‘ಉತ್ತಮ ಸಮಾಜ’ದಿಂದ ಹೊರಬಿದ್ದ ‘ಹಕ್ಕ’ ರವಿಕುಮಾರ್- ‘ಬುಕ್ಕ’ ಮಾರುತಿ!
ಮೀಡಿಯಾ 2.0

‘ಉತ್ತಮ ಸಮಾಜ’ದಿಂದ ಹೊರಬಿದ್ದ ‘ಹಕ್ಕ’ ರವಿಕುಮಾರ್- ‘ಬುಕ್ಕ’ ಮಾರುತಿ!

ಅದು ಬಿಜೆಪಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದಿದ್ದ ಸಮಯ. ಬಿ. ಎಸ್‌. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಮಾಜಿ ಪ್ರಧಾನಿ ದೇವೇಗೌಡ ಒಂದು ಭಾನುವಾರ ನೈಸ್‌ ವಿರುದ್ಧ ಪಾದಯಾತ್ರೆ ಆರಂಭಿಸಿದರು. ನಂತರ, ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗೌಡರು, "ಯಡಿಯೂರಪ್ಪ ಬಾ**" ಎಂದರು.

ಸ್ಥಳದಲ್ಲಿದ್ದ ಟಿವಿ9 ವರದಿಗಾರೊಬ್ಬರು ಅದನ್ನು ಕಚೇರಿಗೆ ತಲುಪಿಸಿದರು. ಆಗ ಸಮಯ 11 ಗಂಟೆ. ಮಾಜಿ ಪ್ರಧಾನಿಗಳ ಭಾಷಣದ ವರದಿ ಚಿಕ್ಕ ಎವಿ (ಆಡಿಯೋ ವಿಝುವಲ್) ಪ್ರಸಾರವಾಯಿತು. ಆಗ ಎಲ್ಲಿದ್ದರೋ ಗೊತ್ತಿಲ್ಲ; ಟಿವಿ 9 ನಿರ್ದೇಶಕ, ಮುಖ್ಯಸ್ಥ ಮಹೇಂದ್ರ ಮಿಶ್ರಾ ಡೆಸ್ಕ್‌ಗೆ ಬಂದವರೇ 'ಸುದ್ದಿಯ ಮಹತ್ವ'ವನ್ನು ತಿಳಿಸಿ ಹೇಳಿದರು. ಮಾಜಿ ಪ್ರಧಾನಿಯೊಬ್ಬರು, ಅಂದಿನ ಮುಖ್ಯಮಂತ್ರಿಗೆ ಏಕವಚನ ಬಳಸಿದ್ದು ಅಲ್ಲದೇ, ಬಾ*ಡ್ ಎಂಬ ಪದ ಬಳಕೆ ಮಾಡಿದ್ದು ಅವರಿಗೆ ಪ್ರಮುಖ ಸುದ್ದಿಯಾಗಿ ಕಂಡಿತ್ತು. ಮಿಶ್ರಾ ಕಡೆಯಿಂದ ನಿರ್ದೇಶನ ಬಂದ ಮೇಲಷ್ಟೆ ಔಟ್‌ಪುಟ್‌ ನೋಡಿಕೊಳ್ಳುತ್ತಿದ್ದ ಮಾರುತಿ, ಗೌಡರ ಭಾಷಣದ ಸುದ್ದಿಯನ್ನು 'ಹೈಪ್' ಮಾಡಲು ಹೇಳಿದರು. ಅವತ್ತಿಗೆ ಇಡೀ ದಿನ ಅದೇ ಸುದ್ದಿ ಕರ್ನಾಟಕವನ್ನು ಆವರಿಸಿಕೊಂಡಿತು. ಸಂಜೆ ಟಿವಿ9 ಕಚೇರಿಗೆ ಬಂದ ದೇವೇಗೌಡ ರಾತ್ರಿ 11 ಗಂಟೆವರೆಗೂ ಚರ್ಚೆಯಲ್ಲಿ ಪಾಲ್ಗೊಂಡು ಮನೆಗೆ ಮರಳಿದರು.

ಅವತ್ತಿಗೆ ಟಿವಿ 9 ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದ ಎಲ್ಲಾ ನ್ಯೂಸ್‌ ಚಾನಲ್‌ಗಳ ಪೈಕಿ ಅತಿಹೆಚ್ಚು ವೀಕ್ಷಕರನ್ನು ಹೊಂದಿದ್ದ ವಾಹಿನಿಯಾಗಿತ್ತು. ಆದರೆ ಅಂತರಾಳದಲ್ಲಿ ಅದು ಹೇಗೆ ಕೆಲಸ ಮಾಡುತ್ತಿತ್ತು ಎಂಬುದಕ್ಕೆ ಇದೊಂದು ಪ್ರಸಂಗ ಉದಾಹರಣೆ ಅಷ್ಟೆ. ಇವತ್ತು ವಾಹಿನಿಯ ಪ್ರಧಾನ ನಿರ್ಮಾಪಕ ಎಸ್.‌ ರವಿಕುಮಾರ್ ಹಾಗೂ ಹಿರಿಯ ನಿರ್ಮಾಪಕ ಎಸ್‌. ಎಸ್. ಮಾರುತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಅದನ್ನು ವಾಹಿನಿಯ ಮುಖ್ಯಸ್ಥ ಮಹೇಂದ್ರ ಮಿಶ್ರಾ ಅಂಗೀಕರಿಸಿದ್ದಾರೆ. ಇವರಿಬ್ಬರು ನಡೆದು ಬಂದ ಹಾದಿ, ನಡೆದುಕೊಂಡ ರೀತಿ ಹಾಗೂ ಟಿವಿ 9 ಸಾಗಿ ಬಂದ ಹಾದಿಯ ಕುರಿತು ಬರೆಯಲು ಕುಳಿತರೆ, ಅದು ಕನ್ನಡದ ಟಿವಿ ಪತ್ರಿಕೋದ್ಯಮದ ಇತಿಹಾಸದ ಮಜಲೊಂದನ್ನು ದಾಖಲಿಸಿದಂತಾಗುತ್ತದೆ.

ಹಕ್ಕ- ಬುಕ್ಕರು?

ಹಕ್ಕ ಮತ್ತು ಬುಕ್ಕ ಕರ್ನಾಟಕದ ಮೊದಲ ವಿಜಯ ನಗರ ಸಾಮ್ರಾಜ್ಯವನ್ನು ಕಟ್ಟಿದವರು. ಇವತ್ತು ರವಿಕುಮಾರ್ ಮತ್ತು ಮಾರುತಿ ಅವರನ್ನು ಮಾಧ್ಯಮ ಲೋಕದ ಹಕ್ಕ ಬುಕ್ಕರು ಎಂದು ಗುರುತಿಸಲಾಗುತ್ತಿದೆ. ವಿಶೇಷ ಎಂದರೆ, ಇಬ್ಬರು ಈವರೆಗೂ ಹೊಸ ಸಾಮ್ರಾಜ್ಯವನ್ನು ಕಟ್ಟಿದವರಲ್ಲ. ಬದಲಿಗೆ, ಜತೆಯಲ್ಲಿ ಒಂದು ದಶಕಗಳ ಕಾಲ ರಾಜ್ಯದ ನಂ. 1 ಸುದ್ದಿ ವಾಹಿನಿಯಲ್ಲಿ ಪ್ರಮುಖ ಹೊಣೆಗಾರಿಕೆಯನ್ನು ನಿಭಾಯಿಸಿದವರು, ಅಷ್ಟೆ.

ಗೌರಿಬಿದನೂರಿನ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವರು ರವಿಕುಮಾರ್. ಬೆಂಗಳೂರು ವಿವಿಯಲ್ಲಿ ಶಿಕ್ಷಣ ಮುಗಿಸಿದ ನಂತರ ಹೈದ್ರಾಬಾದ್‌ನ ಹೊರವಲಯದಲ್ಲಿರುವ ರಾಮೋಜಿರಾವ್‌ ಫಿಲ್ಮ್‌ ಸಿಟಿಗೆಯಲ್ಲಿ ಅವರ ತೆಲಗು ವಾಹಿನಿಗೆ ಇಂಟರ್ನಿಯಾಗಿ ಸೇರಿಕೊಂಡರು. 1999ರಲ್ಲಿ ಈಟಿವಿ ಕನ್ನಡ ವಾಹಿನಿ ಆರಂಭವಾದಾಗ ರವಿಕುಮಾರ್ ಅವರನ್ನು ಪ್ರೊಡಕ್ಷನ್ ಅಸಿಸ್ಟೆಂಟ್‌ ಆಗಿ ನೇಮಕ ಮಾಡಿದರು. ಆ ಸಮಯದಲ್ಲಿ ಪ್ರೊಡಕ್ಷನ್ ಹೆಡ್‌ ಆಗಿದ್ದವರು ಸ್ವರೂಪ್. ಈ ಟಿವಿ ನಿರ್ದೇಶಕ ಎಸ್‌. ರಾಮಾನುಜಂ ಅವರ ಕೃಪೆಯಿಂದಾಗಿ ತೆಲಗು ಮಾತನಾಡುವ ಹಿನ್ನೆಲೆಯ ರವಿಕುಮಾರ್ ಪ್ರೊಡಕ್ಷನ್ ಹೆಡ್‌ ಆಗಿ ನೇಮಕಗೊಂಡರು. ಅಷ್ಟೊತ್ತಿಗೆ ಮಾರುತಿ ಕೂಡ ರವಿಕುಮಾರ್ ಅಡಿಯಲ್ಲಿ ಪ್ರೊಡಕ್ಷನ್ ಅಸಿಸ್ಟೆಂಟ್‌ ಆಗಿ ಕೆಲಸ ಆರಂಭಿಸಿದ್ದರು. ಕೆಲವು ದಿನಗಳ ನಂತರ ಮಾರುತಿಯನ್ನು ಶಿವಮೊಗ್ಗದ ಈ ಟಿವಿ ವರದಿಗಾರರಾಗಿ ನೇಮಕ ಮಾಡಲಾಗಿತ್ತು.

2005ರ ಸುಮಾರಿಗೆ ಗಣಿ ಧಣಿ ಜನಾರ್ಧನ ರೆಡ್ಡಿ ಕನ್ನಡದಲ್ಲಿ ಮೊದಲ ಸುದ್ದಿವಾಹಿನಿ ಪ್ರಾರಂಭಿಸುವ ಮನಸ್ಸು ಮಾಡಿದ್ದರು. ಈ ಸಮಯದಲ್ಲಿ ರವಿಕುಮಾರ್ ಈ ಟಿವಿ ಕೆಲಸ ಬಿಟ್ಟು ಬಂದರು. ಒಂದಷ್ಟು ಕಾಲ ಹಂಪಿಯ ರೆಸಾರ್ಟ್‌ನಲ್ಲಿ ಉಳಿದುಕೊಂಡು ಯೋಜನೆ ಸಿದ್ಧಪಡಿಸಿದರು. ಆದರೆ ಪ್ರಾಜೆಕ್ಟ್ ಸೆಟ್‌ ಏರಲೇ ಇಲ್ಲ. ಕೊನೆಗೆ, ಹೈದ್ರಾಬಾದ್‌ ಮೂಲಕ ಟಿವಿ9 ಸಂಸ್ಥೆ ಕರ್ನಾಟಕದಲ್ಲಿಯೂ ವಾಹಿನಿ ಆರಂಭಿಸುವ ಮನಸ್ಸು ಮಾಡಿತು. ಅವತ್ತಿಗೆ ಅಸೋಸಿಯೇಟ್‌ ಆಗಿ ಸೇರಿಕೊಂಡ ರವಿಕುಮಾರ್ ನಂತರ ಮಾರುತಿ ಅವರನ್ನೂ ಕರೆಸಿಕೊಂಡು ಮೆಟ್ರೊ ಬ್ಯುರೋ ಮುಖ್ಯಸ್ಥನ ಹುದ್ದೆ ನೀಡಲು ನೆರವಾದರು.

ಅದು ಟಿವಿ9 ಕರ್ನಾಟಕ:


       ಟಿವಿ9 ಕರ್ನಾಟಕ ಮುಖ್ಯಸ್ಥ ಮಹೇಂದ್ರ ಮಿಶ್ರಾ.
ಟಿವಿ9 ಕರ್ನಾಟಕ ಮುಖ್ಯಸ್ಥ ಮಹೇಂದ್ರ ಮಿಶ್ರಾ.

ಟಿವಿ9 ಅವತ್ತಿಗೂ ಇವತ್ತಿಗೂ ಕರ್ನಾಟಕದಲ್ಲಿ ಹೆಚ್ಚು ಜನರಿಂದ ವೀಕ್ಷಣೆಗೆ ಒಳಗಾಗುತ್ತಿರುವ ಸುದ್ದಿವಾಹಿನಿ. ಅದಕ್ಕೆ ನಾನಾ ಕಾರಣಗಳಿವೆ. ಆರಂಭದಲ್ಲಿ ಟಿವಿ9 ನೀಡಿದ ಹಲವು ಪ್ರೊಮೋಗಳು ಜನರ ಗಮನ ಸೆಳೆಯುವಂತಿದ್ದವು. ಅದನ್ನು ಸೃಷ್ಟಿಸಿದವರು ಧಾರವಾಡ ವಿವಿಯ ಪ್ರತಿಭೆ ರವೀಂದ್ರ ಮೂಲಿಮನಿ. ಅವರು ಅಕಾಲಿಕವಾಗಿ ಸಾವನ್ನಪ್ಪಿದರು. ಆ ಸಮಯದಲ್ಲಿ ವಾಹಿನಿಯನ್ನು ಮುನ್ನಡೆಸುತ್ತಿದ್ದವರು ಇವತ್ತು ಟೈಮ್ಸ್‌ ಆಫ್‌ ಇಂಡಿಯಾದಲ್ಲಿರುವ ಶಿವಶಂಕರ್. ವಾಹಿನಿಯ ಔಟ್‌ಪುಟ್‌ ಆಗಿದ್ದವರು ವಾಗೀಶ್ ಮತ್ತು ಇನ್‌ಪುಟ್‌ನಲ್ಲಿದ್ದವರು ಎಂ. ಆರ್. ಸುರೇಶ್. ಮುಖ್ಯಸ್ಥರಾಗಿದ್ದವರು ಮಹೇಂದ್ರ ಮಿಶ್ರಾ. ಕನ್ನಡದ ಅಸ್ಮಿತೆಗಳ ಪರಿಚಯ ಇಲ್ಲದಿದ್ದರೂ, ಸುದ್ದಿ ಗ್ರಹಿಕೆಯ ವಿಚಾರದಲ್ಲಿ ಮಹೇಂದ್ರ ಮಿಶ್ರಾ ಗಮನಾರ್ಹ ಹಿಡಿತ ಹೊಂದಿರುವವರು.

ಚಾಮುಂಡೇಶ್ವರಿ ಉಪಚುನಾವಣೆಯ ದಿನ ತೆರೆಗೆ ಬಂದ ಟಿವಿ9 ಕರ್ನಾಟಕ ಕಡಿಮೆ ಅವಧಿಯಲ್ಲಿಯೇ ಭಾರಿ ಸದ್ದು ಮಾಡಿತು. ಮೊದಲ ಬಾರಿಗೆ 'ಸ್ಟಿಂಗ್‌ ಆಪರೇಶನ್‌'ಗಳ ಮೂಲಕ ಜನರಲ್ಲಿ ಉತ್ತಮ ಸಮಾಜದ ಕನಸನ್ನು ಬಿತ್ತಿತು. ನಂತರ ದಿನಗಳಲ್ಲಿ ಶಿವಶಂಕರ್ ವಾಹಿನಿಯಿಂದ ಹೊರಬಿದ್ದರು. ಅನೇಕ ಹಿರಿಯ ಪತ್ರಕರ್ತರು ಟಿವಿ9 ಬಿಟ್ಟು ಹೊಸ ಸಾಹಸಗಳ ಕಡೆಗೆ ಮುಖ ಮಾಡಿದರು.ಈ ಅವಧಿಯಲ್ಲಿ ವಾಹಿನಿಯಲ್ಲಿಯೇ ಉಳಿದುಕೊಂಡವರು ರವಿಕುಮಾರ್ ಮತ್ತು ಮಾರುತಿ. ಮಾರುತಿ ಶಿವಮೊಗ್ಗದಲ್ಲಿ ಈ ಟಿವಿ ವರದಿಗಾರರಾಗಿದ್ದಾಗ ಒಮ್ಮೆ ನಕ್ಸಲ್‌ ನಾಯಕರ ಸಂದರ್ಶನವನ್ನೂ ಮಾಡಿದ್ದರು. "ಆ ಸಮಯದಲ್ಲಿ ದಲಿತ ಸಮುದಾಯದಿಂದ ಬಂದವರು ಎಂಬ ಕಾರಣಕ್ಕೆ ವಿಶೇಷ ಆಸಕ್ತಿಯನ್ನು ನಕ್ಸಲೀಯರು ತೋರಿಸಿದರು,'' ಎನ್ನುತ್ತಾರೆ ಈ ಸಂದರ್ಶನವನ್ನು ಆಯೋಜನೆ ಮಾಡಿದ ಸಾಮಾಜಿಕ ಹೋರಾಟಗಾರರೊಬ್ಬರು.

ಟಿವಿ9ನಲ್ಲಿ ಮೆಟ್ರೊ ಬ್ಯುರೋದಿಂದ ಬುಲೆಟಿನ್‌ ಪ್ರೊಡ್ಯೂಸರ್‌ ಆದರು ಮಾರುತಿ. ಡೆಸ್ಕ್‌ನಲ್ಲಿದ್ದ ಹಿರಿಯರು ಬಿಟ್ಟು ಹೋದ ನಂತರ ಔಟ್‌ ಪುಟ್‌ ಹೊಣೆಗಾರಿಕೆ ಅವರ ಹೆಗಲಿಗೆ ಬಿತ್ತು. ಇದಕ್ಕಿದ್ದ ಮತ್ತೊಂದು ಪ್ರಮುಖ ಕಾರಣ, ಗೆಳೆಯ ರವಿಕುಮಾರ್ ಪ್ರೊಡಕ್ಷನ್‌ ಹೆಡ್‌ ಆಗಿದ್ದು. ಈ ಸಮಯದಲ್ಲಿ 'ಲೇಖ'ವೊಂದನ್ನು ತಲೆ ಮೇಲೆ ಇಟ್ಟುಕೊಂಡರು ಮಾರುತಿ. ಪರಿಣಾಮ ಅನೇಕ ಪ್ರತಿಭಾವಂತ ಪತ್ರಕರ್ತರು ಕೆಲಸ ಬಿಟ್ಟು ಹೊರನಡೆದರು.

ಮುಂದಿನ 6-7 ವರ್ಷಗಳ ಕಾಲ ಇಬ್ಬರು ವಾಹಿನಿಯ ಮುಖ್ಯಸ್ಥ ಮಹೇಂದ್ರ ಮಿಶ್ರಾ ಅಡಿಯಲ್ಲಿಯೇ ಕೆಲಸ ಮಾಡಿದರು. "ಜನಶ್ರೀ ಟಿವಿ ಆರಂಭದಲ್ಲಿಯೂ ಈ ಇಬ್ಬರು ಜತೆ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಬಂದಿತ್ತು. ಸುವರ್ಣ ವಾಹಿನಿ ಜತೆಗೂ ಮಾತುಕತೆ ನಡೆಸಿದ್ದರು. ಆಗಾಗೆ ಟಿವಿ9ಗೆ ರಾಜೀನಾಮೆ ಕೊಡ್ತಾರಂತೆ ಎಂಬ ಸುದ್ದಿ ಕೇಳಿ ಬರುತ್ತಲೇ ಇತ್ತು. ಕೊನೆಗೂ ಮಿಶ್ರಾ ಅವರಿಬ್ಬರನ್ನು ಬಿಡುಗಡೆ ಮಾಡಿದ್ದಾರೆ,'' ಎನ್ನುತ್ತಾರೆ ಟಿವಿ9 ಸಂಸ್ಥೆಯ ಆರಂಭದಲ್ಲಿ ಜತೆಗಿದ್ದ ಹಿರಿಯ ಪತ್ರಕರ್ತರೊಬ್ಬರು.

ಕೊಡುಗೆ ಏನು?:

ಇವರಿಬ್ಬರ ನಡುವಿನ ಸಂಬಂಧಗಳ ಕುರಿತು ಟಿವಿ9 ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬರು ಸನ್ನಿವೇಶವೊಂದನ್ನು ಉದಾಹರಣೆಯಾಗಿ ಮುಂದಿಡುತ್ತಾರೆ. ಅವತ್ತು ಶನಿವಾರ. ಪ್ರಜಾವಾಣಿ ತಮ್ಮ ಸಂಪಾದಕೀಯ ಪುಟದಲ್ಲಿ ಟಿವಿ ವಾಹಿನಿಗಳಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ಪ್ರಸಾರದ ಕುರಿತು ಅಂಕಣಗಳನ್ನು ಪ್ರಕಟಿಸಿತ್ತು. ಇದನ್ನು ಮಾರುತಿ ತಮ್ಮ ಗೆಳೆಯ ರವಿಕುಮಾರ್‌ಗೆ ತೋರಿಸಿದರು. ಅದನ್ನು ನೋಡಿದ ರವಿಕುಮಾರ್, ತಲೆ ಕೆಡಿಸಿಕೊಳ್ಳಬೇಡ; ಅವರು ಬರೆಯುತ್ತಲೇ ಇರುತ್ತಾರೆ ಎಂದು ಕ್ಯಾಂಟೀನ್‌ಗೆ ಕರೆದುಕೊಂಡು ಹೋದರು ಎಂದು ನೆನಪಿಸಿಕೊಳ್ಳುತ್ತಾರೆ ಅವರು.

ರವಿಕುಮಾರ್ ತಾಂತ್ರಿಕ ವಿಭಾಗದಿಂದ ಬಂದವರು. ಮಾರುತಿ ಸಂಪಾದಕೀಯ ವಿಭಾಗದಿಂದ ಬಂದವರು. ಆದರೆ ಇಬ್ಬರೂ ಜಂಟಿಯಾಗಿ ಟಿವಿ9 ವಾಹಿನಿಯನ್ನು ಮುನ್ನಡೆಸಿಕೊಂಡು ಬಂದರು. ಯಾವತ್ತೂ ಅವರಿಬ್ಬರು ಟಿವಿ ಪರದೆಯ ಮೇಲೆ (ಕಮರ್ಶಿಯಲ್‌ ಎಕ್ಸ್‌ಪೋಗಳನ್ನು ಹೊರತು ಪಡಿಸಿ) ಕಾಣಿಸಿಕೊಳ್ಳಲಿಲ್ಲ. ಅಥವಾ ವಾಹಿನಿಯ ಮುಖ್ಯಸ್ಥ ಮಹೇಂದ್ರ ಮಿಶ್ರಾ ಅಂತದ್ದಕ್ಕೆಲ್ಲಾ ಅವಕಾಶವನ್ನು ಮಾಡಿಕೊಡಲಿಲ್ಲ. ಈ ಅವಧಿಯಲ್ಲಿ ಇಬ್ಬರ ಮೇಲೆ ಹಲವು ಆರೋಪಗಳೂ ಬಂದಿವೆ.

ಸದ್ಯ, ರವಿಕುಮಾರ್ ಮತ್ತು ಮಾರುತಿ ಟಿವಿ9 ಕರ್ನಾಟಕದಿಂದ ಹೊರಬಿದ್ದಿದ್ದಾರೆ. ತಮ್ಮ ಗೌರಿಬಿದನೂರಿನ ಹಿನ್ನೆಲೆಯಿಂದಾಗಿ ರವಿಕುಮಾರ್, ಸ್ಯಾನ್‌ ಸಿಟಿ ರಿಯಲ್‌ ಎಸ್ಟೇಟ್‌ ಉದ್ಯಮಿ ಹೂಡಿಕೆಯ 'ಪವರ್ ಕರ್ನಾಟಕ' ವಾಹಿನಿಗೆ ಹೋಗಲಿದ್ದಾರೆ ಎಂಬ ಸುದ್ದಿ ಇದೆ. (ರವಿಕುಮಾರ್ ಪೋಷಕರು ಇವತ್ತಿಗೂ ಗೌರಿಬಿದನೂರಿನಲ್ಲಿ ಸಾಮಾನ್ಯ ಬದುಕು ನಡೆಸುತ್ತಿದ್ದಾರೆ). ಇನ್ನೊಂದು ಮೂಲದ ಪ್ರಕಾರ ಹೊಸ ವಾಹಿನಿ ಆರಂಭಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಏನೇ ಇರಲಿ, ಕನ್ನಡದ ನಂಬರ್ 1 ವಾಹಿನಿಯಿಂದ ಆಪ್ತರಿಬ್ಬರು ಒಂದೇ ಏಟಿಗೆ ಹೊರಬಿದ್ದಿದ್ದಾರೆ.

ಟಿವಿ9 ತನ್ನ ದಶಕಗಳ ಪಯಣದಲ್ಲಿ ಇಂತಹ ಹಲವು 'ಎಗ್ಸಿಟ್‌'ಗಳನ್ನು ನೋಡಿದೆ ಮತ್ತು ಎಲ್ಲಿಯೂ ಶಾಕ್‌ಗೆ ಒಳಗಾದ ಉದಾಹರಣೆಗಳಿಲ್ಲ. ಬಹುಶಃ ತಮ್ಮ ಪತ್ರಿಕೋದ್ಯಮ ವೃತ್ತಿ ಬದುಕಿನಲ್ಲಿ ಮೊದಲ ಬಾರಿಗೆ ಹೊಸತನ್ನು ಕಟ್ಟಲು ರವಿಕುಮಾರ್ ಮತ್ತು ಮಾರುತಿ ಹೊರಟಿದ್ದಾರೆ. ಅವರು ಕಟ್ಟುವ ಹೊಸ ಸಾಮ್ರಾಜ್ಯದ ಕುರಿತು ಕುತೂಹಲವೂ ಇದೆ. ಒಟ್ಟಾರೆ, ಅವರಿಬ್ಬರಿಗೆ ಅಂಟಿಕೊಂಡಿರುವ ಹಕ್ಕ ಮತ್ತು ಬುಕ್ಕ ಎಂಬ ಉಪನಾಮಕ್ಕೆ ಮೊದಲ ಬಾರಿಗೆ ನ್ಯಾಯ ಒದಗಿಸುವ ಅವಕಾಶವೊಂದು ಅವರಿಗೆ ಸಿಕ್ಕಿದೆ.