samachara
www.samachara.com
ಸಾಂಧರ್ಬಿಕ ಚಿತ್ರ
ಮೀಡಿಯಾ 2.0

ಆನ್‌ಲೈನ್ ಪತ್ರಕರ್ತನ ಮೊದಲ ಅಸೈನ್‌ಮೆಂಟ್: ಸಿಐಡಿ ‘ಸೈಬರ್ ಕ್ರೈಂ ಠಾಣೆ’ ದರ್ಶನ!

‘ಸಮಾಚಾರ’ಕ್ಕೆ ಸೇರಿದ ನಂತರ, ನನ್ನ ಎರಡನೇ ಅಸೈನ್‌ಮೆಂಟ್: ಸೈಬರ್ ಕ್ರೈಂ ಪೊಲೀಸ್ ಠಾಣೆ ಪಾಲಿಗೆ ಮೊದಲ ಭೇಟಿ. 2017ರಲ್ಲಿ ದಾಖಲಾದ ಸೈಬರ್ ಕ್ರೈಂಗಳ ಮಾಹಿತಿ ನೀಡುವ ಸ್ಟೋರಿ ಮಾಡಬೇಕಿತ್ತು. ಅದಕ್ಕಾಗಿ ಬೆಂಗಳೂರಿನ ಹೃದಯ ಭಾಗದಲ್ಲಿದ್ದ ಸಿಐಡಿ ಕೇಂದ್ರ ಕಛೇರಿಯ ಒಳಗೆ ಇರುವ ಸೈಬರ್ ಕ್ರೈಂ ಪೊಲೀಸ್‌ ಠಾಣೆ ಕಡೆ ಹೊರಟೆ. ಅಲ್ಲಿ ಡಿವೈಎಸ್ಪಿ ಶರತ್ ಭೇಟಿ ಮತ್ತು ಒಂದಷ್ಟು ಮಾಹಿತಿ ಪಡೆಯುವುದು ಉದ್ದೇಶವಾಗಿತ್ತು. ಅವರಿಗೆ ಏನೇನು ಪ್ರಶ್ನೆಗಳನ್ನು ಕೇಳಬೇಕು? ಮನಸು ಲೆಕ್ಕ ಹಾಕುತ್ತಿತ್ತು.

ಮಧ್ಯಾಹ್ನ ಸುಮಾರು 3:30ರ ವೇಳೆಗೆ ಸಿಐಡಿ ಕಚೇರಿಯ ಮುಂದೆ ನಿಂತಿದ್ದೆ. ಗೇಟು ತಲುಪುತ್ತಿದ್ದಂತೆಯೇ ಎರಡು ಮೂರು ಪೋಲೀಸ್ ಜೀಪುಗಳು ಭರ್ರನೆ ಹೊರಗೆ ಹೋದವು. ಗೇಟಿನ ಪಕ್ಕವೇ ಕುಳಿತಿದ್ದ  ಇಬ್ಬರು ಸೆಕ್ಯುರಿಟಿಗಳು ನನ್ನನ್ನೇನು ವಿಚಾರಿಸದಿದ್ದರೂ ನಾನೇ ಅವರನ್ನು ಮಾತಾಡಿಸಿದೆ.  ‘‘ಸರ್, ಡಿವೈಎಸ್ಪಿ ಶರತ್ ಎಲ್ಲಿರ್ತಾರೆ?’’ ಎಂದೆ. ಅವರು ಅಷ್ಟೇನೂ ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಮತ್ತಾವುದೋ ಲೆಡ್ಜರ್ ಒಳಗೆ ತಲ್ಲೀನರಾದಂತೆ ಕಂಡು ಬಂದರು. ಕೆಲ ಸಮಯದ ತರುವಾಯು ನನ್ನತ್ತ ದೃಷ್ಟಿ ಬೀರಿದ ಒಬ್ಬರು ಕರ್ತವ್ಯನಿರತ ಪೇದೆ, ‘ಏನು…?’ ಎಂದು ತಲೆಯಾಡಿಸಿದರು.‘’ಡಿವೈಎಸ್ಪಿ ಶರತ್” ಎಂದೆ, ದೊಡ್ಡದೊಂದು ಲೆಡ್ಜರನ್ನು ನನ್ನತ್ತ ದೂಡಿ, ‘’ವಿವರ ಬರೆದು ಹೋಗಿ, ಮೊದಲನೆ ಬಿಲ್ಡಿಂಗ್,’’ ಎಂದರು. ಇಲ್ಲೇ ಹೀಗಿದ್ರೆ, ಒಳಗೆ ಪೊಲೀಸ್‌ ಆತಿಥ್ಯ ಹೇಗಿರಬಹುದು? ಅಂತ ಪ್ರಶ್ನೆಯೊಂದು ಮೂಡಿ ಮರೆಯಾಯಿತು. ಕೊನೆಗೂ ಮುಂದಿದ್ದ ರಸ್ತೆಯಲ್ಲಿ, ಮೊದಲ ಬಿಲ್ಡಿಂಗ್ ಹುಡುಕಿಕೊಂಡು ಹೊರಟೆ.

ರಸ್ತೆಯ ಎರಡೂ ಬದಿ ದೊಡ್ಡ ಕಾಡಿನಂತೆ ಬೆಳೆದಿದ್ದ ಮರಗಳ ಸಂದಿಯಿಂದ ಮುಳುಗುತ್ತಿದ್ದ ಸೂರ್ಯನ ನೆರಳು ನೆಲಕ್ಕೆ ಮುತ್ತಿಕ್ಕುತ್ತಿದ್ದವು. ಸ್ವಲ್ಪ ದೂರ ಹೋದ ನಂತರ ಜನ, ದೊಡ್ಡ ಕಟ್ಟಡಗಳು ಕಣ್ಣಿಗೆ ಬಿದ್ದವು. ಅಲ್ಲಿದ್ದದ್ದು ಮೂರು ಕಟ್ಟಡಗಳು. ಮೊದಲಿಗೆ ಸಿಕ್ಕಿದ್ದರ ಮೇಲೆ ಸಿಐಡಿ- 2 ಎಂದಿತ್ತು. ಎರಡನೆಯ ಕಟ್ಟಡ, ದೊಡ್ಡದಾದ ಅರಮನೆಯಂತಿದ್ದ ಕಟ್ಟಡ. ಆ ಕಟ್ಟಡದ ರಾಜದ್ವಾರದಂತಿದ್ದ ಬಾಗಿಲಿಗೆ ಪಕ್ಕದಲ್ಲಿಯೇ ದೊಡ್ಡದಾಗಿ ‘’ಮಲ್ಲಿಕಾರ್ಜುನ ಖರ್ಗೆ”’ ಎಂದು ಬರೆದಿದ್ದ ಬೋರ್ಡು. ಅಲ್ಲಿ ಪಕ್ಕಕ್ಕೆ ಹೊರಳಿಕೊಂಡೆ.ಮುಂದಿದ್ದ ಕಟ್ಟಡದ ಸುತ್ತ ಮಂದಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗುತ್ತಿದ್ದರು. ಬಾಗಿಲಲ್ಲಿ ನಿಂತಿದ್ದ ಸುಕ್ಯುರಿಟಿ, ಆತನ ಸುತ್ತ ಹಲವು ಜನ, ಹೇಳಿ- ಕೇಳುವುದರಲ್ಲಿ ನಿರತರಾಗಿದ್ದರು. ಏನೂ ಕೆಲಸವಿಲ್ಲದೇ ದೂರ ನಿಂತಿದ್ದ ಪೋಲಿಸ್ ಪೇದಯವರೊಬ್ಬರನ್ನು ವಿಚಾರಿಸಿದೆ. ಇಷ್ಟಗಲ ಬಾಯಿ ತೆರೆದು ನಕ್ಕ ಪೇದೆ, ‘’ನಾನೂ ಹೊಸಬ ಸಾರ್ ಇಲ್ಲಿಗೆ, ಯಾರು ಎಲ್ಲಿದಾರೋ ತಿಳೀದು. ಅವರನ್ನೇ ಕೇಳಿ,’’ ಎಂದು ಜನರ ನಡುವೆ ಸಿಲುಕಿದ್ದ ಸೆಕ್ಯುರಿಟಿಯತ್ತ ಬೆರಳು ತೋರಿಸಿದರು.

ಎಲ್ಲರಿಗೂ ಸಾವಧಾನವಾಗಿಯೇ ಉತ್ತರಿಸಿದ ಸೆಕ್ಯೂರಿಟಿ, ಕೊನೆಗೆ ನನ್ನಡೆ ತಿರುಗಿ ಮಂದಹಾಸ ಬೀರಿದಾಗ ಮಾತುಗಳು ಹೊರಬಂದವು. ನನ್ನ ಪ್ರಶ್ನೆಗೆ ‘’ಮೊದಲ ಅಥವಾ ಎರಡನೇ ಮಹಡಿ. ಮುಂದಿರುವ ಕೌಂಟರ್‌ನಲ್ಲಿ ವಿಚಾರಿಸಿ,’’ ಎಂದರು. ಮಾತನ್ನು ನಂಬಿ ಒಳ ಹೋದೆ; ಕೌಂಟರ್ ಖಾಲಿ. ಊಟಕ್ಕೆಂದು ಹೋದವರ ಪತ್ತೆಯೇ ಇಲ್ಲ. ಅತ್ತ ಇತ್ತ ಸುತ್ತಿ, ಮೇಲೆ ಕೆಳಗೆ ಇಳಿದ ಮೇಲೆ, ಯಾರ ಸಹಾಯ ಪಡೆಯದೇ ನಾನೇ ಹುಡುಕುವುದು ಸಾಧ್ಯವಿಲ್ಲ ಎನಿಸಿತು. ಅಷ್ಟೂ ದೂರದಲ್ಲಿ ಯಾರೊಡನೆಯೇ ವಾಗ್ವಾದಕ್ಕಿಳಿದಿದ್ದ ದಪ್ಪ ದೇಹದವರೊಬ್ಬರು ಕಂಡರು. ‘’ಡಿವೈಎಸ್ಪಿ ಶರತ್ ಎಲ್ಲಿರುತ್ತಾರೆ?’’ ಎಂದೆ. ‘’ಯಾರು?’’ ಎಂಬ ಮಾತು ಗಢಸು ಧ್ವನಿಯಲ್ಲಿ ಹೊರಬಂತು. ‘’ಶರತ್’’ ಎಂದೆ, ಬಂದಿರುವ ಕಾರಣವನ್ನು ಚಿಕ್ಕದಾಗಿ ಹೇಳಿದೆ. ‘’ಹೆಸರು ಹೇಳೋಕೂ ಬರಲ್ಲವೇನಯ್ಯ,’’ ಎಂದವನೇ, ಮುಂದೆ ಪೋನಿಡಿದು ಹಾದು ಹೋಗುತ್ತಿದ್ದವನೊಬ್ಬರನ್ನು ಹಿಡಿದು,’’ಇಶ್ರತ್ ರನ್ನ ನೋಡ್ಬೇಕಂತೆ,’’ ಎಂದು ನನ್ನನ್ನು ಅವರಿಗೆ ವರ್ಗಾಯಿಸಿದ. ಶರತ್ ಅಥವಾ ಇಶ್ರತ್, ಗೊಂದಲವಾಯಿತು. ನಿಟ್ಟುಸಿರಿಟ್ಟು ಅವರೊಂದಿಗೆ ನಡೆದೆ.

ನನ್ನನ್ನು ವರ್ಗಾಯಿಸಿಕೊಂಡ ವ್ಯಕ್ತಿ ಪೋನಿನಲ್ಲಿ ಮುಳುಗಿ ಎದ್ದ ನಂತರ, ಮತ್ಯಾರನ್ನೋ ಹಿಡಿದು ಆ ವ್ಯಕ್ತಿ ಮಾತಿಗೆ ತೊಡಗಿದರು. ಆ ವ್ಯಕ್ತಿಯ ಠೀವಿ, ಭಾಷಾಬಳಕೆ, ನೇರವಂತಿಕೆ ನೋಡಿ ಇವರೇ ಡಿವೈಎಸ್ಪಿ ಎನಿಸಿತು. ಒಬ್ಬರ ಬಳಿ ಹಿಂದಿ, ಮತ್ತೊಬ್ಬರ ಹತ್ತಿರ ತೆಲುಗು, ನಂತರ ಇಂಗ್ಲಿಷ್. ಆವರಿಗೆ ಕನ್ನಡ ತಿಳಿದಿಲ್ಲವೆಂದು ಭಾಸವಾಯಿತು. ಇಂಗ್ಲೀಷಿನಲ್ಲಾದರೆ ಏನಂತ ಕೇಳಬೇಕು? ಎಂದು ಮನಸ್ಸಿನಲ್ಲೇ ವಾಕ್ಯಗಳನ್ನು ಸೃಷ್ಟಿಸತೊಡಗಿದೆ. ಅವರು ತಿರುಗಿ, “ಹೇಳಿ” ಎಂದಾಗ, ಕನ್ನಡ ಪದಗಳು ಸುಲಲಿತವಾಗಿ ಹೊರಬಂದವು. ಹಿಂದೆ ಬರುವಂತೆ ಸನ್ನೆ ಮಾಡಿ ಮುಂದೆ ನಡೆದರು. “ಶರತ್ ಕೊಠಡಿ ತೋರಿಸು,” ಹಿಂದಿಯಲ್ಲೇ ಯಾರಿಗೋ ಹೇಳಿದರು. ಒಬ್ಬರಿಂದ ಒಬ್ಬರಿಗೆ ವರ್ಗಾವಣೆಗೊಂಡು, ಎಲ್ಲಿಂದ ಹೊರಟಿದ್ದೆನೋ, ಅಲ್ಲಿಗೆ ಬಂದು ನಿಂತೆ. ಮತ್ತೆ ಮೊದಲಿನ ಕಟ್ಟಡದ ಮೊದಲನೇ ರೂಮ್’ ಮುಂದೆ ನಿಂತಿದ್ದೆ.

ಮೊದಲನೆ ಕೊಠಡಿಯಲ್ಲಿ ಇಬ್ಬರು ಸಂಭಾಷಣೆಯಲ್ಲಿ ತೊಡಗಿದ್ದರು. ‘ಸೈಬರ್ ಕ್ರೈಂ ಪೋಲಿಸ್ ಠಾಣೆ’ ಎಂಬ ದಪ್ಪಕ್ಷರದ ಬೋರ್ಡು ಕಣ್ಣಿಗೆ ಬಿತ್ತು. ಸೈಬರ್ ಲ್ಯಾಬ್, ಸೈಬರ್ ಡಿಪಾರ್ಟ್‌ಮೆಂಟ್ ಮುಂತಾದ ಹಲವು ಫಲಕಗಳನ್ನು ಬೇರೆ ಬೇರೆ ಬಾಗಿಲುಗಳಿಗೆ ನೇತು ಹಾಕಲಾಗಿತ್ತು. ಯಾವ ಬಾಗಿಲೂ ತೆರೆದಿರದಿದ್ದ ಕಾರಣ ವಿಧಿಯಿಲ್ಲದೆ, ಮೊದಲ ಕಂಡ ರೂಮಿಗೆ ಹೋಗಬೇಕಾಯಿತು. ಬಾಗಿಲ ಬಳಿ ‘’ಬಳಬರಬಹುದೇ?’’ ಎಂಬಂತೆ ದೃಷ್ಟಿಸಿದೆ. ‘ಐದು ನಿಮಿಷ, ಆಮೇಲೆ ಬಾ’’ ಎಂಬ ಉತ್ತರ ಬಂತು,  ಸಂಭೋಧನೆ, ಪ್ರತಿಕ್ರಿಯೆಗಳೆರಡೂ ತೀರಾ ಅಸಹನೀಯವಾಗಿದ್ದವು. ಸುಮ್ಮನೇ ಹೊರಗೆ ಕುಳಿತೆ. ಮೊಬೈಲ್ ತೆಗೆದು ‘ಸೈಬರ್ ಕ್ರೈಂ ಬೆಂಗಳೂರು’ ಗೂಗಲ್ ಮಾಡಿದೆ. ಸೈಬರ್ ಕ್ರೈಂ, ಸೈಬರ್ ಕ್ರೈಂ ಇನ್ ಇಂಡಿಯಾ, ಸೈಬರ್ ಕ್ರೈಂ ಇನ್ ಕರ್ನಾಟಕ, ಸೈಬರ್ ಕ್ರೈಂ 2017… ಹುಡುಕಾಟ ಮುಂದುವರಿದಿತ್ತು.

ಕೆಲಹೊತ್ತಿನ ನಂತರ ಆತನೇ ಬಂದು ಒಳ ಬರುವಂತೆ ಕರೆದರು. ಖುರ್ಚಿ ತೋರಿಸಿ, ಸಭ್ಯತೆ ತೋರಿದಾಗ ಸಮಾಧಾನವೆನಿಸಿ; ಪರಿಚಯಿಸಿಕೊಂಡೆ. ‘’ಸೈಬರ್ ಕ್ರೈಂ ಬಗ್ಗೆ ಏನು ಬೇಕು?’’ ಎಂದರು. ಈ ಪ್ರಶ್ನೆ ಬರುತ್ತದೆಂಬ ಕಲ್ಪನೆಯೂ ಇರದಿದ್ದರಿಂದ, ಸ್ವಲ್ಪ ತಡವರಿಸುವಂತಾದರೂ, ಅಷ್ಟೊತ್ತು ಮೊಬೈಲ್‌ನಲ್ಲಿ ಓದಿದ್ದನ್ನೆಲ್ಲಾ ಪಾಠವೊಪ್ಪಿಸಿದೆ. "ಸೈಬರ್ ಕ್ರೈಂ ಬಗ್ಗೆ ಅಷ್ಟು ಸುಲಭವಾಗಿ ಹೇಳೋಕಾಗಲ್ಲ, ಒಂದ್ಸಾರಿ ವಿಕ್ಟಿಮ್ ಆಗಿ ಬಾ. ನಿನಗೇ ಗೊತಾಗುತ್ತೆ,’’ ಎಂದು ನಕ್ಕ. ಕೋಪ ಬಂದರೂ ತೋರಿಸಲಾಗದೇ, ನಗಬೇಕಾಯಿತು.ಮಾಹಿತಿ ನೀಡಲು,’ಶರತ್ ಸರ್ ಇಲ್ಲ, ಮೀಟಿಂಗ್ ನಡೀತಿದೆ. ಸ್ವಲ್ಪ ಹೊತ್ತು, ಬರ್ತಾರೆ’’ ಎಂದಾಗ ಕೋಪ ಬಂತು. ‘’ನಮ್ಮ ವೆಬ್ ಸೈಟಲ್ಲೇ ಎಲ್ಲಾ ಇದೆ. ಓದು’’ ಎಂದು ಹೊರಹಾಕಿದಾಗ, ಗತಿಯಿಲ್ಲದೆ ಹೊರಬಂದು ಅವರ ವೆಬ್‌ಸೈಟ್ ತೆರೆದು ಓದುತ್ತಾ ಕುಳಿತೆ. ಸೈಬರ್ ಕ್ರೈಂಗೆ ಒಳಗಾಗದಂತೆ ಏನೆಲ್ಲಾ ಎಚ್ಚರಿಕೆಗಳನ್ನು ವಹಿಸಬೇಕು ಎಂಬುದನ್ನು ಬಿಟ್ಟರೆ ಮಹತ್ವದ್ದೆನಿಸುವ ಯಾವುದೇ ಮಾಹಿತಿ ಅದರಲ್ಲಿರಲಿಲ್ಲ. ಸುತ್ತ ಓಡಾಡುವರೆಲ್ಲರೂ ಯಾವುದೋ ಕ್ರೈಂ ನಡೆಸಿ ಬಂದು ಕೂತಿರುವವನಂತೆ ನೋಡುತ್ತಿದ್ದರು.ಹೊರಗೆ ಸೂರ್ಯ ಮುಳುಗುವ ಹಂತದಲ್ಲಿದ್ದ. ಗಡಿಯಾರ 6;30 ತೋರಿಸುತ್ತಿತ್ತು. ಕೊನೆಗೂ ಸೈಬರ್ ಕ್ರೈಂ ಡಿವೈಎಸ್‌ಪಿ ಶರತ್ ಬರಲೇ ಇಲ್ಲ.

ಈವರೆಗೂ ಸಣ್ಣ ಪುಟ್ಟ ಠಾಣೆಗಳ ಮೆಟ್ಟಿಲು ಹತ್ತಿದ್ದ ನನಗೆ, ಸಿಐಡಿಯ ದೊಡ್ಡ ಕಚೇರಿ ವೃತ್ತಿಪರತೆಯ ಭರವಸೆ ಮೂಡಿಸಿತ್ತು. ಆದರೆ, ಮೊದಲ ಭೇಟಿಯಲ್ಲೇ ಹೊಸ ಮಾಹಿತಿ, ಸೈಬರ್‌ ಕ್ರೈಂ ಬಗ್ಗೆ ಅರ್ಥಪೂರ್ಣವಾದ, ಹಂಚಿಕೊಳ್ಳಲು ಯೋಗ್ಯವಾದ ವಿಚಾರ ಸಿಗದೇ ಹೋಯಿತು. ಇದು ಫಸ್ಟ್‌ ವಿಜ್ಹಿಟ್ ಅಷ್ಟೆ. ಪ್ರತಿ ಭೇಟಿಯೂ ಹೊಸ ಪಾಠಗಳೇ. ಮತ್ತೊಮ್ಮೆ ಸೈಬರ್‌ ಕ್ರೈಂ ಠಾಣೆಗೆ ಭೇಟಿ ನೀಡುತ್ತೇನೆ. ಆದರೆ ಅವರು ಹೇಳಿದಂತೆ, ‘ವಿಕ್ಟಿಮ್‌ ಆಫ್ ಕ್ರೈಂ’ ಆಗಿ ಅಲ್ಲ; ಒಬ್ಬ ಪತ್ರಕರ್ತನಾಗಿ.