ಆಕ್ರಮಿಸಿಕೊಂಡ ದೇಶದೊಳಗೆ ಸತ್ಯ ಹೇಳುತ್ತಿರುವ ಪತ್ರಕರ್ತ; ಇಸ್ರೇಲಿನ ಗಿಡಾನ್ ಲೆವಿ!
ಮೀಡಿಯಾ 2.0

ಆಕ್ರಮಿಸಿಕೊಂಡ ದೇಶದೊಳಗೆ ಸತ್ಯ ಹೇಳುತ್ತಿರುವ ಪತ್ರಕರ್ತ; ಇಸ್ರೇಲಿನ ಗಿಡಾನ್ ಲೆವಿ!

‘ಕಳೆದ ಮೂರು ದಶಕಗಳಿಂದ ಬರಹಗಾರ, ಪತ್ರಕರ್ತ ಗಿಡಾನ್ ಲೆವಿ ತಮ್ಮ ಕ್ಷೀಣದನಿಯಲ್ಲಿ ಭಯೋತ್ಪಾದಕರು ಆವರಿಸಿಕೊಂಡ ಪ್ರದೇಶದ ಕತೆಯನ್ನು ತಮ್ಮ ಓದುಗರಿಗೆ ಹೇಳಿಕೊಂಡು ಬರುತ್ತಿದ್ದಾರೆ…’;

ಎಂದು ಬರೆಯುತ್ತಾನೆ ಇನ್ನೊಬ್ಬ ಪತ್ರಕರ್ತ ಜಾನ್ ಹರಿ. ಇಸ್ರೇಲ್ ದೇಶದ ಭಿನ್ನ ದನಿಯಾಗಿ ಗುರುತಿಸಿಕೊಂಡಿರುವ ಪತ್ರಕರ್ತ ಗಿಡಾನ್, ‘ದಿ ಇಂಡಿಪಂಡೆಂಟ್’ ಪತ್ರಿಕೆಗೆ 2010ರಲ್ಲಿ ನೀಡಿದ ಸಂದರ್ಶನಕ್ಕೆ ಬರೆದ ಮುನ್ನುಡಿಯಲ್ಲಿರುವ ವಾಕ್ಯಗಳಿವು. ಒಬ್ಬ ಪತ್ರಕರ್ತ ಇನ್ನೊಬ್ಬ ಪತ್ರಕರ್ತನ ಬಗ್ಗೆ ಬರೆಯಬೇಕಾದ ಅನಿವಾರ್ಯತೆಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಗಿಡಾನ್ ಲೆವಿ ತರಹರ ವ್ಯಕ್ತಿ ಪರಿಚಯಗಳನ್ನು ಮಾಡಿಸುವ ಅಗತ್ಯ ಹೆಚ್ಚಿದೆ.

ಇಲ್ಲೀವರೆಗೂ ಇಸ್ರೇಲ್ ಕುರಿತು ಕನ್ನಡದಲ್ಲಿ ಬಂದ ಬರಹಗಳನ್ನು ಓದಿ, ಮುಖ್ಯವಾಹಿನಿ ಮಾಧ್ಯಮಗಳಿಗೆ ತೆರೆದುಕೊಂಡು, ಜಗತ್ತಿನ ಆ ಪುಟ್ಟ ದೇಶದ ಕುರಿತು ತಮ್ಮದೇ ಕಲ್ಪನೆಗಳನ್ನು ಬೆಳೆಸಿಕೊಂಡವರಿಗೆ ಗಿಡಾನ್ ಬದುಕನ್ನು ಅಂತರಾಳಕ್ಕೆ ಬಿಟ್ಟುಕೊಳ್ಳಲು ಸ್ವಲ್ಪ ಕಷ್ಟವಾಗಬಹುದು. ಯಾಕೆಂದರೆ ಗಿಡಾನ್ ವ್ಯಕ್ತಿತ್ವವೇ ಹಾಗಿದೆ. ತನ್ನದೇ ದೇಶದ ಬಹುಸಂಖ್ಯಾತರ ಟೀಕೆಗಳಿಗೆ ಕಿವಿಯಾಗಿ, ಜಗತ್ತಿನ ಚಾಣಾಕ್ಷ ಮಿಲಿಟರಿ ವ್ಯವಸ್ಥೆಯನ್ನು ಎದುರು ಹಾಕಿಕೊಂಡು ಕಳೆದ ಮೂರು ದಶಕಗಳಿಂದ ಪ್ರತಿ ವಾರ ಯಾರಿಗೂ ನಿಲುಕದ ಕತೆಯೊಂದನ್ನು ಅಲ್ಲಿನ ‘ಹೈರೆಟ್ಝ್’ ಪತ್ರಿಕೆಯಲ್ಲಿ ಬರೆಯುತ್ತಿದ್ದಾರೆ. ಅದು ಸಾಮಾನ್ಯರ ಕತೆಯೇ ಆದರೂ ಇಸ್ರೇಲ್ ದೇಶದ ಆಂತರಿಕ ಸನ್ನಿವೇಶದಲ್ಲಿ ಅಂತಹ ಬರವಣಿಗೆ ಅಸಾಮಾನ್ಯ ಗಟ್ಟಿತನವನ್ನು ಬೇಡುತ್ತದೆ.

ಇಸ್ರೇಲ್ ವಶಪಡಿಸಿಕೊಂಡಿರುವ ಪ್ಯಾಲಿಸ್ತೇನ್ ಭೂ ಪ್ರದೇಶದಲ್ಲಿ ನಡೆಯುವ ಮಿಲಿಟರಿ ದೌರ್ಜನ್ಯದಿಂದ ನಲುಗಿದ ಜನಸಾಮಾನ್ಯರ ವರದಿಗಳನ್ನು ಓದಲು ಗಿಡಾನ್ ಬರೆಯುವ ವಾರದ ಅಂಕಣಕ್ಕಾಗಿ ಕಾಯುವ ದೊಡ್ಡ ಜನವರ್ಗವೇ ಯುರೋಪಿಯನ್ ದೇಶಗಳಲ್ಲಿ ಹುಟ್ಟಿಕೊಂಡಿದೆ. ಅವರ ಹೊಸ ಪುಸ್ತಕ ‘ದಿ ಪನಿಶ್ಮೆಂಟ್ ಆಫ್ ಗಾಝಾ’ ಕುರಿತು ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ. ಈತ ಹೊರಗಿನವರು ಸುಲಭಕ್ಕೆ ತಲುಪಲಾಗದ ಜಾಗದಲ್ಲಿ ಬದುಕುವ ಸಾಮಾನ್ಯ ಜನರ ಕುರಿತು ಬರೆಯುವ ಅಸಾಮಾನ್ಯ ಪತ್ರಕರ್ತ. ಇಡೀ ಜಗತ್ತಿನ ಕಣ್ಣಲ್ಲಿ ಭಯೋತ್ಪಾದನೆ ವಿರುದ್ಧ ಟೊಂಕಕಟ್ಟಿಕೊಂಡ ಕಠಾರಿವೀರರ ಪಾತ್ರ ನಿರ್ವಹಿಸುತ್ತಿರುವ ಇಸ್ರೇಲ್ ದೇಶದ ಆಡಳಿತಗಾರರಿಗೆ ಲೆವಿ ತರಹದ, ತನ್ನದೇ ಮಣ್ಣಿನ ಮಕ್ಕಳು ಹೇಳುತ್ತಿರುವ ಸತ್ಯಗಳನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಕಾರಣಕ್ಕೆ ದೇಶದ ‘ಆಂತರಿಕ ಭದ್ರತೆಯ ಅಪಾಯ’ಗಳ ಪಟ್ಟಿಯಲ್ಲಿ ಲೆವಿ ಹೆಸರನ್ನೂ ಸೇರಿಸಲಾಗಿದೆ. ಜತೆಗೆ ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಹೇಳಿಕೊಳ್ಳುತ್ತಲೇ, 2006 ರ ನವೆಂಬರ್ ವೇಳೆಗೆ ತನ್ನದೇ ದೇಶದಲ್ಲಿ ಓಡಾಡಲು ಲೆವಿಯಂತಹ ಪತ್ರಕರ್ತರಿಗೆ ನಿರ್ಬಂಧ ಹೇರುವ ಕಾನೂನನ್ನು ಜಾರಿಗೆ ತರಲಾಗಿದೆ. ಇಷ್ಟೆಲ್ಲಾ ಸರ್ಕಸ್ಗಳು ಯಾಕೆ ಎಂದರೆ, ಅಲ್ಲಿ ದಿನನಿತ್ಯ ನಡೆಯುವ ಶೆಲ್ ದಾಳಿಗಳು, ಪ್ಯಾಲಿಸ್ತೇನಿಗಳು ಎಂಬ ಒಂದೇ ಕಾರಣಕ್ಕೆ ನಡೆಯುವ ಮಾರಣಹೋಮಗಳು ಹೊರಜಗತ್ತಿಗೆ ತಿಳಿಹೇಳುವ ಕೆಲಸವನ್ನು ಮಾಡುವವರು ಇರಬಾರದು ಎಂಬ ಕಾರಣಕ್ಕೆ.

ಗಿಡಾನ್ ಹುಟ್ಟಿದ್ದು 1953ರಲ್ಲಿ. ಅವರ ತಂದೆ ಕಾನೂನು ವಿಷಯದಲ್ಲಿ ಪಿಎಚ್ಡಿ ಪಡೆದ ಜರ್ಮನ್ ಜ್ಯೂಯಿಷ್. ಇಸ್ರೇಲ್ಗೆ ವಲಸೆ ಬಂದ ಮೇಲೆ ಟೆಲ್ ಅವೀವ್ನ ಬೇಕರಿಯೊಂದರಲ್ಲಿ ಬ್ರೆಡ್ ಖರೀದಿಸಿ ಮನೆ ಮನಗೆ ಮಾರುವ ಕೆಲಸ ಆರಂಭಿಸಿದರು. ಮತ್ಯಾವತ್ತೂ ಕಾನೂನು ಪದವಿಯನ್ನು ಅವರ ಬಳಸಿಕೊಳ್ಳಲಿಲ್ಲವಾದರೂ, ಮಗನ ಮೇಲೆ ತಮ್ಮ ಶೈಕ್ಷಣಿಕ ತಿಳಿವಳಿಕೆಯ ಪ್ರಭಾವನ್ನು ಬೀರಿದವರು. ಗಿಡಾನ್, 'ಚಿಕ್ಕ ಹುಡಗನಾಗಿದ್ದಾಗ ಎಲ್ಲರಂತೆ ಇಸ್ರೇಲ್ ಕುರಿತು ಅಭಿಮಾನ, ಪಕ್ಕದ ಪ್ಯಾಲಿಸ್ತೇನ್ ಜನರ ಕುರಿತು ಎಲ್ಲಿಲ್ಲದ ಸಿಟ್ಟಿತ್ತು' ಎಂಬುದನ್ನು ಆವರೇ ಕೆಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಮುಂದೆ ಇಸ್ರೇಲ್ನಲ್ಲಿ ಖಡ್ಡಾಯ ಮಿಲಿಟರಿ ಸೇವೆ ಸಲ್ಲಿಸುವ ಸಮಯದಲ್ಲಿ ಅನೇಕ ಬಾರಿ ಇಸ್ರೇಲ್ ಆಕ್ರಮಿತ ಪ್ಯಾಲಿಸ್ತೇನ್ ಪ್ರದೇಶಗಳಿಗೆ ಭೇಟಿ ನೀಡಿದ್ದು ಗಿಡಾನ್ ಬದುಕಿನ ದೃಷ್ಟಿಕೋನವನ್ನೇ ಬದಲಿಸಿತು.

ಪತ್ರಕರ್ತನಾಗಿ ವೃತ್ತಿ ಜೀವನ ಆರಂಭಿಸಿದ ದಿನಗಳಲ್ಲಿ ಅಲ್ಲಿನ ಮಿಲಿಟರಿ ರೇಡಿಯೋದಲ್ಲೂ ಕೆಲಸ ಮಾಡಿದರು. ಆದರೆ ‘ಹೈರೆಟ್ಝ್’ ಪತ್ರಿಕೆಗೆ ಬರೆಯಲು ಆರಂಭಿಸುವ ಹೊತ್ತಿಗೆ ದೇಶ ಸಾಗುತ್ತಿರುವ ಕುರಿತು ವಿಮರ್ಶಾತ್ಮಕ ನೆಲೆಯಲ್ಲಿ ನಿಂತು ನೋಡಲು ಶುರುಮಾಡಿದ್ದರು. ಇಷ್ಟಕ್ಕೂ ಗಿಡಾನ್ ಮಾಡಿದ ಕೆಲಸ ಇಷ್ಟೆ. ಇಸ್ರೇಲ್ ಆಕ್ರಮಿತ ಪ್ಯಾಲಿಸ್ತೇನ್ ಭೂ ಪ್ರದೇಶದಲ್ಲಿನ ಶಿಶುವಿಹಾರದೊಂದು ಶೆಲ್ ದಾಳಿಗೆ ಒಳಗಾಗಿತ್ತು. ಮಕ್ಕಳನ್ನು ಬಸ್ ಹತ್ತಿಸಿ ಕೈ ಬೀಸುತ್ತಿದ್ದ ಇಪ್ಪತ್ತು ವರ್ಷ ವಯಸ್ಸಿನ ಟೀಚರ್ ನಜ್ವಾ ಖಾಲೀಫ್ ದೇಹ ಚಿಂದಿಯಾಗಿತ್ತು. ಮಾರನೇ ದಿನ ಸ್ಥಳಕ್ಕೆ ಗಿಡಾನ್ ಭೇಟಿ ಕೊಟ್ಟಾಗ ಅಲ್ಲಿನ ಜನಕ್ಕೆ ಆತಂಕ ಮತ್ತು ಅಚ್ಚರಿ ಒಟ್ಟಿಗೇ ಮೂಡಿತ್ತು. ಅಲ್ಲೀವರೆಗೂ ಗನ್ ಹಿಡಿದುಕೊಂಡ, ಮಿಲಿಟರಿ ಬಟ್ಟೆ ತೊಟ್ಟ ಜ್ಯೂಯಿಷ್ ಮಂದಿಯನ್ನು ನೋಡಿದ್ದ ಜನರಿಗೆ ಹೀಗೆ ಕ್ಯಾಮೆರಾ, ಪೆನ್ ಹಿಡಿದುಕೊಂಡು ಬಂದ ಗಿಡಾನ್ ಮೂಡಿಸಿದ್ದ ಭಾವನೆ ಎಂತದ್ದು ಎಂಬುದನ್ನು ಊಹಿಸಬಹುದು.

ಹೀಗೆ ನಜ್ವಾ ರೀತಿಯ ಸಾವಿರಾರು ಕುಟುಂಬಗಳ ಕತೆಗಳನ್ನು ಗಿಡಾನ್ ಬರೆಯುತ್ತ ಹೋದರು. ‘ವ್ಹಬಾಸ್ ಕುಟುಂಬದ ಕೊನೆಯ ಊಟ’ದಂತಹ ಮನಕಲಕುವ ಕತೆಗಳು ಸಹಜವಾಗಿಯೇ ಅಲ್ಲಿನ ಸರಕಾರ ಕೆಂಗಣ್ಣಿಗೆ ಗುರಿಯಾದವು. 2003ರಲ್ಲಿ ಇಸ್ರೇಲ್ ಪಶ್ಚಿಮ ದಂಡೆಯ ಬಳಿ ಟ್ಯಾಕ್ಸಿಯಲ್ಲಿ ಗಿಡಾನ್ ಹೋಗುತ್ತಿದ್ದರು. ಈ ಸಮಯದಲ್ಲಿ ತಡೆದ ಸೈನಿಕ ಕಾಗದ ಪತ್ರಗಳನ್ನು ನೋಡಿ ಮುಂದೆ ಹೋಗಲು ಬಿಟ್ಟರು. ಯಾವಾಗ ಆ ಟ್ಯಾಕ್ಸಿ ಇಸ್ರೇಲ್ ಆಕ್ರಮಿತ ಪ್ರದೇಶದ ಕಡೆ ತಿರುಗಿತೋ ಗುಂಡು ನೇರವಾಗಿ ಟ್ಯಾಕ್ಸಿಯ ಮುಂಭಾಗದ ಗಾಜಿಗೆ ಬಡಿಯಿತು. ಈ ಕುರಿತು ಒಂದು ಸಂದರ್ಶನದಲ್ಲಿ ಗಿಡಾನ್ “ಅವತ್ತು ಬುಲೆಟ್ ಪ್ರೂಫ್ ಗಾಜು ಇಲ್ಲದಿದ್ದರೆ ನಾನಿವತ್ತು ಬದುಕಿರುತ್ತಿರಲಿಲ್ಲ. ಅಲ್ಲಿನ ಪರಿಸ್ಥಿತಿಯೇ ಹಾಗಿದೆ. ಗುಂಡು ಇರುವುದೇ ಹಾರಿಸುವುದಕ್ಕೆ. ಒಮ್ಮೆ ಹಾರಿದರೆ ಸಾಯಲೇಬೇಕು ಎಂಬ ತತ್ವ. ಅಂದು ನಡೆದ ದಾಳಿಯಲ್ಲಿ ನಾನ್ಯಾರು ಎಂದು ಸೈನಿಕರಿಗೆ ಗೊತ್ತಿರಲು ಸಾಧ್ಯವಿಲ್ಲ. ಯಾರೇ ಆದರೂ ಅವರಿಗೆ ಅದರ ಚಿಂತೆಯೂ ಇರುವುದಿಲ್ಲ,” ಎಂಬ ಅವರ ಮಾತುಗಳಲ್ಲಿ ಇಸ್ರೇಲ್ ಸೇನೆಯ ಮನಸ್ಥಿತಿ ಅರಿವಿಗೆ ಬರುತ್ತದೆ.

ಇನ್ನೊಮ್ಮೆ ಇಸ್ರೇಲ್ ಅಕ್ರಮಿತಿ ಪ್ರದೇಶದಿಂದ ಹೊರಬರುವ ಚೆಕ್ ಪೋಸ್ಟ್ ಬಳಿ ಆಂಬುಲೆನ್ಸ್ ಸುಮಾರು ಒಂದು ಗಂಟೆಗಳ ಕಾಲ ನಿಂತಿತ್ತು. ಅದೊರೊಳಗೆ ಒಬ್ಬಳು ಮಹಿಳೆ ಜೀವನ್ಮರಣದ ಹೋರಾಟ ನಡೆಸುತ್ತಿದ್ದಳು. ಹಿಂದಿನ ಕಾರಿನಲ್ಲಿ ಕುಳಿತಿದ್ದ ಗಿಡಾನ್ ಎದ್ದು ಹೋಗಿ ಡ್ರೈವರ್ ಬಳಿ ವಿಚಾರಿಸಿದರೆ ಇಸ್ರೇಲಿ ಸೈನಿಕರ ಕಡೆ ಕೈ ತೋರಿಸಿದ. ‘ಅಕಸ್ಮಾತ್ ನಿಮ್ಮ ತಾಯಿಯೇ ಆಂಬುಲೆನ್ಸ್ನಲ್ಲಿ ಇದ್ದರೆ ಏನು ಮಾಡುತ್ತೀರಿ?’ ಎಂದು ಗಿಡಾನ್ ದಬಾಯಿಸಿದಾಗ ಸೈನಿಕರೇ ತಬ್ಬಿಬ್ಬಾದರು. ಆದರೆ ಮರುಕ್ಷಣವೇ ಬಂದೂಕಿನ ಮೊನೆ ತನ್ನ ಕಡೆಗಿತ್ತು ಎಂದು ಅವರು ನೆನಪಿಸಿಕೊಳ್ಳುತ್ತಾರೆ.

“ಮೊದಲು ಇದು ಕೇವಲ ಸೈನಿಕ ವೇಷಧಾರಿಗಳ ಮನಸ್ಥಿತಿ ಎಂದುಕೊಂಡಿದ್ದೆ, ಆದರೆ ಇಸ್ರೇಲ್ ದೇಶದ ಆಡಳಿತವೇ ಜನಾಂಗೀಯ ಹಿರಿಮೆಯ ಭ್ರಮೆಯಲ್ಲಿ ತನ್ನನ್ನು ತಾನು ಮರೆಯುತ್ತಿದೆ. ಇವತ್ತು ಅಮೆರಿಕಾದ ಮೇಲೆ ಪ್ರತಿಯೊಂದಕ್ಕೂ ಆಶ್ರಯಿಸಿರುವ ಇಸ್ರೇಲ್ ಭವಿಷ್ಯದ ಬಗ್ಗೆ ಕಳಕಳ ಮೂಡುತ್ತದೆ. ವಿಷವನ್ನೇ ಉಂಡು ಬೆಳೆಯುವ ಮಕ್ಕಳು ಮುಂದೊಂದು ದಿನ ತಾವೇ ಹೀಗೊಂದು ಬಲಾಢ್ಯ ಮಿಲಿಟರಿ ದೌರ್ಜನ್ಯಕ್ಕೆ ತುತ್ತಾದರೆ ಪರಿಸ್ಥಿತಿ ಹೇಗಿರುತ್ತೆ ಹೇಳಿ?” ಎಂದು ಗಿಡಾನ್ ಪ್ರಶ್ನಿಸುತ್ತಾರೆ.

ಇವತ್ತಿನ ಇಸ್ರೇಲಿನ ಪರಿಸ್ಥಿತಿಯಲ್ಲಿ ಗಿಡಾನ್ ಮಾತುಗಳಿಗೆ ಬಹುಸಂಖ್ಯಾತರ ಮನ್ನಣೆ ಸಿಗದೇ ಇರಬಹುದು. ಆದರೆ ಸತ್ಯ ಯಾವಾಗಲೂ ಕಡಿಮೆ ‘ರೇಟಿಂಗ್’ನಲ್ಲೇ ಇರುತ್ತದೆ. ಇವತ್ತಲ್ಲಾ ನಾಳೆ ಇಸ್ರೇಲಿಗಳಿಗೆ ತಮ್ಮ ತಪ್ಪಿನ ಅರಿವಾಗುತ್ತದೆ ಎಂಬ ಭರವಸೆ ಗಿಡಾನ್ ಅವರಿಗಿದೆ. ಈ ಮೂಲಕ ಅವರು ಇಸ್ರೇಲ್ ಭವಿಷ್ಯದ ಭರವಸೆಯಾಗಿ ಕಾಣುತ್ತಿದ್ದಾರೆ…