಿ ಕನ್ನಡಿಗರಿಗೆ ಒಂದು ವರ್ತಮಾನವನ್ನು ಪ್ರಾರಂಭಿಸಲು ಬಯಸಿದರು. ಅದೇ ‘ಮಂಗಳೂರು ಸಮಾಚಾರ’.

ಒಂದು ಹಳೆಯ ಕಡತ
ಒಂದು ಹಳೆಯ ಕಡತ

ಮೊಗ್ಲಿಂಗ್ ಹುಟ್ಟಿದ್ದು 1811ರ ಮೇ 29ರಂದು. ವ್ಯುಟೆಂಬರ್ಗ್‍ನ ಪ್ರಕ್ಕನ್‍ಹೈಮ್ ಎಂಬ ಊರಲ್ಲಿ ಜನನ. ಲ್ಯಾಟಿನ್ ಭಾಷೆಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅವರು, 12 ವರ್ಷದ ಬಾಲಕನಿರುವಾಗ ಪರೀಕ್ಷೆಯೊಂದರಲ್ಲಿ ಜರ್ಮನ್ ಭಾಷೆಯ ಕಠಿಣವಾದ ಒಂದು ಪರಿಚ್ಛೇದವನ್ನು ಕ್ಷಣಮಾತ್ರದಲ್ಲಿ ಭಾಷಾಂತರಿಸಿದ್ದು, ಉಪಾದ್ಯಾಯರಿಗೆ ಆಶ್ಚರ್ಯವನ್ನುಂಟು ಮಾಡಿತ್ತು.

ಭಾಷಾಭ್ಯಾಸಕ್ಕೆ ಗಮನ ಕೊಡುತ್ತಿದ್ದ ಮೊಗ್ಲಿಂಗ್, ತಂದೆಗೆ ಲ್ಯಾಟಿನ್ ಭಾಷೆಯಲ್ಲಿ, ತಾಯಿಗೆ ಜರ್ಮನ್ ಭಾಷೆಯಲ್ಲಿಯೂ ಪತ್ರ ಬರೆಯುತ್ತಿದ್ದರು.ಮಿಶನರಿಯಾಗಬೇಕೆಂಬ ಆಶಯವನ್ನು ಮೊಗ್ಲಿಂಗ್ ಹೊಂದಿದ್ದರು. ಇದೇ ಕಾರಣಕ್ಕಾಗಿ ಬಾಸೆಲ್‍ನಲ್ಲಿ ದೈವಜ್ಞಾನ ತರಬೇತಿಗೆ ಸೇರಿದರು. ವಿದ್ಯಾಭ್ಯಾಸದೊಂದಿಗೆ ಅರಬ್ಬಿ, ಸಂಸ್ಕೃತ, ಇಂಗ್ಲಿಷ್ ಭಾಷೆಗಳನ್ನೂ ಕಲಿತರು.

1836ರಲ್ಲಿ ಭಾರತಕ್ಕೆ ಬಂದು ಬಾಸೆಲ್ ಮಿಶನ್ ಕೇಂದ್ರವಾಗಿರುವ ಧಾರವಾಡದಲ್ಲಿ ನೆಲೆ ನಿಂತರು. 1841ರಿಂದ 1853ರ ತನಕ ಮಂಗಳೂರಿನಲ್ಲಿ, 1855 ರಿಂದ 1860 ಕೊಡಗು, ಆಲ್ಮಂಡದಲ್ಲಿದ್ದು ಮಿಶನರಿಯಾಗಿ ಸೇವೆ ಸಲ್ಲಿಸಿದರು. 1881ರ ಮೇ 10 ರಂದು ನಿಧನರಾದರು. ಕರ್ನಾಟದಲ್ಲಿ ಮೊಗ್ಲಿಂಗ್ ವಾಸ ಮಾಡಿದ್ದು 24 ವರ್ಷ. ಈ ಅವಧಿಯಲ್ಲಿ ಅವರು ಮಾಡಿದ ಕನ್ನಡ ಸೇವೆ ಅಪಾರ ಎನ್ನಲಾಗುತ್ತದೆ.

ಮೊಗ್ಲಿಂಗ್ ಸಂಪಾಕತ್ವದ ಬರವಣಿಗೆಯಲ್ಲಿ ಮಂಗಳೂರು ಸಮಾಚಾರ (1843), ಕನ್ನಡ ಸಮಾಚಾರ(1844), ಈರಾರು ಪತ್ರಿಕೆ (1857)ಗಳು ಕನ್ನಡ ಪತ್ರಿಕೋದ್ಯಮಕ್ಕೆ ಆರಂಭದ ಹೆಜ್ಜೆ ಗುರುತುಗಳಾಗಿವೆ. ‘ಕನ್ನಡದ ಪಂಚಾಂಗ’, ‘ಜಾತಿ ವಿಚಾರಣೆ’, ‘ದೇವ ವಿಚಾರಣೆ’, ‘ಹೃದಯದರ್ಪಣ’, ‘ಈರಾರು ಪತ್ರಿಕೆ’, ‘ಕ್ರೈಸ್ತಗೀತೆಗಳು’, ‘ಯಾತ್ರಿಕನ ಸಂಚಾರ’, ‘ಚಿಕ್ಕವನಾದ ಹೆನ್ರಿಯೂ ಅವನ ಬೋಯಿಯೂ’ ಮೋಗ್ಲಿಂಗ್‌ರ ಕೃತಿಗಳು.

ಇವುಗಳ ಜೊತೆಗೆ ‘ಜೈಮಿನಿ ಭಾರತ’, ‘ತೊರವೆ ರಾಮಾಯಣ’ ಸೇರಿದಂತೆ ಹಲವು ಕೃತಿಗಳನ್ನು ಸಂಪಾದಿಸಿದ್ದಾರೆ. 24 ದಾಸರ ಪದಗಳನ್ನು ಜರ್ಮನ್ ಭಾಷೆಗೆ ಅನುವಾದಿಸಿರುವುದು ಅತ್ಯಂತ ವಿಶೇಷ.‘ಮಂಗಳೂರು ಸಮಾಚಾರ’ದೊಂದಿಗೆ ಆರಂಭವಾದ ಕನ್ನಡ ಪತ್ರಿಕೋದ್ಯಮ ಇಂದು ಅಧಿಕೃತವಾಗಿ ದೃಶ್ಯ ಮಾಧ್ಯಮಗಳು, ಮುದ್ರಣ ಮಾಧ್ಯಮಗಳು ಹಾಗೂ ಡಿಜಿಟಲ್ ಮಾಧ್ಯಮಗಳ ರೂಪದಲ್ಲಿ ಇಂದು ಜನರಿಗೆ ಸ್ಥಳೀಯ ಭಾಷೆಯಲ್ಲಿ ಮಾಹಿತಿ ನೀಡುವ ಕೆಲಸ ಮಾಡುತ್ತಿದೆ.