ಪತ್ರಕರ್ತರ ಓದಿಗಾಗಿ: ಇದು ರಿಲಯನ್ಸ್‌ ಕಂಪನಿಯ ಪಿಆರ್‌ ಮ್ಯಾನೇಜ್‌ಮೆಂಟ್‌ ಚರಿತ್ರೆ!
ಮೀಡಿಯಾ 2.0

ಪತ್ರಕರ್ತರ ಓದಿಗಾಗಿ: ಇದು ರಿಲಯನ್ಸ್‌ ಕಂಪನಿಯ ಪಿಆರ್‌ ಮ್ಯಾನೇಜ್‌ಮೆಂಟ್‌ ಚರಿತ್ರೆ!

ಹಿರಿಯ ಪತ್ರಕರ್ತ ಅಜಿತ್‌ ಪಿಳ್ಳೈ ಅವರ ಲೇಖನಗಳ ಕನ್ನಡಾನುವಾದ ಇತ್ತೀಚೆಗೆ 'ಇದು ಯಾವ ಸೀಮೆಯ ಚರಿತ್ರೆ?' ಹೆಸರಿನಲ್ಲಿ ಶಿವಮೊಗ್ಗ ಮೂಲದ ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ. ಪತ್ರಕರ್ತರು ಓದಲೇಬೇಕಾದ ಪುಸ್ತಕ ಇದು.

'ದಿ ಹಿಂದೂ' ಪತ್ರಿಕೆಯಲ್ಲಿ ಹಾಸನ ಜಿಲ್ಲಾ ಹಿರಿಯ ವರದಿಗಾರರಾಗಿ ಕೆಲಸ ಮಾಡುತ್ತಿರುವ ಸತೀಶ್ ಜಿ. ಟಿ, ಅಜಿತ್‌ ಪಿಳ್ಳೈ ಅವರ  'Off the Record' ಪುಸ್ತಕದ ಹಾಗೂ ಇತರೆ ಹಲವು ಲೇಖನಗಳನ್ನು ಕನ್ನಡಕ್ಕೆ ತಂದಿದ್ದಾರೆ. ಅದರ ಒಂದು ಭಾಗವನ್ನು 'ಸಮಾಚಾರ' ಇಲ್ಲಿ ಪ್ರಕಟಿಸುತ್ತಿದೆ. ಆಸಕ್ತಿ ಮೂಡಿಸುವ ಲೇಖನಗಳನ್ನು ಓದಲು ರಾಜ್ಯದ ಪ್ರಮುಖ ಪುಸ್ತಕ ಮಳಿಗೆಗಳನ್ನು ಸಂಪರ್ಕಿಸಿ.

 ಆರ್-ನೆಗೆಟಿವ್ ಪತ್ರಕರ್ತ!

ಧೀರೂಬಾಯಿ ನೇತೃತ್ವದ ರಿಲಯನ್ಸ್ ಕುಟುಂಬಕ್ಕಿದ್ದ ಶ್ರೀಮಂತಿಕೆ, ಪ್ರಭಾವಗಳ ಬಗ್ಗೆ ಅನೇಕ ಕತೆಗಳಿವೆ. ಅವರ ಬೃಹತ್ ಉದ್ದಿಮೆ ಆರಂಭವಾಗಿದ್ದು ಸಣ್ಣದೊಂದು ಟೆಕ್ಸ್‌ಟೈಲ್ ಯೂನಿಟ್‍ನಿಂದ. ನಂತರ ಪೆಟ್ರೋಲಿಯಂ ಉತ್ಪನ್ನಗಳೆಡೆಗೆ ಹೊರಳಿತು. 2000ದ ಹೊತ್ತಿಗೆ ಆಯಿಲ್ ರಿಫೈನಿಂಗ್ ಕಂಪೆನಿಗಳ ಜೊತೆ ಪೈಪೋಟಿ ಮಾಡುವ ಮಟ್ಟಿಗೆ ಬೆಳೆಯಿತು. ಈ ಗ್ರೂಪ್ ಸರ್ಕಾರ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಹಲವಾರು ಗೆಳೆಯರನ್ನು ಹೊಂದಿತ್ತು. ನಿಜ ಹೇಳಬೇಕೆಂದರೆ, ಅಧಿಕಾರಿಗಳ ವಲಯದಲ್ಲಿ ಕಂಪೆನಿಯ ಹಿತಾಸಕ್ತಗಳಿಗೆ ಪೂರಕವಾಗಿದ್ದವರನ್ನು ಆರ್-ಪಾಸಿಟಿವ್ ಎಂದು, ಅಲ್ಲದವರನ್ನು ಆರ್-ನೆಗೆಟಿವ್ ಎಂದು ಗುರುತಿಸುವ ಅಭ್ಯಾಸ ಇತ್ತು. ಪತ್ರಿಕಾ ಕಚೇರಿಗಳಲ್ಲೂ ಹಾಗೆಯೇ ಪತ್ರಕರ್ತರನ್ನು ಹಾಗೂ ಮಾರ್ಕೆಟ್ ಸಿಬ್ಬಂದಿಯನ್ನು ಗುರುತಿಸುವ ಪರಿಪಾಠ ಇತ್ತು.

ನನಗೆ ನನ್ನ ವೃತ್ತಿಯಲ್ಲಿ ಮೊದಲ ಬಾರಿಗೆ ಈ ‘ಆರ್’ ಫಾಕ್ಟರ್ ಅನುಭವಕ್ಕೆ ಬಂದದ್ದು 90ರ ದಶಕದಲ್ಲಿ. ನಾನು ಆಗ ರಿಲಯನ್ಸ್ ಕಂಪನಿಗಳ ಬಗ್ಗೆ ಕೆಲವು ವರದಿ ಮಾಡಿದ್ದೆ. ಅವೇನು ಯಾರೂ ಮಾಡದಂತಹ ಭಾರೀ ಮಹತ್ವದ ಸುದ್ದಿಗಳೇನಲ್ಲ. ಆದರೆ ಅವ್ಯಾವುವೂ ಖಂಡಿತವಾಗಿಯೂ ‘ಆರ್-ಪಾಸಿಟಿವ್’ ಸುದ್ದಿಗಳಂತೂ ಆಗಿರಲಿಲ್ಲ. ಕಂಪೆನಿಯವರು ನಾನು ಕೆಲಸ ಮಾಡುತ್ತಿದ್ದ ಪತ್ರಿಕೆಯ ಮಾರ್ಕೆಟಿಂಗ್ ಮ್ಯಾನೇಜರ್ ಸಂಪರ್ಕಿಸಿದರು. ನಂತರ ಆ ಮ್ಯಾನೇಜರ್ ನಮ್ಮ ಪತ್ರಿಕೆಯ ಮಾಲೀಕರಿಗೆ ರಿಲಯನ್ಸ್‍ಗೆ ಅಪಥ್ಯವಾಗುವ ವರದಿ ಮಾಡುತ್ತಿದ್ದಾನೆ ಎಂದು ನನ್ನ ವಿರುದ್ಧ ದೂರು ನೀಡಿದರು. ಅಷ್ಟಕ್ಕೆ ನಿಲ್ಲಿಸದೆ, ಹೀಗೇ ವರದಿಗಳು ಮುಂದುವರಿದರೆ ಅಂಬಾನಿ ಪಡೆತನದ ಜಾಹೀರಾತು ಏಜನ್ಸಿ ಮುದ್ರಾ ಪಬ್ಲಿಕೇಶನ್ಸ್ ನಮ್ಮ ಪತ್ರಿಕೆಯನ್ನು ಕಪ್ಪುಪಟ್ಟಿಗೆ ಸೇರಿಸಬಹುದು. ಅದರ ಪರಿಣಾಮ, ಪತ್ರಿಕೆ ಜಾಹೀರಾತು ಕಳೆದುಕೊಳ್ಳಬೇಕಾಗಬಹುದು ಎಂದೂ ಹೇಳಿದ್ದರು. ಆಗಿರುವ ಪ್ರಮಾದ ಸರಿ ಮಾಡಲು ಆತ ಧೀರೂಬಾಯಿ ಅಂಬಾನಿ ಜೊತೆ ಮೀಟಿಂಗ್ ವ್ಯವಸ್ಥೆ ಮಾಡುತ್ತೇನೆ ಎಂದರು. ಅದರಂತೆ ಧೀರೂಬಾಯಿ ಅಂಬಾನಿಯನ್ನು ಭೇಟಿ ಮಾಡಲು ಅವರಿಗೆ ಆಹ್ವಾನ ಬಂತು. ಅಹಮದಾಬಾದ್‍ಗೆ ಹೋಗಿ ಬಂದರು. ಭೇಟಿಯಾಗಿ ಹಿಂದಿರುಗಿದ ನಂತರ ಅವರು ಮ್ಯಾನೇಜ್‍ಮೆಂಟ್‍ಗೆ ಒಂದು ಪತ್ರ ಬರೆದು ಪ್ರಯಾಣ ಫಲಪ್ರದವಾಗಿತ್ತು ಹಾಗೂ ಹೇಗೆ ‘ಅನುಮಾನಗಳನ್ನು’ ಪರಿಹರಿಸಿದೆ ಎಂದು ವಿವರಿಸಿದರು. ಪತ್ರದ ಜೊತೆ ಸಾಕ್ಷಿ ಎಂಬಂತೆ ಅಂಬಾನಿ ಜೊತೆ ತೆಗೆಸಿಕೊಂಡ ಫೋಟೋ ಕೂಡ ಲಗತ್ತಿಸಿದ್ದರು. ಆ ಫೋಟೋಗೆ ತಲೆಬರಹ ಹೀಗಿತ್ತು ‘ಧೀರೂ ಬಾಯಿ ಜೊತೆ ನಾನು. ಈಗ ಸಮಸ್ಯೆಗಳೆಲ್ಲಾ ಪರಿಹಾರ ಆಗಿವೆ’. ಆ ನಂತರ ನಾನು ರಿಲಯನ್ಸ್ ಬಗ್ಗೆ ಆ ನಿಯತಕಾಲಿಕೆಗೆ ಬರೆಯಲೇ ಇಲ್ಲ.

ನನಗೆ ನಮ್ಮ ಹೆಡ್ ಆಫೀಸ್ ಹಾಗೂ ಮಾರ್ಕೆಟಿಂಗ್ ಮ್ಯಾನೇಜರ್ ನಡುವಿನ ಪತ್ರವ್ಯವಹಾರ ಹೇಗೆ ಗೊತ್ತಾಯಿತು ಎಂಬ ಪ್ರಶ್ನೆ ಓದುಗರಿಗೆ ಕಾಡುತ್ತಿರಬಹುದು. ಏನಾಗಿತ್ತೆಂದರೆ, ಆಫೀಸಿ ಜವಾನನೊಬ್ಬ ನನಗೆ ಆ ರಿಲಯನ್ಸ್ ಕಡತ ತೋರಿಸಿದ್ದ. ಆ ಕಡತದಲ್ಲಿ ನನ್ನನ್ನು ಒಬ್ಬ ವಿಲನ್‍ನಂತೆ ಚಿತ್ರಿಸಲಾಗಿತ್ತು. ಅದಾಗಿ ಎಷ್ಟೋ ವರ್ಷಗಳವರೆಗೆ ನನಗೆ ರಿಲಯನ್ಸ್ ಬಗ್ಗೆ ಗಂಭೀರವಾದ ಏನನ್ನೂ ಬರೆಯುವ ಅವಕಾಶ ಇರಲಿಲ್ಲ. 2000ಇಸವಿ ಡಿಸೆಂಬರ್‍ನಲ್ಲಿ ಅಂತಹದೊಂದು ಅವಕಾಶ ಬಂತು. ರಿಲಯನ್ಸ್ ಕಂಪೆನಿಗೆ ನೂರಾರು ಕೋಟಿ ರೂಪಾಯಿಗಳ ಲಾಭ ಮಾಡಿಕೊಳ್ಳಲು ಪೆಟ್ರೋಲಿಯಂ ಇಲಾಖೆಯಲ್ಲಿ ಏನೋ ಯೋಜನೆಯೊಂದನ್ನು ಸಿದ್ಧಪಡಿಸುತ್ತಿರುವ ಬಗ್ಗೆ ಒಬ್ಬ ಪತ್ರಕರ್ತ ಗೆಳೆಯ ನನ್ನ ಗಮನಕ್ಕೆ ತಂದ. ಆ ಕಂಪೆನಿಗೆ ಲಾಭ ಮಾಡಿಕೊಡಲು ತೆರಿಗೆದಾರರ ಹಣವೇ ಬೇಕಿತ್ತು.

ಆ ಸುದ್ದಿ ಏನೆಂದರೆ, ರಿಲಯನ್ಸ್ ಕಂಪೆನಿಯವರು ಕಚ್ಚಾ ತೈಲ ಸಂಸ್ಕರಣಾ ಸಾಮಥ್ರ್ಯವನ್ನು ವಾರ್ಷಿಕ 27 ಮಿಲಿಯನ್ ಟನ್‍ಗಳಿಗೆ ಏರಿಸಲು ಸರ್ಕಾರದಿಂದ 1997ರಲ್ಲಿ ಅನುಮತಿ ಪಡೆದರು. ಅದುವರೆಗೆ ರಿಲಯನ್ಸ್ ಪೆಟ್ರೋಕೆಮಿಕಲ್ಸ್ (ಆರ್‍ಪಿಎಲ್) ವರ್ಷವೊಂದಕ್ಕೆ ಸಂಸ್ಕರಿಸುತ್ತಿದ್ದುದು 5 ಮಿಲಿಯನ್ ಟನ್‍ಗಳ ಕಚ್ಚಾತೈಲವನ್ನು. ಪೆಟ್ರೋಲ್ ಉದ್ಯಮ ಸರಕಾರದ ಹಿಡಿತದಿಂದ ಅಷ್ಟೋ ಇಷ್ಟೋ ಹೊರಬರುತ್ತಿದ್ದ ಕಾಲದಲ್ಲಿ ಈ ಕಂಪೆನಿ ಇಂತಹ ಅನುಮತಿ ಪಡೆದಿತ್ತು. ಕಂಪೆನಿ ತನ್ನ ಉತ್ಪಾದಕ ಸಾಮರ್ಥ್ಯ ಹೆಚ್ಚಾದ ನಂತರ ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರವೇಶಿಸುವ ಇರಾದೆ ವ್ಯಕ್ತಪಡಿಸಿತು. ಎಡವಟ್ಟುಗಳು ಆರಂಭವಾದದ್ದೇ ಆಗ.

ಆರಂಭದಲ್ಲಿ ಒಂದಿಷ್ಟು ಲಾಭ ಕಂಡ ಕಂಪೆನಿ ಕ್ರಮೇಣ ನಷ್ಟದತ್ತ ಸಾಗಿತು. ಅದಕ್ಕೆ ಕಾರಣ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಉತ್ಪನ್ನಗಳ ಬೆಲೆಯನ್ನು ಗ್ರಹಿಸುವಲ್ಲಿ ಕಂಪೆನಿ ಎಡವಿತ್ತು. ಅವರ ಲೆಕ್ಕಾಚಾರಗಳು ತಪ್ಪಾಗಿದ್ದವು. ಆದರೆ ಪೆಟ್ರೋಲಿಯಂ ಇಲಾಖೆಯಲ್ಲಿದ್ದ ಕಂಪೆನಿ ಗೆಳೆಯರು ತಕ್ಷಣ ಇವರ ನೆರವಿಗೆ ಬಂದರು. ತನಗಾದ ನಷ್ಟವನ್ನು ಸರಕಾರ ಭರಿಸಬೇಕು ಎಂಬುದು ಕಂಪನಿ ನಿರೀಕ್ಷೆ. ಅದೂ ಕೂಡಾ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳ ಏರಿಳಿತಗಳ ಕಷ್ಟಕಾಲದಲ್ಲಿ ಸಹಾಯಕ್ಕಿರಲೆಂದು ಕಾಯ್ದಿರಿಸಿದ್ದ ಬಫರ್ ಹಣದಿಂದ ನಷ್ಟ ಭರಿಸಬೇಕೆನ್ನುವುದು ಕಂಪೆನಿಯ ವಾದ.

ಪರಿಹಾರಕ್ಕೆ ಒಂದು ಸೂತ್ರವೂ ಸಿದ್ಧವಾಯಿತು. ಸರಕಾರದೊಂದಿಗೆ ಆರ್‍ಪಿಎಲ್ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ ಸರಕಾರದ ತೈಲ ಕಂಪನಿಗಳು ದೇಶಿ ಮಾರುಕಟ್ಟೆಯ ಬೇಡಿಕೆ ಪೂರೈಸಲು 5 ಮಿಲಿಯನ್ ಟನ್‍ನಷ್ಟು ಕಚ್ಚಾತೈಲದಂದ ಸಂಸ್ಕರಿಸಿದ ಪೆಟ್ರೋಲ್ ಉತ್ಪನ್ನಗಳನ್ನು ಖರೀದಿಸಬೇಕಿತ್ತು. ಸರಕಾರ ಮತ್ತು ಆರ್‍ಪಿಎಲ್ ನಡುವಿನ ಒಪ್ಪಂದ ಅಷ್ಟಕ್ಕೆ ಮಾತ್ರ. ಉಳಿದ 12 ಮಿಲಿಯನ್ ಟನ್ ಕಚ್ಚಾತೈಲದಿಂದ ಸಂಸ್ಕರಿಸಿದ ಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ದಕ್ಕಿಸಿಕೊಳ್ಳುವುದು ಆರ್‍ಪಿಎಲ್‍ಗೆ ಬಿಟ್ಟ ವಿಚಾರ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸಿದ್ದನ್ನು ಸರಕಾರ ಭರಿಸಬೇಕು ಎಂದು ಪೆಟ್ರೋಲಿಯಂ ಇಲಾಖೆ ಟಿಪ್ಪಣಿಯೊಂದನ್ನು ಸಿದ್ಧಪಡಿಸಿತು. ಮೇಲಾಗಿ, ಖಾಸಗಿ ಕಂಪೆನಿಗಳು ಪೆಟ್ರೋಲಿಯಂ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸುವ ಉದ್ದೇಶದಿಂದ ಇಂತಹದೊಂದು ನಿಲುವನ್ನು ತೆಗೆದುಕೊಳ್ಳಲಾಗಿದೆ ಎಂದು ಇಲಾಖೆ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು.

ಪರಿಹಾರ ಪ್ಯಾಕೇಜ್ ಕೇವಲ ಸಲಹೆಯ ಹಂತದಲ್ಲಿದ್ದರೆ ಅದೇನೂ ದೊಡ್ಡ ವಿಚಾರ ಆಗುತ್ತಿರಲಿಲ್ಲ. ಹಾಗೆ ಅನೇಕ ಪ್ರಸ್ತಾವಗಳು ಆರಂಭದಲ್ಲಿ ಸುದ್ದಿ ಮಾಡಿ ಸುಮ್ಮನಾಗುತ್ತವೆ. ಆದರೆ ಇಲ್ಲಿ ಹಾಗಾಗಲಿಲ್ಲ. ಪೆಟ್ರೋಲಿಯಂ ಇಲಖೆ ಕಾರ್ಯದರ್ಶಿ ಪರಿಹಾರದ ಪ್ರಸ್ತಾವವನ್ನು ಅಂಗೀಕರಿಸಿ ಪೆಟ್ರೋಲಿಯಂ ಸಚಿವ ರಾಂ ನಾಯಕ್ ಅವರ ಅಂತಿಮ ಅನುಮತಿಗೆ ಸಿದ್ಧಪಡಿಸಿದ್ದರು. ಹಾಗಾಗಿ ನಾನು ಈ ಬೆಳವಣಿಗೆಯನ್ನು ‘ಔಟ್‍ಲುಕ್’ಗೆ ಎಕ್ಸ್‍ಕ್ಲೂಸಿವ್ ಸುದ್ದಿಯಾಗಿ ಸೂಚಿಸಿದ್ದೆ. ಆ ಹೊತ್ತಿಗೆ ನಾನು ಅಧಿಕಾರಿಗಳು ಸಚಿವರ ಮುಂದೆ ಸಲ್ಲಿಸಲು ಸಿದ್ಧಪಡಿಸಿದ್ದ ಟಿಪ್ಪಣಿಯ ಪ್ರತಿಯನ್ನೂ ಸಂಪಾದಿಸಿದ್ದೆ.

ಜೊತೆಗೆ ಸರಕಾರದಲ್ಲಿದ್ದ ಆರ್-ನೆಗೆಟವ್ ಅಧಿಕಾರಿಗಳು ನನಗೆ ಅಗತ್ಯವಿದ್ದ ಹೆಚ್ಚಿನ ಮಾಹಿತಿ ಒದಗಿಸಿದ್ದರು. ಅವರಲ್ಲೊಬ್ಬರು ನನ್ನೊಂದಿಗೆ ಮಾತನಾಡುತ್ತಾ ಹಾಗೆ ಕಂಪೆನಿಗೆ ಪರಿಹಾರ ತುಂಬಿಕೊಡುವುದು ನ್ಯಾಯವಲ್ಲ. ಮೇಲಾಗಿ 5 ಮಿಲಿಯನ್ ಟನ್‍ಗಳ ಮಿತಿಯಾಚೆ ಹೆಚ್ಚಿನ ಉತ್ಪನ್ನಗಳನ್ನು ಸರಕಾರವು ಖರೀದಿಸುವ ಪ್ರಶ್ನೆಯೇ ಇರಲಿಲ್ಲ. ಈ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳನ್ನು ಉತ್ತೇಜಿಸಲು ಇಂತಹ ಕ್ರಮ ಅಗತ್ಯ ಎನ್ನುವ ಸರಕಾರದ ವಾದವನ್ನು ಅವರು ಒಪ್ಪಲಿಲ್ಲ. ಅಂತಹದೊಂದು ಕ್ರಮ ತಪ್ಪು ಮೇಲ್ಪಂಕ್ತಿ ಹಾಕಿದಂತಾಗುತ್ತದೆ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಏಕೆಂದರೆ ಎಲ್ಲ ಕ್ಷೇತ್ರಗಳಲ್ಲೂ ಹೊಸದಾಗಿ ಪ್ರವೇಶ ಪಡೆದ ಖಾಸಗಿ ಕಂಪೆನಿಗಳಿರುತ್ತವೆ. ಅವರಿಗೆಲ್ಲ ಇಂಥ ನೀತಿಯ ಲಾಭ ಮಾಡಿಕೊಡಲು ಸಾಧ್ಯವೇ? “ಇಂತಹ ಲಾಭವನ್ನು ಸರಕಾರದಿಂದ ನಿರೀಕ್ಷಿಸಲು ರಿಲಯನ್ಸ್ ಏನೂ ಸಣ್ಣ ಕಂಪನಿಯಲ್ಲ” ಎಂದು ಹಣಕಾಸು ಇಲಾಖೆಯ ಅಧಿಕಾರಿಯೊಬ್ಬರು ನಿರ್ದಾಕ್ಷಿಣ್ಯವಾಗಿ ಹೇಳಿದರು.

ನಾನು ಇದೊಂದು ಸ್ಫೋಟಕ ಸುದ್ದಿಯಾಗುತ್ತದೆ ಎಂದುಕೊಳ್ಳುತ್ತಿರುವಾಗಲೇ ಸುದ್ದಿಯೊಂದು ಬಂತು. ಪೆಟ್ರೋಲಿಯಂ ಸಚಿವರಾದ ರಾಂ ನಾಯಕ್ ಕೊನೆಯ ಹಂತದಲ್ಲಿ ಈ ಪರಿಹಾರ ಪ್ರಸ್ತಾಪಕ್ಕೆ ಅನುಮತಿ ನಿರಾಕರಿಸಿದ್ದರು. ಆರ್‍ಎಸ್‍ಎಸ್ ನಾಯಕರಿಂದ ಅವರಿಗೆ ಅತಹದೊಂದು ಸೂಚನೆ ಬಂದಿತ್ತೆಂದು ಹೇಳಲಾಗಿತ್ತು. ಆದರೆ ಬೇರೆ ಕಡೆಯಿಂದ ಬಂದ ವಿವರಣೆ ಎಂದರೆ ಈ ಹಿಂದೆ ಆಯಿಲ್ ಪೂಲ್ ಖಾತೆಯಿಂದ ಹಣ ತೆಗೆದು ಬಳಸಿದ್ದು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿತ್ತು. ಆ ಕಾರಣ, ಸಚಿವರು ತಿರಸ್ಕರಿಸಿರಬಹುದು ಎನ್ನುವ ಮಾತುಗಳಿದ್ದವು.

ಮಂತ್ರಿಯ ಮನೆಯಿಂದ ಒಬ್ಬರು ದೂರವಾಣಿ ಕರೆ ಮಾಡಿ, ಆರ್‍ಪಿಎಲ್‍ಗೆ ಪರಿಹಾರದ ಪ್ರಸ್ತಾಪ ಇಲ್ಲ. ನಿಮ್ಮ ವರದಿಯಲ್ಲಿ ಇದನ್ನು ಸ್ಪಷ್ಟವಾಗಿ ನಮೂದಿಸಿ ಎಂದು ನನಗೆ ಹೇಳಿದರು. ಹಾಗೆ ಇದ್ದಕ್ಕಿದ್ದಂತೆ ಸಚಿವರ ಮನೆಯಿಂದ ಕರೆ ಬಂದದ್ದು ನನಗೆ ಆಶ್ಚರ್ಯ ತಂದಿತ್ತು. ಅವರೇಕೆ ನನ್ನನ್ನು ಸಂಪರ್ಕಿಸಿ ಹೀಗೆ ಹೇಳಿದರು? ಔಟ್‍ಲುಕ್ ಹೀಗೊಂದು ಸುದ್ದಿ ಮಾಡುತ್ತಿದೆ ಎಂದು ಅವರಿಗೆ ಹೇಳಿದವರಾರು? ಯಾರೋ ಸಚಿವರಿಗೆ ಸೂಚನೆ ನೀಡಿರಬೇಕು ಎನಿಸಿತು. ನಾನು ರಾಂ ನಾಯಕ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಅವರನ್ನು ನನ್ನ ಬಾಂಬೆಯ ದಿನಗಳಿಂದ ಬಲ್ಲೆ. ಆದರೆ ಅವರ ಸಂಪರ್ಕ ಸಾಧ್ಯವಾಗಲಿಲ್ಲ.

ನನಗೆ ಬೇರೆ ದಾರಿ ಇಲ್ಲದೆ, ನನ್ನ ಇಡೀ ಸುದ್ದಿಯನ್ನು ಒಂದು ಪುಟಕ್ಕಿಳಿಸಿ, ಹೇಗೆ ಪೆಟ್ರೋಲಿಯಂ ಇಲಖೆ ರಿಲಯನ್ಸ್ ಕಂಪನಿಗೆ ನಷ್ಟ ಪರಿಹಾರ ಕೊಡಲು ನಿರಾಕರಿಸಿತು ಎಂದು ವರದಿ ಮಾಡಿದೆ. ರಾಂ ನಾಯಕ ಅವರ ಕಚೇರಿ ಸಿಬ್ಬಂದಿ ಪರಿಹಾರ ಪ್ರಸ್ತಾವನೆ ರದ್ದಾಗಿದ್ದನ್ನು ಖಚಿತಪಡಿಸಿದ್ದರು.

ಬಹುಶಃ ನಾನೇ ಸುದ್ದಿಗಾಗಿ ಹೆಚ್ಚು ಕಾಲ ವ್ಯಯಮಾಡಿದೆ ಅನಿಸುತ್ತದೆ. ಒಂದು ವಾರ ಮೊದಲೇ ವರದಿ ಪ್ರಕಟಿಸಿದ್ದರೆ ಅದರ ಪರಿಣಾಮವೇ ಬೇರೆಯಾಗಿರುತ್ತಿತ್ತು. ಆದರೆ ವಾರಪತ್ರಿಕೆಗಳಲ್ಲಿ ಕೆಲಸ ಮಾಡುವವರಿಗೆ ಹೀಗಾಗುವುದುಂಟು. ನಾನು ರಿಲಯನ್ಸ್ ಸುದ್ದಿ ಮರೆತು ಮುಂದೆ ನಡೆದೆ. ಆದರೆ ಪ್ರಕರಣ ಅನಿರೀಕ್ಷಿತ ತಿರುವು ಪಡೆಯಿತು. ಅದೊಂದು ಮಧ್ಯಾಹ್ನ, ಸಂಪಾದಕರ ಕಚೇರಿಯಿಂದ ನನಗೆ ಕರೆ ಬಂತು. ನಾನು ಚೇಂಬರ್ ತಲುಪುವ ಹೊತ್ತಿಗೆ ಅಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‍ನ (ಕಾರ್ಪೊರೇಟ್ ಕಮ್ಯುನಿಕೆಶನ್ಸ್) ಹಿರಿಯ ವ್ಯವಸ್ಥಾಪಕ ಉಪಾಧ್ಯಕ್ಷ ಟೋನಿ ಜೇಸುದಾಸನ್ ಸಲ್ಲಿ ಹಾಜರಿದ್ದರು. ಅವರ ಜೊತೆಗೆ ಆರ್‍ಪಿಎಲ್‍ನ ಒಂದು ಟೀಂ ಕೂಡಾ ಇತ್ತು. ಟೋನಿ ಪರಿಚಯದ ಅಗತ್ಯ ಇರಲಿಲ್ಲ. ಆದರೆ ಉಳಿದವರು ಹೊಸಬರು. ನನಗೆ ಮೊದಲು ಬಂದ ಆಲೋಚನೆ ನನ್ನ ವರದಿಯಲ್ಲಿ ಯಾವುದಾದರೂ ಅಂಕಿ-ಅಂಶ ತಪ್ಪಾಗಿತ್ತಾ? ಆದರೆ ಹೆಚ್ಚೇನೂ ಮಾತಿಲ್ಲದೆ ವಿನೋದ್ ಅವರು “ರಿಲಯನ್ಸ್ ಬಗ್ಗೆ ನಾವು ಪ್ರಕಟಿಸಿದ ಸುದ್ದಿ ಕುರಿತಂತೆ ಅಜಿತ್ ಅವರನ್ನು ನೋಡಲು ಬಂದಿದ್ದೀರಿ ಅಲ್ಲವೇ?” ಎಂದರು. “ಏನಿಲ್ಲ, ಸುಮ್ಮನೆ ಪರಿಚಯ ಮಾಡಿಕೊಳ್ಳೋಣ ಎಂದು ಬಂದೆವು” ಎಂದು ಟೋನಿ ಹೇಳಿದರು. “ನಮ್ಮ ವರದಿಯಲ್ಲಿ ಏನಾದರೂ ತಪ್ಪುಗಳಿದ್ದವೆ?” ಎಡಿಟರ್ ಕೇಳಿದರು. “ಇಲ್ಲ, ಇಲ್ಲ ನಮ್ಮಿಂದ ಅಂತಹ ದೂರೇನೂ ಇಲ್ಲ.” ಎಂದು ಹೇಳಿದರು ಟೋನಿ. “ಏನಿಲ್ಲ, ನಮ್ಮ ಎಕ್ಸೆಕ್ಯೂಟಿವ್‍ಗಳಿಗೆ ಅಜಿತ್ ಅವರ ಪರಿಚಯವಾಗಲಿ ಎನ್ನುವುದಷ್ಟೆ ನನ್ನ ಉದ್ದೇಶ. ಹಾಗಾಗಿ ಬಂದೆ. ಮುಂದೆ ನಮ್ಮ ಕಂಪನಿ ಬಗ್ಗೆ ಸುದ್ದಿ ಮಾಡುವಾಗ ನಮ್ಮ ಅಭಿಪ್ರಾಯವನ್ನು ಸುಲಭವಾಗಿ ಪಡೆಯುವಂತಾಗಲಿ ಎಂಬುಷ್ಟೆ ನನ್ನ ಉದ್ದೇಶ” ಎಂದರು. ಬಂದ ಅತಿಥಿಗಳಿಗೆ ಚಹ ಮತ್ತು ಬಿಸ್ಕೆಟ್ ಕೊಟ್ಟೆವು. ಕಾರ್ಡ್‍ಗಳ ವಿನಿಮಯ ಆಯಿತು. ಆದರೆ ಮುಂದೆಂದೂ ಅವರನ್ನು ಸಂಪರ್ಕಿಸುವ ಸಂದರ್ಭ ನನಗೆ ಬರಲಿಲ್ಲ.