‘ಕಾವಿಧಾರಿಗಳ ಕಾಮ ಪುರಾಣಂ’: ನ್ಯೂಸ್‌ ಚಾನಲ್‌ಗಳಲ್ಲಿ ರಾಸಲೀಲೆ ಆಚರಣೆಗೆ ಒಂದು ದಶಕ!
ಮೀಡಿಯಾ 2.0

‘ಕಾವಿಧಾರಿಗಳ ಕಾಮ ಪುರಾಣಂ’: ನ್ಯೂಸ್‌ ಚಾನಲ್‌ಗಳಲ್ಲಿ ರಾಸಲೀಲೆ ಆಚರಣೆಗೆ ಒಂದು ದಶಕ!

ಧರ್ಮ, ಕಾವಿ, ಕಾಮ, ರಾಸಲೀಲೆ, ದೃಶ್ಯಾವಳಿಗಳು ಇವತ್ತಿಗೆ ಮುಖ್ಯವಾಹಿನಿಯ ಸುದ್ದಿವಾಹಿನಿಗಳ ಪರದೆಯನ್ನು ಆವರಿಸಿಕೊಂಡಿವೆ. ಹಾಗೊಂದು ಪರಿಪಾಠ ಆರಂಭವಾಗಿ ಒಂದು ದಶಕ ತುಂಬಿದೆ. ಈ ಸಮಯದಲ್ಲಿ ವೀಕ್ಷಕರ ವಿವೇಚನೆ ಮಾತ್ರವೇ ಸಮಾಜದ ಮುಂದಿರುವ ಆಶಯ

ಅವತ್ತು ಮನೆಯಲ್ಲಿದ್ದ ಆ ಮಗುವಿಗೆ ಶಾಲೆ ರಜೆ. ಬೆಳಗ್ಗೆ ಎದ್ದು, ಹಾಲು ಕುಡಿದು, ಟಿವಿ ಆನ್‌ ಮಾಡಿಕೊಂಡು ಕುಳಿತಿತ್ತು. ಬೆಳಗ್ಗೆ ಕಚೇರಿಗೆ ಹೊರಡಲು ಅಣಿಯಾಗಿದ್ದ ತಂದೆ 'ನ್ಯೂಸ್ ಚಾನಲ್' ಹಾಕು ಪುಟ್ಟ ಎಂದರು. ಮಗು ಕನ್ನಡ ಸುದ್ದಿವಾಹಿನಿಯ ನಂಬರ್ ಒತ್ತಿತು ರಿಮೋಟ್‌ನಲ್ಲಿ.'ಕಾವಿ ಧರಿಸಿ ಸ್ವಾಮಿಯ ಪಲ್ಲಂಗದಾಟ; ಈತನ ಜತೆ ಮಂಚ ಏರಿದ ಹೆಂಗಸರ ಸಂಖ್ಯೆ ಎಷ್ಟು ಗೊತ್ತು?; ಇಷ್ಟಕ್ಕೂ ಈ ಸ್ವಾಮಿ ರಾಸಲೀಲೆ ನಡೆಯುವಾಗ ಯಾರಿದ್ದರು ಗೊತ್ತಾ?' ಹೀಗೆ ಹೆಣ್ಣು ದನಿಯೊಂದು ಹಿನ್ನೆಲೆಯಲ್ಲಿ ಅರಚಿಕೊಳ್ಳುತ್ತಿತ್ತು. ಅಡುಗೆ ಮನೆಯಲ್ಲಿದ್ದ ತಾಯಿ ಓಡಿ ಬಂದವಳೇ, ಮಗುವಿನ ಕೈಯಿಂದ ರಿಮೋಟ್ ಕಿತ್ತುಕೊಂಡು ಟಿವಿ ಆಫ್‌ ಮಾಡಿದರು....

ಇದು ಇವತ್ತಿಗೆ ನ್ಯೂಸ್‌ ಚಾನಲ್‌ಗಳಲ್ಲಿ ಪ್ರಸಾರವಾಗುತ್ತಿರುವ 'ಕಾವಿ ಸ್ವಾಮಿಗಳ ರಾಸಲೀಲೆ' ವರದಿಗಳ ಪರಿಣಾಮ ಕುಟುಂಬದ ಒಳಗೆ ಹೇಗಾಗುತ್ತದೆ ಎಂಬುದಕ್ಕೆ ಸಣ್ಣ ಸ್ಯಾಂಪಲ್ ಅಷ್ಟೆ.ಲಾಭ, ನಷ್ಟ, ಉದ್ಯಮ, ನೈತಿಕತೆ ಎಲ್ಲವನ್ನೂ ಕೊಂಚ ಪಕ್ಕಕ್ಕಿಡಿ. ಸುದ್ದಿ ವಾಹಿನಿಗಳ ರಾಸಲೀಲೆ ಹಸಿವು ಯಾವಾಗ ಶುರುವಾಯಿತು ಎಂದು ಹುಡಿಕಿಕೊಂಡು ಹೊರಟರೆ ನಾವು ಹೋಗಿ ನಿಲ್ಲುವುದು ಧಾರವಾಡದ ಬೆಳಗಾವಿ ಹೆದ್ದಾರಿಯಲ್ಲಿದ್ದ ಚೈತನ್ಯಾಶ್ರಮದ ಅಂಗಳಕ್ಕೆ. 2007ರಲ್ಲಿ ಇಲ್ಲಿ ಸ್ವಾಮಿಯಾಗಿದ್ದ ಚೈತನ್ಯಾನಂದ ಎಂಬಾತನ ರಾಸಲೀಲೆ ವಿಡಿಯೋ ಒಂದು ಬಹಿರಂಗವಾಗಿತ್ತು. ಆಗ ಮೊದಲ ಬಾರಿಗೆ ಕಾವಿಧಾರಿಯೊಬ್ಬರ ಪಲ್ಲಂಗದ ಪುರಾಣ ಟಿವಿ 9 ಪರದೆಯನ್ನು ಅಲಂಕರಿಸಿತ್ತು. ಅಲ್ಲಿಂದ ಆಚೆಗೆ, 2010ರಲ್ಲಿ ನಿತ್ಯಾನಂದ ಪ್ರಕರಣದಿಂದ ಹಿಡಿದು ಬುಧವಾರ ಬೆಳಗ್ಗೆ ಹೊರಬಿದ್ದ ಕೊಟ್ಟೂರು ಸ್ವಾಮಿ ವಿಡಿಯೋವರೆಗೆ ನ್ಯೂಸ್‌ ಚಾನಲ್‌ಗಳು ಯಾವ ಎಗ್ಗಿಲ್ಲದೆ, ಅಳುಕಿಲ್ಲದೆ 'ಕಾವಿಧಾರಿಗಳ ಕಾಮ ಪುರಾಣಂ'ನ್ನು ಪ್ರಸ್ತುತಪಡಿಸುತ್ತಲೇ ಬಂದಿವೆ. ಮುಂದೆಯೂ ಇದೇ ಹಾದಿಯಲ್ಲಿ ಇನ್ನಷ್ಟು ತಳಮಟ್ಟಕ್ಕೆ ಇಳಿಯಲಿವೆ ಕೂಡ.

ಧರ್ಮದ ನೆಲೆಯಲ್ಲಿ ಜನರಿಗೆ ಸದ್ಗತಿಯನ್ನು ಬೋಧಿಸುವವರು ಕಾವಿಧಾರಿಗಳು. ಕಾವಿ ಧರಿಸಿ ಜನರಿಗೆ ಪ್ರವಚನ ನೀಡುವ ಜತೆಗೆ, ಮನಿ ಡಬ್ಲಿಂಗ್ ದಂಧೆ, ರಿಯಲ್‌ ಎಸ್ಟೇಟ್, ಎಜುಕೇಶನ್ ಮಾಫಿಯಾ, ಹಾಸ್ಪಟಲ್ ಮಾಫಿಯಾಗಳನ್ನು ನಿಯಂತ್ರಿಸುವವರು ಇವರು. ಇದರ ಮೇಲೆ, ಅಕ್ರಮ ಸಂಬಂಧಗಳೂ ಬೇರೆ. ಆದರೆ, ಕರ್ನಾಟಕದ ಕಾವಿಧಾರಿಗಳ ರಾಸಲೀಲೆಗೆ ಕೊಟ್ಟಷ್ಟು ಪ್ರಾಮುಖ್ಯತೆ ಅವರುಗಳ ಇತರೆ ಕಾರ್ಯಚರಣೆಗಳಿಗೆ ನಮ್ಮ ನ್ಯೂಸ್‌ ಚಾನಲ್‌ಗಳು ನೀಡುವುದಿಲ್ಲ; ನಿರೀಕ್ಷೆ ಮಾಡುವುದು ಇವತ್ತಿನ ಮಟ್ಟಿಗೆ ಕಷ್ಟವಿದೆ ಕೂಡ.

ಕನ್ನಡದ ನ್ಯೂಸ್‌ ಚಾನಲ್‌ಗಳು ಮತ್ತು ಧರ್ಮ ಎಂಬುದು ಕುತೂಹಲಕಾರಿ ಸಂಬಂಧ. ಇವತ್ತಿಗೆ ಬೆಳಗ್ಗೆ ಯಾವುದೇ ಚಾನಲ್ ಹಾಕಿದರೂ, ಸಂಖ್ಯಾಶಾಸ್ತ್ರ, ವಾಸ್ತಶಾಸ್ತ್ರ, ಜ್ಯೋತಿಷ್ಯ ಹೀಗೆ ಧರ್ಮದ ನೆಲೆಯಲ್ಲಿ ಜನರಿಗೆ ಬೋಧನೆ ಮಾಡುವ ಕಾರ್ಯಕ್ರಮಗಳು ಕಾಣಸಿಗುತ್ತವೆ (ಇದಕ್ಕೆ ಎರಡು ವಾಹಿನಿಗಳು ಅಪವಾದ). ಈ ಕಾರ್ಯಕ್ರಮಗಳಿಂದಾಗಿಯೇ ವಾಹಿನಿಯೊಂದಕ್ಕೆ ಪ್ರತಿದಿನ ಕನಿಷ್ಟ 30 ಸಾವಿರದಿಂದ 50 ಸಾವಿರದವರೆಗೆ ಆದಾಯವಿದೆ. ಇದರ ಜತೆಗೆ, ಸ್ವಾಮಿಯೊಬ್ಬನ ಕಾಮಾವಳಿಗಳ ದೃಶ್ಯಾವಳಿಗಳು ಸಿಕ್ಕರೆ ಒಂದು ದಿನಕ್ಕೆ ಬೇಕಾಗುವಷ್ಟು ಸರಕು ಸಿಕ್ಕಂತಾಗುತ್ತದೆ. ಅರ್ಧ ಗಂಟೆ ಸ್ವಾಮೀಜಿಯ ರಾಸಲೀಲೆ, ಇನ್ನರ್ಧ ಗಂಟೆ ಮತ್ತೊಮ್ಮೆ ಕಾವಿಧಾರಿಯಿಂದ ಬದುಕಿನ ಬಗ್ಗೆ ಪ್ರವಚನ. ಒಂದರಲ್ಲಿ ಟಿಆರ್‌ಪಿ ಮತ್ತೊಂದರಲ್ಲಿ ಹಣ. ಜನ ಯಾವುದನ್ನು ನಿಜ ಎಂದು ನಂಬಬೇಕು?

“ಒಂದು ಕಾಲದಲ್ಲಿ ಕನ್ನಡದ ಸಿನೆಮಾಗಳಲ್ಲೂ ಅತ್ಯಾಚಾರದ ದೃಶ್ಯಾವಳಿಗಳು ಕಾಣಸಿಗುತ್ತಿರಲಿಲ್ಲ. ಅದನ್ನು ಉಪಮಗಳ ಮೂಲಕ ವೀಕ್ಷಕರಿಗೆ ತಿಳಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡುತ್ತಿದ್ದರು. ಎಳಕಲ್ಲು ಗುಡ್ಡದ ಮೇಲೆ ಸಿನೆಮಾದಲ್ಲಿ ಪುಟ್ಟಣ್ಣ ಕಣಗಾಲ್ ಬಳಸಿದ ಇಂತಹದೊಂದು ತಾಂತ್ರಿಕ ನೈಪುಣ್ಯತೆ ನಮ್ಮೆದುರಿಗೆ ಇದೆ. ಆದರೆ ಕೇವಲ 10 ವರ್ಷಗಳಲ್ಲಿ ಎಷ್ಟು ಬದಲಾಗಿ ಹೋಗಿದೆ ನೋಡಿ. ಇವತ್ತಿಗೆ ನ್ಯೂಸ್‌ ಚಾನಲ್‌ಗಳಲ್ಲಿ ಕಾವಿ ಕಾಮ ಪುರಾಣ ಪ್ರಸಾರವಾಗುತ್ತಿದ್ದರೆ ತುಂಬಿದ ಮನೆಯಲ್ಲಿ ಟಿವಿ ಆಫ್‌ ಮಾಡದೆ ಬೇರೆ ವಿಧಿಯೇ ಇಲ್ಲ,’’
ಎಂ.ಎಸ್‌. ರಾಘವೇಂದ್ರ, ಸರಳ ಜೀವನ ವಾಹಿನಿಯ ಮುಖ್ಯಸ್ಥ

ಎಂ.ಎಸ್‌. ರಾಘವೇಂದ್ರ ಹಲವು ವರ್ಷಗಳ ಕಾಲ ಕನ್ನಡದ ನ್ಯೂಸ್‌ ಚಾನಲ್‌ಗಳಲ್ಲಿ ಅಪರಾಧ ಕಾರ್ಯಕ್ರಮಗಳನ್ನು ನಿರ್ಮಿಸಿದವರು.

“ಧರ್ಮ, ದೇವಸ್ಥಾನ, ಸ್ವಾಮೀಜಿ ಎಂಬ ಕಲ್ಪನೆಗಳು ನಿಂತಿರುವುದು ಮನುಷ್ಯರ ನಂಬಿಕೆ ಮೇಲೆ. ಇವತ್ತಿಗೆ ಜನರ ಎಲ್ಲಾ ಸಮಸ್ಯೆಗಳಿಗೆ ವಿಜ್ಞಾನ, ವೈದ್ಯಶಾಸ್ತ್ರಗಳು ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ. ಅಂತಹ ಸಮಯದಲ್ಲಿ ಕಾವಿ ಧರಿಸಿದ ಸ್ವಾಮಿಗಳ ಮೂಲಕ ಜನ ನೆಮ್ಮದಿಯನ್ನು ಅರಸುವ ಕೆಲಸ ಮಾಡುತ್ತಾರೆ. ನ್ಯೂಸ್‌ ಚಾನಲ್‌ಗಳಲ್ಲಿ ಕಾವಿಧಾರಿಗಳ ಕಾಮ ಪುರಾಣ ಪ್ರಸಾರವಾದರೆ, ಅದರ ನೇರೆ ಪರಿಣಾಮ ಬೀರುವುದು ಜನರ ನಂಬಿಕೆಗಳ ಮೇಲೆ,’’
ಡಾ. ಮಹೇಶ್, ಮನಶಾಸ್ತ್ರಜ್ಞ.

ಮಾಧ್ಯಮಗಳು ಜನರನ್ನು ಎಜುಕೇಟ್ ಮಾಡುತ್ತವೆ ಎಂದು ನಂಬಿರುವ ಡಾ. ಮಹೇಶ್ ಇನ್ನಷ್ಟು ಆಳವಾದ ಒಳನೋಟಗಳನ್ನ  ಈ ವಿಚಾರದಲ್ಲಿ ನೀಡುತ್ತಾರೆ. ಮಠ ಮಾನ್ಯಗಳಲ್ಲಿ ಸ್ವಾಮಿಗಳಾದವರೂ ಕೂಡ ಮನುಷ್ಯರೇ. ಅವರಿಗೂ ಕಾಮ ಎಂಬುದು ಅನಿವಾರ್ಯವಾಗಿರುವ ಭಾವನೆಯಾಗಿರುತ್ತದೆ. ಇದನ್ನು ಮೀರುವ ಪ್ರಯತ್ನದಲ್ಲಿ ವಿಫಲವಾಗುತ್ತಲೇ ಇರುತ್ತಾರೆ. ಹೀಗಾಗಿ ಮಠ ಮಾನ್ಯಗಳಲ್ಲಿ ಸ್ವಾಮಿಗಳಾಗುವವರಿಗೆ, ಪ್ರವಚನ ನೀಡುವವರಿಗೆ ಮದುವೆ ಸಂಬಂಧಗಳಿಗೂ ಅವಕಾಶ ಇರುವಂತೆ ನೋಡಿಕೊಳ್ಳಬಹುದು. ಧರ್ಮದ ಚೌಕಟ್ಟಿನೊಳಗೆ ತಪ್ಪಿ ನಡೆದರೆ ಅಂತಹವರನ್ನು ಚೌಕಟ್ಟಿನಿಂದ ಹೊರಗೆ ಹಾಕಬಹುದು. ಅದನ್ನು ಬಿಟ್ಟು ನ್ಯೂಸ್‌ ಚಾನಲ್‌ಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಕಾಮ ಪುರಾಣ ಕಾರ್ಯಕ್ರಮಗಳು ಪ್ರಸಾರವಾದರೆ ಅದರ ಪರಿಣಾಮ ಕೆಟ್ಟದಾಗಿರುತ್ತದೆ. ಜನರ ನಂಬಿಕೆಯನ್ನು ನಿಧಾನವಾಗಿ ಅದು ಒಡೆದು ಚೂರು ಮಾಡುತ್ತದೆ. ಇದರ ದೂರಗಾಮಿ ಪರಿಣಾಮ ಸಮಾಜದ ಮೇಲೆ ಆಗುತ್ತದೆ ಎನ್ನುತ್ತಾರೆ ಅವರು.

“ಕಾವಿಧಾರಿಗಳ ಕಾಮ ಪುರಾಣಗಳು ಸಾಮಾನ್ಯ ಎಂಬಂತಾಗಿದೆ. ನಿತ್ಯಾನಂದ ಪ್ರಕರಣದಲ್ಲಿ ಇವತ್ತು ಸುಪ್ರಿಂ ಕೋರ್ಟ್‌ ಸ್ವಾಮಿ ಪರ ತೀರ್ಪು ನೀಡಿದೆ. ಆದರೆ ಅದನ್ನು ದಿನಗಟ್ಟಲೆ ತೋರಿಸಿದ ವಾಹಿನಿಗಳು ಮೂಡಿಸಿದ ಪರಿಣಾಮ ಮರೆಯಲು ಸಾಧ್ಯವೇ? ಸ್ವಾಮಿಗಳು ತಪ್ಪು ಮಾಡಿದರೆ ಶಿಕ್ಷೆ ವಿಧಿಸಲು ನ್ಯಾಯಾಲಯ ಇದೆ. ಈ ದೇಶದಲ್ಲಿ ಸಂವಿಧಾನ ಅಂತ ಒಂದಿದೆ. ಅದಕ್ಕಿಂತ ಹೆಚ್ಚಾಗಿ ಅವರನ್ನು ನಂಬಿದ ಭಕ್ತರಿದ್ದಾರೆ,”
ಉತ್ತರ ಕರ್ನಾಟಕ ಮೂಲದ ಸ್ವಾಮಿಯೊಬ್ಬರ ಹೇಳಿಕೆ.

ಭಕ್ತರು ತಾವು ನಂಬಿರುವ ಸ್ವಾಮಿ ಸರಿ ಇಲ್ಲ ಎಂದರೆ ಮಾಧ್ಯಮಗಳು ಎಚ್ಚರಿಸುವುದು ನಿಜವಾದ ಧರ್ಮ. ಆದರೆ ಅದು ಎಚ್ಚರಿಕೆ ಆಗಿರದೆ, ರಾಸಲೀಲೆಯ ಪ್ರಸಾರ ಹಪಾಹಪಿಯಾಗಿ ಬದಲಾಗಿದೆ. ಅದು ಸಮಾಜಕ್ಕೆ ಮಾರಕ ಎನ್ನುತ್ತಾರೆ ಉತ್ತರ ಕರ್ನಾಟಕದ ಸ್ವಾಮೀಜಿ.

ಒಟ್ಟಾರೆ, ಧರ್ಮ, ಕಾವಿ, ಕಾಮ, ರಾಸಲೀಲೆ, ದೃಶ್ಯಾವಳಿಗಳು ಇವತ್ತಿಗೆ ಮುಖ್ಯವಾಹಿನಿಯ ಸುದ್ದಿವಾಹಿನಿಗಳ ಪರದೆಯನ್ನು ಆವರಿಸಿಕೊಂಡಿವೆ. ಹಾಗೊಂದು ಪರಿಪಾಠ ಆರಂಭವಾಗಿ ಒಂದು ದಶಕ ತುಂಬಿದೆ. ಈ ಸಮಯದಲ್ಲಿ ವೀಕ್ಷಕರ ವಿವೇಚನೆ ಮಾತ್ರವೇ ಸಮಾಜದ ಮುಂದಿರುವ ಆಶಯವಾಗಿ ಕಾಣಿಸುತ್ತಿದೆ.