ಚುನಾವಣೆಗೂ ಮುನ್ನವೇ ಹಣಾಹಣಿಗೆ ಸಜ್ಜಾಗುತ್ತಿರುವ ಕನ್ನಡ ಸುದ್ದಿ ವಾಹಿನಿಗಳ ಮಾರುಕಟ್ಟೆ!
ಮೀಡಿಯಾ 2.0

ಚುನಾವಣೆಗೂ ಮುನ್ನವೇ ಹಣಾಹಣಿಗೆ ಸಜ್ಜಾಗುತ್ತಿರುವ ಕನ್ನಡ ಸುದ್ದಿ ವಾಹಿನಿಗಳ ಮಾರುಕಟ್ಟೆ!

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವ ಈ ಸಮಯದಲ್ಲೇ ಕನ್ನಡದ ಟಿವಿ ವಾಹಿನಿಗಳ ನಡುವೆ ಪತ್ರಕರ್ತರ 'ವಲಸೆ' ಆರಂಭವಾಗಿದೆ.ಈ ಹಿಂದೆ, ಇಂತಹದ್ದೇ ವಲಸೆ ಪ್ರಕ್ರಿಯೆಗೆ ಕರ್ನಾಟಕದ ಮಾಧ್ಯಮಗಳು ಸಾಕ್ಷಿಯಾಗಿದ್ದರೂ, ಈ ಬಾರಿಯ ಸ್ಥಾನ ಪಲ್ಲಟಗಳು ಹೆಚ್ಚು ಪರಿಣಾಮಕಾರಿಯಾಗಿರುವಂತೆ ಕಾಣಿಸುತ್ತಿವೆ. ಇದರ ಜತೆಗೆ, ಒಂದಷ್ಟು ಹೊಸ ವಾಹಿನಿಗಳು ಸೇರ್ಪಡೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಕೆಲವು ತಿಂಗಳುಗಳ ಅಂತರದಲ್ಲಿ ಕನ್ನಡದ ಮಾಧ್ಯಮಗಳಲ್ಲಿ- ವಿಶೇಷವಾಗಿ ಟಿವಿ ವಾಹಿನಿಗಳಲ್ಲಿ- ಚಟುವಟಿಕೆಗಳು ಗರಿಗೆದರಲಿವೆ.

ಲಭ್ಯ ಇರುವ ಮಾಹಿತಿ ಪ್ರಕಾರ ಈ ಬಾರಿಯ ಪತ್ರಕರ್ತರ ಸ್ಥಾನ ಪಲ್ಲಟದ ಕೇಂದ್ರದಲ್ಲಿ ಟಿವಿ 9 ಕರ್ನಾಟಕ ಮತ್ತು ಅಂಬಾನಿ ಒಡೆತನದಲ್ಲಿರುವ 'ಈ ಟಿವಿ ಕನ್ನಡ' ಸಂಸ್ಥೆಗಳಿವೆ.ಈಗಾಗಲೇ ಕೆಲವರು ಟಿವಿ 9 ರಿಂದ ಈ ಟಿವಿಗೆ ಕಾಲಿಟ್ಟಿದ್ದಾರೆ. ಇನ್ನು ಕೆಲವರು ಮುಂದಿನ ದಿನಗಳಲ್ಲಿ ಸೇರ್ಪಡೆಗೊಳ್ಳಲಿದ್ದಾರೆ. ಈ ಹಿಂದೆ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಮಾಲೀಕತ್ವದ ಸುವರ್ಣ ವಾಹಿನಿಗೆ ಇದೇ ಮಾದರಿಯಲ್ಲಿ ಟಿವಿ 9ರಿಂದ ಒಂದಷ್ಟು ಪತ್ರಕರ್ತರು ಸಾಮೂಹಿಕವಾಗಿ ವಲಸೆ ಹೋಗಿದ್ದರು. ನಂತರ ದಿನಗಳಲ್ಲಿ ಬಿ- ಟಿವಿ ಆರಂಭದ ಹೊತ್ತಿಗೂ ಇಂತಹದ್ದೇ ಸ್ಥಾನಪಲ್ಲಟಗಳು ನಡೆದಿದ್ದವು. ಇದೀಗ, ಈ ಟಿವಿ ಸಂಸ್ಥೆ ಟಿವಿ 9 ಕರ್ನಾಟಕದಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ 'ಆಫರ್' ನೀಡಿದೆ.

ಟಿವಿ 9 ಕರ್ನಾಟಕದಲ್ಲಿ ನಿರೂಪಕರಾಗಿರುವ ಹರಿ ಪ್ರಸಾದ್ ಮತ್ತಿತರರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಇದರ ಜತೆಗೆ, ಸುದ್ದಿ ಟಿವಿಯಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಪತ್ರಕರ್ತ ಲಕ್ಷ್ಮಣ್ ಹೂಗಾರ್ ಕೂಡ ಈ ಟಿವಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನೆಟ್ವರ್ಕ್ 18 ಕರ್ನಾಟಕ:

'ಈ ಟಿವಿ' ಸಮೂಹ ಸಂಸ್ಥೆಗಳನ್ನು ಹುಟ್ಟುಹಾಕಿದವರು ಆಂಧ್ರ ಮೂಲದ ರಾಮೋಜಿ ರಾವ್. ಅವರು ತಮ್ಮ ಪ್ರಾದೇಶಿಕ ವಾಹಿನಿಗಳಲ್ಲಿ ಬಹುತೇಕ ವಾಹಿನಿಗಳನ್ನು ಕೆಲವು ವರ್ಷದ ಹಿಂದೆ, ದೊಡ್ಡ ಮೊತ್ತಕ್ಕೆ ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಗೆ ಮಾರಿದ್ದರು. ಒಪ್ಪಂದಂತೆ ಕೆಲವು ವರ್ಷಗಳ ಕಾಲ ಈ ಟಿವಿ ಹೆಸರಿನಲ್ಲಿಯೇ ಕಾರ್ಯನಿರ್ವಹಿಸಿದ ವಾಹಿನಿಗಳನ್ನು ನೆಟ್ವರ್ಕ್ 18 ಹೆಸರಿಗೆ ಬದಲಾಯಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಕನ್ನಡದಲ್ಲಿರುವ ಈ ಟಿವಿ ಸುದ್ದಿ ವಾಹಿನಿ ಮುಂದಿನ ದಿನಗಳಲ್ಲಿ 'ನೆಟ್ವರ್ಕ್ 18 ಕರ್ನಾಟಕ' ಆಗಲಿದೆ.

“ಸದ್ಯ ಇರುವ ಸಿಬ್ಬಂದಿಗಳಕಾರ್ಯಕ್ಷಮತೆ ಕುರಿತು ಆಡಳಿತ ಮಂಡಳಿಗೆ ತೃಪ್ತಿ ಇಲ್ಲ. ಕರ್ನಾಟಕದ ಸುದ್ದಿ ವಾಹಿನಿಯ ಹೊಣೆ ಹೊತ್ತುಕೊಂಡಿರುವ ಡಿ. ಪಿ. ಸತೀಶ್ ದೊಡ್ಡ ಬದಲಾವಣೆಗೆ ಕೈ ಹಾಕಿದ್ದಾರೆ. ಅವರಿಗೆ ಟಿವಿ 9 ಕರ್ನಾಟಕದ ಸಿಬ್ಬಂದಿಗಳು ಹೆಚ್ಚು ವೃತ್ತಿಪರರು ಎಂಬ ನಂಬಿಕೆ ಇದೆ. ಹೀಗಾಗಿ, ಅಲ್ಲಿಂದ ದೊಡ್ಡ ಸಂಬಳಕ್ಕೆ ಒಂದಷ್ಟು ಪತ್ರಕರ್ತರನ್ನು ಕರೆತರುವ ಕೆಲಸ ಮಾಡುತ್ತಿದ್ದಾರೆ,’’
ವಾಹಿನಿಯ ಮೂಲಗಳು.

ಈ ಹಿಂದೆ, ಈ ಟಿವಿ ಕನ್ನಡದ ಸುದ್ದಿ ವಾಹಿನಿಯಿಂದ ಒಂದಷ್ಟು ಸಿಬ್ಬಂದಿಗಳನ್ನು ಹೊರಹಾಕುವ ಕೆಲಸ ನಡೆದಿತ್ತು. ಈ ಸಮಯಲ್ಲಿ ಪತ್ರಕರ್ತೆಯೊಬ್ಬರು ಆತ್ಮಹತ್ಯೆ ಪ್ರಯತ್ನವನ್ನೂ ಮಾಡಿದ್ದರು.

ಇದಾದ ನಂತರ ಪ್ರಕ್ರಿಯೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು. ಇದೀಗ, ಟಿವಿ 9 ಕರ್ನಾಟಕ ಮತ್ತಿತರ ಸಂಸ್ಥೆಗಳಿಂದ ಪತ್ರಕರ್ತರನ್ನು ಕರೆತರುತ್ತಿರುವುದರಿಂದ ಹಳೆಯ ಸಿಬ್ಬಂದಿಗಳಲ್ಲಿ ಹಲವರಿಗೆ 'ಪಿಂಕ್ ಸ್ಲಿಪ್' ಸಿಗುವ ಸಾಧ್ಯತೆ ಹೆಚ್ಚಿದೆ.

ಹೊಸ ವಾಹಿನಿಗಳು:

ಈ ಟಿವಿ ಸುದ್ದಿವಾಹಿನಿಯ ಆಂತರಿಕ ಪರಿಸ್ಥಿತಿ ಹೀಗಿರುವಾಗಲೇ, ಕನ್ನಡದಲ್ಲಿ ಹೊಸ ಸುದ್ದಿ ವಾಹಿನಿಗಳು ಬರುತ್ತಿರುವುದು ಉದ್ಯೋಗದ ಅವಕಾಶಗಳನ್ನೂ ಸೃಷ್ಟಿಸಿವೆ. ಅವುಗಳಲ್ಲಿ ಪ್ರಮುಖವಾಗಿರುವುದು ಆಂಧ್ರ ಮೂಲದ ಟಿವಿ 5. ಈ ಹಿಂದೆ ಆಂಧ್ರ ಪ್ರದೇಶದಲ್ಲಿ ನಂ. 1 (ಟಿಆರ್‌ಪಿ ಮಾನದಂಡದಲ್ಲಿ) ಸ್ಥಾನದಲ್ಲಿದ್ದ ಟಿವಿ 9 ವಾಹಿನಿಯನ್ನು ಮಾರುಕಟ್ಟೆಯಲ್ಲಿ ಹಿಂದಿಕ್ಕಿದ್ದು ಇದೇ ಟಿವಿ 5. ಇದೀಗ ಕರ್ನಾಟಕದಲ್ಲಿಯೂ ಅದೇ ಗುರಿಯೊಂದಿಗೆ ಕೆಲಸ ಆರಂಭಿಸಿದೆ.

“ಆಂಧ್ರದಲ್ಲಿ ಟಿವಿ 5ನಲ್ಲಿ ಕೆಲಸ ಮಾಡುತ್ತಿದ್ದ ದಿನೇಶ್ ಎಂಬುವವರು ಸಂದರ್ಶನಗಳನ್ನು ನಡೆಸುತ್ತಿದ್ದಾರೆ. ಸದ್ಯ ತಾಂತ್ರಿಕ ವಿಭಾಗದ ಸಂದರ್ಶನಗಳು ನಡೆಯುತ್ತಿವೆ. ಸಾಕಷ್ಟು ಪತ್ರಕರ್ತರು ಟಿವಿ5ಗೆ ತಮ್ಮ ಬಯೋಡಾಟಾ ನೀಡಿದ್ದಾರೆ,’’
ಸಂದರ್ಶನದಲ್ಲಿ ಪಾಲ್ಗೊಂಡ ತಾಂತ್ರಿಕ ಸಿಬ್ಬಂದಿಯೊಬ್ಬರ ಮಾತು.

ಇದರ ಜತೆಗೆ, ಝೀ ಸಮೂಹ ಸಂಸ್ಥೆ, ಕನ್ನಡವೂ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲಿ ಸುದ್ದಿ ವಾಹಿನಿಗಳನ್ನು ಆರಂಭಿಸುವ ಯೋಜನೆ ಹಾಕಿಕೊಂಡಿದೆ. ಕರ್ನಾಟಕದಲ್ಲಿ ಅದರ ಯೋಜನೆಗೆ ಈ ಟಿವಿಯಿಂದ ಹೊರಬಿದ್ದ ಪತ್ರಕರ್ತ ರಂಗನಾಥ್ ಭಾರದ್ವಾಜ್ ಅವರನ್ನು ಆರಿಸಿಕೊಂಡಿದೆ ಎಂಬುದು ಉನ್ನತ ಮೂಲಗಳು ನೀಡುವ ಮಾಹಿತಿ. ಹೀಗಾಗಿ, ಈ ಟಿವಿಯಿಂದಲೇ ಸಾಕಷ್ಟು ಜನ ಪತ್ರಕರ್ತರು ಝೀ ಆರಂಭಿಸುವ ಹೊಸ ಕನ್ನಡ ಸುದ್ದಿ ವಾಹಿನಿಗೆ ಹೋಗುವ ಸಾಧ್ಯತೆಗಳಿವೆ.

ಚುನಾವಣೆ ಹೊಸ್ತಿಲಲ್ಲಿ ಇರುವಾಗ, ಮಾಧ್ಯಮಗಳಲ್ಲಿ ನಡೆಯಲಿರುವ ಈ ಸ್ಥಾನಪಲ್ಲಟಗಳು ಹೆಚ್ಚು ಪರಿಣಾಮವನ್ನು ಬೀರಲಿವೆ. ಈಗಾಗಲೇ ಕಿಕ್ಕಿರಿದಿರುವ ಕನ್ನಡದ ಸುದ್ದಿ ವಾಹಿನಿಗಳ ಮಾರುಕಟ್ಟೆಗೆ ಇನ್ನಷ್ಟು ಹೊಸ ವಾಹಿನಿಗಳ ಪ್ರವೇಶವಾಗುತ್ತಿರುವುದು ಉದ್ಯೋಗದ ಅವಕಾಶಗಳನ್ನು ಹೆಚ್ಚಿಸಿದೆ. ಅದೇ ವೇಳೆ, ಸುದ್ದಿ ವಾಹಿನಿಗಳ ವೃತ್ತಿಪರತೆ ಇನ್ನಷ್ಟು ಪಾತಾಳಕ್ಕೆ ಕುಸಿಯುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಚುನಾವಣೆಗೆ ಮುಂಚೆಯೇ, ಮಾಧ್ಯಮ ಲೋಕದಲ್ಲಿ ಒಂದು ಸುತ್ತಿನ ಹಣಾಹಣಿ ನಡೆಯುವುದನ್ನು ಎದುರು ನೋಡಬಹುದಾಗಿದೆ.