ಟಿವಿ9, ಪಬ್ಲಿಕ್ ಟಿವಿ ಬಹಿರಂಗ ಕಿತ್ತಾಟಕ್ಕೆ ‘ಬಾರ್ಕ್‌ ಸಾಕ್ಷಿ’: ಚುನಾವಣೆ, ಜಾಹೀರಾತು ಮತ್ತು ಉದ್ಯಮಶೀಲತೆ!
ಮೀಡಿಯಾ 2.0

ಟಿವಿ9, ಪಬ್ಲಿಕ್ ಟಿವಿ ಬಹಿರಂಗ ಕಿತ್ತಾಟಕ್ಕೆ ‘ಬಾರ್ಕ್‌ ಸಾಕ್ಷಿ’: ಚುನಾವಣೆ, ಜಾಹೀರಾತು ಮತ್ತು ಉದ್ಯಮಶೀಲತೆ!

ಪತ್ರಿಕೋದ್ಯಮ ಸಾರ್ವಜನಿಕ ಹಿತಾಸಕ್ತಿಗಿಂತ, ಔದ್ಯಮಿಕ ಹಿತಾಸಕ್ತಿ ಕಡೆಗೆ ಹೆಚ್ಚು ವಾಲಿಕೊಂಡಿದೆ ಎಂಬುದನ್ನು ನೆನಪಿಸುವ ಕೆಲಸವನ್ನು ‘ಉತ್ತಮ ಸಮಾಜಕ್ಕಾಗಿ’ ಎಂದು ಹೇಳಿಕೊಳ್ಳುವ ಟಿವಿ9 ಮಾಡಿದೆ. ಜತೆಗೆ ಪಬ್ಲಿಕ್‌ ಟಿವಿಯ ಬಣ್ಣವೂ ಬಯಲಾಗಿದೆ

''ಸದಾ ಎಲ್ಲರನ್ನೂ ಜರಿಯುತ್ತ, ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅದೇ ಸತ್ಯ ಎಂದು ವಾದಿಸುವ ಅ ಮಹಾಶಯ ಸಂಪಾದಕರು ಈಗ ಕನ್ನಡಿಗರ ಕ್ಷಮೆ ಕೇಳುವ ಸಮಯ ಬಂದಿದೆ. ಸುಳ್ಳು ಹೇಳಿದವರು ಸಿಕ್ಕಿಹಾಕಿಕೊಳ್ಳಲೇಬೇಕು ಎಂಬ ನೀತಿಯಂತೆಯೇ, ಈಗ ಚಾನಲ್‌ ಸಂಪಾದಕರು ರೆಡ್‌ ಹಾಂಡ್‌ ಅಗಿ ಸಿಕ್ಕಿಬಿದ್ದಿದ್ದಾರೆ. ಅವರು ಹೇಳಿರುವ ಸುಳ್ಳಿಗೆ ಈಗ ತಕ್ಕ ಉತ್ತರ ನೀಡುವ ಸಮಯ ಬಂದಿದೆ. ಟಿವಿ ಚಾನಲ್‌ಗಳ ರೇಟಿಂಗ್‌ಗಳ ಬಗ್ಗೆ ವಿಶ್ವಾಸಾರ್ಹ ಅಂಕಿ ಅಂಶ ನೀಡುವ  ಬಾರ್ಕ್‌ ಬಗ್ಗೆಯೇ ಹೇಳಿರುವ ಈ ಸಂಪಾದಕ ಮಹಾಶಯನ ಬಗ್ಗೆ ಟಿವಿ9 ಬಾರ್ಕ್‌ಗೆ ದೂರು ನೀಡಲಿದೆ...''

ಕಳೆದ ವರ್ಷದ ಕೊನೆಯಲ್ಲಿ, ಡಿ. 30ನೇ ತಾರೀಖು ಮದ್ಯಾಹ್ನ ಒಂದು ಗಂಟೆಗೆ ಟಿವಿ 9 ಕರ್ನಾಟಕದಲ್ಲಿ ಭಿತ್ತರಗೊಂಡ ಸುದ್ದಿಯೊಂದರ ಸಾಲುಗಳು ಇವು. ಈ ಮೂಲಕ ಕರ್ನಾಟಕ ಸುದ್ದಿ ಮಾಧ್ಯಮಗಳಲ್ಲಿ ನಡೆಯುತ್ತಿದ್ದ ಮಾರುಕಟ್ಟೆ ಪೈಪೋಟಿಯ ಬಹಿರಂಗ ಪ್ರದರ್ಶನದ ತುಣಕೊಂದು ವೀಕ್ಷಕರಿಗೆ ನೋಡಲು ಲಭ್ಯವಾದಂತಾಯಿತು.

ಟಿಆರ್‌ಪಿ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಲೇ ಇರುತ್ತವೆ. ಟೆಲಿವಿಝನ್ ರೇಟಿಂಗ್ ಪಾಯಿಂಟ್ ಎಂದು ಕರೆಯುವ, ವೀಕ್ಷಕರ ಅಂಕಿ ಅಂಶಗಳನ್ನು ಬಾರ್ಕ್‌ ಎಂಬ ಸಂಸ್ಥೆ ನೀಡುತ್ತದೆ. ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ, ಬಾರ್ಕ್‌ ವರದಿಯನ್ನು 'ಪಬ್ಲಿಕ್ ಟಿವಿ' ಬಳಸಿಕೊಂಡು ಜನರಿಗೆ ತಪ್ಪು ಸಂದೇಶ ನೀಡುತ್ತಿದೆ ಎಂಬುದು ಟಿವಿ9 ಆನ್‌ಏರ್‌ನಲ್ಲಿಯೇ ಮಾಡಿದ ಆರೋಪದ ಸಾರಾಂಶ. ಇದಕ್ಕೆ 'ಪಬ್ಲಿಕ್ ಟಿವಿ' ನಿರೀಕ್ಷಿತ ಪ್ರತಿಕ್ರಿಯೆ ನೀಡದಿದ್ದರೂ, 'ತಾನು ಗುಜರಾತ್ ಚುನಾವಣೆಯ ದಿನ ಅತಿ ಹೆಚ್ಚು ಕನ್ನಡಗರಿಂದ ವೀಕ್ಷಣೆ ಒಳಪಟ್ಟ ವಾಹಿನಿ ಎಂಬ ನಿಲುವಿಗೆ' ಅಂಟಿಕೊಂಡಿದೆ. ವಿವಾದದ ಮೂಲವಾಗಿರುವ 'ಚುನಾವಣಾ ಚಾಣಕ್ಯ' ಎಂಬ ಪ್ರೊಮೋವನ್ನು 'ಯಾರ ಆಸ್ತಿಯೂ ಅಲ್ಲ' ಎಂದು ಹೇಳಿಕೊಂಡಿರುವ ಸುದ್ದಿ ವಾಹಿನಿ ಪ್ರಸಾರ ಮಾಡುತ್ತಲೇ ಇದೆ.

ಕನ್ನಡದಲ್ಲಿ ವಾಹಿನಿಗಳ ನಡುವೆ ಹೀಗೆ ಬಹಿರಂಗ ಸಮರ ಅಪರೂಪವೇ ಆದರೂ, ಇದೇ ಮೊದಲೇನೂ ಅಲ್ಲ. ಹಿಂದೆ, ಸುವರ್ಣ ನ್ಯೂಸ್‌ ಮತ್ತು ಪಬ್ಲಿಕ್ ಟಿವಿಗಳ ನಡುವೆ ದೊಡ್ಡ ಮಟ್ಟದ ಪೈಪೋಟಿಗಳು ನಡೆದಿದ್ದವು. ಅದು ಒಂದು ಹಂತದಲ್ಲಿ ತೀರಾ ಅಸಹ್ಯಕರ ಪರಿಸ್ಥಿತಿಯನ್ನೂ ತಲುಪಿತ್ತು. ದೈಹಿಕ ಹಲ್ಲೆಗಳಾಗಿದ್ದವು ಎಂದು ಕೆಲವು ಪತ್ರಕರ್ತರು ನೆನಪಿಸಿಕೊಳ್ಳುತ್ತಾರೆ. ಆದರೆ ಈ ಬಾರಿ, ಟಿವಿ ವಾಹಿನಿಗಳ ಕದನ ನಂ. 1 ಸ್ಥಾನದಲ್ಲಿರುವ ಟಿವಿ9 ಮತ್ತು 2ನೇ ಸ್ಥಾನದಲ್ಲಿರುವ ಪಬ್ಲಿಕ್ ಟಿವಿ ನಡುವೆ ಆರಂಭವಾಗಿದೆ. ಅದು ರೇಟಿಂಗ್ ವಿಚಾರದಲ್ಲಿ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ.

ಏನಿದು ರೇಟಿಂಗ್ ಕಿತ್ತಾಟ?:

ಅಳತೆ ಅಥವಾ ಮಾಪನ ಎಂಬುದು ನಾಗರಿಕತೆ ಕಂಡುಕೊಂಡು ಬಂದ ಅಳತೆಗೋಲು. ಕಾರ್ಪೊರೇಟ್‌ ಕೇಂದ್ರಿತ ಇವತ್ತಿನ ದಿನಗಳಲ್ಲಿ ಈ ಅಳತೆಗೋಲು ಮಾರುಕಟ್ಟೆಯನ್ನು ನಿಯಂತ್ರಿಸುವವರ ಕೈಯಲ್ಲೇ ಇದೆ. ಅವರು ರೂಪಿಸಿದ ಮಾನದಂಡದ ಅಡಿಯಲ್ಲಿ, ಅವರು ನೀಡಿದ ಅಂಕಿ ಅಂಶಗಳ ವಿಶ್ವಾಸಾರ್ಹತೆಯಲ್ಲಿ ಕೋಟ್ಯಾಂತರ ರೂಪಾಯಿ ವಹಿವಾಟನ್ನು ಟಿವಿ ಉದ್ಯಮ ನಡೆಸುತ್ತಿದೆ. ಸದ್ಯ ಭಾರತದ ಟಿವಿ ವೀಕ್ಷಕರನ್ನು ಅಳೆಯುವ ಮಾಪಕ ಬಾರ್ಕ್‌ ಇಂಡಿಯಾ ಕೈಯಲ್ಲಿದೆ. ಅದರ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಂತೆ, '(ಬಾರ್ಕ್‌ ಇಂಡಿಯಾ) ಮೂರು ಉದ್ಯಮಗಳ ಸಂಕರ. ಭಾರತದಲ್ಲಿ ಕಳೆದ 10 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಭಿತ್ತರ ಮಾಡುವವರು (ಬ್ರಾಡ್‌ಕಾಸ್ಟರ್ಸ್‌), ಜಾಹೀರಾತು ನೀಡುವವರು ಮತ್ತು ಮೀಡಿಯಾ ಏಜೆನ್ಸಿಗಳು ಒಟ್ಟು ಸೇರಿ ಹುಟ್ಟು ಹಾಕಿದ ಸಂಸ್ಥೆ.' ಇದು ನೀಡಿವ ವಾರಕ್ಕೊಂದು ವರದಿಯ ಆಧಾರದ ಮೇಲೆ ಟಿವಿ ವಾಹಿನಿಯೊಂದರ ಜಾಹೀರಾತು ಮಾರುಕಟ್ಟೆ ನಿರ್ಧಾರವಾಗುತ್ತದೆ.

ಮೇಲಿರುವುದು ಬಾರ್ಕ್‌ ಪ್ರತಿ ವಾರ ನೀಡಿವ 'ಟಿಆರ್‌ಪಿ ರಿಪೋರ್ಟ್‌' ಸ್ಯಾಂಪಲ್. ಇದರ ಅಂಕಿ ಅಂಶಗಳ ಆಧಾರದ ಮೇಲೆ ಜಾಹೀರಾತು ಮಾರುಕಟ್ಟೆ ಯಾವ ವಾಹಿನಿಗೆ ಎಷ್ಟು ಮೊತ್ತದ ಜಾಹೀರಾತು ನೀಡಬೇಕು ಎಂದು ನಿರ್ಧಾರ ಮಾಡುತ್ತವೆ. "ಒಂದು ಪಾಯಿಂಟ್‌ ಇಸ್‌ ಈಕ್ವಲ್‌ ಟು 2 ಲ್ಯಾಕ್‌..." ಎನ್ನುತ್ತಿದ್ದರು ವಾಹಿನಿಯೊಂದರ ವ್ಯವಸ್ಥಾಪಕ ನಿರ್ದೇಶಕರೊಬ್ಬರು. ಇದನ್ನು ನಾವು ಸ್ವತಂತ್ರವಾಗಿ ಖಚಿತಪಡಿಸಿಕೊಂಡಿಲ್ಲ.

ಕನ್ನಡದ ಸುದ್ದಿ ವಾಹಿನಿಗಳ ವಿಚಾರದಲ್ಲಿ ಜಿಆರ್‌ಪಿ (ಗ್ರಾಸ್‌ ರೇಟಿಂಗ್‌ ಪಾಯಿಂಟ್‌) ಲೆಕ್ಕ ಹಾಕಿದರೆ, ಇಂಗ್ಲಿಷ್ ವಾಹಿನಿಗಳು ರೇಟಿಂಗ್‌ನ್ನು 'ಇಂಪ್ರೆಶನ್‌' ಹೆಸರಿನಲ್ಲಿ ಅಳೆಯಲಾಗುತ್ತದೆ. ಇದರಿಂದ ಎಷ್ಟು ಮೊತ್ತದ ವಹಿವಾಟು ಸಾಧ್ಯ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲವಾದರೂ, ಟಿಆರ್‌ಪಿ, ಇಂಪ್ರೆಶನ್‌ಗಳ ಮಾನದಂಡದ ಆಧಾರದ ಮೇಲೆಯೇ ಜಾಹೀರಾತು ಹರಿದು ಬರುವುದು ಖಾತ್ರಿ ಇದೆ. ಹೀಗಾಗಿ, ಪ್ರತಿ ವಾರದ ರೇಟಿಂಗ್ ಜತೆಗೆ, ಪ್ರತಿ ಕಾರ್ಯಕ್ರಮ ರೇಟಿಂಗ್‌ ಕೂಡ ಮುಖ್ಯವೆನಿಸುತ್ತಿದೆ. ದೂರು ನೀಡುವುದು, ಅದನ್ನು ಸಾರ್ವಜನಿಕವಾಗಿ ಪ್ರಕಟಿಸುವುದು ಉದ್ಯಮಶೀಲತೆಯೇ ಆದರೂ, ಅದನ್ನು ಮೀರಿ ಉದ್ಯಮ ಹಿತಾಸಕ್ತಿ ಕೆಲಸ ಮಾಡುತ್ತಿದೆ. ಆ ಹಿನ್ನೆಲೆಯಲ್ಲಿ ಟಿವಿ9 ಬಾರ್ಕ್‌ಗೆ ದೂರು ನೀಡಲು ಹೊರಟಿದೆ.

ಯಾರು ಸರಿ?:

ಟಿವಿ 9 ಮಾಡುತ್ತಿರುವ ಪ್ರಮುಖ ಆರೋಪ, ಗುಜರಾತ್ ಚುನಾವಣೆ ದಿನ ಕರ್ನಾಟಕದಲ್ಲಿ ಅತಿ ಹೆಚ್ಚು ಜನ ಯಾವ ವಾಹಿನಿಯನ್ನು ವೀಕ್ಷಿಸಿದ್ದಾರೆ ಎಂಬುದಕ್ಕೆ ಬಾರ್ಕ್‌ ನೀಡಿದ ವರದಿಗೆ  ವ್ಯತಿರಿಕ್ತವಾದ ಮಾಹಿತಿಯನ್ನು ಪಬ್ಲಿಕ್ ಟಿವಿ ಪ್ರಸಾರ ಮಾಡಿದೆ ಎಂಬುದು. ಇದನ್ನು ಹೇಳಲು ಟಿವಿ9 ಬಳಸಿದ ಭಾಷೆ, ದ್ವನಿ ಹಾಗೂ ಜನರ ಮುಂದಿಟ್ಟ ರೀತಿ ವಿಚಿತ್ರವಾಗಿತ್ತು. ಬಾರ್ಕ್‌ ಹಿನ್ನೆಲೆಯಲ್ಲಿ ಆರೋಪ ಮಾಡಬೇಕಾದ ವಾಹಿನಿ, ತನ್ನ ಪ್ರತಿಸ್ಫರ್ಧಿಯನ್ನು 'ಸುಳ್ಳುಗಾರ'ರು ಎಂದು ಹೇಳಿತು. 'ಜನತೆ ಮುಂದೆ ಕ್ಷಮಾಪಣೆ ಕೇಳಬೇಕು...' ಎಂದು ಅಹ್ವಾನ ನೀಡಿತು. '... ದೂರು ನೀಡಲಿದೆ' ಎನ್ನುವ ಮೂಲಕ ಕಾನೂನಿನ ಮೊರೆ ಹೋಗುವ ಇರಾದೆ ಇದೆ ಎಂಬುದನ್ನೂ ಹೇಳಿತು.

“ಅವರ ಪ್ರಕಾರ ಗುಜರಾತ್ ಚುನಾವಣಾ ಫಲಿತಾಂಶದ ದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಒಂದೇ ಸುದ್ದಿಯನ್ನು ನೀಡಿದ್ದು ಪಬ್ಲಿಕ್ ಟಿವಿ ಮಾತ್ರ. ಇದೀಗ ಅವರು ಅದನ್ನೇ ಮುಂದಿಡುತ್ತಿದ್ದಾರೆ. ಗಂಟೆಗಳ ಲೆಕ್ಕದಲ್ಲಿ ಟಿವಿ9 ವಾಹಿನಿಯನ್ನು ಜನ ನೋಡಿದ್ದರೂ, ಗುಜರಾತ್ ಚುನಾವಣೆ ವಿಚಾರದಲ್ಲಿ ಅತಿ ಹೆಚ್ಚು ಸಮಯ ಪಬ್ಲಿಕ್ ಟಿವಿ ನೋಡಿದ್ದಾರೆ ಎಂಬುದು ಅವರು ಮುಂದಿಡುವ ಸಂಭಾವ್ಯ ವಾದ,’’
ಪಬ್ಲಿಕ್ ಟಿವಿಯನ್ನು ಹತ್ತಿರದಿಂದ ಬಲ್ಲ ಪತ್ರಕರ್ತರೊಬ್ಬರ ಮಾತು.

ಕೆಲವು ವರ್ಷಗಳ ಹಿಂದೆ ಕನ್ನಡದ ಎರಡು ಪ್ರಮುಖ ಪತ್ರಿಕೆಗಳು ನಾವು 'ನಂ 1' ಎಂದು ಒಟ್ಟಿಗೆ ಮುದ್ರಿಸಿಕೊಳ್ಳುತ್ತಿದ್ದವು. ಒಬ್ಬರು ಪತ್ರಿಕೆಗಳ ಪ್ರಸರಣವನ್ನು ಅಳೆಯಲು ಇರುವ, ಎಬಿಸಿ ವರದಿ ಮುಂದಿಟ್ಟರೆ, ಇನ್ನೊಬ್ಬರು ಆರ್‌ಎನ್‌ಐ ವರದಿ ಮುಂದಿಡುತ್ತಿದ್ದರು. ಅಲ್ಲಿಯೂ ಕೂಡ 'ನಂಬರ್ 1' ಎಂಬುದು ಮಾರುಕಟ್ಟೆ ಮತ್ತು ಜಾಹೀರಾತಿನ ಕಾರಣಕ್ಕೇ ನಡೆದಿತ್ತು ಎಂಬುದು ಗಮನಾರ್ಹ.

ಇದೀಗ ಟಿವಿಯಲ್ಲಿ ಒಂದು ದಿನ ಪ್ರಸಾರವಾದ ಕಾರ್ಯಕ್ರಮದಲ್ಲಿ ನಂ. 1 ಎಂದು ಹೇಳಿಕೊಳ್ಳುತ್ತಿದ್ದಂತೆ ತೀಕ್ಷ್ಣ ಪ್ರತಿಕ್ರಿಯೆ ಸುದ್ದಿ ವಾಹಿನಿಗಳ ಮಾರುಕಟ್ಟೆಯಿಂದಲೇ ಬಂದಿದೆ. ಇದಕ್ಕೆ ಕಾರಣ, ಬಾರ್ಕ್‌ ಆಚೆಗೆ ಇರುವ ಉದ್ಯಮದ ಹಿತಾಸಕ್ತಿ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

“ಯಾರು ಸರಿ, ಯಾರು ತಪ್ಪು ಎಂಬುದನ್ನು ಬಾರ್ಕ್‌ ನಿರ್ಧಾರ ಮಾಡುತ್ತದೆ. ಹಿಂದೆ ಟ್ಯಾಮ್‌ ಇದ್ದಾಗಲೂ ಇಂತಹ ಹಲವು ದೂರುಗಳು ಕೇಳಿಬಂದಿದ್ದವು. ಆದರೆ ಅವ್ಯಾವವೂ ನಂತರ ಹೆಚ್ಚು ಸದ್ದು ಮಾಡಲಿಲ್ಲ. ಈ ಬಾರಿ ಚುನಾವಣೆ ಹೊಸ್ತಿಲಲ್ಲಿ ಇದೆ. ಇಂತಹ ಸಮಯದಲ್ಲಿ ಕನ್ನಡದಲ್ಲಿ ರಾಜಕೀಯ ವರದಿಯನ್ನು ಒಂದು ವಾಹಿನಿಯಲ್ಲಿ ಹೆಚ್ಚು ವೀಕ್ಷಿಸಿದ್ದಾರೆ ಎಂದರೆ, ಅದು ಕರ್ನಾಟಕದ ಚುನಾವಣೆ ಸಮಯದಲ್ಲಿಯೂ ಸಮಸ್ಯೆಯಾಗುತ್ತದೆ. ಹೀಗಾಗಿಯೇ ಟಿವಿ9 ಅನಿರೀಕ್ಷಿತ ರೀತಿಯಲ್ಲಿ ತನ್ನ ಪ್ರತಿಸ್ಪರ್ಧಿಗೆ ಆನ್‌ಏರ್‌ನಲ್ಲಿ ಉತ್ತರ ನೀಡಬಹುದು,’’
ವಾಹಿನಿಯೊಂದರ ಜಾಹೀರಾತು ವಿಭಾಗದ ವ್ಯವಸ್ಥಾಪಕರೊಬ್ಬರ ಅನಿಸಿಕೆ.

ಸದ್ಯ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ, ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ಸುದ್ದಿ ಮಾಧ್ಯಮ ಮಾರುಕಟ್ಟೆಯಲ್ಲಿ 'ಬಹಿರಂಗ ಸಮರ' ಆರಂಭವಾಗಿದೆ ಎಂಬುದನ್ನು ಖಚಿತವಾಗಿ ಹೇಳಬಹುದು. ಆದರೆ ಯಾರು ಸರಿ? ಯಾರು ತಪ್ಪು? ಎಂಬುದನ್ನು ಬಾರ್ಕ್‌ ಹಾಗೂ ಕಾನೂನು ನಿರ್ಧಾರ ಮಾಡಬೇಕಿದೆ. ಸರಿ ತಪ್ಪುಗಳಾಚೆಗೆ, ಚುನಾವಣೆ ಸುತ್ತಲಿನ ಕವರೇಜ್ ಹಾಗೂ ಫಲಿತಾಂಶದ ದಿನ ಜನರ ವೀಕ್ಷಣೆಯನ್ನು ಹಿಡಿದಿಟ್ಟವರು ಮುಂದಿನ ವರ್ಷಗಳ ಮಾರುಕಟ್ಟೆಯನ್ನು ನಿಯಂತ್ರಿಸುವ ಮುನ್ಸೂಚನೆಯೂ ಇದರ ಹಿಂದಿದೆ. ಪತ್ರಿಕೋದ್ಯಮ ಸಾರ್ವಜನಿಕ ಹಿತಾಸಕ್ತಿಗಿಂತ, ಔದ್ಯಮಿಕ ಹಿತಾಸಕ್ತಿ ಕಡೆಗೆ ಹೆಚ್ಚು ವಾಲಿಕೊಂಡಿದೆ ಎಂಬುದು ಮತ್ತೊಮ್ಮೆ ನೆನಪಿಸುವ ಕೆಲಸವನ್ನು 'ಉತ್ತಮ ಸಮಾಜಕ್ಕಾಗಿ' ಎಂದು ಹೇಳಿಕೊಳ್ಳುವ ಟಿವಿ9 ಮಾಡಿದೆ.