ಸಂಭ್ರಮದಿಂದ ದಸರಾ ಆಚರಣೆ: ಸಂಬಳ ಸಿಗದೆ ‘ಜನಶ್ರೀ’ ಸಿಬ್ಬಂದಿಯ ಬದುಕು- ಬವಣೆ!
ಮೀಡಿಯಾ 2.0

ಸಂಭ್ರಮದಿಂದ ದಸರಾ ಆಚರಣೆ: ಸಂಬಳ ಸಿಗದೆ ‘ಜನಶ್ರೀ’ ಸಿಬ್ಬಂದಿಯ ಬದುಕು- ಬವಣೆ!

ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ರಾಜ್ಯದಲ್ಲಿ ಹೊಸ ಸುದ್ದಿ ವಾಹಿನಿಗಳ ಆರಂಭಕ್ಕೆ ಭರ್ಜರಿ ತಯಾರಿಗಳು ನಡೆಯುತ್ತಿವೆ. ಅದೇ ವೇಳೆ 'ಆರು ತಿಂಗಳಿನಿಂದ ಸಂಬಳ ಆಗಿಲ್ಲ' ಎಂದು ಬಿಜೆಪಿ ನಾಯಕರೊಬ್ಬರು ಮಾಲೀಕರಾಗಿರುವ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರು, ಸಿಬ್ಬಂದಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

ಈ ಸಂಬಂಧ ಅವರುಗಳು ಬರೆದ ಎರಡು ಪ್ರತ್ಯೇಕ ಪತ್ರಗಳು 'ಸಮಾಚಾರ'ಕ್ಕೆ ಲಭ್ಯವಾಗಿವೆ.ಒಂದು ಪತ್ರ ಕೈಬರಹದಲ್ಲಿದ್ದು, ಎರಡು ಪುಟಗಳಲ್ಲಿ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರ ಆರ್ಥಿಕ ಸಂಕಷ್ಟಗಳನ್ನು ವಿವರಿಸುತ್ತದೆ. ಮತ್ತೊಂದು ಪತ್ರದಲ್ಲಿ ಪ್ರತಿಭಟನೆಯ ದಾರಿ ತುಳಿಯುವ ಮುನ್ಸೂಚನೆ ನೀಡಲಾಗಿದೆ.

ಅಂದಹಾಗೆ, ಈ ಪತ್ರಗಳನ್ನು ಬರೆದವರು 'ಜನಶ್ರೀ' ಸುದ್ದಿವಾಹಿನಿಯ ಪತ್ರಕರ್ತರು. ಈ ವಾಹಿನಿಯ ಮಾಲೀಕರು ಬಿಜೆಪಿ ನಾಯಕ, ಮಾಜಿ ಸಚಿವ, ಗಣಿ ಉದ್ಯಮಿಯಾಗಿದ್ದ ಗಾಲಿ ಜನಾರ್ಧನ ರೆಡ್ಡಿ.ಅಕ್ರಮ ಗಣಿಗಾರಿಕೆ ಆರೋಪ ಹೊತ್ತು ಜೈಲು ಪಾಲಾಗಿದ್ದ ರೆಡ್ಡಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ದಸರಾ ಹಬ್ಬದ ಆಚರಣೆಗೆ ಬಳ್ಳಾರಿಗೆ ತೆರಳಲು ಅವರು ಸುಪ್ರೀಂ ಕೋರ್ಟ್‌ನಿಂದ ಅನುಮತಿಯನ್ನು ಪಡೆದುಕೊಂಡಿದ್ದಾರೆ. ಅವರಿಗೆ ಜಾಮೀನು ನೀಡುವ ಮುನ್ನ ಬಳ್ಳಾರಿಗೆ ಕಾಲಿಡದಂತೆ ಷರತ್ತನ್ನು ವಿಧಿಸಲಾಗಿತ್ತು.

ಜನ ಧನ ಜನಶ್ರೀ:

ಅದು 'ಬಳ್ಳಾರಿ ರಿಪಬ್ಲಿಕ್' ಉತ್ತುಂಗದಲ್ಲಿದ್ದ ಕಾಲ. ಕರ್ನಾಟಕದಲ್ಲಿ ಬಿಜೆಪಿ ಮೊದಲ ಬಾರಿಗೆ ಪೂರ್ಣಪ್ರಮಾಣದಲ್ಲಿ ಅಧಿಕಾರ ಹಿಡಿದಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಗಣಿ ಹಣದಲ್ಲಿ ಗಾಲಿ ಜನಾರ್ಧನ ರೆಡ್ಡಿ ತಮ್ಮ ಆಪ್ತ ಶ್ರೀರಾಮುಲು ಮೂಲಕ ರಾಜ್ಯದ ನಾಲ್ಕನೇ ಸುದ್ದಿ ವಾಹಿನಿಯಾಗಿ 'ಜನಶ್ರೀ'ಯನ್ನು ಆರಂಭಿಸಿದರು. ಕೋರಮಂಗಲದ ಬಿಗ್ ಬಜಾರ್ ಕಟ್ಟಡದಲ್ಲಿ, ಭಾರಿ ಹೂಡಿಕೆಯ ಮೂಲಕ ವಾಹಿನಿ ಕಾರ್ಯಾರಂಭ ಮಾಡಿತ್ತು. ಆರಂಭದಲ್ಲಿ ಮಾಲೀಕರ ಮರ್ಜಿಯಿಂದ ದೂರವೇ ಉಳಿದು, ಪತ್ರಿಕೋದ್ಯಮದ 'ಸಭ್ಯ ಚೌಕಟ್ಟು'ಗಳ ಒಳಗೆ ವಾಹಿನಿ ರಾಜ್ಯದ ಜನರಿಗೆ ಸುದ್ದಿ ಮತ್ತು ಮನೋರಂಜನೆ ನೀಡತೊಡಗಿತು.

ಆದರೆ, ಅಕ್ರಮ ಗಣಿ ಹಗರಣದ ಉರುಳು ಬಿಗಿಯಾಗಿ ಗಾಲಿ ಜನಾರ್ಧನ ರೆಡ್ಡಿ ಹೈದ್ರಾಬಾದಿನ ಚಂಚಲಗುಡ ಜೈಲು ಪಾಲಾದರು. ಅವರ ಆಪ್ತ ಶ್ರೀರಾಮುಲು ಬಿಜೆಪಿ ತೊರೆದು ಬಿಎಸ್‌ಆರ್ ಕಾಂಗ್ರೆಸ್ ಎಂಬ ಹೊಸ ಪಕ್ಷ ಕಟ್ಟಿ ಉತ್ತರ ಕರ್ನಾಟಕದಲ್ಲಿ ಪಾದಯಾತ್ರೆ ಆರಂಭಿಸಿದರು. ಆ ಸಮಯದಲ್ಲಿ ಜನಶ್ರೀ ತನ್ನ ಮೂಲ ಬಂಡವಾಳಕ್ಕೆ ನ್ಯಾಯ ಒದಗಿಸುವ ಮರ್ಜಿಗೆ ಬಿತ್ತು. ಅವತ್ತಿಂದ ಆರಂಭವಾದ ವಾಹಿನಿಯ ಏರಿಳಿತಗಳು ಇಂದಿಗೂ ಜಾರಿಯಲ್ಲಿವೆ.

ಹುಸಿ ಆಶಯಗಳು:

ಕಳೆದ ನಾಲ್ಕೈದು ವರ್ಷಗಳಲ್ಲಿ ಜನಶ್ರೀ ಸುದ್ದಿ ವಾಹಿನಿ ನಾನಾ ತಿರುವುಗಳನ್ನು ಕಂಡಿದೆ. ಇನ್ನೇನು ವಾಹಿನಿ ಮುಚ್ಚೇ ಹೋಯಿತು ಎಂಬ ಪರಿಸ್ಥಿತಿಗಳನ್ನು ಎದುರಿಸಿದೆ. ರಿಯಲ್ ಎಸ್ಟೇಟ್ ವಂಚಕರ ಅಕ್ರಮ ಹಣದ ಹೂಡಿಕೆಗಳನ್ನು ನೋಡಿದೆ. ಲಕ್ಷ್ಮೀ ಪ್ರಸಾದ ಎಂಬ ಬ್ಲಾಕ್‌ಮೇಲರ್‌ಗಳು ಜೈಲಿಗೆ ಹೋಗುವುದಕ್ಕೆ ಸಾಕ್ಷಿಯಾಗಿದೆ. ಪತ್ರಕರ್ತರು, ಸಂಪಾದಕರು,ಆಡಳಿತ ಮಂಡಳಿಗಳ ಬದಲಾವಣೆಯನ್ನೂ ವಾಹಿನಿ ಕಂಡಿದೆ. ತನ್ನ ಮಾಲೀಕರ ಮಗಳ ಅದ್ದೂರಿ ಮದುವೆಯನ್ನು ನೋಡಿದೆ. ಕಲ್ಲಡ್ಕ ಪ್ರಭಾಕರ ಭಟ್ಟರು ಜೋಳಿಗೆ ಹಿಡಿದು ಬಂದಾಗ ಕಂತೆ ಕಂತೆ ದೇಣಿಗೆ ನೀಡಿದ್ದನ್ನು ಗಮನಿಸಿದೆ. ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದನ್ನು ಕಂಡಿದೆ. ಇವೆಲ್ಲವುಗಳ ನಡುವೆಯೂ ವಾಹಿನಿ ಮಾತ್ರ ತನ್ನ ಪ್ರಸಾರವನ್ನು ಮುಂದುವರಿಸಿದೆ.

ಇವತ್ತು ಅಲ್ಲಿನ ಸಿಬ್ಬಂದಿಗಳು ಆರು ತಿಂಗಳ ಸಂಬಳಕ್ಕಾಗಿ ಮೊರೆ ಇಡುತ್ತಿದ್ದಾರೆ. ಉಳಿದ ವಿವರಗಳನ್ನು ಅವರುಗಳೇ ಬರೆದ ಪತ್ರಗಳು ನೀಡುತ್ತವೆ. ಅವುಗಳನ್ನು 'ಸಮಾಚಾರ' ಯಥಾವತ್ತಾಗಿ ಇಲ್ಲಿ ಪ್ರಕಟಿಸುತ್ತಿದೆ.

ಪತ್ರ- 1

ಸಂಭ್ರಮದಿಂದ ದಸರಾ ಆಚರಣೆ: ಸಂಬಳ ಸಿಗದೆ ‘ಜನಶ್ರೀ’ ಸಿಬ್ಬಂದಿಯ ಬದುಕು- ಬವಣೆ!

ಪತ್ರ- 2

ಸಂಭ್ರಮದಿಂದ ದಸರಾ ಆಚರಣೆ: ಸಂಬಳ ಸಿಗದೆ ‘ಜನಶ್ರೀ’ ಸಿಬ್ಬಂದಿಯ ಬದುಕು- ಬವಣೆ!

ಇವು ಜನಶ್ರೀ ನ್ಯೂಸ್ ಸಿಬ್ಬಂದಿ ತಮ್ಮ ಆಡಳಿತ ಮಂಡಳಿಗೆ ಬರೆದ ಪತ್ರಗಳು. ತಮ್ಮ ಬಳ್ಳಾರಿ ಮನೆಯಲ್ಲಿ ದಸರಾ ಆಚರಣೆಯ ಸಂಭ್ರಮದಲ್ಲಿರುವ ಜನಾರ್ಧನ ರೆಡ್ಡಿ ಈ ಪತ್ರಗಳನ್ನು ಗಮನಿಸಲಿ. ಬಿಜೆಪಿಯ 'ಮಿಷನ್- 150' ಕನಸಿನಲ್ಲಿರುವ ರೆಡ್ಡಿ ಬ್ರದರ್ಸ್ ಉಳಿದ ಮಾಧ್ಯಮಗಳನ್ನು ಮ್ಯಾನೇಜ್ ಮಾಡುವ ಅನಿವಾರ್ಯತೆಯಲ್ಲಿದ್ದಾರೆ. ಅದೇ ವೇಳೆ, ತಾವೇ ಕಟ್ಟಿದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರ ಕೆಲಸಕ್ಕೆ ನ್ಯಾಯ ಒದಗಿಸುವ ಅಗತ್ಯವೂ ಇದೆ.